ಬರಹ: ಡಾ. ಉಮೇಶ್ ಪುತ್ರನ್ ಎಂ. ಡಿ.
ಚಿನ್ಮಯಿ ಆಸ್ಪತ್ರೆ, ಕುಂದಾಪುರ.
(ನನ್ನ “ಸ್ವಾತಂತ್ರ್ಯದ ಆ ಕ್ಷಣಗಳು” ಪುಸ್ತಕದಿಂದ)
ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 22
ಮೂರನೇ ಆಂಗ್ಲೋ ಮರಾಠ ಯುದ್ಧ:
ಬ್ರಿಟಿಷರ ಪಾಲಾದ ಬೃಹತ್ ಭರತಖಂಡ.
1817ರ ಜೂನ್ 13ರಂದು ಪೇಶ್ವೆ ದ್ವಿತೀಯ ಬಾಜಿರಾವ್ ಬ್ರಿಟಿಷರೊಂದಿಗೆ ಪೂನಾ ಒಪ್ಪಂದ ಮಾಡಿಕೊಂಡ. ಇದರ ಪ್ರಕಾರ ಆತ ಸೇನೆಯ ಅಶ್ವದಳವನ್ನು ಹೊಂದುವಂತಿಲ್ಲ. ಆದರೆ ಬಾಜಿರಾವ್ ರಹಸ್ಯವಾಗಿ ಅಶ್ವದಳ ಸೇನೆಗೆ ಏಳು ತಿಂಗಳ ಸಂಬಳವನ್ನು ಮುಂಗಡವಾಗಿ ನೀಡಿ, ದೂರವಿದ್ದು ಮೌನದಿಂದ ಕಾಯುವಂತೆ ಸೂಚನೆ ನೀಡಿದ. ಬಾಬು ಗೋಖಲೆ ಸೇನಾಧಿಪತಿಯಾದ. ಹರಿದು ಹಂಚಿಹೋದ ಬೋಂಸ್ಲೆ, ಶಿಂದೆ, ಹೋಳ್ಕರ್ ಇವರನ್ನೆಲ್ಲ ಒಟ್ಟುಗೂಡಿಸಿದ.
ಪಿಂಡಾರಿಗಳು- ಹೆಸರೇ ಒಂಥರಾ ವಿಚಿತ್ರ ಅಲ್ಲವಾ? ಇವರು ಸೇನೆಗೆ ಸಹಾಯ ಮಾಡುವ ಅಕ್ರಮ ಸೈನಿಕರು. ಔರಂಗೇಬನ ಕಾಲದಲ್ಲಿ ಹುಟ್ಟಿಕೊಂಡ ಇವರು ಮೊದಲಿಗೆ ಮುಸ್ಲಿಂ ರಾಜರಿಗೆ ಬೆನ್ನೆಲುಬಾಗಿದ್ದರು. ನಂತರ ಮರಾಠ ಸೈನ್ಯದೊಳಗೆ ಸೇರಿಕೊಂಡರು.
ವೈರಿ ಪಾಳಯದಲ್ಲಿ ನಡುಕ ಹುಟ್ಟಿಸುವುದು, ಮಿಂಚಿನಂತೆ ಬಂದು ಎರಗುವುದು, ಗೂಢಚಾರಿಕೆ ನಡೆಸಿ ಯುದ್ಧವನ್ನು ಗೆಲ್ಲಿಸಿ ಕೊಡುವುದು - ಇದೆಲ್ಲ ಇವರ ತಂತ್ರಗಾರಿಕೆ. ರಾಜರು ಇವರಿಗೆ ಯಾವುದೇ ವೇತನವನ್ನು ಕೊಡುವುದಿಲ್ಲ. ವೈರಿಗಳ ಪ್ರದೇಶವನ್ನು ಲೂಟಿ ಮಾಡಿ ದೋಚಿದ ಸಂಪತ್ತೇ ಇವರ ಆದಾಯವಾಗಿತ್ತು. 1791ರ ಮರಾಠ - ಮೈಸೂರು ಯುದ್ಧದಲ್ಲಿ ಶೃಂಗೇರಿ ಶಾರದಾ ಪೀಠದ ಮೇಲೆ ಆಕ್ರಮಣ ಮಾಡಿದವರು ಇದೇ ಪಿಂಡಾರಿಗಳು. ಇದಕ್ಕಾಗಿ ಮರಾಠಾಧಿಪತಿಗಳು ಮಠಾಧಿಪತಿಗಳ ಕ್ಷಮೆಯನ್ನು ಕೂಡ ಕೇಳಿದರು.
ಎರಡನೇ ಆಂಗ್ಲೋ ಮರಾಠ ಯುದ್ಧದ ನಂತರ ಪಿಂಡಾರಿಗಳು ತಮ್ಮ ಕೇಂದ್ರಸ್ಥಾನವನ್ನು ಮಾಲ್ವಾಗೆ ಸ್ಥಳಾಂತರಿಸಿ ಅಲ್ಲಿ ಗ್ವಾಲಿಯರ್ ಮತ್ತು ಇಂದೂರಿನ ರಾಜರ ಆಶ್ರಯದೊಂದಿಗೆ ಇದ್ದಿದ್ದರು. ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಒಂದೊಂದು ಬ್ರಿಟಿಷ್ ಪ್ರಾಂತ್ಯವನ್ನು ನುಗ್ಗಿ ಅಲ್ಲಿಯ ಜನರನ್ನು ದರೋಡೆ ಮಾಡುವುದೇ ಅವರ ಕಾಯಕವಾಗಿತ್ತು. ಈ ತರಹದ ಒಂದು ದರೋಡೆಯ ಪ್ರಕರಣ ಮಚಲಿಪಟ್ಟಣಂ ಕರಾವಳಿ ತೀರದಲ್ಲಿ ನಡೆಯಿತು. ಆಗ ಸುಮಾರು 340 ಹಳ್ಳಿಗಳನ್ನು ಆಕ್ರಮಣ ಮಾಡಿ, 680 ಜನರನ್ನು ಕೊಂದು, ಅತ್ಯಂತ ಬೆಲೆ ಬಾಳುವ ವಸ್ತುಗಳನ್ನು ದೋಚಿದರು.
ಪಿಂಡಾರಿಗಳ ಕಾಟ ತಾಳಲಾರದೆ, ಅವರನ್ನು ಮುಗಿಸಲು ಬ್ರಿಟಿಷ್ ಸೇನೆ 1817ರ ನವಂಬರ್ ನಲ್ಲಿ ದೊಡ್ಡ ಪ್ರಮಾಣದ ಸೈನ್ಯವನ್ನು ಒಗ್ಗೂಡಿಸಿ, ಪೂನಾದ ಹತ್ತಿರ ಆಕ್ರಮಣ ಮಾಡಿತು.
55000 ಸೈನಿಕರು ಇರುವ ಪಿಂಡಾರಿಗಳ ಸೇನೆಯನ್ನು ಬ್ರಿಟಿಷ್ ಗವರ್ನರ್ ಜನರಲ್ ಲಾರ್ಡ್ ಹೇಸ್ಟಿಂಗ್ಸ್ ನ 120000 ಸೈನಿಕರು ಸುತ್ತುವರಿದರು. ಯಾವುದೇ ಮರಾಠಾ ನಾಯಕರು ಪಿಂಡಾರಿಗಳ ಸಹಾಯಕ್ಕೆ ಬರಲಿಲ್ಲ. ಪಿಂಡಾರಿಗಳು ಸೋತರು. ಅವರ ಕೋರಿಕೆಯ ಮೇರೆಗೆ ಬ್ರಿಟಿಷ್ ಸೇನೆಯಲ್ಲಿ ಬೇರೆಬೇರೆ ಹುದ್ದೆಗಳನ್ನು ನೀಡಲಾಯಿತು.
