"ತುಂಬಿದ ಸಭೆಯಲ್ಲಿ ಕೌರವರು ದ್ರೌಪದಿಯ ವಸ್ತ್ರಾಪಹರಣಕ್ಕೆ ಮುಂದಾದ ಪ್ರದೇಶವೇ ಇಂದಿನ ಮಣಿಪುರವೆನ್ನುವುದು ಭಾರತೀಯರಾದ ನಮ್ಮ ನಂಬಿಕೆ ಆದರೆ ಆಗ ದ್ರೌಪದಿಯ ಮಾನ ಕಾಪಾಡಿದ್ದು ಶ್ರೀಕೃಷ್ಣ ಪರಮಾತ್ಮ ಆದರೆ ಇಂದು ನಡು ಬೀದಿಗಳಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿ, ಅತ್ಯಾಚಾರ ಮಾಡುವುದನ್ನು ತಡೆಗಟ್ಟಲು ಆಡಳಿತ ನಡೆಸುತ್ತಿರುವ ಡಬ್ಬಲ್ ಇಂಜಿನ್ ಸರ್ಕಾರಗಳು ವಿಫಲವಾಗಿದೆ.. ಆದರೆ ಖಂಡಿತವಾಗಿಯೂ ಇಂತಹ ದುರುಳರ ಅಟ್ಟಹಾಸವನ್ನು ಹತ್ತಿಕ್ಕಲು ಶ್ರೀಕೃಷ್ಣ ಪರಮಾತ್ಮನೇ ಅವತರಿಸುತ್ತಾನೆ" ಎಂದು ಯುವ ನ್ಯಾಯವಾದಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ ಹೇಳಿದ್ದಾರೆ.
ಮಣಿಪುರದಲ್ಲಿ ನಿರಂತರವಾಗಿ ಕಳೆದ 83 ದಿನಗಳಿಂದ ನಡೆಯುತ್ತಿರುವ ಹಿಂಸೆಯನ್ನು ಖಂಡಿಸಿ ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ಸೋಮವಾರ ಸಂಜೆ ಸಮಾನ ಮನಸ್ಕ ಸಂಘಟನೆಗಳಾದ ಸಮುದಾಯ, ಸಹಬಾಳ್ವೆ, ದಲಿತ ಸಂಘರ್ಷ ಸಮಿತಿ ಗಳ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
"ಪ್ರಪಂಚ ಅಥವಾ ನಮ್ಮ ದೇಶದಲ್ಲಿ ಇಂತಹ ಅದೆಷ್ಟೋ ಜನಾಂಗೀಯ ಕಲಹಗಳು ನಡೆದಿವೆ ಹಾಗೂ ಅಂತಹ ಸಂದರ್ಭದಲ್ಲಿ ಆಳುವ ಸರ್ಕಾರಗಳು ಕ್ಷಣ ಮಾತ್ರದಲ್ಲಿ ಅದನ್ನು ಹತೋಟಿಗೆ ತಂದಿವೆ. ಆದರೆ ಮಣಿಪುರದ ಜನಾಂಗೀಯ ಕಲಹ ಇಷ್ಟೊಂದು ಸುದೀರ್ಘ ಅವಧಿಯಿಂದ ಅಂದರೆ ಕಳೆದ 80 ದಿನಗಳಿಂದ ನಡೆಯುತ್ತಿದ್ದರೂ ಇದನ್ನು ನಿಯಂತ್ರಣಕ್ಕೆ ತರ ಬೇಕಾಗಿದ್ದ ಕೇಂದ್ರ ಹಾಗೂ ಮಣಿಪುರ ರಾಜ್ಯದ ಬಿಜೆಪಿ ಸರ್ಕಾರಗಳ ನಡೆ ನೋಡಿದರೆ ಇದು ಸರ್ಕಾರಿ ಪ್ರಯೋಜಿತವೇ ಎನ್ನುವ ಅನುಮಾನ ಮೂಡುತ್ತಿದೆ" ಎಂದವರು ಹೇಳಿದರು.
ಈ ಸಂಧರ್ಭದಲ್ಲಿ ಖ್ಯಾತ ಪತ್ರಕರ್ತ ಶಶಿಧರ ಹೆಮ್ಮಾಡಿ, ಕ್ರೈಸ್ತ ಧರ್ಮಗುರುಗಳಾದ ಸ್ಟ್ಯಾನಿ ತಾವ್ರೋ, ನ್ಯಾಯವಾದಿ ಮಂಜುನಾಥ್ ಗಿಳಿಯಾರು, ಮಂಜು ಕಾಳಾವರ, ಜುಡಿತ್ ಮೆಂಡೋನ್ಸಾ, ಹುಸೇನ್ ಸಿಪಿಐಎಂ ನ ಚಂದ್ರಶೇಖರ್, ಮಾನವ ಭಂದುತ್ವ ವೇದಿಕೆಯ ಬರ್ನಾಡ್ ಡಿ ಕೋಸ್ಟಾ, ಹೆಚ್. ನರಸಿಂಹ ಮುಂತಾದವರು ಮಾತನಾಡಿದರು.
