Advertisement

ಬಿಜೆಪಿಯ ನಾಯಕರು ಹಗರಣಮುಕ್ತರಾಗಿ ಹೊರಬಂದು ಕಾಂಗ್ರೆಸ್ ವಿರುದ್ಧ ಹೋರಾಡಲಿ: ನಕ್ರೆ

Advertisement

ಮುಡ ಹಾಗೂ ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣಗಳನ್ನು ವೈಭವೀಕರಿಸಿ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು  ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ಸಿನ ಜನಪರ ಆಡಳಿತಕ್ಕೆ ಭ್ರಷ್ಟಾಚಾರದ ಮಸಿ ಬಳಿದು ಅಸ್ಥಿರಗೊಳಿಸುವ ವ್ಯರ್ಥ ಹುನ್ನಾರ ನಡೆಸುವ ಮೊದಲು ಬಿಜೆಪಿ ನಾಯಕರು ತಮ್ಮ ಪಕ್ಷದ ಆಡಳಿತಾವಧಿಯಲ್ಲಿ ತಮ್ಮ ಮುಖಕ್ಕೆ ಅಂಟಿದ್ದ ಭ್ರಹ್ಮಾಂಡ ಭ್ರಷ್ಟಾಚಾರದ ಮಸಿಯನ್ನೊಮ್ಮೆ ತೊಳೆದುಕೊಂಡು ತಾವು ಪರಿಶುದ್ಧ ರೆನ್ನಿಸಿಕೊಳ್ಳಲಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಮಡದಿಗೆ ರಾಜ್ಯದಲ್ಲಿ ಬಿಜೆಪಿ  ಆಡಳಿತದ ಅವಧಿಯಲ್ಲಿ ಕಾನೂನಾತ್ಮಕವಾಗಿ ಮುಡಾ ಪರಿಹಾರ ರೂಪದಲ್ಲಿ ನೀಡಿರುವ ಸೈಟನ್ನು  ಭ್ರಷ್ಟಾಚಾರವೆಂದು ಬಿಂಬಿಸಲು ಹೋಗಿ ಇದೀಗ ಆ ಪ್ರಕರಣದಲ್ಲಿ 10ಕ್ಕೂ ಹೆಚ್ಚು ಬಿಜೆಪಿ ಮತ್ತು ಜನತಾ ದಳದ ನಾಯಕರು ಅನಧಿಕೃತವಾಗಿ ಸೈಟ್ ಪಡೆದಿರುವುದು ಬೆಳಕಿಗೆ ಬಂದಿದೆ. ಮುಡಾ ಭ್ರಷ್ಟಾಚಾರ ಹಗರಣ ಬಿಜೆಪಿ ಆಡಳಿತಾವಧಿಯ ಮುಂದುವರಿದ ಭಾಗವಾಗಿದೆಯೇ ಹೊರತು ಈಗಿನ ಸರಕಾರದ ಅವಧಿಯದ್ದಲ್ಲ. ರಾಜ್ಯ ಸರಕಾರ ಈಗಾಗಲೇ ವಿಚಾರಣಾ ಆಯೋಗ ನೇಮಿಸಿರುವ ಹೊರತಾಗಿಯೂ ಬಿಜೆಪಿ ನಾಯಕರು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸ ಬೇಕೆಂದು ಒತ್ತಡದ ಹೇಳಿಕೆ ನೀಡುವ ಹಿಂದೆ ಪ್ರಕರಣವನ್ನು ತಮ್ಮ ಗುರಿ ಸಾಧನೆಗೆ ಬಳಸಿಕೊಳ್ಳುವ ವ್ಯವಸ್ಥಿತ ಹುನ್ನಾರ ಅಡಗಿದೆ ಎಂದಿದ್ದಾರೆ.

