ಹಿಂದೂ ರಾಷ್ಟ್ರ ಎಂದರೆ ಬ್ರಾಹ್ಮಣೀಯ ನೇತೃತ್ವದ ರಾಷ್ಟ್ರವೇ?
ಧ್ವಜ ವಿವಾದವಲ್ಲ: ಸಂಘಿಗಳ ದೂರಗಾಮಿ ಚಿತಾವಣೆ, ದಳದ ಅಪಾಯಕಾರಿ ಅವಕಾಶವಾದ
ಬರಹ- ಶಿವಸುಂದರ್ (ಲೇಖಕರು ಹಿರಿಯ ಅಂಕಣಕಾರರು, ಪ್ರಗತಿಪರ ಚಿಂತಕರು ಹಾಗೂ ಜನಪರ ಹೋರಾಟಗಾರರು)
ಈ ದೇಶದ ಎಚ್ಚೆತ್ತ ಬಹುಜನರನ್ನು ಶತಾಯಗತಾಯ ಮತ್ತೊಮ್ಮೆ ಬ್ರಾಹ್ಮಣೀಯ ಗುಲಾಮತನದ ಚೌಕಟ್ಟಿಗೆ ತರಲು ಹಿಂದೂತ್ವದ ರಾಜಕಾರಣ ಮಾಡುತ್ತಿರುವ ಸಂಘಪರಿವಾರ- ಬಿಜೆಪಿ ಮತ್ತದರ ಅಂಗಸಂಸ್ಥೆಗಳು ಇದೀಗ ತಮಗೆ ಈವರೆಗೆ ದಕ್ಕದ ಮಂಡ್ಯದಲ್ಲಿ ತಮ್ಮ ಕರಾಳ ಕುತಂತ್ರವನ್ನು ಪ್ರಾರಂಭಿಸಿವೆ.
ಅದರ ನಿಚ್ಚಳ ಉದಾಹರಣೆಯೇ ಕೆರೆಗೋಡಿಗೆ ಅವರು ಹಚ್ಚಿರುವ ಬೆಂಕಿ. ಇದು ಶ್ರೀರಂಗಪಟ್ಟಣದಲ್ಲಿ ಕೊಮುವ್ಯಾಧಿ ಭಟ್ಟನ ಕೋಮು ಪ್ರಚೋದಕ ಭಾಷಣದ ತರುವಾಯದಲ್ಲಿ ಸಂಭವಿಸಿರುವುದು ಕಾಕತಾಳೀಯವೇನಲ್ಲ. ಕೆರೆಗೋಡಿನಲ್ಲಿ ಧ್ವಜ ಸ್ಥಂಭ ಸ್ಥಾಪನೆ, ಧ್ವಜಾರೋಹಣ ಪರವಾನಗಿ ಪಡೆಯಲು ಒಂದು ವರ್ಷದಿಂದ ವ್ಯವಸ್ಥಿತವಾಗಿ ಪ್ರಯತ್ನ ನಡೆಯುತ್ತಿತ್ತು ಎಂಬುದನ್ನು ಗಮನಿಸಿದರೆ ಈ ವ್ಯವಸ್ಥಿತ ಹುನ್ನಾರಗಳು ಸ್ಪಷ್ಟವಾಗುತ್ತದೆ.
2023 ರ ಚುನಾವಣೆಗೆ ಸ್ವಲ್ಪ ಮುಂಚೆಯೂ ಬಹಳ ಯೋಜಿತವಾಗಿ ಹಿಂದೂತ್ವವಾದಿ ಸಂಘಟನೆಗಳು ಮಂಡ್ಯದಲ್ಲಿ, ಅದರಲ್ಲೂ ಶ್ರೀರಂಗಪಟ್ಟಣದಲ್ಲಿ ಕೋಮು ಗಲಭೆಗೆ ಮುಂದಾಗಿದ್ದವು. ಆ ಮೂಲಕ ಹಿಂದೂ ಓಟುಗಳನ್ನು ಧ್ರುವೀಕರಣಗೊಳಿಸಲು ಪ್ರಯತ್ನಿಸಿದ್ದವು. ಸಂಘಿಗಳಿಗೆ ಅದರಲ್ಲಿ ಯಶಸ್ಸೂ ಸಿಕ್ಕಿತ್ತು. ಇಡೀ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಅತಿ ಹೆಚ್ಚು ಓಟು ಸಿಕ್ಕಿದ್ದು ಶ್ರೀರಂಗಪಟ್ಟಣದಲ್ಲಿ. 2024 ರ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತ್ತೊಮ್ಮೆ ಬಹಳ ಯೋಜಿತವಾದ ಕೋಮು ಧ್ರುವೀಕರಣದ ಪ್ರಯತ್ನ ಪ್ರಾರಂಭವಾಗಿದೆ. ಜೆಡಿಎಸ್ ಪಕ್ಷ ಬಿಜೆಪಿಯ ಜೊತೆಗೆ ಹಿಂದೂತ್ವವಾದಿ ಮೈತ್ರಿ ಮಾಡಿಕೊಂಡ ಮೇಲೆ ಸಂಘಪರಿವಾರಕ್ಕೆ ಈ ಭಾಗದಲ್ಲಿ ಬೇಕಾಗಿದ್ದ ಕಾಲ್ಬಲವೂ ಸಿಕ್ಕಂತಾಗಿದೆ. ಶ್ರೀರಂಗಪಟ್ಟಣದ ಭಾಷಣ, ಕೆರೆಗೋಡು ಕುತಂತ್ರ ಎಲ್ಲವೂ ಅದರ ಭಾಗಗಳೆ.
ಆದರೆ ಸಂಘಿಗಳ ದೃಷ್ಟಿ ಇರುವುದು ಕೇವಲ ತತ್ ಕ್ಷಣದ ಚುನಾವಣಾ ಪ್ರಯೋಜನವಲ್ಲ. ಈ ಭಾಗದಲ್ಲಿ ಶತಮಾನಗಳಿಂದ ಬೇರುಬಿಟ್ಟಿರುವ ಸೌಹಾರ್ದ ಹಾಗೂ ಅಬ್ರಾಹ್ಮಣ ಶೂದ್ರ ಸಂಸ್ಕೃತಿಯನ್ನು ಕೊಂದು ಈ ಭಾಗದಲ್ಲಿ ಬ್ರಾಹ್ಮಣೀಯ ಹಿಂದೂ ರಾಷ್ಟ್ರದ ದಿಗ್ವಿಜಯ ಸಾಧಿಸುವುದು ಅವರ ದೂರಗಾಮಿ ಉದ್ದೇಶ. ಅದಕ್ಕಾಗಿಯೇ ಅವರು ಇತಿಹಾಸದ ಬೇರು ಕಳೆದುಕೊಂಡ ಮಂಡ್ಯದ ಮಣ್ಣಿನ ಮಕ್ಕಳನ್ನು ಮಂಗಗಳನ್ನಾಗಿ ಮಾಡಿ ಹಳ್ಳಿಹಳ್ಳಿಯಲ್ಲಿ ಹನುಮಧ್ವಜ ಹಾರಿಸುವ ಯೋಜಿತ ತಯಾರಿ ನಡೆಸುತ್ತಿದ್ದಾರೆ.
