Advertisement

ನಿಜಕ್ಕೂ ವಿದೇಶದಲ್ಲಿ ದೇಶದ ಮಾನ ಕಳೆದಿದ್ದವರು ಮೋದಿಯವರಲ್ಲವೇ?

Advertisement

ನಕಲಿ ಉರಿ ಗೌಡ, ನಂಜೆ ಗೌಡರನ್ನು ಸೃಷ್ಟಿಸಿ ನಾಟಕ ಮಾಡುತ್ತಿರುವವರು ಸ್ವಾತಂತ್ರ್ಯ ಹೋರಾಟದಲ್ಲಿ ಯಾರ ಏಜೆಂಟರಾಗಿದ್ದರು?

ಬರಹ: ಸನತ್ ಕುಮಾರ ಬೆಳಗಲಿ (ಲೇಖಕರು ಹಿರಿಯ ಪತ್ರಕರ್ತರು / ಜನಪರ ಚಿಂತಕರು)

ವಿದೇಶದಲ್ಲಿ ದೇಶದ ಮಾನ ಕಳೆದವರು ಯಾರು?

ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡು, ಅಪ್ಪಿಕೊಂಡು ಏಳು ದಶಕಗಳಾದವು. ಈ 70 ವರ್ಷಗಳಲ್ಲಿ 1975ರ ತುರ್ತು ಪರಿಸ್ಥಿತಿಯ ವರ್ಷಗಳನ್ನು ಹಾಗೂ ಅಘೋಷಿತ ತುರ್ತು ಪರಿಸ್ಥಿತಿಯ ಕಳೆದ ಒಂಬತ್ತು ವರ್ಷಗಳನ್ನು ಬಿಟ್ಟರೆ ಜನತಂತ್ರಕ್ಕೆ ಅಪಚಾರವಾಗುವಂಥ ಘಟನೆಗಳು ನಡೆದಿರುವುದು ವಿರಳ.

ತುರ್ತು ಪರಿಸ್ಥಿತಿಯನ್ನು ಹೇರಿದವರು ತಮ್ಮ ತಪ್ಪನ್ನು ಒಪ್ಪಿಕೊಂಡು ಎರಡೇ ವರ್ಷದೊಳಗೆ ಅದನ್ನು ವಾಪಸು ಪಡೆದು ಚುನಾವಣೆಗೆ ಹೋದರು.ಆಗ ಮೊದಲ ಬಾರಿ ಕಾಂಗ್ರೆಸ್ ಅಧಿಕಾರವನ್ನು ಕಳೆದುಕೊಂಡು ಹಳೆಯ ಜನಸಂಘ (ಈಗಿನ ಬಿಜೆಪಿ) ಹಾಗೂ ಸಂಸ್ಥಾ ಕಾಂಗ್ರೆಸ್, ಸ್ವತಂತ್ರ ಪಕ್ಷ ,ಹಾಗೂ ಸಮಾಜವಾದಿ ಪಕ್ಷಗಳು ವಿಲೀನಗೊಂಡು ಜನತಾಪಕ್ಷ ಎಂದು‌ ಹೆಸರಿಟ್ಟುಕೊಂಡ ಪಕ್ಷ ಅಧಿಕಾರಕ್ಕೆ ಬಂತು. ಆಗ‌ ತುರ್ತು ಪರಿಸ್ಥಿತಿ ವಿರೋಧಿಸಿ ಹೋರಾಡಿದ್ದಾಗಿ ಹೇಳಿಕೊಳ್ಳುವವರೆ ಈಗ ಅಧಿಕಾರ ಹಿಡಿದು ಅಘೋಷಿತ ತುರ್ತು ಪರಿಸ್ಥಿತಿ ಜಾರಿ ಮಾಡಿದ್ದಾರೆ.

