ಆದರೆ ಭಾರತದ ಆಮ್ ಆದ್ಮಿಯ - ಜನ ಸಾಮಾನ್ಯರ- ಸಾಮಾಜಿಕ ಆರ್ಥಿಕ ಬದುಕು ಸರ್ಕಾರದಿಂದ ಮಾತ್ರವಲ್ಲದೆ. ಸರ್ಕಾರದಿಂದ ಬೆಂಬಲಿತವಾದ ಇತರ ಆರ್ಥಿಕ-ಸಾಮಾಜಿಕ ಸಂಸ್ಥೆಗಳಿಂದ ಶೋಷಣೆಗೆ ಒಳಗಾಗುತ್ತವೆ.
ಸಾಮಾಜಿಕ ಸಂಸ್ಥೆಯಾಗಿರುವ ಜಾತಿ ಸಾಮಾಜಿಕ ಅಧಿಕಾರವನ್ನು ದಲಿತ-ಬ್ರಾಹ್ಮಣರ ನಡುವೆ ಅಸಮಾನವಾಗಿ ಹಂಚುತ್ತದೆ. ಆದ್ದರಿಂದಲೇ ಸಾಮಾಜಿಕ ಪ್ರಜಾತಂತ್ರ ಬೇಕೆಂದರೆ ಜಾತಿ ವ್ಯವಸ್ಥೆ ನಾಶವಾಗಬೇಕು ಎಂಬ ಸಿದ್ಧಾಂತವನ್ನು ಅಂಬೇಡ್ಕರ್ ಪ್ರತಿಪಾದಿಸಿದ್ದರು.
ಹಾಗೆಯೇ ಕುಟುಂಬ ಮತ್ತು ಸಮಾಜದೊಳಗೆ ಗಂಡು-ಹೆಣ್ಣಿನ ನಡುವೆ ಅಸಮಾನತೆ ಇದೆ. ಅದರ ಹುಟ್ಟು ಇರುವುದು ಪುರುಷಾಧಿಪತ್ಯದಲ್ಲಿ ಹೀಗಾಗಿ ಆಮ್ ಔರತ್ (ಹೆಂಗಸು) ಆಮ್ ಆದ್ಮಿ (ಪುರುಷ)ಯಿಂದಲೇ ಶೋಷಣೆಗೊಳಗಾಗುವಾಗ ಪುರುಷಾಧಿಪತ್ಯವನ್ನು ನಾಶ ಮಾಡುವ ಸಿದ್ಧಾಂತವನ್ನು ಹೊಂದಿದ್ದರೆ ಮಾತ್ರ ಅದು ನಿಜವಾದ ಪರ್ಯಾಯ.
ಆರ್ಥಿಕ ವ್ಯವಸ್ಥೆಯಲ್ಲಿ ಆಸ್ತಿ ಮತ್ತು ಸಂಪತ್ತು ಒಂದು ಕಡೆ ಕೇಂದ್ರೀಕರಣಗೊಳ್ಳದ ಸಿದ್ಧಾಂತವಿದ್ದರೆ ಮಾತ್ರ ಆಮ್ ಆದ್ಮಿಗಳ ನಡುವೆ ಆರ್ಥಿಕ ಅಂತರ ಕಡಿಮೆಯಾಗಬಲ್ಲದು. ಸ್ವಾತಂತ್ರ್ಯಾನಂತರದಲ್ಲಿ ಕೇಂದ್ರ ದ ಸರ್ವಾಧಿಕಾರ ರಾಜ್ಯಗಳ ಮೇಲೆ ಹೆಚ್ಚುತ್ತಿದ್ದು, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದಿ ಹೇರಿಕೆ ಇತ್ಯಾದಿಗಳು ಇನ್ನೂ ಹೆಚ್ಚುತ್ತಿವೆ. ಇದು ನಿಲ್ಲಬೇಕೆಂದರೂ ಭಾರತದ ಒಕ್ಕೂಟತತ್ವದ ಬಗ್ಗೆ ಗಟ್ಟಿಯಾದ ಸೈದ್ಧಾಂತಿಕ ನಿಲುವು ಬೇಕಿರುತ್ತದೆ.
