Advertisement

ಮತದಾರರು ಕ್ರೂರಿಗಳಾಗಿದ್ದಾರೆ, ಭ್ರಷ್ಟರಾಗಿದ್ದಾರೆ. ಇತಿಹಾಸ ಹಾಗೂ ಭವಿಷ್ಯದ ಬಗೆಗೆ ಅಸಡ್ಡೆಯಿಂದ ವರ್ತಿಸುತ್ತಿದ್ದಾರೆ: ಇದು ಪ್ರಜಾಪ್ರಭುತ್ವದ ದುರಂತ!

Advertisement
(ಸಾಂದರ್ಭಿಕ ಚಿತ್ರ)

ಹೌದು… ಈ ದೇಶದ ಬಹುತೇಕ ಮತದಾರರು ಭ್ರಷ್ಟರಾಗಿದ್ದಾರೆ, ಕ್ರೂರಿಗಳಾಗಿದ್ದಾರೆ. ಇತಿಹಾಸ ಹಾಗೂ ಭವಿಷ್ಯದ ಬಗೆಗೆ ನಿರಾಸಕ್ತರಾಗಿದ್ದಾರೆ, ಅಸಡ್ಡೆಯ ಭಾವನೆ ಹೊಂದಿದ್ದಾರೆ. ಪ್ರಜಾಪ್ರಭುತ್ವದ ಅಮಲಿನಲ್ಲಿ ತೇಲುತ್ತಿದ್ದಾರೆ. ವಾಸ್ತವವನ್ನು ಅರಿಯಲಾರದಷ್ಟು ಮತಾಂದತೆ ಬೆಳೆಸಿಕೊಂಡಿದ್ದಾರೆ. ಬುದ್ದಿಮಾಂದ್ಯರ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ದುರಂತ.

1960ರ ದಶಕದ 'ಶೋಲೆ' ಸಿನೇಮಾದ ಖಳನಾಯಕ ಗಬ್ಬರ್ ಸಿಂಗ್ ಗ್ರಾಮಸ್ಥರನ್ನು ಕರುಣೆ ತೋರಿಸದೆ ಕ್ರೂರವಾಗಿ ಕೊಲ್ಲುತ್ತಾನೆ. ಅಟ್ಟಹಾಸ ಮೆರೆಯುತ್ತಾನೆ. ಹಾಗೆಯೇ 1980ರ ದಶಕದ 'ಅಪರೇಷನ್ ಅಂತ' ಸಿನಿಮಾದಲ್ಲಿ ನಾಯಕ ಅಮರ್‌ನಾಥ್ ನನ್ನು ಉಗುರು ಕಿತ್ತು ಕ್ರೂರವಾಗಿ ಹಿಂಸಿಸಲಾಗುತ್ತೆ! ಥಿಯೇಟರ್‌ಗಳಲ್ಲಿ ಅಂತಹ ಸಿನಿಮಾಗಳನ್ನು ಓಡಿಸಿದರೆ ಇಂದಿಗೂ ಕೂಡ ಬಂಪರ್ ಕಲೆಕ್ಷನ್ ಆಗುತ್ತೆ!.. ಹೊಡಿ ಬಡಿ ಎಲ್ಲಾ ಇಲ್ಲ ಅಂದ್ರೆ ಗಲ್ಲಾಪೆಟ್ಟಿಗೆ ಖಾಲಿ. ಸಿನೇಮಾ ಸಪ್ಪೆ ಮಾರಾಯ ಅಂತಾರೆ‌ ಜನ. ಅದೇ ತರ ಈ ರಾಜಕೀಯ ಕೂಡ! ರಕ್ತದೋಕುಳಿ ಆಗಲಿಲ್ಲ ಅಂದ್ರೆ ಮತ ಪೆಟ್ಟಿಗೆ ಖಾಲಿಖಾಲಿ. ಚುನಾವಣಾ ಸಮಯದಲ್ಲಿ ರಕ್ತ ಹರಿಸಿದರೆ, ಯಾರದ್ದೋ ಮನೆಯ ಒಂದೆರಡು ಅಮಾಯಕ ಹುಡುಗರ ಯಾ ಸೈನಿಕರ ಶವ ಬಿದ್ದರೆ ಅದು ಬಿಜೆಪಿಗೆ ಬಂಪರ್ ಗೆಲುವು ತಂದುಕೊಡುತ್ತೆ.
ಪೆಟ್ರೋಲ್ ಡೀಸೆಲ್‌ನ ಬೆಲೆ ಇಳಿಕೆಯ ಪರ, ದೇಶದ ಅಭಿವೃದ್ಧಿಯ ಪರ, ಹಿಂದೂ ಮುಸಲ್ಮಾನರ ನಡುವಿನ ಸೌಹಾರ್ದತೆ ಸಾಮರಸ್ಯದ ಪರ, ಉತ್ತಮ ಶಿಕ್ಷಣ ಕೊಡಿಸುವ ಉದ್ಯೋಗಾವಕಾಶ ಕಲ್ಪಿಸುವುದರ ಪರ ಮಾತನಾಡಿದ್ರೆ, ಅದೆಲ್ಲ ಸಪ್ಪೆ ಅನ್ನಿಸುತ್ತೆ ನಮ್ಮ ಜನರಿಗೆ. ಹಾಗೆ ಮಾತನಾಡಿದ ಕಾಂಗ್ರೆಸ್ ನಂತಹ ಪಕ್ಷಗಳು ಹೀನಾಯ ಸೋಲು ಅನುಭವಿಸಬೇಕಾಗುತ್ತೆ.

