“ಅದಾನಿ ಕಂಪೆನಿಗೆ 20 ಸಾವಿರ ಕೋಟಿ ಎಲ್ಲಿಂದ ಬಂತು? ಪ್ರಧಾನಿ- ಅದಾನಿ ಸಂಬಂಧದ ಸ್ವರೂಪ ಏನು?” ಈ ಮಾತುಗಳಿಗೆ ಮೋದಿ ಬೆದರಿದರೇ? ಈ ಮಾತುಗಳೇ ರಾಹುಲ್‌ರನ್ನು ಅನರ್ಹಗೊಳಿಸಲು ಕಾರಣವಾಯಿತೇ?
ರಾಹುಲ್ ಗಾಂಧಿ ಅನರ್ಹಗೊಂಡ ಬಳಿಕ ಮಾತಾಡಿದ ಪತ್ರಿಕಾ ಗೋಷ್ಠಿಯ ಸಂಗ್ರಹ ಇಲ್ಲಿದೆ: ಸುರೇಶ್ ಕಂಜರ್ಪಣೆ
Remarkably Confident ಮಾತುಗಳಿವು. ಮುಖ್ಯ ಪ್ರಶ್ನೆಯನ್ನು ಜೀವಂತವಾಗಿಟ್ಟ ಪತ್ರಿಕಾ ಗೋಷ್ಠಿ. ರಾಹುಲ್ ಆತ್ಮ ವಿಶ್ವಾಸದ ಪರಿ ಹೇಗಿದೆಯೆಂದರೆ ಭಾಜಪದ ಪತ್ರಕರ್ತನೊಬ್ಬನ ಪ್ರಶ್ನೆಗೆ ನೇರವಾಗಿ, “ಪಾರ್ಟಿ ಬ್ಯಾಜ್ ಹಾಕೊಂಡು ಬಾ ಮಾರಾಯಾ, ಈ ಪತ್ರಕರ್ತ ಎಂಬ ನಟನೆ ಯಾಕೆ ?” ಎಂದು ರಾಹುಲ್ ಜಾಡಿಸುತ್ತಾರೆ. ಆತ ಬೆಪ್ಪಾಗಿ ಕೂತ ಮೇಲೆ, “ ಹವಾ ನಿಕಲ್ ಗಯೀ..” ಎಂದು ಲೇವಡಿ ಮಾಡುತ್ತಾರೆ, ರಾಹುಲ್. ಮೋದಿ ಮತ್ತು ಭಾಜಪ ಏನು ಮಾಡಿದರೂ ಈಗ ಅದರ ಅಡ್ವಾಂಟೇಜ್ ರಾಹುಲ್ ಗಾಂಧಿಯವರಿಗೆ.
ಪತ್ರಿಕಾ ಗೋಷ್ಠಿಯ ಸಾರಾಂಶ ಇಲ್ಲಿದೆ:
“ಅದಾನಿ ಕಂಪೆನಿಗೆ 20 ಸಾವಿರ ಕೋಟಿ ಎಲ್ಲಿಂದ ಬಂತು? ಪ್ರಧಾನಿ- ಅದಾನಿ ಸಂಬಂಧದ ಸ್ವರೂಪ ಏನು?” ನಾನು ದಾಖಲೆ ಸಮೇತ ಆ ಪ್ರಶ್ನೆ ಎತ್ತಿದೆ. ಇದಾದ ತಕ್ಷಣ ಬಿಜೆಪಿ ತನ್ನ ಕೆಲಸ ಮಾಡಲು ಆರಂಭಿಸಿತು. ನನ್ನ ಮಾತನ್ನು ಕಡಿತದಿಂದ ಕಿತ್ತು ಹಾಕಲಾಯಿತು. ಇದೆಲ್ಲಾ ದಾಖಲೆಗಳು ನನ್ನ ಸೃಷ್ಟಿ ಅಲ್ಲ ಎಂದು ಹೇಳಿದೆ. ನನ್ನ ಭಾಷಣ ಈಗ ಸಂಸತ್ತಿನ ದಾಖಲೆಯಲ್ಲಿಲ್ಲ. ಅದಾದ ಮೇಲೆ ಬಿಜೆಪಿಗಳು ನನ್ನ ಮೇಲೆ ಸುಳ್ಳು ಸುಳ್ಳೇ ಆಪಾದನೆ ಮಾಡಿದರು. ಇದೆಲ್ಲವೂ ಜನರ ಗಮನವನ್ನು ಬೇರೆ ಕಡೆ ಸೆಳೆಯುವ ತಂತ್ರವಾಗಿತ್ತು. ಈ 20 ಸಾವಿರ ಕೋಟಿ ಎಲ್ಲಿಂದ ಬಂತು ಎಂಬ ಪ್ರಶ್ನೆ ಇದು.