ಹೀಗೆಯೇ ಆಮ್ ಆದ್ಮಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮಾನುಯಾಯಿಯೂ ಆಗಿರುತ್ತಾರೆ. ಅಲ್ಲಿ ಧಾರ್ಮಿಕ ತಾರತಮ್ಯಕ್ಕೆ ಅವಕಾಶಕೊಡದಂಥ ಬಲವಾದ ಸೆಕ್ಯುಲಾರ್ ಸಿದ್ಧಾಂತವಿಲ್ಲದೆ ಪರ್ಯಾಯ ಸಾಧ್ಯವೇ ಇಲ್ಲ.
ಭಾರತೀಯ ಸಮಾಜದೊಳಗಿನ ಈ ಮೂಲಭೂತ ವೈರುಧ್ಯಗಳನ್ನು ಒಂದೆರಡು ಒಳ್ಳೆಯ ಸರ್ಕಾರೀ ಶಾಲೆಗಳು ಮತ್ತು ಒಂದೆರಡು ಒಳ್ಳೆಯ ಸರ್ಕಾರಿ ಆಸ್ಪತ್ರೆಗಳನ್ನು ಕಟ್ಟುವುದರಿಂದ ಬಗೆಹರಿಸಲು ಸಾಧ್ಯವಿಲ್ಲ. ಸಮಾಜದೊಳಗೆ ಇರುವ ಈ ವೈರುಧ್ಯಗಳನ್ನು ಬಗೆಹರಿಸಲು ಬಲವಾದ ಮತ್ತು ಅತ್ಯಂತ ಪ್ರಾಮಾಣಿಕವಾದ ತಾತ್ವಿಕ ನೆಲಗಟ್ಟು ಇರಬೇಕಾಗುತ್ತದೆ.
ಹಾಗೆ ನೋಡಿದರೆ ಭಾರತೀಯ ಸಮಾಜದಲ್ಲಿರುವ ಈ ಆರ್ಥಿಕ-ಸಾಮಾಜಿಕ ವೈರುಧ್ಯಗಳನ್ನು ಬಗೆಹರಿಸಲು ಸಂವಿಧಾನದ ಮುನ್ನುಡಿ, ಮೂಲಭೂತ ಹಕ್ಕುಗಳು ಮತ್ತು ನಿರ್ದೇಶನಾ ತತ್ವಗಳಲ್ಲಿ ಸಮಾಜವಾದಿ ಮತ್ತು ಪ್ರಜಾತಾಂತ್ರಿಕ ಸಿದ್ಧಾಂತದ ಹಿನ್ನೆಲಯ ಪರಿಹಾರಗಳನ್ನೂ ಒದಗಿಸಲಾಗಿದೆ. ಹಾಗೂ ಧಾರ್ಮಿಕ ತಾರತಮ್ಯಗಳನ್ನು ನಿವಾರಿಸಲು ಸೆಕ್ಯುಲಾರ್ ಸಿದ್ಧಾಂತದ ಪರಿಹಾರಗಳನ್ನು ಒದಗಿಸಲಾಗಿದೆ.
ಅವನ್ನು ರಾಜಕೀಯ ಪರಿಭಾಷೆಯಲ್ಲಿ ಎಡವಾದಿ ಪರಿಹಾರಗಳೆಂದೇ ಕರೆಯುತ್ತಾರೆ. ಅಂಥ ಪರಿಹಾರಗಳು ಬಲಪಂಥೀಯತೆಯಲ್ಲಿ ಇರುವುದಿಲ್ಲ. ಆದ್ದರಿಂದಲೇ ಅದನ್ನು ಬಲಪಂಥ ಎಂದು ಕರೆಯುತ್ತಾರೆ.
ಆದರೆ 1991ರ ನಂತರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು, ಅದರಲ್ಲೂ 2014ರ ನಂತರದಲ್ಲಿ ಮೋದಿ ನೇತೃತ್ವದ ಸರ್ಕಾರ ಸಂವಿಧಾನ ಸಿದ್ಧಾಂತಕ್ಕೆ ವಿರುದ್ಧವಾಗಿ ಬಲವಾದಿ ಮತ್ತು ಹಿಂದೂತ್ವವಾದಿ ಸಿದ್ಧಾಂತವನ್ನು ಅನುಷ್ಠಾನಗೊಳಿಸುತ್ತಿದೆ.
ಹೀಗಿರುವಾಗ ಒಂದು ರಾಜಕೀಯ ಪಕ್ಷ ತನ್ನದು ಕೇವಲ ಕೆಲಸದ ಸಿದ್ಧಾಂತ ಎಂದು ಹೇಳುವುದು ಕೇವಲ ರಮ್ಯ ಅವಕಾಶವಾದ.
ಅಷ್ಟು ಮಾತ್ರವಲ, ಬಲದಲ್ಲಿ ಪರಿಹಾರವಿದ್ದರೆ ಅಲ್ಲಿಂದಲೂ ತೆಗೆದುಕೊಳ್ಳಲು ಸಿದ್ಧ ಎಂದು ಘೋಷಿಸುವುದು ಸಂವಿಧಾನ ವಿರೋಧಿ. ಏಕೆಂದರೆ ಬಲವೆಂದರೆ ಪ್ರಬಲರ ಪರವಾಗಿರುವುದು ಎಂದರ್ಥ. ಪ್ರಬಲ ಧರ್ಮೀಯರ ಪರ, ಪ್ರಬಲ ವರ್ಗದ ಪರ, ಪ್ರಬಲ ಜಾತಿಯ ಪರ, ಪುರುಷಾಧಿಪತ್ಯದ ಪರವಾಗಿರುವುದೇ ಎಂದರ್ಥ.
ವಾಸ್ತವದಲ್ಲಿ ಆಪ್ ಪಕ್ಷದ ನಿಲುವುಗಳು ಮತ್ತು ಕಾರ್ಯಕ್ರಮಗಳನ್ನು ನೋಡಿದರೆ ಆಮ್ ಆದ್ಮಿಯ ಹೆಸರಿನಲ್ಲಿ ಹೀಗೆ ಸಮಾಜದಲ್ಲಿರುವ ಪ್ರಬಲ ಧರ್ಮೀಯರ, ಪ್ರಬಲ ವರ್ಗದವರ ಹಾಗೂ ಪ್ರಬಲ ಜಾತಿಗಳ ಅಧಿಕಾರವನ್ನು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಗಟ್ಟಿಗೊಳಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಬಿಜೆಪಿಯನ್ನು ವಿರೋಧಿಸುತ್ತಲೇ ಹಿಂದೂತ್ವ ಅಜೆಂಡಾವನ್ನು ಸಮರ್ಥಿಸುವ ಆಪ್ ನಿಲುವುಗಳು
ಉದಾಹರಣೆಗೆ ಇತ್ತೀಚಿನ ಜಹಾಂಗೀರ್ ಪುರಿಯ ಗಲಭೆಯನ್ನೇ ಗಮನಿಸೋಣ.
ಈ ವರ್ಷದ ಶ್ರೀರಾಮನವಮಿ ಮತ್ತು ಹನುಮ ಜಯಂತಿಯಂದು ಸಂಘೀ ಪಡೆಗಳು ದೆಹಲಿಯನ್ನು ಒಳಗೊಂಡಂತೆ ದೇಶದ ಹಲವಾರು ರಾಜ್ಯಗಳಲ್ಲಿ ರಾಮ ಹಾಗೂ ಹನುಮಂತನ ಹೆಸರಿನಲ್ಲಿ ತಲ್ವಾರ್, ಬಂದೂಕುಗಳನ್ನು ಪ್ರದರ್ಶಿಸುತ್ತಾ ಮಸೀದಿಯ ಮುಂದೆ ಮೆರವಣಿಗೆ ಮಾಡುತ್ತಾ, ಮೈಕ್ ನಲ್ಲಿ ಜೋರುಧ್ವನಿಯಲ್ಲಿ ಇಸ್ಲಾಮನ್ನು ಮತ್ತು ಮುಸ್ಲಿಮರನ್ನು ಹೀಯಳಿಸುತ್ತಾ ಮುಸ್ಲಿಮರನ್ನು ಪ್ರಚೋದಿಸಿದರು, ಅವಮಾನಿಸಿದರು. ಹಲವು ಮಸೀದಿಗಳ ಮೇಲೆ ಭಗವಾಧ್ವಜವನ್ನು ಹಾರಿಸಿದರು.
