Advertisement

ಸೆಪ್ಟೆಂಬರ್ -14: ಇಂದು ಬ್ರಾಹ್ಮಣಶಾಹಿಯ ಭಾಷಾ ಆಕ್ರಮಣ ದಿವಸ್!

Advertisement

ಸೆಪ್ಟೆಂಬರ್ -14: ಹಿಂದಿ ದಿವಸ್ ಅಲ್ಲ-
ಬ್ರಾಹ್ಮಣಶಾಹಿಯ ಭಾಷಾ ಆಕ್ರಮಣ ದಿವಸ್!

ಬರಹ: ಶಿವಸುಂದರ್ (ಲೇಖಕರು ಹಿರಿಯ ಅಂಕಣಕಾರರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)

ಇಂದು ಹಿಂದಿ ದಿವಸವಂತೆ!

ಹಿಂದಿಯ ಗಂಧ ಗಾಳಿ ಗೊತ್ತಿಲ್ಲದ ದೇಶದ ಬಹುಪಾಲು ಜನ ಕಡ್ಡಾಯವಾಗಿ ಹಿಂದಿಯನ್ನು ಮೆರೆಸಬೇಕೆಂದು ಮೋದಿ ಸರ್ಕಾರ ಫ಼ರ್ಮಾನು ಹೊರಡಿಸಿದೆ. ಅದರ ಮೂಲಕ ಮಾತ್ರ ದೇಶದ ಏಕತೆ ಮತ್ತು ಘನತೆ ಬೆಳೆಯುತ್ತದೆ ಎಂಬುದು ಅವರ ಅಲ್ಪ ತಿಳವಳಿಕೆ.

ಹೀಗಾಗಿ ಹಿಂದಿ ಹೇರಿಕೆಯನ್ನು ವಿರೋಧಿಸುವುದು ಕೂಡಾ ಅವರ ಪ್ರಕಾರ ದೇಶದ್ರೋಹ.

ಇಲ್ಲಿ ಹಿಂದಿ ಎಂದರೆ ಉತ್ತರ ಭಾರತದಲ್ಲಿ ಜನಸಾಮಾನ್ಯರು ಬಳಸುತ್ತಿದ್ದ ಖಡಿಬೋಲಿಯೂ ಅಲ್ಲ. ಹಿಂದೂಸ್ಥಾನಿಯೂ ಅಲ್ಲ.

ಅದು ದೇವನಾಗರಿ ಎಂಬ ಸಂಸ್ಕೃತ ಲಿಪಿಯನ್ನು ಬಳಸುವ ಹಾಗೂ ತನ್ನ ಭಾಷಾ ಸಂಪತ್ತಿಗೆ ಇಡಿಯಾಗಿ ಸಂಸ್ಕೃತವನ್ನೇ ನೆಚ್ಚಿಕೊಂಡಿರುವ ಸಂಸ್ಕೃತೀಕರಣಗೊಂಡ, ಬ್ರಾಹ್ಮಣೀಕರಣಗೊಂಡ ಹಿಂದಿ.

ಇಂಥಾ ಸಂಸ್ಕೃತಗೊಂಡ ಹಿಂದಿಯನ್ನು ದೇಶದ ಭಾಷಾ ಸಂಸ್ಕೃತಿ ಎಂದು ಅಧಿಕೃತಗೊಳಿಸುವುದರ ಹಿಂದೆ ಉಳಿದೆಲ್ಲಾ ಭಾಷೆಗಳನ್ನು, ಆ ಭಾಷಿಕರ ಬದುಕನ್ನು ಮೂಲೆಗುಂಪು ಮಾಡುವ ದೊಡ್ಡ ಸಾಂಸ್ಕೃತಿಕ ರಾಜಕಾರಣ ಸಂವಿಧಾನ ಸಭೆಯಲ್ಲೇ ಪ್ರಾರಂಭವಾಗಿ, ಕಾಂಗ್ರೆಸ್ ರಾಜ್ಯಭಾರದ ಕಾಲದಲ್ಲಿ ಶಾಸನಬದ್ಧವಾಗಿದ್ದರೂ, ಅದು ಇನ್ನಷ್ಟು ಬ್ರಹ್ಮಣೀಕರಣಗೊಂಡು ಆಕ್ರಮಣಶೀಲವಾಗಿದ್ದು ಮಾತ್ರ ಹಿಂದೂರಾಷ್ಟ್ರವಾದದ ಹೆಸರಿನಲ್ಲಿ ಸಂಘಿ ಫ಼್ಯಾಸಿಸ್ಟರು ಅಧಿಕಾರಕ್ಕೆ ಬಂದ ಮೇಲೆ.

ಅವರ ಪಿತಾಮಹನಾದ ಸಾವರ್ಕರ್ 1923 ರಲ್ಲಿ ಬರೆದ, ಆರೆಸ್ಸೆಸ್ ನ ಬೈಬಲ್ ಆದ "Essentials Of Hindutva" ಪುಸ್ತಕದಲ್ಲಿ ಸಂಸ್ಕೃತವನ್ನು ಭಾರತದ ಸಂಸ್ಕೃತಿಯ ಏಕಮಾತ್ರ ವಾಹಕ ಎಂದು ಕರೆದಿದ್ದರು. ಹಿಂದೂಗಳು ಭಾರತದ ಏಕಮಾತ್ರ ಜನಾಂಗ, ಬ್ರಾಹ್ಮಣರು ಸರ್ವ ಶ್ರೇಷ್ಠ ಆರ್ಯ ಪೀಳಿಗೆ, ಸಂಸ್ಕೃತ ಸರ್ವ ಶ್ರೇಷ್ಠ ಸಂಸ್ಕಾರಿ ಭಾಷೆ.. ಇದು ಸಾವರ್ಕರ ಅವರ ಹಿಂದೂತ್ವದ ಸಾರ.

ಹೀಗಾಗಿ ಹಿಂದೂಗಳ ಒಳಗೆ ಬ್ರಾಹ್ಮಣರಲ್ಲದವರು, ಭಾಷೆಗಳಲ್ಲಿ ಸಂಸ್ಕೃತೇತರ ಭಾಷೆಗಳು ಕೆಳದರ್ಜೆಯವು ಎಂಬುದು ಈ ಹಿಂದೂತ್ವ ಸಿದ್ಧಂತದ ತಿರುಳು. ಆದರೆ ಈಗಿಂದೀಗಲೇ ಎಲ್ಲರೂ ಸಂಸ್ಕೃತ ಕಲಿಯುವುದು ಕಷ್ಟವಾದ್ದರಿಂದ ಸಂಸ್ಕೃತ ಭೂಯಿಷ್ಟ ಹಿಂದಿಯನ್ನು ಕಡ್ಡಾಯವಾಗಿ ಕಲಿಸುವುದು ಭಾರತವನ್ನು ಬ್ರಾಹ್ಮಣೀಕರಿಸುವ ಮತ್ತೊಂದು ಹುನ್ನಾರ.

ಮೊನ್ನೆ NEP ಅನುಷ್ಠಾನದ ಭಾಗವಾಗಿ ಹೊಸ ಪಠ್ಯಕ್ರಮ ರೂಪಿಸಲು ಕರ್ನಾಟಕ ಸರ್ಕಾರ ಮಂಡಿಸಿರುವ 26 ಪೊಸಿಷನ್ ಪೇಪರ್ ಗಳಲ್ಲೂ ಸಹ ಭಾಷಾ ಕಲಿಕೆಯಲ್ಲಿ ಅಂಗನವಾಡಿ ಹಂತದಿಂದಲೇ ಮಕ್ಕಳಿಗೆ ಆಡು ಬಳಕೆಯಲ್ಲಿ ಸಂಸ್ಕೃತ ಪದಗಳನ್ನು ಪರಿಚಯಿಸಬೇಕೆಂದು ಶಿಫ಼ಾರಸ್ಸು ಮಾಡಲಾಗಿದೆ.