ಬ್ರಿಟಿಷರು ಪಿಂಡಾರಿಗಳ ಮೇಲೆ ಯುದ್ಧ ನಿರತರಾಗಿರುವುದು ಕಂಡು 1817ರ ನವೆಂಬರ್ 5ರಂದು ಮರಾಠ ಸೇನೆಯು ಪೂನಾದ ಕಾಡ್ಕಿ ಸಮೀಪ ಬ್ರಿಟಿಷ್ ಸೇನೆಯ ಮೇಲೆ ಆಕ್ರಮಣ ಮಾಡಿತು. ಮರಾಠ ಸೈನ್ಯದ ಸಾಮರ್ಥ್ಯ 30000 ಆದರೆ, ಬ್ರಿಟಿಷರದ್ದು ಕೇವಲ 3000.
ಪ್ರಾರಂಭದಲ್ಲಿ ಮರಾಠರು ಪ್ರಾಬಲ್ಯ ಸಾಧಿಸಿದರೂ ಕೂಡ, ಅಲ್ಲಿಯ ನದಿಗೆ ಬಂದು ಸೇರುವ ನಾಲೆಗಳಿಗೆ ಮರಾಠರ ಕೆಲವು ಕುದುರೆಗಳು ಬಿದ್ದವು. ಸೇನಾಧಿಪತಿ ಬಾಪೂ ಗೋಖಲೆ ಸೈನ್ಯದ ನಿಯಂತ್ರಣವನ್ನು ಕಳೆದುಕೊಂಡ. ಇನ್ನೊಬ್ಬ ಸೇನಾ ನಾಯಕ ಮೋರೋಪಂತ್ ದೀಕ್ಷಿತ್ ಅವನನ್ನು ಬ್ರಿಟಿಷ್ ಸೇನೆ ಗುಂಡಿಕ್ಕಿ ಕೊಂದಿತು. ನಾಲ್ಕು ಗಂಟೆಗಳಲ್ಲಿ ನಡೆದ ಈ ರೋಮಾಂಚಕಾರಿ ಕದನದಲ್ಲಿ 85 ಜನ ಬ್ರಿಟಿಷರು ಸತ್ತರೆ, 500 ಜನ ಮರಾಠರು ಅಸುನೀಗಿದರು. ಬ್ರಿಟಿಷರ ಚಿಕ್ಕ ಸೇನೆ ವಿಜಯೀ ಆಯಿತು. ಮರಾಠ ಚಕ್ರಾಧಿಪತ್ಯದ ಕಿರೀಟ ಇಲ್ಲಿಗೆ ಬಿದ್ದಿತ್ತು.
ಗ್ವಾಲಿಯರ್ ಒಪ್ಪಂದದ ಮೇರೆಗೆ ರಾಜಸ್ಥಾನವು ಬ್ರಿಟಿಷರ ಪಾಲಾಯಿತು. ಹೋಳ್ಕರ್ ಸೋಲಿನಿಂದಾಗಿ ಮಂಡೇಶ್ವರ್ ಒಪ್ಪಂದದ ಮೂಲಕ ಅವನ ಪ್ರಾಂತ್ಯವು ಬ್ರಿಟಿಷರ ಕೈಸೇರಿತು. ಭೊಂಸ್ಲೆಯು ಸೋಲಿನಿಂದಾಗಿ ಗಡಿಪಾರಾದ. ಪೇಶ್ವೆಗಳು ಪರಾಜಯದೊಂದಿಗೆ ಊರು ಬಿಟ್ಟು ಕಾನ್ಪುರ ಸೇರಿ, ಬ್ರಿಟಿಷರು ನೀಡಿದ ನಿವೃತ್ತಿ ವೇತನದಲ್ಲಿ ಜೀವನ ನಡೆಸಲು ಪ್ರಾರಂಭಿಸಿದರು. ಪಿಂಡಾರಿಗಳು ಮೊದಲೇ ನೆಲಕಚ್ಚಿದರು.
ಇದರೊಂದಿಗೆ ಛತ್ರಪತಿ ಶಿವಾಜಿ ಮಹಾರಾಜ 1674 ರಲ್ಲಿ ಸ್ಥಾಪಿಸಿದ ವಿಶಾಲವಾದ ಮರಾಠ ಸಾಮ್ರಾಜ್ಯ ಅಂತ್ಯಗೊಂಡಿತು. ಮರಾಠಾ ಸಾಮ್ರಾಜ್ಯದ ಪತನದೊಂದಿಗೆ ಸಟ್ಲೇಜ್ ನದಿಯ ದಕ್ಷಿಣಕ್ಕಿರುವ ಇಡೀ ಭರತಖಂಡವು ಈಸ್ಟ್ ಇಂಡಿಯಾ ಕಂಪನಿಯ ಪಾಲಾಯಿತು.
ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 23
ಸ್ವಾಮಿ ದಯಾನಂದ ಸರಸ್ವತಿ:
ಆರ್ಯಸಮಾಜದ ಪರಿವರ್ತಕ.
ಆರ್ಯ ಸಮಾಜದ ಸ್ಥಾಪಕ ಸ್ವಾಮಿ ದಯಾನಂದ ಸರಸ್ವತಿಯವರು, ಭಾರತೀಯರು ಧರ್ಮವನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿದ ವ್ಯಕ್ತಿ.
ಸ್ವಾಮಿ ದಯಾನಂದ ಸರಸ್ವತಿಯವರು ಗುಜರಾತಿನ ಈಗಿನ ಮೋರ್ಬಿ ಜಿಲ್ಲೆಯಲ್ಲಿ ಫೆಬ್ರವರಿ 12, 1824 ರಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಂದೆ ಕರ್ಶನ್ ಜಿ ಲಾಲ್ಜಿ ಕಪಾಡಿ ಹಾಗೂ ತಾಯಿ ಯಶೋಧ ಬಾಯಿ. ಇವರ ಹುಟ್ಟು ಹೆಸರು ಮೂಲಶಂಕರ.
1846 ರಲ್ಲಿ ಮನೆಯಲ್ಲಿ ಮದುವೆ ಮಾಡಿಸುತ್ತಾರೆ ಎಂದು ತಿಳಿದು ಮನೆ ಬಿಟ್ಟು ಓಡಿ ಹೋದರು. ಪ್ರಪಂಚದ ಆಸೆಯನ್ನು ಬಿಟ್ಟ ಇವರು, ನಂತರ 20 ವರ್ಷಗಳವರೆಗೆ ಅಸಂಖ್ಯಾತ ದೇವಸ್ಥಾನಗಳನ್ನು, ಹಿಮಾಲಯದ ತಪ್ಪಲಲ್ಲಿರುವ ಸ್ವಾಮಿಗಳನ್ನು ಹಾಗೂ ದಾರ್ಶನಿಕರನ್ನು ಭೇಟಿಯಾಗಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರು. ಕೊನೆಗೆ ಇವರು ಬಂದು ಸೇರಿದ್ದು ಮಥುರಾದಲ್ಲಿ ಸ್ವಾಮಿ ವಿರಾಜಾನಂದರನ್ನು. ಯೋಗ ಮತ್ತು ವೇದಗಳಲ್ಲಿ ಪರಿಣತಿ ಪಡೆದ ಇವರನ್ನು ವಿರಾಜಾನಂದರು ಋಷಿ ದಯಾನಂದ ಎಂದು ಮರುನಾಮಕರಣ ಮಾಡಿದರು.
