ಪಡುಗಡಲೊಡೆಯನ ನಾಡಾದ ಉಡುಪಿ ಜಿಲ್ಲೆಯ, ಗೊಮ್ಮಟನ ಬೀಡಾದ ಕಾರ್ಕಳ ತಾಲೂಕಿನ, ಶಕ್ತಿ ದೇವತೆ ಮಾರಿಯಮ್ಮನ ಒಡೆತನದ ಬೈಲೂರಿನ ಉಮಿಕಲ್ಲು ಕುಂಜ ಎಂಬ ಬೆಟ್ಟದಲ್ಲಿ ಕಳೆದ ಕೆಲವೇ ತಿಂಗಳ ಹಿಂದೆ ನಿರ್ಮಾಣಗೊಂಡು ವೈಭವೋಪೇತವಾಗಿ ಉಧ್ಘಾಟನೆಗೊಂಡ ಪರಶುರಾಮ ಥೀಮ್ ಪಾಕ್೯ ಇದೀಗ ಬಹಳಷ್ಟು ಸುದ್ದಿಯಲ್ಲಿದೆ. ನಕಾರಾತ್ಮಕ ಮತ್ತು ಸಕಾರಾತ್ಮಕದ ಆರೋಪ ಪ್ರತ್ಯಾರೋಪಗಳು ಗುರಿದಾಟಿ ಗಡಿ ದಾಟಿ ಮೆರೆಯುತ್ತಿವೆ. ಯಾವುದು ಆಗ ಬಾರದಿತ್ತೋ ಅದು ಆಗಿಹೋದಾಗ, ಜನರ ನಿರೀಕ್ಷೆಗಳು ಹುಸಿಯಾಗಿ ಹೋದಾಗ ಇಂತಹ ಸಂಘರ್ಷಗಳು ಸಹಜ.! ಯಾಕೆ ಹೀಗೆ....?
(ಹಿಂದಿನ ಬಸವರಾಜ ಬೊಮ್ಮಾಯಿ ಸರಕಾರದ ಅವಧಿಯಲ್ಲಿನ ಪರಶುರಾಮ ಪ್ರತಿಮೆಯ ಉದ್ಘಾಟನೆಯ ಸಂಧರ್ಭದ ಚಿತ್ರ)
ಹೌದು.! ಬಹು ಜನರ ಭಾವನೆಯೊಂದಿಗೆ ಬೆರೆತು ಮೆರೆಯ ಬೇಕಿದ್ದ ಬಹು ನಿರೀಕ್ಷೆಯ ಥೀಮ್ ಪಾರ್ಕಿನಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಪರಶುರಾಮನ ಕಂಚಿನ ಮೂರ್ತಿ ಉದ್ಘಾಟನೆಗೊಂಡ ಕೆಲವೇ ತಿಂಗಳಲ್ಲಿ ಕಂಚು ಕರಗಿಸಿಕೊಂಡು, ರುಂಡ ಮುಂಡ ಕಳಚಿಕೊಂಡು, ಭಾವುಕ ಭಕ್ತರಿಂದ ಕನಿಷ್ಟ ಪಾದ ಸೇವೆಯನ್ನಾದರೂ ಮಾಡಿಸಿಕೊಳ್ಳ ಲೇನೋ ಎಂಬಂತೆ ಕಾಲನ್ನು ಮಾತ್ರ ಅಲ್ಲಿ ಬಿಟ್ಟು ನಮಗೆ ಗೊತ್ತಿಲ್ಲದಂತೆ ಕಾಣದಂತೆ ಮಾಯವಾದದ್ದು ಜನರನ್ನು ಸಖೇದಾಶ್ಚರ್ಯದಲ್ಲಿ ಬೀಳುವಂತೆ ಮಾಡಿದೆ. ನಾವು ನಂಬಿದ ದೇವರ ದಶಾವತಾರದ ಭಾಗವಾಗಿರುವ ಈ ಉಮಿಕಲ್ಲು ಕುಂಜದ ಪರಶುಧರ ರಾಜಕೀಯದ ಹನ್ನೊಂದನೇ ಅವತಾರವೆತ್ತಲು ಇಲ್ಲಿಂದ ಮಾಯವಾದನೊ ಏನೋ ಎಂದು ಕೆಲವರು ಸಂಶಯ ವ್ಯಕ್ತ ಪಡಿಸಿದರೆ, ಇನ್ನು ಕೆಲವರು ಹುಡುಕಿ ಕೊಟ್ಟವರಿಗೆ ಬಹುಮಾನದ ಘೋಷಣೆಯನ್ನೂ ಮಾಡಿದ್ದಾರೆ. ಇದರಲ್ಲಿ ಆಶ್ಚರ್ಯವೇನೂ ಇಲ್ಲ.. ಮಾನವೀಯ ಮೌಲ್ಯವನ್ನು ಹೊತ್ತ ಯಾವೊಬ್ಬ ನಾಗರೀಕನೂ ಈ ಬಗ್ಗೆ ಆತ್ಮಾವಲೋಕನ ಮಾಡಿ ಕೊಳ್ಳಲೇ ಬೇಕಾದ ಅನಪೇಕ್ಷಣೀಯ ಮನುಕುಲ ಒಪ್ಪದ ದುರಂತ ಕತೆ ಇದು.
