Advertisement

ರಾಹುಲ್ v/s ಆರೆಸೆಸ್, ಬಿಜೆಪಿ ಮತ್ತು ಮೋದಿ?

Advertisement

ಬರಹ: ಶ್ರೀನಿವಾಸ ಕಾರ್ಕಳ

ರಾಹುಲ್ ಗಾಂಧಿಯವರನ್ನು ಆರೆಸೆಸ್/ಬಿಜೆಪಿ/ಮೋದಿ ಯಾಕೆ ದ್ವೇಷಿಸುತ್ತಾರೆ? ಯಾಕೆ ಅವರು ಸಂಸತ್ ನಲ್ಲಿ ಇರುವುದನ್ನು ಇಷ್ಟಪಡುವುದಿಲ್ಲ?

ರಾಹುಲ್ ಗಾಂಧಿಯವರು ಕಾಂಗ್ರೆಸ್ ನ ಒಬ್ಬ ಬಲು ಜನಪ್ರಿಯ ನಾಯಕ. ಗಾಂಧಿ ಕುಟುಂಬದ ಹಿನ್ನೆಲೆಯಿರುವವರು. ಆರೆಸೆಸ್/ಬಿಜೆಪಿ/ಮೋದಿ ಗರಿಷ್ಠ ದ್ವೇಷಿಸುವ ನೆಹರೂ ಅವರ ಮೊಮ್ಮಗ. ಕಾಂಗ್ರೆಸ್ ನಲ್ಲಿ ಅವರು ಯಾವುದೇ ಸ್ಥಾನದಲ್ಲಿ ಇರಲಿ, ಇಲ್ಲದಿರಲಿ, ಅವರನ್ನು ಇಷ್ಟಪಡುವ, ಬೆಂಬಲಿಸುವ ಲಕ್ಷಾಂತರ ಮಂದಿ ಅಲ್ಲಿದ್ದಾರೆ (ಟ್ವಿಟರ್ ನಲ್ಲಿ ಅವರಿಗೆ 23 ಮಿಲಿಯ ಫಾಲೋವರ್ ಗಳಿದ್ದಾರೆ). ರಾಹುಲ್ ತುಂಬಾ ಓದಿಕೊಂಡಿದ್ದಾರೆ. ದೇಶದ ಬಗ್ಗೆ ಅಪಾರ ತಿಳಿವಳಿಕೆ ಇದೆ. ವಯಸ್ಸೂ ಇದೆ. ಹಾಗಾಗಿ ಒಂದಲ್ಲ ಒಂದು ದಿನ ಅವರು ತಮಗೆ ಪ್ರಬಲ ಪ್ರತಿಸ್ಪರ್ಧಿ ಎನ್ನುವುದು ಆರೆಸೆಸ್/ ಬಿಜೆಪಿ/ಮೋದಿಯವರಿಗೆ ಗೊತ್ತಿದೆ. "ಪ್ರತಿಸ್ಪರ್ಧಿಯನ್ನು ಇಲ್ಲವಾಗಿಸುವುದು" ಫ್ಯಾಸಿಸ್ಟ್ ಸಿದ್ದಾಂತದ ತಂತ್ರವೇ ಅಲ್ಲವೇ?

