"ಉರಿಗೌಡ- ನಂಜೇಗೌಡ ವಿಚಾರದಲ್ಲಿ ದಾಖಲೆಗಳೂ ಇಲ್ಲ, ನೈಜತೆಯೂ ಇಲ್ಲ" ಎಂದು ಒಪ್ಪಿಕೊಂಡ ಸಚಿವ ಮುನಿರತ್ನ!
"ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ರಣರಂಗದಲ್ಲಿ ಮಡಿದ ಟಿಪ್ಪುಸುಲ್ತಾನರನ್ನು ಕೊಂದವರು ಉರಿಗೌಡ- ನಂಜೇಗೌಡ ಎಂಬ ಒಕ್ಕಲಿಗರು" ಎಂಬಂತೆ ಬಿಜೆಪಿಯ ಕೆಲವು ನಾಯಕರುಗಳಾದ ಸಿಟಿ ರವಿ, ಅಶ್ವತ್ಥ ನಾರಾಯಣ, ಶೋಬಾ ಕರಂದ್ಲಾಜೆ ಮುಂತಾದವರು ಪ್ರಚಾರ ನಡೆಸುವ ಮೂಲಕ "ಒಕ್ಕಲಿಗರು ಬ್ರಿಟೀಷರ ಜೊತೆ ಶಾಮೀಲಾಗಿ ದೇಶದ್ರೋಹವೆಸಗಿದ್ದರು" ಎಂಬಂತೆ ಬಿಂಬಿಸುತ್ತಿರುವುದರ ಹಿನ್ನಲೆಯಲ್ಲಿ ಒಕ್ಕಲಿಗ ಸಮುದಾಯದಲ್ಲಿ ತೀವ್ರವಾದ ಆಕ್ರೋಶ ವ್ಯಕ್ತವಾಗಿದ್ದು ನಿನ್ನೆಯಷ್ಟೇ ನಿರ್ಮಲಾನಂದ ಸ್ವಾಮೀಜಿಯವರು ಈ ಉರಿಗೌಡ- ನಂಜೇಗೌಡ ಹೆಸರಿನ ಸಿನೇಮಾ ಮಾಡುವುದಾಗಿ ಘೋಷಿಸಿದ್ದ ಸಿನೇಮಾ ನಿರ್ಮಾಪಕ, ಸಚಿವ ಮುನಿರತ್ನರನ್ನು ಕರೆಸಿ ಎಚ್ಚರಿಕೆ ನೀಡಿದ್ದ ಹಿನ್ನಲೆಯಲ್ಲಿ ಸಚಿವ ಮುನಿರತ್ನ "ಆ ಸಿನೇಮಾ ಮಾಡುವುದಿರಲಿ ಇನ್ನುಮುಂದೆ ಉರಿಗೌಡ- ನಂಜೇಗೌಡ ರ ಹೆಸರನ್ನು ಕೂಡ ಹೇಳುವುದಿಲ್ಲ" ಎಂದು ಘೋಷಿಸಿದ್ದರು.