ಅಬ್ರಾಹ್ಮಣ ರಾಜಕಾರಣ ಮೂಡಿಸಿದ್ದ ಸೌಹಾರ್ದ
ಹಾಗೆ ನೋಡಿದರೆ ಕರ್ನಾಟಕದ ಇತರೆ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಮಂಡ್ಯ ಜಿಲ್ಲೆಯು ಸಂಘಿಗಳ ಕೋಮುವಾದಿ ಪ್ರಭಾವಕ್ಕೆ ಅಷ್ಟಾಗಿ ಒಳಪಟ್ಟಿರಲಿಲ್ಲ. ಇಲ್ಲಿ ಜಾತಿ, ವರ್ಗ- ಲಿಂಗ ತಾರತಮ್ಯ ಇತ್ಯಾದಿಗಳಿದ್ದರೂ ಇಲ್ಲಿನ ಒಕ್ಕಲು ಸಮುದಾಯ ಟಿಪ್ಪು-ಹೈದರ್ ಆಡಳಿತದ ನೇರ ಫ಼ಲಾನುಭವಿಗಳೂ ಆಗಿದ್ದರಿಂದ ಕೋಮು ವೈಷಮ್ಯವಿರಲಿಲ್ಲ. ಹೀಗಾಗಿಯೇ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಉರಿಗೌಡ -ನಂಜೇಗೌಡರು ಗಳನ್ನು ಹುಟ್ಟಿಸಿದರೂ ಜನರು ಒಪ್ಪಿಕೊಳ್ಳಲಿಲ್ಲ. ಇಲ್ಲಿನ ಒಕ್ಕಲು ಸಮುದಾಯದ ನೆನಪಿನಲ್ಲಿ. ಲಾವಣಿಗಳಲ್ಲಿ ಈಗಲೂ ಟಿಪ್ಪು ಮತ್ತು ಹೈದರ್ ಜನನಾಯಕರಾಗಿ ಜೀವಂತರಾಗಿ ಉಳಿದಿದ್ದಾರೆ. ಆ ನಂತರದಲ್ಲೂ ನಾಲ್ಮಡಿ ಒಡೆಯರರ ಕಾಲದಲ್ಲಿ ಹುಟ್ಟಿಕೊಂಡ ಶೂದ್ರ ಪ್ರಜ್ಞೆಯು ಸ್ಪಷ್ಟವಾಗಿ ಬ್ರಾಹ್ಮಣ ವಿರೋಧಿಯಾಗಿತ್ತು. 70-80-90 ರ ದಶಕಗಳಲ್ಲಿ ದಲಿತ ಚಳವಳಿ ಮತ್ತು ರೈತ ಚಳವಳಿಗಳು ಸೌಹಾರ್ದತೆ ಮತ್ತು ಪ್ರಗತಿಪರತೆಯನ್ನು ಪ್ರಧಾನಧಾರೆ ಮೌಲ್ಯಗಳನ್ನಾಗಿ ಸ್ಥಾಪಿಸಿತ್ತು. ಕಾಂಗ್ರೆಸ್ ನ ಯಾಜಮಾನ್ಯ ರಾಜಕಾರಣದ ವಿರುದ್ಧ ಇದ್ದ ಅಸಮಾಧಾನದ ಲಾಭವನ್ನು ದೇವೇಗೌಡರ ನೇತೃತ್ವದಲ್ಲಿ ಕಾಂಗ್ರೆಸ್ಸೇತರ ರಾಜಕೀಯ ಶಕ್ತಿಯಾಗಿ ಹುಟ್ಟಿಕೊಂಡ ಜಾತ್ಯತೀತ ಜನತಾ ದಳ ಪಡೆದುಕೊಂಡಿತು. ದಳದ ನೆಲೆಯೂ ಒಕ್ಕಲಿಗ- ಮುಸ್ಲಿಂ ಮೈತ್ರಿಯ ಸಮೀಕರಣದ ಮೇಲೆಯೇ ಸಂಭವಿಸಿದ್ದರಿಂದ ಬಿಜೆಪಿಯ ಕೋಮುವಾದಿ ರಾಜಕಾರಣದ ಬೇಳೆ ಕಳೆದ ದಶಕದವರೆಗೆ ಹೆಚ್ಚು ಬೇಯುತ್ತಿರಲಿಲ್ಲ.
ಬಲ್ಲಿದ ಶೂದ್ರರ ಬ್ರಾಹ್ಮಣೀಕರಣ ಮತ್ತು ಹಿಂದೂತ್ವ ರಾಜಕಾರಣದ ಪ್ರವೇಶ
ಆದರೆ ಹಿಂದಿನ ದಿನಗಳಿಗೆ ಹೋಲಿಸಿದಲ್ಲಿ ಕಳೆದ ಒಂದೆರಡು ದಶಕಗಳಿಂದ ಮಂಡ್ಯ ಜಿಲ್ಲೆಯ ಮೇಲೂ ದೇಶದಲ್ಲಿ ಏರುಗತಿಯಲ್ಲಿ ಏರುತ್ತಿರುವ ಹಿಂದೂತ್ವದ ಉನ್ಮಾದ ಯುವಜನತೆಯನ್ನು ಪ್ರಭಾವಿಸಲು ಪ್ರಾರಂಭಿಸಿದೆ. ಅದೇ ಸಮಯದಲ್ಲಿ ಸ್ವಾತಂತ್ರ್ಯ ಪೂರ್ವದ ಟಿಪ್ಪು-ನಾಲ್ಮಡಿ ಸುಧಾರಣೆಗಳು, ಸ್ವಾತಂತ್ರ್ಯಾ ನಂತರದಲ್ಲಿ ಅಧಿಕಾರಶಾಹಿಯ ಅವಕಾಶಗಳು, ಹಸಿರು ಕ್ರಾಂತಿ ಇತ್ಯಾದಿಗಳು ಒಕ್ಕಲು ವರ್ಗಗಳಲ್ಲೂ ನಿಧಾನಕ್ಕೆ ಮೇಲ್ಚಲನೆ ಪಡೆಯುವ ಒಂದು ಸ್ಥರವನ್ನು ಸೃಷ್ಟಿಸಿದೆ.
ಅದು ನಿಧಾನವಾಗಿ ಬ್ರಾಹ್ಮಣೀಕರಣಗೊಳ್ಳುತ್ತಾ ಬಂದಿದೆ.
ಇದರ ನಡುವೆ ಜಾರಿಯಾದ ಜಾಗತೀಕರಣದ ನೀತಿಗಳು ಈ ಸ್ತರಕ್ಕೆ ಹೊಸ ರಾಷ್ಟೀಯ ಅವಕಾಶಗಳನ್ನು ಒದಗಿಸಿದ್ದರಿಂದ ಈ ಸ್ಥರಕ್ಕೆ ಮೋದಿಯವರ ಅಭಿವೃದ್ಧಿ- ಹಿಂದೂ ರಾಷ್ಟ್ರ ರಾಜಕಾರಣ ಅತ್ಯಂತ ಅಪ್ಯಾಯಮಾನವೂ ಆಗಿದೆ. ವಾಸ್ತವವಾಗಿ ಈ ಬಾರಿ ಚುನಾವಣೆಯಲ್ಲಿ ಕುಮಾರಸ್ವಾಮಿ ಯವರ ಜನತಾ ದಳ ಹೀನಾಯವಾಗಿ ಸೋತ ನಂತರ ಮುಸ್ಲಿಮ ವಿರೋಧಿ ನಿಲುವನ್ನು ತಳೆಯಲು ಮತ್ತು ಎನ್‌ಡಿಎ ಸೇರಲು ಈ ಸ್ಥರವೇ ಅಪಾರ ಒತ್ತಡ ಹಾಕಲೂ ಪ್ರಾರಂಭಿಸಿತ್ತು.
ಇದೇ ಅವಧಿಯಲ್ಲಿ ರೈತ ಮತ್ತು ದಲಿತ ಚಳವಳಿಯ ಬಿರುಸೂ ಕೂಡ ಕಡಿಮೆಯಾಗುತ್ತಿರುವುದರಿಂದ ಗ್ರಾಮೀಣ ಯುವಜನರಿಗೆ ಕೇಸರಿಯೂ ಮಾನ್ಯವೆನಿಸತೊಡಗಿದೆ. ಇಲ್ಲಿ ಕೋಮುವಾದ ಅಷ್ಟು ತೀವ್ರವಾಗಿರಲಿಲ್ಲವಾದ್ದರಿಂದ ಕೋಮು ಸೌಹಾರ್ದ ಚಟುವಟಿಕೆಗಳು ಬಿರುಸಿನಲ್ಲಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ಬ್ರಾಹ್ಮಣವಾದಿ ಹಿಂದೂತ್ವ ರಾಜಕಾರಣ ಮತ್ತು ಆರೆಸ್ಸೆಸ್ ಹಾಗೂ ಅದರ ಅಂಗ ಸಂಸ್ಥೆಗಳು ಹೆಚ್ಚು ಮಾನ್ಯತೆಪಡೆದುಕೊಳ್ಳಲು ಪ್ರಾರಂಭವಾಗಿ ವರ್ಷಗಳಾಗಿವೆ.
