ಹಿಜಾಬ್, ಕೇಸರಿ ಶಾಲು ವಿವಾದ: ಎರಡೂ ಗುಂಪಿಗೆ ಕ್ಲಾಸಿನೊಳಗೆ ಪ್ರವೇಶ ನೀಡಿ ಮಾದರಿಯಾದ ಬೈಂದೂರು ಕಾಲೇಜ್ ಪ್ರಾಂಶುಪಾಲರು!
ಹಿಜಾಬ್, ಕೇಸರಿ ಶಾಲು ವಿವಾದ: ಎರಡೂ ಗುಂಪಿಗೆ ಕ್ಲಾಸಿನೊಳಗೆ ಪ್ರವೇಶ ನೀಡಿ ಮಾದರಿಯಾದ ಬೈಂದೂರು ಕಾಲೇಜ್ ಪ್ರಾಂಶುಪಾಲರು!
Advertisement
ಉಡುಪಿಯ ಮಹಿಳಾ ಕಾಲೇಜಿನಲ್ಲಿ ಆರಂಭಗೊಂಡು, ಅಚ್ಚರಿಯ ಬೆಳವಣಿಗೆಯಲ್ಲಿ ಕುಂದಾಪುರದ ಇತಿಹಾಸ ಪ್ರಸಿದ್ಧ ಜೂನಿಯರ್ ಕಾಲೇಜಿನಲ್ಲಿ ಸ್ಪೋಟಗೊಂಡು ಇದೀಗ ವಿವಿದೆಡೆಯ ಕಾಲೇಜುಗಳಿಗೆ ಹರಡಿದ ಹಿಜಾಬ್- ಕೇಸರಿ ಶಾಲು ಘರ್ಷಣೆಗೆ ಬೈಂದೂರಿನ ಸರಕಾರಿ ಕಾಲೇಜಿನ ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರು ತಗೆದುಕೊಂಡ 'ಹಾವು ಸಾಯಬಾರದು, ಕೋಲು ಮುರಿಯಬಾರದು' ಎಂಬಂತಹ ನಿರ್ಣಯದಿಂದಾಗಿ ಇದೀಗ ಸದ್ರಿ ಕಾಲೇಜು ರಾಜ್ಯಾದಾಧ್ಯಂತ ಜನ ಮನ್ನಣೆಗೆ ಪಾತ್ರವಾಗಿದೆ.
ವರದಿಯ ಪ್ರಕಾರ ಬೈಂದೂರು ಸರಕಾರಿ ಕಾಲೇಜಿನ ಸುಮಾರು 300+ ಯುವಕರು ಕೇಸರಿ ಶಾಲು ಹಾಕಿಕೊಂಡು ಕಾಲೇಜು ಪ್ರವೇಶ ಮಾಡಿದಾಗ ಕಾಲೇಜು ಪ್ರಾಂಶುಪಾಲರು 'ಸ್ಥಾಪಿತ ಹಿತಾಸಕ್ತ ಸಂಘಟನೆಗಳ ಚಿತಾವಣೆ'ಗೆ ಬಲಿಯಾಗದಂತೆ ಮತ್ತು ಉತ್ತಮವಾಗಿ ಓದಿ, ಉತ್ತಮ ಮಾರ್ಕ್ಸ್ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳುವಂತೆ ವಿಧ್ಯಾರ್ಥಿಗಳಿಗೆ ಬುದ್ದಿವಾದ ಹೇಳಿದ್ದರು. ಆದರೆ ಪ್ರಾಂಶುಪಾಲರ ಬುದ್ದಿವಾದ ಕೇಳಲು ತಯಾರಿಲ್ಲದ ವಿಧ್ಯಾರ್ಥಿಗಳು ತಮ್ಮ ಹಟವನ್ನು ಮುಂದುವರಿಸಿದಾಗ ಪರೀಕ್ಷೆ ಹತ್ತಿರದಲ್ಲಿರುವ ಕಾರಣದಿಂದ, ಅದರಿಂದ ಇತರ ವಿಧ್ಯಾರ್ಥಿಗಳಿಗಾಗುವ ತೊಂದರೆ ತಪ್ಪಿಸುವ ಸಲುವಾಗಿ ಎರಡೂ ಕಡೆಯವರಿಗೆ ಕ್ಲಾಸಿಗೆ ಪ್ರವೇಶ ನೀಡುವ ಮೂಲಕ ಮಾದರಿಯಾಗಿದ್ದಾರೆ. ಬಹುಶಃ ಇದೇ ಮಾದರಿಯಲ್ಲಿ ಕುಂದಾಪುರ ಜೂನಿಯರ್ ಕಾಲೇಜಿನಲ್ಲಿ ಕೂಡ ಅವಕಾಶ ನೀಡಿದ್ದರೆ ತಾಲೂಕಿನಾದ್ಯಂತ ಈ ಘಟನೆ ಪುನರಾವರ್ತನೆ ಆಗುವುದನ್ನು ತಪ್ಪಿಸಬಹುದಾಗಿತ್ತು ಎಂಬ ಮಾತು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಘಟನೆಯ ಹಿನ್ನಲೆ: ಕೆಲವು ಸ್ಥಾಪಿತ ಹಿತಾಸಕ್ತ ಸಂಘಟನೆಗಳ ಚಿತಾವಣೆಯ ಕಾರಣದಿಂದಾಗಿ, ಉಡುಪಿಯ ಮಹಿಳಾ ಕಾಲೇಜಿನಲ್ಲಿ ಬಹುತೇಕ ಕಳೆದ ಒಂದು ತಿಂಗಳಿಂದ ಎಂಬಂತೆ ನಡೆಯುತ್ತಿದ್ದ ಹಿಜಾಬ್ ವಿವಾದ ಕೊನೆಗೂ ತಾರ್ಕಿಕ ಅಂತ್ಯ ಕಾಣದೆ ಕೋರ್ಟು ಮೆಟ್ಟಲೇರಿದ ಕಾರಣದಿಂದಾಗಿ ಕಳೆದ ಮೂರು ದಿನಗಳ ಹಿಂದೆ ಕುಂದಾಪುರದ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಕೂಡ ಅದೇ ಮಾದರಿಯ ವಿವಾದ ಸ್ಪೋಟಗೊಂಡಿತ್ತು. ಕುಂದಾಪುರ ಕಾಲೇಜಿನಲ್ಲಿ ಯಾವುದೇ ಸಮಸ್ಯೆಗಳು ಇಲ್ಲದಿದ್ದ ಕಾರಣದಿಂದಾಗಿ ಬಹು ಹಿಂದಿನಿಂದಲೂ ಹಿಜಾಬ್ ಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಇದೀಗ ಕೆಲವು ಯುವಕರು ಕೇಸರಿ ಶಾಲು ಧರಿಸಿ ಕಾಲೇಜು ಪ್ರವೇಶಿಸಿದ ಕಾರಣದಿಂದಾಗಿ ಶಾಲಾ ಆಡಳಿತ ಕೇಸರಿ ಶಾಲು ಮತ್ತು ಹಿಜಾಬ್ ಎರಡನ್ನೂ ಹಾಕದಂತೆ ವಿಧ್ಯಾರ್ಥಿಗಳಿಗೆ ತಾಕೀತು ಮಾಡಿತ್ತು. ಆದರೆ ಇದಕ್ಕೊಪ್ಪದ ಮುಸ್ಲಿಂ ವಿಧ್ಯಾರ್ಥಿನಿಯರು ಹಿಜಾಬ್ ಅನ್ನು ನಾವು ಹಿಂದಿನಿಂದಲೂ ಹಾಕುತ್ತಿದ್ದು, ಸದ್ರಿ ಕಾಲೇಜಿನಲ್ಲಿ ಹಿಜಾಬ್ ಗೆ ಅವಕಾಶ ಇದೆ ಎಂಬ ಕಾರಣಕ್ಕಾಗಿ ನಾವು ಈ ಕಾಲೇಜಿಗೆ ಸೇರಿದ್ದಾಗಿಯೂ ನಮಗೆ ಇನ್ನುಳಿದ ಎರಡು ಮೂರು ತಿಂಗಳು ಕೂಡ ಅವಕಾಶ ನೀಡುವಂತೆ ಮನವಿ ಮಾಡಿದ್ದರು ಮತ್ತು ಎಂದಿನಂತೆಯೇ ಹಿಜಾಬ್ ಧರಿಸಿಯೇ ಕಾಲೇಜಿಗೆ ಬಂದಿದ್ದರು.
ಈ ನಡುವೆ ಕುಂದಾಪುರದ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಮಧ್ಯೆ ಪ್ರವೇಶಿಸಿ ಸಭೆ ನಡೆಸಿ ಶಾಲಾ ನಿಯಮಗಳನ್ನು ಪಾಲಿಸುವಂತೆ ವಿಧ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ವಿನಂತಿ ಮಾಡಿದ್ದರು. ಆದರೆ ವಿಧ್ಯಾರ್ಥಿಗಳು ಅದನ್ನು ಒಪ್ಪದ ಕಾರಣಕ್ಕಾಗಿ ಸಮಸ್ಯೆ ಮುಂದುವರಿದಿತ್ತು. ಆ ಸಂಧರ್ಭದಲ್ಲಿ ಕಾಲೇಜು ಪ್ರಾಂಶುಪಾಲರು ಸ್ವತಃ ಕಾಲೇಜಿನ ಗೇಟನ್ನು ಮುಚ್ಚಿ ವಿಧ್ಯಾರ್ಥಿನಿಯರನ್ನು ಒಳಪ್ರವೇಶಿಸದಂತೆ ತಡೆದಿದ್ದರು. ಆ ಕಾರಣದಿಂದಾಗಿ ಕಳೆದ ಮೂರು ದಿನಗಳಿಂದ ಆ ವಿಧ್ಯಾರ್ಥಿನಿಯರು ಗೇಟಿನ ಹೊರಗೆ ರಸ್ತೆ ಬದಿಯಲ್ಲಿ ಕುಳಿತು ಅಲ್ಲಿಯೇ ಓದಿ, ಅಲ್ಲಿಯೇ ಊಟ ಮಾಡಿ ಸಂಜೆ ಮನೆಗೆ ವಾಪಾಸಾಗಿದ್ದರು.