ಸ್ವಾಮೀಜಿಯವರನ್ನು ಭೇಟಿಯಾಗುವ ಹಿಂದಿನ ದಿನದ ತನಕವೂ ಸಿನೇಮಾ ಮಾಡುವ ಕುರಿತು ಅತ್ಯಂತ ಉತ್ಸುಕರಾಗಿ ಸಿದ್ಧತೆಗಳನ್ನು ಕೂಡ ನಡೆಸಿದ್ದ ಮುನಿರತ್ನರವರು ಇದೀಗ "ಸಿನೇಮಾ ಮಾಡುವುದಿರಲಿ ಇನ್ನುಮುಂದೆ ಉರಿಗೌಡ ನಂಜೇಗೌಡರ ಹೆಸರನ್ನು ಕೂಡ ಹೇಳುವುದಿಲ್ಲ" ಎಂದು ಘೋಷಿಸಿರುವುದರ ಮತ್ತು "ಯಾರಿಗೂ ಮನಸ್ಸು ನೋಯಿಸಿ ಸಿನಿಮಾ ಮಾಡುವುದಿಲ್ಲ. ಉರಿಗೌಡ ನಂಜೇಗೌಡ ವಿಚಾರದಲ್ಲಿ ಒಂದಷ್ಟು ದಾಖಲೆ ಸಿಗುತ್ತಿವೆ ಒಂದಷ್ಟು ಸಿಗುತ್ತಿಲ್ಲ. ಶ್ರೀಗಳು ನೈಜತೆ ಇದ್ದರೆ ಮಾತ್ರವೇ ಸಿನೇಮಾ ಮಾಡುವುದರ ಬಗ್ಗೆ ಯೋಚನೆ ಮಾಡಿ ಎಂದು ಸೂಚಿಸಿದ್ದಾರೆ. ಹೀಗೆ, ಗೊಂದಲ ಇರುವಾಗ ಯಾವುದು ಸೂಕ್ತ ಎಂದು ಶ್ರೀಗಳು ಕೇಳಿದರು. ಆದ್ದರಿಂದ ಶ್ರೀಗಳ ಮಾತಿನಂತೆ ನಾನು ಸಿನಿಮಾ ಮಾಡುವುದನ್ನು ಕೈಬಿಟ್ಟಿದ್ದೇನೆ" ಎಂದು ಹೇಳಿಕೆ ನೀಡಿರುವುದರ ಹಿನ್ನಲೆಯಲ್ಲಿ ಇವರಿಗೆ ಸ್ವಾಮೀಜಿಯವರು ಯಾವ ರೀತಿಯಲ್ಲಿ ಎಚ್ಚರಿಕೆ ನೀಡಿರಬಹುದು ಮತ್ತು "ಆ ಸಿನೇಮಾದ ಕಥೆಗೆ ಆದಾರವನ್ನು ನೀಡುವಂತೆ" ಕೇಳಿರುವುದನ್ನು ಕೂಡ ನಾವಿಲ್ಲಿ ತರ್ಕಿಸಬಹುದಾಗಿದೆ ಅಲ್ಲದೆ "ಉರಿಗೌಡ- ನಂಜೇಗೌಡ ವಿಚಾರದಲ್ಲಿ ದಾಖಲೆಗಳೂ ಇಲ್ಲ, ನೈಜತೆಯೂ ಇಲ್ಲ" ಎಂದು ಸಚಿವರೇ ಸ್ವತಃ ಒಪ್ಪಿಕೊಂಡಂತಾಗಿದೆ.
ಹಾಗೆಯೇ, ಸ್ವಾಮೀಜಿಯವರು ಮುನಿರತ್ನ ರನ್ನು ಕರೆಸಿ ಎಚ್ಚರಿಕೆ ನೀಡಿದ ಬೆನ್ನಲ್ಲೆ ಇದೀಗ ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ರಾಜ್ಯ ಒಕ್ಕಲಿಗರ ಸಂಘವು "ಇತ್ತೀಚೆಗೆ ಕೆಲವರು ಉರಿಗೌಡ ಮತ್ತು ನಂಜೇಗೌಡ ಎಂಬ ಒಕ್ಕಲಿಗರ ಹೆಸರುಗಳನ್ನು ಸೃಷ್ಟಿಸಿಕೊಂಡು, ಒಕ್ಕಲಿಗರ ಕುರಿತು ಸಮಾಜದಲ್ಲಿ ಕೆಟ್ಟ ಅಭಿಪ್ರಾಯ ಬರುವ ರೀತಿಯಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿರುವ ಒಕ್ಕಲಿಗರ ಸಂಘದ ಅಧ್ಯಕ್ಷರು ಹಾಗೂ ಶ್ರವಣಬೆಳಗೊಳ ಶಾಸಕರೂ ಆಗಿರುವ ಸಿ.ಎನ್. ಬಾಲಕೃಷ್ಣರವರು "ಇತಿಹಾಸದಲ್ಲಿ ಎಲ್ಲಿಯೂ ಇಲ್ಲದ ಪಾತ್ರಗಳನ್ನು ಸೃಷ್ಟಿಸಿ ಈಗ ಒಕ್ಕಲಿಗರ ಕುರಿತು ಅಪಪ್ರಚಾರ ಮಾಡುತ್ತಿರುವುದರ ಹಿಂದಿನ ಹುನ್ನಾರವೇನು?" ಎಂದು ಪ್ರಶ್ನಿಸಿದ್ದಾರೆ.