ಸೆಕ್ಯುಲರ್ ಎಂದು ಹೇಳಿಕೊಳ್ಳುವ ಪಕ್ಷಗಳು ಮತು ಸಂಘಟನೆಗಳೂ ಸಹ ಹಿಂದೂತ್ವದ ದ್ವೇಷ ರಾಜಕಾರಣವನ್ನು ಮುಖಾಮುಖಿ ಎದುರಿಸಿ ಬಯಲುಗೊಳಿಸದೆ ತಾವೂ ಅವರಿಗಿಂತ ಉತ್ತಮ ಹಿಂದೂತ್ವವಾದಿ ಎಂಬ ಪೈಪೋಟಿಗೆ ಬಿದ್ದಿರುವುದರಿಂದ ಜನಮಾನಸದಲ್ಲಿ ಹಿಂದೂತ್ವ ಇನ್ನಷ್ಟು ಮಾನ್ಯತೆ ಪಡೆದುಕೊಳ್ಳುತ್ತಿದೆ.
ಇದೆಲ್ಲದರ ಒಟ್ಟು ಪರಿಣಾಮದ ಭಾಗವಾಗಿಯೇ ಸೆಕ್ಯುಲರ್ ಮುಖ್ಯಮಂತ್ರಿ ಪೈಪೋಟಿಯಲ್ಲಿ ರಾಮಮಂದಿರ ಉದ್ಘಾಟಿಸುತ್ತಾರೆ. ರೈತ ಸಂಘದ ನೆಲೆಯಾದ ಮಂಡ್ಯದ ಪಾಂಡವಪುರದಲ್ಲಿ ಆರೆಸ್ಸೆಸ್ ತನ್ನ ಕಚೇರಿಯನ್ನು ಪ್ರಾರಂಭಿಸುತ್ತದೆ. ಅದರ ಉದ್ಘಾಟನೆಯಲ್ಲಿ ರೈತ ಸಂಘದ ಯುವ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯನವರೂ ಕೂಡ ಯಾವುದೆ ಮುಜುಗುರವಿಲ್ಲದೆ ಭಾಗವಹಿಸುತ್ತಾರೆ. ಕುಮಾರಸ್ವಾಮಿಯವರ ದಳವಂತೂ ಆರೆಸ್ಸೆಸ್ಸಿನಲ್ಲಿ ಲೀನವಾಗಿದೆ.
ಈ ಎಲ್ಲಾ ಪೂರಕ ವಾತಾವರಣವನ್ನು ಬಳಸಿಕೊಂಡು ಸಂಘ ಪರಿವಾರ ಈಗ ಮಂಡ್ಯದ ಮೇಲೆ ಯುದ್ಧ ಸಾರಿದೆ. ಅದಕ್ಕೆ ಧ್ವಜಸ್ಥಂಭದ ಮೇಲೆ ಬೇಕೆಂದೇ ಅಕ್ರಮವಾಗಿ ಹನುಮ ಧ್ವಜವನ್ನು ಹಾರಿಸಿ ವಿವಾದಗೊಳಿಸಿದೆ.
ಸಿಟಿ ರವಿ ಯಂತವರು ಸ್ವಾತಂತ್ರ್ಯ ಹೋರಾಟದ ಸೌಹಾರ್ದ ಹಾಗೂ ಸಮಾನತೆಯ ಆಶಯವಾಗಿ ರೂಪುಗೊಂಡ ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜವೆಂದು ಅವಮಾನಿಸಿದರೂ ಮಂಡ್ಯದ ಜನರಿರಲಿ, ಇತರ ವಿರೋಧ ಪಕ್ಷಗಳು, ಮಾಧ್ಯಮಗಳೂ ಕೂಡ ಬಾಯಿ ಮುಚ್ಚಿಕೊಂಡಿವೆ.
ಹೀಗಾಗಿ ರಾಷ್ಟ್ರಧ್ವಜದ ಇತಿಹಾಸ, ಅದರ ಅರ್ಥ ಮತ್ತು ಸಂಘಿಗಳ ಹುನ್ನಾರವನ್ನು ಅರಿಯದ ಮಂಡ್ಯದ ಯುವಜನತೆಯಲ್ಲಿ ದ್ವೇಷವನ್ನು ಬಿತ್ತಿ ಅವರನ್ನು ತಮ್ಮ ಬ್ರಾಹ್ಮಣೀಯ ರಾಷ್ಟ್ರದ ಯಜ್ಞಕ್ಕೆ ಆಹುತಿಗಳನ್ನಾಗಿಸಿಕೊಳ್ಳುತ್ತಿದ್ದಾರೆ.
ಆದ್ದರಿಂದ ಸ್ವಾತಂತ್ರ್ಯ ಹೋರಾಟದ ಕನಸು ಮತ್ತು ಅದಕ್ಕೆ ಸಂಘಪರಿವಾರ ಅಂದೂ ಮತ್ತು ಇಂದು ಮಾಡುತ್ತಿರುವ ದ್ರೋಹ, ಧ್ವಜ ವಿವಾದ ಹಿಂದೆ ಇರುವ ಅವರ ಹುನ್ನಾರಗಳನ್ನು ಅರ್ಥಪಡಿಸುವ ಅಗತ್ಯವಿದೆ.
ಈ ಹಿನ್ನೆಲ್ಲೆಯಲ್ಲಿ ಭಾರತ ಧ್ವಜವ ಇತಿಹಾಸ ಮತ್ತು ಅದು ಹೇಳುವ ಬಂಧುತ್ವಕ್ಕೂ, ಸಂಘಿಗಳ ಭಾಗವಾಧ್ವಜದ ಇತಿಹಾಸ ಮತ್ತದರ ಬ್ರಾಹ್ಮಣತ್ವಕ್ಕೂ ಇರುವ ವ್ಯತ್ಯಾಸಗಳನ್ನು ಅರ್ಥಪಡಿಸುವ ಅಗತ್ಯವಿದೆ.
ಭಾರತದ ಧ್ವಜ V/S ಭಗವಾಧ್ವಜ
ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಕಾಂಗ್ರೆಸ್ ಎಲ್ಲಾ ಬಗೆಯ ಸ್ವಾತಂತ್ರ್ಯ ಹೋರಾಟಗಾರರ ವೇದಿಕೆಯಾಗಿ ಬದಲಾದ ಮೇಲೆ ಭಾರತದ ಸ್ವಾತಂತ್ರ್ಯ ಚಳವಳಿಗೊಂದು ಅರ್ಥಾತ್ ಸ್ವತಂತ್ರ ಭಾರತದ ಆಶಯಕ್ಕೊಂದು ಬಾವುಟವನ್ನು ರೂಪಿಸುವ ಪ್ರಯತ್ನಗಳು ಪ್ರಾರಂಭವಾಯಿತು. ಈ ದೇಶದ ಎಲ್ಲಾ ಧರ್ಮೀಯರಿಗೂ ಸಮಾನ ಅವಕಾಶದ ಆಶಯವನ್ನು ಪ್ರತಿಬಿಂಬಿಸುವ ಧ್ವಜವೊಂದನ್ನು ರೂಪಿಸುವ ಪ್ರಯತ್ನಗಳು ಮೇಡಂ ಕಾಮೂ ಅವರ ಮುಂದೊಡಗಿನಿಂದ ಪ್ರಾರಂಭವಾಯಿತು. ಈ ಪ್ರಯತ್ನಗಳನ್ನು ಕಾಂಗ್ರೆಸ್ ಅಧಿವೇಶನಗಳಲ್ಲಿ ವೆಂಕಯ್ಯನವರು ಮುಂದುವರೆಸಿದರು.
ಅದಾದ ನಂತರದಲ್ಲಿ ಇಂದಿನ ಭಾರತದ ಬಾವುಟಕ್ಕೆ ಅಂತಿಮ ರೂಪವನ್ನು ಕೊಟ್ಟು ರೂಪಿಸಿದ್ದು ಸುರಯ್ಯಾ ತ್ಯಾಬ್ಜಿ ಎಂಬ ಸುಶಿಕ್ಷಿತ ಮುಸ್ಲಿಂ ಮಹಿಳಾ ಹೋರಾಟಗಾರ್ತಿ.
