Advertisement

ಇಂದು ರಾಹುಲ್, ನಾಳೆ ನಾನು ಅಥವಾ ನೀವು!

Advertisement

ಬರಹ: ಎಲ್.ಎನ್. ಮುಕುಂದರಾಜ್‌ |ಲೇಖಕರು ಹಿರಿಯ ಸಾಹಿತಿ, ನಾಟಕಕಾರ ಹಾಗೂ ಜನಪರ ಚಿಂತಕರು

ಪ್ರಜಾಪ್ರಭುತ್ವ ನಾಶವಾಗುತ್ತಿರುವ ಸೂಚನೆಗಳು ಒಂದೊಂದಾಗಿ ನಮ್ಮ ಕಣ್ಣ ಮುಂದೆ ಬಿಚ್ಚಿಕೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ ಸರ್ವಾಧಿಕಾರಿ ಶಕ್ತಿಗಳು ಮೇಲುಗೈ ಸಾಧಿಸುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಸರ್ವಾಧಿಕಾರಿಗಳು ಮೊದಲು ಮಾಧ್ಯಮಗಳನ್ನು ತಮ್ಮ ಕೈವಶ ಮಾಡಿಕೊಳ್ಳುತ್ತವೆ. ನಂತರ ದೇಶದ ನ್ಯಾಯಾಲಯ, ಪೊಲೀಸು, ಸೈನ್ಯಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. ತಮ್ಮ ಎದುರಾಳಿಗಳನ್ನು ಬೆದರಿಸಲು ಇವೆಲ್ಲವನ್ನೂ ಬಳಸಿಕೊಳ್ಳುತ್ತಾರೆ. ತಮ್ಮನ್ನು ಸಂತುಷ್ಟಗೊಳಿಸುವ ಹಿಂಬಾಲಕ ಹೊಗಳುಭಟ್ಟರನ್ನು ಅವರು ಕಳ್ಳರಾಗಲಿ, ಕೊಲೆಗಡುಕರಾಗಿರಲಿ ರಕ್ಷಿಸುತ್ತಾರೆ.

ಎದುರಾಳಿಗಳು ಎಷ್ಟೇ ಸಚ್ಚಾರಿತ್ರ್ಯವಂತರು, ಪ್ರಾಮಾಣಿಕರು, ಪ್ರಜ್ಞಾವಂತರಾಗಿದ್ದರು ಅವರನ್ನು ಸಾರ್ವಜನಿಕರ ಕಣ್ಣಲ್ಲಿ ಸಣ್ಣವರನ್ನಾಗಿ ಚಿತ್ರಿಸಿ, ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಾರೆ. ಅಕಸ್ಮಾತ್ ಅವರು ಶಿಕ್ಷೆಗೆ ಒಳಗಾದಾಗ ಸಾರ್ವಜನಿಕರು ಅವರ ಪರವಾಗಿ ಮಾತನಾಡದೆ, ಸರ್ವಾಧಿಕಾರಿಗಳ ನಡೆಯನ್ನೇ ಪ್ರಶಂಸಿಸುವಂತಹ ವಾತಾವರಣ ರೂಪಿಸುತ್ತಾರೆ.

ಸದ್ಯದ ಸಂದರ್ಭದಲ್ಲಿ ರಾಹುಲ್ ಗಾಂಧಿ ವಿಚಾರದಲ್ಲೂ ಸರ್ವಾಧಿಕಾರಿ ಸರ್ಕಾರ ಹೀಗೆ ನಡೆದುಕೊಳ್ಳುತ್ತಿರುವುದನ್ನು ನಾವು ಪ್ರತ್ಯಕ್ಷವಾಗಿ ಕಾಣುತ್ತಿದ್ದೇವೆ.