ಹಿಂದೂ ಧರ್ಮವು ತನ್ನ ಮೂಲ ತತ್ವದಿಂದ ವಿಮುಖವಾಗಿ ಬೇರೆಕಡೆ ಹೋಗುತ್ತಿದೆ. ವಿಗ್ರಹಾರಾಧನೆ ಎನ್ನುವುದು ಪುರೋಹಿತಶಾಹಿಗಳ ಬದುಕು ಕಟ್ಟಿಕೊಳ್ಳುವ ತಂತ್ರ. ತೀರ್ಥಯಾತ್ರೆ, ಪುಣ್ಯಸ್ನಾನ, ಅದ್ದೂರಿಯ ಪೂಜೆ, ಪ್ರಾಣಿಬಲಿ ಇವುಗಳು ನಮ್ಮನ್ನು ಅವನತಿಯೆಡೆಗೆ ತೆಗೆದುಕೊಂಡು ಹೋಗುತ್ತವೆ. ವೇದಗಳು ನಮ್ಮ ಬದುಕನ್ನು ರೂಪಿಸುವ ಪ್ರಾಥಮಿಕ ಪಾಠಗಳು. ಮೂಢನಂಬಿಕೆ ಮತ್ತು ಜಾತಿ ಪದ್ಧತಿ ಸಮಾಜದಿಂದ ತೊಲಗಬೇಕು. ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗೂ ವಿಧವಾ ವಿವಾಹ ಇವುಗಳು ಹೆಚ್ಚಾಗಬೇಕು. ಸ್ವರಾಜ್ಯ ದಿಂದ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎನ್ನುವುದು ದಯಾನಂದರ ಬಲವಾದ ನಂಬಿಕೆ.
1869ರ ಅಕ್ಟೋಬರ್ 22ರಂದು ವಾರಣಾಸಿಯಲ್ಲಿ 50 ಸಾವಿರ ಜನ ಸೇರಿದ ಒಂದು ಬೃಹತ್ ಧಾರ್ಮಿಕ ಸಮ್ಮೇಳನ ನಡೆಯಿತು. ಸಮ್ಮೇಳನದ ಚರ್ಚಾ ವಿಷಯ " ವೇದಗಳಲ್ಲಿ ಮೂರ್ತಿಪೂಜೆ ಮಾನ್ಯವೇ? ". ದಯಾನಂದರು ಸುಮಾರು 27 ಜನ ಮೇಧಾವಿ ಪಂಡಿತರ ವಿರುದ್ಧ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿ, ವೇದಗಳಲ್ಲಿ ಮೂರ್ತಿಪೂಜೆಗೆ ಅವಕಾಶವಿಲ್ಲ ಎಂದು ಪ್ರತಿಪಾದಿಸಿ ಗೆದ್ದರು.
ಸ್ವಾಮಿ ದಯಾನಂದರು ಭಾರತೀಯರಿಗೆ ಕೊಟ್ಟ ಅದ್ಭುತವಾದ ಕಾಣಿಕೆ ಆರ್ಯ ಸಮಾಜದ ಕಲ್ಪನೆ. ಆರ್ಯ ಸಮಾಜವನ್ನು ಏಪ್ರಿಲ್ 7, 1875ರಲ್ಲಿ ಮುಂಬೈಯಲ್ಲಿ ಇವರು ಸ್ಥಾಪಿಸಿದರು. ಹಿಂದೂ ಧರ್ಮವನ್ನು ತ್ಯಜಿಸಿ, ಬೇರೆ ಧರ್ಮಕ್ಕೆ ಹೋದವರನ್ನು ವಾಪಸು ಕರೆತರುವ " ಶುದ್ಧಿ ಚಳುವಳಿ" ಯನ್ನು ಪ್ರಾರಂಭಿಸಿದರು.
ಮಹರ್ಷಿ ದಯಾನಂದರು ನೇರವಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲಿಲ್ಲ. ಆದರೆ ಇವರ ಬೋಧನೆಗಳು ಲಾಲಾ ಲಜಪತ್ ರಾಯ್, ವೀರ ಸಾವರ್ಕರ್, ಮಹಾದೇವ ಗೋವಿಂದ ರಾನಡೆ, ಸುಭಾಷ್ ಚಂದ್ರ ಬೋಸ್ ಮತ್ತಿತರರನ್ನು ಪ್ರಭಾವ ಗೊಳಿಸಿತು.
ಜೋಧಪುರದ ಮಹಾರಾಜ ದ್ವಿತೀಯ ಜಸ್ವಂತ್ ಸಿಂಗ್ ಸ್ವಾಮಿಗಳ ಶಿಷ್ಯನಾಗಲು ಹಾಗೂ ಅವರ ಬೋಧನೆಗಳನ್ನು ಕಲಿಯಲು ತನ್ನ ಅರಮನೆಗೆ ಬರಲು ಆಹ್ವಾನವಿತ್ತ. ಸ್ವಾಮಿಗಳು ಕೆಲಕಾಲ ಆಸ್ಥಾನದಲ್ಲಿ ತಂಗಿದ್ದರು. ಒಮ್ಮೆ ರಾಜನ ಖಾಸಗಿ ದರ್ಬಾರಿಗೆ ಹೋದಾಗ ಅಲ್ಲಿ ನರ್ತಕಿ ನನ್ನಿ ಜಾನ್ ನೃತ್ಯ ಮಾಡುತ್ತಿದ್ದಳು. ದಯಾನಂದರಿಗೆ ಕೋಪ ಬಂದು ನನ್ನ ಬೋಧನೆಗಳನ್ನು ಕಲಿಯಲು ನೀನು ಇದನ್ನೆಲ್ಲ ಬಿಡಬೇಕಾಗುತ್ತದೆ ಎಂದು ಹೇಳಿದರು.
ಆಗ ನರ್ತಕಿಗೆ ದಯಾನಂದರ ಮೇಲೆ ಕೋಪ ಬಂದು, ಆಸ್ಥಾನದ ಅಡುಗೆಯವ ಜಗನ್ನಾಥನೊಂದಿಗೆ ಸೇರಿ, ಹಾಲಿನಲ್ಲಿ ಗಾಜಿನ ಪುಡಿಯ ಮಿಶ್ರಣವನ್ನು ಬೆರೆಸಿದಳು. ಅದನ್ನು ಕುಡಿದ ಮಹರ್ಷಿಗಳು ಅಸ್ವಸ್ಥರಾದರು. ವಿಪರೀತ ನೋವಿನಿಂದ ಬಳಲಿದರು. ಜಗನ್ನಾಥನು ಸ್ವಾಮಿಗಳೊಂದಿಗೆ ತನ್ನ ತಪ್ಪನ್ನು ನಿವೇದಿಸಿಕೊಂಡ. ಸ್ವಾಮಿಗಳು ತಮ್ಮಲ್ಲಿದ್ದ ಹಣದ ಚೀಲವನ್ನು ಕೊಟ್ಟು ಈ ರಾಜ್ಯವನ್ನು ಕೂಡಲೇ ಬಿಟ್ಟುಬಿಡು ಇಲ್ಲವಾದರೆ ನಿನಗೆ ಶಿಕ್ಷೆ ಕೊಡುತ್ತಾರೆ ಎಂದು ಹೇಳಿ ಕಳುಹಿಸಿದರು.
ಕೆಲವು ದಿನಗಳ ನಂತರ ಅವರನ್ನು ರಾಜನು ಮೌಂಟ್ ಅಬುಗೆ ಸ್ಥಳಾಂತರಿಸಿದನು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅಜ್ಮೇರಿಗೆ ಕಳಿಸಲಾಯಿತು. ಆದರೆ ಅವರ ಆರೋಗ್ಯ ಕ್ಷೀಣಿಸಿ, ದಯಾನಂದರು ಅಕ್ಟೋಬರ್ 30, 1883ರಲ್ಲಿ ಇಹ ಲೋಕ ತ್ಯಜಿಸಿದರು. ಅಂದು ದೀಪಾವಳಿ.