ಆದರೂ ಬಹುಪಾಲು ಕಡೆ ಮುಸ್ಲಿಮರು ಪ್ರಚೋದನೆಗೆ ಬಲಿಯಾಗಲಿಲ್ಲ. ಕೆಲವು ಕಡೆ ಈ ಅವಮಾನವನ್ನು ಸಹಿಸದೆ ಮುಸ್ಲಿಮರು ಪ್ರಚೋದನೆಯೆಂಬ ಕ್ರಿಯೆಗೆ ಪ್ರತಿಕ್ರಿಯೆ ಯಾಗಿ ಪ್ರತಿಭಟಿಸಿದರು. ಕಲ್ಲುತೂರಾಟಗಳು ನಡೆದವು.
ಹಾಗೆಯೇ ಜಹಾಂಗೀರ್ ಪುರದಲ್ಲೂ ಸಂಘೀಗಳು ಮೂರು ಬಾರಿ ಮಸೀದಿಯ ಮುಂದೆ ತಲ್ವಾರ್ಗಳನ್ನು ಪ್ರದರ್ಶಿಸುತ್ತಾ ಮೆರವಣಿಗೆಮಾಡಿ ಮಸೀದಿಯ ಮೇಲೆ ಭಗವಾಧ್ವಜ ಹಾರಿಸಿದರು. ಆದರೆ ಮೂರನೇ ಮೆರವಣಿಗೆಯ ವೇಳೆಗೆ ಸಹನೆ ಕಳೆದುಕೊಂಡ ಮುಸ್ಲಿಮರು ಮಸೀದಿಯ ಮೇಲೆ ಭಗವಾಧ್ವಜವನ್ನು ಹಾರಿಸುವುದನ್ನು ಪ್ರತಿಭಟಿಸಿದರು.
ಸಂಘೀಗಳು ಮಾಡುವ ದೌರ್ಜನ್ಯದ ವಿರುದ್ಧ ಮುಸ್ಲಿಮರು ಪ್ರತಿಭಟನೆಯನ್ನು ಕೂಡಾ ಮಾಡದಂತೆ ಪಾಠ ಕಲಿಸುವ ಉದ್ಡೆಶದಿಂದ ಬಿಜೆಪಿಯ ಆಡಳಿತವಿರುವ ಉತ್ತರ ದೆಹಲಿ ನಗರ ಪಾಲಿಕೆಯು ಜಹಾಂಗೀರ್ ಪುರಕ್ಕೆ ಬುಲ್ಡೋಜರನ್ನು ಕಳಿಸಿ ಮುಸ್ಲಿಮರ ಅಂಗಡಿಗಳನ್ನು ಧ್ವಂಸ ಮಾಡಿತು. ಮಸೀದಿಯ ಗೇಟನ್ನೂ ಒಡೆದುಹಾಕಿತು.
ಈ ಅನ್ಯಾಯದ ವಿರುದ್ಧ ಕಪಿಲ್ ಸಿಬಲ್ ರಂಥ ಕಾಂಗ್ರೆಸ್ ವಕೀಲರು ಕೂಡಲೇ ಸುಪ್ರೀಂ ಕೋರ್ಟಿನ ಮೊರೆ ಹೋಗಿ ತಡೆಯಾಜ್ಞೆ ತಂದರು. ಕೋರ್ಟ್ ಆದೇಶವಿದ್ದರೂ ಧ್ವಂಸ ಕಾರ್ಯ ಮುಂದುವರೆದಿದ್ದಾಗ ಬೃಂದಾ ಕಾರಟ್ ರಂಥ ಸಿಪಿಎಂ ನಾಯಕಿ ಕೂಡಲೇ ಸ್ಥಳಕ್ಕೆ ತೆರಳಿ ಬುಲ್ಡೊಝರ್ ಎದುರು ನಿಂತು ಕೋರ್ಟ್ ಆದೇಶ ತೋರಿಸಿ ಅನ್ಯಾಯವನ್ನು ನಿಲ್ಲಿಸಿದರು.