ಇತ್ತೀಚೆಗಷ್ಟೇ ನಡೆದ ವಿಧಾನ ಸಭಾ ಚುನಾವಣೆ ಯನ್ನು ಗುರಿಯಾಗಿಸಿಕೊಂಡು ಇದೇ ವರ್ಷದ 28 ಜನವರಿ 2023 ರಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅಂದಿನ ಸರಕಾರದ ಗಣ್ಯ ಸಚಿವರು, ಬಿಜೆಪಿಯ ನಾಯಕರು ಹಿಂದುತ್ವದ ವರಿಷ್ಠ ವಕ್ತಾರರೆನ್ನಿಸಿಕೊಂಡವರ ಮಹಾನ್ ಉಪಸ್ಥಿತಿಯಲ್ಲಿ ಇಲ್ಲಿನ ಪ್ರವಾಸೋಧ್ಯಮ ಅಭಿವೃದ್ಧಿಯ ಗುರಿಯೊಂದಿಗೆ ಉದ್ಘಾಟನೆಗೊಂಡ ಈ ಪರಶುರಾಮ ಥೀಮ್ ಪಾಕ್೯ ಸರಕಾರದ ಯೋಜನೆಯ ಪುಸ್ತಕದಲ್ಲಿ ಅರ್ಥಪೂರ್ಣವಾಗಿತ್ತು. ವಾಸ್ತವದಲ್ಲಿ ಇದು 14.50 ಕೋಟಿ ರೂ. ವೆಚ್ಚದ 2ವರ್ಷದ ಸುದೀರ್ಘ ಯೋಜನೆ ಆಗಿತ್ತು. ಅಂದಿನ ಸರಕಾರ ಥೀಮ್ ಪಾರ್ಕ್ ನಿರ್ಮಾಣ ಹಾಗೂ ಅಲ್ಲಿ ಪ್ರತಿಷ್ಠಾಪಿಸಲುದ್ದೇಶಿಸಿರುವ ಪರಶುರಾಮನ ಕಂಚಿನ ವಿಗ್ರಹ ನಿರ್ಮಾಣಕ್ಕೆ ಯಾವುದೇ ಸಮೀಕ್ಷೆ ನಡೆಸದೆ, ತಾಂತ್ರಿಕ ವರದಿಯನ್ನು ಪಡೆಯದೆ 2.30 ಕೋಟಿ ರೂ.ಸೇರಿ ಒಟ್ಟು ರೂ. 6 ಕೋಟಿ ಬಿಡುಗಡೆ ಮಾಡಿತ್ತು.
ಸರಕಾರದ ಪ್ರವಾಸೋದ್ಯಮ ಇಲಾಖೆಯ ಈ ಯೋಜನೆಗೆ ಸರಕಾರ ಭೂಮಿ ಮಂಜೂರಾತಿ ಮಾಡಿರಲಿಲ್ಲ. ಆದರೂ ಅದ ಹೇಗೆ ಸರಕಾರ ಹಣ ಬಿಡುಗಡೆ ಮಾಡಿತು ಎಂಬುದು ಯಕ್ಷ ಪ್ರಶ್ನೆಯಾಗಿತ್ತು.. ಕ್ರಿಯಾ ಯೋಜನೆಯಲ್ಲಿ ಜಾಗದ ಸ್ಪಷ್ಟತೆ ಇಲ್ಲದೆ ನಿರ್ಮಿತಿ ಕೇಂದ್ರ ಈ ಕೆಲಸದ ಗುತ್ತಿಗೆ ಪಡೆಯುವಲ್ಲಿ ರಾಜಕೀಯದ ಬೆಂಬಲವಿತ್ತು.
