ವಿಶ್ವದ ವಿವಿಧ ದೇಶಗಳಲ್ಲಿ ಇರುವ ಭಾರತೀಯ ರಾಯಭಾರಿಗಳು ಅಥವಾ ಅವರ ಕಚೇರಿಗಳ ಜವಾಬ್ದಾರಿ ಮುಖ್ಯವಾಗಿ ನಮ್ಮ ರಾಷ್ಟ್ರ ಮತ್ತು ಆ ರಾಷ್ಟ್ರದ ನಡುವಿನ ಸೌಹಾರ್ದ ಸಂಬಂಧವನ್ನು ಉಳಿಸಿ ಬೆಳೆಸುವುದು ಮತ್ತು ಆ ರಾಷ್ಟ್ರದಲ್ಲಿ ನೆಲೆಸಿರುವ ಭಾರತೀಯರ ಯೋಗಕ್ಷೇಮವನ್ನು ಕಾಯುವುದೇ ಆಗಿದೆ.
ಒಂದು ವರದಿಯ ಪ್ರಕಾರ ಯುಕ್ರೇನ್‌ನ ಭಾರತೀಯ ರಾಯಭಾರ ಕಛೇರಿಯ ಬೇಜವಾಬ್ದಾರಿತನದಿಂದಾಗಿ, ವಿಫಲ ನೀತಿಗಳಿಂದಾಗಿ ಅಥವಾ ತಪ್ಪು ತೀರ್ಮಾನಗಳಿಂದಾಗಿ ಯುದ್ಧಪೀಡಿತ ಉಕ್ರೇನ್ ನಲ್ಲಿ ವಿಧ್ಯಾರ್ಥಿಗಳು ಸೇರಿದಂತೆ 20 ಸಾವಿರಕ್ಕೂ ಹೆಚ್ಚು ಭಾರತೀಯರು ಅತ್ಯಂತ ಅಪಾಯದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಈ ಕುರಿತು ಭಾರತದಲ್ಲಿರುವ ಅವರುಗಳ ಕುಟುಂಬಸ್ಥರು ಮತ್ತು ಮಾನವತಾವಾದಿಗಳು ಬಹು ಆತಂಕಿತರಾಗಿದ್ದಾರೆ.
ಈ ನಡುವೆ, ಯುದ್ಧ ಪೀಡಿತ ದೇಶದಿಂದ ಭಾರತಕ್ಕೆ ವಾಪಾಸಾಗಿರುವ ವಿಧ್ಯಾರ್ಥಿಗಳು ಈ ಕುರಿತು ರಾಯಭಾರ ಕಚೇರಿ ತಮಗೆ ಸ್ಪಷ್ಟ ಸಂದೇಶ ನೀಡದೆ ಗೊಂದಲ ಮೂಡಿಸಿದ್ದೆ ನಾವು ಯುದ್ಧ ಭೂಮಿಯಲ್ಲಿ ಸಿಲುಕಿಹಾಕಿಕೊಳ್ಳಲು ಕಾರಣ ಎಂಬ ಹೇಳಿಕೆ ನೀಡಿದ್ದಾರೆ. ಆದರೆ ನಿಜ ಹೇಳಬೇಕೆಂದರೆ, ಇದೆಲ್ಲದಕ್ಕೂ ಮೂಲ ಕಾರಣ, ವಿಡಿಯೋ ಗೇಮ್ ದೃಶ್ಯಾವಳಿಗಳ ಮೂಲಕ ಪಾಕಿಸ್ತಾನದ ವಿರುದ್ಧ ಯುದ್ದ ಮಾಡಿದಂತೆ ವಾಟ್ಸ್ಯಾಪ್ ಮೂಲಕವೇ ದೇಶ ಆಳಲು ಸಾಧ್ಯ ಎಂದು ಕೊಂಡಿರುವವರು ಇಂದು ಈ ದೇಶವನ್ನು ಆಳುತ್ತಿರುವುದೇ ಆಗಿದೆ. ಅಂತಹ ಮನಸ್ಥಿತಿಯವರೆ ವಿವಿಧ ದೇಶಗಳ ರಾಯಭಾರಿ ಗಳಾಗಿ ಇರುವುದು ಕೂಡ ಆಗಿದೆ ಎಂದರೆ ತಪ್ಪಾಗಲಾರದು.