ಆದರೆ ಇದೇ ಜನರಿಂದ ಓಟು ಪಡೆದುಕೊಂಡು ಸರ್ಕಾರ ಮಾಡಿರುವ ಆಪ್ ಸರ್ಕಾರ ಮತ್ತು ಆಪ್ ಪಕ್ಷ ಮಾಡಿದ್ದೇನು?
ಮೊದಲನೆಯದಾಗಿ ತನ್ನ ಬಳಿ ಪೊಲೀಸ್ ಅಧಿಕಾರವಿಲ್ಲದಿರುವುದರಿಂದ ಏನೂ ಮಾಡಲು ಆಗುವುದಿಲ್ಲ ಎಂದು ತಮ್ಮ ಮೌನವನ್ನು ಸಮರ್ಥನೆ ಮಾಡಿಕೊಂಡರು.
ಆ ನಂತರ ನಾವು ಅಲ್ಲಿಗೆ ಹೋಗಿದ್ದರೆ ತಾನೇ ಏನಾಗುತ್ತಿತ್ತು? ತಮ್ಮನ್ನು ಮುಸ್ಲಿಮ್ ಪರ ಎಂದು ಪ್ರಚಾರ ಮಾಡಲು ಬಿಜೆಪಿಗೆ ಮತ್ತೊಂದು ಅವಕಾಶವನ್ನು ಕೊಟ್ಟಂತೆ ಆಗುತ್ತಿತ್ತು. ಅದರಿಂದ ಬಿಜೆಪಿಗೇ ಅನುಕೂಲ. ಆದ್ದರಿಂದ ಹಿಂದೂ ಬಹುಸಂಖ್ಯಾತ ಸಮುದಾಯ ನಮ್ಮಿಂದ ದೂರವಾಗುವಂಥ ಯಾವುದೇ ಕೆಲಸವನ್ನು ನಾವು ಮಾಡಬಾರದೆನ್ನುವುದೇ ನಮ್ಮ ನೀತಿಯೆಂದು ಆಮ್ ಆದ್ಮಿಯ ವಕ್ತಾರರು ಘೋಷಿಸಿದರು.
ಮುಸ್ಲಿಮರೂ ಕೂಡಾ ಇಂಥ ವಿಷಯಗಳಲ್ಲಿ ಪ್ರತಿಭಟನೆ ಇತ್ಯಾದಿಗಳನ್ನು ಮಾಡದೆ ಶಿಕ್ಷಣ, ವ್ಯಾಪಾರ, ಬದುಕು ಮತ್ತು ಉದ್ಯೋಗಗಳತ್ತ ಗಮನಹರಿಸುವುದು ವಾಸಿ ಎಂದು ಪುಕ್ಕಟೆ ವಿಧಿವಾದಿ ಸಲಹೆ ನೀಡಿದರು.
ಇದು ಈಗ ಮಾತ್ರವಲ್ಲ. 2020ರಲ್ಲಿ ದೆಹಲಿಯಲ್ಲಿ ಬಿಜೆಪಿ ಪಕ್ಷ ಸಿಎಎ ವಿರೋಧಿ ಹೋರಾಟಗಾರರ ಮೇಲೆ ಅದರಲ್ಲೂ ವಿಶೇಷವಾಗಿ ಮುಸ್ಲಿಮರ ಮೇಲೆ ಹತ್ಯಕಾಂಡ ನಡೆಸಿದಾಗಲೂ ಆಪ್ ಪಕ್ಷ ಇದೇ ಅವಕಾಶವಾದೀ ನಿಲುವನ್ನು ತೆಗೆದುಕೊಂಡು ಮುಸ್ಲಿಮರನ್ನು ಕೈಬಿಟ್ಟಿತ್ತು.