ಆಧಿಕಾರದಲ್ಲಿರುವವರು ತಮ್ಮ ಬಗೆಗಿನ ಟೀಕೆ ಮತ್ತು ವಿಮರ್ಶೆ ಗಳನ್ನು ಅಸಹನೆಯಿಂದ ಕಾಣುವ ಈ ದಿನಗಳಲ್ಲಿ ತಮಗಾಗದವರ ಒಂದು ಸಣ್ಣ ಹೇಳಿಕೆಯೂ ಘನ ಘೋರ ಅಪರಾಧವಾಗಿ ಕಾಣುತ್ತದೆ. ಕಳ್ಳರನ್ನು ಕಳ್ಳರೆಂದು ಕರೆದರೂ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ. ಇದಕ್ಕೆ ಇತ್ತೀಚಿನ ಉದಾಹರಣೆ ಯಾವುದೆಂದರೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆಡಿದ ಸಣ್ಣ ಮಾತಿಗಾಗಿ ಮಾನ ನಷ್ಟ ಮಾಡಿದ ಆರೋಪಕ್ಕೆ ಒಳಗಾಗಿ ಎರಡು ವರ್ಷ ಶಿಕ್ಷೆಯನ್ನು ಅನುಭವಿಸುವುದು ಮಾತ್ರವಲ್ಲ ಲೋಕಸಭಾ ಸದಸ್ಯತ್ವವನ್ನು ಕಳೆದುಕೊಳ್ಳಬೇಕಾಗಿದೆ. ಮಾನನಷ್ಟ ಪ್ರಕರಣದಲ್ಲಿ ಎರಡು ವರ್ಷಕ್ಕಿಂತ ಕಡಿಮೆ ಶಿಕ್ಷೆಯಾದರೆ ಲೋಕಸಭಾ ಸದಸ್ಯತ್ವಕ್ಕೆ ಧಕ್ಕೆ ಬರುತ್ತಿರಲಿಲ್ಲ. ಆದರೆ ನ್ಯಾಯಾಲಯ ಬರೋಬ್ಬರಿ ಎರಡು ವರ್ಷ ಶಿಕ್ಷೆ ವಿಧಿಸಿರುವುದರಿಂದ ಲೋಕಸಭಾ ಸದಸ್ಯತ್ವ ಕಳೆದುಕೊಳ್ಳಬೇಕಾಯಿತು. ಅಷ್ಟೇ ಅಲ್ಲ, ಸಂಸದರಿಗಾಗಿ ಇರುವ ದಿಲ್ಲಿಯ ಸರ್ಕಾರಿ ಮನೆಯನ್ನೂ ಖಾಲಿ ಮಾಡಬೇಕೆಂದು ಅವರಿಗೆ ನೋಟೀಸು ಬಂದಿದೆ.