ಅದಕ್ಕೆ ತಾಜಾ ಉದಾಹರಣೆ- 2019ರ ಲೋಕಸಭಾ ಚುನಾವಣೆ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ನಿರುದ್ಯೋಗಿ ಯುವಕನಿಗೆ ತಿಂಗಳಿಗೆ ಆರು ಸಾವಿರ ರೂಪಾಯಿ ನಿರುದ್ಯೋಗ ಭತ್ತೆ ನೀಡುವ ರಾಹುಲ್ ಗಾಂಧಿಯವರ 'ನ್ಯಾಯ್ ಯೋಜನೆ' ಘೋಷಿಸಲ್ಪಟ್ಟಿದ್ದರೂ ಕಾಂಗ್ರೆಸ್ ಸೋತಿತು. ಚುನಾವಣಾ ಸಮಯದಲ್ಲಿ ನಡೆದ 'ಪುಲ್ವಾಮಾ ಬಾಂಬ್ ಬ್ಲಾಸ್ಟ್' ಅದು ಮೋದಿ ಸರ್ಕಾರದ ವೈಫಲ್ಯವೇ ಆದರೂ ಬಿಜೆಪಿ ಪಾಲಿಗದು ಮಹಾನ್ ಸಾಧನೆಯೇ ಆಯ್ತು.

ಹಥ್ರಾಸ್ ನಲ್ಲಿ ಮೇಲ್ಜಾತಿ ಯುವಕರಿಂದ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ದಲಿತ ಯುವತಿಯ ಶವದ ಮುಖವನ್ನು ಕೂಡ ಆಕೆಯ ಹೆತ್ತವರಿಗೆ ನೋಡಲು ಬಿಡದೆ ರಾತ್ರೋರಾತ್ರಿ ಬಿಜೆಪಿಯ ಯೋಗಿ ಆದಿತ್ಯನಾಥ್ ಸರ್ಕಾರ ಸುಟ್ಟು ಹಾಕಿದ್ದರ ಕುರಿತು, ಲಖೀಂಪುರದಲ್ಲಿ ಪ್ರತಿಭಟನಾನಿರತ ಹಿಂದೂ ರೈತರ ಮೇಲೆ ಬಿಜೆಪಿ ನಾಯಕನ ಪುತ್ರನ ಜೀಪು ಹತ್ತಿಸಿ ಮಾರಣಹೋಮ ಮಾಡಿದ್ದರ ಕುರಿತು ಹೇಳಿದರೆ ಬಿಜೆಪಿಯೇತರ ಪಕ್ಷಗಳಿಗೆ ಓಟು ಬೀಳಲಿಲ್ಲ… ಯಾಕೋ ಗೊತ್ತಿಲ್ಲ, ಅಂತಹ ಹೀನ ಕೃತ್ಯ ಮಾಡಿದ ಬಿಜೆಪಿ ನಾಯಕರುಗಳಿಗೇ ಪುನಃ ಓಟು ಹಾಕ್ತಾರೆ ಮತದಾರರು. ಅದರ ಫಲವಾಗಿ ಉತ್ತರಪ್ರದೇಶದಲ್ಲಿ ಯೋಗಿ ಸರ್ಕಾರ ಎರಡನೆಯ ಬಾರಿಗೆ ಅಧಿಕಾರಕ್ಕೆ ಬಂದಿದೆ.

