Advertisement

"ಸಮುದಾಯ ಕುಂದಾಪುರ"ದ ಕಾರ್ಯ ಮತ್ತು ಉದ್ದೇಶ ಶ್ಲಾಘನೀಯ: ನಿತ್ಯದ ವಿಜ್ಞಾನ ತರಗತಿಗಳು ಹೀಗೆಯೇ ಇರಬಾರದೇ?

Advertisement
"ಸಮುದಾಯ ಕುಂದಾಪುರ"ವು ಅನೇಕ ವರ್ಷಗಳಿಂದ ಸಮುದಾಯದ ಒಡನಾಡಿಗಳೂ, ಬಹುಪರಿಚಿತ ನಾಟಕಕಾರರೂ, ವಿಚಾರ ಚಳುವಳಿಯಲ್ಲಿ ತಮ್ಮಿಡೀ ಕುಟುಂಬವನ್ನು ತೊಡಗಿಸಿದ ದಿ. ಕಾರ್ಕಡ ರಾಮಚಂದ್ರ ಉಡುಪರ ನೆನಪಿನಲ್ಲಿ "ಚುಕ್ಕಿ ಚಂದ್ರಮ" ಆಕಾಶ ವೀಕ್ಷಣೆ ಕಾರ್ಯಕ್ರಮ ನಡೆಸುತ್ತಾ ಬಂದಿದೆ.

ಈ ಆಕಾಶ ವೀಕ್ಷಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಸೇರಿಕೊಂಡು ಒಂದು ಸಂಜೆಯನ್ನು ರಾತ್ರಿಯಾಕಾಶದ ಕೌತುಕಗಳನ್ನು ನೋಡುತ್ತಾರೆ. ಕೋವಿಡ್‌ ನಿಂದಾಗಿ ಕಳೆದೆರಡು ವರ್ಷ ಈ ಕಾರ್ಯಕ್ರಮ ನಡೆದಿರಲಿಲ್ಲ. ಈ ವರ್ಷದ 'ಚುಕ್ಕಿ ಚಂದ್ರಮ' ಕಾರ್ಯಕ್ರಮದಲ್ಲಿ ಒಂದಿಡೀ ದಿನದ ವಿಜ್ಞಾನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಅಡುಗೆಮನೆಯ ಪರಿಚಿತ ಸಾಮಗ್ರಿಗಳನ್ನೇ ಬಳಸಿಕೊಂಡು ವಿಜ್ಞಾನ ಶಿಕ್ಷಕ ಉದಯ ಗಾಂವಕಾರ್ ರವರು ರಸಾಯನ ಶಾಸ್ತ್ರದ ಪ್ರಯೋಗಗಳನ್ನು ಮಾಡಿಸುತ್ತಾ ಹೋದಂತೆ ಮಕ್ಕಳು ಏಕೆ, ಹೇಗೆ ಮುಂತಾದ ಪ್ರಶ್ನೆಗಳನ್ನು ಬೆರಗುಗಣ್ಣಿನಿಂದ ಕೇಳತೊಡಗಿದರು. ಈ ಪ್ರಶ್ನೆಗಳಿಂದ ಹೇಗೋ ತಪ್ಪಿಸಿಕೊಂಡು, ಕೆಲವನ್ನು ಎದುರಾಡಿಕೊಂಡು ಮತ್ತೆ ಕೆಲವನ್ನು ಬಗ್ಗಿಸಿ, ಭಾಗಿಸಿ ಉತ್ತರವಾಗಿಸಿಕೊಂಡವರೆಲ್ಲ ರವಿ ಕಟ್ಕರೆ ಮತ್ತು ರವೀಂದ್ರ ಕೋಡಿಯವರ ಜೊತೆ ವಿಜ್ಞಾನ ಆಟಿಕೆ ಮಾಡಲು ಹೊರಟರು. ರವಿ ಕಟ್ಕೆರೆಯವರು ಚೆಂದದ ಆಟಿಕೆಗಳನ್ನು ಮಾಡಿಸಿ ಅದರೊಡನೆ ಆಟ ಶುರು ಮಾಡಿದರು. 3 ಡಿ ಕನ್ನಡಕ ತಯಾರಿಸಿದ ಮಕ್ಕಳು ಅದರಲ್ಲಿ 3 ಡಿ ಸಿನೇಮಾ ನೋಡಿ ಖುಷಿಪಟ್ಟರು. ದೃಷ್ಟಿ ಭ್ರಮೆಯ ಆಟಿಕೆಗಳು, ಘರ್ಷಣ ಬಲದಿಂದ ಮೇಲೇರುವ ಹಲ್ಲಿ ಇತ್ಯಾದಿ ಆಟಿಕೆಗಳು ವಿಜ್ಞಾನದ ಕೆಲವು ತತ್ವಗಳನ್ನು ಕಲಿಯಲು ಸಹಾಯ ಮಾಡಿದವು.