ಈ ನಡುವೆ ಉಕ್ರೇನ್ ನ ಪಶ್ಚಿಮ ಗಡಿಯ ಸಮೀಪದಲ್ಲಿರುವ ನೆಲೆಸಿರುವವರಲ್ಲಿ ಸುಮಾರು 3ಸಾವಿರದಷ್ಟು (ಅಧಿಕೃತ ಸಂಖ್ಯೆ ಅಲ್ಲ) ವಿಧ್ಯಾರ್ಥಿಗಳು, ವಿಧ್ಯಾರ್ಥಿನಿಯರು ಸೇರಿದಂತೆ ಭಾರತೀಯ ನಾಗರಿಕರು ಕೊರೆವ ಚಳಿಯಲ್ಲಿ ಮತ್ತು ರಷ್ಯಾ ಅಥವಾ ಉಕ್ರೇನ್ ನ ಸೈನಿಕ ದಾಳಿ ಅಥವಾ ಸ್ಥಳೀಯ ದುಷ್ಕರ್ಮಿಗಳ ದಾಳಿಯಂತಹ ಅಪಾಯಕಾರಿ ಸನ್ನಿವೇಶದಲ್ಲಿ ತೀವ್ರ ಆತಂಕದಿಂದ ಹಗಲು ರಾತ್ರಿ ನಡೆದು ಅಲ್ಲಿನ ನೆರೆರಾಷ್ಟ್ರಗಳ ಗಡಿಯೊಳಗೆ ಪ್ರವೇಶಿಸಿ ಅಲ್ಲಿಂದ ಭಾರತ ಸರ್ಕಾರ ವ್ಯವಸ್ಥೆಗೊಳಿಸಿದ ಯಾ ಇನ್ನಿತರ ವಿಮಾನಗಳ ಮೂಲಕ ಭಾರತಕ್ಕೆ ಬಂದಿಳಿದಿದ್ದಾರೆ. ಆದರೆ ರಷ್ಯಾಕ್ಕೆ ಹತ್ತಿರವಿರುವ ಉಕ್ರೇನ್‌ನ ಪೂರ್ವ ಭಾಗ(ಸುಮಿ)ದಲ್ಲಿ ನೆಲೆಸಿರುವ ಭಾರತೀಯರು ಇದೀಗಲೂ ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲೇ ಬದುಕಿದ್ದಾರೆ. ಹಾಗೆಯೇ ಸುರಕ್ಷಿತ ಸಮಯ(?)ದಲ್ಲಿ ಆಹಾರ ಖರೀದಿಸಲು ಹೋಗಿ ರಷ್ಯಾದ ದಾಳಿಯಲ್ಲಿ ಮೃತಪಟ್ಟ ಕರ್ನಾಟಕದ 21ವರ್ಷದ ವಿಧ್ಯಾರ್ಥಿ ನವೀನ್ ರೀತಿಯಲ್ಲಿ ಹಲವರು ಸತ್ತಿದ್ದಾರೆ.
