Advertisement

ಹಿಂದಿಯಲ್ಲೆ ಸಂವಹನ ನಡೆಸಿ ಎಂಬ ಅಮಿತ್ ಷಾ ಹೇಳಿಕೆಗೆ ಕನ್ನಡಿಗರು ಹಾಗೂ ಕಾಂಗ್ರೆಸ್ ನಾಯಕರು ಹೇಳಿದ್ದೇನು?

Advertisement
"ವಿವಿಧ ರಾಜ್ಯಗಳ ಜನರು ಹಿಂದಿಯಲ್ಲೆ ಸಂವಹನ ನಡೆಸಬೇಕು, ಇಂಗ್ಲಿಷ್ ನಲ್ಲಿ ಅಲ್ಲ" ಎಂದು ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆ ಬೆನ್ನಲ್ಲೆ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು #ಸ್ಥಳೀಯಬಾಷೆಗೆಆದ್ಯತೆಕೊಡಿ ಎಂಬ ಹ್ಯಾಶ್‌ಟ್ಯಾಗ್ ನಡಿ ಅಮಿತ್ ಷಾ ರ ಹಿಂದಿ ಹೇರಿಕೆಯ ಮನಸ್ಥಿತಿಯ ವಿರುದ್ಧ ಟ್ವೀಟ್ ಸಮರವನ್ನು ಹೂಡಿದ್ದರು.

ಹಾಗೆಯೇ, ಕಾಂಗ್ರೆಸ್ ನಾಯಕರುಗಳಾದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಹಾಗೂ ಡಾ. ಎಚ್.ಸಿ ಮಹಾದೇವಪ್ಪ ಕೂಡಾ ಆ ಕುರಿತು ತೀವ್ರವಾದ ವಿರೋಧ ವ್ಯಕ್ತಪಡಿಸಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಆ ಕುರಿತು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿರುವ ಹೇಳಿಕೆಯ ಯಥಾವತ್ ರೂಪ:
ರಾಜ್ಯಗಳು ಪರಸ್ಪರ ಸಂಪರ್ಕ ಭಾಷೆಯಾಗಿ ಹಿಂದಿಯನ್ನು‌ ಬಳಸಬೇಕೆಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಫರ್ಮಾನು ಹೊರಡಿಸಿರುವುದು ಅತ್ಯಂತ‌ ಆಕ್ಷೇಪಾರ್ಹ ನಡವಳಿಕೆಯಾಗಿದೆ. ಒಬ್ಬ ಸ್ವಾಭಿಮಾನಿ‌ ಕನ್ನಡಿಗನಾಗಿ‌ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ.

ಹಿಂದಿ, ಇಂಗ್ಲೀಷ್, ತಮಿಳು,‌ಮಲೆಯಾಳಿ, ಗುಜರಾತಿ ಸೇರಿದಂತೆ ಯಾವ ಭಾಷೆಗೂ ನಾವು ವಿರೋಧಿಗಳಲ್ಲ. ಆದರೆ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ. ಯಾವುದೇ ಒಂದು ಭಾಷೆಯನ್ನು ಹೇರಲು ಹೊರಟರೆ ಸಹಿಸಲು ಸಾಧ್ಯ ಇಲ್ಲ.

ನಮ್ಮ ಭಾಷಾ ನಿಲುವು ಮತ್ತು ದೇಶ-ರಾಜ್ಯಗಳ ಸಂಬಂಧವನ್ನು ರಾಷ್ಟ್ರಕವಿ‌ ಕುವೆಂಪು ಅವರು ದಶಕಗಳ ಹಿಂದೆಯೇ ಸ್ಪಷ್ಟವಾಗಿ ವ್ಯಾಖ್ಯಾನಿಸಿದ್ದಾರೆ.
"ಜಯಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ' ಎನ್ನುವ ಕವಿ ನುಡಿಯೇ ನಮ್ಮ ಭಾಷಾ ಸಿದ್ಧಾಂತ.