ಹೀಗಾಗಿ ಈ ಸಂಸ್ಕೃತಗೊಂಡ ಹಿಂದಿ ಹೇರಿಕೆ, ಭಾರತವನ್ನು ಬ್ರಾಹ್ಮಣಶಾಹಿ ಅಧಿಪತ್ಯಕ್ಕೆ ಮತ್ತೊಮ್ಮೆ ಒಳಪಡಿಸುವ ಆರೆಸ್ಸೆಸ್ -ಬಿಜೆಪಿಗಳ ರಾಜಕೀಯ- ಸಾಮಾಜಿಕ- ಸಾಂಸ್ಕೃತಿಕ ನೀತಿಗಳ ಭಾಗವೇ ಆಗಿದೆ.
ಅದರ ಭಾಗವಾಗಿಯೆ ಇತ್ತೀಚೆಗೆ ಗೃಹಮಂತ್ರಿ ಶಾ ಅವರು, ವಿವಿಧ ರಾಜ್ಯಗಳು ತಮ್ಮ ನಡುವೆ ಸಂವಹನ ಮಾಡುವಾಗ ಇಂಗ್ಲೀಷ್ ಬದಲು ಸಂಸ್ಕೃತಮಯವಾಗಿರುವ ನಾಗರಿ ಲಿಪಿಯ ಹಿಂದಿಯನ್ನು ಬಳಸಬೇಕೆಂದು ಆದೇಶ ಹೊರಡಿಸಿದ್ದರು.

ಈ ಹಿಂದೂ ರಾಷ್ಟ್ರದಲ್ಲಿ ಇತರ ಧರ್ಮಗಳು ಮತ್ತು ಧರ್ಮೀಯರು ಮತ್ತು ಇತರ ಭಾಷೆಗಳು ಮತ್ತು ಭಾಷಿಕರು ಹಿಂದೂ ಧರ್ಮಕ್ಕೆ ಮತ್ತು ಹಿಂದೀ ಭಾಷೆಗೆ ಅಧೀನವಾಗಿ ಬದುಕಬೇಕು ಅಥವಾ ಅದರೊಡನೆ ಲೀನವಾಗಿಬಿಡಬೇಕು. ಇದು ಅವರ ಭವಿಷ್ಯದ ಯೋಜನೆ.

ಆದ್ದರಿಂದಲೇ ಸ್ವಾತಂತ್ರ್ಯ ಬಂದಾಗಿನಿಂದಲೂ ಹಿಂದಿ ಪ್ರಚಾರ ಇಲಾಖೆಯನ್ನು ಭಾಷೆ ಮತ್ತು ಸಂಸ್ಕೃತಿ ಇಲಾಖೆಯ ಭಾಗವಾಗಿಡದೆ ಗೃಹ ಇಲಾಖೆಯ ಭಾಗವನ್ನಾಗಿ ಮಾಡಲಾಗಿದೆ. 1965ರಲ್ಲೊಮ್ಮೆ ಕೇಂದ್ರದ ಆಗಿನ ಆಡಳಿತ ಸರ್ಕಾರ ಹಿಂದಿಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಕಡ್ಡಾಯಗೊಳಿಸಲು ಹೋಗಿ ಹೀನಾಯವಾಗಿ ರಾಜಕೀಯ ಸೋಲನ್ನು ಅನುಭವಿಸಿತ್ತು. ಆ ನಂತರ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರಗಳು ಹಿಂದಿಯನ್ನು ಅಷ್ಟು ಬಹಿರಂಗವಾಗಿ ಹೇರುವ ಧೈರ್ಯ ಮಾಡಿರಲಿಲ್ಲ.

ಆದರೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಿಂದೂತ್ವದ ಅಜೆಂಡಾದ ಮೇಲೆ ಅಧಿಕಾರಕ್ಕೆ ಬಂದ ಮೇಲೆ ತನ್ನ ಇತರ ಎಲ್ಲಾ ಹಿಂದೂ ಹಿಟ್ಲರ್ ಶಾಹಿ ಅಜೆಂಡಾಗಳ ಜೊತೆಗೆ ಬಹಿರಂಗ ಹಿಂದಿ ಹೇರಿಕೆಯ ಕಾರ್ಯಕ್ರಮಗಳನ್ನು ತೀವ್ರವಾಗಿ ಪ್ರಾರಂಭಿಸಿದೆ. ಆದ್ದರಿಂದ ಮೇಲ್ನೋಟಕ್ಕೆ ಅನ್ಯ ದೇಶೀಯ ಇಂಗ್ಲೀಷ್ ಬದಲು ಸ್ವದೇಶೀಯ ಹಿಂದಿ ಎಂದು ಹಿಂದಿ ಹೇರಿಕೆಯನ್ನು ಮಾಡುತ್ತಿದೆ.

ಹಾಗೆ ನೋಡಿದರೆ ಹಿಂದಿಯೇತರ ಭಾಷಿಕರಿಗೆ ಇಂಗ್ಲೀಷ್ ಎಷ್ಟು ಅನ್ಯ ದೇಶೀಯವೋ ಅಷ್ಟೆ ಮಟ್ಟಿಗೆ ಹಿಂದಿಯೂ ಅನ್ಯ ದೇಶೀಯವೇ. ಉದಾಹರಣೆಗೆ ಭಾರತೀಯ ಭಾಷಾ ಲೋಕದಲ್ಲಿ ದ್ರಾವಿಡ ಭಾಷಾ ಕುಟುಂಬಗಳ ಲೋಕ ಸಂಸ್ಕೃತ ಭಾಷಾ ಲೋಕಕ್ಕಿಂತ ಸಂಪೂರ್ಣ ಅನ್ಯವೂ ಮತ್ತು ಪರಕೀಯವೂ ಆಗಿದೆ. ದ್ರಾವಿಡ ಭಾಷಾ ಲೋಕದ ಮೇಲೆ ಮೇಲೆ ಹಿಂದಿ ಹೇರುವುದು ಸಂಸ್ಕ್ರತ ಹಿಟ್ಲರ್ ಶಾಹಿಯ ಭಾಷಿಕ ವಸಹಾತೀಕರಣ ಯೋಜನೆಯ ಭಾಗವಾಗಿದೆ. ಆದ್ದರಿಂದಲೇ ಹಿಂದಿಯ ಯಾಜಮಾನಿಕೆಯನ್ನು ನ್ಯೂ ನಾರ್ಮಲ್ ಮಾಡುವ ಯಾವ ಪ್ರಯತ್ನಗಳನ್ನು ಈ ಭಾರತೀಯ ನಾಜಿಗಳು ಬಿಟ್ಟುಕೊಡುತ್ತಿಲ್ಲ.

ಹಿಂದಿ ದಿವಸ್-ಹಿಂದೂತ್ವ ದಿವಸ್?

ಇದಕ್ಕೆ ಮುಂಚೆ ತನ್ನ ಸರ್ವಾಧಿಕಾರಿ ಧೋರಣೆಯ ಭಾಗವಾಗಿ ಗೃಹಮಂತ್ರಿ ಅಮಿತ್ ಶಾ ಅವರು ಒಂದು ದೇಶಕ್ಕೆ ಒಂದು ಭಾಷೆ ಇರಬೇಕು ಮತ್ತು ಅದು ಹಿಂದಿಯೇ ಆಗಬೇಕು ಎಂದು ಕೂಡಾ ಪ್ರತಿಪಾದಿಸಿದ್ದರು. 2019ರ ಸೆಪ್ಟೆಂಬರ್-14ರ ಹಿಂದಿ ದಿವಸ್ ಅಂದು ದೇಶವನ್ನುದ್ದೇಶಿಸಿ ಮಾಡಿದ್ದ ಟ್ವೀಟ್ ಒಂದರಲ್ಲಿ:

"ವಿವಿಧ ಭಾಷೆಗಳುಳ್ಳ ಭಾರತವು ವಿಶ್ವಮಾನ್ಯ ಸ್ಥಾನ ಪಡೆಯಬೇಕಾದರೆ ಒಂದೇ ಭಾಷೆಯ ಅಗತ್ಯವಿದೆ. ಈ ದೇಶದಲ್ಲಿ ಅತಿ ಹೆಚ್ಚಿನ ಜನ ಹಿಂದಿ ಭಾಷೆಯನ್ನು ಮಾತನಾಡುವುದರಿಂದ ಮತ್ತು ಅದಕ್ಕೆ ದೇಶವನ್ನು ಒಂದುಗೂಡಿಸುವ ಶಕ್ತಿ ಇರುವುದರಿಂದ ದೇಶದ ಜನರು ತಮ್ಮ ಮಾತೃಭಾಷೆಯ ಜೊತೆಜೊತೆಗೆ ಹಿಂದಿಯನ್ನು ಬಳಸಬೇಕು. ಹೀಗೆ ಮಾಡಿದಲ್ಲಿ 2022ರ ಹೊತ್ತಿಗೆ ಹಿಂದಿಗೆ ಜಗತ್ತಿನಲ್ಲಿ ಚಿರಸ್ಥಾಯಿಯಾದ ಸ್ಥಾನ ದಕ್ಕುತ್ತದೆ" ಎಂದು ಪ್ರತಿಪಾದಿಸಿದ್ದರು.