ಯುಕ್ರೇನ್ ಮೇಲಿನ ರಷ್ಯಾದ ದಾಳಿ ಆಕಸ್ಮಿಕವಂತೂ ಆಗಿರಲಿಲ್ಲ. ಈ ಎರಡೂ ರಾಷ್ಟ್ರಗಳ ನಡುವೆ ಹಲವು ಸಮಯದಿಂದ ಅಸಮಾಧಾನ ಹೊಗೆಯಾಡುತ್ತಲೆ ಇತ್ತು. ಈ ಎಲ್ಲಾ ವಿದ್ಯಾಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದ ರಾಷ್ಟ್ರಗಳ ರಾಯಭಾರಿ ಗಳಿಗೆ ಯುದ್ಧದ ಮುನ್ಸೂಚನೆ ಮೊದಲೇ ಇತ್ತು. ಆ ಕಾರಣಕ್ಕಾಗಿಯೇ ಅಮೇರಿಕಾ ಸರ್ಕಾರವು ಯುದ್ಧದ 15ದಿನಗಳ ಮೊದಲೇ ಉಕ್ರೇನ್ ನಲ್ಲಿರುವ ಅಮೇರಿಕನ್ನರು ದೇಶಕ್ಕೆ ಮರಳುವಂತೆ ಖಡಕ್ಕಾಗಿ ಆದೇಶಿಸಿತ್ತು. ಅದೇ ರೀತಿಯಲ್ಲಿ ಯುದ್ಧ ಆರಂಭಕ್ಕೆ ಮೊದಲು ಮತ್ತು ಯುದ್ಧ ಆರಂಭಗೊಂಡ ತಕ್ಷಣ ಪಾಕಿಸ್ತಾನ ಮತ್ತಿತರ ಹಲವು ರಾಷ್ಟ್ರಗಳು ರೈಲು ಮತ್ತಿತರ ವಿಶೇಷ ವಿಮಾನಗಳ ಮೂಲಕ ತಮ್ಮ ತಮ್ಮ ರಾಷ್ಟ್ರಗಳ ಪ್ರಜೆಗಳನ್ನು ರಕ್ಷಣೆ ಮಾಡಿತ್ತು. ಇದೀಗ ಆ ಎರಡು ರಾಷ್ಟ್ರಗಳ 'ಅಸಮಾಧಾನ' ಸ್ಪೋಟಗೊಂಡು ಯುದ್ಧ ಆರಂಭಗೊಂಡಿದೆ.
ಉಕ್ರೇನ್ ರಷ್ಯಾದ ನಡುವಿನ ವೈಮನಸ್ಸಿನ ಕಾರಣಗಳು ಅದೇನೇ ಇರಲಿ, ವಿಶ್ವದ ಇತರ ರಾಷ್ಟ್ರಗಳು ತಮ್ಮ ಪ್ರಜೆಗಳ ರಕ್ಷಣೆಗೆ ಅದ್ಯಾವ ರೀತಿಯ ಕ್ರಮಗಳನ್ನೆ ಕೈಗೊಂಡಿರಲಿ ಅದು ಈ ಲೇಖನ ಬರೆಯಲು ಕಾರಣವಾದ ವಿಷಯವಲ್ಲ."ಇಂತಹ ದುರಿತ ಸಂದರ್ಭದಲ್ಲಿ ಯುದ್ಧಪೀಡಿತ ದೇಶದೊಳಗೆ ಸಿಲುಕಿಕೊಂಡಿರುವ ಭಾರತೀಯರನ್ನು ರಕ್ಷಸುವ ಹೊಣೆಗಾರಿಕೆ ಭಾರತ ಸರ್ಕಾರದ್ದಾಗಿದೆ. ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರವು ತನ್ನ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದೆಯೇ?" ಎನ್ನುವುದು ಈ ಲೇಖನದ ವಿಷಯವಾಗಿದೆ.
