ಕೇಂದ್ರದ ನರೇಂದ್ರ ಮೋದಿ ಸರಕಾರವು ಮುಂದಿನ ಲೋಕಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಇನ್ನೂ ಪೂರ್ಣಗೊಂಡಿಲ್ಲದ ಅಪೂರ್ಣಾವಸ್ಥೆಯಲ್ಲಿರುವ ಶ್ರೀರಾಮ ಮಂದಿರದ ಕಟ್ಟಡದ ಉದ್ಘಾಟನೆಯನ್ನು ಮಾಡಲು ಹೊರಟಿರುವುದು ಧರ್ಮಶಾಸ್ತ್ರಕ್ಕೆ ಮಾಡುವ ಅಪಚಾರ ಎಂದು ಹಿಂದೂ ಮಹಾಸಭಾ ಕರ್ನಾಟಕದ ಸಂಸ್ಥಾಪಕ ರಾಜೇಶ್ ಪವಿತ್ರನ್ ಅಪಾದಿಸಿದ್ದಾರೆ.
ಮಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜೇಶ್ ರವರು, ಶಾಸ್ತ್ರದ ವಿಚಾರದಲ್ಲಿ ಭಂಡತನ ಪ್ರದರ್ಶಿಸಿ, ಮಂತ್ರಾಕ್ಷತೆಯನ್ನು ಶಾಸ್ತ್ರದ ಪ್ರಕಾರ ಮಾಡದೇ, ಇಷ್ಟದ ಪ್ರಕಾರ ಸೃಷ್ಟಿಸಿಕೊಂಡು ಕೇವಲ ಬೂಟಾಟಿಕೆಯ ರಾಜಕೀಯ ಮಾಡಿದರೆ ಶ್ರೀರಾಮನ ಶಾಪ ತಟ್ಟದೆ ಇರದು. ಪೂರ್ಣಪ್ರಮಾಣದಲ್ಲಿ ದೇವಸ್ಥಾನದ ನಿರ್ಮಾಣ ಕಾರ್ಯ ಆಗುವ ಮೊದಲೇ ಕೇವಲ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಮಮಂದಿರದ ಉದ್ಘಾಟನೆ ಮಾಡಲು ಹೊರಟಿರುವುದು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದರ. ಹಿಂದೂ ಧರ್ಮಶಾಸ್ತ್ರಕ್ಕೆ ಅಪಚಾರ ಆಗಿರುವುದರಿಂದ ಇದನ್ನು ಹಿಂದೂ ಮಹಾಸಭಾ ಬಲವಾಗಿ ಖಂಡಿಸುತ್ತದೆ ಎಂದಿದ್ದಾರೆ.
ಮೊಘಲ್, ಫೋರ್ಚುಗೀಸ್ ಕಾಲದಲ್ಲಿ ಶಂಕರಾಚಾರ್ಯರ ಪೀಠದ ಮೇಲೆ ನಿರಂತರ ಆಕ್ರಮಣಗಳು ನಡೆದಿವೆ. ಇದೀಗ ಕೇಂದ್ರದ ಬಿಜೆಪಿ ಸರ್ಕಾರವೂ ಶಂಕರಾಚಾರ್ಯರುಗಳನ್ನು ಅವಹೇಳನ ಮಾಡುವಂತಹ ಕಾರ್ಯವನ್ನು ಮಾಡುತ್ತಿದೆ. ಶ್ರೀರಾಮ ಮಂದಿರ ನಿರ್ಮಾಣದ ವಿಚಾರವನ್ನು ಸಂಭ್ರಮಿಸಬೇಕಾದ ಈ ಕಾಲಘಟ್ಟದಲ್ಲಿ ಅದಕ್ಕಾಗಿಯೇ ಹೋರಾಟ ಮಾಡಿದವರನ್ನೇ ಬದಿಗೊತ್ತಿರುವುದು ಮತ್ತು