ಈ ಸಂಧರ್ಭದಲ್ಲಿ ಸಮುದಾಯ ಕುಂದಾಪುರದ ಅಧ್ಯಕ್ಷರಾದ ಸದಾನಂದ ಬೈಂದೂರು, ಸದಸ್ಯರಾದ ಉದಯ್ ಗಾಂವ್ಕರ್,ವಾಸುದೇವ ಗಂಗೇರ, ಬಾಲಕೃಷ್ಣ, ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಪ್ರಭಾವತಿ ಶೆಟ್ಟಿ, ಅಬ್ಬು ಅಹ್ಮದ್, ಅಶ್ಫಾಕ್. ಮುಖಂಡರಾದ ಗಣೇಶ್ ಶೇರೆಗಾರ್, ಶೋಭಾ ಸಚ್ಚಿದಾನಂದ, ಚಂದ್ರ ಅಮೀನ್, ಆಶಾ ಕರ್ವಾಲ್ಲೊ, ಕೇಶವ್ ಭಟ್, ಅಬ್ದುಲ್ಲಾ ಕೋಡಿ, ರೇವತಿ ಶೆಟ್ಟಿ, ಗಂಗಾಧರ್ ಶೆಟ್ಟಿ, ಅಭಿಜಿತ್ ಪೂಜಾರಿ, ಜ್ಯೋತಿ ನಾಯ್ಕ್, ಕುಮಾರ್ ಖಾರ್ವಿ, ಶಿವಕುಮಾರ್ ಕೆಂಚನೂರು, ಜ್ಯೋತಿ, ಹಾರೋನ್ ಸಾಹೇಬ್, ಅಶೋಕ್ ಸುವರ್ಣ, ರೋಶನ್ ಶೆಟ್ಟಿ, ರೋಶನ್ ಬರೆಟ್ಟೊ, ಮುನಾಫ್ ಕೋಡಿ, ಶಾಲೆಟ್ ರೆಬೆಲ್ಲೊ, ಯಾಸಿನ್ ಹೆಮ್ಮಾಡಿ, ಶಾಂತಿ ಪಿರೇರಾ ಮುಂತಾದವರು ಹಾಜರಿದ್ದರು.
ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು.
ಪ್ರತಿಭಟನೆಯ ಪೂರ್ವಬಾವಿಯಾಗಿ ಕುಂದಾಪುರದ ಈ ಮೂರು ಸಮಾನ ಮನಸ್ಕ ಸಂಘಟನೆಗಳು ಹೊರಡಿಸಿದ್ದ ಪ್ರಕಟಣೆಯ ವಿವರ.
ಮಣಿಪುರ ಎಂಬ ಸಣ್ಣ ರಾಜ್ಯವೊಂದು ಕಳೆದ ಅರು ತಿಂಗಳಿನಿಂದ ಹೊತ್ತಿ ಉರಿಯುತ್ತಿದೆ. ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಿಂಸೆಗೆ ರಾಜ್ಯದ ಜನತೆ ತತ್ತರಿಸಿ ಹೋಗಿದೆ. ಕೊಲೆ, ರಕ್ತಪಾತ ನಿತ್ಯವೂ ನಡೆಯುತ್ತಿದೆ. ಜೀವಂತವಾಗಿ ಮನುಷ್ಯರನ್ನು ಸುಟ್ಟುಹಾಕಲಾಗುತ್ತಿದೆ. ಮಣಿಪುರದ ನಡೆಯುತ್ತಿರುವ ಸ್ತ್ರೀಯರ ಮೇಲಿನ ಲೈಂಗಿಕ ದೌರ್ಜನ್ಯ, ಸಾಮೂಹಿಕ ಅತ್ಯಾಚಾರ ಇಡೀ ಮನುಕುಲವೇ ತಲೆತಗ್ಗಿಸುವಂತಿದೆ. ಇತ್ತೀಚೆಗಂತೂ ಅತ್ಯಾಚಾರ ನಡೆಸಿದ ನಂತರ ಸ್ತ್ರೀಯರನ್ನು ನಗ್ನವಾಗಿ ರಸ್ತೆಗಳಲ್ಲಿ ಪುರುಷರು ಎಳೆದೊಯ್ಯುತ್ತಿರುವ ದೃಶ್ಯಗಳು ವೈರಲ್ ಆಗಿ ಮಣಿಪುರದಲ್ಲಿ ನಡೆಯುತ್ತಿರುವುದು ಎಷ್ಟೊಂದು ಭೀಕರ, ಭಯಾನಕ ಎನ್ನುವುದು ಜಗತ್ತಿಗೆ ಮನವರಿಕೆಯಾಗುತ್ತಿದೆ.