ಸರ್ಕಾರಿ ಮನೆಯನ್ನು ಖಾಲಿ ಮಾಡಲು ನೀಡಿರುವ ನೋಟೀಸಿಗಾಗಿ ಕೃತಜ್ಞತೆ ಯನ್ನು ಸಲ್ಲಿಸಿರುವ ರಾಹುಲ ಗಾಂಧಿ ನಾಲ್ಕು ಅವಧಿಯಲ್ಲಿ ವಾಸವಾಗಿದ್ದ ಮನೆಯನ್ನು ಖಾಲಿ ಮಾಡುವುದಾಗಿ ಹೇಳಿದ್ದಾರೆ. ಇದು ಅವರ ದೊಡ್ಡತನ. ಖಾಲಿ ಮಾಡಲು ಹೇಳಿದವರ ಸಣ್ಣತನವನ್ನು ತೋರಿಸುತ್ತದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಪರಸ್ಪರ ಶತ್ರುಗಳಲ್ಲ. ರಾಜಕೀಯ ಭಿನ್ನಾಭಿಪ್ರಾಯ ಸಹಜ. ಅದು ವೈಯಕ್ತಿಕ ದ್ವೇಷ ಸಾಧನೆಗೆ ರಹದಾರಿ ಆಗಬಾರದು. ಪ್ರತಿಪಕ್ಷಗಳ ಮಾತುಗಳನ್ನು ಕೇಳಿಸಿಕೊಳ್ಳುವ ಸಹನೆ ಆಡಳಿತ ಪಕ್ಷಕ್ಕೆ ಇರಬೇಕು. ಯಾವುದೇ ಸಂದರ್ಭದಲ್ಲೂ ಸರ್ಕಾರವನ್ನು ವಿಮರ್ಶಿಸುವ ಅವಕಾಶಗಳನ್ನು ಪ್ರತಿಪಕ್ಷಗಳು ಕಳೆದುಕೊಳ್ಳಬಾರದು. ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಈ ಉದಾತ್ತ ಆಶಯವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದರು.ತಮ್ಮನ್ನು ಕಟುವಾಗಿ ಟೀಕಿಸುತ್ತಿದ್ದ ಸೋಷಲಿಸ್ಟ್ ನಾಯಕ ರಾಮ ಮನೋಹರ ಲೋಹಿಯಾ ಅವರನ್ನು ನೆಹರೂ ತುಂಬಾ ಗೌರವಿಸುತ್ತಿದ್ದರು. ಆಗ ಜನಸಂಘದಿಂದ ಮೊದಲ ಬಾರಿ ಲೋಕಸಭೆಗೆ ಚುನಾಯಿತರಾಗಿ ಬಂದಿದ್ದ ಅಟಲ ಬಿಹಾರಿ ವಾಜಪೇಯಿ ಅವರ ಹಿಂದಿ ಭಾಷಣ ಕೇಳಿ ನೆಹರೂ ಪ್ರೋತ್ಸಾಹಿಸಿದ್ದರು. ಅಷ್ಟೇ ಏಕೆ, ರಾಜೀವ ಗಾಂಧಿಯವರು ಪ್ರಧಾನಿಯಾಗಿದ್ದಾಗ ವಾಜಪೇಯಿ ಅವರು ಯಾವುದೋ ಗಂಭೀರ ಕಾಯಿಲೆಯಿಂದ ಬಳಲುತ್ತಿರುವುದನ್ನು ಕೇಳಿ ಸಂಯುಕ್ತ ರಾಷ್ಟ್ರ ಸಂಸ್ಥೆಯ ಅಧಿವೇಶನದಲ್ಲಿ ಮಾತಾಡಲು ಅಮೆರಿಕೆಗೆ ಕಳಿಸಿ ಅವರಿಗೆ ವೈದ್ಯಕೀಯ ಚಿಕಿತ್ಸೆಯನ್ನು ವ್ಯವಸ್ಥೆ ಮಾಡಿದ್ದರು. ಇದನ್ನು ವಾಜಪೇಯಿ ಅವರೇ ಕೃತಜ್ಞತೆಯಿಂದ ಹೇಳಿಕೊಂಡಿದ್ದಾರೆ. ಇನ್ನು ಸರ್ಕಾರವನ್ನು ಕಟುವಾಗಿ ಟೀಕಿಸುತ್ತ ಬಂದ ಕಮ್ಯುನಿಸ್ಟ್ ಸಂಸದರ ಬಗ್ಗೆ ನೆಹರೂ ಅವರಿಂದ ಹಿಡಿದು ಮನಮೋಹನ ಸಿಂಗ್ ವರೆಗೆ ಎಲ್ಲ ಪ್ರಧಾನಿಗಳು ಆದರದ ಭಾವನೆಯನ್ನು ಹೊಂದಿದ್ದರು. ಇದು ಭಾರತದ ಪ್ರಜಾಪ್ರಭುತ್ವದ ಸೌಂದರ್ಯ.

