ಡಿಸೆಂಬರ್ 9ರಿಂದ 12ರತನಕ ಕುಂದಾಪುರದಲ್ಲಿ 10ನೇಯ ವರ್ಷದ 'ಕಾರ್ಟೂನುಹಬ್ಬ' ನಡೆಯಲಿದೆ. ಈ ಸಂದರ್ಭದಲ್ಲಿ ಕಾರ್ಟೂನು ಹಬ್ಬಕ್ಕೆ ಶುಭ ಹಾರೈಸಿ ಕುಂದಾಪುರದ ಕೋಡಿಯ ಬೀಚ್ ನಲ್ಲಿ ಜಿಲ್ಲೆಯ ಖ್ಯಾತ ಸ್ಯಾಂಡ್ ಆರ್ಟ್ ಯುವ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್, ಉಜ್ವಲ್ ನಿಟ್ಟೆ ತಂಡ 'ಕಾರ್ಟೂನುಹಬ್ಬ-10’ ಮರಳುಶಿಲ್ಪವನ್ನು ರಚಿಸಿದ್ದಾರೆ.
ಕಳೆದ ಹತ್ತಾರು ವರ್ಷಗಳಿಂದ ಜಿಲ್ಲೆಯಾದ್ಯಂತ ವಿವಿಧ ಸ್ಥಳಗಳಲ್ಲಿ ಮರಳು ಶಿಲ್ಪ (Sand Sculpture) ರಚಿಸುವ ಮೂಲಕ ಜನಪ್ರಿಯತೆ ಗಳಿಸಿರುವ ಹರೀಶ್ ಸಾಗಾ ಮತ್ತವರ ತಂಡ ಈ ಬಾರಿ 'ಕಾರ್ಟೂನು ಹಬ್ಬದ 10ರ ಸಂಭ್ರಮ'ದಲ್ಲಿ ಮರಳುಶಿಲ್ಪ ರಚಿಸುವ ಮೂಲಕ ಕೋಡಿ ಬೀಚ್‌ನಲ್ಲಿನ ಪ್ರವಾಸಿಗರಲ್ಲಿ ಉಲ್ಲಾಸವನ್ನು ಮೂಡಿಸಿದ್ದಾರೆ. ಈ ಮರಳುಶಿಲ್ಪದ ಮೇಲ್ತುದಿಯಲ್ಲಿ ಕುಂದೇಶ್ವರನನ್ನು ಹೋಲುವ ಕಲಾಕೃತಿ ಇದ್ದರೆ ಎಡಬಲಗಳಲ್ಲಿ ವಾದ್ಯ ಊದುವ ಹಾಗೂ ಡೋಲು ಬಡಿಯುತ್ತಿರುವ ಕಲಾಕೃತಿ, ಕಾರ್ಟೂನು ಹಬ್ಬ- 10 ಬರಹ ಮತ್ತು ನಡುವಿನಲ್ಲಿ ಕಾರ್ಟೂನು ಮುಖಗಳನ್ನು ರಚಿಸುವ ಮೂಲಕ ಮೆರುಗು ನೀಡಲಾಗಿದೆ.
ಈ ಸಂಧರ್ಭದಲ್ಲಿ ವ್ಯಂಗ್ಯಚಿತ್ರಕಾರರಾದ ಸತೀಶ್ ಆಚಾರ್ಯ, ಚಂದ್ರಶೇಖರ ಶೆಟ್ಟಿ, ಕೇಶವ ಸಸಿಹಿತ್ಲು ಮತ್ತು ಕರ್ಟೂನು ಹಬ್ಬ ತಂಡದ ಮುಖ್ಯಸ್ಥ ಮ್ಯಾನರ್ ರವೀಂದ್ರ ಹಾಗೂ ರಶೀದ್ ಉಪಸ್ಥಿತರಿದ್ದು ಹರೀಶ್ ಸಾಗಾ ತಂಡಕ್ಕೆ ಶುಭ ಹಾರೈಸಿದರು.
ಗುರುವಾರ ಬೆಳಿಗ್ಗೆ 10 ಗಂಟೆಗೆ ಆರಂಭಗೊಂಡ ಮರಳುಶಿಲ್ಪ ತಯಾರಿ ಕಾರ್ಯ ಮಧ್ಯಾಹ್ನ 2.30 ರ ಸುಮಾರಿಗೆ ಸಂಪೂರ್ಣಗೊಂಡಿತ್ತು. ಸಂಜೆ 5ರ ನಂತರ ಬೀಚ್ ಪ್ರೇಮಿಗಳು ಸಾಲುಸಾಲಾಗಿ ಫೋಟೋ ಹೊಡೆಸಿಕೊಂಡು, ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುವ ಮೂಲಕ ಸಂಭ್ರಮಿಸಿದರು.