ಇಂದು ಮಹರ್ಷಿ ದಯಾನಂದರು ಸ್ಥಾಪಿಸಿದ ಆರ್ಯಸಮಾಜದ ಶಾಖೆಗಳು ಪ್ರಪಂಚದ ಎಷ್ಟೋ ದೇಶಗಳಲ್ಲಿ ಹಿಂದೂ ಧರ್ಮದ ಪ್ರಚಾರದಲ್ಲಿ ತೊಡಗಿವೆ. ಇವರ ಶಿಷ್ಯರು ಸ್ಥಾಪಿಸಿದ ದಯಾನಂದ - ಆಂಗ್ಲೋ ವೇದಿಕ್ ಶಾಲೆಗಳು ಕೂಡ ಹಲವಾರು ಕಡೆ ಕಾರ್ಯಾಚರಿಸುತ್ತಿದೆ.
ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 24
ಥೋಮಸ್ ಬಬಿಂಗ್ಟನ್ ಮೆಕಾಲೆ:
"ನಾನು ಭಾರತ ದೇಶದ ಉದ್ದಗಲಕ್ಕೂ ಸಂಚರಿಸಿದ್ದೇನೆ. ಎಲ್ಲಿಯೂ ಕೂಡ ಬಡತನ ಇಲ್ಲ, ಭಿಕ್ಷುಕರು ಇಲ್ಲ, ಎಲ್ಲೆಲ್ಲೂ ಸಂಪತ್ತು ತುಂಬಿ ತುಳುಕುತ್ತಿದೆ. ಈ ದೇಶವನ್ನು ಆಳಬೇಕಾದರೆ, ಗೆಲ್ಲಬೇಕಾದರೆ ಮೊದಲು ಇಲ್ಲಿಯ ಭಾಷೆ ಮತ್ತು ಸಂಸ್ಕೃತಿಯನ್ನು ನಾಶಪಡಿಸಬೇಕು". ಇದು ಥೋಮಸ್ ಬಬಿಂಗ್ಟನ್ ಮೆಕಾಲೆಯ ಸ್ಪಷ್ಟ ನಿಲುವು. ಥೋಮಸ್ ಬಬಿಂಗ್ಟನ್ ಮೆಕಾಲೆ ಓರ್ವ ಬ್ರಿಟಿಷ್ ಇತಿಹಾಸಕಾರ, ರಾಜಕಾರಣಿ ಹಾಗೂ ಲೇಖಕ.
ಈತ ಭಾರತದಲ್ಲಿ ಪ್ರಚಲಿತವಿದ್ದ ಪರ್ಷಿಯನ್ ಹಾಗೂ ಸಂಸ್ಕ್ರತ ಶಿಕ್ಷಣ ಪದ್ಧತಿಗೆ ತಿಲಾಂಜಲಿಯನ್ನಿತ್ತು, ಇಂಗ್ಲೀಷ್ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದ ಹರಿಕಾರ. ತಾನು 1835ರಲ್ಲಿ ಇಂಗ್ಲೀಷ್ ಸರಕಾರಕ್ಕೆ ಒಪ್ಪಿಸಿದ "ಮಕಾಲೆ ಟಿಪ್ಪಣಿ" ಯಲ್ಲಿ, ಭಾರತದಾದ್ಯಂತ ಶಾಲೆಗಳಲ್ಲಿ ಇಂಗ್ಲಿಷನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡಬೇಕು ಎಂದು ಒತ್ತಿ ಹೇಳಿದ್ದಾನೆ.
ಮೆಕಾಲೆಯು ಕಾನೂನು ಪದವೀಧರನಾಗಿದ್ದರೂ ಕೂಡ ಸಕ್ರಿಯ ರಾಜಕಾರಣಕ್ಕೆ ಇಳಿದು ಬ್ರಿಟಿಷ್ ಪಾರ್ಲಿಮೆಂಟ್ ಸದಸ್ಯನಾಗಿದ್ದ. ಈಸ್ಟ್ ಇಂಡಿಯಾ ಕಂಪೆನಿಯ ಉಸ್ತುವಾರಿಯನ್ನು ನೋಡಿಕೊಳ್ಳುವ ಬ್ರಿಟಿಷ್ ಸರಕಾರದ ಪ್ರತಿನಿಧಿಯಾಗಿ ಕೆಲಸ ಮಾಡಿದ್ದ.
ತನ್ನ ಮೆಕಾಲೆ ಟಿಪ್ಪಣಿಯಲ್ಲಿ ಆತ ಈ ರೀತಿ ಸುಳ್ಳು ಹೇಳುತ್ತಾನೆ ಏನೆಂದರೆ "ಸಂಸ್ಕೃತ ಮತ್ತು ಅರಬಿಕ್ ನ ಶೈಕ್ಷಣಿಕ ಗುಣಮಟ್ಟ ಭಾರತದಲ್ಲಿ ತೀರಾ ಕಳಪೆಯಾಗಿದೆ. ನಮ್ಮ ಇಂಗ್ಲೀಷ್ ಭಾಷೆಯಲ್ಲಿ ಇರುವ ಶಿಕ್ಷಣ ಗುಣಮಟ್ಟಕ್ಕೆ ಇದನ್ನು ಯಾವ ಕಾರಣಕ್ಕೂ ಹೋಲಿಸಲಾಗದು. ಸಂಸ್ಕೃತ ಭಾಷೆಯ ಎಲ್ಲಾ ಪುಸ್ತಕಗಳನ್ನು ಒಟ್ಟುಗೂಡಿಸಿ, ಅದರಲ್ಲಿರುವ ಐತಿಹಾಸಿಕ ವಿಚಾರಗಳನ್ನು ಸಂಗ್ರಹ ಮಾಡಿದರೆ, ಇದು ನಮ್ಮೂರಿನ ಪ್ರಾಥಮಿಕ ಪಠ್ಯಪುಸ್ತಕಗಳಿಗಿಂತಲೂ ಕಡಿಮೆ ಎನ್ನುವುದರಲ್ಲಿ ಸಂಶಯವೇ ಇಲ್ಲ" ಎಂದು ಬರೆದಿದ್ದಾನೆ.
"ನಾವು ನಮ್ಮ ಇಂಗ್ಲಿಷ್ ಶಿಕ್ಷಣದ ಮೂಲಕ ಯಾವ ರೀತಿಯ ಜನಾಂಗವನ್ನು ಸೃಷ್ಟಿ ಮಾಡಬೇಕು ಎಂದರೆ ಅವರು ಬಣ್ಣದಲ್ಲಿ ಭಾರತೀಯರಾಗಿದ್ದು, ಸಂಸ್ಕೃತಿಯಲ್ಲಿ ಇಂಗ್ಲೀಷ್ ರಂತೆ ಇರಬೇಕು. ಆಗ ಮಾತ್ರ ನಾವು ಇಲ್ಲಿಯ ಮಿಲಿಯಗಟ್ಟಲೆ ಜನರನ್ನು ಸುಲಭದಲ್ಲಿ ಆಳಬಹುದು" ಎಂದು ಬರೆಯುತ್ತಾನೆ.
ಆಗಿನ ಗವರ್ನರ್ ಜನರಲ್ ಆಗಿರುವ ಲಾರ್ಡ್ ವಿಲಿಯಂ ಬೆಂಟಿಂಕ್ ಮೆಕಾಲೆಯ ಆಲೋಚನೆಗಳಿಗೆ ಮಾರುಹೋಗಿ ಇಂಗ್ಲಿಷ್ ಶಿಕ್ಷಣ ಪದ್ಧತಿಯನ್ನು 1835 ರಲ್ಲಿ ಜಾರಿಗೊಳಿಸುತ್ತಾನೆ.