ಆದರೆ ಈ ಕುರಿತು ಮುಂಜಾಗ್ರತೆ ವಹಿಸಬೇಕಾಗಿದ್ದ ಮತ್ತು ಯಾವುದೇ ಟೀಕೆಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕಾಗಿದ್ದ ಭಾರತ ಸರ್ಕಾರದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸರ್ಕಾರದ ವಿರುದ್ಧದ ಜನಪರವಾದ ಟೀಕೆಗೆ ಉತ್ತರವಾಗಿ 'ಭಾರತದ ವಿಧ್ಯಾರ್ಥಿಗಳು ವೈದ್ಯಕೀಯ ಓದಲು ವಿದೇಶಗಳಿಗೆ ತೆರಳಲು ಕಳೆದ 70ವರ್ಷಗಳ ಕಾಂಗ್ರೆಸ್ ಸರ್ಕಾರದ ಆಳ್ವಿಕೆಯೇ ಕಾರಣ' ಎಂಬ ಪಲಾಯನವಾದಿ ಹಾಗೂ ಬಾಲಿಷವಾದ ಹೇಳಿಕೆಯನ್ನು ನೀಡಿದ್ದಾರೆ. ಮೋದಿಯವರ ಈ ಮೇಲಿನ ಹೇಳಿಕೆಯ ಹಿಂದಿನ ಏಕಮಾತ್ರ ಅಜೆಂಡಾ ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕುವುದೇ ಆಗಿದೆ. ಅದಕ್ಕೆ ಪೂರಕವಾಗಿ ಎಂಬಂತೆ, ಈ ಹಿಂದಿನ ಮೋದಿಯವರ 7½ ವರ್ಷಗಳ ಆಡಳಿತಾವಧಿಯ ವೈಫಲ್ಯಗಳಿಗೆ ಸುಮಾರು 58ವರ್ಷಗಳ ಹಿಂದೆ ಈ ದೇಶವನ್ನು ಆಳಿದ ನೆಹರೂ ಕಾರಣ ಎಂಬಂತೆ ಹೇಳಿಕೆ ನೀಡಿರುವುದನ್ನು ನೀವಂತೂ ಓದಿ, ನಕ್ಕಿರುತ್ತೀರಿ ಬಿಡಿ.
1947ರಲ್ಲಿ ಈ ದೇಶಕ್ಕೆ ಸ್ವಾತಂತ್ರ್ಯ ಸಿಗುವ ವೇಳೆಗೆ ಈ ದೇಶದಲ್ಲಿ ಕೇವಲ 19 ವೈಧ್ಯಕೀಯ ಕಾಲೇಜುಗಳು ಇದ್ದವು. 1000ಕ್ಕಿಂತಲೂ ಕಡಿಮೆ ವಿಧ್ಯಾರ್ಥಿಗಳು ವೈಧ್ಯಕೀಯ ಓದುತ್ತಿದ್ದರು. 30ರಾಜ್ಯಗಳಿಗೆ 1000 ವಿಧ್ಯಾರ್ಥಿಗಳು ಎಂದರೆ ರಾಜ್ಯಕ್ಕೆ 35ವಿಧ್ಯಾರ್ಥಿಗಳು ಎಂದರ್ಥ. ಒಂದಿಡೀ ರಾಜ್ಯಕ್ಕೆ ಆ 35 ವೈದ್ಯರುಗಳಿಂದ ಅದೆಂತಹ ವೈದ್ಯಕೀಯ ಸೇವೆ ದೊರಕುತ್ತಿತ್ತು ಎಂದು ನೀವೆ ಯೋಚಿಸಿ. ಆದರೆ ಸ್ವಾತಂತ್ರ್ಯ ದೊರೆತು 75ವರ್ಷಗಳ ನಂತರ ಈ ದೇಶದಲ್ಲಿ ಇದೀಗ 542 ವೈದ್ಯಕೀಯ ಕಾಲೇಜುಗಳು ಮತ್ತು 64 ಸ್ಟ್ಯಾಂಡ್ ಅಲೋನ್ ಪಿಜಿ ಇನ್‌ಸ್ಟಿಟ್ಯೂಟ್ ಗಳಿವೆ. ಅಂದರೆ ರಾಜ್ಯವೊಂದಕ್ಕೆ ಸರಾಸರಿ 20ಕಾಲೇಜುಗಳು. ಇಷ್ಟಾಗಿಯೂ ಸರ್ಕಾರಿ ಕಾಲೇಜಿನಲ್ಲಿ ಸೀಟು ಸಿಗದ ಯಾ ಡೊನೇಶನ್ ಕೊಡಲಾಗದ ಅಥವಾ ಬೇರೆಬೇರೆ ಕಾರಣಗಳಿಂದ ವಿದೇಶಗಳಲ್ಲಿ ಓದುವವರು ಸಂಖ್ಯೆಯೂ ಹೆಚ್ಚಿದೆ. ಸ್ವಾತಂತ್ರ್ಯ ಸಿಗುವ ವೇಳೆಗೆ 95% ಜನ ಗುಡಿಸಲು ವಾಸಿಗಳಾಗಿದ್ದ, ಅದಕ್ಕಿಂತಲೂ ಹೆಚ್ಚು ಶೇಕಡಾ ಜನ ಅನಕ್ಷರಸ್ಥರಾಗಿದ್ದ ದೇಶದ ಜನತೆ ಇಂದು ಮೇಲೆ ವಿವರಿಸಿದ ಸಂಖ್ಯೆಯಲ್ಲಿ ವೈದ್ಯಕೀಯ ಕಾಲೇಜುಗಳು ಇದ್ದರೂ ಕೂಡ, ವೈಧ್ಯಕೀಯ ಕಲಿಯಲು ವಿದೇಶಗಳಿಗೆ ದಂಡುದಂಡಾಗಿ ಹೋಗುತ್ತಾರೆಂದರೆ ಅದು ಮೋದಿಯವರು ಹೇಳಿದ ಅದೇ ಕಾಂಗ್ರೆಸ್ ಪಕ್ಷದ 70ವರ್ಷಗಳ ಸಾಧನೆ ಅಲ್ಲವೇ? ಅದೇ ಕಾಂಗ್ರೆಸ್ ನ ಯೋಜನೆಗಳಡಿ ಅಭಿವೃದ್ಧಿ ಹೊಂದಿದವರುಗಳು ಅಲ್ಲವೇ? ಅದು ಹೇಗೆ 70ವರ್ಷ ದೇಶವನ್ನಾಳಿದ ಕಾಂಗ್ರೆಸ್ ಪಕ್ಷದ ವೈಫಲ್ಯವಾಗುತ್ತದೆ? ಹಾಗಾದರೆ ರಷ್ಯಾ ಯುಕ್ರೇನ್ ಯುದ್ಧದಲ್ಲಿ ಸಿಲುಕಿಹಾಕಿಕೊಂಡವರನ್ನು ಪಾರು ಮಾಡಲು ಹಿಂದೆ ಆಳಿದ ಕಾಂಗ್ರೆಸ್ ಬರಬೇಕಿತ್ತೇ? ಏನಿದು ಬಾಲಿಷತೆ?
ಇಷ್ಟಾಗಿಯೂ ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರ. "ಪ್ರಜಾಪ್ರಭುತ್ವ ಎಂಬ ಬಹು ಮೌಲ್ಯದ ಒಂದು ವ್ಯವಸ್ಥೆ" ಇಂದು "ಅರ್ಥ ಕಳೆದುಕೊಂಡಿರುವ ಕೇವಲ ಒಂದು ಶಬ್ಧ" ವಾಗಿ ಉಳಿದಿದೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.
ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ್ದು ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷವಾಗಿದೆ. ಈ ದೇಶದ ಸಕಲ ಸಂಪನ್ಮೂಲಗಳು ದೇಶದ 137ಕೋಟಿ ಜನರಿಗೆ ಹಂಚಿಕೆ ಆಗಬೇಕು ಎಂಬ ಕಲ್ಪನೆಯಡಿ ಜಾರಿಗೊಂಡದ್ದೇ ಪ್ರಜಾಪ್ರಭುತ್ವ ವ್ಯವಸ್ಥೆ. ಅದರ ಮುಂದುವರಿದ ಭಾಗವಾಗಿ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೆ ಆಡಳಿತ ನಡೆಸುವ ವ್ಯವಸ್ಥೆಯೇ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದೆ. ಪ್ರಜೆಗಳು