ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವ ಜನಾಂಗವನ್ನು ಒಳಗೊಳ್ಳುವಂತಹ ಬಜೆಟ್ ಮಂಡಿಸಿ ಐತಿಹಾಸಿಕ ದಾಖಲೆ ಬರೆದಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಮೊಹಮ್ಮದ್ ನಿಹಾಲ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, '14ನೇ ಬಾರಿ ಕರ್ನಾಟಕ ರಾಜ್ಯ ಬಜೆಟ್ ಮಂಡನೆ ಮಾಡಿರುವ ಸಿಎಂ ಸಿದ್ದರಾಮಯ್ಯ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಸರ್ವ ಜನಾಂಗದ ಅಭಿವೃದ್ಧಿ ಹಾಗೂ ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳಿಗೆ ಹಣ ಹೊಂದಿಸುವ ಜೊತೆಯಲ್ಲೇ ಅಭಿವೃದ್ಧಿ ಕಾರ್ಯಗಳಿಗೂ ಭರಪೂರ ಅನುದಾನ ನೀಡುವ ಕೆಲಸ ಮಾಡಿದ್ದಾರೆ' ಎಂದಿದ್ದಾರೆ.
ಮುಖ್ಯವಾಗಿ ಆಸ್ಪತ್ರೆಗಳ ಉನ್ನತೀಕರಣ, ಡಯಾಲಿಸಿಸ್ ವ್ಯವಸ್ಥೆಗೆ ಒತ್ತು, ಹಠಾತ್ ಸಾವು ತಡೆಗೆ ಅಪ್ಪು ಹೆಸರಲ್ಲಿ ಯಂತ್ರ ಅಳವಡಿಕೆ, ಯುವಕರಿಗೆ ಬೆನ್ನೆಲುಭಾಗಿ 'ಯುವನಿಧಿ' ಜಾರಿ, ಹಸಿವು ಮುಕ್ತ ರಾಜ್ಯಕ್ಕಾಗಿ 'ಅನ್ನಭಾಗ್ಯ' ಜಾರಿಗೊಳಿಸುತ್ತಿದೆ. ಕೃಷಿ ಉತ್ಪನ್ನಗಳ ಸಂಸ್ಕರಣೆ, ರೈತರ ಸಾಲ ಮಿತಿ ಏರಿಕೆ ಮಾಡಿರುವುದು ಶ್ಲಾಘನೀಯ ಎಂದಿದ್ದಾರೆ.
ಕಾಂಗ್ರೆಸ್‌ನ 5 ಗ್ಯಾರಂಟಿಗಳಿಂದ 1.3 ಕೋಟಿ ಜನರಿಗೆ ಉಪಯೋಗವಾಗಲಿದೆ. ಎಸ್‌ಸಿ, ಎಸ್‌ಟಿ ವರ್ಗದ ವಿದ್ಯಾರ್ಥಿಗಳು, ಬಿಸಿಯೂಟ ಯೋಜನೆ ಮುಂದುವರಿಕೆ, ಕೃಷಿಗೆ ಪೂರಕವಾದ ಯೋಜನೆಗಳಿಗೆ ವೇಗ, ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಕರ್ಯ, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 172 ಯೋಜನೆ ರೂಪಿಸಿರುವುದು ಐತಿಹಾಸಿಕ ನಿರ್ಧಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅನ್ನಭಾಗ್ಯ ಯೋಜನೆಯಿಂದಾಗಿ ಸುಮಾರು 4.42 ಕೋಟಿ ಬಿಪಿಎಲ್ ಫಲಾನುಭವಿಗಳು ಇದರ ಲಾಭ ಪಡೆಯಲಿದ್ದಾರೆ. ಕೇಂದ್ರ ಸರ್ಕಾರ ಗುರುತಿಸದ ಪಡಿತರಿಗೂ ಸರ್ಕಾರ ತಲಾ 10 ಕೇಜಿ ಅಕ್ಕಿ ನೀಡಲಿದೆ. ರಾಜ್ಯದ GSDP ಬೆಳವಣಿಗೆ ದರವನ್ನು ಶೇ. 13 ರಿಂದ ಶೇ.17ಕ್ಕೆ ಹೆಚ್ಚಿಸುವ ಮೂಲಕ ರಾಜ್ಯವನ್ನು 1 ಟ್ರಿಲಿಯನ್ ಡಾಲರ್ ಎಕಾನಮಿಯಾಗಿ ಏರಿಸುವ ಗುರಿ ಕಾಂಗ್ರೆಸ್ ಸರ್ಕಾರ ಹೊಂದಿದೆ. ಸಹಕಾರ ಮತ್ತು ರೇಷ್ಮೆ ವಲಯಕ್ಕೆ ಬಂದರೆ, 30 ಲಕ್ಷಕ್ಕೂ ಹೆಚ್ಚು ರೈತರಿಗೆ 25,000 ಕೋಟಿ ರೂ. ಸಾಲ ವಿತರಣೆ ಗುರಿ ಇಟ್ಟುಕೊಳ್ಳಲಾಗಿದೆ. ರೈತರಿಗೆ ನೀಡಲಾಗುವ ಮಧ್ಯಮ ಮತ್ತು ದೀರ್ಘಾವಧಿ ಸಾಲ ಮೀತಿ ಹೆಚ್ಚಿಸಲಾಗಿದೆ ಎಂದಿದ್ದಾರೆ.
ಹಾಗೆಯೇ.. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಹೀಗೆ ಸರ್ವ ಜನಾಂಗದ ಅಭಿವೃದ್ದಿಗಾಗಿ ಹಲವು ಮಹತ್ತರವಾದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ನಿರ್ಧರಿಸುವುದು ಶ್ಲಾಘನೀಯ ಎಂದು ಮೊಹಮ್ಮದ್ ನಿಹಾಲ್ ತಿಳಿಸಿದ್ದಾರೆ.