ಭಾರತದ ಸ್ವಾತಂತ್ರ್ಯ ಹೋರಾಟದ ಪ್ರತಿಬಿಂಬವಾಗಿ ರೂಪಿತವಾದ ಆ ಬಾವುಟದಲ್ಲಿ ಕೇಸರಿ, ಹಸಿರುಗಳು ಈ ದೇಶದ ಎರಡು ಪ್ರಮುಖ ಧರ್ಮವಾದ ಹಿಂದೂ ಮತ್ತು ಮುಸ್ಲಿಮರನ್ನು , ಹಾಗೂ ಬಿಳಿಯ ಬಣ್ಣವು ಇತರ ಎಲ್ಲಾ ಧರ್ಮೀಯರನ್ನು ಪ್ರತಿನಿಧಿಸುತ್ತಿತ್ತು. ಅದರ ಜೊತೆಗೆ ಶಾಂತಿ, ಸಮೃದ್ಧಿ, ಮತ್ತು ಸೌಹಾರ್ದತೆಗಳ ಸಂಕೇತವಾಗಿಯೂ ಆ ಬಣ್ಣಗಳನ್ನು ಬಳಸಲಾಗಿತ್ತು. ವೆಂಕಯ್ಯನವರು ರೂಪಿಸಿದ್ದ ಧ್ವಜದಲ್ಲಿ ಮೂರೂ ಬಣ್ಣಗಳ ಹಿನ್ನೆಲೆಯಲ್ಲಿ ಚರಕವಿತ್ತು. ಆದರೆ ಚರಕವೊ ಕೇವಲ ಕಾಂಗ್ರೆಸ್ ಪಕ್ಷದ ಸಂಕೇತವಾಗಿ ಅರ್ಥವಾಗುವುದರಿಂದ ಅಂತಿಮ ವಿನ್ಯಾಸದಲ್ಲಿ ನಡುವಿನ ಬಿಳಿಯ ಬಣ್ಣದ ಮೇಲೆ ನೀಲಿ ಬಣ್ಣದ ಅಶೋಕ ಚಕ್ರವನ್ನು ಅಳವಡಿಸಿಕೊಳ್ಳಲಾಯಿತು.
ಇದಕ್ಕೆ ಪ್ರಧಾನ ಕಾರಣ ಭಾರತವು ತನ್ನ ಇತಿಹಾಸದಲ್ಲಿ ಅತಿಯಾಗಿ ಹೆಮ್ಮೆ ಪಡಬಹುದಾದದ್ದು ಹಾಗೂ ಭವಿಷ್ಯಕ್ಕೂ ರೂಢಿಸಿಕೊಳ್ಳಬೇಕಾದದ್ದು ಅಶೋಕನ ಬುದ್ಧಸತ್ವದ ಆಳ್ವಿಕೆಯನ್ನು ಎಂಬ ಗ್ರಹಿಕೆಯಾಗಿತ್ತು. ಅದರ ಜೊತೆಗೆ ಸಾರಾನಾಥದ ಬುದ್ಧ ಸ್ಥೂಪದಲ್ಲಿರುವ ನಾಲ್ಕು ಸಿಂಹದ ತಲೆಗಳೂ ಕೂಡ ಮುಂದೆ ಸ್ವತಂತ್ರ ಭಾರತದ ಮುದ್ರೆಯಾಯಿತು.
ಅಂದರೆ ಸಾರದಲ್ಲಿ ಭಾರತ ಧ್ವಜವನ್ನು ಸಕಲ ಧರ್ಮೀಯರ ಅಸ್ಮಿತೆಗಳನ್ನು ಮತ್ತು ಸಮಾನತೆಯ ಆಶಯಗಳನ್ನು ಒಳಗೊಳ್ಳುವ ಧ್ವಜವನ್ನಾಗಿ ರೂಪಿಸಲಾಯಿತು.
ಇದು ಸ್ವತಂತ್ರ ಭಾರತದ ಧ್ವಜದ ಸೌಹಾರ್ದ ಇತಿಹಾಸ.
ಅದರ ಆಶಯಗಳಿಗೆ ತಕ್ಕ ಹಾಗೆ ಸ್ವತಂತ್ರ್ಯೋತ್ತರ ಭಾರತ ರೂಪುಗೊಂಡಿತೇ ಎನ್ನುವುದು ಬೇರೆ ವಿಷಯ. ಆದರೆ ಸ್ವತಂತ್ರ ಬಾವುಟದ ಹಿಂದಿದ್ದ ಅಶಯವಂತೂ ಸರ್ವಧರ್ಮೀಯರ ಶಾಂತಿಯ ತೋಟವಾಗಬೇಕೆಂಬ ಆಶಯವೇ ಅಗಿತ್ತು.
ಆರೆಸ್ಸೆಸ್ ನ ಭಗವಾಧ್ವಜ- ಮನುವಿನ ವಿಜಯ ಪತಾಕೆ
ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಅಧ್ಯಯನ ಮಾಡಿದವರಿಗೆ ಸಂಘಪರಿವಾರ ಹಾಗೂ ಸಾವರ್ಕರರ ಹಿಂದೂ ಮಹಾ ಸಭಾ ಹೇಗೆ ಉದ್ದಕ್ಕೂ ಬ್ರಿಟಿಷರ ಜೊತೆ ಕೈಗೂಡಿಸಿ ಸ್ವತಂತ್ರ ಭಾರತದ ಮೇಲೆ ಹಿಂದೂತ್ವದ ಹೆಸರಿನಲ್ಲಿ ಬ್ರಾಹ್ಮಣ್ಯದ ಹಾಗೂ ಭೂ-ಮಾಲೀಕ ಮತ್ತು ಬಂಡವಾಳಶಹಿಗಳ ಅಧಿಪತ್ಯವನ್ನು ಮುಂದುವರೆಸಿಕೊಂಡು ಹೋಗಲು ಯತ್ನಿಸುತ್ತಿದ್ದರೆಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ರಾಷ್ಯ್ರೀಯ ಸ್ವಯಂಸೇವಕ ಸಂಘ- ಆರೆಸ್ಸೆಸ್ 1925 ರ ವಿಜಯದಶಮಿ ದಿನದಂದು ನಾಗಪುರದಲ್ಲಿ ಸ್ಥಾಪಿತವಾಯಿತು. ಅದರ ಉದ್ದೇಶ ಬ್ರೀಟಿಷರನ್ನು ಭಾರತದಿಂದ ಓಡಿಸುವುದಾಗಿರಲಿಲ್ಲ. ಬದಲಿಗೆ ಹಿಂದೂ ಸಮಾಜವನ್ನು ಬ್ರಾಹ್ಮಣ್ಯದ ಆಧಾರದಲ್ಲಿ ಮರುಸಂಘಟಿಸುತ್ತಾ ಹಿಂದೂ ರಾಷ್ಟ್ರವನ್ನು ಕಟ್ಟುವುದಾಗಿತ್ತು. ಅದರ ಸಂಸ್ಥಾಪಕ ಡಾ. ಹೆಡಗೇವಾರರಂತೂ ಬ್ರಿಟಿಷರ ವಿರುದ್ಧ ಹೋರಾಡುವುದೆಂದರೆ ಜೈಲಿಗೆ ಹೋಗುವುದಲ್ಲ ಎಂದು ಸ್ವಾತಂತ್ರ್ಯ ಹೋರಾಟವನ್ನೇ ತಿರಸ್ಕರಿಸಿದ್ದರು.
ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣ ಚಳವಳಿ, ಇಂಥಾ ಯಾವುದೇ ಹೋರಾಟಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರು ವ್ಯಕ್ತಿಗತ ನೆಲೆಯಲ್ಲಿ ಭಾಗವಹಿಸಬಹುದೇ ವಿನಾ ಸಂಘದ ಸದಸ್ಯರಾಗಿ ಭಾಗವಹಿಸಕೂಡದೆಂಬ ನಿರ್ದೇಶನವಿತ್ತಿದ್ದರು.