ಇಷ್ಟೇ ಆಗಿದ್ದರೂ ಅರ್ಥ ಮಾಡಿಕೊಳ್ಳಬಹುದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆಪ್ ಪಕ್ಷದ ಇಂಥಾ ರಾಜಕೀಯ ಅವಕಾಶವಾದೀ ನಿಲುವುಗಳು ನಿಧಾನವಾಗಿ ಸಕ್ರಿಯ ಹಿಂದೂತ್ವವಾದಿ ಸಮರ್ಥನೆಗಳಾಗಿ ಪರಿವರ್ತನೆಯಾಗುತ್ತಿವೆ. ಆ ಮೂಲಕ ಬಿಜೆಪಿಯ ನೆರೇಟೆವಿಗಳನ್ನು ಸಮರ್ಥಿಸುತ್ತಾ ಸಂಘೀ ಅಜೆಂಡಾಗಳನ್ನು ಸಮಾಜದಲ್ಲಿ ಗಟ್ಟಿಗೊಳಿಸುತ್ತಾ ಬಿಜೆಪಿಯ ಬಿ ಟೀಮ್ ಎಂಬ ಆಪಾದನೆಗೆ ಪುರಾವೆಗಳನ್ನು ಒದಗಿಸುತ್ತಿದೆ.
ಹಿಂದೂತ್ವ ಅಜೆಂಡಾಗಳ ಮೌನ ಸಮರ್ಥನೆಯಿಂದ ಸಕ್ರಿಯ ಪ್ರತಿಪಾದನೆಯತ್ತ!
ಇತ್ತೀಚಿನ ಜಹಾಂಗೀರ್ ಪುರ ಪ್ರಕರಣದ ಬಗ್ಗೆ ಟ್ವೀಟ್ ಮಾಡಿದ ಕೇಜ್ರಿವಾಲರು ಗಲಭೆಗೆ ಮುಸ್ಲಿಮರು ನಡೆಸಿದ ಕಲ್ಲು ತೂರಾಟವನ್ನು ಹೊಣೆ ಮಾಡಿದರೇ ವಿನಾ ಹಿಂದೂತ್ವವಾದಿಗಳ ತಲ್ವಾರ್ ಮೆರವಣಿಗೆಯನ್ನಲ್ಲ.
ಅಷ್ಟು ಮಾತ್ರವಲ್ಲ. ಬಿಜೆಪಿ ಮತ್ತು ಸಂಘ ಪರಿವಾರ ತಾವು ಮಾಡಿದ ಅನಾಚಾರವನ್ನು ಸಮರ್ಥಿಸಿಕೊಳ್ಳಲು ಜಹಾಂಗೀರ್ ಪುರದಲ್ಲಿ ಇರುವುದು ಬರ್ಮಾದ ರೋಹಿಂಗ್ಯಾ ಮುಸ್ಲಿಮರು ಮತ್ತು ಬಾಂಗ್ಲಾದೇಶೀ ಮುಸ್ಲಿಮರು. ಅವರಿಂದಲೇ ಗಲಭೆಯಾಗುತ್ತಿದೆ ಮತ್ತು ಅವರು ಅಲ್ಲಿರಲು ಅವಕಾಶ ಮಾಡಿಕೊಟ್ಟಿರುವುದು ಆಪ್ ಪಕ್ಷ ಎಂಬ ಸುಳ್ಳು ಕಥನವನ್ನು ಹರಿಬಿಟ್ಟರು.
