ಕಾಂಗ್ರೆಸ್ ವಿತರಿಸುತ್ತಿರುವ ಗ್ಯಾರಂಟಿ ಕಾಡ್೯ ಬಿಜೆಪಿ ದುರಾಡಳಿತದಿಂದ ಉಂಟಾದ ರಾಜ್ಯದ ಸಂತೃಸ್ತ ಸಮಾಜಕ್ಕೆ ಸ್ವಾವಲಂಬಿ ಬದುಕಿನ ಭದ್ರ ಬುನಾದಿಯನ್ನು ಹಾಕಲಿದೆ. ಚುನಾವಣಾ ದಿನಗಳಲ್ಲಿ ಇದಕ್ಕೆ ಬರುತ್ತಿರುವ ಪೂರಕ ಜನಸ್ಪಂದನೆಯನ್ನು ಕಂಡು ಸೋಲಿನ ಭಯದಲ್ಲಿ ಹತಾಶರಾಗಿ ಬಿಜೆಪಿ ನಾಯಕರು ಮನೋವಿಕಲ್ಪಿತರಾಗಿದ್ದಾರೆ ಎಂದು ಉಡುಪಿ ಜಿಲ್ಲಾ ಬಿಜೆಪಿಯ ಹೇಳಿಕೆಯೊಂದಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.
ಸುಮಾರು 3.15 ಲಕ್ಷ ಕೋಟಿಯ ರಾಜ್ಯ ಬಜೆಟಿನಲ್ಲಿ ಕಾಂಗ್ರೆಸ್ ನೀಡುತ್ತಿರುವ ಈ ಗ್ಯಾರಂಟೀ ಕಾಡ್೯ ಯೋಜನೆಗಳಿಗೆ ಬೇಕಿರುವ ಹಣ ಸುಮಾರು 26 ರಿಂದ 30 ಸಾವಿರ ಕೋಟಿ. ಬಜೆಟ್ಟಿನಲ್ಲಿ ಭಾವನಾತ್ಮಕ ವಿಚಾರ ಯೋಜನೆಗಳ ಮೇಲಿನ ಅನಗತ್ಯ ವೆಚ್ಚ, 40 ಪರ್ಸೆಂಟ್ ಕಮಿಷನ್ ದಂದೆಯಿಂದ ರಾಜ್ಯದ ಖಜಾನೆಗೆ ಆಗುತ್ತಿರುವ ನಷ್ಟ ಹಾಗು ಬಜೆಟ್ ಹಣ ಸೋರಿಕೆಯನ್ನು ತಹಬಂದಿಗೆ ತಂದಾಗ ಸಹಜವಾಗಿಯೇ ಈ ಉಳಿಕೆ ಹಣದಿಂದ ಇಂತಹ ಇನ್ನೂ ಹತ್ತು ಯೋಜನೆಗಳನ್ನು ಜಾರಿಗೆ ತರಲು ಸಾಧ್ಯ. ಮುಂದಿನ ದಿನಗಳಲ್ಲಿ ಇದನ್ನು ಕಾಂಗ್ರೆಸ್ ಮಾಡಿಯೇ ಮಾಡುತ್ತದೆ. ಬಹುಶಃ ಭ್ರಷ್ಟಾಚಾರವನ್ನು ಹೊದ್ದು ಮಲಗಿರುವ ಬಿಜೆಪಿಯ ನಾಯಕರಿಗೆ ಇದು ಅರ್ಥ ಅಗಲು ಸಾದ್ಯವಿಲ್ಲ ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.
ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವಧಿಯ ಆಹಾರ ಭದ್ರತಾ ಕಾಯ್ದೆಯನ್ನು 2011ರಿಂದ 2013ರ ವರೆಗೆ ಪಾರ್ಲಿಮೆಂಟಿನಲ್ಲಿ ಪಾಸ್ ಆಗದಂತೆ ನೋಡಿಕೊಂಡ ಬಿಜೆಪಿಗೆ ಅನ್ನ ಭಾಗ್ಯಯೋಜನೆಯ ಬಗ್ಗೆ ಮಾತಾಡುವ ನೈತಿಕತೆ ಇದೆಯೇ ಎಂದಿರುವ ಕಾಂಗ್ರೆಸ್ ಅನ್ನಭಾಗ್ಯದ ಅಕ್ಕಿಯ ಮೇಲೆ ಜಿಎಸ್ಟಿ ಹೇರಿಕೆ ಆಳುವ ಸರಕಾರದ ಅಮಾನುಷ ನಿಲುವಿಗೆ ಸಾಕ್ಷಿ. ಕಾಂಗ್ರೆಸ್ ಆಡಳಿತಾವದಿಯ ನರೇಗಾ ಯೋಜನೆಯನ್ನು "ದೇಶ್ ಮರೇಗಾ" ಎಂದು ಠೀಕಿಸಿದವರಿಗೆ ಪ್ರಜಾತಂತ್ರ ವ್ಯವಸ್ಥೆಯೊಳಗಿನ ಮಾನವೀಯ ಮೌಲ್ಯಗಳು ಅರ್ಥ ಆಗಲು ಸಾಧ್ಯವಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.