1928 ರ ಸುಮಾರಿಗೆ ಅರೆಸ್ಸೆಸ್ ಭಗವಾಧ್ವಜವನ್ನು ಲಾಂಛನವನ್ನಾಗಿ ಸ್ವೀಕರಿಸಿತು. ಕೇಸರಿ ಬಣ್ಣದ ಹಾಗೂ ತ್ರಿಕೋನಾಕೃತಿಯ ಭಗವಸಧ್ವಜವನ್ನೇ ಆರೆಸ್ಸೆಸ್ ಏಕೆ ತನ್ನ ಬಾವುಟವನ್ನಾಗಿ ಸ್ವೀಕರಿಸಿತು? ಈ ಬಗ್ಗೆ ಹೆಡಗೇವಾರರ ಸಹಚರನಾಗಿದ್ದ ಎನ್. ಎಚ್. ಪಾಲ್ಕರ್ ಅವರು ತಮ್ಮ "SAFRRON FLAG" ಪುಸ್ತಕದಲ್ಲಿ ಏಕೆ ಮತ್ತು ಹೇಗೆ ಭಗವಧ್ವಜವು ಆರೆಸ್ಸೆಸ್ ಆಶಯದ ಹಿಂದೂ ರಾಷ್ಟ್ರದ ಪ್ರತೀಕವಾಗಿದೆ ಎಂದು ವಿವರಿಸುತ್ತಾರೆ.
ಆರೆಸ್ಸೆಸ್ ಪ್ರಕಾರ ಭಗವಾಧ್ವಜವನ್ನು ವೇದಗಳ ಕಾಲದಲ್ಲಿ ಅರುಣಕೇತು ಎಂದು ಕರೆಯುತ್ತಿದ್ದರು.
ಆದರೆ ಆ ನಂತರ ಭಗವಧ್ವಜದ ಬಳಕೆಯು ಪ್ರಧಾನವಾಗಿ ಆಗಿರುವುದು 'ಬುದ್ಧ ಭಾರತದ ವಿರುದ್ಧ ಶಂಕರಾಚಾರ್ಯರ ನೇತೃತ್ವದಲ್ಲಿ ಸಾಧಿಸಲಾದ ಬ್ರಾಹ್ಮಣ್ಯದ ಪುನರುತ್ಥಾನ'ದಲ್ಲಿ. ಅರ್ಥಾತ್ ಭಗವಾಧ್ವಜವು ಮಹಿಳೆ, ಶೂದ್ರ ಮತ್ತು ದಲಿತರ ಮೇಲೆ ಬ್ರಾಹ್ಮಣ್ಯದ ವಿಜಯದ ಪ್ರತೀಕವಾಗಿದೆ.
ಆದರೆ ಬ್ರಾಹ್ಮಣ್ಯದ ಪುನರುತ್ಥಾನವನ್ನು ಹಿಂದೂತ್ವದ ವಿಜಯವೆಂದು ನಂಬಿಸುವ ಆರೆಸ್ಸೆಸ್ ಮತ್ತವರ ಸಿದ್ಧಾಂತಿಗಳು ಭಾರತದ ಮೇಲೆ ನಡೆದ ಎಲ್ಲಾ ಪರಕೀಯರ ದಾಳಿಗಳನ್ನು ಎದುರಿಸಲು ಹಿಂದೂ ರಾಜರು ಇದೇ ಬಾವುಟವನ್ನೇ ಬಳಸಿದ್ದರು ಎಂದು ಯಾವುದೇ ಪುರಾವೆಯಿಲ್ಲದೆ ಪ್ರತಿಪಾದಿಸುತ್ತಾರೆ. ಅದು ಸಹಜವೇ ಅಗಿದೆ. ಏಕೆಂದರೆ ಸಂಘಪರಿವಾರದ ಯಾವುದೇ ಪ್ರತಿಪಾದನೆಗಳಿಗೆ ಅವರ ನಂಬಿಕೆಯೇ ಪುರಾವೆಯೇ ಹೊರತು ಸಾಕ್ಷ್ಯಾಧರಗಳು ಇರುವುದಿಲ್ಲ.
ಆದರೆ ಪರಕೀಯರಾದ ಆರ್ಯರ ದಾಳಿ ನಡೆಸಿದಾಗ ಇಲ್ಲಿನ ಮೂಲನಿವಾಸಿ ದ್ರಾವಿಡರು ಅಥವಾ ಆರ್ಯರಿಗೆ ಮುಂಚೆಯೇ ಇಲ್ಲಿಗೆ ವಲಸೆ ಬಂದಿದ್ದ ಮೂಲ ಜನಾಂಗದವರು ಯಾವ ಬಾವುಟವನ್ನಿಟ್ಟುಕೊಂಡು ವಿರೋಧಿಸಿದರು ಎಂಬ ಪ್ರಶ್ನೆಗೂ ಅವರ ಬಳಿ ಉತ್ತರವಿರುವುದಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಮುಘಲರ ಸಾಮ್ರಾಜ್ಯದ ವಿರುದ್ಧ ನಡೆದ ಎಲ್ಲಾ ಸಾಮಂತರ ಬಂಡಾಯಗಳನ್ನು ಮುಸ್ಲಿಂ ಆಳ್ವಿಕೆಯ ವಿರುದ್ಧದ ಹಿಂದೂ ಬಂಡಾಯವೆಂದೇ ಕಥೆ ಕಟ್ಟುವ ಆರೆಸ್ಸೆಸ್ , ಇತಿಹಾಸಕ್ಕೆ ಹೋಗಿ ಆ ಎಲ್ಲಾ ರಾಜರಿಗೂ ಭಗವಧ್ವಜವನ್ನು ಕೊಟ್ಟು ಬಂದಿದೆ!
ಅವರ ಪ್ರಕಾರ ಈ ದೇಶದ ಗುಲಾಮಗಿರಿಯೆಂದರೆ ಬ್ರಿಟಿಷ್ ದಾಸ್ಯವಲ್ಲ. ಮುಸ್ಲಿಮ್ ಆಳ್ವಿಕೆ ಮತ್ತು ಮುಸ್ಲಿಮರು ಈ ದೇಶದವರಲ್ಲ. ಹಾಗೆಯೇ ಕ್ರಿಶ್ಚಿಯನ್ನರು ಕೂಡ.
ಈ ದೇಶದ ಚರಿತ್ರೆಯಲ್ಲಿ ಅವರು ವೈಭವದ ಯುಗವೆಂದು ಪರಿಗಣಿಸಬೇಕಿರುವುದು ಹಾಗೂ ಪುನರ್ ಸ್ಥಾಪಿಸಬೇಕಿರುವುದು ಬುದ್ಧಧರ್ಮವನ್ನು ನಾಶ ಮಾಡಿದ ಗುಪ್ತರ ಕಾಲದ ಬ್ರಾಹ್ಮಣ್ಯವನ್ನು. ಹೀಗಾಗಿ ಭಗವಾಧ್ವಜವೇ ಅವರ ಚರಿತ್ರೆ ಹಾಗೂ ಭವಿಷ್ಯದ ಆಶಯಗಳ ಸಂಕೇತ.
ಆದ್ದರಿಂದ ಅವರು ಪ್ರತಿಪಾದಿಸುತ್ತಿರುವುದು ಸನಾತನ ಭಗವಾಧ್ವಜವನ್ನೂ ಅಲ್ಲ. ಆರೆಸ್ಸೆಸ್ ಮಾರ್ಪಡಿಸಿರುವ ಭಗವಾಧ್ವಜವನ್ನು! ಹೀಗೆ ಸ್ವತಂತ್ರ ಭಾರತದ ಧ್ವಜ ಮತ್ತು ಭಗವಾಧ್ವಜಗಳು ಎರಡು ತದ್ವಿರುದ್ಧ ಆಶಯ, ಚರಿತ್ರೆ ಮತ್ತು ಭವಿಷ್ಯಗಳ ಪ್ರತೀಕಗಳೇ ಆಗಿವೆ. ಆದ್ದರಿಂದಲೇ ಸಂಘಪರಿವಾರವು ಸ್ವಾತಂತ್ರ್ಯ ಹೋರಾಟದುದ್ದಕ್ಕೂ ಆ ನಂತರವು ಸ್ವತಂತ್ರ ಭಾರತ ಧ್ವಜಕ್ಕೆ ನಿರಂತರ ಅವಮಾನವನ್ನೇ ಮಾಡುತ್ತಲೇ ಬಂದಿದೆ.
ಭಾರತದ ಧ್ವಜಕ್ಕೆ ಆರೆಸ್ಸೆಸ್ ಮಾಡುತ್ತಲೇ ಇರುವ ಅಪಮಾನದ ಇತಿಹಾಸ
1930 ರಲ್ಲಿ ಕಾಂಗ್ರೆಸ್ ಅಧಿವೇಶನವು ಅಧಿಕೃತವಾಗಿ ಸಂಪೂರ್ಣ ಸ್ವಾತಂತ್ರ್ಯದ ಘೋಷಣೆಯನ್ನು ನೀಡಿ 1930 ರ ಜನವರಿ 26 ರಂದು ಸ್ವತಂತ್ರ ಭಾರತದ ಘೋಷಣೆಯ ಭಾಗವಾಗಿ ಎಲ್ಲೆಡೆ ಭಾರತದ ಸ್ವತಂತ್ರ ಧ್ವಜವನ್ನು ಹಾರಿಸಲು ಕರೆ ನೀಡುತ್ತದೆ.