ನಾನು ಆಡದೇ ಇದ್ದ ಮಾತುಗಳ ಬಗ್ಗೆ ಅಪಾದನೆ ಮಾಡಿದರು. ನನಗೆ ಸಮರ್ಥಿಸಲು ಅವಕಾಶ ಕೊಡಿ ಎಂದು ಪತ್ರ ಬರೆದು ಕೇಳಿದೆ. ನಂತರ ಚೇಂಬರಿಗೆ ಹೋಗಿ ಕೇಳಿದೆ. ಸ್ಪೀಕರ್ ನನಗೆ ಅದು ಸಾಧ್ಯವಿಲ್ಲ ಎಂದರು, ನಗುತ್ತಾ. ಈ ನಾಟಕ ನೋಡಿ. ನಾನು ಈ ದೇಶದ ಜನರ ಪ್ರಜಾಸತ್ತಾತ್ಮಕ ಧ್ವನಿಯಾಗುತ್ತೇನೆ. ಈ ಅನರ್ಹತೆ, ಜೈಲು ಯಾವುದಕ್ಕೂ ನಾನು ಹೆದರಲಾರೆ.
ಇವರಿಗೆ ನಾನಿನ್ನೂ ಅರ್ಥವಾಗಿಲ್ಲ. ನನಗೆ ಅವರ ಕಂಡರೆ ಭಯವಿಲ್ಲ.
ಪ್ರಧಾನಿ- ಅದಾನಿ ಸಂಬಂಧ ಏನು?
ಆ ಪ್ರಶ್ನೆ ಕೇಳುತ್ತಲೇ ಇರುತ್ತೇನೆ. ಇದು ಹಳೇ ಸಂಬಂಧ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗಿನಿಂದ ಇರುವ ಸಂಬಂಧ ಇದು. ರಿಸರ್ಜೆಂಟ್ ಗುಜರಾತ್ ನ್ನು ಕಟ್ಟಿದ್ದು ಅದಾನಿ. ಈ ಪಾಲುದಾರಿಕೆ ಗಮನಿಸಿ.
ಇಂದಿನ ಹಿಂದೂಸ್ತಾನದಲ್ಲಿ ಪತ್ರಿಕೆಗಳ ಬೆಂಬಲ ಸಿಗುತ್ತಿಲ್ಲ. ಆದ್ದರಿಂದ ನಾವು ಜನರ ಬಳಿ ನೇರ ಹೋಗುತ್ತಿದ್ದೇವೆ. ಭಾರತ್ ಜೋಡೋ ಯಾತ್ರಾದಲ್ಲಿ ಹಿಂಸೆ ಬೇಡ. ಎಲ್ಲರೂ ಸಹೋದರರು. ಎಲ್ಲರೂ ಜೊತೆಯಾಗಿ ಹೋಗೋಣ ಎನ್ನುತ್ತಾ ಬಂದಿದ್ದೇನೆ.
ಪ್ರಧಾನಿ- ಅದಾನಿ ಸಂಬಂಧ ಏನು ಎಂಬ ಪ್ರಶ್ನೆಗೆ ಬಿಜೆಪಿ, ಒಮ್ಮೆ ಒಬಿಸಿ, ಒಮ್ಮೆ ವಿದೇಶದ ಮಾತು, ಅನರ್ಹತೆ ,ಇನ್ನೊಮ್ಮೆ ಇನ್ನೊಂದು ಗುಲ್ಲೆಬ್ಬಿಸಿ ಮುಖ್ಯ ಪ್ರಶ್ನೆಯಿಂದ ಗಮನ ಬೇರೆಡೆ ಸೆಳೆಯಲು ನೋಡುತ್ತಿದೆ.
ಪ್ರಶ್ನೆ ಈ ೨೦ಸಾವಿರ ಕೋಟಿ ಯಾರದ್ದು?
ಪ್ರಭುತ್ವವಿರಲಿ ಏನೇ ಇರಲಿ.. ನಾನು ಸತ್ಯ ಹೇಳುವೆ. ಇದು ಪ್ಯಾಸನ್ ಅಲ್ಲ. ಇದು ನನ್ನ ರಕ್ತದಲ್ಲೇ ಇದೆ. ಬೇರೆ ದಾರಿ ನಾನು ಹುಡುಕುವುದಿಲ್ಲ. ನನ್ನನ್ನು ಅನರ್ಹಗೊಳಿಸಲಿ ಹೊಡೆಯಲಿ, ಜೈಲಿಗೆ ತಳ್ಳಲಿ, ಪರವಾಗಿಲ್ಲ! ಈ ದೇಶ ನನಗೆ ಎಲ್ಲಾ ನೀಡಿದೆ. ಪ್ರೀತಿ ಗೌರವ ನೀಡಿದೆ. ಆದ್ದರಿಂದ ನಾನು ಇದನ್ನು ಮಾಡುತ್ತಿದ್ದೇನೆ.