ಇದಕ್ಕಿಂತಲೂ ಮುಖ್ಯವಾಗಿ ರಾಹುಲ್ ಮೊದಲಿನಿಂದಲೂ, ಆರೆಸ್ಸೆಸ್/ ಬಿಜೆಪಿಯ ವಿಭಜಕ ಸಿದ್ಧಾಂತವನ್ನು ದ್ವೇಷಿಸಿಕೊಂಡು ಬಂದವರು. ಆರೆಸೆಸ್ ನ ಸಿದ್ಧಾಂತಗಳು, ಕಾರ್ಯಸೂಚಿಗಳು ಮತ್ತು ಕಾರ್ಯಕ್ರಮಗಳು ‘ಐಡಿಯಾ ಆಫ್ ಇಂಡಿಯಾ’ಕ್ಕೆ ಹೇಗೆ ಅಪಾಯಕಾರಿ ಎಂದು ಹೋದಲ್ಲಿ ಬಂದಲ್ಲಿ ಜನರಿಗೆ ಮನವರಿಕೆ ಮಾಡಿಕೊಡುತ್ತ ಬಂದವರು. ಆರೆಸೆಸ್ ಅನ್ನು ಹೆಸರೆತ್ತಿಯೇ ಖಂಡಿಸುವ ಭಾರತದ ಬೆರಳೆಣಿಕೆಯ ರಾಜಕಾರಣಿಗಳಲ್ಲಿ ರಾಹುಲ್ ಒಬ್ಬರು. ಇತ್ತೀಚೆಗೆ ಲಂಡನ್ ನಲ್ಲಿ ಅವರು ಆರೆಸೆಸ್ ಬಗ್ಗೆ ‘ಸೀಕ್ರೆಟ್ ಸೊಸೈಟಿ’, ‘ಮುಸ್ಲಿಂ ಬ್ರದರ್ ಹುಡ್ ನಂತೆ’ ಎಂಬ ಪದಗಳನ್ನು, ಹೋಲಿಕೆಗಳನ್ನು ಬಳಸಿದ್ದರು, ಗಮನಿಸಿ.

ಆರೆಸೆಸ್ ನ "ಕಾರ್ಯಸೂಚಿ"ಯನ್ನು ಬೆತ್ತಲುಗೊಳಿಸುವುದನ್ನು ಆರೆಸೆಸ್ ಸಹಜವಾಗಿಯೇ ಇಷ್ಟಪಡುವುದಿಲ್ಲ. ಮಾತ್ರವಲ್ಲ ತನ್ನನ್ನು ಉಲ್ಲೇಖಿಸಲು ಎಲ್ಲೂ ಬಿಡಕೂಡದು ಎಂದು ಅದು ಬಿಜೆಪಿಗೆ ಸೂಚನೆ ನೀಡಿರುವಂತಿದೆ. ಹಾಗಾಗಿಯೇ ಶಾಸನ ಸಭೆಗಳಲ್ಲಿ ಆರೆಸೆಸ್ ಹೆಸರು ಪ್ರಸ್ತಾಪಿಸಿದ ತಕ್ಷಣ ಬಿಜೆಪಿಗರು ಸಿಡಿದೇಳುತ್ತಾರೆ. ಮಾತ್ರವಲ್ಲ ವಿಧಾನಸಭೆ, ಸಂಸತ್ ನ ಸ್ಪೀಕರ್ ಗಳು ಕೂಡಾ ಆರೆಸೆಸ್ ಪ್ರಸ್ತಾಪಿಸಲು ಅವಕಾಶ ಕೊಡುವುದಿಲ್ಲ. ಪ್ರಸ್ತಾಪಿಸಿದರೂ ಕಡತದಿಂದ ಕಿತ್ತು ಹಾಕಿಸುತ್ತಾರೆ. ಹಾಗಾಗಿ ಆರೆಸೆಸ್/ ಬಿಜೆಪಿ/ಮೋದಿ ರಾಹುಲ್ ಅವರನ್ನು ತೀವ್ರವಾಗಿ ವಿರೋಧಿಸುತ್ತಾರೆ ದ್ವೇಷಿಸುತ್ತಾರೆ.

ರಾಹುಲ್ ಸಂಸತ್ ನಲ್ಲಿ ಇರುವುದನ್ನು ಬಿಜೆಪಿ/ಮೋದಿ ಯಾಕೆ ಇಷ್ಟಪಡುವುದಿಲ್ಲ?