ಆಗಲೂ ಈ ಹಿಂದಿ ಸರ್ವಾಧಿಕಾರಿ ಧೋರಣೆಯ ವಿರುದ್ಧ ದೇಶಾದ್ಯಂತ ಪ್ರತಿರೋಧ ಭುಗಿಲೆದ್ದಿತ್ತು. ಅದರಿಂದ ಪಾಠ ಕಲಿತಿರುವ ಮೋದಿ ಪ್ರಭುತ್ವವು ಹಿಂದಿಯ ಸಾಂಸ್ಕೃತಿಕ ಯಾಜಮಾನ್ಯವನ್ನು ಸ್ಥಾಪಿಸುವ ಮೂಲಕ ಹಿಂದಿಯನ್ನು ಹೇರುವ ಪರೋಕ್ಷ ತಂತ್ರಗಳನ್ನು ಅನುಸರಿಸುತ್ತಿದೆ.

ಹಾಗೆ ನೋಡಿದರೆ, ಈ ನಮ್ಮ ಬಹುಭಾಷಿಕ ಭಾರತದ ಮೇಲೆ ಹಿಂದಿಯನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹೇರುವ ಹುನ್ನಾರಗಳನ್ನು ಬಿಜೆಪಿ ಸರ್ಕಾರ ನಿರಂತರವಾಗಿ ಮಾಡಿಕೊಂಡೇ ಬರುತ್ತಿದೆ. ಎರಡನೇ ಬಾರಿ ಅಧಿಕಾರಕ್ಕೆ ಏರಿದ ತರುಣದಲ್ಲೇ ಅದು ಪರಿಚಯಿಸಿದ ನವ ಶಿಕ್ಷಣ ನೀತಿಯ ಕರಡಿನಲ್ಲಿ ಆ ಪ್ರಯತ್ನವನ್ನು ನಡೆಸಿತ್ತು. ಆ ಕರಡಿನಲ್ಲಿ ಅದು ಹಿಂದಿಯನ್ನು ಹಿಂದಿಯೇತರ ರಾಜ್ಯದ ಮಕ್ಕಳು ಆರನೇ ತರಗತಿಯಿಂದ ಕಡ್ಡಾಯವಾಗಿ ಕಲಿಯಬೇಕೆಂಬ ಪ್ರಸ್ತಾಪವನ್ನು ಮಾಡಿತ್ತು. ಆದರೆ ಅದರ ವಿರುದ್ಧ ದಕ್ಷಿಣ ಹಾಗೂ ಪೂರ್ವ ಭಾರತದಲ್ಲಿ ಭುಗಿಲೆದ್ದ ಬಂಡಾಯದ ಕಾರಣದಿಂದಾಗಿ ಆ ಪ್ರಸ್ತಾಪವನ್ನು ಈಗ ಕರಡಿನಿಂದ ಹಿಂತೆಗೆದುಕೊಂಡಿತು. ಆದರೆ ಅಂತಿಮಗೊಂಡ ನೀತಿಯಲ್ಲಿ ತ್ರಿಭಾಷಾ ಸೂತ್ರದ ಮೂಲಕ ಹಿಂದಿಯನ್ನು ದಕ್ಷಿಣ ಹಾಗೂ ಪೂರ್ವ ಭಾರತದವರ ಮೇಲೆ ಹೇರುವುದರ ಜೊತೆಗೆ ಸಂಸ್ಕೃತದ ಯಾಜಮಾನಿಕೆಯನ್ನು ದೇಶೀಯ ಭಾಷೆಗಳ ಮೇಲೆ ಹೇರಿದೆ. ಹಾಗೂ ಸಂಸ್ಕೃತವನ್ನು ಪ್ರಾಥಮಿಕ ಮಟ್ಟದಿಂದ ಮತ್ತು ಭಾರತೀಯ ಮೌಲ್ಯಗಳೆಂಬ ಹೆಸರಿನಲ್ಲಿ ಬ್ರಾಹ್ಮಣ್ಯದ ವರ್ಣಾಶ್ರಮ ಮೌಲ್ಯಗಳನ್ನು ಕಲಿಸುವ ಪಠ್ಯಗಳನ್ನು ಮತ್ತು ಕಲಿಕಾ ಯೋಜನೆಗಳನ್ನೂ ಹೊಂದಿದೆ. ಮುಂದಿನ ವರ್ಷದಿಂದ ಕರ್ನಾಟಕದಲ್ಲಿ ಬ್ರಾಹ್ಮಣೀಯ ಮೌಲ್ಯಗಳನ್ನು ಬಿತ್ತುವ ಭಗವದ್ಗೀತೆಯನ್ನು ಕಲಿಕೆಯ ಭಾಗವನ್ನಾಗಿ ಮಾಡುತ್ತಿರುವ ಯೋಜನೆಯೂ ಭಾರತವನ್ನು ಹಿಂದೂ- ಅರ್ಥಾತ್ ಬ್ರಾಹ್ಮಣ್ಯ ಪಾರಮ್ಯದ ರಾಷ್ಟ್ರವನ್ನಾಗಿ ಮಾಡುವ ಹುನ್ನಾರವೇ ಆಗಿದೆ.

ಅದೇರೀತಿ 2018ರಲ್ಲಿ ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಲ್ಲಿ ಹಿಂದಿಯನ್ನೂ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಲು 400 ಕೋಟಿ ರೂ.ಗಳ ಅಭಿಯಾನವೊಂದನ್ನು ಬಿಜೆಪಿ ಸರ್ಕಾರ ಪ್ರಾರಂಭಿಸಿತ್ತು. ಜಗತ್ತಿನಲ್ಲಿ ಭಾರತವು ಎರಡನೇ ಅತಿದೊಡ್ಡ ಜನಸಂಖ್ಯೆಯುಳ್ಳ ದೇಶವಾಗಿದ್ದು, ಅವರೆಲ್ಲರ ಭಾಷೆ ಹಿಂದಿಯೇ ಆಗಿದೆಯೆಂದು ಬಿಜೆಪಿ ಇಡೀ ಜಗತ್ತಿನ ಎದುರು ಪ್ರತಿಪಾದಿಸಲು ಮುಂದಾಗಿತ್ತು. ಆದರೆ ಆಗಲು ದೊಡ್ಡ ಪ್ರತಿರೋಧ ಎದುರಾಗಿದ್ದರಿಂದ ಆ ಪ್ರಯತ್ನದಿಂದ ಹಿಂದೆ ತಾತ್ಕಾಲಿಕವಾಗಿ ಹಿಂದೆ ಸರಿದಿದೆ.
ಬಹುಭಾಷಿಕ ಭಾರತದ ಮೇಲೆ ಆಡಳಿತಾತ್ಮಕವಾಗಿ ಹಿಂದಿ ಹೇರಲು ಸಾಂವಿಧಾನಾತ್ಮಕ ತೊಡಕಿರುವುದರಿಂದ, ಆರೆಸ್ಸೆಸ್- ಬಿಜೆಪಿ ಸರ್ಕಾರ ಹುಸಿ ರಾಷ್ಟ್ರೀಯತೆಯ ಪ್ಯಾಕೇಜಿನಲ್ಲಿ ಹಿಂದಿಯನ್ನು ಹೇರುತ್ತಿದೆ. ಅದಕ್ಕಾಗಿ ಅದು ಹಲವಾರು ಸುಳ್ಳುಗಳನ್ನು ಹೇಳುತ್ತಿದೆ:

ಅ) ಹಿಂದಿಯು ಇತರ ದೇಶೀಯ ಭಾಷೆಗಳಂತೆ ಒಂದು ಭಾಷೆ ಮಾತ್ರವಲ್ಲ. ಹಿಂದಿ ರಾಷ್ಟ್ರ ಭಾಷೆ.

ಆ) ಹಿಂದಿ ದೇಶದಲ್ಲಿ ಅತಿ ಹೆಚ್ಚು ಜನರು ಆಡುವ ಭಾಷೆ.

ಇ) ಒಂದು ದೇಶಕ್ಕೆ ಒಂದೇ ಭಾಷೆ ಇದ್ದರೆ ವಿಶ್ವಮಾನ್ಯವಾಗಬಹುದು..ಇತ್ಯಾದಿ.