ರಾಹುಲ್ ಗಾಂಧಿ ಯಾರೆಂಬುದನ್ನು ಪರಿಚಯಿಸಬೇಕಾಗಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಅಪಾರ ತ್ಯಾಗ ಮಾಡಿದ ಕುಟುಂಬದಿಂದ ಬಂದ ರಾಹುಲ ಗಾಂಧಿಯವರು ಸ್ವಾಭಿಮಾನ ದಿಂದಲೇ ಎದುರಾದ ಸವಾಲನ್ನು ಸ್ವೀಕರಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದ ಆ ದಿನಗಳಲ್ಲಿ ಅಲಹಾಬಾದ್ ನ ಕೋಟ್ಯಂತರ ರೂಪಾಯಿ ಕಿಮ್ಮತ್ತಿನ ಆನಂದ ಭವನದಲ್ಲಿ ರಾಹುಲ ಗಾಂಧಿ ಅವರ ಮುತ್ತಜ್ಜ ಮೋತಿಲಾಲ್ ನೆಹರು ನೆಲೆಸಿದ್ದರು. ಮೋತಿಲಾಲರ ಏಕೈಕ ಮಗ ಜವಾಹರಲಾಲ್ ಅವರು ವಿದೇಶದಿಂದ ವ್ಯಾಸಂಗ ಮುಗಿಸಿ ಬಂದ ನಂತರ ಐಷಾರಾಮಿ ಜೀವನವನ್ನು ತಿರಸ್ಕರಿಸಿ, ಬದುಕಿನ ಅಮೂಲ್ಯ ಕ್ಷಣಗಳನ್ನು ಗಾಂಧೀಜಿಯ ಸಬರ ಮತಿ ಆಶ್ರಮ ಮತ್ತು ಜೈಲುಗಳಲ್ಲಿ ಕಳೆದರು. ಸಮರ್ಪಿಸಿದರು. ರಾಹುಲ ಅಜ್ಜ ಜವಾಹರಲಾಲ್ ನೆಹರೂ ಈ ಬಂಗಲೆಯಲ್ಲಿ ಎಂದೂ ಇರಲಿಲ್ಲ. ಈ ಅರಮನೆಯಂಥ ಮನೆ ಯಾರ ತಿಜೋರಿಯನ್ನೋ ಹೊಡೆದು ಕಟ್ಟಿಸಿದ್ದಲ್ಲ. ಇದು ವಂಶ ಪಾರಂಪರ್ಯವಾಗಿ ಬಂದ ಆಸ್ತಿ. ಮುಂದೆ ಇಂದಿರಾಗಾಂಧಿ ಅವರು ಇದನ್ನು ಸ್ವಂತಕ್ಕೆ ಇಟ್ಟುಕೊಳ್ಳದೇ ದೇಶಕ್ಕೆ ಸಮರ್ಪಿಸಿದರು. ಇಂಥ ಅಪಾರ ತ್ಯಾಗ, ಪರಿಶ್ರಮದ ಇತಿಹಾಸವಿರುವ ಕುಟುಂಬದ ರಾಹುಲ ನಿಗೆ ಕಿರುಕುಳ ನೀಡುತ್ತ‌ ನಕಲಿ ಉರಿ ಗೌಡ, ನಂಜೆ ಗೌಡರನ್ನು ಸೃಷ್ಟಿಸಿ ನಾಟಕ ಮಾಡುತ್ತಿರುವವರು ಸ್ವಾತಂತ್ರ್ಯ ಹೋರಾಟದಲ್ಲಿ ಯಾರ ಏಜೆಂಟರಾಗಿದ್ದರೆಂಬುದು ಎಲ್ಲರಿಗೂ ಗೊತ್ತಿದೆ.

ಆದಾರ್, ಪಾನ್ ಜೋಡನೆ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ‌ ಓಡಾಡುತ್ತಿರುವ ವಿಡಿಯೋ ತುಣುಕು!