ಸ್ವತಃ ಶ್ರೀರಾಮಚಂದ್ರನನ್ನು ಚುನಾವಣಾ ವಿಷಯವನ್ನಾಗಿ ಮಾಡಿರುವುದು ಒಪ್ಪುವಂತಹದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಮುಂಚೂಣಿ ಹೋರಾಟದಲ್ಲಿದ್ದ ಹಿಂದೂ ಮಹಾಸಭಾ, ನಿರ್ಮೋಹಿ ಅಖಾಡ, ಸಾಧು ಸಂತರ ವ್ಯವಸ್ಥೆಯನ್ನು ದೂರವಿಟ್ಟು ಕೇಂದ್ರ ಸರ್ಕಾರ ರಾಮಮಂದಿರವನ್ನು ಉದ್ಘಾಟಿಸಲು ಹೊರಟಿದೆ. ಅಯೋಧ್ಯೆ ವಿವಾದದ ಮೂಲ ವಕಾಲತ್ತುದಾರ ಮತ್ತು ಹಿಂದೂ ಮಹಾಸಭಾಕ್ಕೆ ರಾಮಮಂದಿರ ಉದ್ಘಾಟನೆಗೆ ಆಹ್ವಾನವೇ ಇಲ್ಲ. ಹಿಂದೂ ವಿರೋಧಿ ನಡುವಳಿಕೆಯಿಂದಲೇ ಬಿಜೆಪಿ ಕರ್ನಾಟಕದಲ್ಲಿ ಸೋತಿರುವುದು. ಈಗ ಪ್ರಭು ಶ್ರೀರಾಮನ ವಿಚಾರದಲ್ಲಿ ರಾಜಕೀಯ ಮಾಡಿದರೆ ಅದನ್ನು ಹಿಂದೂ ಮಹಾಸಭಾ ಒಪ್ಪುವುದಿಲ್ಲ ಎಂದು ರಾಜೇಶ್ ಪವಿತ್ರನ್ ಹೇಳಿದ್ದಾರೆ.
ದೇಗುಲದ ಕಟ್ಟಡ ನಿರ್ಮಾಣ ಪೂರ್ಣವಾಗದ ಗರ್ಭಗುಡಿಯಲ್ಲಿ ದೇವರ ಪ್ರತಿಷ್ಠೆ, ಪ್ರಾಣ ಪ್ರತಿಷ್ಠೆ, ಶಿಖರ ಪ್ರತಿಷ್ಠೆಯೂ ಸೇರಿ ಯಾವುದೇ ವಿಧಿವಿಧಾನಗಳನ್ನು ಹಿಂದೂ ಧರ್ಮಶಾಸ್ತ್ರ ಒಪ್ಪುವುದಿಲ್ಲ. ಕೇವಲ ಚುನಾವಣೆಯ ಕಾರಣಕ್ಕಾಗಿ ಆಗಮಾದಿ ವಾಸ್ತು ಧರ್ಮ ಶಾಸ್ತ್ರಗಳಿಗೆ ವಿರುದ್ಧವಾಗಿ ಅವರವಸರವಾಗಿ ದೇವರ ಪ್ರತಿಷ್ಠೆ ದೇಶಕ್ಕೆ ಗಂಡಾಂತರ ತಂದೀತು ಎಂದು ನಾಲ್ಕು ಪೀಠಗಳ (ಉತ್ತರಾಖಂಡದ ಜೋಶಿಮಠ, ಗುಜರಾತಿನ ದ್ವಾರಕಾ ಮಠ, ಒಡಿಶಾದ ಪುರಿಮಠ ಹಾಗೂ ಕರ್ನಾಟಕದ ಶೃಂಗೇರಿಮಠ ) ಶಂಕರಾಚಾರ್ಯರುಗಳಾದಿಯಾಗಿ ದೇಶದ ಹಲವೊಂದು ಪ್ರಮುಖ ಮಠಾಧಿಪತಿಗಳು, ಸಂತರು, ಧಾರ್ಮಿಕ ಚಿಂತಕರು ರಾಮಮಂದಿರ ನಿರ್ಮಾಣ ಸಮಿತಿಯನ್ನು ಈಗಾಗಲೇ ಎಚ್ಚರಿಸಿದ್ದನ್ನು ನಾವು ಈ ಸಂಧರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ.