ಹಿಂದೂ ಧರ್ಮಸಂಸ್ಕೃತಿಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿರುವ ಅಪೂರ್ಣ ವಾಸ್ತುವಿನ ಕಟ್ಟಡದೊಳಗೆ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯನ್ನು ಕಾಂಗ್ರೆಸ್ ವಿರೋಧಿಸುತ್ತದೆಯೇ ಹೊರತು ರಾಮ ಮಂದಿರ ನಿರ್ಮಾಣವನ್ನಲ್ಲ. 'ಅಷ್ಟಕ್ಕೂ ಅಯೋದ್ಯೆಯಲ್ಲಿ ಶ್ರೀ ರಾಮನ ದೇಗುಲಕ್ಕೆ ಶಿಲಾನ್ಯಾಸ ಗೈದದ್ದೇ ಕಾಂಗ್ರೆಸ್' ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
ದೇಗುಲ ನಿರ್ಮಾಣ ಪೂರ್ಣವಾಗದ ಗರ್ಭಗುಡಿಯಲ್ಲಿ ದೇವರ ಪ್ರತಿಷ್ಠೆ, ಪ್ರಾಣ ಪ್ರತಿಷ್ಠೆ, ಶಿಖರ ಪ್ರತಿಷ್ಠೆಯೂ ಸೇರಿ ಯಾವುದೇ ವಿಧಿವಿಧಾನಗಳನ್ನು ಹಿಂದೂ ಧರ್ಮಶಾಸ್ತ್ರ ಒಪ್ಪುವುದಿಲ್ಲ. ಆಗಮಾದಿ ವಾಸ್ತು ಧರ್ಮ ಶಾಸ್ತ್ರಗಳಿಗೆ ವಿರುದ್ಧವಾಗಿ ಅವರವಸರವಾಗಿ ದೇವರ ಪ್ರತಿಷ್ಠೆ ದೇಶಕ್ಕೆ ಗಂಡಾಂತರ ತಂದೀತು ಎಂದು ಈಗಾಗಲೇ ನಾಲ್ಕು ಪೀಠಗಳ (ಉತ್ತರಾಖಂಡದ ಜೋಶಿಮಠ, ಗುಜರಾತಿನ ದ್ವಾರಕಾ ಮಠ, ಒಡಿಶಾದ ಪುರಿಮಠ ಹಾಗೂ ಕರ್ನಾಟಕದ ಶೃಂಗೇರಿಮಠ ) ಶಂಕರಾಚಾರ್ಯರುಗಳಾದಿಯಾಗಿ ದೇಶದ ಹಲವೊಂದು ಪ್ರಮುಖ ಮಠಾಧಿಪತಿಗಳು, ಸಂತರು , ಧಾರ್ಮಿಕ ಚಿಂತಕರು ರಾಮಮಂದಿರ ನಿರ್ಮಾಣ ಸಮಿತಿಯನ್ನು ಎಚ್ಚರಿಸಿದ್ದಾರೆ. ಆದಾಗ್ಯೂ ಹಿಂದೂ ಧರ್ಮದ ವಕ್ತಾರರೆಂದು ತಮ್ಮನ್ನು ತಾವು ಬಿಂಬಿಸಿಕೊಳ್ಳುವ ಬಿಜೆಪಿಗರು ಅಯೋದ್ಯೆಯಲ್ಲಿ ಶ್ರೀರಾಮ ದೇವರ ಮೂರ್ತಿ ಪ್ರತಿಷ್ಠೆ ಆಗುವ ಮೊದಲೇ ಮನೆಮನೆಗೆ ಹೋಗಿ ಅಕ್ಷತೆ ಹಂಚುತ್ತಿರುವುದು ಜನರನ್ನು ದೇವರ ಹೆಸರಿನಲ್ಲಿ ವಂಚಿಸುತ್ತಿರುವುದರ ಸ್ಪಷ್ಟ ಉದಾಹರಣೆಯಾಗಿದೆ. ಅಕ್ಷತೆಗೆ ಅದರದ್ದೇ ಆದ ಧಾರ್ಮಿಕ ಮಹತ್ವವಿದ್ದು ಬಿಜೆಪಿ ತನ್ನ ಕಾರ್ಯಕರ್ತರ ಮೂಲಕ ರಾಜಕೀಯ ಸಂಘಟನೆಗಾಗಿ ಪವಿತ್ರ ಅಕ್ಷತೆಯನ್ನು ದುರುಪಯೋಗ ಪಡಿಸಿ ಕೊಳ್ಳುತ್ತಿದೆ. ಇವರಿಗೆ ದೇವರ ಮೇಲೆ ಭಕ್ತಿ ಇಲ್ಲ ಮತ್ತು ಭಯವೂ ಇಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ಪಕ್ಷದ್ದು ಕಪಟ ಭಕ್ತಿಯೂ ಅಲ್ಲ. ಡೋಂಗಿ ಹಿಂದುತ್ವವೂ ಅಲ್ಲ. ಅದು "ಈಶಾವಾಸ್ಯಮಿದಂ ಸರ್ವಂ" ತತ್ವ. ಶತಮಾನಗಳಿಂದ ಬೀಗ ಜಡಿದು ಹಿಂದೂಗಳಿಗೆ ಪೂಜೆ ಮಾಡಲು ಅವಕಾಶವೇ ಇಲ್ಲದಿದ್ದ ರಾಮಲಲ್ಲಾನ ಗುಡಿಯ ಬೀಗ ತೆಗೆಸಿ ಹಿಂದೂ ಗಳಿಗೆ ಪೂಜೆಗೆ ಅವಕಾಶ ಮಾಡಿಕೊಡುವ ಮೂಲಕ ರಾಮಮಂದಿರ ನಿರ್ಮಾಣದ ಕನಸನ್ನು ಜನರ ಮನಸ್ಸಿನಲ್ಲಿ ಬಿತ್ತಿದವರೆ ಕಾಂಗ್ರೆಸ್ಸಿನವರು. ಅಲಹಾಬಾದ್ ನ್ಯಾಯಪೀಠದ ಆದೇಶದ ಹೊರತಾಗಿಯೂ ಗುಡಿಯ ಬೀಗ ತೆಗೆಸಿದ್ದು ಮತ್ತು 1989ರಲ್ಲಿ ವಿಶ್ವಹಿಂದೂ ಪರಿಷತ್ ನವರಿಗೆ ಸ್ವತ: ನಿಂತು ಅಯೋದ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ಅವಕಾಶ ಮಾಡಿಕೊಟ್ಟದ್ದೇ ಅಂದಿನ ಪ್ರಧಾನಿ ದಿ. ರಾಜೀವ ಗಾಂಧಿ. ಕಾಂಗ್ರೆಸ್ ನಂಬಿ ನೆಚ್ಚಿಕೊಂಡು ಬಂದಿರುವ ಹಿಂದುತ್ವ ಅದು ಮಹಾತ್ಮ ಗಾಂದೀಜಿ ಪ್ರತಿಪಾದಿಸಿದ ಶ್ರೀ ರಾಮನ ಸ್ವಾಮಿತ್ವದ ಹಿಂದುತ್ವ. ಬಹುಶ ಅಂತಹ ರಾಮಭಕ್ತ ಗಾಂಧಿಯನ್ನೆ ಕೊಂದವರಿಗೆ ಇದು ಅರ್ಥ ಆಗಲು ಸಾಧ್ಯವಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ ಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ರಾಜಕೀಯ ಹಸ್ತಕ್ಷೇಪ ಅಪೇಕ್ಷಣೀಯವಲ್ಲ. ಒಬ್ಬರ ಹೆಸರಿನ ಪ್ರಚಾರಕ್ಕಾಗಿ ಈ ನಿಯಮಗಳನ್ನು ಮೀರುವುದು ದೇವರ ವಿರುದ್ಧ ದಂಗೆ ಕೃತ್ಯವಾಗಿದೆ ಮತ್ತು ಅದು ವಿನಾಶದತ್ತ ಕೊಂಡೊಯ್ಯುತ್ತದೆ : ಪುರಿ ಶಂಕರಾಚಾರ್ಯ
ಮೇಲಿನ ಚಿತ್ರದಲ್ಲಿ ಪುರಿ ಶಂಕರಾಚಾರ್ಯ (ನಿಶ್ಚಲಾನಂದ ಸರಸ್ವತಿ ಸ್ವಾಮಿಗಳು) ಶೃಂಗೇರಿ ಶಂಕರಾಚಾರ್ಯ (ಭಾರತೀ ತೀರ್ಥ ಸ್ವಾಮಿಗಳು) ದ್ವಾರಕಾಪೀಠ ಮತ್ತು ಜ್ಯೋತಿರ್ ಮಠ ಶಂಕರಾಚಾರ್ಯ (ಸ್ವರೂಪಾನಂದ ಸರಸ್ವತಿ ಸ್ವಾಮಿಗಳು) ಮತ್ತು ಕಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಸ್ವಾಮಿಗಳು ಇದ್ದಾರೆ.
ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ತಾನು ಭಾಗವಹಿಸುವುದಿಲ್ಲ ಎಂಬ ನಿಲುವನ್ನು ಪುನರುಚ್ಚರಿಸಿರುವ ಪುರಿ ಶಂಕರಾಚಾರ್ಯ ಶ್ರೀ ನಿಶ್ಚಲಾನಂದ ಸರಸ್ವತಿ ಅವರು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ರಾಜಕೀಯ ಹಸ್ತಕ್ಷೇಪ ಅಪೇಕ್ಷಣೀಯವಲ್ಲ ಮತ್ತು ಸಂವಿಧಾನವೂ ಅದಕ್ಕೆ ಅವಕಾಶವನ್ನು ನೀಡುವುದಿಲ್ಲ ಪುರಿ ಶಂಕರಾಚಾರ್ಯ ಶ್ರೀ ನಿಶ್ಚಲಾನಂದ ಸರಸ್ವತಿ ಅವರು ಹೇಳಿರುವ ಕುರಿತು ವರದಿಯಾಗಿದೆ.
ಶನಿವಾರ ಪಶ್ಚಿಮ ಬಂಗಾಳದ ಸಾಗರದ್ವೀಪದಲ್ಲಿ ಗಂಗಾಸಾಗರ ಉತ್ಸವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, 'ರಾಜಕಾರಣಿಗಳಿಗೆ ಅವರದೇ ಆದ ಮಿತಿಗಳಿವೆ ಮತ್ತು ಸಂವಿಧಾನದಡಿ ಅವರಿಗೆ ಜವಾಬ್ದಾರಿಗಳಿವೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ನಿಯಮಗಳು ಮತ್ತು ನಿರ್ಬಂಧಗಳಿದ್ದು, ಇದನ್ನು ಪಾಲಿಸಬೇಕಾಗುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ರಾಜಕಾರಣಿಗಳ ಹಸ್ತಕ್ಷೇಪವು ಹುಚ್ಚುತನವಾಗಿದೆ. ಸಂವಿಧಾನದ ಪ್ರಕಾರ ಇದು ಹೇಯ ಅಪರಾಧವೂ ಹೌದು' ಎಂದವರು ಹೇಳಿದ್ದರು.
ಎಲ್ಲ ನಾಲ್ಕೂ ಪೀಠಗಳ ಶಂಕರಾಚಾರ್ಯರು ತಾವು ಅಯೋಧ್ಯೆಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಈಗಾಗಲೇ ಪ್ರಕಟಿಸಿದ್ದಾರೆ. ಉತ್ತರಾಖಂಡದ ಜೋಶಿಮಠ, ಗುಜರಾತಿನ ದ್ವಾರಕಾ, ಒಡಿಶಾದ ಪುರಿ ಮತ್ತು ಕರ್ನಾಟಕದ ಶೃಂಗೇರಿಯಲ್ಲಿ ಈ ಪೀಠಗಳಿವೆ.
ಅಯೋಧ್ಯೆಯಲ್ಲಿ ಕಾರ್ಯಕ್ರಮವು ಧರ್ಮಶಾಸ್ತ್ರಗಳ ಪ್ರಕಾರ ನಡೆಯುತ್ತಿಲ್ಲ,ಹೀಗಾಗಿ ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ಪುರಿ ಮತ್ತು ಜೋಶಿಮಠ ಪೀಠಗಳ ಶಂಕರಾಚಾರ್ಯರು ಹೇಳಿದ್ದರು. ಮಕರ ಸಂಕ್ರಾಂತಿಯ ಅಂಗವಾಗಿ ವಾರ್ಷಿಕ ಪವಿತ್ರ ಸ್ನಾನದಲ್ಲಿ ಪಾಲ್ಗೊಳ್ಳಲು ಗಂಗಾಸಾಗರ ಉತ್ಸವಕ್ಕೆ ಆಗಮಿಸಿದ್ದ ಪುರಿ ಶಂಕರಾಚಾರ್ಯರು, ಧರ್ಮಗ್ರಂಥಗಳ ಪ್ರಕಾರ ಪ್ರಾಣ ಪ್ರತಿಷ್ಠಾಪನೆಗೆ ಸ್ಥಾಪಿತ ನಿಯಮಗಳಿವೆ. ದೇಶದ ಮುಖ್ಯಸ್ಥರು ಅಥವಾ ಪ್ರಧಾನ ಮಂತ್ರಿ ಸಹ ಇವುಗಳನ್ನು ಅನುಸರಿಸಬೇಕಾಗುತ್ತದೆ ಎಂದವರು ಹೇಳಿದ್ದರು.