ಅಷ್ಟೇ ಅಲ್ಲ, ಸ್ವಾತಂತ್ರ್ಯ ಹೋರಾಟ ಮತ್ತು ಆಧುನಿಕ ಭಾರತದ ನಿರ್ಮಾಣದಲ್ಲಿ ನೆಹರೂ ಕುಟುಂಬದ ಪಾತ್ರವನ್ನು ನಾವು ಕೃತಜ್ಞತೆ ಯಿಂದ ಸ್ಮರಿಸಬೇಕಾಗಿದೆ.

ರಾಹುಲ ಗಾಂಧಿಯವರ ಮಾತಿನಿಂದ ಮಾನ ನಷ್ಟವಾಗಿದೆ ಎಂದು ಹೇಳುವವರು, ವಿದೇಶದಲ್ಲಿ ರಾಹುಲ ಗಾಂಧಿ ಭಾರತದ ಮಾನ ತೆಗೆದರೆಂದು ಹೇಳುವವರು ಎಂಥವರು ಎಂದು ಎಲ್ಲರಿಗೂ ಗೊತ್ತಿದೆ. ರಾಹುಲ ಗಾಂಧಿ ಆಡಬಾರದ ಮಾತನ್ನೇನೂ ಮಾತಾಡಿಲ್ಲ. ಪ್ರತಿಪಕ್ಷ ನಾಯಕರ ಮನೆಗಳ ಮೇಲೆ ತನಿಖಾ ಸಂಸ್ಥೆಗಳ ಮ‌ೂಲಕ ರೇಡ್ ಮಾಡಿಸುವುದು. ಪೆಗಾಸಸ್ ಮೂಲಕ ಕಣ್ಗಾವಲು ಇರಿಸುವುದು, ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರು ಮಾತಾಡುವಾಗ ಮೈಕ್ ಬಂದ್ ಮಾಡಿಸುವುದು, ಹೀಗೆ ಎಲ್ಲರಿಗೂ ಗೊತ್ತಿರುವ ವಿಷಯವನ್ನೇ ಹೇಳಿದರು. ಇದರಿಂದ ದೇಶದ ಮಾನ ಹೇಗೆ ನಷ್ಟವಾಯಿತೆಂದು ಸಂಬಂಧಿಸಿದವರು ಹೇಳಬೇಕು.

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಬ್ರಿಟಿಷರು ಖಜಾನೆಯನ್ನು ಖಾಲಿ ಮಾಡಿ ಹೋಗಿದ್ದರು. ಸ್ವತಂತ್ರ ಭಾರತವನ್ನು ಮುನ್ನಡೆಸಲು ದೇಶದ ಕೆಲವು ಉದ್ಯಮಿಗಳು ನೆರವು ನೀಡಿದರು. ಸ್ವತಃ ಪಂಡಿತ ಜವಾಹರಲಾಲ್ ನೆಹರೂ ಅವರು ತಮ್ಮ ಮನೆತನದ ಶೇಕಡಾ ೯೮ ರಷ್ಟು ಸಂಪತ್ತನ್ನು ದೇಶಕ್ಕೆ ನೀಡಿದರು. ಅಂದು ನೆಹರೂ ದೇಶ ನಡೆಸಲು ದೇಣಿಗೆಯಾಗಿ ಕೊಟ್ಟ ಹಣ ೧೯೬ ಕೋಟಿ ರೂಪಾಯಿ ಮೌಲ್ಯದ ಆಸ್ತಿ. ಈಗ ಅದರ ಬೆಲೆ ಐವತ್ತು ಸಾವಿರ ಕೋಟಿ ರೂಪಾಯಿ. (ಇದರಲ್ಲಿ ತಂದೆ ಮೋತಿಲಾಲರು ದೇಶಕ್ಕೆ ನೀಡಿದ ಆನಂದ ಭವನ ಸೇರಿಲ್ಲ) ನೆಹರೂ ಬಗ್ಗೆ ತಮ್ಮ ಆತ್ಮಚರಿತ್ರೆ ಯಲ್ಲಿ ಬರೆದಿರುವ ಅವರ ಕಾರ್ಯದರ್ಶಿ ಒಮ್ಮನ್ ಮಥಾಯಿ "ಭಾರತದ ಪ್ರಧಾನಿಯಾದಾಗಲೂ ನೆಹರೂ ಜೇಬಿನಲ್ಲಿ ₹ 200ಕ್ಕಿಂತ ಜಾಸ್ತಿ ಹಣ ಇರುತ್ತಿರಲಿಲ್ಲ ಎಂದು ದಾಖಲಿಸಿದ್ದಾರೆ. ಇಂಥ ಕುಟುಂಬದ ಇತಿಹಾಸ ಗೊತ್ತಿಲ್ಲದ ಯಾರದೋ ತ್ಯಾಗ, ಬಲಿದಾನದಿಂದ ದೊರತೆ ಅಧಿಕಾರವನ್ನು ಅನುಭವಿಸುತ್ತಿರುವ ಅವಿವೇಕಿಗಳು ಈಗ ನೆಹರೂ ಕುಟುಂಬದ ಬಗ್ಗೆ ಹಗುರಾಗಿ ಮಾತಾಡುತ್ತಿರುವದು ಈ ದೇಶದ ದುರಂತ.

