ಜಯಚಂದ್ರರ ಸಾಧನೆಗಳ ಹೊರತಾಗಿ ಶಿರಾ ಕ್ಷೇತ್ರಕ್ಕೆ ಬಿಜೆಪಿ, ಜೆಡಿಎಸ್ ಸರ್ಕಾರಗಳ ಕೊಡುಗೆ ಏನು : ಜಿ. ಪರಮೇಶ್ವರ್ ಪ್ರಶ್ನೆ.
ಜಯಚಂದ್ರರ ಸಾಧನೆಗಳ ಹೊರತಾಗಿ ಶಿರಾ ಕ್ಷೇತ್ರಕ್ಕೆ ಬಿಜೆಪಿ, ಜೆಡಿಎಸ್ ಸರ್ಕಾರಗಳ ಕೊಡುಗೆ ಏನು : ಜಿ. ಪರಮೇಶ್ವರ್ ಪ್ರಶ್ನೆ.
Advertisement
ಪ್ರತ್ಯಕ್ಷ ವರದಿ
'ತುಮಕೂರು ಜಿಲ್ಲೆ ಬರದ ನಾಡಾಗಿತ್ತು. ಅದೊಂದು ಬಯಲುಸೀಮೆಯ ಒಣ ಪ್ರದೇಶವಾಗಿತ್ತು. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕೃಷಿ ಮತ್ತು ಕುಡಿಯುವ ನೀರಿಗೆ ಜನ ಪರದಾಡುತ್ತಿದ್ದರು. ಒಂದು ಕೊಡ ನೀರಿಗಾಗಿ ಮೈಲು ಗಟ್ಟಲೆ ದೂರ ನಡೆದು ಹೋಗಿ ನೀರು ತರುತ್ತಿದ್ದರು ಈ ಭಾಗದ ತಾಯಂದಿರು. ತನ್ನ ವಿಧಾನಸಭಾ ಕ್ಷೇತ್ರ ಶಿರಾದ ನೀರಾವರಿಯ ಅಗತ್ಯತೆ ಅರಿತು ಆ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸಿ ಜನರ ಮೊಗದಲ್ಲಿ ಧನ್ಯತಾಭಾವ ಮೂಡಿಸಿದ ಓರ್ವ ಜನಪ್ರತಿನಿಧಿ ಇದ್ದರೆ ಅದು ಟಿ.ಬಿ ಜಯಚಂದ್ರರವರು. 247ಕಿ.ಮೀ ದೂರದ ಹೇಮಾವತಿಯ ನೀರನ್ನು ಈ ಜಿಲ್ಲೆಗೆ ಹರಿಸಿದ ಕೀರ್ತಿ ಅದೇನಿದ್ದರೂ ಕಾಂಗ್ರೆಸ್ ಪಕ್ಷದ್ದು. ಶಿರಾ ತಾಲೂಕಿನಾದ್ಯಂತ 151 ಬ್ಯಾರೇಜ್ ನಿರ್ಮಿಸುವ ಮೂಲಕ ಶಿರಾ ಕ್ಷೇತ್ರದ ಅಂತರ್ಜಲ ಮಟ್ಟ ಏರಿಕೆಯ ಕನಸು ಕಂಡು ಅದನ್ನು ಸಾಕಾರಗೊಳಿಸಿದವರು ಟಿ.ಬಿ ಜಯಚಂದ್ರರವರು. ಈ ಸಾಧನೆ ಅಜರಾಮರ. ಇದನ್ನು ಈ ಕ್ಷೇತ್ರದ ಜನ ಖಂಡೀತವಾಗಿಯೂ ಮರೆಯಲಾರರು. ಈ ಬಾರಿ ಜಯಚಂದ್ರ ಗೆಲುವು ಖಚಿತ' ಎಂದು ಮಾಜಿ ಉಪಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಜಿ ಪರಮೇಶ್ವರ್ ಹೇಳಿದ್ದಾರೆ.
ಅವರು ಶನಿವಾರ ಶಿರಾದ ಕಾಂಗ್ರೆಸ್ ಸಮನ್ವಯ ಮತ್ತು ಪ್ರಚಾರ ಕಚೇರಿ ಶ್ರೇಯಸ್ ಕಂಫರ್ಟ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
'ಇದೀಗ ರಾಜ್ಯದಲ್ಲಿ, ಕೇಂದ್ರದಲ್ಲಿ ಬಿಜೆಪಿ ಆಡಳಿತ ಇರುವಂತೆಯೇ ಈ ಹಿಂದೆಯೂ ಕೂಡ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಅಧಿಕಾರ ನಡೆಸಿವೆ. ಆದರೆ ಜಯಚಂದ್ರರವರ ಸಾಧನೆಯ ಹೊರತಾಗಿ ಈ ಬಿಜೆಪಿ ಜೆಡಿಎಸ್ ಪಕ್ಷಗಳ ಆಡಳಿತಾವಧಿಯಲ್ಲಿ ತುಮಕೂರು ಜಿಲ್ಲೆಗೆ ಅಥವಾ ಶಿರಾ ತಾಲೂಕಿಗೆ ಅವರ ಕೊಡುಗೆ ಏನು ಎಂಬುವುದನ್ನು ದಾಖಲೆ ಸಮೇತ ಸಾಬೀತುಪಡಿಸಿ ಆ ನಂತರ ಮತಕೇಳಲಿ. ಈ ಜಿಲ್ಲೆಯಲ್ಲಿ ಅಥವಾ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಇರುವುದೆಲ್ಲವೂ ಕಾಂಗ್ರೆಸ್ ಪಕ್ಷ ಜನತೆಯ ಅಗತ್ಯತೆ ಅರಿತು ಮಾಡಿರುವ ಸಾಧನೆಯಾಗಿದೆ. ನೀರು, ಶಾಲೆ, ರಸ್ತೆ, ಚರಂಡಿ, ಉದ್ಯೋಗ, ಶೌಚಾಲಯ, ಆಸ್ಪತ್ರೆ ಮುಂತಾದ ಮೂಲಭೂತ ಸೌಕರ್ಯ ನೀಡಿದ್ದು ಕಾಂಗ್ರೆಸ್ ಪಕ್ಷವಾಗಿದೆ. ತುಮಕೂರು ಜಿಲ್ಲೆಗೆ ವಿಶ್ವವಿದ್ಯಾಲಯ ತರುವ ಮೂಲಕ ಇಲ್ಲಿನ ಸಾವಿರಾರು ವಿಧ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟದ್ದು ಕಾಂಗ್ರೆಸ್. 18,500ಎಕರೆ ಜಾಗದಲ್ಲಿ ಕೈಗಾರಿಕಾ ಪ್ರದೇಶ ನಿರ್ಮಿಸುವ ಮೂಲಕ ಈ ಭಾಗದ ಕನಿಷ್ಠ ನಾಲ್ಕು ಲಕ್ಷ ಕಾರ್ಮಿಕರಿಗೆ ಉದ್ಯೋಗ ಒದಗಿಸಿದ ಕೀರ್ತಿ ಕಾಂಗ್ರೆಸ್ ಪಕ್ಷದ್ದಾಗಿದೆ. ಇವ್ಯಾವುದನ್ನೂ ಕಾಂಗ್ರೆಸ್ ಪಕ್ಷವಿರಲಿ ಅಥವಾ ನಮ್ಮ ಅಭ್ಯರ್ಥಿ ಮಾಜಿ ಶಾಸಕ ಟಿ.ಬಿ ಜಯಚಂದ್ರರವರೆ ಇರಲಿ ಪ್ರಚಾರದ ಉದ್ದೇಶಕ್ಕಾಗಿ ಮಾಡಿರಲಿಲ್ಲ ಬದಲಿಗೆ ಜನಪರ ಕಾಳಜಿಯಿಂದ ಮಾಡಿದ್ದರು' ಎಂದವರು ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಅವರು 'ಇದೀಗ ಶಿರಾ ಉಪಚುನಾವಣೆ ಪ್ರಚಾರಕ್ಕೆ ಆಗಮಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಇನ್ನು ಆರು ತಿಂಗಳಲ್ಲಿ ಮದಲೂರು ಕೆರೆಗೆ ನೀರು ಹರಿಸುವುದಾಗಿ ಹೇಳಿದ್ದಾರೆ. ಆದರೆ ಈ ಕೆರೆಗೆ 2017ರಲ್ಲಿ ಜಯಚಂದ್ರರವರ ಅವಧಿಯಲ್ಲೆ ನೀರು ಹರಿಸಲಾಗಿತ್ತು. ಇದೀಗ ಹೊಸದಾಗಿ ನೀರು ಹರಿಸುವಂತಹ ಇವರ ಈ ಹೇಲಿಕೆ ಬಾಲಿಷತೆಯ ಹೇಳಿಕೆಯಾಗಿದೆ. ಆರು ತಿಂಗಳ ಸಮಯಾವಕಾಶ ಏಕೆ? ಅದೇಕೆ ಅವರು ಆ ಕುರಿತು ಈಗಲೇ ಆದೇಶ ನೀಡುತ್ತಿಲ್ಲ? ಇದು ಶಿರಾ ಕ್ಷೇತ್ರದ ಜನರನ್ನು ಮರಳು ಮಾಡುವ ತಂತ್ರಗಾರಿಕೆಯಾಗಿದೆ. ಶಿರಾ ಮತದಾರರು ಪ್ರಜ್ಞಾವಂತರಿದ್ದಾರೆ, ಯೋಚಿಸಿ ಮತದಾನ ಮಾಡಲಿದ್ದಾರೆ' ಎಂದರು.
_________________________
►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com