ಇದಾದ ನಂತರ ಮೆಕಾಲೆಯು ಕಾನೂನು ಶಾಸ್ತ್ರದಲ್ಲಿ ಕೈ ಆಡಿಸುತ್ತಾನೆ. ಕಾನೂನು ಶಾಸ್ತ್ರಕ್ಕೆ ಸಂಬಂಧಪಟ್ಟಂತೆ ಭಾರತೀಯ ದಂಡ ಸಂಹಿತೆಯನ್ನು (ಇಂಡಿಯನ್ ಪಿನಲ್ ಕೋಡ್) ರಚಿಸಿದ ಕೀರ್ತಿ ಮೆಕಾಲೆ ಗೆ ಸಲ್ಲುತ್ತದೆ. ಆತನು ಆ ಕಾಲದಲ್ಲಿ ಬರೆದಿರುವ ದಂಡ ಸಂಹಿತೆಗೆ ಸಂಬಂಧಪಟ್ಟ ಹೆಚ್ಚಿನ ಅಂಶಗಳು ಭಾರತ ಸೇರಿದಂತೆ ಇತರ ಬ್ರಿಟಿಷ್ ವಸಾಹತುಗಳಲ್ಲಿ ಇವತ್ತಿಗೂ ಕೂಡ ಕಾನೂನಾಗಿ ಉಳಿದಿದೆ.
ಮೆಕಾಲೆಯು 1838 ರಲ್ಲಿ ಪುನಹ ಇಂಗ್ಲೆಂಡಿಗೆ ತೆರಳಿದ. ಅಲ್ಲಿ ಪುನಹ ಸಕ್ರಿಯ ರಾಜಕಾರಣಕ್ಕೆ ಇಳಿದು ಎಡಿನ್ಬರ್ಗ್ ಕ್ಷೇತ್ರದಿಂದ ಸಂಸತ್ ಸದಸ್ಯನಾದ. ಅವಿವಾಹಿತನಾಗಿದ್ದ ಮೆಕಾಲೆಯು ಹೃದಯಾಘಾತದಿಂದಾಗಿ 1859 ರ ಡಿಸೆಂಬರ್ 28ರಂದು ನಿಧನನಾದ.
ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 25
ಒಪ್ಪಂದದ ವಲಸೆ ಕಾರ್ಮಿಕ ಪದ್ಧತಿ:
(Indentured Labours)
ಬ್ರಿಟಿಷರ ರಾಕ್ಷಸಿ ಪ್ರವೃತ್ತಿಗೆ ಹಿಡಿದ ಕೈಗನ್ನಡಿ.
19ನೇ ಶತಮಾನದ ಆದಿಭಾಗದಲ್ಲಿ ಯುರೋಪಿನಾದ್ಯಂತ ಗುಲಾಮಗಿರಿಯ ವಿರುದ್ಧವಾದ ಜನರ ಕೂಗು ಮುಗಿಲುಮುಟ್ಟಿತು. ಬ್ರಿಟನ್ ಸರಕಾರವು 1833ರಲ್ಲಿ ಗುಲಾಮಗಿರಿಯನ್ನು ನಿಷೇಧಿಸುವ ಕಾನೂನು ಜಾರಿಗೆ ತಂದಿತು.
ಬ್ರಿಟಿಷ್ ವಸಾಹತುಗಳಾದ ಕೆರೆಬಿಯನ್ ದೇಶಗಳು, ದಕ್ಷಿಣ ಆಫ್ರಿಕಾ, ಮಾರಿಷಸ್, ಶ್ರೀಲಂಕಾ, ಮಲೇಷ್ಯಾ, ಮಯನ್ಮಾರ್, ಫ್ಯೂಜಿ ಮುಂತಾದ ದೇಶಗಳಲ್ಲಿರುವ ಬ್ರಿಟಿಷರ ಗುಲಾಮ ಕಾರ್ಮಿಕರನ್ನು ಬಿಡುಗಡೆ ಮಾಡಬೇಕಾಗಿತ್ತು. ಅಲ್ಲಿಯ ಕಬ್ಬಿನ ತೋಟಗಳು, ಮತ್ತಿತರ ಕೆಲಸಗಳಿಗೆ ಭಾರತದ ಕಾರ್ಮಿಕರನ್ನು ಒಪ್ಪಂದದ ಮೇರೆಗೆ ಕರೆದುಕೊಂಡು ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಬ್ರಿಟಿಷ್ ಸರಕಾರಕ್ಕೆ ಬಂತು.
ಆ ಕಾಲದಲ್ಲಿ ಭಾರತದ ಹಳ್ಳಿಗಳಲ್ಲಿರುವ ನಿರುದ್ಯೋಗ ಪರಿಸ್ಥಿತಿ, ಬಡತನ ಮುಂತಾದುವುಗಳಿಂದ ಯುವಕರು ವಿದೇಶಗಳಿಗೆ ಹೋಗಲು ತಯಾರಾದರು. 1838 ರಲ್ಲಿ ಪ್ರಪ್ರಥಮ ಬಾರಿಗೆ 25000 ಭಾರತೀಯ ಕೂಲಿಕಾರ್ಮಿಕರನ್ನು ಹೊತ್ತ ಹಡಗು ಮಾರಿಷಸ್ ಬಂದರಿಗೆ ಬಂದಿತು. ಇದು ಐದು ವರ್ಷದ ಒಪ್ಪಂದವಾಗಿದ್ದು, ಮತ್ತೆ ಪುನಹ ಐದೈದು ವರ್ಷಗಳವರೆಗೆ ನವೀಕರಿಸಬಹುದಾಗಿತ್ತು.
ಅಷ್ಟರಲ್ಲಿ ಇದು ಕೂಡ ಒಂದು ಗುಲಾಮಗಿರಿಯ ಪದ್ಧತಿ, ಇದನ್ನು ನಿಷೇಧಿಸಬೇಕು ಎಂದು ಭಾರತದಾದ್ಯಂತ ಜನನಾಯಕರ ಚಳುವಳಿ ಆರಂಭವಾಯಿತು. ಭಾರತದ ಈಸ್ಟ್ ಇಂಡಿಯಾ ಕಂಪನಿ 1839 ರಲ್ಲಿ ಈ ರೀತಿಯ ವಲಸೆಯನ್ನು ನಿಷೇಧಿಸಿತು. ಆದರೆ ಬ್ರಿಟಿಷರ ಬೇರೆಬೇರೆ ವಸಾಹತುಗಳಲ್ಲಿ ಕಾರ್ಮಿಕರ ಸಮಸ್ಯೆ ತೀವ್ರವಾಗಿ ಕಾಡಿದ್ದರಿಂದ ಅಲ್ಲಿಯ ಪ್ರಭಾವಿ ಉದ್ಯಮಿಗಳ ಒತ್ತಡಕ್ಕೆ ಮಣಿದು ಭಾರತದ ಈಸ್ಟ್ ಇಂಡಿಯಾ ಕಂಪನಿ ಪುನಹ ವಲಸೆಯನ್ನು 1842 ರಲ್ಲಿ ಪ್ರಾರಂಭಿಸಿತು. ಬಾಂಬೆ, ಕಲ್ಕತ್ತಾ, ಮದ್ರಾಸ್ ಮತ್ತಿತರ ಬಂದರುಗಳಿಂದ ಲಕ್ಷಾಂತರ ಜನರನ್ನು ಹೊತ್ತ ಹಡಗು ಬೇರೆ ಬೇರೆ ದೇಶಗಳಿಗೆ ತೆರಳಿತು.
ಅತಿ ಹೆಚ್ಚು ಭಾರತೀಯ ಕಾರ್ಮಿಕರು ವಲಸೆ ಹೋದ ದೇಶಗಳೆಂದರೆ - ಮಾರಿಷಸ್ (4.5 ಲಕ್ಷ), ಮಲಯಾ (4.0 ಲಕ್ಷ), ಗಿನಿಯ (2.38 ಲಕ್ಷ), ದಕ್ಷಿಣ ಆಫ್ರಿಕಾ (1.52 ಲಕ್ಷ) ಹಾಗೂ ಟ್ರಿನಿಡಾಡ್ ಮತ್ತು ಟೊಬೆಗೊ (1.4 ಲಕ್ಷ).