ಇದೇ ಮೋದಿಯವರು 2015ರಲ್ಲಿ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ ನಲ್ಲಿ ಭಾರತದ ಹಿಂದಿನ ಸರಕಾರಗಳ ಬಗ್ಗೆ ಟೀಕಿಸುತ್ತಾ" ಹೀಗೂ ಒಂದು ಕಾಲವಿತ್ತು ಆಗ ಜನರು ಯಾವ ಪಾಪ ಮಾಡಿದ ಕಾರಣಕ್ಕೆ ಭಾರತದಲ್ಲಿ ಜನಿಸಿದೆವೋ ಎಂದು ಅಂದುಕೊಳ್ಳುತ್ತಿದ್ದರು" ಎಂದು ಲೇವಡಿ ಮಾಡಿದ್ದರು. ಇದು ಭಾರತದ ಪ್ರತಿಷ್ಟೆಗೆ ಅಪಚಾರ ಉಂಟು ಮಾಡುವ ಮಾತಲ್ಲವೇ? ಅಂದರೆ ತನಗಿಂತ ಹಿಂದೆ ನೆಹರೂ ಅವರಿಂದ ಹಿಡಿದು ವಾಜಪೇಯಿ ಮನಮೋಹನ ಸಿಂಗ್ ವರೆಗೆ ಎಲ್ಲರೂ ಅಯೋಗ್ಯರು ಎಂದು ಹೇಳಿದಂತಾಗಲಿಲ್ಲವೇ. ರಾಹುಲ ಗಾಂಧಿ ಮಾತಿಗೆ ಸಂಸತ್ತಿನಲ್ಲಿ ಕೋಲಾಹಲ ಮಾಡಿ ಅದಾನಿ ಹಗರಣದ ಬಗ್ಗೆ ಚರ್ಚೆ ಯಾಗದಂತೆ ಮಾಡಿದವರು ಇದಕ್ಕೇನು ಹೇಳುತ್ತಾರೆ?

ಬಿಜೆಪಿಯ ಸುಳ್ಳು ತರಭೇತಿ ಕೇಂದ್ರ?

