ಉಡುಪಿಯ ಶೆಫಿನ್ಸ್ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಇವರು ಸ್ಪೋಕನ್ ಇಂಗ್ಲೀಷ್ ಕಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದ ಅಂಗವಾಗಿ ಅತಿಥಿ ಹಾಗೂ ಗೌರವ ಶಿಕ್ಷಕಿಯರಿಗೆ ಏರ್ಪಡಿಸಿದ್ದ ಉಚಿತ ಸ್ಪೋಕನ್ ಇಂಗ್ಲೀಷ್ ತರಬೇತಿ ಕಾರ್ಯಕ್ರಮದಲ್ಲಿ ವಾಡಿಕೆಯಂತೆ ಈ ಬಾರಿ ಸಹ ಶೆಫಿನ್ಸ್ ಇನ್ನೋವೇಟಿವ್ ಟೀಚಿಂಗ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕುಂತಳನಗರ ಭಾರತೀ ಹಿರಿಯ ಪ್ರಾಥಮಿಕ ಶಾಲೆಯ ಗೌರವ ಶಿಕ್ಷಕಿ ಶ್ರೀಮತಿ ಜೋಸ್ಲಿನ್ ಲಿಝಿ ಡಿ’ಸೋಜ ಇವರು ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಪ್ರತೀ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸುತ್ತಿರುವ ಶಿಕ್ಷಕಿಯರು ತಾವು ಶಾಲೆಗಳಲ್ಲಿ ಕಲಿಸುತ್ತಿರುವ ಅದೇ ವಿಷಯದ ಮೇಲೆ ಕಿರು ತರಗತಿಯನ್ನು ನಡೆಸಿ, ಅತ್ಯಂತ ಕ್ರಿಯಾಶೀಲವಾಗಿ ತರಗತಿಯನ್ನು ಮಾಡಿದ ಶಿಕ್ಷಕಿಗೆ ಪ್ರಶಸ್ತಿ ಕೊಡಲಾಗುತ್ತದೆ. ಇದರಲ್ಲಿನ ವಿಶೇಷತೆಯೇನೆಂದರೆ ಭಾಗವಹಿಸುತ್ತಿರುವ ಶಿಕ್ಷಕಿಯರೇ ತಮ್ಮ ಸಹ ಶಿಕ್ಷಕಿಗೆ ಅಂಕಗಳನ್ನು ಹಾಕಿ ತಮ್ಮೊಳಗಿಂದ ಒಬ್ಬರನ್ನು ಈ ಪ್ರಶಸ್ತಿಗೆ ಆರಿಸುತ್ತಾರೆ.
ಈವರೆಗೆ ಶೆಫಿನ್ಸ್ ನ ಒಟ್ಟು 3 ಬ್ಯಾಚ್ ಗಳು ನಡೆದಿದ್ದು, ಎಲ್ಲಾ ಬ್ಯಾಚುಗಳಲ್ಲ್ಲಿಯೂ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿತ್ತು.
ಇದೀಗ 4ನೇಯ ಬ್ಯಾಚಿನಲ್ಲಿಯೂ ಸಹ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಉಡುಪಿಯ ಕುಂತಳನಗರ ಭಾರತೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 12 ವರ್ಷಗಳಿಂದ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಜೋಸ್ಲಿನ್ ಲಿಝಿ ಡಿ’ಸೋಜ ಇವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸರಳ ಸಮಾರಂಭದಲ್ಲಿ ಶೆಫಿನ್ಸ್ ನಿರ್ದೇಶಕ ಮನೋಜ್ ಕಡಬ, ತರಬೇತಿ ಸಂಯೋಜಕಿ ಅರ್ಪಿತಾ ಬ್ರಹ್ಮಾವರ ಮತ್ತಿತರರು ಉಪಸ್ಥಿತರಿದ್ದರು.