ಫ್ಯಾಸಿಸ್ಟ್ ಸರಕಾರವೊಂದು ಮಾಧ್ಯಮಗಳನ್ನು ತಮ್ಮ ಕಪಿ ಮುಷ್ಟಿಯಲ್ಲಿ ಇರಿಸಿಕೊಂಡು ವಿರೋಧಿ ರಾಜಕೀಯ ನಾಯಕನ ಮಾತು ಜನರನ್ನು ತಲಪದಂತೆ ನೋಡಿಕೊಳ್ಳಬಹುದು. ಕುಲಪತಿಗಳಿಗೆ ಆದೇಶ ನೀಡಿ, ಆ ವ್ಯಕ್ತಿಯು ವಿವಿಗಳಲ್ಲಿ ವಿದ್ಯಾರ್ಥಿಗಳ ಮುಂದೆ ಮಾತನಾಡದಂತೆ ನೋಡಿಕೊಳ್ಳಬಹುದು. ಅವರ ಸಾರ್ವಜನಿಕ ಕಾರ್ಯಕ್ರಮಗಳಿಗೆ ಪೊಲೀಸರು ಅನುಮತಿ ನೀಡದಂತೆ ಮಾಡಬಹುದು. ಇದನ್ನು ಮೀರಿಯೂ ಅವರು ಕಾರ್ಯಕ್ರಮ ಮಾಡಿದರೆ ಅಲ್ಲಿಗೆ ತಮ್ಮ ಕೆಲ ಹಿಂಸಾಪ್ರಿಯ ಸಂಘಟನೆಗಳನ್ನು ಕಳಿಸಿ ಅವರ ಕಾರ್ಯಕ್ರಮವನ್ನು ಹಾಳುಗೆಡಹಬಹುದು. ಈ ಎಲ್ಲ ದಾರಿಗಳ ಮೂಲಕ ಅವರ ಮಾತು ಜನರನ್ನು ತಲಪದಂತೆ ಬಹುಮಟ್ಟಿಗೆ ನೋಡಿಕೊಳ್ಳಬಹುದು.

ಆದರೆ ಆತ ಸಂಸದನಾದರೆ, ಅಲ್ಲಿ ಆತನಿಗೆ ಮಾತನಾಡಲು ಅವಕಾಶ ಕೊಡಲೇಬೇಕಾಗುತ್ತದೆ (ಇಲ್ಲಿಯೂ ಗದ್ದಲ ಎಬ್ಬಿಸಿ ಅವರು ಮುಕ್ತವಾಗಿ ಮಾತನಾಡದಂತೆ ಮಾಡಲಾಗುತ್ತದೆ, ಮಾತನಾಡಿದ್ದನ್ನೂ ಕಡತದಿಂದ ತೆಗೆದುಹಾಕಲಾಗುತ್ತದೆ, ಮೈಕ್ ಬಂದ್ ಮಾಡಲಾಗುತ್ತದೆ ಆ ವಿಚಾರ ಬೇರೆ). ಹೆಚ್ಚು ಸಂಖ್ಯೆಯ ಸದಸ್ಯರಿರುವ ದೊಡ್ಡ ವಿಪಕ್ಷದ ನಾಯಕನಾದರೆ ಅಲ್ಲಿ ಮಾತನಾಡಲು ನೀಡುವ ಸಮಯದ ಅವಧಿಯೂ ಹೆಚ್ಚಿರುತ್ತದೆ. ಆತ ಆಡಿದ ಮಾತುಗಳು ಕಡತಕ್ಕೆ ಹೋಗುತ್ತವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಈಗ ಅದು ನೇರ ಪ್ರಸಾರವಾಗುತ್ತದೆ ಮತ್ತು ಅದನ್ನು ದೇಶ ಮಾತ್ರವಲ್ಲ, ಇಡೀ ಜಗತ್ತು ಬೇಕಾದರೂ ವೀಕ್ಷಿಸಬಹುದು. ಈ ಪ್ರಸಾರದ ತುಣುಕುಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಕೋಟಿಗಟ್ಟಲೆ ಜನರನ್ನು ತಲಪಬಹುದು, ಮುಂದೆ ಎಂದೆಂದೂ ಅದು ವೀಕ್ಷಣೆಗೆ ಲಭಿಸುತ್ತಿರುತ್ತದೆ.