"ಈ ರೀತಿಯಲ್ಲಿ ಸುಳ್ಳಿನ ಮೂಲಕ ಒಕ್ಕಲಿಗ ಸಮುದಾಯವನ್ನು ಅವಮಾನಿಸುವ ಅಥವಾ ಅಪಪ್ರಚಾರ ನಡೆಸುವ ಪ್ರಯತ್ನವನ್ನು ಒಕ್ಕಲಿಗ ಸಮುದಾಯವು ವಿರೋಧಿಸುತ್ತದೆ. ಬಹುಶಃ ಹತ್ತಿರದಲ್ಲಿರುವ ಚುನಾವಣೆಯಲ್ಲಿ ಲಾಭ ಗಳಿಸುವ ಉದ್ದೇಶದಿಂದ ಬಿಜೆಪಿಗರು ಹೀಗೆ ಅಪಪ್ರಚಾರ ನಡೆಸುತ್ತಿರುವ ಸಾಧ್ಯತೆಯಿದ್ದು, ಯಾವುದೇ ಕಾರಣಕ್ಕೂ ಸ್ವಾಭಿಮಾನಿ ಒಕ್ಕಲಿಗ ಸಮುದಾಯವು ಸುಳ್ಳುಗಳನ್ನು ಸಹಿಸುವುದಿಲ್ಲ" ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
"ಕಪೋಲಕಲ್ಪಿತ ಉರಿಗೌಡ ಮತ್ತು ನಂಜೇಗೌಡ ಎಂಬ ಹೆಸರುಗಳ ಸೃಷ್ಟಿಯ ಹಾಗೂ ಈ ಸುಳ್ಳು ಅಪಪ್ರಚಾರದ ಮೂಲಕ ಒಕ್ಕಲಿಗರನ್ನು ಅವಮಾನಿಸುವ ಕುತಂತ್ರದ ಹಿಂದೆ ಯಾರ‌್ಯಾರಿದ್ದಾರೋ ಅಂತಹವರನ್ನು ಪತ್ತೆ ಹಚ್ಚುವ ಮೂಲಕ ರಾಜ್ಯ ಸರ್ಕಾರ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದ ಬಾಲಕೃಷ್ಣರವರು, "ರಾಜ್ಯ ಸರ್ಕಾರವು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವಿಕೆಯನ್ನು ತಡೆಯದಿದ್ದರೆ ಆದಿಚುಂಚನಗಿರಿ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿಗಳು ಮತ್ತು ಸ್ಪಟಿಕಪುರಿ ಸ್ವಾಮೀಜಿ ನಂಜಾವಧೂತ ಸ್ವಾಮೀಜಿಯವರ ನೇತೃತ್ವದಲ್ಲಿ ರಾಜ್ಯ ಒಕ್ಕಲಿಗರ ಸಂಘವು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ" ಎಂದು ಎಚ್ಚರಿಸಿರುವ ಕುರಿತು ವರದಿಯಾಗಿದೆ.