ಭಾರತ್ ಜೋಡೋ ಕಾರ್ಯಕ್ರಮದ ಮೂಲಕ ದೇಶದ ಉದ್ದಗಲಕ್ಕೂ ನಡೆದು ರಾಹುಲ್, ಜನರ ಪ್ರೀತಿ ಅಭಿಮಾನಗಳಿಗೆ ಪಾತ್ರರಾಗಿದ್ದಾರೆ. ಅವರು ಗಳಿಸಿದ ಈ ಯಶಸ್ಸನ್ನು ಸಹಿಸಲಾರದ ಸರ್ಕಾರ ಅವರ ಮೇಲೆ ಸುಳ್ಳು ಆರೋಪ ಹೊರಿಸಿ, ಜೈಲಿಗೆ ತಳ್ಳುವ ಷಡ್ಯಂತ್ರ ರೂಪಿಸಿರುವುದಲ್ಲದೆ, ಪಾರ್ಲಿಮೆಂಟ್ ಸದಸ್ಯತ್ವದಿಂದಲೂ ಅನರ್ಹಗೊಳಿಸಿರುವುದು ನಿಜಕ್ಕೂ ಖೇದನೀಯ. ವಿರೋಧ ಪಕ್ಷದ ನಾಯಕನನ್ನು ಶಕ್ತಿಗುಂದುವಂತೆ ಮಾಡುವ ಮೂಲಕ ಪ್ರಜಾಪ್ರಭುತ್ವದ ಕುತ್ತಿಗೆ ಹಿಸುಕಲಾಗುತ್ತಿದೆ. ಪ್ರಜಾಪ್ರಭುತ್ವ ಪ್ರೇಮಿಗಳು ಈ ಬಗ್ಗೆ ಈಗಲೇ ಎಚ್ಚರಿಕೆ ತಾಳದಿದ್ದರೆ ಮುಂದೊಂದು ದಿನ ಈ ದೇಶದ ಭವಿಷ್ಯ ಪಾತಾಳದತ್ತ ಕುಸಿಯಲಿದೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಗ್ರಹಿಸಬಹುದು.

ರಾಹುಲ್ ಗಾಂಧಿ ಹುಟ್ಟಿರುವ ನೆಹರು ಮನೆತನ ಈ ದೇಶದ ಗಣ್ಯ ಮನೆತನಗಳಲ್ಲಿ ಒಂದು. ಸ್ವಾತಂತ್ರ ಪೂರ್ವ ಕಾಲದಿಂದಲೂ ಆ ಮನೆತನದ ಕೊಡುಗೆ ಅಪಾರ. ರಾಹುಲ್ ಅವರ ಮುತ್ತಾತ ಜವಹರಲಾಲ್ ನೆಹರು ಅವರು ಈ ದೇಶದ ಪ್ರಧಾನಮಂತ್ರಿಯಾಗಿ ಕೊಟ್ಟ ಕೊಡುಗೆಯನ್ನು ಯಾರು ಮರೆಯುವಂತಿಲ್ಲ. ಅವರ ಅಜ್ಜಿ ಇಂದಿರಾಗಾಂಧಿ ಹಾಗೂ ತಂದೆ ರಾಜೀವಗಾಂಧಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟರು. ಅವರ ತಾಯಿ ಸೋನಿಯಾಗಾಂಧಿಯವರಿಗೆ ಈ ದೇಶದ ಪ್ರಧಾನಮಂತ್ರಿಯಾಗಲು ಎರಡು ಬಾರಿ ಅವಕಾಶ ದೊರಕಿದಾಗಲೂ, ಅದನ್ನು ವಿನಯದಿಂದಲೇ ತಿರಸ್ಕರಿಸಿ ರಾಜಕಾರಣಿಯೇ ಅಲ್ಲದ ವಿದ್ಯಾವಂತ ಹಾಗೂ ಜಗತ್ತಿನ ಅಪರೂಪದ ಆರ್ಥಿಕ ತಜ್ಞ ಡಾ. ಮನಮೋಹನಸಿಂಗ್ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿದರು. ಪ್ರಪಂಚದ ಯಾವ ದೇಶಲ್ಲಿಯೂ, ಹೀಗೆ ಸುಲಭವಾಗಿ ದಕ್ಕಬಹುದಾದ ಅತ್ಯುನ್ನತ ಪದವಿಯೊಂದನ್ನು ತಿರಸ್ಕರಿಸಿದ ಮತ್ತೊಬ್ಬ ರಾಜಕಾರಣಿಯನ್ನು ನೋಡಲು ಸಾಧ್ಯವಿಲ್ಲ. ಕನ್ನಡದ ಮೊದಲ ಮಹಾಕವಿ ಪಂಪನ ಆದಿಪುರಾಣದ ಮಹಾಪುರುಷ ಬಾಹುಬಲಿಯ ತ್ಯಾಗದ ಪರಿಕಲ್ಪನೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು.

