ಹಿರಿಯ ಪತ್ರಕರ್ತ, ಅಮ್ನೆಸ್ಟಿ ಅಂತರಾಷ್ಟ್ರೀಯ ಸಂಸ್ಥೆಯ ಮಾಜಿ ಮುಖ್ಯಸ್ಥ ಆಕಾರ್ ಪಟೇಲ್ ಅಮೇರಿಕಾ ವಿದೇಶ ಪ್ರಯಾಣಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿರುವುದು ಖಂಡನೀಯ. ಪಟೇಲ್ ಅವರು ಮೋದಿ ಸರ್ಕಾರದ ಜನ ವಿರೋಧಿ ನೀತಿಗಳ ಕಟು ವಿಮರ್ಶಕರಾಗಿರುವ ಕಾರಣವೇ ವಿದೇಶಿ ಪ್ರಯಾಣ ನಿಷೇಧದ ಹಿಡನ್ ಅಜೆಂಡಾ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.
ಮೋದಿ ಸರ್ಕಾರ ಮಾನವ ಹಕ್ಕುಗಳ ಹೋರಾಟಗಾರರ, ಪತ್ರಕರ್ತರ ಮೇಲೆ ಕಣ್ಗಾವಳು, ಕಿರುಕುಳ, ಕಾರ್ಯವೈಖರಿ ಮೇಲೆ ಹಸ್ತಕ್ಷೇಪ ನಡೆಸುವುದು ಅಕ್ಷಮ್ಯ ಅಪರಾಧ. ನ್ಯಾಯಾಲಯದ ಅನುಮತಿ ಇದ್ದರೂ ನಿಷೇಧ ಹೇರುವುದು ಕಾನೂನಿನ ಉಲ್ಲಂಘನೆ. ಈ ಕೂಡಲೇ ಆಕಾರ್ ಪಟೇಲ್ ಮೇಲಿನ ಪೂರ್ವನಿಯೋಜಿತ ಕೇಸ್ ಗಳನ್ನ ವಾಪಾಸ್ ಪಡೆದು, ವಿದೇಶಿ ಪ್ರಯಾಣಕ್ಕೆ ಅನುವು ಮಾಡಿಕೊಡಬೇಕು ಎಂದವರು ಒತ್ತಾಯಿಸಿದ್ದಾರೆ.
ಅಮೇರಿಕಾದ ಮಿಷಿಗನ್ ವಿಶ್ವವಿದ್ಯಾಲಯ, ಬರ್ಕ್ಲಿ ವಿಶ್ವವಿದ್ಯಾಲಯ, ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಆಕಾರ್ ಪಟೇಲ್ ಉಪನ್ಯಾಸ ನೀಡಬೇಕಿತ್ತು. ಭಾರತಕ್ಕಿದು ಹೆಮ್ಮೆಯ ವಿಚಾರವಾಗಬೇಕಿತ್ತು. ಆದರೆ ಆಕಾರ್ ಪಟೇಲ್ ವಿದೇಶ ಪ್ರಯಾಣಕ್ಕೆ ತಡೆಯೊಡ್ಡುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ನಾವು ಮತ್ತೊಮ್ಮೆ ತಲೆತಗ್ಗಿಸುವಂತೆ ಮೋದಿ ಸರ್ಕಾರ ಮಾಡಿದೆ ಎಂದವರು ಖೇದ ವ್ಯಕ್ತಪಡಿಸಿದರು.