ಕೊರೊನಾ ಮಹಾಮಾರಿಯ ನಡುವೆಯೂ ರಕ್ತದಾನ ಶಿಬಿರ ನಡೆಸಿ ಮಾದರಿಯಾದ ಕಾರ್ಕಳ ಕಾಂಗ್ರೆಸ್: ಅಶೋಕ್ ಕೊಡವೂರು ಶ್ಲಾಘನೆ.
ಕೊರೊನಾ ಮಹಾಮಾರಿಯ ನಡುವೆಯೂ ರಕ್ತದಾನ ಶಿಬಿರ ನಡೆಸಿ ಮಾದರಿಯಾದ ಕಾರ್ಕಳ ಕಾಂಗ್ರೆಸ್: ಅಶೋಕ್ ಕೊಡವೂರು ಶ್ಲಾಘನೆ.
Advertisement
ವರದಿ: ಸತೀಶ್ ಕಾರ್ಕಳ
'ಉಡುಪಿ ಜಿಲ್ಲೆಯಲ್ಲಿ ಕೊರೊನಾ ಎರಡನೆಯ ಅಲೆ ಜನರ ಬದುಕನ್ನು ನಾಶಗೊಳಿಸಿದೆ. ಜನ ಒಂದೆಡೆ ಸಂಪಾದನೆ ಇಲ್ಲದೆ, ಇನ್ನೊಂದೆಡೆ ಆಸ್ಪತ್ರೆಯಲ್ಲಿ ಬೆಡ್ ದೊರಕದೆ, ಸೂಕ್ತ ಚಿಕಿತ್ಸೆ ದೊರಕದೆ, ಮತ್ತೊಂದೆಡೆ ಲಸಿಕೆ ಹಾಕಿಸಿಕೊಳ್ಳಲು ಕೂಡ ಪರದಾಡುತ್ತಿದ್ದಾರೆ. ರಾಜ್ಯದ, ದೇಶದ ಯಾವುದೇ ಮೂಲೆಯಲ್ಲಿ ಒಂದು ಚಿಕ್ಕ ಘಟನೆಯಾದರೂ ಉಡುಪಿಗೆ ಬಂದು ಪ್ರತಿಭಟನೆ ಮಾಡುವ ಸಂಸದೆ ಶೋಭಾ ಕರಂದ್ಲಾಜೆಯವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರುಗಳು ಇಂತಹ ಸಮಯದಲ್ಲಿ ಇಲ್ಲಿ ಇದ್ದು ಜನರ ಕಣ್ಣೀರು ಒರೆಸುವ ಕೆಲಸ ಮಾಡಬೇಕಿತ್ತು. ಆದರೆ ಅವರುಗಳು ಎಲ್ಲಿದ್ದಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಕೊರೊನಾ ಕುರಿತು ಈಗಾಗಲೇ ಜಿಲ್ಲೆಯಾದ್ಯಂತ ಜನರಿಗೆ ಸ್ಪಂದಿಸುವ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಅದರ ಭಾಗವಾಗಿ ನಡೆಯುತ್ತಿರುವ ಈ ರಕ್ತದಾನ ಶಿಬಿರ ಶ್ಲಾಘನೀಯ. ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕೊರೊನಾ ಮಹಾಮಾರಿಯ ನಡುವೆಯೂ ರಕ್ತದಾನ ಶಿಬಿರ ನಡೆಸಿ ಮಾದರಿಯಾಗಿದೆ' ಎಂದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರ್ ರವರು ಹೇಳಿದ್ದಾರೆ.