ಅದಕ್ಕಿಂತಲೂ ಮಿಗಿಲಾಗಿ ಬೃಹತ್ ಪಾತ್ರದ ಲೋಹದ ವಿಗ್ರಹವನ್ನು ಕೇವಲ 40- 60 ದಿನಗಳಲ್ಲಿ ನಿರ್ಮಿಸಿದರು? ಹೇಗೆ ಪ್ರತಿಷ್ಠಾಪಿಸಿದರು? ಮತ್ತು ಇದು ಹೇಗೆ ಕಾರ್ಯಸಾಧ್ಯವೆಂಬ ಬಗ್ಗೆ ಸ್ಪಷ್ಟತೆಯೂ ಇಲ್ಲ. ಇದು ಇಂದು ಮತ್ತು ಅಂದು ಜನರನ್ನು ಕಾಡುತ್ತಿದ್ದ ಪ್ರಶ್ನೆ ಆಗಿತ್ತು. ಇದಕ್ಕೆ ಉತ್ತರ ಕೊಡಬೇಕಿದ್ದವರು ಇಲಾಖೆಯ ತಾಂತ್ರಿಕ ವಿಭಾಗದವರು, ಮೂರ್ತಿ ನಿರ್ಮಾಣದ ಹೊಣೆಹೊತ್ತ ಶಿಲ್ಪಿಗಳು. ಇವೆಲ್ಲಕ್ಕಿಂತ ಮಿಗಿಲಾಗಿ ಈ ಯೋಜನೆಯ ರುವಾರಿ ಇಲ್ಲಿನ ಶಾಸಕರು ಮತ್ತು ಅಂದಿನ ಸಚಿವ ಸುನೀಲ್ ಕುಮಾರ್ ರವರು.
"ವಿಗ್ರಹದ ಭಂಗಿಯಲ್ಲಿ ಕೆಲವೊಂದು ಭೌಗೋಳಿಕ ಸ್ಥಿತಿಗೆ ಒಪ್ಪದ ಲೋಪದೋಷಗಳಿದ್ದು ಅದನ್ನು ಸರಿ ಆಡಿಸಲು ತೆರವುಗೊಳಿಸಲಾಗಿದೆ" ಎಂದು ಇದೀಗ ಹೇಳುವ ಶಾಸಕರು ವಿಗ್ರಹವನ್ನು ನಿಲ್ಲಿಸುವ ಹೊತ್ತಲ್ಲಿ ಇಲಾಖೆಯನ್ನು ಅದೇಕೆ ಎಚ್ಚರಿಸಿರಲಿಲ್ಲ? ಈಗ ಪ್ರತಿಷ್ಠಾಪನೆ ಮಾಡಿದ್ದು ಫೈಬರಿದ್ದು. ಮುಂದೆ ಕಂಚಿನದ್ದು ಪ್ರತಿಷ್ಠಾಪಿಸುವಾಗ ಸರಿಪಡಿಸಿಡಿದರೆ ಸಾಕು ಎಂಬ ಹುಂಬತನದಿಂದ ಸುಮ್ಮನಿದ್ದಿರಬಹುದೇ? ಅದೇನೆ ಇರಲಿ. ಇಂದು ಜನರ ಸಂಶಯ ಮತ್ತು ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರವು ಸಿಕ್ಕಿದೆ. ಪರಶುರಾಮನ ಮೂರ್ತಿಗೆ ಕವಿದ ಸುಳ್ಳಿನ ಪರದೆ ಸರಿದು ಸತ್ಯದ ಬೆಳಕು ಹರಿದಿದೆ. ಮೂರ್ತಿ ಕಂಚಿನದ್ದೂ ಅಲ್ಲ. ಹಿತ್ತಾಳೆಯದ್ದೂ ಅಲ್ಲ. ಪಾದಮೂಲ ಹೊರತು ಪಡಿಸಿ ಇದು ಕೇವಲ ಚುನಾವಣಾ ಪೂರ್ವದ ಉದ್ಘಾಟನೆಗೆಂದೇ ಸಿದ್ಧಪಡಿಸಲಾಗಿದ್ದ ವಿಶಿಷ್ಠ ಫೈಬರಿನ ವಿಗ್ರಹ ಎಂದು ತಿಳಿದು ಬಂದಿದೆ. ನಂಬಲರ್ಹ ಮೂಲಗಳ ಪ್ರಕಾರ ಪರಶು ರಾಮನ ಮೂರ್ತಿ ಈಗ ಶಿಲ್ಪಿಯ ಅಗ್ಗಿಷ್ಟಿಕೆಯಲ್ಲಿ ರೂಪವೆತ್ತು ಎದ್ದು ನಿಲ್ಲುವ ಭಂಗಿಯಲ್ಲಿದೆಯಷ್ಟೇ ಎನ್ನಲಾಗಿದೆ.