ರಾಜ್ಯದಲ್ಲಿ ನೆರೆಬಂದಾಗ ಅಥವಾ ಬರ ಇದ್ದಾಗಲೂ ಬಾರದೇ ಮತ್ತು ಪರಿಹಾರವನ್ನು ಕೂಡ ನೀಡದೇ ಇದೀಗ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ರಾಜ್ಯಕ್ಕೆ ಪದೇಪದೇ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಮಂಡ್ಯಕ್ಕೆ ಆಗಮಿಸಿದ್ದ ವೇಳೆ ರೋಡ್ ಶೋ ಮಾಡಲಾದ ರಸ್ತೆಯಲ್ಲಿ ಈ "ಉರಿಗೌಡ ಹಾಗೂ ದೊಡ್ಡ ನಂಜೇಗೌಡ" ಎಂಬ ಹೆಸರಿನಿಂದ ಹಾಕಲಾಗಿದ್ದ ಮಹಾದ್ವಾರದ ಬ್ಯಾನರ್ ನ ಕುರಿತು ರಾಜ್ಯದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕುರಿತು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಟ್ವೀಟ್ ಮಾಡಿ "ಪ್ರಧಾನಿಯವರ ಸ್ವಾಗತಕ್ಕಾಗಿ ಕಪೋಲಕಲ್ಪಿತ ಪಾತ್ರಗಳಾದ ಉರಿಗೌಡ- ನಂಜೇಗೌಡ ಹೆಸರಿನ ಕಮಾನು ಹಾಕಿರುವುದು ಅಪಪ್ರತಿಮ ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದ ಮಂಡ್ಯಕ್ಕೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಮಾಡಿರುವ ಅವಮಾನವಾಗಿದೆ. ಮುಖ್ಯಮಂತ್ರಿಗಳು ತಕ್ಷಣವೇ ಮದ್ಯ ಪ್ರವೇಶಿಸಿ ಸ್ವಾಗತ ಕಮಾನನ್ನು ಕಿತ್ತುಹಾಕಿಸಬೇಕು" ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದರು.
ಈ ಮೇಲಿನ ಘಟನೆಗಳ ಹಿನ್ನಲೆಯಲ್ಲಿ ಬೆದರಿದ ಜಿಲ್ಲಾಡಳಿತ/ಸಂಘಟಕರು ಮಹಾದ್ವಾರದ ಹೆಸರನ್ನು ರಾತ್ರಿ ಬೆಳಗಾಗುವುದರೊಳಗೆ ಬದಲಾಯಿಸಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ "ಬಿಜೆಪಿಗರೇ, ನಿಮ್ಮ ರಾಜಕೀಯ ಮೈಲೇಜ್‌ಗಾಗಿ ಕಪೋಲಕಲ್ಪಿತ ಉರಿಗೌಡ, ನಂಜೇಗೌಡ ಹೆಸರಿನಲ್ಲಿ ಒಕ್ಕಲಿಗರನ್ನು ಬ್ರಿಟೀಷರ ಜೊತೆ ಕೈಜೋಡಿಸಿದವರು ಎಂಬಂತೆ ಬಿಂಬಿಸಲು ಹೊರಟರೆ ಹುಷಾರ್!" ಎಂಬ ಸಂದೇಶಗಳು ಹರಿದಾಡುತ್ತಿದೆ.
ಇದೀಗ ಒಂದೆಡೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಾಥ್ ನೀಡಲೆಂದೇ ಸಿದ್ಧಪಡಿಸುತ್ತಿದ್ದ ಉರಿಗೌಡ, ನಂಜೇಗೌಡ ಸಿನಿಮಾ ನಿರ್ಮಾಣವೂ ನಿಂತು ಹೋಗಿದ್ದರೆ ಮತ್ತೊಂದೆಡೆ ಬಿಜೆಪಿಯ ಈ ನಡೆ ಒಕ್ಕಲಿಗರ ಆಕ್ರೋಶಕ್ಕೂ ಕಾರಣವಾಗಿದೆ. "ಏನೋ ಮಾಡಲು ಹೋಗಿ, ಏನು ಮಾಡಿದೆ ನೀನು.." ಎಂಬಂತಾಗಿದೆ ಇವರುಗಳ ಪರಿಸ್ಥಿತಿ!