ಇದರ ಜೊತೆಗೆ ಹಿಂದಿಯನ್ನು ಎರಡನೇ ಭಾಷೆಯಾಗಿ ಕಲಿಯಬೇಕೆಂದು ಹೇಳುತ್ತಿದೆ. ಆದರೆ ಇವೆಲ್ಲವೂ ಹಸಿಸುಳ್ಳು ಮತ್ತು ಅರ್ಧಸತ್ಯಗಳಿಂದ ಕೂಡಿದ ಪ್ರಚಾರವಾಗಿದೆ. ಹಾಗೂ ಅವೈಜ್ಞಾನಿಕ, ಅಪ್ರಜಾತಾಂತ್ರಿಕ ಮತ್ತು ವಿದ್ಯಾರ್ಥಿ-ಶಿಕ್ಷಣ ವಿರೋಧಿ ಪ್ರಸ್ತಾಪಗಳೂ ಆಗಿವೆ.

ಹಿಂದಿ ರಾಷ್ಟ್ರಭಾಷೆಯಲ್ಲ:
ಮೊದಲನೆಯದಾಗಿ ನಮ್ಮ ದೇಶದ ಸಂವಿಧಾನದಲ್ಲಿ ರಾಷ್ಟ್ರಭಾಷೆಯೆಂಬ ಪರಿಕಲ್ಪನೆಯೇ ಇಲ್ಲ. ಏಕೆಂದರೆ ಅಖಂಡ ಭಾರತದ ವಿಭಿನ್ನ ಜನಜೀವನದಲ್ಲಿ ಹಾಗೂ ನಾಗರೀಕತೆಯಲ್ಲಿ ಹಲವು ಸಾಮ್ಯತೆಗಳಿರುವುದು ನಿಜ. ಆದರೆ ಒಂದು ಆಧುನಿಕ ಅರ್ಥದಲ್ಲಿ ಭಾರತವು ಎಂದಿಗೂ ಒಂದು ರಾಷ್ಟ್ರೀಯತೆಯೂ ಆಗಿರಲಿಲ್ಲ. ರಾಷ್ಟ್ರವೂ ಆಗಿರಲಿಲ್ಲ. ಆದ್ದರಿಂದಲೇ ಇಡೀ ಭಾರತಕ್ಕೆ ಒಂದು ಎಂಬ ಯಾವ ರಾಷ್ಟ್ರಭಾಷೆಯೂ ವಿಕಸಿತಗೊಳ್ಳಲಿಲ್ಲ. ಹಾಗೆ ನೋಡಿದರೆ ಭಾರತ ಎಂಬ ಈ ಉಪಖಂಡದಲ್ಲಿ ಕನ್ನಡ, ತಮಿಳು, ಬಂಗಾಳಿ, ತೆಲುಗು, ಮರಾಠಿಯಂಥ ಭಾಷೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆಯೇ ಹೊರತು ಹಿಂದಿಗಲ್ಲ. ವಾಸ್ತವವಾಗಿ ಈಗ ನಾವು ಬಳಸುತ್ತಿರುವ ದೇವನಾಗರಿ ಲಿಪಿಯ ಮತ್ತು ಸಂಸ್ಕೃತವನ್ನು ತಾಯಿಯಾಗುಳ್ಳ ಹಿಂದಿಗೆ ಇರುವುದು ಕೇವಲ 120 ವರ್ಷಗಳ ಇತಿಹಾಸ ಮಾತ್ರ. ಹಾಗೆಯೇ ತಮಿಳು, ತೆಲುಗು, ಬಂಗಾಳಿ ಭಾಷೆಯಾಧಾರಿತ ರಾಷ್ಟ್ರೀಯತೆಗಳು ವಿಕಸನಗೊಂಡು ನೂರಾರು ವರ್ಷಗಳಾಗಿವೆ. ಆದರೆ ಭಾರತ ಎಂಬ ರಾಷ್ಟ್ರದ ಪರಿಕಲ್ಪನೆ ಉಗಮಗೊಂಡಿದ್ದೇ ಬ್ರಿಟಿಷ್ ವಿರೋಧಿ ಹೋರಾಟದ ಪ್ರಕ್ರಿಯೆಯಲ್ಲಿ.. ಅಂದರೆ ಕೇವಲ 200 ವರ್ಷಗಳಿಂದೀಚೆಗೆ.

ಹೀಗಾಗಿ ಕರ್ನಾಟಕವು ಭಾರತ ಜನನಿಯ ತನುಜಾತೆಯಲ್ಲ.

ಬದಲಿಗೆ ಭಾರತವೇ ಕರ್ನಾಟಕವನ್ನೂ ಒಳಗೊಂಡಂತೆ ಈ ಉಪಖಂಡದ ಹಲವಾರು ರಾಷ್ಟ್ರೀಯತೆಗಳು ಒಟ್ಟುಗೂಡಿ ಜನ್ಮವಿತ್ತ ರಾಷ್ಟ್ರವಾಗಿದೆ.

ದೇವನಾಗರಿ ಹಿಂದಿ-ಕೋಮುವಾದದ ತನುಜಾತೆ!

ಇಂದು ನಮ್ಮ ಸಂವಿಧಾನದಲ್ಲಿ ಬಳಸುತ್ತಿರುವ ಹಿಂದಿ ಭಾಷೆಯ ಹುಟ್ಟೂ ಸಹ ಭಾರತವನ್ನು ಆವರಿಸಿಕೊಂಡ ಕೋಮುವಾದಿ ರಾಜಕಾರಣದ ಫಲಿತಾಂಶವೇ ಆಗಿದೆ. ಹಿಂದಿಯ ಮೂಲ ಆಗಿನ ಮೊಘಲ್ ಸಂಸ್ಥಾನದ ರಾಜಧಾನಿಯಾಗಿದ್ದ ದೆಹಲಿಯಲ್ಲಿ ಬೀಡುಬಿಟ್ಟಿದ ಸೈನಿಕರು ಮತ್ತು ಜನಸಾಮಾನ್ಯರು ಮಾತನಾಡುತ್ತಿದ್ದ ಖರಿಬೋಲಿ ಅಥವಾ ಹಿಂದೂಸ್ಥಾನಿಯಾಗಿದೆ. ಖಡಿಬೋಲಿ ಅಂದರೆ ಕಟ್ಟರ್ ಭಾಷೆ ಎಂದರ್ಥ. ಇದು ಒಂದು ರೀತಿಯಲ್ಲಿ ಪರ್ಷಿಯನ್ ಹಾಗೂ ಸ್ಥಳೀಯ ಭಾಷೆಗಳ ಮಿಶ್ರಣವೇ ಆಗಿತ್ತು. ಆದರೆ ದೇಶದ ಕೋಮುವಾದೀ ರಾಜಕಾರಣದ ರಾಜಕೀಯ ಪ್ರಭಾವ ಹೆಚ್ಚಾಗುತ್ತಿದ್ದಂತೆ ಖರಿಬೋಲಿಯ ಪರ್ಷಿಯನೀಕರಣ ಹೆಚ್ಚಾಗಿ ಉರ್ದು ಭಾಷೆ ಹುಟ್ಟಿಕೊಂಡು ಪಾಕಿಸ್ತಾನದ ಆಡಳಿತ ಭಾಷೆಯಾಯಿತು. ಹಾಗೆಯೇ ಖರಿಬೋಲಿಯ ಸಂಸ್ಕೃತೀಕರಣ- ದೇವನಾಗರೀಕರಣದ ಮೂಲಕ ಹಿಂದಿ ಹುಟ್ಟುಕೊಂಡಿತು. ಹಾಗೆ ನೋಡಿದರೆ ಸ್ವಾತಂತ್ರ್ಯಾನಂತರದ ಇತ್ತೀಚಿನ ದಶಕಗಳವರೆಗೂ ಹಿಂದೀಯ ಖ್ಯಾತ ಬರಹಗಾರರೆಲ್ಲಾ ಉರ್ದು ವಿದ್ವಾಂಸರೂ ಅಗಿರುತ್ತಿದ್ದರು. ಆದರೆ ಭಾರತದ ಕೋಮುವಾದಿ ರಾಜಕಾರಣ ಭಾಷಿಕ ವಿಶ್ವಕ್ಕೂ ಹರಡಿ ಭಾರತದ ಗುರುತಿಗೆ ಒಂದು ಭಾಷೆಯ ಅಗತ್ಯವಿದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿತು.