ಭಾರತದ ಬಗ್ಗೆ ವಿದೇಶದಲ್ಲಿ ರಾಹುಲ ಗಾಂಧಿ ಮಾಡಿದ ಭಾಷಣಗಳಲ್ಲಿ ಅತಿಶಯೋಕ್ತಿಯಾದುದೇನೂ ಇರಲಿಲ್ಲ. ಆದರೆ ನಮ್ಮ ಮಾನ್ಯ ಪ್ರಧಾನಿ ಮೋದಿಯವರು ವಿದೇಶದಲ್ಲಿ ಎಂತೆಂಥ ಮಾತುಗಳನ್ನು ಆಡಿದ್ದಾರೆ ಎಂಬುದಕ್ಕೆ ದಾಖಲೆಗಳಿವೆ. 2022ರಲ್ಲಿ ಬರ್ಲಿನ್ ಗೆ ಹೋಗಿದ್ದ ಮೋದೀಜಿ ರಾಜೀವ ಗಾಂಧಿಯವರನ್ನು ಟೀಕಿಸುತ್ತಾ 'ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಜನರಿಗೆ ತಲುಪುವ ಆ ದಿನಗಳು ಈಗಿಲ್ಲ' ಎಂದು ಹೇಳಿಕೊಂಡರು. ಅಷ್ಟೇ ಅಲ್ಲ, ಅಲ್ಲಿ ಸೇರಿದ ಜನರಿಗೆ ಅತ್ಯಂತ ಅಸಭ್ಯ ವಾಗಿ" ಆ 85 ಪೈಸೆ ಕಬಳಿಸುತ್ತಿದ್ದ ಕೈ ಯಾವುದಿತ್ತು " ಎಂದು ಹೇಳಿದರು. ಭಾರತದ ಹಿಂದಿನ ಪ್ರಧಾನ ಮಂತ್ರಿಗಳ ಬಗ್ಗೆ ತಾವು ಆಡಿದ ಮಾತಿಗೆ ಮೋದಿ ಕ್ಷಮೆ ಕೇಳಲಿಲ್ಲ.

ಇದು ರಾಹುಲ ಗಾಂಧಿ ಅವರಿಗೆ ಮಾತ್ರವಲ್ಲ ,ಅವರಿಗಿಂತ ಮುಂಚೆ ಕೂಡ ಸರ್ಕಾರದ ಲೋಪ ದೋಷಗಳ ಬಗ್ಗೆ ಟೀಕಿಸುವವರ ಬಾಯಿಯನ್ನು ಮುಚ್ಚಿಸಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇಲ್ಲವೇ ರಾಜದ್ರೋಹದ ಆರೋಪವನ್ನು ಹೊರಿಸಿ ಜೈಲಿಗೆ ತಳ್ಳಲಾಗುತ್ತದೆ. ಆನಂದ ತೇಲ್ತುಂಬಡೆ, ಗೌತಮ ನವಲ್ಕಾ, ವರವರರಾವ ಅವರಂಥ ಹಲವಾರು ಚಿಂತಕರು ಈ ಕಿರುಕುಳ ಅನುಭವಿಸುತ್ತಿದ್ದಾರೆ.

ಅಮೇರಿಕೆಗೆ ಅಲ್ಲಿನ ಚುನಾವಣೆ ಸಂದರ್ಭದಲ್ಲಿ ಹೋಗಿ ಹೂಸ್ಟನ್ ನಗರದಲ್ಲಿ "ಅಬ್ ಕಿ ಟ್ರಂಪ್ ಸರ್ಕಾರ " ಎಂದು ರಾಹುಲ ಗಾಂಧಿ ಕಿರುಚಾಡಲಿಲ್ಲ.ಇನ್ನೊಂದು ದೇಶದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲಿಲ್ಲ. ಇದು ಮಾನ ಹೋಗಿದೆ ಎಂದು ಸಂಸತ್ತಿನಲ್ಲಿ ಗಲಾಟೆ ಮಾಡಿವದರಿಗೂ ಗೊತ್ತಿದೆ. ಆದರೆ ಅವರ ಗಲಾಟೆಗೆ ಕಾರಣವಿದೆ. ಅದಾನಿ ಅಕೌಂಟ್ ಗೆ ಜಮಾ ಆದ ಇಪ್ಪತ್ತು ಸಾವಿರ ಕೋಟಿ ರೂಪಾಯಿ ಎಲ್ಲಿಂದ ಬಂತು ಎಂಬ ರಾಹುಲ ಪ್ರಶ್ನೆಗೆ ಇವರ ಬಳಿ ಉತ್ತರ ವಿರಲಿಲ್ಲ. ಈ ಹಣ ಕಾರ್ಮಿಕರ ಭವಿಷ್ಯ ನಿಧಿ ಯ ಹಣ, ಈ ಹಣ ಜೀವ ವಿಮೆಯ ಹಣ ಎಂಬುದು ಜನ ಜನಿತ. ಅದಕ್ಕಾಗಿ ಉತ್ತರ ನೀಡುವ ಬದಲಾಗಿ ಸಂಸತ್ ಕಲಾಪ ನಡೆಯದಂತೆ ಮಾಡಿದರು.