ಗುಜರಾತಿನಿಂದ ಬಂದಿರುವ ಅಮಿತ್ ಶಾ ಅವರ ಮಾತೃಭಾಷೆ ಗುಜರಾತಿ. ಇವರು ತಮ್ಮ ಮಾತೃಭಾಷೆಯನ್ನೇ ಕಡೆಗಣಿಸಿ ಹಿಂದಿ ಭಾಷೆಯ ಗುಲಾಮಗಿರಿ‌ ಮಾಡುತ್ತಿರುವುದು ವಿಷಾದನೀಯ. ಅಮಿತ್ ಶಾ ಅವರ ತವರು ಗುಜರಾತ್ ರಾಜ್ಯದ ಮಣ್ಣಿನ‌ ಮಗನಾದ ಮಹಾತ್ಮ ಗಾಂಧೀಜಿ ಬಹು ಸಂಸ್ಕೃತಿ, ಬಹುಭಾಷೆಗಳ ಪ್ರತಿಪಾದಕರಾಗಿದ್ದರು. ಆದರೆ ಅಮಿತ್ ಶಾ ಅವರಿಗೆ ಗಾಂಧೀಜಿಯವರಿಗಿಂತ ಏಕ ಸಂಸ್ಕೃತಿ, ಏಕಭಾಷೆಯ ಪ್ರತಿಪಾದಕರಾದ ಸೂಡೊ ರಾಷ್ಟ್ರೀಯವಾದಿ ಸಾವರ್ಕರ್ ಪ್ರಿಯರಾಗಿರುವುದು ದುರಂತ.

ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದ ಹಿಂದಿಯನ್ನು ರಾಷ್ಟ್ರಭಾಷೆ ಎನ್ನುವ ರೀತಿಯಲ್ಲಿ ಬಿಂಬಿಸುವ ಜೊತೆಯಲ್ಲಿ, ರಾಜ್ಯ ಭಾಷೆಗಳನ್ನು ದಮನಿಸುವ ಪ್ರಯತ್ನ ನಡೆಯುತ್ತಲೇ ಇದೆ. ಇದನ್ನು ಹಿಂದಿಯೇತರ ಭಾಷೆಗಳನ್ನಾಡುವ ರಾಜ್ಯಗಳು ಕೂಡಿ ಪ್ರತಿಭಟಿಸುವ ಕಾಲ ಸನ್ನಿಹಿತವಾಗಿದೆ.

ತಮಿಳುನಾಡು, ಕೇರಳ,‌ಆಂಧ್ರಪ್ರದೇಶ, ಒಡಿಸ್ಸಾ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ಬಹುತೇಕ ರಾಜ್ಯಗಳು ಹಿಂದಿಯನ್ನು ಅಧಿಕೃತ ಸಂಪರ್ಕಭಾಷೆಯಾಗಿ ಬಳಸುವುದಿಲ್ಲ. ಅವುಗಳ ಜೊತೆಯಲ್ಲಿ ಹಿಂದಿಯಲ್ಲಿ ವ್ಯವಹರಿಸಬೇಕೆನ್ನುವುದು ಸಾಂಸ್ಕೃತಿಕ ಭಯೋತ್ಪಾದನೆಯಾಗಿದೆ.

ಕೇಂದ್ರ ಗೃಹಸಚಿವರ ಈ ಹೇಳಿಕೆ ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿರುವುದು ಮಾತ್ರವಲ್ಲ ಮಾತೃಭಾಷೆಗಳಿಗೆ ಮಾಡಿರುವ ಅವಮಾನವಾಗಿದೆ. ಅನಗತ್ಯ ಘರ್ಷಣೆಗೆ ಎಡೆಮಾಡಿಕೊಡುವ ಈ ಬೇಜವಾಬ್ದಾರಿ ಹೇಳಿಕೆಯನ್ನು ಅಮಿತ್ ಶಾ ಅವರು ತಕ್ಷಣ ಹಿಂದೆಗೆದುಕೊಳ್ಳಬೇಕು.

ಕಾಂಗ್ರೆಸ್ ನಾಯಕ, ಕೆಪಿಸಿಸಿ ಮಾಜಿ ಅಧ್ಯಕ್ಷ, ಸಮಾನತಾವಾದಿ ದಿನೇಶ್ ಗುಂಡೂರಾವ್ ರವರ ಹೇಳಿಕೆ:

ಬೇರೆ ಬೇರೆ ರಾಜ್ಯಗಳ ಜನರು ಸ್ಥಳೀಯ ಭಾಷೆ ಮಾತನಾಡದೆ ಸಂವಹನ ಭಾಷೆಯಾಗಿ ಹಿಂದಿ ಮಾತಾಡಬೇಕು ಎಂದು ಅಮಿತ್ ಶಾ ಉಪದೇಶ ನೀಡಿದ್ದಾರೆ. ಅಮಿತ್ ಶಾ ರವರಿಗೆ ಹಿಂದಿ ಮೇಲೆ ಅಷ್ಟೊಂದು ಕುರುಡು ಪ್ರೇಮವಿದ್ದರೆ ಅವರ ತವರು ರಾಜ್ಯ ಗುಜರಾತಿಗರಿಗೆ ಹಿಂದಿ ಕಲಿಯಲು ಬೋಧನೆ ಮಾಡಲಿ. ನಮಗಲ್ಲ. ಕನ್ನಡಿಗರಿಗೆ ಹಿಂದಿ ಮಾತಾನಾಡೋ ದರ್ದಿಲ್ಲ. ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ.

ಸಂವಿಧಾನದಲ್ಲಿ ಹಿಂದಿಗೆ ವಿಶೇಷ ಮಾನ್ಯತೆಯೇನು ಇಲ್ಲ. ಸಂವಿಧಾನದ ಮಾನ್ಯತೆ ಪಡೆದಿರುವ ಭಾಷೆಗಳ ಪೈಕಿ ಹಿಂದಿಯೂ ಒಂದು ಎಂಬುದನ್ನು ಶಾ ನೆನಪಿನಲ್ಲಿಟ್ಟುಕೊಳ್ಳಲಿ. ಪ್ರಧಾನಿ ಮೋದಿ ಹಿಂದಿಯನ್ನು ಅಧಿಕೃತ ಭಾಷೆ ಎಂದು ನಿರ್ಧರಿಸಿದರೆ ನಾವೆಲ್ಲಾ ನಡು ಬಗ್ಗಿಸಿ ಹಿಂದಿ ಕಲಿತು ಮಾತಾಡಬೇಕೆ.? ಮೋದಿಯೇನು ಸಂವಿಧಾನಕ್ಕಿಂತ ದೊಡ್ಡವರೇ.?

ದೇಶದ ಪ್ರತಿಯೊಂದು ರಾಜ್ಯಕ್ಕೂ ಪ್ರಾದೇಶಿಕ ಅಸ್ಮಿತೆ ಎಷ್ಟು ಮುಖ್ಯವೋ..ಭಾಷಾ ಅಸ್ಮಿತೆಯೂ ಅಷ್ಟೇ‌ ಮುಖ್ಯ. ಕನ್ನಡ ಕರ್ನಾಟಕದ ತಾಯಿ ಭಾಷೆ. ಕನ್ನಡಿಗರಿಗೆ ಕನ್ನಡ ಕೇವಲ ಸಂವಹನ ಮಾಧ್ಯಮವಲ್ಲ. ಅದು ಪ್ರತಿಯೊಬ್ಬ ಕನ್ನಡಿಗನ ಉಸಿರು.ಕನ್ನಡಿಗರಷ್ಟೇ ಅಲ್ಲ,ದಕ್ಷಿಣದ ಯಾವ ರಾಜ್ಯಗಳೂ ಹಿಂದಿ ಹೇರಿಕೆಯನ್ನು ಒಪ್ಪುವುದಿಲ್ಲ. ಇದು ಶಾ ನೆನಪಿನಲ್ಲಿರಲಿ.

ಮೊನ್ನೆ ಗೋರಿಪಾಳ್ಯದಲ್ಲಿ ಚಂದ್ರು ಎಂಬ ಯುವಕನ ಕೊಲೆಯಾದಾಗ, ಕನ್ನಡ ಮಾತನಾಡಲಿಲ್ಲ ಎಂಬ ಕಾರಣಕ್ಕೆ ನಡೆದ ಕೊಲೆ ಎಂದು C.T.ರವಿ ರಂಪ ರಾಮಾಯಣ ಮಾಡಿದ್ದರು. ಈಗ ಅವರ ನಾಯಕ ಶಾ ಸ್ಥಳೀಯ ಭಾಷೆ ಮಾತನಾಡಬೇಡಿ ಎಂದು ಫರ್ಮಾನ್ ಹೊರಡಿಸಿದ್ದಾರೆ. ಈಗ ಎಲ್ಲಿ ಹೋಯಿತು ಸಿ.ಟಿ.ರವಿಯವರ ಭಾಷಾಭಿಮಾನ.? ಶಾ ಹೇಳಿಕೆ ವಿರೋಧಿಸುವ ಧೈರ್ಯ C.T.ರವಿಯವರಿಗಿದೆಯೇ.?

ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಹಿಂದಿಯನ್ನು ಒಂದು ಭಾಷೆಯಾಗಿ ನಾವು ಗೌರವಿಸುತ್ತೇವೆ. ಆದರೆ ಏಕದೇಶ,ಏಕಭಾಷೆ,ಏಕಸಂಸ್ಕೃತಿ ಹೆಸರಲ್ಲಿ ದಕ್ಷಿಣದ ರಾಜ್ಯಗಳ ಮೇಲಿನ ಹಿಂದಿ ಸವಾರಿ ಒಪ್ಪಲು ಸಾಧ್ಯವಿಲ್ಲ. ನಮಗೆ ನಮ್ಮದೇ ಆದ ಅಸ್ಮಿತೆಯಿದೆ, ನಮ್ಮದೇ ಆದ ಸ್ವಾಭಿಮಾನವಿದೆ. ಇದು BJP ನಾಯಕರಿಗೆ ತಿಳಿದಿರಲಿ.

ಕಾಂಗ್ರೆಸ್‌ನ ಮತ್ತೊಬ್ಬ ನಾಯಕ, ಮಾಜಿ ಸಚಿವ, ಜನಪರ ಚಿಂತಕ ಡಾ.ಎಚ್.ಸಿ ಮಹಾದೇವಪ್ಪ ರವರ ಹೇಳಿಕೆ:

ಭಾರತದ ಗ್ರಾಮೀಣ ಮಟ್ಟದಲ್ಲಿ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಯು ಅಸ್ತಿತ್ವದಲ್ಲಿದ್ದರೆ ನಗರಗಳ ಮಟ್ಟದಲ್ಲಿ ಹಿಂದಿಗಿಂತ ಇಂಗ್ಲಿಷ್ ಭಾಷೆಯು ಪ್ರಾದೇಶಿಕ ಭಾಷೆಗಳ ಜೊತೆಗೆ ಸಂಪರ್ಕ ಭಾಷೆಯಾಗಿ ಹೆಚ್ಚಾಗಿ ವ್ಯಾಪಿಸಿದೆ.

ಯಾವ ಭಾಷೆ ಮಾತನಾಡಬೇಕು ಎಂಬುದು ಸಂವಿಧಾನವು ನಮ್ಮ ದೇಶದ ಜನರಿಗೆ ನೀಡಿರುವ ಆಯ್ಕೆ. ಈಗ ಇಂಗ್ಲಿಷ್ ಭಾಷೆಯನ್ನು ಸಹಜವಾಗಿ ಬಳಸುವ ಹಾಗೆಯೇ ಇಂಗ್ಲಿಷ್ ಜಾಗದಲ್ಲಿ ಹಿಂದಿಯನ್ನೇ ಬಳಸುವ ಇಚ್ಛೆಯನ್ನು ಜನರು ವ್ಯಕ್ತಪಡಿಸಿದರೆ ಅದಕ್ಕೆ ಅವರು ಸಂಪೂರ್ಣ ಸ್ವತಂತ್ರರು.

ಹಾಗಲ್ಲದೇ ಇಂಗ್ಲಿಷ್ ಭಾಷೆ ಬೇಡ, ಹಿಂದಿ ಭಾಷೆಯನ್ನೇ ಬಳಸಿ ಎಂದು ಅನಗತ್ಯ ಸಲಹೆ ನೀಡಿದರೆ ಅಮಿತ್ ಷಾ ಅವರಿಗೆ ಸಂವಿಧಾನದ ಕುರಿತು ತಿಳುವಳಿಕೆ ಇಲ್ಲವೆಂದೇ ಭಾವಿಸಬೇಕಾಗುತ್ತದೆ.
ಭಾಷೆ, ಉಡುಪು ಮತ್ತು ಆಹಾರದ ಹೇರಿಕೆಯನ್ನು ಕನ್ನಡಿಗರಾದ ನಾವು ಸಹಿಸುವುದಿಲ್ಲ.

ಈಗಾಗಲೇ ಹಿಂದಿ ಭಾಷೆಯ ಹೇರಿಕೆ ಚಾಲ್ತಿಯಲ್ಲಿದ್ದು ಈ ಅಸಂವಿಧಾನಿಕ ಕ್ರಮವನ್ನು ನಾನು ಪೂರ್ಣವಾಗಿ ವಿರೋಧಿಸುತ್ತೇನೆ.
Advertisement
Advertisement
Recent Posts
Advertisement