ಅವರು ಗುರುವಾರ ನಗರ ಕಾಂಗ್ರೆಸ್ ಕಾರ್ಕಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು 'ಕೊರೊನಾ ಎರಡನೇ ಅಲೆ ಅಪ್ಪಳಿಸಿರುವ ಈ ಸಂದರ್ಭದಲ್ಲಿ ರಕ್ತದಾನ ಶಿಬಿರದಂತಹ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗುವಂತಹ ಕೆಲಸವನ್ನು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಮಾಡಿದೆ. ದೇಶಕ್ಕೆ ಅವಘಡ ಒದಗಿರುವ ಇಂತಹ ಸಮಯದಲ್ಲಿ ನಾವೆಲ್ಲರೂ ನಮ್ಮ ರಾಜಕೀಯ ಭಿನ್ನಾಭಿಪ್ರಾಯ ಗಳನ್ನು ಬದಿಗೊತ್ತಿ ಜನರ ಸೇವೆ ಮಾಡುವಂತಾಗಬೇಕು. ಅದುವೇ ಪ್ರಜಾಪ್ರಭುತ್ವದ ಆಶಯ ಕೂಡ ಆಗಿದೆ. ಹಾಗೆಯೇ ಇದು ಟೀಕೆ ಮಾಡುವ ಸಮಯ ಅಲ್ಲ. ಸರಕಾರ ಇನ್ನೂ ಕೂಡ ಕೆಲವು ಆಸ್ಪತ್ರೆಗಳಲ್ಲಿ ಈ ಕುರಿತು ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲ. ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ನೌಕರರ, ವೈದ್ಯರುಗಳ, ಆಶಾ ಕಾರ್ಯಕರ್ತೆಯರ ಕೊರತೆ ಬಹುವಾಗಿ ಇದೆ. ಸರಕಾರ ನೇಮಕಾತಿಯನ್ನು ಮಾಡಿಲ್ಲ ಕೆಲವು ಗ್ರಾಮೀಣ ಮತ್ತು ಸಮುದಾಯ ಆಸ್ಪತ್ರೆಗಳಲ್ಲಿ ವೈದ್ಯರುಗಳ ಕೊರತೆ ಇದೆ. ಜಿಲ್ಲಾಡಳಿತ ಕೊರೋನಾ ನಿರ್ವಹಣೆಯ ಬಗ್ಗೆ ಇನ್ನೂ ಕೂಡ ಸರ್ವಪಕ್ಷೀಯ ಜನಪ್ರತಿನಿಧಿಗಳ ಸಭೆ ಕರೆದಿಲ್ಲ. ಎರಡನೇ ಅಲೆ ಈಗಾಗಲೇ ಬಂದಿದ್ದು ಇನ್ನು ಮೂರನೇ ಅಲೆ ಬರುವಂತಹ ಸಂದರ್ಭದಲ್ಲಿ ಸರಕಾರವು ಸೂಕ್ತ ಮುನ್ನೆಚ್ಚರಿಕೆ ವಹಿಸಿ ಕಾರ್ಯಪ್ರವೃತ್ತರಾಗಬೇಕು' ಎಂದು ಹೇಳಿದ್ದಾರೆ.
'ಕೋವಿಡ್ ನಿರ್ವಹಣೆಯಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಜನರು ಜಾಗರೂಕರಾಗಿ ಇರುವ ಮೂಲಕ ತಮ್ಮ ತಮ್ಮ ಸುರಕ್ಷತೆಯನ್ನು ಮಾಡಿಕೊಳ್ಳಬೇಕು' ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಶೇಖರ್ ಮಡಿವಾಳ ಹೇಳಿದರು.
'ರಕ್ತದಾನ ಶಿಬಿರದಂತಹ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಾಜಕ್ಕೆ ಉತ್ತಮವಾದ ಸಂದೇಶವೊಂದನ್ನು ನೀಡಿದೆ' ಎಂದು ಉದ್ಯಮಿ ಡಿ ಆರ್ ರಾಜು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಪೂಜಾರಿ, ಜಿಲ್ಲಾ ಮಣಿಪಾಲ ಸಂಸ್ಥೆಯ ವೈದ್ಯೆ ಆಸ್ನಾ ಜಾರ್ಜ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್ ಶೇಖರ್ ಮಡಿವಾಳ, ಇಂಟಕ್ ಅಧ್ಯಕ್ಷ ಸುಧಾಕರ್ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಮಧುರಾಜ್ ಶೆಟ್ಟಿ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಾಂತಿ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ಸಿನ ವಕ್ತಾರರಾದ ಬಿಪಿನ್ ಚಂದ್ರಪಾಲ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG(ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.