1845ರಿಂದ 1917 ರ ತನಕ ಸುಮಾರು 1.40 ಲಕ್ಷ ಭಾರತೀಯ ಕಾರ್ಮಿಕರು ವೆಸ್ಟ್ ಇಂಡೀಸಿನ ಟ್ರಿನಿಡಾಡ್ ದ್ವೀಪಕ್ಕೆ ಪ್ರಯಾಣಿಸಿದರು. ಅಲ್ಲಿಯ ಕಬ್ಬಿನ ತೋಟದಲ್ಲಿ ಕೂಲಿಕಾರ್ಮಿಕರಾಗಿ ದುಡಿದರು. ಪ್ರಾರಂಭದಲ್ಲಿ ಭಾರತದಿಂದ ಟ್ರಿನಿಡಾಡ್ ತಲುಪಲು ಸುಮಾರು ಐದು ತಿಂಗಳು ಬೇಕಾಗುತ್ತಿತ್ತು. 1869 ರಲ್ಲಿ ಸೂಯೆಜ್ ಕಾಲುವೆ ತೆರೆದ ನಂತರ ಪ್ರಯಾಣದ ಅವಧಿ ಮೂರು ತಿಂಗಳಿಗೆ ಇಳಿಯಿತು.
ಈ ತರಹದ ಒಪ್ಪಂದದ ಮೇಲೆ ಹೋದ ಕಾರ್ಮಿಕರ ಸ್ಥಿತಿ ಗುಲಾಮಗಿರಿಗಿಂತಲೂ ಕಡಿಮೆ ಇತ್ತು. ಸಾಮಾನ್ಯವಾಗಿ ಅವರ ತಿಂಗಳ ಸಂಬಳ ಗಂಡಸರಿಗಾದರೆ $4, ಹೆಂಗಸರಿಗೆ $3 ಇರುತ್ತಿತ್ತು. ಅವರು ಹೆಚ್ಚುವರಿ ದಿನಗೂಲಿಯನ್ನು ಕೇಳುವಂತಿಲ್ಲ. ಅನುಮತಿ ಇಲ್ಲದೆ ತಾವು ಕೆಲಸ ಮಾಡುವ ತೋಟವನ್ನು ಬಿಟ್ಟು ಹೊರಗೆ ಹೋಗುವಂತಿಲ್ಲ. ದಿನವೊಂದಕ್ಕೆ ಸುಮಾರು 9 ಗಂಟೆಗಳ ಕಠಿಣ ಶ್ರಮದ ದುಡಿಮೆ. ಈ ನಿಯಮಗಳನ್ನು ಪಾಲಿಸದೇ ಇದ್ದರೆ ತಿಂಗಳುಗಟ್ಟಲೆ ಜೈಲುವಾಸ ಖಾಯಂ.
1880ರಲ್ಲಿ ನಂತರ ಟ್ರಿನಿಡಾಡ್ ನಲ್ಲಿ ಸಕ್ಕರೆ ಉದ್ಯಮ ಕುಸಿಯತೊಡಗಿದಾಗ, ಭಾರತದಿಂದ ಬಂದ ಕಾರ್ಮಿಕರು ಸ್ವತಂತ್ರವಾಗಿ ಭೂಮಿಯನ್ನು ಖರೀದಿ ಮಾಡಿ ಉದ್ಯೋಗ ಮಾಡುವ ಅವಕಾಶ ಸಿಕ್ಕಿತು.
ಅಂದು ಅಕ್ಟೋಬರ್ 30, 1884. ಟ್ರಿನಿಡಾಡ್ ಇತಿಹಾಸದಲ್ಲಿ ಒಂದು ಕಪ್ಪು ದಿನ. ಭಾರತದಿಂದ ಆಗಮಿಸಿದ ಮುಸ್ಲಿಂ ಕಾರ್ಮಿಕರು ಮೊಹರಂ ಆಚರಣೆಯಲ್ಲಿ ತೊಡಗಿದ್ದರು. ಸ್ಥಳೀಯ ಬ್ರಿಟಿಷ್ ಪೊಲೀಸ್ ಮೊಹರಂ ಮೆರವಣಿಗೆಯನ್ನು ಭದ್ರತಾ ದೃಷ್ಟಿಯಿಂದ ನಿಷೇಧಿಸಿತ್ತು. ನಿಷೇಧವನ್ನು ಉಲ್ಲಂಘಿಸಿದ ಸುಮಾರು 9 ಸಾವಿರ ಜನರ ಮೆರವಣಿಗೆಯ ಮೇಲೆ ಯದ್ವಾತದ್ವಾ ಪೊಲೀಸರು ಗುಂಡು ಹಾರಿಸಿದರು. ಇದರಲ್ಲಿ ಅನೇಕರು ಸತ್ತು, ಸಾವಿರಾರು ಜನ ಗಾಯಾಳುಗಳಾದರು.
ಭಾರತದಲ್ಲಿ ಪಂಡಿತ್ ಮದನ್ ಮೋಹನ್ ಮಾಳವೀಯ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಮೋಹನದಾಸ್ ಗಾಂಧಿ ಇಬ್ಬರೂ ಈ ರೀತಿಯ ಅಕ್ರಮ ವಲಸೆಯನ್ನು ತಡೆಯಲು ಪ್ರಯತ್ನಿಸಿದರು. ಅಂತೂ 1914ರ ಜನವರಿ 21ರಂದು ನಡೆದ ಗಾಂಧಿ ಮತ್ತು ಸ್ಮರ್ಟ್ ಒಪ್ಪಂದದ ಪ್ರಕಾರ ಈ ರೀತಿಯ ವಲಸೆಗೆ ಕಡಿವಾಣ ಬಿದ್ದಿತ್ತು. 1917ರಲ್ಲಿ ಈ ಒಪ್ಪಂದ ಜಾರಿಗೆ ಬಂದಿತು.
1838 ರಿಂದ 1917ರ ವರೆಗೆ ಸುಮಾರು 16 ಲಕ್ಷ ಭಾರತೀಯ ಕಾರ್ಮಿಕ ವಲಸಿಗರು ಬೇರೆ ಬೇರೆ ದೇಶಗಳಲ್ಲಿ ಅನುಭವಿಸಿದ ನರಕಯಾತನೆಯ ಸ್ಪಷ್ಟ ಚಿತ್ರಣ ಇಂಗ್ಲೀಷರು ಬರೆದ ಇತಿಹಾಸ ಪುಸ್ತಕಗಳಲ್ಲಿ ಎಲ್ಲೂ ನಿಮಗೆ ದೊರಕುವುದಿಲ್ಲ.
ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 26
ಮೊದಲ ಆಂಗ್ಲೋ ಸಿಖ್ ಯುದ್ಧ:
ಕಾಶ್ಮೀರವನ್ನು ಕಳೆದುಕೊಂಡ ಸಿಖ್ಖರು.
ಪಂಜಾಬಿನ ಹುಲಿ ಎಂದೇ ಕರೆಯಲ್ಪಡುವ ರಾಜ ರಣಜಿತ್ ಸಿಂಗ್ ಸಿಡುಬು ರೋಗಕ್ಕೆ ತುತ್ತಾಗಿ ತನ್ನ ಒಂದು ಕಣ್ಣನ್ನು ಕಳೆದುಕೊಂಡರೂ ಕೂಡ, ತನ್ನ ತಂದೆಯೊಂದಿಗೆ ಹತ್ತನೇ ವಯಸ್ಸಿನಲ್ಲಿ, 1790 ರಲ್ಲಿ ಆಫ್ಘನ್ನರ ವಿರುದ್ಧ ಹೋರಾಡಿದ ಧೀರ ಬಾಲಕ.