ವಾಲ್ಮೀಖಿ ನಿಗಮದ 94ಕೋಟಿ ರೂ. ಅನಧಿಕೃತ ವರ್ಗಾವಣೆ ಪ್ರಕರಣದಡಿ ರಾಜ್ಯ ಸರಕಾರ ನೇಮಿಸಿದ ವಿಶೇಷ ತನಿಖಾ ದಳ ವಿಚಾರಣೆ ನಡೆಸುತ್ತಿದ್ದು ಇದರಲ್ಲಿ ಅದಾಗಲೇ ಸಂಬಂಧ ಪಟ್ಟ ಇಲಾಖಾ ಸಚಿವರ ರಾಜೀನಾಮೆಯ ತಲೆದಂಡವಾಗಿತ್ತು. ಇದರ ಹೊರತಾಗಿಯೂ  ಇದೇ ಪ್ರಕರಣದಲ್ಲಿ ಸುಮೋಟೊ ಪ್ರಕರಣ ದಾಖಲಿಸಿ ರಾಜಿನಾಮೆಕೊಟ್ಟ  ಇದೇ ಸಚಿವರನ್ನು  ಕೇಂದ್ರೀಯ ಜಾರಿ ನಿರ್ಧೇಶನಾಲಯ (ಇಡಿ) ಬಂಧಿಸಿದೆ. ಆದರೆ ಬಿಜೆಪಿಯ ಮುಖ್ಯಮಂತ್ರಿ ಬೊಮ್ಮಾಯಿ ಆಡಳಿತಾವಧಿಯಲ್ಲಿ ನಡೆದ ದೇವರಾಜ ಅರಸು ಟ್ರಕ್ ಟರ್ಮಿನಲ್ಲಿ ಬಹುಕೋಟಿ ಹಣ ವರ್ಗಾವಣೆ ಹಗರಣದಲ್ಲಿ ಅಂದಿನ ಸರಕಾರ ಇದರ ಹೊಣೆಹೊತ್ತ ಅಂದಿನ ಸಾರಿಗೆ ಸಚಿವ ಶ್ರೀ ರಾಮುಲುರವರ ರಾಜಿನಾಮೆ ಕೊಡಿಸಿರಲಿಲ್ಲ. ಕೇಂದ್ರೀಯ  ಜಾರಿ ನಿರ್ಧೇಶನಾಲಯ ಸುಮೋಟೋ ಪ್ರಕರಣ ದಾಖಲಿಸಿ ಸಚಿವ ರಾಮುಲುರವರನ್ನು ಬಂಧಿಸಿಯೂ ಇಲ್ಲ. ಆದರೆ ಬಿಜೆಪಿ ಸರಕಾರ ಮುಚ್ಚಿಹಾಕಲು ನೋಡಿದ್ದ ಈ ಭ್ರಷ್ಟಾಚಾರ ಹಗರಣದಲ್ಲಿ  ಈಗಾಗಲೇ  47 ಕೋಟಿ ರೂ. ಅನಧಿಕೃತ ವರ್ಗಾವಣೆ ಗೈದ ನಿಗಮದ ಮಾಜೀ ಅಧ್ಯಕ್ಷರೂ ಸೇರಿ ಇಬ್ಬರು ಬಿಜೆಪಿಯ ಮಾಜಿ ವಿಧಾನ ಪರಿಷತ್ ಸದಸ್ಯರನ್ನು ರಾಜ್ಯ ಸರಕಾರ ನೇಮಿಸಿದ ವಿಶೇಷ ತನಿಖಾ ದಳ ಬಂಧಿಸಿ ಜೈಲಿಗಟ್ಟಿದೆ. ಇದು ಕಾಂಗ್ರೆಸ್ ಸರಕಾರದ ಕಾರ್ಯತತ್ಪರತೆಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಇದೇ ಬಿಜೆಪಿ ಅವಧಿಯಲ್ಲಿ  ಅನ್ನ ಭಾಗ್ಯದ ಅಕ್ಕಿ ಕಳವು ಗೈದ  ಸುಮಾರು 3ಕೋಟಿ ರೂ. ಭ್ರಷ್ಠಾಚಾರ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ಮುಖಂಡನನ್ನು ಬಂಧಿಸಿರುವುದು ಬಿಜೆಪಿಯ ಭ್ರಷ್ಟ ಮನಸ್ಥಿತಿಗೆ ಸಾಕ್ಷಿಯಾಗಿದೆ. ಪಿಎಸ್ಐ ನೇಮಕಾತಿ ಹಗರಣ, ಪ್ರಾಧ್ಯಾಪಕರ ನೇಮಕಾತಿ ಹಗರಣ, ಅರ್ ಡಿ ಪಿ ಅರ್ ಭ್ರಷ್ಟಾಚಾರ ಪ್ರಕರಣ, ಹಸಿರು ಮೇವು ಹಗರಣ, ಜಿ ಕೆಟಗರಿ ಸೈಟ್ ಹಂಚಿಕೆ ಹಗರಣವೇ ಮೊದಲಾದ‌ ಭ್ರಷ್ಟಾಚಾರ ಪ್ರಕರಣಗಳ ಮೂಲಕ ತನ್ನ ಆಡಳಿತಾವಧಿಯಲ್ಲಿ ರಾಜ್ಯದ ಜನತೆಗೆ ದ್ರೋಹ ಮಾಡಿದ್ದ  ಬಿಜೆಪಿಗೆ ಇದೀಗ ರಾಜ್ಯ ಸರಕಾರ ವಿವಿಧ ಇಲಾಖೆಗಳಡಿ ಮುಖ್ಯವಾಗಿ  ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ,  ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೇ ಮೊದಲಾದೆಡೆ ನಡೆದ ಬಹುಕೋಟಿ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನುಂಗಲಾಗದ ತುತ್ತಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement
Advertisement
Recent Posts
Advertisement