ತನ್ನ ಅಜ್ಜಿಯ ಹಾಗೂ ತಂದೆಯ ಕಗ್ಗೊಲೆಗಳನ್ನು ಕಣ್ಣಾರೆ ಕಂಡ ಈ ಹುಡುಗನ ಬಗೆಗೆ ಇಡೀ ದೇಶವೇ ಕರುಣೆಯಿಂದ ವರ್ತಿಸಬೇಕು. ಅದು ಸಜ್ಜನಿಕೆಯ ದೇಶವೊಂದರ ಪ್ರಜೆಗಳು ತೋರಬಹುದಾದ ಕಾರುಣ್ಯ. ಸ್ವಂತ ಹೆತ್ತ ತಂದೆಯನ್ನು ಕೊಂದವರ ತಪ್ಪನ್ನು ಮನ್ನಿಸುವಂತೆ ರಾಹುಲ್ ಮತ್ತು ಪ್ರಿಯಾಂಕಾ ಎನ್ನುವ ಅಣ್ಣ ತಂಗಿಯರು ಉದಾತ್ತ ಮಾತುಗಳನ್ನು ಆಡಿದ್ದನ್ನು ನಾವು ಮರೆಯುವಂತಿಲ್ಲ.

ವಿರೋಧ ಪಕ್ಷದ ಶಕ್ತಿಯನ್ನು ಕುಂದಿಸುವ ಮೂಲಕ ಪ್ರಜಾಪ್ರಭುತ್ವವನ್ನು ನಾಶ ಮಾಡಲು ಹೊರಟ ಸರ್ಕಾರವನ್ನು, ಇಡೀ ದೇಶವೇ ಒಕ್ಕೊರಲಿಂದ ಪ್ರತಿಭಟಿಸಿ ಎದ್ದು ನಿಲ್ಲಬೇಕು.