ಇಂತಹ ಹಲವಾರು ಆಟಿಕೆಗಳನ್ನು ಮಾಡಿಸುತ್ತಿರುವಾಗ ಕುಂಬಾರಿಕೆ ಯಲ್ಲೂ ಮಕ್ಕಳು ಕೈಜೋಡಿಸಿದರು. ಪ್ರತಿ ಮಗುವೂ ಒಂದೊಂದು ಕುಂಡವನ್ನು ತಮ್ಮ ಕೈಯಾರೆ ತಯಾರಿಸಿದ ಖುಷಿ. ಈ ನಡುವೆ ವಾಸುದೇವ ಗಂಗೇರಾ ಮತ್ತು ಅರವಿಂದ ಕುಡ್ಲ ವಿಜ್ಞಾನದ ಹಾಡುಗಳನ್ನು ಹಾಡಿಸುತ್ತಿದ್ದರು. ಮದ್ಯಾಹ್ನದ ಅವಧಿಯಲ್ಲಿ ಸಂತೋಷ ನಾಯಕರು ಹಗಲು ಖಗೋಳದ ಅನೇಕ ಚಟುವಟಿಕೆಗಳನ್ನು ಮಾಡಿಸಿದರು. ಸಂಜೆಯಾಗುತ್ತಲೆ ಅತುಲ್‌ ಭಟ್‌ ತಮ್ಮ ಸಹಯೋಗಿಗಳೊಂದಿಗೇ ಬಂದು ಸೇರಿಕೊಂಡರು. ರಾತ್ರಿಯಾಕಾಶ ನೋಡಲು ಒಂದಿಷ್ಟು ಪೂರ್ವ ತಯಾರಿ ಮಾಡಿಕೊಂಡರು. ಅವರು ಪುಟ್ಟದೊಂದು ಪ್ರಾತ್ಯಕ್ಷಿಕೆ ನೀಡುವ ಮೊದಲು ವೇದಿಕೆಯಲ್ಲಿದ್ದ ನಿವೃತ್ತ ಶಿಕ್ಷಕ ಬಾಲಗಂಗಾಧರ ಶೆಟ್ಟಿಯವರು ಪ್ರಶ್ನೆಯ ಸಾಹಸದ ಕುರಿತು ಮಾತನಾಡಿದರು.
ಪ್ರಾತ್ಯಕ್ಷಿಕೆಯ ಸಂತ ಜೊಸೆಫ್ ಪ್ರೌಢಶಾಲೆಯ ವಿಶಾಲ ಆಟದ ಮೈದಾನದಲ್ಲಿ ಆಕಾಶ ವೀಕ್ಷಣೆ ಆರಂಭವಾಯ್ತು. ಮಹಾವ್ಯಾಧ, ಸಿಂಹ, ಸಪ್ತರ್ಷಿ ಮಂಡಳಗಳೆಲ್ಲವೂ ಮಕ್ಕಳ ಜೊತೆಯಾದವು. ಇಂದು ರೋಹಿಣಿ ನಕ್ಷತ್ರದಿಂದ ಹೊರಟ ಬೆಳಕು ನಮ್ಮ ವರೆಗೆ ತಲುಪಲು ಇನ್ನು ಅರವತ್ತೈದು ವರ್ಷಗಳು ಬೇಕು ಎಂದಾಗ ವಿದ್ಯರ್ಥಿನಿಯೊಬ್ಬಳು " ನಂದು ರೋಹಿಣಿ ನಕ್ಷತ್ರ, ಇದರ ಪ್ರಭಾವ ಸದ್ಯಕ್ಕಂತೂ ನನ್ನ ಮೇಲೆ ಆಗಲು ಸಾಧ್ಯವಿಲ್ಲ!" ಎಂದು ನಿಟ್ಟುಸಿರು ಬಿಟ್ಟಳು.