ಮಣಿಪುರದಲ್ಲಿ ಇಷ್ಟೆಲ್ಲ ಹಿಂಸೆ, ದೌರ್ಜನ್ಯ, ಅತ್ಯಾಚಾರಗಳು ನಡೆಯುತ್ತಿದ್ದರೂ ಅಲ್ಲಿನ ರಾಜ್ಯ ಸರ್ಕಾರ ಯಾವುದೇ ರೀತಿಯಲ್ಲಿ ಈ ಕ್ರೌರ್ಯವನ್ನು ನಿಲ್ಲಿಸುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತಿರುವ ರಾಜ್ಯ ಸರ್ಕಾರ ಹಿಂಸೆ ನಡೆಸುತ್ತಿರುವವರಿಗೆ ಸಹಕರಿಸುತ್ತಿದೆ. ಸಂತ್ರಸ್ತರ ಅಳಲನ್ನು ಕೇಳುವವರೇ ಇಲ್ಲವಾಗಿದೆ. ಹಿಂಸೆ ನಡೆಸುತ್ತಿರುವವರ ವಿರುದ್ಧ ಯಾವುದೇ ಕಾನೂನು ಕ್ರಮಗಳು ಜರುಗುತ್ತಿಲ್ಲ. ಕಾನೂನಿನ ಆಡಳಿತ ಮಾಯವಾಗಿ ಹಿಂಸೆಯ, ಕ್ರೌರ್ಯದ ಆಡಳಿತ ನಡೆಯುತ್ತಿದೆ.
ಕೇಂದ್ರದಲ್ಲಿರುವ ಈಗಿನ ಸರ್ಕಾರ ಮಣಿಪುರದಲ್ಲಿ ನಡೆಯುತ್ತಿರುವ ಭೀಕರ ಕೋಮು ದೌರ್ಜನ್ಯದ ವಿರುದ್ಧ ಮಾತನಾಡುತ್ತಲೂ ಇಲ್ಲ, ನಿಯಂತ್ರಣಕ್ಕೂ ಮುಂದಾಗಿಲ್ಲ, ಅದಲಾಗಿ ತನ್ನ ಮೌನದ ಮೂಲಕ ಹಿಂಸೆಯನ್ನು, ದೌರ್ಜನ್ಯವನ್ನು ಬೆಂಬಲಿಸುವಂತೆ ಕಾಣುತ್ತಿದೆ. ಮಾಧ್ಯಮಗಳು ಬಹುತೇಕ ಮೌನವಾಗಿವೆ. ನಮ್ಮದೇ ದೇಶದ ಸಣ್ಣ ರಾಜ್ಯದಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಮಣಿಪುರಕ್ಕೂ ನಮಗೂ ಸಂಬಂಧ ಇಲ್ಲವೆನ್ನುವಂತೆ ಇಡೀ ವ್ಯವಸ್ಥೆ ಮೂಕಪ್ರೇಕ್ಷಕನಾಗಿದೆ. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸೆ, ದೌರ್ಜನ್ಯ, ಸಾಮೂಹಿಕ ಕೊಲೆ, ಅತ್ಯಾಚಾರಗಳನ್ನು ನಾವೆಲ್ಲರೂ ಖಂಡಿಸಲೇಬೇಕಾಗಿದೆ.
ಮಣಿಪುರದಲ್ಲಿ ಹಿಂಸೆಗೆ ತುತ್ತಾಗಿರುವ ಅಮಾಯಕರ ಪರವಾಗಿ ನಾವೆಲ್ಲರೂ ನಿಲ್ಲಲೇಬೇಕಾಗಿದೆ. ಇದು ಮಣಿಪುರದ ಸಂತ್ರಸ್ತರಿಗೆ ನಾವು ನಿಮ್ಮೊಂದಿಗಿದ್ದೇವೆ ಎಂದು ಹೇಳಲೇಬೇಕಾದ ಸಮಯ.
ಈ ನಿಟ್ಟಿನಲ್ಲಿ ಕುಂದಾಪುರದ ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ಸೋಮವಾರ, ಜುಲೈ 24ರ ಸಂಜೆ 6 ಗಂಟೆಗೆ ಪ್ರತಿಭಟನಾ ಸಭೆಯೊಂದನ್ನು ಆಯೋಜಿಸಿದ್ದೇವೆ. ಈ ಸಭೆಯಲ್ಲಿ ತಾವೆಲ್ಲರೂ ಇರಬೇಕು, ಮಣಿಪುರದ ಜನರ ಪರವಾಗಿ ನಾವಿದ್ದೇವೆ ಎನ್ನುವ ಸಂದೇಶವೊಂದು ಕುಂದಾಪುರದ ಶಾಂತಿಪ್ರಿಯ ಜನರಿಂದ ಮೂಡಿಬರಬೇಕು.