ಶಾಲೆ ಕಲಿಯುವ ಎಳೆ ಹುಡುಗಿಯರು ಹಾಕುವ ಹಿಜಾಬ್ ಕುರಿತು ಗಲಾಟೆ ಮಾಡಿದ್ರೆ ನಮ್ಮ ಜನಕ್ಕೆ ಬಾರಿ ಖುಷಿಯಾಗುತ್ತೆ. ಆ ಎಳೆ ಮಕ್ಕಳು ಅಳುತ್ತಳುತ್ತಾ ಮನೆಗೆ ತೆರಳಿದರೆ ಇವರುಗಳು ಗಹಗಹಿಸಿ ನಗುತ್ತಾ, ಬಿಜೆಪಿಗೆ ಎಳೆದೆಳೆದು ಓಟು ಹಾಕ್ತಾರೆ. ಇಂತಹ ನೀಚತನಗಳನ್ನು ಕೂಡ ಬಿಜೆಪಿ ಪಕ್ಷದ ಸಾಧನೆ ಎಂದು ಅಂದುಕೊಳ್ತಾರೆ ಈ ಜನ. ಮೋದಿ ಆಡಳಿತದಲ್ಲಿ ಪುಲ್ವಾಮಾದಲ್ಲಿ 40ಸೈನಿಕರ ಮಾರಣಹೋಮ ನಡೆದದ್ದರ ಕುರಿತು, ಅದು ತನಿಖೆಯಾಗದಿದ್ದುದರ ಕುರಿತು, ಈ ತನಕವೂ ತಪ್ಪಿತಸ್ಥರಿಗೆ ಶಿಕ್ಷೆಯಾಗದಿರುವುದರ ಕುರಿತು ಹೇಳಿದರೆ.. 'ಇದರಲ್ಲೇನೋ ಮಸಲತ್ತು ಇದೆ. ಚುನಾವಣಾ ಗೆಲುವಿಗೆ ಸೈನಿಕರನ್ನು ಬಲಿಕೊಡಲಾಗಿದೆ' ಎಂದು ಅಂದುಕೊಳ್ಳೊಲ್ಲ ಈ ಜನಗಳು. ಅಷ್ಟಾದ ಮೇಲೂ ಬುದ್ದಿಮಾಂದ್ಯರ ತರ 'ಪಾಕಿಸ್ತಾನಕ್ಕೆ ‌ಬುದ್ದಿ ಕಲಿಸಲು ಮೋದಿಯೇ ಬೇಕು' ಅಂತಾರೆ.

ಬಿಜೆಪಿ ಆಡಳಿತದ ಅವದಿಯಲ್ಲಿ ಏನೇ ಅವಘಡ ಆದರೂ ಅದಕ್ಕೆ ನೆಹರೂ ಕಾರಣ, ಕಾಂಗ್ರೆಸ್ ಕಾರಣ ಅಂತಾರೆ. ಅದೇ ಬಿಜೆಪಿ ಅವಧಿಯಲ್ಲಿ ಅವರ ಪಕ್ಷದ ನಾಯಕರುಗಳೇ ಅತ್ಯಾಚಾರ ಮಾಡಿದರೂ, ಕೊಲೆ ಮಾಡಿದರೂ ಮತ್ತೆ ಪುನಃ 'ಮುಸ್ಲಿಮರು, ಪಾಕಿಸ್ತಾನ' ಎಂದೆಲ್ಲ ಬಡಬಡಿಸುತ್ತಾ ಬಿಜೆಪಿಯನ್ನೆ ಮತ್ತೆ ಮತ್ತೆ ಗೆಲ್ಲಿಸ್ತಾರೆ.