ನೋಟು ನಿಷೇಧ, ಜಿ ಎಸ್ ಟಿ, ರಫೇಲ್ ಹಗರಣ, ಹೀಗೆ ರಾಹುಲ್ ಕಳೆದ ಒಂಬತ್ತು ವರ್ಷಗಳಿಂದಲೂ ಮೋದಿ ಸರಕಾರವನ್ನು ಸಂಸತ್ ನಲ್ಲಿ ಧೈರ್ಯದಿಂದ ಬೆತ್ತಲು ಗೊಳಿಸುವ ಕೆಲಸವನ್ನು ಮಾಡಿಕೊಂಡೇ ಬಂದಿದ್ದಾರೆ. ಅದು ಎಷ್ಟು ಪರಿಣಾಮಕಾರಿಯಾಗಿತ್ತು ಎನ್ನುವುದಕ್ಕೆ ಇತ್ತೀಚೆಗೆ ಅದಾನಿ ಹಗರಣದ ಬಗ್ಗೆ ರಾಹುಲ್ ಸಂಸತ್ ನಲ್ಲಿ ಆಡಿದ ಮಾತುಗಳು ಮತ್ತು ಆನಂತರದ ಬೆಳೆವಣಿಗೆಗಳನ್ನು ಗಮನಿಸಿ.

ಲಂಡನ್ ಮಾತುಗಳು ಕೇವಲ ನೆಪವಾಗಿತ್ತು. ಸಂಸತ್ ನಲ್ಲಿ ರಾಹುಲ್ ಗೆ ಮತ್ತೆ ಮಾತನಾಡಲು ಅವಕಾಶ ನೀಡದಿರುವುದು ಉದ್ದೇಶವಾಗಿತ್ತು. ಎಂದೇ, ಗದ್ದಲ ಎಬ್ಬಿಸಿ ಕಲಾಪ ನಡೆಯದಂತೆ ನೋಡಿಕೊಳ್ಳಲಾಯಿತು. 'ನನ್ನ ಮೇಲೆ ಆದಾರ ರಹಿತ ಆರೋಪ ಮಾಡಲಾಗಿದೆ, ಉತ್ತರಿಸಲು ಅವಕಾಶ ಕೊಡಿ' ಎಂದು ರಾಹುಲ್ ಸ್ಪೀಕರ್ ಗೆ ಪತ್ರ ಬರೆದರೂ ಇದಕ್ಕೆ ಅವಕಾಶ ಕೊಡಲಿಲ್ಲ. ಈ ಬೆಳವಣಿಗೆಗಳಿಗೆ ನಲವತ್ತೈದು ದಿನಗಳ ಹಿಂದೆ ಭಾರತ್ ಜೋಡೋದಲ್ಲಿ ರಾಹುಲ್ ಆಡಿದ ಮಾತುಗಳ ನೆಪದಲ್ಲಿ ದಿಲ್ಲಿ ಪೊಲೀಸರು ರಾಹುಲ್ ನಿವಾಸಕ್ಕೆ ದಾಳಿ ಇಟ್ಟದ್ದು, ಆನಂತರ ಸೂರತ್ ಕೋರ್ಟ್ ನ ತೀರ್ಪು, ಸಂಸತ್ ನಿಂದ ರಾಹುಲ್ ರನ್ನು ಹೊರಹಾಕಿದ್ದು ಇವನ್ನೆಲ್ಲ ಜೋಡಿಸಿ ನೋಡಿ. ನಿಮಗೊಂದು ಸ್ಪಷ್ಟ ಚಿತ್ರ ಸಿಗುತ್ತದೆ. ಇಲ್ಲಿ ಸರಕಾರದ್ದೇನೂ ಇಲ್ಲ, ರಾಜಕೀಯ ಇಲ್ಲ, ಎಲ್ಲವೂ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯ ಎಂಬ ವಿತಂಡವಾದ ಮಂಡಿಸುವವರಿಗೂ ಅಲ್ಲೊಂದು ಉತ್ತರ ಸಿಕ್ಕೀತು.