ಈ ಐತಿಹಾಸಿಕ ಕಾರಣದಿಂದಾಗಿಯೇ ಸಂವಿಧಾನ ರಚನಾ ಸಭೆಯಲ್ಲೂ ಈ ಪ್ರಶ್ನೆ ಗಂಭೀರವಾಗಿ ಚರ್ಚೆಯಾಯಿತು. ಇದರ ಬಗ್ಗೆ ಅಧ್ಯಯನ ಮಾಡಿ ಸಲಹೆ ಕೊಡಲು ಗೋಪಾಲಸ್ವಾಮಿ ಅಯ್ಯಂಗಾರ್ ಮತ್ತು ಕೆ.ಎಂ. ಮುನ್ಷಿಯವರ ಸಮಿತಿಯೊಂದನ್ನು ರಚಿಸಲಾಗಿತ್ತು. (ಹಾಗೆ ನೋಡಿದರೆ ಈ ಕೆ. ಎಂ ಮುನ್ಷಿಯೆಂಬುವರು ಭಾರತೀಯ ವಿದ್ಯಾ ಭವನದ ಸಂಸ್ಥಾಪಕರು, ಹಿಂದೂತ್ವಾವಾದಿಯೂ ಆಗಿದ್ದರು. 1971ರಲ್ಲಿ ನಿಧನವಾಗುವವರೆಗೆ ಸಂಘಪರಿವಾರದ ವಿಶ್ವ ಹಿಂದೂ ಪರಿಷತ್ತಿನ ಸದಸ್ಯರಾಗಿದ್ದವರು)
ಆ ಸಮಿತಿಯು ಭಾರತದಲ್ಲಿ ಯಾವ ಒಂದು ಭಾಷೆಯೂ ಅದರಲ್ಲೂ ಹಿಂದಿ ಭಾಷೆಯು ರಾಷ್ಟ್ರ ಭಾಷೆಯಾಗುವ ಅಗತ್ಯವಿಲ್ಲ, ಸಾಧ್ಯವೂ ಇಲ್ಲ ಎಂದು ವರದಿ ಕೊಟ್ಟಿತು.

ರಾಜ್ ಎಂದರೆ ರಾಷ್ಟ್ರವಲ್ಲ!

ಈ ಎಲ್ಲಾ ಹಿನ್ನೆಲೆಯಲ್ಲಿ, ಭಾರತದ ಸಂವಿಧಾನವು ಹಿಂದಿ ಮತ್ತು ಇಂಗ್ಲಿಷನ್ನು ರಾಜ್‌ಭಾಷೆಯನ್ನಾಗಿ ಅಂಗೀಕರಿಸಿತು. ರಾಷ್ಟ್ರಭಾಷೆಯಾಗಿ ಅಲ್ಲ. ಸಂವಿಧಾನದ ಆರ್ಟಿಕಲ್ 343ರಿಂದ 351ರವರೆಗಿನ ವಿಧಿಗಳು ಇದನ್ನು ಸ್ಪಷ್ಟಪಡಿಸುತ್ತದೆ. ಅದು ದೇವನಾಗರಿ ಲಿಪಿಯಲ್ಲಿ ಬರೆಯಲ್ಪಡುವ ಹಿಂದಿಯನ್ನು ಸರ್ಕಾರದ ಅಧಿಕೃತ ಭಾಷೆಯನ್ನಾಗಿಯೂ, ಮುಂದಿನ 15 ವರ್ಷಗಳವರೆಗೆ ಇಂಗ್ಲೀಷನ್ನು ಸಹ ಹಿಂದಿಯ ಜೊತೆಗೆ ಅಧಿಕೃತ ಭಾಷೆಯನ್ನಾಗಿ ಮುಂದುವರೆಸಬೇಕೆಂದು ಸ್ಪಷ್ಟಪಡಿಸುತ್ತದೆ. 1963ರ ಅಧಿಕೃತ ಭಾಷಾ ಮಸೂದೆಯು ಜಾರಿಯಾದ ನಂತರ ಇಂಗ್ಲೀಷನ್ನೂ ಸಹ ಕಾಲಾವಧಿಯ ಮಿತಿಯಲ್ಲದೆ ಅಧಿಕೃತ ಭಾಷೆಯಾಗಿ ಮುಂದುವರೆಸಲು ಆದೇಶಿಸಲಾಗಿದೆ. ಅಷ್ಟು ಮಾತ್ರವಲ್ಲ. ಆರ್ಟಿಕಲ್ 348ರ ಪ್ರಕಾರ ಹೈಕೋರ್ಟು ಮತ್ತು ಸುಪ್ರೀಂ ಕೋರ್ಟಿನ ವ್ಯವಹಾರದ ಅಧಿಕೃತ ಭಾಷೆ ಇಂಗ್ಲೀಷೇ ಆಗಿದೆ. ಅಲ್ಲದೆ ಎಲ್ಲಾ ಶಾಸನಸಭೆಗಳಲ್ಲೂ ಆಯಾ ರಾಜ್ಯಗಳ ಮಾತೃಭಾಷೆಯೊಂದಿಗೆ ಇಂಗ್ಲೀಷಿನಲ್ಲೂ ಮಸೂದೆಯನ್ನು ಮಂಡಿಸಬೇಕಿದೆ. ಹಾಗೂ ಕೇಂದ್ರದ ಸಂಸತ್ತಿನಲ್ಲಿ ಮಸೂದೆಗಳು ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಮಂಡಿಸಬೇಕಾಗುತ್ತದೆ.

ಆದರೆ ಮಸೂದೆಗಳ ಮೂಲ ಅಧಿಕೃತ ರೂಪ ಇಂಗ್ಲೀಷೇ ಆಗಿದ್ದು ಹಿಂದಿ ಅದರ ಅನುವಾದವಾಗಿರುತ್ತದೆ.
ಹೀಗೆ ಸಾರಾಂಶದಲ್ಲಿ ಹಿಂದಿಯು ಸರ್ಕಾರಗಳ ನಡುವಿನ ಮತ್ತು ಸರ್ಕಾರ ಹಾಗೂ ಹಿಂದೀ ಭಾಷಿಕ ಜನರ ನಡುವಿನ ಸಂಪರ್ಕದ ಅಧಿಕೃತ ಭಾಷೆಯಾಗಿದೆಯೇ ವಿನಾ ಸಂವಿಧಾನದಲ್ಲಿ ಎಲ್ಲೂ ಅದನ್ನು ರಾಷ್ಟ್ರಭಾಷೆಯೆಂದು ಹೆಚ್ಚುಗಾರಿಕೆಯನ್ನು ನೀಡಿಲ್ಲ.

ಗುಜರಾತ್ ಹೈಕೋರ್ಟಿನ ತೀರ್ಮಾನ:

ಅಷ್ಟು ಮಾತ್ರವಲ್ಲ.

ಹಿಂದಿಯನ್ನು ರಾಷ್ಟ್ರಭಾಷೆಯೆಂದು ಘೋಷಿಸಿ ಎಲ್ಲಾ ಮಾರಾಟದ ಸರಕುಗಳ ಮೇಲೆ ಕಡ್ಡಾಯವಾಗಿ ಅದರ ವಿವರಗಳನ್ನುಹಿಂದಿಯಲ್ಲಿ ನಮೂದಿಸಬೇಕೆಂದು ಆಗ್ರಹಿಸಿ 2010ರಲ್ಲಿ ಸುರೇಶ್ ಕಚ್ಚಡಿಯಾ ಎಂಬುವರು ಗುಜರಾತಿನ ಹೈಕೋರ್ಟಿನಲ್ಲಿ ದಾವೆಯೊಂದನ್ನು ಸಲ್ಲಿಸಿದ್ದರು. ಗುಜರಾತ್ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರನ್ನೊಳಗೊಂಡ ದ್ವಿಸದಸ್ಯ ಪೀಠವು ಹಿಂದಿಯು ಭಾರತದ ಒಂದು ಭಾಷೆಯೇ ಹೊರತು ರಾಷ್ಟ್ರಭಾಷೆಯಲ್ಲವೆಂದೂ ಹಾಗೂ ರಾಷ್ಟ್ರಭಾಷೆಯೆಂಬ ವರ್ಗೀಕರಣವೇ ಸಂವಿಧಾನದಲ್ಲಿಲ್ಲವೆಂದು ಸ್ಪಷ್ಟವಾದ ತೀರ್ಮಾನ ನೀಡಿದೆ.
ಇದಲ್ಲದೆ ಸಂವಿಧಾನದ 8 ನೇ ಶೆಡ್ಯೂಲಿನಲ್ಲಿ ಕನ್ನಡ. ತೆಲುಗು, ತಮಿಳು, ಮರಾಠಿ, ಬಂಗಾಳಿ, ಅಸ್ಸಾಮಿ ಇನ್ನಿತರ 22 ಭಾಷೆಗಳನ್ನು ಮಾನ್ಯ ಮಾಡಲಾಗಿದೆ. ಅದರಲ್ಲಿ ಹಿಂದಿ ಭಾಷೆ ಕೂಡ ಇಪ್ಪತ್ತೆರಡರಲ್ಲಿ ಒಂದು ಅಷ್ಟೆ. ಈ ಎಲ್ಲಾ ಭಾಷೆಗಳನ್ನು ಅಭಿವೃದ್ಧಿ ಮಾಡಲು ಸರ್ಕಾರವು ಕ್ರಮಗಳನ್ನು ತೆಗೆದುಕೊಳಬೇಕೆಂಬ ಸಂವಿಧಾನವು ನಿರ್ದೇಶನವನ್ನೂ ನೀಡಿದೆ.
ಹೀಗೆ ರಾಜ್ ಭಾಷಾ ಮತ್ತು ಶೆಡ್ಯೂಲ್ 8 ರ ಭಾಷೆ ಎಂಬ ಎರಡು ವರ್ಗೀಕರಣಗಳನ್ನು ಬಿಟ್ಟರೆ ನಮ್ಮ ಸಂವಿಧಾನದಲ್ಲೆಲ್ಲೂ ರಾಷ್ಟ್ರ ಭಾಷೆಯೆಂಬ ವರ್ಗೀಕರಣವಿಲ್ಲ.