ಇಂದು ರಾಹುಲ್ ಗಾಂಧಿಯವರಿಗೆ ಬಂದ ಪರಿಸ್ಥಿತಿಯೇ, ನಾಳೆ 150 ಕೋಟಿ ಭಾರತೀಯರಿಗೆ ಅಷ್ಟೇಕೆ, ಪ್ರಧಾನಮಂತ್ರಿಯಂತಹ ಅತ್ಯುನ್ನತ ಸ್ಥಾನದಲ್ಲಿರುವ ನರೇಂದ್ರ ಮೋದಿಯವರಿಗೂ ಬರಬಹುದು. ಎಲ್ಲರೂ ನರ ಮನುಷ್ಯರೇ ಆಗಿರುವುದರಿಂದ ತಮ್ಮ ತಮ್ಮ ಮಿತಿಯಲ್ಲಿ ಬದುಕಬೇಕು. ಮಿತಿ ಮೀರಿದರೆ ಯಾವುದು ಬೇಕಾದರೂ, ಯಾವಾಗ ಬೇಕಾದರೂ ತಿರುಗು ಬಾಣವಾಗಬಹುದು. ಮೋದಿ, ಯಡಿಯೂರಪ್ಪ ಸೇರಿದ ಹಾಗೆ ಅವರನ್ನು ದ್ವೇಷಿಸುವ, ನಿಯಂತ್ರಿಸಲು ಇಚ್ಚಿಸುವ ಶಕ್ತಿಗಳು ಹಾಗೂ ವ್ಯಕ್ತಿಗಳು ಅವರ ಪಕ್ಷದಲ್ಲೇ ಇದ್ದಾರೆ ಎಂಬುದನ್ನು ಮರೆಯಬಾರದು. ದಶಕಗಟ್ಟಲೆ ವರ್ಷಗಳಿಂದ ಬಿಜೆಪಿಯನ್ನು ಈ ದೇಶದಲ್ಲಿ ಗಟ್ಟಿಯಾಗಿ ತಳವೂರಲು ತಮ್ಮ ಸಂಪೂರ್ಣ ಬದುಕನ್ನು ಮುಡುಪಾಗಿಟ್ಟಿದ್ದ ಲಾಲ್ ಕೃಷ್ಣ ಅಡ್ವಾನಿಯವರ ಈಗಿನ ಪರಿಸ್ಥಿತಿ ಹೇಗಿದೆ ಎಂಬುದೇ ಇದಕ್ಕೆ ಸಾಕ್ಷಿ. ಅಷ್ಟೇಕೆ ಇಡೀ ದೇಶದಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಿರುವ ಈಶ್ವರಪ್ಪ, ವಿಜಯೇಂದ್ರ, ರಾಘವೇಂದ್ರ, ಸಿ.ಟಿ. ರವಿ, ಅಶ್ವತ್ಥ ನಾರಾಯಣ, ಸೋಮಣ್ಣ, ಗೋವಿಂದ ಕಾರಜೋಳ, ಕುಮಾರ ಬಂಗಾರಪ್ಪ, ಸೋಮಶೇಖರ, ಮುನಿರತ್ನ ಮುಂತಾದ ಶೂದ್ರ ರಾಜಕಾರಣಿಗಳನ್ನು ಈ ಪುರೋಹಿತಶಾಹಿ ಸರ್ಕಾರ ಇಂದಲ್ಲ ನಾಳೆ ಸಣ್ಣಪುಟ್ಟ ಆರೋಪಗಳನ್ನು ಹೊರಿಸಿ, ಜೈಲಿಗೆ ಕಳಿಸಬಹುದಾಗಿದೆ.

ಈಗ ಬಿಜೆಪಿ ಸರ್ಕಾರದ ಹಿಂದೆ ನಿಂತು, ಎಲ್ಲ ಸೂತ್ರಗಳನ್ನು ಹಿಡಿದು ಎಲ್ಲರನ್ನೂ ಆಡಿಸುತ್ತಿರುವ ಈ ಶಕ್ತಿಗಳು ನಾಳೆ ಹುತ್ತಬಿಟ್ಟ ಹಾವುಗಳಂತೆ ಹೊರಗೆ ಖಂಡಿತಾ ಬರುತ್ತವೆ.