ಪ್ರಭುತ್ವ ಫ್ಯಾಸಿಸ್ಟೀಕರಣಗೊಂಡಾಗ ಪ್ರತಿರೋಧವನ್ನು ದಮನ ಮಾಡುವದು ಸಹಜ. ಜರ್ಮನಿಯಲ್ಲಿ ಹಿಟ್ಲರ್ ಮತ್ತು ಇಟಲಿಯಲ್ಲಿ ಮುಸಲೋನಿ ಮಾಡಿದ್ದು ಇದನ್ನೇ‌ ಅಲ್ಲವೇ? ಈಗ ಅವರನ್ನು ಬೈಯುತ್ತ ಕುಳಿತರೆ ಪ್ರಯೋಜನವಿಲ್ಲ. ಅವರನ್ನು ಎದುರಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸಿಕೊಳ್ಳಲು ಪ್ರತಿಪಕ್ಷ ಗಳು ಮತ್ತು ಜನಪರ ಸಂಘಟನೆಗಳು ಒಂದಾಗಬೇಕಾಗಿದೆ. ಯಾಕೋ ಪ್ರತಿಪಕ್ಷ ಗಳಲ್ಲಿ ಅಂಥ ತಯಾರಿ ಕಾಣುತ್ತಿಲ್ಲ .ಹಿಟ್ಲರ್ ನಿಂದ ಸ್ಪೂರ್ತಿ ಪಡೆದು ಅವನ ತಂತ್ರವನ್ನೇ ಅನುಸರಿಸುತ್ತಿರುವವರು ಅಧಿಕಾರದಲ್ಲಿ ಇರುವಾಗಲೂ ಕೆಲವು ಪ್ರಗತಿಪರ ಪಕ್ಷಗಳು ಕೂಡ ಕಾಂಗ್ರೆಸ್_ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು " ಎಂದು ಹಳೆಯ ಮಂತ್ರ ಪಠಿಸುತ್ತ ಪ್ರತಿಪಕ್ಷ ಏಕತೆಗೆ ಅಡ್ಡಗಾಲು ಹಾಕುತ್ತಿವೆ. ಯುವಜನರ ಬಹುದೊಡ್ಡ ಸಮೂಹ ನಾಜಿವಾದದ ನಶೆಯನ್ನು ಏರಿಸಿಕೊಂಡಿದೆ. ನಾಜಿವಾದ, ಮನುವಾದ, ಕಾರ್ಪೊರೇಟ್ ಭ್ರಷ್ಟಾಚಾರ, ಇವೆಲ್ಲ ಜಂಟಿಯಾಗಿ ಕಾರ್ಯಾಚರಣೆ ಗೆ ಇಳಿದಿರುವ ಈ ದಿನಗಳಲ್ಲಿ ಪ್ರತಿಪಕ್ಷ ಏಕತೆಯೊಂದೇ ಪ್ರಜಾಪ್ರಭುತ್ವದ ಉಳಿವಿನ ದಾರಿಯಾಗಿದೆ.

ಕೃಪೆ: ಪ್ರಚಲಿತ ಅಂಕಣ/ ವಾರ್ತಾಭಾರತಿ/ 03.04.23

Advertisement
Advertisement
Recent Posts
Advertisement