ಆಗ ಆರೆಸ್ಸೆಸ್ ನ ಮೊದಲ ಸರಸಂಘ ಚಾಲಕ ಹೆಡಗೇವಾರ್ ಅವರು:
"ಕೊನೆಗೂ ನಮ್ಮ ಘೋಷಣೆಯನ್ನು ಕಾಂಗ್ರೆಸ್ ಒಪ್ಪಿಕೊಂಡಿದ್ದಕ್ಕೆ ನಾವು ಅಭಿನಂದಿಸುತ್ತೇವೆ. ಹೀಗಾಗಿ ನಮ್ಮ ಎಲ್ಲಾ ಶಾಖಾ ಕಚೇರಿಗಳಲ್ಲೂ ಭಗವಾಧ್ವಜವನ್ನು ಹಾರಿಸಬೇಕೆಂದು" ಅದೇಶಿಸುತ್ತಾರೆ!
1947 ರ ಸೆಪ್ಟೆಂಬರ್‌ನಲ್ಲಿ ಬಿಜೆಪಿಯ ಪಿತಾಮಹ ಶ್ಯಾಮ ಪ್ರಸಾದ್ ಮುಖರ್ಜಿಯವರು ನೆಹರೂ ಮಂತ್ರಿಮಂಡಲದ ಸದಸ್ಯರಾಗಿದ್ದರೂ ತಮ್ಮ ಅಧಿಕೃತ ನಿವಾಸದ ಮೇಲೆ ಭಾರತದ ಬಾವುಟವನ್ನು ಹರಿಸದೆ ಹಿಂದೂ ಮಹಾ ಸಭಾದ ಬಾವುಟವನ್ನು ಹಾರಿಸುತ್ತಾರೆ.
ಅದೇ ವರ್ಷ ನವಂಬರ್‌ನಲ್ಲಿ ಸಂಘಪರಿವಾರದ ಮುಖಪತ್ರಿಕೆ ಆರ್ಗನೈಸರ್ ನಲ್ಲಿ ಬರೆಯಲಾದ ಸಂಪಾದಕೀಯವೊಂದು:
"ವಿಧಿಯಾಟದ ಭಾಗವಾಗಿ ಅಧಿಕಾರ ಪಡೆದುಕೊಂಡಿರುವ ಇಂದಿನ ಸರ್ಕಾರವು ತ್ರಿವರ್ಣ ಧ್ವಜವನ್ನು ಭಾರತದ ರಾಷ್ರಧ್ವಜವನ್ನಾಗಿ ಅಂಗೀಕರಿಸಿದೆ. ಆದರೆ ಭಾರತದ ಜನರೆಂದೂ ತ್ರಿವರ್ಣ ಧ್ವಜವನ್ನು ತಮ್ಮ ಬಾವುಟವನ್ನಾಗಿ ಅಂಗೀಕರಿಸಲಾರರು. ಏಕೆಂದರೆ ಮೂರು ಎಂಬ ಸಂಖ್ಯೆ ಭಾರತೀಯರ ಪಾಲಿಗೆ ಕೆಟ್ಟ ಶಕುನವಾಗಿದೆ" ಎಂದೆಲ್ಲ ಬರೆಯುತ್ತಾರೆ.
ತ್ರಿಶೂಲ, ತ್ರಿಮೂರ್ತಿ ಎಂದೆಲಾ ತ್ರಿವಳಿಗಳನ್ನೇ ಆರಾಧಿಸುವ ಹಿಂದೂ ಧರ್ಮದ ವಕ್ತಾರರು ನೀಡಿದ ಹೇಳಿಕೆಯಿದು.
ಸ್ವಾತಂತ್ರ್ಯಾ ನಂತರದಲ್ಲೂ ಮುಂದುವರೆದ ದೇಶದ್ರೋಹ- ಧ್ವಜದ್ರೋಹ
ಸ್ವಾತಂತ್ರ್ಯ ಬಂದ ಮರುವರ್ಷ 1948 ರ ಜನವರಿ ೩೦ ರಂದು ಆರೆಸ್ಸೆಸ್ ಮತ್ತು ಹಿಂದೂಮಹಾ ಸಭಾ ದಿಂದ ತರಬೇತಿ ಹೊಂದಿದ ನಾಥೂರಾಮ್ ಗೋಡ್ಸೆ ಎಂಬ ಸ್ವತಂತ್ರ ಭಾರತದ ಪ್ರಪ್ರಥಮ ಭಯೋತ್ಪಾದಕ ಗಾಂಧಿಯನ್ನು ಕೊಂದ ನಂತರ ಆರೆಸ್ಸೆಸ್ ನಿಷೇಧವಾಗುತ್ತದೆ.
ಹಿಂದೂತ್ವ ಪಕ್ಷಪಾತಿಯಾಗಿದ್ದ ಅಗಿನ ಗೃಹಮಂತ್ರಿ ಸರ್ದಾರ್ ಪಟೇಲರಿಗೂ ಕೂಡಾ ಆರೆಸ್ಸೆಸ್ ನ ನಡೆಗಳೂ ಅತಿಯೆನಿಸುತ್ತವೆ. ಆದರೂ ಆರೆಸ್ಸೆಸ್ ಮತ್ತೆ ಮುಖ್ಯಧಾರೆಗೆ ಮರಳುವ ಬಗ್ಗೆ ಒಲವು ಹೊಂದಿದ್ದ ಪಟೀಲರು ಆರೆಸ್ಸೆಸ್ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಲು:
"ಆರೆಸ್ಸೆಸ್ ಭಾರತದ ಸಂವಿಧಾನವನ್ನು ಒಪ್ಪಿಕೊಳ್ಳಬೇಕು. ಭಾರತದ ಬಾವುಟ, ಲಾಂಛನಗಳಿಗೆ ಮರ್ಯಾದೆ ಕೊಡಬೇಕು. ಹಾಗೂ ತನ್ನ ರಹಸ್ಯ ಕಾರ್ಯಾಚರಣೆಯನ್ನು ನಿಲ್ಲಿಸಿ ತನ್ನ ಸಂಘಟನೆಗೂ ಒಂದು ಬಹಿರಂಗ ಪ್ರಣಾಳಿಕೆ ಹಾಗೊ ಕಾರ್ಯವಿಧಾನ ಘೋಷಿಸಿ ಒಂದು ಸಾಂಸ್ಕೃತಿಕ ಸಂಘಟನೆಯಾಗಿ ಮಾತ್ರ ಕೆಲಸ ಮಾಡಬೇಕೆಂದು" ತಾಕೀತು ಮಾಡುತ್ತಾರೆ.
ಆ ಷರತ್ತಿನ ಮೇಲೆ ಆರೆಸ್ಸೆಸ್ ಮೇಲಿನ ನಿಷೇಧವನ್ನು 1949 ರ ಜುಲೈನಲ್ಲಿ ಹಿಂತೆಗೆದುಕೊಳ್ಳಲಾಗುತ್ತದೆ.
ಭಾರತದ ಸಂವಿಧಾನ ಮತ್ತು ಬಾವುಟಕ್ಕೆ ಒಳಪಡುವ ಷರತ್ತಿನ ಮೇಲೆ ಹೊರಬಂದ ಆರೆಸ್ಸೆಸ್ ಮಾಡಿದ್ದೇನು?