ನಮ್ಮ ದೇಶದ ಮಹಾಕಾವ್ಯ, ಇತಿಹಾಸ ಹಾಗೂ ಪುರಾಣಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ ಈ ಎಲ್ಲ ಸಂಗತಿಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಈ ಶಕ್ತಿಗಳಿಗೆ ನಮ್ಮ ದೇಶದ ಬಗ್ಗೆ ಯಾವ ಪ್ರೀತಿಯು ಇಲ್ಲ. ಗ್ರೀಕ್, ಮುಸ್ಲಿಂ, ಫ್ರೆಂಚ್, ಡಚ್, ಇಂಗ್ಲಿಷ್, ಪೋರ್ಚುಗೀಸ್ ಮುಂತಾದ ವಿದೇಶಿ ಆಕ್ರಮಣಗಳಿಗೆ ಇವರೇ ಹೆದ್ದಾರಿ ನಿರ್ಮಿಸಿಕೊಟ್ಟು ದೇಶವನ್ನು ಗುಲಾಮಿತನಕ್ಕೆ ತಳ್ಳಿದ್ದರು. ವಿದೇಶಿ ಆಕ್ರಮಣಕಾರರೊಂದಿಗೆ ಕೈಜೋಡಿಸಿ, ಈ ದೇಶದ 97% ಮೂಲ ನಿವಾಸಿಗಳನ್ನು ಅತ್ಯಂತ ದಯನೀಯ ಸ್ಥಿತಿಗೆ ಇವರು ಸಾವಿರಾರು ವರ್ಷಗಳಿಂದ ತಳ್ಳಿದ್ದರು. ಅದನ್ನು ಪ್ರಶ್ನಿಸಿದ ಬೌದ್ಧರನ್ನು ದೇಶದಿಂದಲೇ ಓಡಿಸಿಬಿಟ್ಟರು. 12ನೇ ಶತಮಾನದಲ್ಲಿ 1,96,000 ಜನ ಲಿಂಗಾಯಿತ ಶರಣರನ್ನು ಕಲ್ಯಾಣದ ಬೀದಿ ಬೀದಿಗಳಲ್ಲಿ ಕೊಚ್ಚಿ ಕೊಂದವರು ಇವರೇ ಅಲ್ಲವೇ. ಈ ಸನಾತನ ಶನಿಗಳ ಅಬ್ಬರದ ಕಾರಣದಿಂದಾಗಿ ಉತ್ತರ ಕರ್ನಾಟಕದಲ್ಲಿ ಸುಮಾರು 300 ವರ್ಷಗಳ ತನಕ ಲಿಂಗಾಯಿತರು ಮಾತನಾಡದೆ ಬಾಯಿ ಕಟ್ಟಿಕೊಂಡು ಇರಬೇಕಾಗಿತ್ತು. ರಕ್ಕಸ ತಂಗಡಿ ಯುದ್ಧದಲ್ಲಿ ಆದಿಲ್ ಶಾಹಿಗಳು, ಸನಾತನ ಧರ್ಮ ಪೋಷಕರಾಗಿದ್ದ ವಿಜಯನಗರದ ಅರಸರನ್ನು ಮಣಿಸಿದ ತರುವಾಯವೇ ಯಡಿಯೂರು ಸಿದ್ದಲಿಂಗೇಶ್ವರರಂತಹ ಲಿಂಗಾಯತ ಯತಿಗಳು, ಕರ್ನಾಟಕದ ಉದ್ದಗಲಕ್ಕೂ ಲಿಂಗಾಯಿತರ ಮಠಗಳನ್ನು ಸ್ಥಾಪಿಸಲು ಸಾಧ್ಯವಾಯಿತು. 17ನೆಯ ಶತಮಾನದಲ್ಲಿ ಮೈಸೂರು ರಾಜ್ಯದ ದೊರೆಯಾಗಿದ್ದ ಚಿಕ್ಕದೇವರಾಜ ಒಡೆಯರ್ ಕಾಲದಲ್ಲಿ ನಂಜನಗೂಡಿನ ಸುತ್ತಮುತ್ತ ಇದ್ದ ಸುಮಾರು 400ಕ್ಕೂ ಹೆಚ್ಚು ಲಿಂಗಾಯತ ಮಠದ ಸ್ವಾಮಿಗಳ ತಲೆ ಕಡಿದು ಬಾವಿಗೆ ಎಸೆದಿದ್ದರು. ನಮ್ಮ ಕಾಲದಲ್ಲಿ ಮಹಾತ್ಮ ಗಾಂಧಿಯವರ ಹತ್ಯೆ ಮಾಡಿದ್ದು ಸನಾತನಿಯಾಗಿದ್ದ ಚಿತ್ಪಾವನ ಬ್ರಾಹ್ಮಣ ನಾಥುರಾಮ್ ಗೋಡ್ಸೆ. ಭಾರತಕ್ಕೆ ಸಂವಿಧಾನವನ್ನು ಬರೆದುಕೊಟ್ಟ ಮಹಾತ್ಮ ಅಂಬೇಡ್ಕರ್ ಅವರ ಅಂತ್ಯವೂ ಇದಕ್ಕಿಂತ ಭಿನ್ನವಾಗಿಲ್ಲ. ದಲಿತರು ಶೂದ್ರರು ಹಾಗೂ ಮಹಿಳೆಯರ ವಿದ್ಯಾಭ್ಯಾಸ ನೀಡಲು ಪರಿಶ್ರಮ ಪಡುತ್ತಿದ್ದ ಜ್ಯೋತಿಬಾಪುಲೆ, ಸಾವಿತ್ರಿ ಬಾ ಪುಲೆ, ಫಾತಿಮಾ ಶೇಖ್‌, ಕುದ್ಮುಲ್ ರಂಗರಾವ್, ತಲಕಾಡು ರಂಗೇಗೌಡ ಮುಂತಾದವರನ್ನು ಇನ್ನಿಲ್ಲದಂತೆ ಇವರು ಕಾಡಿದ್ದರು. ಮಹಾಕವಿ ಕುವೆಂಪು ಅವರನ್ನು ಈಗಲೂ ಅವಮಾನಿಸುತ್ತಿರುವುದನ್ನು ನಾವೆಲ್ಲ ನಿತ್ಯ ನೋಡುತ್ತಿದ್ದೇವೆ.