ಶೆಡ್ಯೂಲ್-೮- ಹಿಂದಿ ವಸಾಹತುಶಾಹಿಯ ಅಸ್ತ್ರ?

ಹಿಂದಿಯನ್ನು ಏಕೈಕ ರಾಷ್ಟ್ರಭಾಷೆಯನ್ನಾಗಿ ಹೇರಲು ಅಮಿತ್ ಶಾ ಹಾಗೂ ಇತರ ಆರೆಸ್ಸೆಸ್ಸಿಗರರೆಲ್ಲರೂ ಬಳಸುವ ಮತ್ತೊಂದು ವಾದವೆಂದರೆ ಹಿಂದಿಯನ್ನು ಭಾರತದಲ್ಲಿ ಅತಿ ಹೆಚ್ಚು ಜನ ಬಳಸುತ್ತಾರೆ ಎಂಬುದು.
2011 ರ ಭಾಷಿಕ ಸೆನ್ಸಸ್‌ನಲ್ಲಿ ಹಿಂದಿ ಮಾತನಾಡುವವರ ಭಾಷೆ ಶೇ.43 ಎಂದು ತೋರಿಸಲಾಗಿರುವುದನ್ನೂ ಸಹ ಅವರು ಅದಕ್ಕೆ ಪುರಾವೆಯಾಗಿ ನೀಡುತ್ತಾರೆ.
ಆದರೆ, ಈ ಭಾಷಾ ಸೆನ್ಸಸ್ ಮಾಡುವಾಗ ಜನರನ್ನು ಹಿಂದಿ ತಿಳಿದಿದೆಯೇ ಎಂದು ಕೇಳಲಾಗಿದೆಯೇ ವಿನಾ ಹಿಂದಿ ಮಾತೃಭಾಷೆಯೇ ಅಥವಾ ಮಾತನಾಡಬಲ್ಲರೇ ಎಂದಲ್ಲ.

ಎರಡನೆಯದಾಗಿ 1950ರಲ್ಲಿ ಶೇ.20ರಷ್ಟು ಮಾತ್ರ ಹಿಂದೀ ಭಾಷಿಕರದಿದ್ದದ್ದು 2011ರ ವೇಳೆಗೆ ಅದರ ಪ್ರಮಾಣ ಶೇ.43 ಆಗಿದ್ದರ ಹಿಂದೆ ದೊಡ ಭಾಷಿಕ ವಸಾಹತು ರಾಜಕಾರಣವಿದೆ.
ಉದಾಹರಣೆಗೆ, ಉತ್ತರ ಭಾರತದಲ್ಲಿ ಎಲ್ಲಾ ಕಡೆ ಹಿಂದಿಯೇ ಮಾತೃ ಭಾಷೆ ಎಂಬ ಅಬಿಪ್ರಾಯವನ್ನು ಹರಿಬಿಡಲಾಗಿದೆ. ಆದರೆ 2011ರ ಬಿಹಾರದ ಭಾಷಿಕ ಸೆನ್ಸಸ್ ನ ವರದಿಯನ್ನೇ ಗಮನಿಸಿದರೆ ಸಾಕು. ಅದು ಎಂಥಾ ರಾಜಕೀಯ ಮಿಥ್ಯೆ ಎಂಬುದು ಅರ್ಥವಾಗುತ್ತದೆ.
ಬಿಹಾರದಲ್ಲಿ ಶೇ.31 ಭಾಗ ಭೋಜ್‌ಪುರಿಯನ್ನೂ, ಶೇ.25 ಭಾಗ ಮಗಹಿ ಯನ್ನೂ ಮಾತನಾಡುತ್ತಾರೆ. ಆದರೆ ಶೇ.21 ಭಾಗ ಮಾತ್ರ ಹಿಂದಿ ಮಾತನಾಡುತ್ತಾರೆ.
ಆದರೆ ಭೋಜ್‌ಪುರಿ ಮತ್ತು ಮಗಹಿ ಭಾಷೆಗಳು ಶೆಡ್ಯೂಲ್ 8 ರಲಿ ಇಲ್ಲ. ಆದರೆ ಭಾಷಿಕ ಸೆನ್ಸಸ್ ನಡೆಸುವಾಗ ತಮ್ಮ ತಮ್ಮ ಮಾತೃಭಾಷೆಯನ್ನು ನೊಂದಾಯಿಸುವಾಗ ಶೆಡ್ಯೂಲ್ 8 ರಲ್ಲಿರುವ ಭಾಷೆಯನ್ನು ಮಾತ್ರ ದಾಖಲಿಸಲಾಗುತ್ತದೆ!.
ಹೀಗಾಗಿ ಭಾಷಿಕ ಸೆನ್ಸಸ್‌ನಲ್ಲಿ ಇವರೆಲ್ಲರ ಮಾತೃಭಾಷೆಗಳೂ ಹಿಂದಿಯೆಂದೇ ನೊಂದಾಯಿತವಾಗುತ್ತದೆ.;

ಶೆಡ್ಶೂಲ್ 8 ರಲ್ಲಿ ಕೇವಲ 25,000 ಜನರು ಮಾತ್ರ ತಮ್ಮ ಮಾತೃಭಾಷೆಯೆಂದು ನೊಂದಾಯಿಸಿಕೊಂಡಿರುವ ಸಂಸ್ಕೃತಕ್ಕೂ ಸ್ಥಾನವಿದೆ. ಆದರೆ ತಲಾ 2 ಕೋಟಿ ಭಾಷಿಕರಿರುವ ಭೋಜ್‌ಪುರಿ ಮತ್ತು ಮಗಹಿಗಳಿಗೆ ಶೆಡ್ಯೂಲ್ 8 ರಲ್ಲಿ ಸ್ಥಾನ ನೀಡಲಾಗಿಲ್ಲ!

ಇತ್ತೀಚೆಗೆ ಭೋಜ್‌ಪುರಿಗೆ ಶೇಡ್ಯೂಲ್ 8 ರಲ್ಲಿ ಸ್ಥಾನಮಾನ ಸಿಗಬೇಕೆಂದು ನಡೆಸಿದ ಹೋರಾಟವನ್ನು ಬಿಜೆಪಿ ವಿರೋಧಿಸಿದೆ. ಕಾರಣ ಹಿಂದಿ ಭಾಷಿಕರ ಅಧಿಕೃತ ಸಂಖೆ ಕಡಿಮೆಯಗುತ್ತದೆಂದು! ಈ ಕಾರಣದಿಂದಲೇ ಬಿಹಾರ ಮತ್ತು ಪೂರ್ವ ಉತ್ತರಪ್ರದೇಶದಲ್ಲಿ ಕೋಟ್ಯಾಂತರ ಜನ ಮಾತನಾಡುತ್ತಿದ್ದ ಅವಧಿ ಭಾಷೆಯೂ ಸೆನ್ಸಸ್ ನಿಂದ ಕಣ್ಮರೆಯಾಗಿದೆ.