ಇದಕ್ಕೆ ಪ್ರತಿಯಾಗಿ ಆಪ್ ನ ಮುಖಂಡರಾದ ಆತಿಶ್ ಮತ್ತು ಸಿಸೋಡಿಯಾ ಅವರುಗಳು ಕೂಡಾ ಗಲಭೆಯನ್ನು ಮಾಡಲೆಂದೇ ಬಿಜೆಪಿ ಪಕ್ಷ ಬಾಂಗ್ಲಾ ಮಾತು ರೋಹಿಂಗ್ಯಾ ಮುಸ್ಲಿಮರನ್ನು ಅಲ್ಲಿ ನೆಲೆಗೊಳಿಸಿದೆ ಎಂದು ಹೇಳಿಕೆಯಿತ್ತು ಪ್ರತಿಪ್ರಚಾರಕ್ಕಿಳಿದರು.
ಸಾರಾಂಶದಲ್ಲಿ ಜಹಾಂಗೀರು ಪುರದಲ್ಲಿ ಗಲಭೆಗೆ ಕಾರಣರಾದವರು ಹಿಂದೂಗಳಲ್ಲ ಮುಸ್ಲಿಮರು ಮತ್ತು ಅವರು ರೋಹಿಂಗ್ಯಾ ಹಾಗೂ ಬಾಂಗ್ಲಾ ಮುಸ್ಲಿಮರೆಂಬ ಸಂಘೀಗಳ ಸುಳ್ಳು ಕಥನವನ್ನು ಆಪ್ ಕೂಡಾ ಧ್ರುಢೀಕರಿಸಿತು.
ಮತ್ತು ಅಸಲೀ ದಂಗೆಕೋರರಾದ ಸಂಘೀಗಳನ್ನು ರಕ್ಷಿಸಿತು.
ಇದಕ್ಕೆ ಸ್ವಲ್ಪ ಮುಂಚೆ ವೃತ್ತಿ ವೈಷಮ್ಯವೊಂದರಲ್ಲಿ ಹತನಾದ ರಿಂಕುಶರ್ಮಾ ಎಂಬ ಸಂಘಿ ಯ ಹತ್ಯೆಯನ್ನು ಮಾಡಿದ್ದು ಮುಸ್ಲಿಂ ಹಂತಕರೆಂದೂ ಸುಳ್ಳು ಪ್ರಚಾರವನ್ನು ಮಾಡಿ, ಆದ್ದರಿಂದ ಹಿಂದುಗಳನ್ನು ಆಪ್ ಪಕ್ಷ ಮಾತ್ರ ರಕ್ಷಿಸಬಲ್ಲದು ಎಂದು ಪ್ರಚಾರ ಮಾಡಿತ್ತು.
►►https://scroll.in/latest/986932/mangolpuri-killing-vhp-calls-for-hanging-of-arrested-aap-links-incident-to-jai-shri-ram-chantಎರಡು ವರ್ಷಗಳ ಮುಂದೆ ಸಿಎಎ ವಿರುದ್ಧ ದೆಹಲಿಯ ಶಹೀನ್‌ಭಗ್ ನಲ್ಲಿ ಮುಸ್ಲಿಂ ಮಹಿಳೆಯರು ಧೀರೋದ್ಧಾತ ಹೋರಾಟ ನಡೆಸುತ್ತಿದ್ದಾಗ ಆಪ್ ಪಕ್ಷದವರು ಅಲ್ಲಿಗೆ ಒಮ್ಮೆಯೂ ಭೇಟಿ ನೀಡಲಿಲ್ಲ. ಬದಲಿಗೆ ಶಹೀನ್‌ಭಾಗ್ ಹೋರಾಟ ಮುಸ್ಲಿಂ ಉಗ್ರಗಾಮಿಗಳ ಬೆಂಬಲದೊಂದಿಗೆ ನಡೆಯುತ್ತಿರುವ ಹೋರಾಟ ಎಂದು ಬಿಜೆಪಿ ಪ್ರಚಾರ ಮಾಡಲು ಶುರು ಮಾಡಿದಾಗ ಆಪ್ ಅದನ್ನು ಖಂಡಿಸುವುದಿರಲಿ, ತಮ್ಮ ಬಳಿ ಪೊಲೀಸ್ ಅಧಿಕಾರವಿದ್ದಿದ್ದರೆ ಎರಡೇ ಗಂಟೆಯಲ್ಲಿ ಶಹೀನ್‌ಭಾಗ್ ಅನ್ನು ತೆರೆವುಗೊಳಿಸುತ್ತಿದ್ದೆವು ಎಂದು ಹೇಳಿದ್ದರು.