ಒಂದು ಚಿತ್ರಾಕೃತಿಯಂತೆ ಗುರುತಿಸಬಹುದಾದ ರಾಶಿಪುಂಜಗಳಲ್ಲಿರುವ ನಕ್ಷತ್ರಗಳು ಬೇರೆ ಬೇರೆ ಜ್ಯೋತಿವರ್ಷಗಳಾಚೆ ಇರುವುದಾದರೆ ಅವುಗಳು ಸಮನ್ವಯದಲ್ಲಿ ನಮಗೆ ಕೆಡುಕನ್ನೋ ಶುಭವನ್ನೋ ಮಾಡುವುದಾದರೂ ಹೇಗೆ? ತಮ್ಮ ಬೆಳಕನ್ನು ಭೂಮಿಯವರೆಗೆ ತಲುಪಿಸಲು ಸಾವಿರಾರು ವರ್ಷಗಳನ್ನು ತೆಗೆದುಕೊಳ್ಳುವ ನಕ್ಷತ್ರಗಳು ತಮ್ಮ ಪ್ರಭಾವವನ್ನು ಆ ಕ್ಷಣವೇ ಉಂಟುಮಾಡಲು ಸಾಧ್ಯವೇ? ಮುಂತಾದ ಪ್ರಶ್ನೆಗಳೊಂದಿಗೆ ಮಕ್ಕಳು ಮನೆಗೆ ಮರಳಿದರು. ಉರಿಯುವ ಕರ್ಪೂರವನ್ನು ಕೈ ಬದಲಾಯಿಸುತ್ತ ಅದು ಸುಡುವುದಿಲ್ಲವೆಂದು ಖಾತ್ರಿಪಡಿಸಿಕೊಂಡರು.
ರುಚಿಯಾದ ಊಟ, ಪಲಾವು, ಐಸಕ್ರೀಮು, ಬಟಾಟೆ ವಡಾ ಹೀಗೆ ರುಚಿಯಾದ ಊಟ ಉಪಹಾರಗಳ ಮೂಲಕ ಮಕ್ಕಳ ಹೊಟ್ಟೆಯನ್ನು ತಣ್ಣಗಾಗಿಸಿದ್ದು ಕಾರ್ಕಡ ರಾಮಚಂದ್ರ ಉಡುಪರ ಕುಟುಂಬ. ಈ ಕ್ಯಾಂಪಿನ ಸಂಘಟನೆಯಲ್ಲಿ‌ ಕ್ಯಾಥೋಲಿಕ್ ಸಭಾ, ಕುಂದಾಪುರ ಸಕ್ರಿಯವಾಗಿ ಭಾಗವಹಿಸಿದೆ.
ಸಂಜೆ ಸಾರ್ವಜನಿಕರ ಸಂಖ್ಯೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿದರಿಂದ ಬೋಂಡಾ ಖಾಲಿಯಾಗಿ ಗೋಲಿ ಬಜೆ ಬಂತು. ಅದೂ ಖಾಲಿಯಾಯ್ತು.

ಕೊನೆಗೂ ಸಮುದಾಯದ ತಂಡಕ್ಕೆ ಉಳಿದದ್ದು ಒಂದು ಸಾರ್ಥಕ ದಿನವನ್ನು ಮಕ್ಕಳೊಂದಿಗೆ ಕಳೆದ ಚೆಂದದ ನೆನಪುಗಳಷ್ಟೇ!.
ಸಮುದಾಯದ ಸದಾನಂದ ಬೈಂದೂರು, ಬಾಲಕೃಷ್ಣ ಕೆ.ಎಮ್, ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಂತೋಷನಾಯಕ ಪಟ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ರವೀಂದ್ರ ಕೋಡಿ ಕಾರ್ಯಕ್ರಮ ನಿರೂಪಿಸಿದರು.
Advertisement
Advertisement
Recent Posts
Advertisement