ಇತ್ತೀಚೆಗಿನ ಜಿಲ್ಲಾ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್ ರವರ ಸಮ್ಮುಖದಲ್ಲಿ ಶಾಸಕ ಸುನೀಲ್ ಕುಮಾರ್ ರವರು ಜಿಲ್ಲಾ ಎಸ್ಪಿಯವರ ಮೇಲೆ ಕ್ಷುಲ್ಲಕ ಕಾರಣ ಹೊರಿಸಿ ಹರಿಹಾಯ್ದ ಅಸಾಂವಿಧಾನಿಕ ನಡೆಯ ಹಿಂದೆ ಪೂರ್ವಾಗ್ರಹ ಪೀಡಿತ ರಾಜಕೀಯ ಸಂಚು ಅಡಗಿದೆ. ಆದ ಕಾರಣ ಈ ಕುರಿತು ಆಳವಾದ ತಿಳುವಳಿಕೆ ಹೊಂದಿರುವ ಉಸ್ತುವಾರಿ ಸಚಿವೆಯವರು ಎಸ್ಪಿಯವರನ್ನು ಸುಮ್ಮನಿರುವಂತೆ ಸೂಚಿಸಿದ್ದಾರೆ. ಇದರ ಹಿಂದೆ 'ಕೆಸರಿನೊಂದಿಗೆ ಬಡಿದಾಟ ಸಲ್ಲದು' ಎಂಬ ಸೂಕ್ಷ್ಮ ಸಂದೇಶ ಅಡಗಿದೆ. ಇದನ್ನು ಕಾಂಗ್ರೆಸ್ ಕಾರ್ಯಕರ್ತರು ಅರ್ಥೈಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಕರೆ ನೀಡಿದ್ದಾರೆ.
ಇಲಾಖಾ ಮಾರ್ಗಸೂಚಿ ನಿಯಮವನ್ನು ಮೀರಿದ ಮತ್ತು ಇಲಾಖೆಯ ಕಾನೂನಾತ್ಮಕ ನಿಯಮಾನುಸಾರದಡಿಯಲ್ಲಿ ಅನಗತ್ಯವೆಂದು ಪರಿಗಣಿಸಲ್ಪಟ್ಟ ಪ್ರತಿಭಟನೆಗಳನ್ನು ಇಲಾಖಾ ಹದ್ದು ಬಸ್ತಿಗೊಳಪಡಿಸುವುದು ಇಲಾಖಾಧಿಕಾರಿಗಳ ಆಧ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಅಭಿವೃದ್ದಿಯ ಮೌಲ್ಯ ಮಾಪನ ಮಾಡಬೇಕಾದ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಅಧಿಕಾರಿಯೊಬ್ಬರ ಮೌಲ್ಯ ಮಾಪನಕ್ಕಿಳಿದ ಶಾಸಕ ಸುನೀಲ್ ಕುಮಾರ್ ರವರದ್ದು ಅಪ್ರಜಾಸತ್ತಾತ್ಮಕ ನಿಲುವಾಗಿದೆ ಎಂದವರು ಹೇಳಿದ್ದಾರೆ.
ಬಹುಶಃ ತನ್ನ ಅಧಿಕಾರಾವಧಿಯಲ್ಲಿ ಕಾನೂನನ್ನು ಕೈಗೆತ್ತಿಕೊಂಡು ಮನಸೋ ಇಚ್ಚೆ ಮೆರೆಯುತ್ತಿದ್ದ ತನ್ನ ಹಿಂಬಾಲಕರ ಬಾಲವನ್ನು ಈಗಿನ ಸರಕಾರದ ಅಧಿಕಾರಿಗಳು ಕಾನೂನಿನ ಕುಣಿಕೆಯಡಿಯಲ್ಲಿ ಬಿಗಿದು ಬಂದಿಸುತ್ತಿರುವುದನ್ನು ಕಂಡು ಸುನೀಲ್ ಕುಮಾರ್ ಹತಾಶರಾಗಿದ್ದಾರೆ. ಪ್ರಕೃತಿಯನ್ನೆ ದೋಚಲು ಹೊರಟು ತಮ್ಮ ತೀಜೋರಿಯನ್ನು ಭದ್ರಪಡಿಸಿ ಹೊಂಕರಿಸ ಹೊರಟವರಿಗೆ ಜಿಲ್ಲಾಡಳಿತದ ಬಿಗಿಯಾದ ಕಾನೂನು ಪಾಲನೆಯಿಂದ ಪರೋಕ್ಷ ಮುಖಭಂಗವಾಗಿದೆ ಎಂದು ವಿವರಣೆ ನೀಡಿದ ಅಶೋಕ್ ಕುಮಾರ್ ಕೊಡವೂರುರವರು 'ಮಾನ್ಯ ಎಸ್ಪಿಯವರು ಓರ್ವ ಉನ್ನತ ಶ್ರೇಣಿಯ ಅಧಿಕಾರಿಯಾಗಿ ಸಭೆಯಲ್ಲಿ ವಾಸ್ತವ ವಿಷಯದ ವಿವರಣೆಯನ್ನಷ್ಟೆ ಕೊಟ್ಟು ಸಚಿವರ ಆದೇಶವನ್ನು ಪಾಲಿಸಿ ಸುಮ್ಮನಾಗುವ ಮೂಲಕ ತನ್ನ ಹುದ್ದೆಯ ಗೌರವವನ್ನು ಎತ್ತಿ ಹಿಡಿದಿದ್ದಾರೆ' ಎಂದವರು ಎಸ್‌ಪಿಯವರ ಕುರಿತು ಪ್ರಶಂಶೆ ವ್ಯಕ್ತಪಡಿಸಿದ್ದಾರೆ.