Advertisement

'ಮನುಷ್ಯ'ರಾದವರು ಮೃತ ಸಂತೋಷ್ ಪಾಟೀಲ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಬೇಕು. ಅದರೆ ಇಂದು ಸ್ವಾಮೀಜಿಗಳು ಆರೋಪಿ ಈಶ್ವರಪ್ಪನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

Advertisement
ಸಚಿವ ಈಶ್ವರಪ್ಪನವರ "ಕಾಮಗಾರಿಯನ್ನು ನಡೆಸಿ, ಬಿಲ್ಲು ಮಾಡಿಸಿ ಕೊಡುವ ಹೊಣೆ ನನ್ನದು" ಎಂಬ ಮಾತು ನಂಬಿ, ಸಾಲ ಮಾಡಿ 4ಕೋಟಿ ರೂಪಾಯಿ ಕಾಮಗಾರಿ ನಡೆಸಿ, ಆ ಮೊತ್ತದ ಮೇಲೆ 40% ಕಮಿಷನ್ ಪಾವತಿಸಲಾಗದ ಕಾರಣಕ್ಕಾಗಿ ಸರ್ಕಾರದಿಂದ ಬಿಲ್ಲು ಪಾವತಿಯಾಗದೆ ಮೋಸ ಹೋಗಿ, ತಿರುಗಿ ತಿರುಗಿ ಸುಸ್ತಾಗಿ, ಖಿನ್ನತೆಗೊಳಗಾಗಿ "ನನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ" ಎಂದು ಸ್ನೇಹಿತರಿಗೆ ಮತ್ತು ಮಾಧ್ಯಮ ಮಿತ್ರರಿಗೆ ವಾಟ್ಸ್ಯಾಪ್ ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತ ಕಮ್ ಗುತ್ತಿಗೆದಾರ ಬೆಳಗಾವಿಯ ಸಂತೋಷ್ ಪಾಟೀಲ್ ಮನೆಗೆ "ಮನುಷ್ಯ"ರಾದವರು ಯಾರೇ ಆದರೂ ಭೇಟಿ ನೀಡುತ್ತಾರೆ. ಆತನ ವೃದ್ದ ತಾಯಿ, ಸಣ್ಣ ಪ್ರಾಯದ ಪತ್ನಿ, ಎಳೆಮಗುವಿಗೆ ಸಾಂತ್ವನ ಹೇಳುತ್ತಾರೆ. ನೀವು ಒಂಟಿಯಲ್ಲ, ನಾವಿದ್ದೇವೆ ಎಂದು ಬೆಂಬಲ ವ್ಯಕ್ತಪಡಿಸುತ್ತಾರೆ. ಸರ್ಕಾರದ ಮೇಲೆ ಗರಿಷ್ಠ ಒತ್ತಡ ಹೇರಿ ಬಾಕಿ ಉಳಿಸಿಕೊಂಡಿದ್ದ ಬಿಲ್ಲನ್ನು ಕೊಡಿಸುತ್ತಾರೆ, ಜೊತೆಗೆ ಒಂದಷ್ಟು ಪರಿಹಾರವನ್ನು ಕೂಡ ಕೊಡಿಸುತ್ತಾರೆ. ಅದುವೇ ಮಾನವ ಧರ್ಮ ಕೂಡ!

ಆದರೆ ವಿಚಿತ್ರ ನೋಡಿ, ಇಂದು ಹಲವು ಸ್ವಾಮೀಜಿಗಳು (ಕಾಗಿನೆಲೆಯ ಪುರುಷೋತ್ತಮನಂದಪುರಿ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಹೊಸದುರ್ಗದ ಈಶ್ವರನಂದಪುರಿ, ಸಹಿತ ಒಟ್ಟು 9 ಸ್ವಾಮೀಜಿಗಳು) ಅದೇ ಸಂತೋಷ್ ಪಾಟೀಲ್ ರ ಸಾವಿಗೆ ಕಾರಣರಾಗಿ, ರಾಜೀನಾಮೆ ನೀಡಿದ ಈಶ್ವರಪ್ಪ ಮನೆಗೆ ಭೇಟಿ ನೀಡಿದ್ದಾರೆ.‌ ನಿಮ್ಮ ಪರವಾಗಿ ನಾವಿದ್ದೇವೆ, ನೀವು ರಾಮಭಕ್ತರು ಹಾಗಾಗಿ ನೀವು ಆರೋಪ ಮುಕ್ತರಾಗಿ ಹೊರಬರುತ್ತೀರಿ ಎಂದು ಅಭಯ ನೀಡಿದ್ದಾರೆ.

ಹಾಗಾದರೆ ಇಲ್ಲಿ ನಿಜಕ್ಕೂ ಅನ್ಯಾಯವಾಗಿರುವುದಾದರೂ ಯಾರಿಗೆ? ಸ್ವಾಮೀಜಿಗಳ ಪ್ರಕಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವುದು ಈಶ್ವರಪ್ಪನವರಿಂದ ಸಚಿವ ಪದವಿಗೆ ರಾಜೀನಾಮೆ ಕೊಡಿಸುವ ಮೂಲಕ ಅವರಿಗೆ ಅನ್ಯಾಯ ಮಾಡಬೇಕೆಂದೋ ಅಥವಾ ತನಗೆ ಮಹಾನ್ ಅನ್ಯಾಯವಾಗಿದೆ, ಜೀವ ಉಳಿಸಿಕೊಳ್ಳಲಾಗದು ಎಂದೋ? ಏನಿದರ ಅರ್ಥ?

ಇಷ್ಟಾಗಿಯೂ ಸಂತೋಷ್ ಪಾಟೀಲ್ ಕೂಡ ಅದೇ ಈಶ್ವರಪ್ಪ ಪ್ರತಿನಿಧಿಸುವ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತ. ಆತ್ಮಹತ್ಯೆ ಮಾಡಿಕೊಳ್ಳುವ ವೇಳೆಗೆ ಕೂಡ ಕೊರಳಿಗೆ ಕೇಸರಿ ಶಾಲು ದರಿಸಿಕೊಂಡೆ ಆತ್ಮಹತ್ಯೆ ಮಾಡಿಕೊಂಡಿದ್ದ ಓರ್ವ ಕಟ್ಟರ್ ಹಿಂದೂ. ಆದರೆ ಈಶ್ವರಪ್ಪ ಮನೆಗೆ ಭೇಟಿ ನೀಡಿದ ಅದೇ ಸ್ವಾಮೀಜಿಗಳಿಗೆ "ಮೃತ ಸಂತೋಷ್ ಪಾಟೀಲ್ ಮನೆಗೂ ಭೇಟಿ ನೀಡಬೇಕು, ಆತ ಕೂಡ ಓರ್ವ ಹಿಂದೂ. ಘಟನೆಯಿಂದ ನೊಂದಿರುವ ಆತನ ತಾಯಿಗೆ, ಪತ್ನಿಗೆ, ಮಗುವಿಗೆ ಸಾಂತ್ವನ ಹೇಳುವುದು, ಕೈಲಾದ ಸಹಾಯ ಒದಗಿಸಿವುದು ಸ್ವಾಮೀಜಿಗಳಾಗಿ ನಮ್ಮ ಕರ್ತವ್ಯ" ಎಂದು ಅನ್ನಿಸಲೇ ಇಲ್ಲ.

ಇತ್ತೀಚೆಗಷ್ಟೆ ಹಲವು ಕ್ರಿಮಿನಲ್ ಕೃತ್ಯಗಳಲ್ಲಿ ಷಾಮೀಲಾಗಿರುವ ಶಿವಮೊಗ್ಗದ ಹರ್ಷನ ಕೊಲೆಯ ಘಟನೆ ನಡೆದಾಗ, ಇದೇ ಈಶ್ವರಪ್ಪನವರ ನೇತೃತ್ವದಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ಕೊಡಲಾಗಿತ್ತು. ಬೊಮ್ಮಾಯಿ ಸರ್ಕಾರದಿಂದ ಕೂಡ 25ಲಕ್ಷ ಪರಿಹಾರ ಘೋಷಿಸಲಾಗಿತ್ತು. (ಇಷ್ಟಾಗಿಯೂ ಈ ತನಕ ಕೊಲೆಗೆ ನಿಖರ ಕಾರಣ ಬಹಿರಂಗಗೊಂಡಿಲ್ಲ) ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ದಲಿತ ಯುವಕನ ದಿನೇಶ ಎಂಬಾತನನ್ನು ಅಮಾನುಷವಾಗಿ ಹೊಡೆದು ಕೊಂದಿದ್ದ ಆರೋಪಿತ ಭಜರಂಗದಳದ ಮುಖಂಡ ಎನ್ನಲಾದ ಕೃಷ್ಣನ ಪರವಾಗಿ ಬಿಜೆಪಿ ನಿಂತಿತ್ತು.

ಈ ಮೇಲಿನ ಸಂತೋಷ್ ಪಾಟೀಲ್ ಆತ್ಮಹತ್ಯೆ, ಹರ್ಷ ಕೊಲೆ, ದಲಿತ ದಿನೇಶ್ ಕೊಲೆ ಮುಂತಾದ ಘಟನೆಗಳು ಮತ್ತದರ ನಂತರದ ಬೆಳವಣಿಗೆಗಳು ಪ್ರಜಾಪ್ರಭುತ್ವದ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ. ಖಾಕಿ, ಕಾವಿ, ಖಾದಿ ಗಳೆಲ್ಲವೂ ಭ್ರಷ್ಟಗೊಂಡಿರುವುದನ್ನು ಪ್ರತಿಬಿಂಬಿಸುತ್ತದೆ.

ಅನುಮಾನವೇ ಇಲ್ಲ, ಭಾರತವಿಂದು ಲೂಟಿಕೋರರ, ಕೊಲೆಗಡುಕರ ಕೈವಶವಾಗಿದೆ.

ಹೌದು, ಮಹಾತ್ಮಾ ಗಾಂಧಿಯವರ ಕನಸಿನ ಭಾರತವಿಂದು ಬಹು ಅಪಾಯದಲ್ಲಿದೆ.
Advertisement
Advertisement
Recent Posts
Advertisement