ಈತನು ಇಂಗ್ಲಿಷರೊಂದಿಗೆ ಸ್ನೇಹವನ್ನು ಇಟ್ಟುಕೊಂಡರೂ ಕೂಡ ಕೆಲವೊಂದು ಭೂಪ್ರದೇಶವನ್ನು ಇಂಗ್ಲಿಷರಿಗೆ ಬಿಟ್ಟುಕೊಟ್ಟು, ಉಳಿದ ಪ್ರದೇಶಗಳಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಹೋಗುತ್ತಾನೆ. ಪೇಶಾವರ ಪ್ರಾಂತ್ಯ ಹಾಗೂ ಜಮ್ಮು-ಕಾಶ್ಮೀರ ಗಳನ್ನು ಕೂಡ ಈತನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡ. ಇದಕ್ಕಾಗಿ ಯುರೋಪ್ ಮತ್ತು ಅಮೆರಿಕದಿಂದ ಬಾಡಿಗೆ ಸೈನಿಕರನ್ನು ತಂದು ತನ್ನಲ್ಲಿ ಇರಿಸಿಕೊಂಡಿದ್ದ.
1839 ರಲ್ಲಿ ರಾಜ ರಣಜಿತ್ ಸಿಂಗ್ ನಿಧನ ಹೊಂದಿದ ನಂತರ ಆತನ ಮಗ ಖಾರಕ್ ಸಿಂಗ್ ಅಧಿಕಾರ ವಹಿಸಿಕೊಂಡ. ಅಧಿಕಾರವಹಿಸಿಕೊಂಡ ಆರೇ ತಿಂಗಳಲ್ಲಿ ಈತನಿಗೆ ಯಾರೋ ಆಹಾರದಲ್ಲಿ ಸೀಸ ಮತ್ತು ಪಾದರಸವನ್ನು ಸೇರಿಸಿ ವಿಷವುಣಿಸಿದರು.
ಈತನು ಸಾಯುವ ಆರು ತಿಂಗಳ ಮೊದಲು ಇವನ ಮಗ ಕನ್ವರ್ಸಿಂಗ್ ಅಧಿಕಾರ ವಹಿಸಿಕೊಂಡಿದ್ದ. ತಂದೆಯ ಶವಸಂಸ್ಕಾರ ಮಾಡಿ ವಾಪಸು ಬರುವಾಗ ಲಾಹೋರ್ ಕೋಟೆಯ ಗೋಪುರವೊಂದು ರಹಸ್ಯ ರೀತಿಯಲ್ಲಿ ಇವನ ತಲೆಯ ಮೇಲೆ ಬಿದ್ದು ಇವನು ಕೂಡ ಸಾವನ್ನಪ್ಪಿದ. ನಂತರ ಅಧಿಕಾರ ವಹಿಸಿಕೊಂಡವನೇ ಮಹಾರಾಜ ರಣಜಿತ್ ಸಿಂಗ್ ನ ಹಿರಿಯ ಮಗ ಶೇರ್ ಸಿಂಗ್.
ಈ ಎಲ್ಲ ಬೆಳವಣಿಗೆಗಳನ್ನು ದೂರದಿಂದ ನೋಡುತ್ತಿದ್ದ ಬ್ರಿಟಿಷ್ ಅಧಿಕಾರಿಗಳು, ಸಟ್ಲೆಜ್ ನದಿಯ ಹತ್ತಿರದ ಫಿರೋಜಪುರ ನಗರದಲ್ಲಿ ತಮ್ಮ ಸೇನೆಯನ್ನು ಬಲಪಡಿಸಲು ಪ್ರಾರಂಭಿಸಿದರು. ಆಗ ಪಂಜಾಬ್ ಪ್ರಾಂತ್ಯವು ಅತ್ಯಂತ ಸಂಪದ್ಭರಿತವಾದ ಪ್ರಾಂತ್ಯವಾಗಿತ್ತು, ಮಾತ್ರವಲ್ಲದೆ ಪ್ರಪಂಚದಲ್ಲಿಯ ಅತ್ಯಂತ ದೊಡ್ಡ ಕೊಹಿನೂರ್ ವಜ್ರವು ಅವರಲ್ಲಿತ್ತು.
1845ರ ಡಿಸೆಂಬರ್ 11ರಂದು ಮೊದಲನೇ ಆಂಗ್ಲೋ ಸಿಖ್ ಯುದ್ಧ ಪ್ರಾರಂಭವಾಯಿತು. ಇಂಗ್ಲಿಷ್ ಪಡೆಯ ನೇತೃತ್ವವನ್ನು ಬಂಗಾಳದ ಸೇನಾ ಮುಖ್ಯಸ್ಥ ಸರ್ ಹ್ಯೂ ಗೌಗ್ ವಹಿಸಿಕೊಂಡರೆ, ಸಿಖ್ ಪಡೆಯನ್ನು ರಾಜಾ ಲಾಲ್ ಸಿಂಗ್ ಮುನ್ನಡೆಸುತ್ತಿದ್ದ. ಸೇನಾ ಮುಖ್ಯಸ್ಥ ರಾಜಾ ಲಾಲ್ ಸಿಂಗ್ ಬ್ರಿಟಿಷರೊಂದಿಗೆ ಸೇರಿಕೊಂಡು ಕೆಲವೊಂದು ರಹಸ್ಯ ಮಾಹಿತಿಯನ್ನು ಅವರಿಗೆ ತಿಳಿಸುತ್ತಿದ್ದ.
ಯುದ್ಧವು 1846ರ ಫೆಬ್ರವರಿ ತನಕ ಮುಂದುವರಿದು, ನಂತರ ಸಿಕ್ಖರು ಸೋಲೊಪ್ಪಿಕೊಂಡರು. 1846ರ ಮಾರ್ಚ್ 9ಕ್ಕೆ ನಡೆದ ಲಾಹೋರ್ ಒಪ್ಪಂದದಲ್ಲಿ ಸಿಕ್ಖರು ತಮ್ಮ ಕೆಲವೊಂದು ಭೂಪ್ರದೇಶವನ್ನು ಇಂಗ್ಲಿಷರಿಗೆ ಬಿಟ್ಟುಕೊಡಬೇಕಾಯಿತು. ಇವುಗಳಲ್ಲಿ ಪ್ರಮುಖವಾದದ್ದು ಬಿಯಾಸ್ ಮತ್ತು ಸಟ್ಲೆಜ್ ನದಿಗಳ ಮಧ್ಯದಲ್ಲಿರುವ ಫಲವತ್ತಾದ ಪ್ರದೇಶ, ಅಫ್ಘಾನಿಸ್ತಾನದ ಹಜ್ಹರಾ ಹಾಗೂ ಕಾಶ್ಮೀರಗಳು ಒಳಗೊಂಡಿವೆ. ಇದಲ್ಲದೆ ಸಿಖ್ಖರು 1.30 ಕೋಟಿ ರೂಪಾಯಿಗಳ ಯುದ್ಧದ ದಂಡವನ್ನು ಕೂಡ ಕೊಡಬೇಕಾಯಿತು.
ನಂತರ ಕಾಶ್ಮೀರದ ಗುಲಾಬ್ ಸಿಂಗ್ 75 ಲಕ್ಷ ರೂಪಾಯಿಗಳನ್ನು ಕೊಟ್ಟು, ಕಾಶ್ಮೀರ ಪ್ರದೇಶವನ್ನು ಬ್ರಿಟಿಷರಿಂದ ಖರೀದಿ ಮಾಡಿದ ಹಾಗೂ ಕಾಶ್ಮೀರಕ್ಕೆ ಅವನೇ ರಾಜನಾದ.
ಸ್ವಾತಂತ್ರ್ಯದ ಆ ಕ್ಷಣಗಳು: ಭಾಗ 27
ಸಿಕ್ಖರ ಅದಃಪತನ:
ಎರಡನೇ ಆಂಗ್ಲೋ ಸಿಖ್ ಯುದ್ಧ.