ಧ್ವೇಷ ಹರಡದಿದ್ದರೆ, ಕೋಮು ಗಲಭೆ ಮಾಡಿಸದಿದ್ದರೆ, ನಾಲ್ಕಾರು ಹಿಂದೂ ಮುಸಲ್ಮಾನ ಹುಡುಗರ ಹೆಣ ಬಿಳಿಸದಿದ್ದರೆ ಈ ಜನ ಓಟೇ ಹಾಕೊಲ್ಲ. ಹಂಗೆಲ್ಲ ಆದರೆ ಈ ಜನಗಳಿಗೆ ಒಂಥರಾ ಖುಷಿ. ಬಡಿದಾಡಿಕೊಂಡು ಸತ್ತವರು ಹಿಂದೂಗಳೇ ಆಗಲಿ, ಮುಸ್ಲಿಮರೆ ಆಗಲಿ… ಕೊನೆಯಲ್ಲಿ 'ಈ ಸಾಬ್ರನ್ನ ಹದ ಹಾಕೋಕೆ ಬಿಜೆಪಿನೇ ಸೈ' ಅಂತ ನಿರ್ಧಾರಕ್ಕೆ ಬರ್ತಾರೆ ನಮ್ಮ ಜನ. 'ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೆ ಗಲಾಟೆನೆ ಆಗೋಕೆ ಬಿಡೋಲ್ಲ ಕಣ್ರೀ. ಮಾತೆತ್ತಿದರೆ ಕಾನೂನು ಅಂತಾರೆ. ಗಲಾಟೆ ಮಾಡಿದ್ರೆ, ಯಾರದ್ದಾದ್ರೂ ಮೈಮೇಲೆ ತಲವಾರು ಬೀಸಿದ್ರೆ ಕೇಸು ಹಾಕಿ ಒಳಕ್ಕೆ ತಳ್ತಾರೆ. ಕೋಮು ಗಲಭೆಗಳೂ ಆಗೊಲ್ಲ, ಹೆಣಗಳೂ ಬಿಳೋಲ್ಲ. ಅವ್ರು ಸಾಬ್ರ ರಕ್ಷಣೆ ಮಾಡೋಕೆ, ಅವ್ರನ್ನ ಓಲೈಸಿಕೊಳ್ಳೊಕೆ ಹಂಗೆಲ್ಲ ಮಾಡ್ತಾರೆ ಅಂತ ಅಂದ್ಕೋತಾರೆ' ಅದೇ ಜನ.

ಇದೆಲ್ಲ ರಹಸ್ಯಗಳು ಬಿಜೆಪಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಅಧಿಕಾರದಲ್ಲಿರಲಿ, ವಿರೋಧ ಪಕ್ಷದಲ್ಲಿರಲಿ ಕೋಮು ಪ್ರಚೋದನೆಯನ್ನು ಚಾಚೂತಪ್ಪದೇ ಮಾಡಿಸುತ್ತಲೇ ಇರುತ್ತಾರೆ. ಆದರೆ ಜನಪರ ಸಿದ್ದಾಂತದ ತಳಹದಿಯ ಮೇಲೆ ದೇಶ ಕಟ್ಟಿದ ಕಾಂಗ್ರೆಸ್ ಪಕ್ಷದ ಸಿದ್ದಾಂತ ಅದಲ್ಲ‌. ಕಾಂಗ್ರೆಸ್ ಸತ್ಯ, ನ್ಯಾಯ, ನೀತಿಯ ಕುರಿತು ಮಾತನಾಡುತ್ತಲೇ ಇರುತ್ತದೆ, ಹಾಗಾಗಿ ಪದೇಪದೇ ಸೋಲುತ್ತಲೆ ಇರುತ್ತದೆ.

ಮೊದಲೇ ಹೇಳಿದಂತೆ, ಈ ದೇಶದ ಬಹುತೇಕ ಮತದಾರರು ಭ್ರಷ್ಟರಾಗಿದ್ದಾರೆ, ಕ್ರೂರಿಗಳಾಗಿದ್ದಾರೆ. ಇತಿಹಾಸ ಹಾಗೂ ಭವಿಷ್ಯದ ಬಗೆಗೆ ನಿರಾಸಕ್ತರಾಗಿದ್ದಾರೆ ಅಥವಾ ಅಸಡ್ಡೆಯ ಭಾವನೆ ಹೊಂದಿದ್ದಾರೆ. ಪ್ರಜಾಪ್ರಭುತ್ವದ ಅಮಲಿನಲ್ಲಿ ತೇಲುತ್ತಿದ್ದಾರೆ. ವಾಸ್ತವವನ್ನು ಅರಿಯಲಾರದಷ್ಟು ಮತಾಂದತೆ ಬೆಳೆಸಿಕೊಂಡಿದ್ದಾರೆ. ಬುದ್ದಿಮಾಂದ್ಯರ ರೀತಿ ವರ್ತಿಸುತ್ತಿದ್ದಾರೆ. ಒಟ್ಟಾರೆಯಾಗಿ ಇದು ಪ್ರಜಾಪ್ರಭುತ್ವದ ದುರಂತ.
Advertisement
Advertisement
Recent Posts
Advertisement