ಒಬ್ಬರ ಹೆಸರಿನ ಪ್ರಚಾರಕ್ಕಾಗಿ ಈ ನಿಯಮಗಳನ್ನು ಮೀರುವುದು ದೇವರ ವಿರುದ್ಧ ದಂಗೆ ಕೃತ್ಯವಾಗಿದೆ ಮತ್ತು ಅದು ವಿನಾಶದತ್ತ ಕೊಂಡೊಯ್ಯುತ್ತದೆ. ನಾನು ಅಯೋಧ್ಯೆಗೆ ಹೋಗುತ್ತಿರುತ್ತೇನೆ, ಆದರೆ ರಾಮ ಮಂದಿರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅವರು ಪುನರುಚ್ಚರಿಸಿದ್ದರು.
ಕಾರ್ಯಕ್ರಮಕ್ಕೆ ಹಾಜರಾಗದಂತೆ ಯಾರನ್ನೂ ನಾನು ತಡೆಯುವುದಿಲ್ಲ. ನನಗೆ ಕೇಂದ್ರ ಸರಕಾರದ ಬಗ್ಗೆ ಕೋಪವಿಲ್ಲ ಎಂದು ಹೇಳಿದ ಪುರಿ ಶಂಕರಾಚಾರ್ಯ, ಓರ್ವ ಸಹಾಯಕನೊಂದಿಗೆ ಮಾತ್ರ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಆಹ್ವಾನ ಪತ್ರದಲ್ಲಿ ತಿಳಿಸಿರುವುದಕ್ಕಾಗಿ ವಿಷಾದವಿದೆ ಎಂದಿದ್ದರು.
‘ಶಂಕರಾಚಾರ್ಯರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಶ್ರೇಷ್ಠತೆಯ ಹೊರತಾಗಿಯೂ ಅವರಿಗೆ ರಾಮ ಮಂದಿರದ ಗರ್ಭಗುಡಿಯಲ್ಲಿ ಸ್ಥಾನವನ್ನು ಕಲ್ಪಿಸಲಾಗಿಲ್ಲ ಮತ್ತು ಹೊರಗಡೆಯೇ ಇರುವಂತೆ ಸೂಚಿಸಲಾಗಿದೆ. ಇದು ನನಗೆ ಸ್ವೀಕಾರಾರ್ಹವಲ್ಲ. ಕಾರ್ಯಕ್ರಮದಲ್ಲಿ ಕುಳಿತುಕೊಂಡು ರಾಮ ಮಂದಿರ ಉದ್ಘಾಟನೆಯನ್ನು ನೋಡುವುದು ಮತ್ತು ಚಪ್ಪಾಳೆ ತಟ್ಟುವುದು ನನಗೆ ಇಷ್ಟವಿಲ್ಲ’ ಎಂದು ಪುರಿ ಶಂಕರಾಚಾರ್ಯರು ಹೇಳಿದ್ದರು.
ನನಗೆ ನನ್ನ ಸ್ಥಾನದ ಘನತೆಯ ಅರಿವಿದೆ. ಹೀಗಾಗಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಜ.4ರಂದು ಸುದ್ದಿಗಾರರಿಗೆ ತಿಳಿಸಿದ್ದ ಪುರಿ ಶಂಕರಾಚಾರ್ಯರು, ‘ಪ್ರಧಾನಿ ನರೇಂದ್ರ ಮೋದಿಯವರು ರಾಮ ಮಂದಿರವನ್ನು ಉದ್ಘಾಟಿಸುತ್ತಾರೆ. ಅವರು ವಿಗ್ರಹವನ್ನು ಸ್ಪರ್ಶಿಸುತ್ತಾರೆ. ಆಗ ನಾನು ಏನು ಮಾಡಬೇಕು? ನಿಂತುಕೊಂಡು ಚಪ್ಪಾಳೆ ಹೊಡೆಯಬೇಕೇ ’ ಎಂದವರು ಪ್ರಶ್ನಿಸಿದ್ದರು.