Advertisement

"ಬೇರೆಯೇ ಮಾತು" ಪುಸ್ತಕ ಬಿಡುಗಡೆ: ವರಶೆ ಯವರು ನಿರ್ಭೀತ, ನಿಷ್ಪಕ್ಷಪಾತ, ನ್ಯಾಯಪರ ಪತ್ರಿಕೋದ್ಯಮದ ವಾರಸುದಾರರಾಗಿದ್ದರು: ದೇವನೂರು

Advertisement
"ಇಂದಿನ ಮಾಧ್ಯಮ ಕ್ಷೇತ್ರ, ಅದರಲ್ಲೂ ಮುಖ್ಯವಾಗಿ ದೃಶ್ಯ ಮಾಧ್ಯಮ ಕ್ಷೇತ್ರವು ತನ್ನ ನೀತಿ, ನಿಯಮ, ಸಂಯಮ, ಮಾನ, ಮರ್ಯಾದೆ ಹಾಗೂ ಘನತೆಗಳನ್ನು ತಾನೇ ತುಳಿದು ನಿಂತಿರುವ ಈ ಕಾಲಘಟ್ಟದಲ್ಲಿ ಸೂಕ್ಷ್ಮ ಪ್ರಜ್ಞೆ ಹೊಂದಿರುವವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ (ವರಶೆ)ರವರು ನಿರ್ಭೀತ, ನಿಷ್ಪಕ್ಷಪಾತ, ನ್ಯಾಯಪರ ಪತ್ರಿಕೋದ್ಯಮದ ವಾರಸುದಾರನಾಗಿ, ಸಾಮಾಜಿಕ ನ್ಯಾಯದ ಪ್ರತೀಕವಾಗಿ, ಆದರ್ಶವಾಗಿ ಕಂಡುಬರುತ್ತಾರೆ" ಎಂದು ಹಿರಿಯ ಖ್ಯಾತ ಸಾಹಿತಿ, ನಾಡಿನ ಸಾಕ್ಷಿಪ್ರಜ್ಞೆಯೆಂದೆ ಬಿಂಬಿತವಾಗಿರುವ ದೇವನೂರು ಮಹಾದೇವರವರು ಹೇಳಿದ್ದಾರೆ.
ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟುರವರು ಸಂಪಾದಿಸಿರುವ ಹಾಗೂ ಇಂದಿನ ಹೊಲಸು, ಭ್ರಷ್ಟಾಚಾರಯುಕ್ತ, ಮನುವಾದಿಗಳ ಪ್ರಾಬಲ್ಯದ ರಾಜಕೀಯದ ಕುರಿತು ಅಂದೇ ಚಿಂತಿಸಿದ್ದ, ಸಂಪಾದಕೀಯದಲ್ಲಿ ದಾಖಲಿಸಿದ್ದ ಓದುಗರ ಮಾಲಕತ್ವದ ಪತ್ರಿಕೆ ''ಮುಂಗಾರು'' ವಿನ ಸಂಪಾದಕರಾಗಿ ಜನಮನದಲ್ಲಿ ಇಂದಿಗೂ ಸ್ಥಿರಸ್ಥಾಯಿಯಾಗಿರುವ ವಡ್ಡರ್ಸೆ ರಘುರಾಮ ಶೆಟ್ಟರ ಬರಹಗಳ ಸಂಕಲನ ''ಬೇರೆಯೇ ಮಾತು'' ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಾಧ್ಯಮಗಳು ಸುದ್ದಿಗಳನ್ನು ಮಾತ್ರವೇ ವರದಿ ಮಾಡಬೇಕು. ಅದರ ನಡುವೆಯೂ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಕಾಳಜಿ ಹೊಂದಿರಬೇಕು. ಸ್ವಾಸ್ಥ್ಯ ಕೆಡುವ ಸುದ್ದಿಗಳ ಕುರಿತು ಕನಿಷ್ಠಪಕ್ಷ ತನ್ನ ಓದುಗರಿಗೆ ಅಥವಾ ವೀಕ್ಷಕರಿಗೆ ನೈಜತೆಯನ್ನು ಪ್ರತಿಪಾದಿಸುವ ವರದಿ ಮಾಡಬೇಕು ಆದರೆ ಇಂದಿನ ಹೆಚ್ಚಿನ ಮಾಧ್ಯಮಗಳು ಇಲ್ಲದ ಸಮಸ್ಯೆಗಳನ್ನು ಹುಟ್ಟುಹಾಕುವ, ಸಮಾಜದ ಸ್ವಾಸ್ಥ್ಯ ಕೆಡಿಸುವ ಹೀನ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ. ಆ ಕುರಿತು ಉದಾಹರಣೆ ಕೊಡುವುದಾದರೆ ಇತ್ತೀಚೆಗೆ ವಿವಾದವನ್ನಾಗಿ ಬಿಂಬಿಸಲಾದ "ಹಿಜಾಬ್‌" ವಿಷಯದಲ್ಲಿ "ಸಮಸ್ಯೆಯ ನಿಜ ಪಾಲೆಷ್ಟು" ಹಾಗೂ "ಟಿಆರ್‌ಪಿ ಗಾಗಿ ಇದನ್ನು ಸಮಸ್ಯೆಯಾಗಿಸಿದ ಮಾಧ್ಯಮಗಳ ಪಾಲೆಷ್ಟು" ಎಂಬುವುದನ್ನು ವಿಶ್ಲೇಷಿಸಿದರೆ ನೈಜತೆಯ ಅರಿವಾಗುತ್ತದೆ ಎಂದವರು ಹೇಳಿದರು.
"ನಿಜವಾದ ಪ್ರೀತಿ ಕೇವಲ ಎರಡು ಹೆಣ್ಣು ಗಂಡುಗಳ ನಡುವಿನದ್ದಾಗಿರುತ್ತದೆ. ಅದು ಜಾತಿ, ಧರ್ಮ ಊರು, ಕೇರಿ, ರಾಜ್ಯ, ದೇಶ, ಕಾಲದ ಎಲ್ಲೆಗಳನ್ನು ಮೀರಿದ್ದು. ಶಾಸ್ತ್ರ, ಪುರಾಣ, ನಂಬಿಕೆಗಳ ಪ್ರಕಾರ "ಕೇಸರಿ ಎಂದರೆ ವಿರಕ್ತಿ". ಆದರಿಂದು, ಹಿಂದೂ ಧರ್ಮವನ್ನು ಗುತ್ತಿಗೆ ಪಡೆದಂತೆ ವರ್ತಿಸುವ ಕೆಲವು ಸ್ಥಾಪಿತ ಹಿತಾಸಕ್ತ ಸಂಘಟನೆಗಳು ಕೇಸರಿ ಹೊದ್ದು "ಲವ್‌" ಜೊತೆಯಲ್ಲಿ "ಜಿಹಾದ್‌" ಸೇರಿಸಿ ಸಮಾಜದ ಸ್ವಾಸ್ಥ್ಯ ಕೆಡಿಸಲು ಹೊರಟಿದ್ದಾರೆ ಎಂದವರು ಹೇಳಿದ್ದಾರೆ.
ಆರೆಸ್ಸೆಸ್ ಸಂಸ್ಥಾಪಕ ಗೋಳ್ವಾಲ್ಕರ್ ಮತ್ತು ಹಿಂಸಾಮೂರ್ತಿ, ಗಾಂಧಿ ಹಂತಕ ನಾಥೂರಾಮ್‌ ಗೋಡ್ಸೆ ಅವರ ನೀಚಾತಿನೀಚ ಚಿಂತನೆಗಳನ್ನು ಭಾರತದೆಲ್ಲೆಡೆ ಬಿತ್ತಿ ಬೆಳೆಯಲು ನಾಗ್ಪುರದ ಆರೆಸ್ಸೆಸ್ ಸತತವಾಗಿ ಕಾರ್ಯಾಚರಿಸುತ್ತಲೇ ಇದೆ. 1925ರಲ್ಲಿ ಸ್ಥಾಪಿತಗೊಂಡ ಆ ಮನುವಾದಿ ಸಂಘಟನೆಯ ಅಸಮಾನತೆ ಚಾತುವರ್ಣ ಪ್ರತಿಪಾದಕ ಗುಂಪು, ಸ್ವಾತಂತ್ರ್ಯಾ ನಂತರದ ಭಾರತವನ್ನು ಆವರಿಸಿಕೊಂಡಿರುವ "ದೇಶದ ಸಂಪೂನ್ಮೂಲ ಸರ್ವರಿಗೂ ಹಂಚಿಕೆಯಾಗಬೇಕು" ಎನ್ನುವ ಗಾಂಧಿ ಮತ್ತು ಅಂಬೇಡ್ಕರ್‌ ಚಿಂತನೆಗಳನ್ನು ನಿರ್ಣಾಮ ಮಾಡಲು ಇಂದಿಗೂ ಶ್ರಮಿಸುತ್ತಿದ್ದಾರೆ ಎಂದವರು ವಿಷಾದಪೂರ್ವಕವಾಗಿ ಹೇಳಿದರು.
ವಡ್ಡರ್ಸೆಯವರು ಅಂದು ಓದುಗರ ಒಡೆತನದ ಪತ್ರಿಕೆಯನ್ನು ಆರಂಬಿಸಿದ್ದರು. ಆದರೆ ಇಂದು ಓದುಗ ಪತ್ರಿಕೆಗಳ ಒಡೆಯನಾಗಿ ಉಳಿದಿಲ್ಲ‌ ಇಂದಿನ ಪತ್ರಿಕೋದ್ಯಮ ಜಾಹೀರಾತುದಾರರ ಒಡೆತನದಲ್ಲಿದೆ. ಇದರಿಂದ ಹೊರಬರದ ಹೊರತೂ ಪತ್ರಿಕೋಧ್ಯಮಕ್ಕೆ ನ್ಯಾಯ ಒದಗಿಸಲಾಗದು ಎಂದು ಜನಪರ ಚಿಂತಕ, ಸಾಮಾಜಿಕ ಹೋರಾಟಗಾರ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ (ಸಿದ್ದರಾಮಯ್ಯ ಅವಧಿ) ದಿನೇಶ್ ಅಮಿನ್ ಮಟ್ಟು ಹೇಳಿದರು.
''ಜನನುಡಿ ಬಳಗ'' ಮತ್ತು ''ಅಹರ್ನಿಶಿ ಪ್ರಕಾಶನ'' ಸಹಯೋಗದಲ್ಲಿ ಶನಿವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ಈ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಚಿಂತಕ ಡಾ. ಕೆ. ಮರುಳಸಿದ್ದಪ್ಪ, ಲೇಖಕರಾದ ಕೆ. ಪುಟ್ಟಸ್ವಾಮಿ, ವಕೀಲರು ಮತ್ತು ಜನಪರ ಹೋರಾಟಗಾರರಾದ ಅನಂತ ನಾಯಕ, ಅಕ್ಷತಾ ಹುಂಚದಕಟ್ಟೆ ಮುಂತಾದವರು ಉಪಸ್ಥಿತರಿದ್ದರು.
Advertisement
Advertisement
Recent Posts
Advertisement