1949 ರ ನವ್ಂಬರ್ 26 ರಂದು ಭಾರತದ ಸಂವಿಧಾನ ರಚನಾ ಪ್ರಕ್ರಿಯೆ ಪೂರ್ಣವಾಗುತ್ತದೆ. ನವಂಬರ್ 30 ರಂದು ಆರ್ಗನೈಸರ್ ಸಂಪಾದಕೀಯವು ಭಾರತದ ಸಂವಿಧಾನವನ್ನು ಹೀಗೆಳೆಯುತ್ತಾ:
"ಭಾರತದ ಸಂವಿಧಾನದಲ್ಲಿ ಸನಾತನ ಭಾರತದಲ್ಲಿ ವಿಕಸನಗೊಂಡ ಸಂವಿಧಾನದ ಉಲ್ಲೇಖವೇ ಇಲ್ಲ. ಈಗಲೂ ಜಗತ್ತಿನಾದ್ಯಂತ ಮನಸ್ಮೃತಿಯು ಅಪಾರವಾದ ಗೌರವವವನ್ನೂ ಮತ್ತು ಎಲ್ಲರ ಸ್ವಪ್ರೇರಿತ ಮನ್ನಣೆಯನ್ನೂ ಪಡೆದುಕೊಳ್ಳುತ್ತದೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಇದರ ಬಗ್ಗೆ ಅರಿವೇ ಇಲ್ಲ"
ಎಂದು 'ಸಮಾನತೆಯ ಸಂವಿಧಾನ'ದ ಬದಲಿಗೆ 'ತಾರತಮ್ಯದ ಮನುಸ್ಮೃತಿ'ಯನ್ನು ಎತ್ತಿಹಿಡಿಯುತ್ತದೆ.
ಆರೆಸ್ಸೆಸ್‌ನ ಎರಡನೇ ಸರಸಂಘಚಾಲಕ ಗೋಳ್ವಾಲ್ಕರ್ ಅವರು ತಮ್ಮ "BUNCH OF THOUGHTS" ಬರಹ ಸಂಕಲನದಲ್ಲಿ ತ್ರಿವರ್ಣ ಧ್ವಜವನ್ನು ಭಾರತದ ಧ್ವಜವನ್ನಾಗಿ ಮಾಡಿದ್ದನ್ನು ತೀವ್ರವಾಗಿ ಟೀಕಿಸುತ್ತಾರೆ:
"ನಮ್ಮ ನಾಯಕರುಗಳು ನಮ್ಮ ದೇಶಕ್ಕೆ ಹೊಸ ಬಾವುಟ ಮತ್ತು ಹೊಸ ರಾಷ್ರಗೀತೆಯನ್ನು ಕೊಟ್ಟಿದ್ದಾರೆ. ಏಕೆ ಹೀಗೆ? ಅತ್ಯಂತ ಸನಾತನವಾದ ನಮ್ಮ ರಾಷ್ಟ್ರಕ್ಕೆ ಒಂದು ಬಾವುಟ ಇರಲಿಲ್ಲವೇ? ರಾಷ್ಯ್ರಗೀತೆ ಇರಲಿಲ್ಲವೇ? ಇತ್ತು. ಹಾಗಿದ್ದ ಮೇಲೆ ಏಕೀ ವಿಸ್ಮೃತಿ" ಎಂದು ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸುತ್ತಾರೆ.
ಭಾರತವೆಂಬುದು ಅಮೂರ್ತವಾದ ಒಂದು ನಾಗರೀಕತೆಯಾಗಿದ್ದರೂ ಅದು ಎಂದೂ ನಾಗರೀಕರು ಸ್ವ ಇಚ್ಚೆಯಿಂದ ಒಪ್ಪಿಕೊಳ್ಳುವ ಒಂದು ರಾಷ್ಟ್ರವಾಗಿರಲಿಲ್ಲ.
ರಾಷ್ಟ್ರವೆಂಬ ಪರಿಕಲ್ಪನೆಯೇ ಒಂದು ಆಧುನಿಕ ಉತ್ಪನ್ನ. ಹೀಗಿರುವಾಗ ಗೋಳ್ವಾಲ್ಕರ್ ಹೇಳುತ್ತಿರುವ ರಾಷ್ಟ್ರ ಆರೆಸ್ಸೆಸ್ ಕಟ್ಟಬಯಸುವ ಹಿಂದೂ ರಾಷ್ಟ್ರವೇ ಹೊರತು ಮತ್ತೇನಲ್ಲ. ಇಲ್ಲಿ ಅವರು ಸೂಚಿಸುತ್ತಿರುವುದು ಭಗವಾಧ್ವಜವನ್ನೇ ಹೊರತು ಬೇರೇನನ್ನೂ ಅಲ್ಲ.
ಆರೆಸ್ಸೆಸ್ ಕಚೇರಿಯ ಮೇಲೆ ರಾಷ್ಟ್ರೀಯ ದಿನಗಳಂದೂ ರಾಷ್ಟ್ರಧ್ವಜವಿರುತ್ತಿರಲಿಲ್ಲ!
ಹೀಗೆ ಭಾರತ ರಾಷ್ಟ್ರ ಮತ್ತು ರಾಷ್ಟ್ರಧ್ವಜದ ಬಗ್ಗೆ ಸಂಘಪರಿವಾರದ ತಿರಸ್ಕಾರ ಮತ್ತು ಭಾರತವನ್ನು ಹಿಂದೂರಾಷ್ಟ್ರ ಅರ್ಥಾತ್ ಬ್ರಾಹ್ಮಣ ರಾಷ್ಟ್ರವನ್ನಾಗಿ ಮಾಡುವ ಪ್ರಯತ್ನಗಳು ೪೭ ರ ನಂತರವೂ ಮುಂದುವರೆಯಿತು.
ಹಾಗೆ ನೋಡಿದರೆ 2002 ರ ವರೆಗೂ ಆರೆಸ್ಸೆಸ್ ಕಚೇರಿಗಳ ಮೇಲೆ ಭಾರತದ ಬಾವುಟ ಹಾರಾಡಲೇ ಇರಲಿಲ್ಲ. 2001 ರಲ್ಲಿ "ರಾಷ್ಟ್ರಪ್ರೇಮಿ ಯುವದಳ" ಎಂಬ ಸಂಘಟನೆಯ ಕಾರ್ಯಕರ್ತರು ಆರೆಸ್ಸೆಸ್ ನ ನಾಗಪುರದ ಪ್ರಧಾನ ಕಚೇರಿಯ ಮೇಲೆ ಬಲವಂತವಾಗಿ ರಾಷ್ಟ್ರಧ್ವಜವನ್ನು ಹಾರಿಸಿದರು. ಅವರನ್ನು ಹಿಡಿದು ಆರೆಸ್ಸೆಸ್ ನ ದೇಶಭಕ್ತ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದರು.
ಆ ನಂತರ 2002 ರಲ್ಲಿ ಮೊದಲ ಬಾರಿಗೆ ಆರೆಸ್ಸೆಸ್ ನ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು.
ಏಕೆ ಹೀಗೆ?
2002 ರಲ್ಲಿ ವಾಜಪೇಯಿ ಸರ್ಕಾರ ರಾಷ್ಟ್ರಧ್ವಜವನ್ನು ಖಾಸಗಿಯವರು ಹಾರಿಸಬಹುದೆಂದು ಭಾರತದ ಧ್ವಜ ನಿಯಮಗಳಿಗೆ ತಿದ್ದುಪಡಿ ತರುವವರೆಗೆ ಖಾಸಗಿ ವ್ಯಕ್ತಿ-ಸಂಘಟನೆಗಳು ರಾಷ್ಯ್ರಧ್ವಜವನ್ನು ಹಾರಿಸುವಂತಿರಲಿಲ್ಲವಾದ್ದರಿಂದ ಆವರೆಗೆ ಆರೆಸ್ಸೆಸ್ ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿರಲಿಲ್ಲ ಎಂಬ ಸಬೂಬನ್ನು ಆರೆಸ್ಸೆಸ್ ನೀಡುತ್ತದೆ.
ಆದರೆ ಭಾರತದ 1955ರ ಭಾರತದ ರಾಷ್ಟ್ರ ಧ್ವಜದ ನಿಯಮಗಳಾಗಲೀ, 1971 ರ ನಿಯಮಗಳಾಗಲೀ ಖಾಸಗಿ ವ್ಯಕ್ತಿಗಳು ಮತ್ತು ಸಂಘಟನೆಗಳು ಪ್ರತಿದಿನ ರಾಷ್ಟ್ರಧ್ವಜವನ್ನು ಹಾರಿಸುವುದನ್ನು ಮಾತ್ರ ನಿಷೇಧಿಸುತ್ತವೆ.
ಅರ್ಥಾತ್ ..