ಮೊದಲ ಆಂಗ್ಲೋ ಸಿಖ್ ಯುದ್ಧವು 1845ರಿಂದ 1846 ರ ವರೆಗೆ ನಡೆಯಿತು. ಈ ಯುದ್ಧದಲ್ಲಿ ಸಿಖ್ಖರು ಇಡೀ ಜಮ್ಮು ಮತ್ತು ಕಾಶ್ಮೀರ ಪ್ರಾಂತ್ಯವನ್ನು ಕಳೆದುಕೊಳ್ಳಬೇಕಾಯಿತು. ನಂತರ ಅಧಿಕಾರ ವಹಿಸಿಕೊಂಡ ಖಾರಕ್ ಸಿಂಗ್ ಹಾಗೂ ಕನ್ವರ್ಸಿಂಗ್ ಹೆಚ್ಚು ಕಾಲ ಆಡಳಿತ ನಡೆಸಲಿಲ್ಲ.
1843 ರ ಸೆಪ್ಟೆಂಬರ್ ನಲ್ಲಿ ರಾಜ ರಣಜಿತ್ ಸಿಂಗ್ ನ ಕೊನೆಯ ಮಗ ಐದು ವರ್ಷ ಬಾಲಕ ದುಲೀಪ್ ಸಿಂಗ್ ನನ್ನು ಸಿಂಹಾಸನದ ಮೇಲೆ ಕುಳ್ಳಿಸಿ, ಅವನ ತಾಯಿ ಮಹಾರಾಣಿ ಜಿಂದ್ ಕೌರ್ ಆಡಳಿತ ನಡೆಸಿದಳು. ಆದರೆ ಆಡಳಿತದ ಚುಕ್ಕಾಣಿ ಮಾತ್ರ ಬ್ರಿಟಿಷ್ ಬ್ರಿಗೇಡಿಯರ್ ಜನರಲ್ ಸರ್ ಹೆನ್ರಿ ಲಾರೆನ್ಸ್ ಕೈಯಲ್ಲಿತ್ತು. ರಾಣಿ ಜಿಂದ್ ಕೌರ್ ಹಾಗೂ ಹೆನ್ರಿ ಲಾರೆನ್ಸ್ ಮಧ್ಯ ಪೂರ್ಣವಾದ ಆಡಳಿತಕ್ಕಾಗಿ ತಿಕ್ಕಾಟ ನಡೆಯುತ್ತಿತ್ತು. ಕೊನೆಗೆ ಆಕೆಯನ್ನು ಗಡಿಪಾರು ಮಾಡಲಾಯಿತು.
ಪಂಜಾಬಿನ ಮುಲ್ತಾನ್ ಪ್ರಾಂತ್ಯವನ್ನು ಹಿಂದೂ ವೈಸರಾಯ್ ದಿವಾನ್ ಮುಲ್ರಾಜ್ ನೋಡಿಕೊಳ್ಳುತ್ತಿದ್ದ. ಬ್ರಿಟಿಷರಿಗೂ ಈತನಿಗೂ ವೈಮನಸ್ಸು ಹುಟ್ಟಿದಾಗ, ಅಧಿಕಾರವನ್ನು ಬಿಟ್ಟುಕೊಡುವಂತೆ ಹೇಳಲು ಬಂದ ಲೆಫ್ಟಿನೆಂಟ್ ಪ್ಯಾಟ್ರಿಕ್ ಆಗ್ನ್ಯೂ ಮತ್ತು ಲೆಫ್ಟಿನೆಂಟ್ ವಿಲಿಯಂ ಅಂಡರ್ಸನ್ ಇವರನ್ನು ಕೊಲೆ ಮಾಡಲಾಯಿತು.
ಲೆಫ್ಟಿನೆಂಟ್ ಪ್ಯಾಟ್ರಿಕ್ ಆಗ್ನ್ಯೂ ತಲೆಯನ್ನು ಕಡಿದು ರುಂಡವನ್ನು ಬ್ರಿಟಿಷ್ ಅಧಿಕಾರಿಗಳಿಗೆ ಕಳುಹಿಸಿಕೊಡಲಾಯಿತು. ಇದರಿಂದ ಈಸ್ಟ್ ಇಂಡಿಯಾ ಕಂಪನಿ ಸೇನೆ ಹಾಗೂ ಅವರಿಗೆ ನಿಷ್ಠರಾಗಿರುವ ಸಿಖ್ ಸೈನಿಕರು ದಂಗೆಯನ್ನು ಪ್ರಾರಂಭಿಸಿದರು. ಇದು ಎರಡನೇ ಆಂಗ್ಲೋ ಸಿಕ್ಖ್ ಯುದ್ಧಕ್ಕೆ ಕಾರಣವಾಯಿತು. 1849ರ ಮಾರ್ಚ್ ನಲ್ಲಿ ಸಿಕ್ಖ್ ಸೈನ್ಯವು ಪೂರ್ಣವಾಗಿ ಬ್ರಿಟಿಷರಿಗೆ ಶರಣಾಯಿತು.
ಬಾಲಕ ದುಲೀಪ್ ಸಿಂಗ್ ನನ್ನು ಬ್ರಿಟಿಷರು 1849 ರಲ್ಲಿ ಅಪಹರಿಸಿ ಇಂಗ್ಲೆಂಡಿಗೆ ಕೊಂಡೊಯ್ದರು. ಆತನನ್ನು ಬ್ರಿಟಿಷ್ ರಾಣಿ ವಿಕ್ಟೋರಿಯಾ ಸಾಕಿ ಬೆಳೆಸಿದಳು. ದುಲೀಪ್ ಸಿಂಗ್ ಹನ್ನೆರಡು ವರ್ಷಗಳ ನಂತರ ಭಾರತಕ್ಕೆ ಬಂದಾಗ ಕಲ್ಕತ್ತಾದಲ್ಲಿ ತಾಯಿ ಜಿಂದ್ ಕೌರ್ ಳನ್ನು ಭೇಟಿಯಾದ. ಆಕೆಯೊಂದಿಗೆ ಪುನಹ ದುಲೀಪ್ ಸಿಂಗ್ ಇಂಗ್ಲೆಂಡಿಗೆ ವಾಪಸಾದ.
ಮಹಾರಾಜ ದುಲೀಪ್ ಸಿಂಗ್ 1893 ರಲ್ಲಿ ತನ್ನ 55ನೇ ವಯಸ್ಸಿನಲ್ಲಿ ಪ್ಯಾರಿಸ್ಸಿನಲ್ಲಿ ನಿಧನಹೊಂದಿದ. ಈತನ ಕುದುರೆಯ ಮೇಲೆ ಕುಳಿತ ಕಂಚಿನ ವಿಗ್ರಹವನ್ನು 1999 ರಲ್ಲಿ ಇಂಗ್ಲೆಂಡಿನ ನೋರ್ ಫೋಕ್ ಹತ್ತಿರ ಇರುವ ತೇಟ್ ಫೋರ್ಡ್ ದ್ವೀಪದಲ್ಲಿ ಪ್ರಿನ್ಸ್ ಚಾರ್ಲ್ಸ್ ಉದ್ಘಾಟಿಸಿದರು.
ಲೇಖನ ಮಾಲಿಕೆ ಮುಂದುವರಿಯಲಿದೆ..
•ಡಾ. ಉಮೇಶ್ ಪುತ್ರನ್
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕುಕೇಂದ್ರದ ಹೃದಯಭಾಗದಲ್ಲಿರುವ ಚಿನ್ಮಯಿ ಆಸ್ಪತ್ರೆಯ ವೈಧ್ಯಕೀಯ ನಿರ್ದೇಶಕರಾದ ಲೇಖಕರು ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ವಿಧ್ಯಾಭ್ಯಾಸವನ್ನು ಗಂಗೊಳ್ಳಿಯಲ್ಲಿ ಪೂರೈಸಿ ವೈದ್ಯಕೀಯ ಶಿಕ್ಷಣವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಪೂರೈಸಿರುತ್ತಾರೆ. ಸಾಹಿತ್ಯಾಸಕ್ತರಾದ ಇವರು ಕುಂದಾಪುರ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷಗಿಯೂ ಸೇವೆ ಸಲ್ಲಿಸಿದ್ದಾರೆ.