ಇತಿಹಾಸದಲ್ಲಿ ನಡೆದಿರುವ ಇಂತಹ ಘಟನೆಗಳನ್ನು ನಾವು ಮರೆತಿರುವ ಕಾರಣದಿಂದಾಗಿಯೇ ಇವರು ಮತ್ತೆ ನಮ್ಮ ಕುತ್ತಿಗೆಯ ಮೇಲೆ ಅಧಿಕಾರ ಚಲಾಯಿಸುತ್ತಾ ಕುಳಿತಿದ್ದಾರೆ.

ರಾಹುಲ್ ಅವರನ್ನು ಜೈಲಿಗೆ ಅಟ್ಟಲು ನಿರ್ಧರಿಸಿರುವ ಪುರೋಹಿತ ಶಾಹಿ ಪರವಾಗಿರುವ ಈ ಸರ್ಕಾರದ ನಿಜವಾದ ಉದ್ದೇಶವನ್ನು ನಮ್ಮ ಜನ ಅರ್ಥಮಾಡಿಕೊಳ್ಳಬೇಕು. ಹಿಂದುತ್ವದ ನಶೆ ಹತ್ತಿಸಿಕೊಂಡು ಭ್ರಮೆಯಲ್ಲಿ ಬದುಕುತ್ತಿರುವ ನಮಗೆ ಪ್ರಜಾಪ್ರಭುತ್ವದ ಈ ಸೂಕ್ಷ್ಮಗಳಾಗಲಿ ಅಥವಾ ಸರ್ವಾಧಿಕಾರಿ ಸರ್ಕಾರದ ನಿಜವಾದ ಉದ್ದೇಶವನ್ನಾಗಲೀ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿರುವುದು ವಿಷಾದನೀಯ.

ನಮ್ಮ ದೇಶದಲ್ಲಿರುವ 97% ದಲಿತ, ಶೂದ್ರ ಹಾಗೂ ಮಹಿಳಾ ಸಮುದಾಯಗಳು ಎಚ್ಚರಗೊಳ್ಳಬೇಕು. ತಮ್ಮ ಭವಿಷ್ಯವನ್ನು, ತಮ್ಮ ಮಕ್ಕಳ ಭವಿಷ್ಯವನ್ನು ತಾವೇ ಕಾಪಾಡಿಕೊಳ್ಳಬೇಕು. ಇಲ್ಲವಾದಲ್ಲಿ ಇಂದು ರಾಹುಲ್ ಅವರಿಗೆ ಬಂದಿರುವ ಗತಿಯೇ ನಾಳೆ ನಮಗೂ ನಮ್ಮ ಮಕ್ಕಳಿಗೂ ಬರಲಿದೆ.


•ಮುಕುಂದರಾಜ್ ಎಲ್.ಎನ್

Advertisement
Advertisement
Recent Posts
Advertisement