ರಾಷ್ಟ್ರೀಯ ದಿನಗಳಾದ ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ದಿನ ಇನ್ನಿತ್ಯಾದಿ ಆರು ದಿನಗಳಂದು ಎಲ್ಲಾ ವ್ಯಕ್ತಿಗಳೂ ಹಾಗೂ ಸಂಘಟನೆಗಳು ತಮ್ಮ ಮನೆ ಮತ್ತು ಕಚೇರಿಗಳ ಮೇಲೆ ರಾಷ್ರಧ್ವಜವನ್ನು ಹಾರಿಸಲು ಅನುಮತಿಸುತ್ತದೆ.
ಆದರೂ ಆರೆಸ್ಸೆಸ್ ಕಚೇರಿಯ ಮೇಲೆ ರಾಷ್ರಧ್ವಜದ ಬದಲಿ ಭಗ್ವಾಧ್ವಜ ಮಾತ್ರ ಹಾರುತ್ತಿರುವುದಕ್ಕೆ ಕಾರಣ ಬಿಡಿಸಿ ಹೇಳಬೇಕಿಲ್ಲ.
2002 ರ ತನಕ ತಮ್ಮ ಕಚೇರಿಗಳ ಮೇಲೆ ಉದ್ದೇಶಪೂರ್ವಕವಾಗಿ ರಾಷ್ಟ್ರ ಧ್ವಜ ಹಾರಿಸದ ಈ ಸಂಘಿಗಳು 1994 ರಲ್ಲಿ ಹುಬ್ಬಳ್ಳಿಯಲ್ಲಿ ಅಂಜುಮಾನ್ ಮೈದಾನದ ಮೇಲೆ, ಶ್ರೀನಗರದ ಲಾಲ್ ಚೌಕಿನಲ್ಲಿ ರಾಷ್ಟ್ರಧ್ವಜ ಹಾರಿಸಲು ಮುಂದಾಗಿದ್ದರು.
ಅದರ ಹಿಂದೆ ಭಾರತದ ಧ್ವಜವನ್ನು ಕೂಡಾ ಭಗವಾಧ್ವಜದ ಉದ್ದೇಶಕ್ಕೆ ಪೂರಕವಾಗಿ ಬಳಸಿಕೊಳ್ಳುವ ಉದ್ದೇಶವೇ ಇತ್ತು. ರಾಷ್ಟ್ರಭಕ್ತಿಯಲ್ಲ.
ತೀರಾ ಇತ್ತಿಚಿನ ದಿನಗಳಲ್ಲಿ ಬಿಜೆಪಿ ನಾಯಕರು ರೈತ ಹೋರಾಟದಲ್ಲಿ ಮೃತನಾದ ಹುತಾತ್ಮ ಕಿಸಾನನಿಗೆ ರಾಷ್ಟ್ರಧ್ವಜ ಸುತ್ತಿಸಿ ಅಂತಿಮ ಕಾರ್ಯಕ್ರಮವನ್ನು ಮಾಡಿದ್ದನ್ನು ಹಾಗೂ ಹಿಂದೊಮ್ಮೆ ಕಾಂಗ್ರೆಸ್ ಪಕ್ಷವು ವಿಧಾನ ಸೌಧದಲ್ಲಿ ರಾಷ್ರಧ್ವಜವನ್ನು ಪ್ರದರ್ಶಿಸುತ್ತಾ ಪ್ರತಿಭಟನೆ ಮಾಡಿದ್ದನ್ನು ರಾಷ್ಟ್ರಧ್ವಜಕ್ಕೆ ಆದ ಅಪಮಾನ ಎಂದು ಇಲ್ಲದ ಕಾನೂನನ್ನು ಉದ್ದರಿಸುತ್ತಾ ಹುಸಿ ದೇಶಪ್ರೇಮವನ್ನು ಪ್ರದರ್ಶಿಸುತ್ತಿದ್ದಾರೆ.
ಆದರೆ ಬಿಜೆಪಿ ಪ್ರಧಾನಿ ಮೋದಿ ಯೋಗದಿನದಂದು ರಾಷ್ಟ್ರ ಧ್ವಜದಿಂದ ಬಹಿರಂಗವಾಗಿ ಬೆವರು ಒರೆಸಿಕೊಂಡಿದ್ದನ್ನು, 2015 ರಲ್ಲಿ ಉತ್ತರಪ್ರದೇಶದ ದಾದ್ರಿಯಲ್ಲಿ ಅಖ್ಲಾಕ್ ಖಾನ್ ಎಂಬ ಮುಗ್ಧ ವೃದ್ಧನನ್ನು ಕೊಂದ ಆರೋಪ ಹೊತ್ತಿದ್ದ ಸಿಸೋಡಿಯಾ ಎಂಬ ಬಿಜೆಪಿ ನಾಯಕ ಮೃತನಾದಾಗ ಆತನ ಹೆಣಕ್ಕೆ ರಾಷ್ಟ್ರಧ್ವಜವನ್ನು ಸುತ್ತಿ ಅಂತ್ಯಕ್ರಿಯೆ ನಡೆಸಿದ್ದನ್ನು, ಬಿಜೆಪಿಯ ನಾಯಕ ಕಲ್ಯಾಣ್ ಸಿಂಗ್ ಮೃತರಾದಾಗ ರಾಷ್ಟ್ರಧ್ವಜದ ಮೇಲೆ ಬಿಜೆಪಿ ಬಾವುಟವನ್ನು ಇರಿಸಿದ್ದನ್ನು ಅಷ್ಟೇ ವಿತಂಡವಾದದಿಂದ ಸಮರ್ಥಿಸಿಕೊಳ್ಳುತ್ತಾರೆ.
ಸಾರಾಂಶವಿಷ್ಟೆ.
ರಾಷ್ಟ್ರಧ್ವಜವನ್ನು ಇಳಿಸಿ ಭಾಗವಾಧ್ವಜವನ್ನು ಹಾರಿಸಬೇಕೆಂಬುದು , ರಾಮನೇ ರಾಷ್ಟ್ರವೆನ್ನುವುದು, ದೇಶವೇ ದೇವನೆನ್ನುವುದು ಒಂದೇ ಶಡ್ಯಂತ್ರದ ಭಾಗ: ಸ್ವಾತಂತ್ರ್ಯ , ಸಮಾನತೆ ಮತ್ತು ಭ್ರಾತೃತ್ವದ ಆಶಯದ ದೇಶವನ್ನು ನಾಶ ಮಾಡಿ ಮತ್ತೊಮ್ಮೆ ಇಲ್ಲಿನ ಶೂದ್ರರನ್ನು 'ಹನುಮ'ರನ್ನಾಗಿಸಿ ಬ್ರಾಹ್ಮಣ್ಯದ ಗುಲಾಮರನ್ನಾಗಿಸಿಕೊಳ್ಳುವುದೇ ಆಗಿದೆ.
ಇದನ್ನು ಯುವಜನಾಂಗಕ್ಕೆ ಅರ್ಥಪಡಿಸಿ ಸಂಘಟಿಸುವುದು ಎಷ್ಟು ತುರ್ತಿನ ವಿಷಯವಾಗಿದೆ ಎಂಬುದನ್ನು ಕೆರೆಗೋಡು ಪ್ರಕರಣ ಮುಖಕ್ಕೆ ರಾಚುವಂತೆ ಹೇಳುತ್ತಿದೆ. ಅದನ್ನು ಹಿಂದೂತ್ವದ ಜೊತೆ ಅವಕಾಶವಾದಿ ರಾಜಿ ಮಾಡಿಕೊಂಡಿರುವ ಮತ್ತು ಆರೆಸ್ಸೆಸ್ಸಿನ 'ಬಿ ಟೀಂ' ನಂತಿರುವ ಪಕ್ಷಗಳು ಮಾಡುವುದಿಲ್ಲ. ಹೀಗಾಗಿ ಈ ದೇಶವನ್ನು ಸಮಾನತೆ ಮತ್ತು ಸೌಹಾರ್ದದ ತೋಟವಾಗಿ ಉಳಿಸಿಕೊಳ್ಳಬೇಕೆಂದಿರುವರೇ ಅದನು ಸಮರೋಪಾದಿಯಲ್ಲಿ ಮಾಡಬೇಕು. ಅಲ್ಲವೇ?
ಕೃಪೆ: ವಾರ್ತಾಭಾರತಿ