ಬಿಜೆಪಿ ಯವರೂ ನರೇಂದ್ರ ಮೋದಿಗೆ ಹೆದರುತ್ತಾರೆ. ಅವರಿಗೂ ಇದು ( ಅದಾನಿ ವಿಷಯ) ಗೊತ್ತು. ಪೂರಾಪೂರಾ ಗೊತ್ತು.
ಪ್ರಶ್ನೆ ಇಷ್ಟೇ 20 ಸಾವಿರ ಕೋಟಿ ಯಾರದ್ದು?
ನನ್ನನ್ನು ಯಾಕೆ ಅನರ್ಹಗೊಳಿಸಿದರು ಗೊತ್ತೇ? ಪ್ರಧಾನಿ ನನ್ನ ಮುಂಬರುವ ಭಾಷಣದ ಬಗ್ಗೆ ದಿಗಿಲುಗೊಂಡಿದ್ದಾರೆ. ಅವರ ಕಣ್ಣುಗಳಲ್ಲಿ ನನಗೆ ಅದು ಕಂಡಿದೆ. ಮೊದಲು ಗಮನ ಬೇರೆಡೆ ಸೆಳೆಯುವ ತಂತ್ರ. ಈಗ ಅನರ್ಹತೆ. ಅದಾನಿ- ಮೋದಿಯವರ ಮಧ್ಯೆ ಆಳ ಸಂಬಂಧ ಇದೆ. ಈ ೨೦ ಸಾವಿರ ಕೋಟಿ ಎಲ್ಲಿಂದ ಬಂತು? ಇವು ಕೆಲವು ರಕ್ಷಣಾ ಸಂಬಂಧಿ ಉತ್ಪಾದನೆಯಲ್ಲಿ ತೊಡಗಿವೆ. ರಕ್ಷಣಾ ಇಲಾಖೆ ಯಾಕೆ ಈ ಬಗ್ಗೆ ಪ್ರಶ್ನಿಸುತ್ತಿಲ್ಲ. ಅನರ್ಹಗೊಳಿಸಲಿ, ಸದಸ್ಯತ್ವ ಮರಳಿಸಲಿ, ಜೀವನ ಪರ್ಯಂತ ಅನರ್ಹಗೊಳಿಸಿದರೂ ನಾನು ನನ್ನ ಕೆಲಸ ಮಾಡುವೆ. ನಾನು ಸಂಸತ್ತಿನ ಒಳಗಿದ್ದೇನೋ ಹೊರಗಿದ್ದೇನೋ ಮುಖ್ಯ ಅಲ್ಲ.
“ನೀವು ಗಮನ ಬೇರೆಡೆ ಸೆಳೆಯುವ ಯತ್ನ ಮಾಡಬೇಡಿ. ಪ್ರಶ್ನೆ ಇಷ್ಟೇ 20 ಸಾವಿರ ಕೋಟಿ ಅದಾನಿಯವರ ಶೆಲ್ ಕಂಪೆನಿಗಳಿಗೆ ಎಲ್ಲಿಂದ ಬಂತು? ತನಿಖೆ ಮಾಡಿ, ನಮ್ಮ ಮುಖ್ಯಮಂತ್ರಿಗಳು ಶಾಮೀಲಾಗಿದ್ದಾರೆ ಅಂತ ಕಂಡರೆ ಜೈಲಿಗೆ ಹಾಕಿ. ಅರ್ಥ ಮಾಡಿಕೊಳ್ಳಿ ಮೋದಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ವಿರೋಧ ಪಕ್ಷಗಳಿಗೆ ಇದರಿಂದ ಅನುಕೂಲವಾಗಲಿದೆ. ಮೋದಿಯವರು ಗಾಬರಿಯಾಗಿ ಭೀತರಾಗಿ ಈ ಸರಣಿ ಪ್ರತಿಕ್ರಿಯೆ ಶುರು ಮಾಡಿದ್ದಾರೆ.
ಜನರ ಮನಸ್ಸಲ್ಲಿ ಒಂದು ಪ್ರಶ್ನೆ ಮೊಳೆತಿದೆ. ಆ ಭ್ರಷ್ಟ ವ್ಯಕ್ತಿಯನ್ನು ಹಿಂದೂಸ್ತಾನದ ಪ್ರಧಾನಿ ಯಾಕೆ ರಕ್ಷಿಸುತ್ತಿದ್ದಾರೆ? ಬಿಜೆಪಿಯ ಎಲ್ಲರೂ ಈ ವ್ಯಕ್ತಿಯನ್ನು ರಕ್ಷಿಸಲು ಯಾಕೆ ಯತ್ನಿಸುತ್ತಿದ್ದಾರೆ. ಬಿಜೆಪಿಯವರು ಅದಾನಿ ಮೇಲಿನ ದಾಳಿ ದೇಶದ ಮೇಲಿನ ದಾಳಿ ಎಂದಿದ್ದಾರೆ. ಅಂದರೆ ಇವರ ಮನಸ್ಸಲ್ಲಿ "ಅದಾನಿ ಅಂದರೆ ದೇಶ; ದೇಶ ಅಂದರೆ ಅದಾನಿ" ಅಂತ ಇದೆ... ಇದನ್ನು ಅರ್ಥ ಮಾಡಿಕೊಳ್ಳಿ.