ಜನರನ್ನು ಮೂರ್ಖರನ್ನಾಗಿಸ ಹೊರಟಿರುವ ಇದೊಂದು ಅಕ್ಷಮ್ಯವಾದ ಅಪರಾಧ. ಜನರ ವಿಶ್ವಾಸಕ್ಕೆ ಬಗೆದ ನಯವಂಚನೆ. ಸರಕಾರಿ ಹಣದ ದುರುಪಯೋಗ. ಹಿಂದುತ್ವದ ಬೆನ್ನೇರಿ ಬಂದು ಶಾಸಕನಾಗಿ, ಸಚಿವನಾಗಿ, ಕಾರ್ಕಳದಲ್ಲಿ ಮೆರೆದ ಶಾಸಕ ಸುನೀಲ್ ಕುಮಾರ್ ಯಕ್ಕಶ್ಚಿತ್ ರಾಜಕೀಯ "ಲಾಭಕ್ಕಾಗಿ" ಯಥಾರ್ಥ ಸತ್ಯವನ್ನು ಅಡಗಿಸಿ ಪರಶುರಾಮನಿಗೆ ಸುಳ್ಳಿನ ಬೇಲಿ ಹಾಕಿ ಜನರನ್ನು ದಿಕ್ಕು ತಪ್ಪಿಸಿರುವುದು ಖಂಡನೀಯ. ಇಂದು ಕ್ಷೇತ್ರದ ಜನರಿಗೆ ಸತ್ಯ ದರ್ಶನವಾದ ಹೊರತಾಗಿಯೂ ಮತ್ತೆ ತನ್ನ ರಾಜಕೀಯದ "ಅಸ್ತಿತ್ವಕ್ಕಾಗಿ" ಅದೇ ಸುಳ್ಳಿನ ಬೇಲಿಯೊಳಗೆ ಮತ್ತೆ ಮತ್ತೆ "ಅದು ಕಂಚು, ಅದು ಕಂಚು" ಎಂದು ಹೇಳುತ್ತಿರುವುದು ವಿಷಾದನೀಯ ಕೂಡ!
(ಉದ್ಘಾಟನೆಗೊಂಡ ಸ್ಥಳದಲ್ಲಿ ಇದೀಗ ಕಂಚಿನ ಪ್ರತಿಮೆ ಇಲ್ಲದಿರುವ ಕುರಿತು ವೈರಲ್ ಆಗಿರುವ ವಿಡಿಯೋ)
(ಅಲ್ಲಿ ಇದ್ದದ್ದು ಕಂಚು ಅಲ್ಲ. ಅದು ಫೈಬರ್ ಎಂಬ ಕುರಿತು ವೈರಲ್ ಆಗಿರುವ ಮತ್ತೊಂದು ವಿಡಿಯೋ)
ಕಂಚಿನ ಪ್ರತಿಮೆ ಕಾಣೆಯಾಗಿದೆ. ಹುಡುಕಿ ಕೊಟ್ಟವರಿಗೆ ಬಹುಮಾನವಿದೆ! : ಹೀಗೊಂದು ವೈರಲ್ ಆದ ಪೋಸ್ಟರ್!
'ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ನಿರ್ಮಿಸಿ, ಉದ್ಘಾಟಿಸಿದ್ದ ಪರಶುರಾಮನ ಕಂಚಿನ ಪ್ರತಿಮೆ ಕಾಣೆಯಾಗಿದೆ. ಆ ಪ್ರತಿಮೆಯನ್ನು ಹುಡುಕಿ ಕೊಟ್ಟವರಿಗೆ ಬಹುಮಾನ ನೀಡಲಾಗುವುದು. ಪೈಬರ್ ಪ್ರತಿಮೆಯನ್ನು ತೋರಿಸಿ ಕಂಚಿನ ಪ್ರತಿಮೆ ಎಂದರೆ ಬಹುಮಾನ ನೀಡಲಾಗದು.' ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹು ಜನಪ್ರಿಯಗೊಂಡಿರುವ ಪೋಸ್ಟರ್ ಆಗಿದೆ.