ಅದೇರೀತಿ ಬುಂದೇಲ್‌ಖಂಡಿ, ಚತ್ತೀಸ್‌ಘರಿ, ರಾಜಸ್ಥಾನಿ, ಹರಿಯಾಣ್ವಿ ಭಾಷೆಗಳು ಉತ್ತರ ಭಾರತದ ಕೋಟ್ಯಾಂತರ ಜನರ ಮಾತೃಭಾಷೆಯಾದರೂ ಅವುಗಳು ಶೆಡ್ಯೂಲ್ ೮ರಲ್ಲಿ ಇಲ್ಲವಾದ್ದರಿಂದ ಅವೆಲ್ಲವೂ ಹಿಂದಿ ಎಂದೇ ನೊಂದಾಯಿತವಾಗುತ್ತವೆ. ಶೆಡ್ಯೂಲ್ ೮ರಲ್ಲಿರುವ ಭಾಷೆಗಳಿಗೆ ಮಾತ್ರ ಸರ್ಕಾರದ ಮನ್ನಣೆ ಮತ್ತು ಉತ್ತೇಜನ ಸಿಗುವುದರಿಂದ ಅವು ಸೆನ್ಸಸ್‌ನಿಂದ ಮಾತ್ರವಲ್ಲದೆ ನಿಧಾನಕ್ಕೆ ಒಂದೆರಡು ಪೀಳಿಗೆಯ ನಂತರದಲ್ಲಿ ಇತಿಹಾಸದಿಂದಲೇ ಮರೆಯಾಗುತ್ತವೆ.

ಪ್ರಖ್ಯಾತ ಭಾಷಾ ಶಾಸ್ತ್ರಜ್ನರಾದ ಗಣೇಶ್ ದೇವಿ ಯವರ ಪ್ರಕಾರ ಭಾರತದಲ್ಲಿ 750 ಭಾಷೆಗಳಿದ್ದು ಇಂಥಾ ವಸಾಹತುಶಾಹಿ ಪ್ರಕ್ರಿಯೆಗಳಿಂದಾಗಿ ಈಗಾಗಲೇ 120 ಭಾಷೆಗಳು ಮೃತವಾಗಿವೆ.
ಇದಲ್ಲದೆ ಉತ್ತರಭಾರತದ ಜನಸಂಖ್ಯಾ ಏರಿಕೆಯ ಪ್ರಮಾಣ ದಕ್ಷಿಣ ಭಾರತಕ್ಕೆ ಹೋಲಿಸಿ ನೋಡಿದಲ್ಲಿ ಹೆಚ್ಚು. ಹೀಗಾಗಿಯೂ ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಇತರ ಭಾಷಿಕರ ಸಂಖ್ಯೆ ಕಡಿಮೆಯಾಗಿ ಹಿಂದಿ ಭಾಷಿಕರ ಸಂಖ್ಯೆ ಹೆಚ್ಚಾಗಿ ನಮೂದಾಗಿಬಿಡುತ್ತದೆ.
ಆದ್ದರಿಂದಲೇ ಹಿಂದಿಯನ್ನು ರಾಷ್ಟ್ರಭಾಷೆ ಎನ್ನುವುದರ ಹಿಂದೆ ಹಾಗೂ ಹಿಂದಿಯನ್ನು ಅತಿ ಹೆಚ್ಚು ಜನರು ಮಾತನಾಡುತ್ತಾರೆ ಎನ್ನುವ ಹಿಂದೆ ಕೋಮುವಾದಿ ಹಾಗೂ ಭಾಷಿಕ ವಸಾಹತುಶಾಹಿ ಹುನ್ನಾರಗಳಿವೆ.

ಹಿಂದಿ ಎರಡನೇ ಭಾಷೆಯೂ ಆಗಲಾರದು:

ಹಿಂದಿ ಹೇರಿಕೆಯ ವಿರುದ್ಧ ಧ್ವನಿ ಏರತೊಡಗಿದೊಡನೆ ಅಮಿತ್ ಶಾ ಅವರು ಹಿಂದಿಯನ್ನು ಎರಡನೇ ಭಾಷೆಯಾಗಿ ಕಲಿಯಬೇಕೆಂಬ ಹೊಸ ಪ್ರತಿಪಾದನೆ ಪ್ರಾರಂಭಿಸಿದ್ದಾರೆ. ಆದರೆ ಮಕ್ಕಳು ಮಾತೃಭಾಷೆಯನ್ನು ಪಡೆದುಕೊಳ್ಳುತ್ತಾರೆ (First Language Acquisition). ಆದರೆ ಎರಡನೇ ಭಾಷೆಯನ್ನು ಕಲಿಯಬೇಕಾಗುತ್ತದೆ (Second Language Learning). ಎರಡನೇ ಭಾಷಾ ಕಲಿಕೆಯೆಂಬುದು ರಾಜಕೀಯ ಪ್ರೇರಿತವಾದಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ಕುಸಿಯುತ್ತದೆ. ಎರಡನೆ ಭಾಷಾ ಕಲಿಕೆಯು ಸಹಜ ಆಸಕ್ತಿ, ಪೂರಕ ವಾತಾವರಣ, ಮತ್ತು ಬದುಕಿನ ಅಗತ್ಯವನ್ನು ಆಧರಿಸಿದ್ದರೆ ಮಾತ್ರ ಯಶಸ್ವಿಯಾಗುತ್ತದೆಂದು ಜಗತ್ತಿನಾದ್ಯಂತ ಸಾಬೀತಾಗಿದೆ. ಅಲ್ಲದೆ ಮೊದಲ ಅಥವಾ ಮಾತೃಭಾಷೆಯ ಬಲವಾದ ಬುನಾದಿಯಿಲ್ಲದೆ ಎರಡನೇ ಭಾಷಾ ಕಲಿಕೆಯೂ ಹೊರೆಯೇ ಆಗುತ್ತದೆಂಬುದು ಸಹ ಈಗಾಗಲೇ ಭಾರತದಲ್ಲೂ ರುಜುವಾತಾಗಿದೆ. . ಭಾರತದ ವಸಾಹತುಶಾಹಿ ಹಿನ್ನೆಲೆ ಮತ್ತು ಇಂದಿನ ಜಾಗತೀಕರಣಗಳ ಹಿನ್ನೆಲೆಯಿಂದಾಗಿ ಇಂಗ್ಲೀಷು ಎರಡನೇ ಭಾಷೆಯ ಶೈಕ್ಷಣಿಕ ಪೂರ್ವಗತ್ಯಗಳನ್ನು ಪೂರೈಸುತ್ತಿದೆ. ಆ ಜಾಗದಲ್ಲಿ ಹಿಂದಿಯನ್ನು ಪರಿಚಯಿಸುವುದು ಕೃತಕ ಮಾತ್ರವಲ್ಲ ಹಿಂದಿಯೇತರ ರಾಜ್ಯದ ಮಕ್ಕಳಿಗೆ ಮತ್ತು ಜನರಿಗೆ ಮಾಡುವ ತಾರತಮ್ಯ ಹಾಗೂ ಅನ್ಯಾಯವೂ ಆಗುತ್ತದೆ. ಹೀಗಾಗಿ ಹಿಂದಿಯು ಎರಡನೆ ಭಾಷೆಯಾಗಿ ಸಲ್ಲ.

ಭಾರತಕ್ಕೆ ವಿಶ್ವಮಾನ್ಯತೆ ಹೆಚ್ಚಲು ಬೇಕಿರುವುದು ಹಿಂದಿಯೋ? ಹೆಚ್ಚು ಪ್ರಜಾತಂತ್ರವೋ:

ಭಾರತಕ್ಕೆ ವಿಶ್ವಮಾನ್ಯತೆ ಹೆಚ್ಚಬೇಕೆಂದರೂ ಒಂದೇ ಭಾಷೆಯ ಅಗತ್ಯವಿದೆಯೆಂದು ಆರೆಸ್ಸೆಸ್ ಪ್ರಚಾರ ಮಾಡುತ್ತಿದೆ. ಆದರೆ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಮೇಲೆ ಭಾರತವು ವಿಶ್ವಗುರುವಾಗುವುದಿರಲಿ ವಿಫಲ ಪ್ರಜಾತಂತ್ರವಾಗುತ್ತಿದೆ ಯೆಂದು ವಿಶ್ವಸಮುದಾಯ ಒಕ್ಕೊರಲಿಂದ ಹೇಳುತ್ತಿದೆ. ಅದಕ್ಕೆ ಭಾರತ ಸರ್ಕಾರವೂ ಸದಸ್ಯ ರಾಷ್ಟ್ರವಾಗಿರುವ ಜಾಗತಿಕ ಪ್ರಜಾತಂತ್ರ ಅಧ್ಯಯನ ಸಂಸ್ಥೆಯು ಇತ್ತೀಚೆಗೆ ಹೊರತಂದಿರುವ ವಾರ್ಷಿಕ ವರದಿಯೇ ಸಾಕ್ಷಿ. ಅದಕ್ಕೆ ಕಾರಣ ಭಾರತದ ಜನರ ಬದುಕಿನ ಪರಿಸ್ಥಿತಿ, ನಾಗರಿಕ ಸ್ವಾತಂತ್ರ್ಯಗಳ ಮಾನದಂಡಗಳಲ್ಲಿ ಭಾರತವು ತನ್ನ ನೆರೆಹೊರೆಯ ರಾಷ್ಟ್ರಗಳಿಗಿಂತಾ ಮಾತ್ರವಲ್ಲ ಆಫ್ರಿಕಾದ ರಾಷ್ಟ್ರಗಳಿಗಿಂತ ಕಳೆದ ಆರುವರೆ ವರ್ಷಗಳಲ್ಲಿ ಪಾತಾಳಕ್ಕೆ ಇಳಿದಿದೆ