ಇತ್ತೀಚೆಗಿನ ತನಕವೂ ಹಿಜಾಬ್‌ಗೆ ಅವಕಾಶ ಒದಗಿಸಿದ್ದ ಪ್ರಾಂಶುಪಾಲರು ಇದೀಗ ಪರೀಕ್ಷೆ ಹತ್ತಿರವಾಗುತ್ತಿರುವ ಸಮಯದಲ್ಲಿ ಏಕಾಏಕಿ ವಿಧ್ಯಾರ್ಥಿನಿಯರಿಗೆ ಗೇಟಿನೊಳಗೆ ಪ್ರವೇಶಿಸದಂತೆ ತಡೆದ ವಿಡಿಯೋ ವೈರಲ್ ಆಗಿ ರಾಜ್ಯಾದ್ಯಂತ, ದೇಶಾದ್ಯಂತ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕೂಡ ಆ ಕುರಿತು ಆಕ್ರೋಶ ವ್ಯಕ್ತವಾಗಿತ್ತು. ಕುಂದಾಪುರ ಕಾಲೇಜಿನ ಘಟನೆಯ ಕುರಿತು ಯುಎಇ ರಾಜಕುಮಾರಿ ಹೆಂದ್ ಬಿಂತ್ ಫೈಸಲ್ ಕಾಸಿಮಿ ಸೋಶಿಯಲ್ ಮೀಡಿಯಾದಲ್ಲಿ 'ದಿ ಕ್ವಿಂಟ್' ನ ವರದಿಯನ್ನು ಹಂಚಿಕೊಂಡಿರುವ ಕುರಿತು ವರದಿಯಾಗಿದೆ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಕೇಂದ್ರದ ಮಾಜಿ ಸಚಿವ, ಖ್ಯಾತ ಸಾಹಿತಿ ಶಶಿ ತರೂರ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂತಾದವರು 'ಶಾಲಾ ಗೇಟಿನಿಂದ ವಿಧ್ಯಾರ್ಥಿನಿಯರನ್ನು ಹೊರಗಿಟ್ಟ ಘಟನೆ'ಯನ್ನು ಖಂಡಿಸಿದ್ದಾರೆ ಮತ್ತು ಈ ಕುರಿತು ಪ್ರಾಂಶುಪಾಲರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
video;
ಈ ನಡುವೆ ಶಾಲಾ ಸಮವಸ್ತ್ರ ಪಾಲನೆಯ ಪರವಾಗಿರುವ ಸಾರ್ವಜನಿಕರು ಕೂಡ ಪ್ರಾಂಶುಪಾಲರು ಗೇಟು ಮುಚ್ಚಿ ವಿಧ್ಯಾರ್ಥಿನಿಯರನ್ನು ತಡೆದ ಘಟನೆಯನ್ನು ಖಂಡಿಸಿದ್ದು 'ವಿಧ್ಯಾರ್ಥಿಯರನ್ನು ಕ್ಲಾಸಿಗೆ ಪ್ರವೇಶ ನೀಡದಿದ್ದರೂ ತೊಂದರೆ ಇರುತ್ತಿರಲಿಲ್ಲ ಅವರುಗಳನ್ನು ಸ್ಟಾಫ್ ರೂಮಿನಲ್ಲಿ ಕೂರಿಸಿಕೊಂಡು, ಹೆತ್ತವರನ್ನು ಕರೆಸಿ ಅವರನ್ನು ಮನೆಗೆ ಕಳುಹಿಸಬೇಕಾಗಿತ್ತು' ಎಂದಿದ್ದಾರೆ.
ಕುಂದಾಪುರದ ಜೂನಿಯರ್ ಕಾಲೇಜು ಹಿಂದಿನಿಂದಲೂ 'ಬೋರ್ಡ್ ಹೈಸ್ಕೂಲು' ಎಂದೇ ಪ್ರಸಿದ್ದವಾಗಿದೆ. ಈ ಕಾಲೇಜಿನಲ್ಲಿ ಕನ್ನಡದ ಖ್ಯಾತ ಕವಿ ಮುದ್ದಣ ಉಪನ್ಯಾಸಕರಾಗಿದ್ದರು ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೋಟಾ ಶಿವರಾಮ ಕಾರಂತರು ಇಲ್ಲಿಯೇ ಹೈಸ್ಕೂಲು ಶಿಕ್ಷಣವನ್ನು ಪಡೆದಿದ್ದರು. ಆ ಮೂಲಕ ಈ ಕಾಲೇಜು ಇತಿಹಾಸ ಪ್ರಸಿದ್ದವಾಗಿದೆ.
ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ: