ಶುಕ್ರವಾರ (೨೨ ಮೇ) ಡೋಂಗರಗಾಂವ್ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 131ನೇ ಜಯಂತ್ಯೋತ್ಸವದ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
"ಅಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ಸಂಸತ್ತಿನಲ್ಲಿ ಮಂಡನೆ ಮಾಡುತ್ತಿರುವಾಗ ಹೊರಗಡೆ ಆರೆಸ್ಸೆಸ್ ಸೇರಿದಂತೆ ಹಿಂದುತ್ವ ಸಂಘಟನೆಗಳು ಪ್ರತಿಭಟನೆ ನಡೆಸಿ ಅಂಬೇಡ್ಕರ್ ಅವರು ಮಂಡಿಸಿರುವ ಸಂವಿಧಾನವನ್ನು ನಾವು ಒಪ್ಪಲ್ಲ ನಮಗೆ ಮನುಸ್ಮೃತಿನೇ ಬೇಕು ಎಂದು ಸಂವಿಧಾನದ ಪ್ರತಿಯನ್ನು ಸುಟ್ಟಿದ್ದರು. ಅಂತವರು ಈಗ ನಮಗೆ ದೇಶಪ್ರೇಮದ ಪಾಠ ಮಾಡುತ್ತಿದ್ದಾರೆ" ಎಂದವರು ಕಿಡಿ ಕಾರಿದ್ದಾರೆ.
"ಬುದ್ದ ಬಸವ ಅಂಬೇಡ್ಕರ ಅವರ ತತ್ವಗಳ ಪಾಲನೆ ಮಾಡಬೇಕು ಅವರ ಆದರ್ಶಗಳೇ ಸಂವಿಧಾನದಲ್ಲಿ ಅಡಕವಾಗಿದೆ. ನೀವು ಸಂವಿಧಾನದ ಅಂಶಗಳ ಪಾಲನೆ ಮಾಡಬೇಕೆ ಹೊರತು ವ್ಯಕ್ತಿ ಪೂಜೆ ಮಾಡಬಾರದು. ಶಾಸಕ ಸಚಿವರಿಗೆ ಸನ್ಮಾನದ ಅವಶ್ಯಕತೆ ಇಲ್ಲ. ನಮ್ಮನ್ನು ನೀವು ಮತನೀಡಿ ಕಳಿಸಿದ್ದು ನಿಮ್ಮ ಸೇವೆ ಮಾಡಲು ಹೊರತು ನಮ್ಮನ್ನು ಸನ್ಮಾನಿಸಲು ಅಲ್ಲ" ಎಂದು ಹೇಳಿದರು.
"ಪ್ರಬುದ್ದ ಹಾಗೂ ಸಮೃದ್ದ ಭಾರತ ಆಗಬೇಕಾದರೆ ಶಿಕ್ಷಣದ ಅವಶ್ಯಕತೆ ಇದೆ. ಶಿಕ್ಷಣ ಪಡೆದುಕೊಳ್ಳಬೇಕಾದರೇ, ಬಾಬಾಸಾಹೇಬರ ಮತ್ತು ಬಸವಣ್ಣನವರ ತತ್ವಗಳ ಪರಿಪಾಲನೆ ಮಾಡಬೇಕು. ಮಹಿಳೆಯರಿಗೆ ಶಿಕ್ಷಣ ಕೊಡಿಸುವುದು ನಮ್ಮ ಕರ್ತವ್ಯ" ಎಂದವರು ಹೇಳಿದ್ದಾರೆ.
"ಮಹಾನ್ ವ್ಯಕ್ತಿಗಳನ್ನು ಕೇವಲ ಜಾತಿಗೆ ಸೀಮಿತಿಗೊಳಿಸಲಾಗಿದೆ, ಅಂಬೇಡ್ಕರ, ಬಸವಣ್ಣನವರಂತ ದಾರ್ಶನಿಕರ ಜಯಂತಿಗಳನ್ನ ಆಯಾ ಏರಿಯಾಗಳಲ್ಲೇ ಆಚರಣೆ ಮಾಡಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಅಂಬೇಡ್ಕರ ಜಯಂತಿಯನ್ನು ಎಲ್ಲರೂ ಸೇರಿ ಆಚರಣೆ ಮಾಡಬೇಕು ಯಾಕೆಂದರೆ ಅದು ಸಂವಿಧಾನದ ಆಚರಣೆಯಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ವ್ಯಕ್ತಿಪೂಜೆ ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ನೀವು ಎಲ್ಲಿಯವರಿಗೆ ವ್ಯಕ್ತಿಪೂಜೆ ಬಿಡುವುದಿಲ್ಲವೋ ಅಲ್ಲಿಯವರೆಗೆ ಪ್ರಬುದ್ಧರಾಗಲು ಸಾಧ್ಯವಿಲ್ಲ" ಎಂದವರು ಕಿವಿಮಾತು ಹೇಳಿದ್ದಾರೆ.
"ಎರಡನೆಯ ವಿಶ್ವ ಯುದ್ದವಾದ ನಂತರ ಭಾರತವೂ ಸೇರಿ ಒಟ್ಟು 35 ರಾಷ್ಟ್ರಗಳು ಸ್ವತಂತ್ರವಾದವು. ಅದರೆ ಕಾಂಗ್ರೆಸ್ ಭಾರತವನ್ನು ಪ್ರಜಾಪ್ರಭುತ್ವ ರಾಷ್ಟ್ರವಾಗಿ ರೂಪಿಸಿದರೆ ಉಳಿದ ರಾಷ್ಟ್ರಗಳು ಸರ್ವಾಧಿಕಾರಿ ಆಳ್ವಿಕೆಗೆ ಒಳಪಟ್ಟವು. ನಾವು ಇನ್ನೂ ಸುಭದ್ರ ಪ್ರಜಾತಂತ್ರ ರಾಷ್ಟ್ರವಾಗಿ ಉಳಿದಿರುವುದಕ್ಕೆ ಅಂಬೇಡ್ಕರ್ ರಚನೆಯ ಸಂವಿಧಾನವೇ ಕಾರಣ" ಎಂದವರು ಹೇಳಿದರು.
"ಸಂವಿಧಾನದ ರಚನೆ ಮಾಡುವ ಸಂದರ್ಭ ಬಂದಾಗ ಗಾಂಧೀಜಿ ಹಾಗೂ ನೆಹರು ಚರ್ಚೆ ನಡೆಸಿ ಐರ್ಲೆಂಡ್ ದೇಶದವರಿಂದ ಭಾರತದ ಸಂವಿಧಾನ ರಚನೆ ಮಾಡಬೇಕೆಂದು ಮೊದಲು ಚರ್ಚೆ ನಡೆಸಿದರು. ಆದರೆ, ಅಂತಿಮವಾಗಿ ಡಾ. ಬಾಬಾಸಾಹೇಬರನ್ನು ಸಂವಿಧಾನ ರಚನೆ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿಲಾಯಿತು. ಸಂವಿಧಾನ ರಚನೆ ಮಾಡಿದ ನಂತರ ಈ ಕುರಿತು ಎರಡು ವರ್ಷದ ಸುದೀರ್ಘ ಚರ್ಚೆ ನಡೆದು ಸಾವಿರಾರು ಪ್ರಶ್ನೆಗಳನ್ನು ಅಂಬೇಡ್ಕರ್ ಅವರಿಗೆ ಕೇಳಿ ಅವರಿಂದ ಸಮರ್ಪಕ ಉತ್ತರ ಪಡೆದ ನಂತರ ಸಂವಿಧಾನವನ್ನು ಜಾರಿಗೊಳಿಸಲಾಯಿತು" ಎಂದು ಹೇಳಿದರು.
ಈ ಸಂದರ್ಭದಲ್ಲಿ ವೈಜನಾಥ ತಡಕಲ್, ವಿಜಯಕುಮಾರ ರಾಮಕೃಷ್ಣ, ಸಂಜಯ ಮಾಕಲ್, ಸುರೇಶ ವರ್ಮಾ, ಡಾ ಪುಟ್ಟಮಣಿ ದೇವಿದಾಸ, ಬಸವರಾಜ ಪಾಟೀಲ್, ಲಕ್ಷ್ಮೀಬಾಯಿ ರಾಠೋಡ, ಮೇಧಾವಿನಿ ಕಟ್ಟಿ ಮುಂತಾದವರು ಉಪಸ್ಥಿತರಿದ್ದರು.