ಗಮನ ಬೇರೆಡೆ ಸೆಳೆಯಲು ಗರಿಷ್ಟ ಶಿಕ್ಷೆಯ ಅಗತ್ಯವಿತ್ತು. ಐದು, ಏಳು- ಹತ್ತು ವರ್ಷ ಶಿಕ್ಷೆ? ನನಗೇನು ಬಾಧಿಸಲ್ಲ. ಈ ಕಾನೂನು ಪ್ರಕ್ರಿಯೆ ನನಗೇನೂ ಮಾಡಲ್ಲ. ಯಾರು ತಪ್ಪು ಮಾಡಿದ್ದಾರೋ ಅವರು ಜನರ ಗಮನವನ್ನು ಬೇರೆಡೆ ಸೆಳೆಯುವ ಯತ್ನ ಮಾಡುತ್ತಿರುತ್ತಾರೆ.
ಈ 20 ಸಾವಿರ ಕೋಟಿ ಎಲ್ಲಿಂದ ಬಂತು?
ಅದಾನಿ ಈ ಹಣ ಹೊಂದಿಸಲು ಸಾದ್ಯವಿಲ್ಲ.
ಪ್ರಧಾನಿ- ಅದಾನಿ ಸಂಬಂಧ ಬಹಿರಂಗಗೊಳ್ಳಲಿದೆ. ಅದೇ ಕಾರಣಕ್ಕೆ ಪ್ರಧಾನಿ ಆತಂಕಗೊಂಡಿದ್ದಾರೆ.
ನೀವು ಬಿಜೆಪಿ ಪರವಾಗಿ ಇಷ್ಟು ನೇರವಾಗಿ ಯಾಕೆ ಕೆಲಸ ಮಾಡುತ್ತೀರಿ? ಕೊಂಚ ಓಡಾಡಿ ವಿಚಾರಿಸಿ. ಬಿಜೆಪಿ ಪರವಾಗಿ ಕೆಲಸ ಮಾಡಬೇಕೆಂದಿದ್ದರೆ ಬಿಜೆಪಿ ಚಿಹ್ನೆ ಎದೆಗಂಟಿಸಿಕೊಂಡು ಬನ್ನಿ, ಪರವಾಗಿಲ್ಲ. ಪತ್ರಕರ್ತ ಎಂಬೋ ನಟನೆ ಮಾಡಬೇಡಿ ಎನ್ನುತ್ತಾರೆ. (ಬಳಿಕ ಆ ಪತ್ರಕರ್ತನನ್ನು ತೋರಿಸಿ)"ನೋಡಿ ಗಾಳಿ ಹೋಗೇ ಬಿಡ್ತು!" ಎನ್ನುತ್ತಾರೆ.
ನಾನು ಸಾವರ್ಕರ್ ಅಲ್ಲ. ನಾನು ಗಾಂಧಿ. ಗಾಂಧಿ ಎಂದಿಗೂ ಕ್ಷಮಾಪಣೆ ಕೇಳಲ್ಲ.
ಉತ್ತರಿಸಲು ನನಗೆ ಅವಕಾಶ ಕೊಡಿ ಎಂದು ಕೇಳಿದೆ. ಅವಕಾಶ ನೀಡಲಿಲ್ಲ. ಈ ದೇಶದ ಪ್ರಜಾಸತ್ತೆಯ ಮೇಲೆ ಇಲ್ಲಿನ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದೆ. ಇದರ ತಂತ್ರೋಪಾಯದ ಬುನಾದಿ ಪ್ರಧಾನಿ- ಅದಾನಿ ಸಂಬಂಧದಲ್ಲಿದೆ.
ನಾನು ನರೇಂದ್ರ ಮೋದಿಯವರಲ್ಲಿ ಪ್ರಶ್ನೆ ಕೇಳುತ್ತಿಲ್ಲ. ನಾನು ಅದಾನಿಯವರಲ್ಲಿ ಕೇಳ್ತಾ ಇದ್ದೇನೆ.
ಬಿಜೆಪಿಯವರು ಅದಾನಿಯನ್ನು ಯಾಕೆ ರಕ್ಷಿಸುತ್ತಿದ್ದಾರೆ?