ಅಲ್ಲದೆ, ರಾಹುಲ್ ಮುಂದೆಯೂ ಆರೆಸೆಸ್/ಬಿಜೆಪಿ/ ಮೋದಿಯವರಿಗೆ ಹಿತವೆನಿಸದ ಪ್ರಶ್ನೆಗಳನ್ನು ಕೇಳಬಹುದು, ವಿಷಯಗಳನ್ನು ಪ್ರಸ್ತಾಪಿಸಬಹುದು, ಇನ್ನಷ್ಟು ಮುಜುಗರ ಉಂಟು ಮಾಡಬಹುದು ಎಂಬ ಕಾರಣದಿಂದಲೇ ಅವರು ಎಂದೆಂದೂ ಸಂಸತ್ ಗೆ ಬರದಂತೆ ನೋಡಿಕೊಳ್ಳುವ ಯತ್ನ ಸಾಗಿದೆ (ಸಂಸತ್ ನಲ್ಲಿ ಒಂದು ಥ್ರೆಟ್ ಎನಿಸುವ ಯಾರನ್ನೂ ಇವರು ಬಿಡುವುದಿಲ್ಲ. ನಿರ್ದಿಷ್ಟವಾಗಿ ಆಯ್ದು ಸೋಲಿಸಲು ಕ್ಷೇತ್ರದಲ್ಲಿಯೇ ವಿಶೇಷ ತಂತ್ರ ಹೂಡುತ್ತಾರೆ. ಇದರ ಭಾಗವಾಗಿಯೇ 2014 ರಲ್ಲಿ ರಾಹುಲ್ ರನ್ನು ಅಮೇಠಿಯಲ್ಲಿ ಸೋಲಿಸಲು ವಿಫಲ ಯತ್ನ ನಡೆಸಲಾಯಿತು. 2019 ರಲ್ಲಿ ಯಶಸ್ವಿಯಾಗಿ ಸೋಲಿಸಲಾಯಿತು. ವಯನಾಡು ಅಲ್ಲವಾಗಿದ್ದರೆ 2019 ರಿಂದಲೇ ರಾಹುಲ್ ಸಂಸತ್ ನಿಂದ ಹೊರಗೆ. ಸಂಸತ್ ನಲ್ಲಿ ತೀವ್ರವಾಗಿ ಕಾಡುವ ಮಲ್ಲಿಕಾರ್ಜುನ ಖರ್ಗೆಯವರನ್ನೂ ವ್ಯವಸ್ಥಿತ ತಂತ್ರಗಳ ಮೂಲಕ ಗುಲ್ಬರ್ಗದಲ್ಲಿ ಸೋಲಿಸಲಾಯಿತು. ಸಿದ್ದರಾಮಯ್ಯರನ್ನೂ ಸೋಲಿಸಲು ಆರೆಸೆಸ್ ನಡೆಸುತ್ತಿರುವ ತಂತ್ರ ಗಮನಿಸಿ). ಮಾತ್ರವಲ್ಲ, ಅವರ ನಾಗರಿಕತ್ವ ಕೊನೆಗೊಳಿಸಿ ದೇಶದಿಂದ ಹೊರಹಾಕುವ ಯತ್ನವೂ ನಡೆದಿದೆ; ಅದು ಸಾಧ್ಯವೋ ಎನ್ನುವುದು ಬೇರೆ ವಿಚಾರ.

ಫ್ಯಾಸಿಸ್ಟರು ಪ್ರಶ್ನೆಯನ್ನು ಉತ್ತರದ ಮೂಲಕ ಎದುರಿಸಿದ್ದು ಕಡಿಮೆ. ಪ್ರಶ್ನಿಸಿದವರನ್ನು ಮುಗಿಸಲು ಯತ್ನಿಸಿದ್ದೇ ಹೆಚ್ಚು.

Advertisement
Advertisement
Recent Posts
Advertisement