ಅನಗತ್ಯ ಹಿಜಾಬ್ , ಆಜಾನ್, ಮುಸ್ಲಿಮರ ಮೇಲೆ ಆರ್ಥಿಕ ದಿಗ್ಭಂಧನೆ, ಮತಾಂತರ-ಗೋಹತ್ಯ ನಿಷೇಧ, ಕಾಶ್ಮೀರ ವಿಭಜನೆ, ಸಿಎಎ- ಎನ್‌ಪಿ ಅರ್ ಜಾರಿಗೆ ತರಾತುರಿ, ಯೋಜಿತ ದೆಹಲಿ ಗಲಭೆ, ಅದಕ್ಕೆ ಕಾರಣರಾದವರನ್ನು ರಕ್ಷಿಸುತ್ತಾ, ಸಂತ್ರಸ್ತರಾದವರನ್ನೇ ದೋಷಿಗಳ್ನಾಗಿಸುವ ಪಿತೂರಿ, ಕ್ರೂರ, ಅಪ್ರಜಾತಾಂತ್ರಿಕ ಹಾಗು ಅವೈಜ್ನಾನಿಕವಾದ ಕೋವಿಡ್ ನಿಭಾವಣೆ, ಭೀಮಾಕೊರೆಗಾಂವ್ ಪ್ರಕರಣದಲ್ಲಿ ರಾಜಕೀಯ ಭಿನ್ನಮತೀಯರ ಬಂಧನ, ಹತ್ಯೆಗಳು, ಪ್ರಜಾತಾಂತ್ರಿಕ ವಿಧಿ-ರಿವಾಜುಗಳನ್ನೆಲಾ ಗಾಳಿಗೆ ತೂರಿ ರೈತ ವಿರೋಧಿ ಕಾಯಿದೆಗಳನ್ನು ಜಾರಿಗೊಳಿಸಿದ್ದೂ ಇತ್ಯಾದಿಗಳ ಕಾರಣಕ್ಕಾಗಿ ನರೇಂದ್ರ ಮೋದಿಯವರ ಭಾರತವು ಪುಟಿನ್‌ನ ರಷ್ಯಾದಂತೆ, ಎರ್ಡೋಗಾನ್‌ನ ಟರ್ಕಿಯಂತೆ, ಒರ್ಬಾನ್‌ನ ಹಂಗೆರೆಯಂತೆ, ಡ್ಯುಟಿರಾಟೆಯ ಫಿಲಿಫೈನ್‌ನಂತೆ, ಬೊಲ್ಸನಾರೋನ ಬ್ರೆಜಿಲ್‌ನಂತೆ ಸರ್ವಾಧಿಕಾರಿಯಾಗುತ್ತಿದೆಯೆಂದು ಎಲ್ಲಾ ಸ್ವತಂತ್ರ ಜಾಗತಿಕ ವರದಿಗಳು ಸ್ಪಷ್ಟವಾಗಿ ಹೇಳುತ್ತಿವೆ. ಇವೆಲ್ಲಕ್ಕೂ ಕಾರಣ ಬಿಜೆಪಿಯ ಹಿಂದೂತ್ವವಾದಿ, ಕಾರ್ಪೊರೇಟ್ ಬಂಡವಾಳಶಾಹಿ ಪರ ನೀತಿಗಳು ಕಾರಣವೇ ಹೊರತು ಭಾರತಕ್ಕೆ ಒಂದು ರಾಷ್ಟ್ರ ಭಾಷೆ ಇರದಿರುವುದಲ್ಲ. ಅಥವಾ ಹಿಂದಿಯನ್ನು ರಾಷ್ಟ್ರಭಾಷೆಯೆಂದು ಘೋಷಿಬಿಟ್ಟರೆ ಇವೆಲ್ಲವೂ ಬದಲಾಗುವುದಿಲ್ಲ.

ಹಿಂದೀ -ಹಿಂದೂ- ಹಿಂದೂತ್ವ- ಹಿಂದೂರಾಷ್ಟ್ರದ ಹುನ್ನಾರ:

ಹಿಂದಿಯನ್ನು ರಾಷ್ಟ್ರಭಾಷೆಯಾಗಿಸಬೇಕು ಎಂದು ಸಲಹೆ ಸ್ವರೂಪದ ಅಜೆಂಡಾವನ್ನು ದೇಶದ ಮುಂದಿಟ್ಟ ಎರಡೇ ದಿನಗಳಲ್ಲಿ ಅಮಿತ್ ಶಾ ಅವರು ಭಾರತಕ್ಕೆ ಬಹುಪಕ್ಷೀಯ ರಾಜಕೀಯ ವ್ಯವಸ್ಥೆ ಏಕೆ ಬೇಕು ಎಂಬ ಪ್ರಶ್ನೆಯನ್ನು ಸಹ ದೇಶದ ಮುಂದಿಟ್ಟಿದ್ದರು.
ಎರಡನೇ ಬಾರಿ ಹೆಚ್ಚು ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಸರ್ಕಾರ ತನ್ನ ಹಿಂದಿ- ಹಿಂದೂ- ಹಿಂದೂರಾಷ್ಟ್ರದ ಅಜೆಂಡಾವನ್ನು ವೇಗಗತಿಯಲ್ಲಿ ಜಾರಿ ಮಾಡಲು ಹೊರಟಿರುವುದು ಸುಸ್ಪಷ್ಟವಾಗಿದೆ.

ಒಂದು ದೇಶ -ಒಂದೇ ಮಾರುಕಟ್ಟೆ- ಅರ್ಥಾತ್ ಅಂಬಾನಿ-ಆದಾನಿ ಅಥವಾ ಮೋದಾನಿ ಮಾರುಕಟ್ಟೆ

ಒಂದು ದೇಶ- ಒಂದು ತೆರಿಗೆ ಆರ್ಥಾತ್ ಬಡವರಿಗೆ ಹೆಚ್ಚುವರಿ ತೆರಿಗೆ.

ಒಂದು ದೇಶ- ಒಂದು ಧರ್ಮ ಅರ್ಥಾತ್ ಬ್ರಾಹ್ಮಣವಾದಿ ಧರ್ಮ-ಮರ್ಮ

ಒಂದು ದೇಶ- ಒಂದು ಭಾಷೆ ಅರ್ಥಾತ್ ದೇವನಾಗರಿ ಲಿಪಿಯ ಹಾಗೂ ಸಂಸ್ಕೃತವನ್ನು ತಾಯಿಯಾಗುಳ್ಳ ಹಿಂದಿ ಭಾಷೆ.

ಒಂದು ದೇಶ- ಒಂದು ಪಕ್ಷ ಅರ್ಥಾತ್‌ ಬಿಜೆಪಿ ಪಕ್ಷ.

ಒಂದು ದೇಶ- ಒಬ್ಬ ನಾಯಕ ಅರ್ಥಾತ್ ಮೋದಿ (ಅಥವಾ ಶಾ!)

ಇದು ಈ ಆಜೆಂಡಾದ ತಾತ್ಪರ್ಯ. ಜರ್ಮನಿಯಲ್ಲಿ ಹಿಟ್ಲರ್ ಅಧಿಕಾರಕ್ಕೆ ಬಂದದ್ದೂ ಸಹ ಇದೇ ಸರ್ವಾಧಿಕಾರಿ ಪ್ರಣಾಳಿಯ ಮೇಲೆ.

ಆದ್ದರಿಂದಲೇ ಹಿಂದಿ ಹೇರಿಕೆಯಿಂದ ಕನ್ನಡವನ್ನು ಉಳಿಸುವ ಭಾಷಾ ಚಳವಳಿ ಈ ದೇಶವನ್ನು ಹಿಂದೂತ್ವ ಹಿಟ್ಲರ್‌ಶಾಹಿಯಿಂದ ಉಳಿಸುವ ಪ್ರಜಾತಾಂತ್ರಿಕ ಸಮರದ ಭಾಗವೇ ಆಗಿದೆ. ಅಗಬೇಕಾಗಿದೆ.

Advertisement
Advertisement
Recent Posts
Advertisement