ಪ್ರಭುಗಳಾದರೆ ಪ್ರಜೆಗಳಿಂದ ನಿಯುಕ್ತಿಗೊಂಡವರು ಪ್ರಧಾನ ಮಂತ್ರಿಗಳಾಗುತ್ತಾರೆ, ಮುಖ್ಯಮಂತ್ರಿಗಳಾಗುತ್ತಾರೆ ಅಥವಾ ವಿವಿಧ ಖಾತೆಗಳ ಮಂತ್ರಿಗಳಾಗುತ್ತಾರೆ ಹೊರತೂ ಅವರಾರು ಪ್ರಭುಗಳಾಗಲಾರರು. ಆದರೆ ವಿಪರ್ಯಾಸವೆಂದರೆ ಇಂದು ಭಾರತೀಯ ಪ್ರಜೆಗಳು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೇ ಪ್ರಭುಗಳು ಎಂಬ ಸತ್ಯವನ್ನು ಮರೆತಿದ್ದಾರೆ. ನಾವು ನಿಯೋಜಿಸಿದ ಮಂತ್ರಿಗಳು ನಮ್ಮ ಸೇವಕರೆ ಹೊರತು ನಮ್ಮ ಪ್ರಭುಗಳಲ್ಲ ಎಂಬ ಸತ್ಯವನ್ನು ಮರೆತಿದ್ದಾರೆ. ಆ ಮಂತ್ರಿಗಳನ್ನೆ ಪ್ರಭುಗಳಂತೆ ಹೊತ್ತು ಮೆರೆಯುತ್ತಿದ್ದಾರೆ. ತಮ್ಮನ್ನು ತಾವು ಆಳುವವರ ಗುಲಾಮರು ಎಂದು ಕೊಂಡಿದ್ದಾರೆ. ಆ ಮಂತ್ರಿಗಳು ತಪ್ಪು ಮಾಡಿದಾಗ ಅವರ ತಪ್ಪನ್ನು ತಿದ್ದಿಕೊಂಡು ಸರಿದಾರಿಯಲ್ಲಿ ನಡೆಯುವಂತೆ ಹೇಳುವವರನ್ನು ದೇಶದ್ರೋಹಿಗಳಂತೆ ಕಾಣಲಾರಂಬಿಸಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ಉಕ್ರೇನ್ ನಲ್ಲಿನ ಭಾರತೀಯರಿಗೆ ಸೂಕ್ತ ಕಾಲಕ್ಕೆ ರಕ್ಷಣೆ ಕೊಡದ ಭಾರತ ಸರ್ಕಾರದ ವಿರುದ್ಧದ ವಿಧ್ಯಾರ್ಥಿಯೊಬ್ಬರ 'ಗಟ್ಸ್' ಕುರಿತಾದ ಹೇಳಿಕೆಯನ್ನು ರಾಷ್ಟ್ರ ವಿರೋಧಿ ಹೇಳಿಕೆ ಎಂದು ಬಿಂಬಿತವಾಗಿರುವುದೇ ಆಗಿದೆ.
ಸ್ನೇಹಿತರೆ, ಈಗ ಹೇಳಿ "ಭಾರತದಲ್ಲಿ ಆಳ್ವಿಕೆ ನಡೆಸುತ್ತಿರುವುದು ಪ್ರಜಾಪ್ರಭುತ್ವ ಸರ್ಕಾರವೋ ರಾಜಪ್ರಭುತ್ವ ಸರ್ಕಾರವೋ? ಉಕ್ರೇನ್‌ನ ಭಾರತೀಯ ರಾಯಭಾರಿ ಕಚೇರಿಯ ವೈಫಲ್ಯ ಭಾರತ ಸರ್ಕಾರದ ವೈಫಲ್ಯ ಅಲ್ಲವೇ? ಸರ್ಕಾರದ ವೈಫಲ್ಯಗಳನ್ನು ಟೀಕಿಸುವುದು ರಾಷ್ರ್ಟವನ್ನು ಟೀಕಿಸಿದಂತೆಯೇ?" ಅದಲ್ಲವಾದರೆ ಅದನ್ನು ರಾಜಪ್ರಭುತ್ವ ಎನ್ನುವುದಾದರೆ ಅದು ಯಾರಪ್ಪನ ರಾಜಪ್ರಭುತ್ವ? ಈ ಪ್ರಶ್ನೆ ಕೇಳಬೇಡವೇ? ಅಥವಾ ಅದೂ ರಾಷ್ಟ್ರ ದ್ರೋಹದ ವ್ಯಾಪ್ತಿಗೆ ಬರುತ್ತೋ?
ನಮಸ್ಕಾರ.