ಅರ್ಥಾತ್ ಶಹೀನ್ ಭಾಗ್ ಹೋರಾಟ ಮುಸ್ಲಿಂ ಉಗ್ರಗಾಮಿಗಳ ಬೆಂಬಲದ ಹೋರಾಟ ಎಂಬ ಬಿಜೆಪಿ ಕಥನವನ್ನು ಆಪ್ ಪಕ್ಷವೂ ಗಟ್ಟಿಗೊಳಿಸಿತು.
►►https://www.news18.com/news/politics/aap-alleges-whole-shaheen-bagh-protest-was-scripted-by-the-bjp-for-electoral-gains-party-hits-back-2795563.htmlಇವೆಲ್ಲವೂ ಒಂದು ಕಡೆಯಾದರೆ ಕಾಶ್ಮೀರದ ರಾಜ್ಯಸ್ಥಾನಮಾನವನ್ನು ಕಸಿದುಕೊಂಡು, ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ಬಿಜೆಪಿ ಸರ್ಕಾರದ ಅತ್ಯಂತ ಸರ್ವಾಧಿಕಾರಿ ಮತ್ತು ಹಿಂದೂತ್ವವಾದಿ ಮಸೂದೆಗೆ ರಾಜ್ಯಸಭೆಯಲ್ಲಿ ಬೆಂಬಲ ನೀಡಿ ಹಿಂದೂತ್ವವಾದಿ ಅಜೆಂಡಾ ಒಂದು ಈ ದೇಶದಲ್ಲಿ ಜಾರಿಯಾಗುವಂತೆ ಮಾಡಿದ್ದೇ ಆಪ್ ಪಕ್ಷವಾಗಿತ್ತು.
ಬಿಜೆಪಿಗಿಂತಲೂ ಹಿಂದು ಪಕ್ಷವಾಗಲು ಪೈಪೋಟಿ
ಇವೆಲ್ಲದರ ಜೊತೆಗೆ ಸೆಕ್ಯುಲಾರ್ ತತ್ವವನ್ನು ಕೈಬಿಟ್ಟು ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹಿಂದೂ ಹಬ್ಬಗಳನ್ನು ಮಾತ್ರ ಸರ್ಕಾರೀ ಹಬ್ಬಗಳನ್ನಾಗಿ ಮಾಡುವಂಥ ಹಲವಾರು ಯೋಜನೆಗಳನ್ನು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮಾಡುತ್ತಿದೆ. ಒಂದು ಸಾಂವಿಧಾನವಾದಿ ಪರ್ಯಾಯ ಪಕ್ಷ ಅದನ್ನು ವಿರೋಧಿಸಿ ಸರ್ಕಾರವು ಸೆಕ್ಯುಲಾರ್ ಧರ್ಮವನ್ನು ಕಾಪಾಡಿಕೊಳ್ಳಲು ಒತ್ತಾಯಿಸಬೇಕು.
ಆದರೆ ಆಪ್ ಪಕ್ಷ ಬಿಜೆಪಿಗಿಂತ ತಾನೇ ಹಿಂದೂತ್ವವಾದಿ ಎಂದು ಮನವರಿಕೆ ಮಾಡಿಕೊಡಲು ಪೈಪೋಟಿ ನಡೆಸಿದೆ.
ಉದಾಹರಣೆಗೆ ಜಹಾಂಗೀರ್‌ಪುರದಲ್ಲಿ ಬುಲ್ಡೋಜರುಗಳು ಮಸೀದಿಯನ್ನು ಕೆಡವಿದಾಗಲೂ ಕನಿಷ್ಟ ಭೇಟಿ ಕೊಡದ ಆಪ್ ಮುಖಂಡರು ಮರುದಿನ ದೆಹಲಿಯ ಮತ್ತೊಂದು ಭಾಗದಲ್ಲಿ ಪುರಾತನ ನೀಲಕಂಠ ದೇವಸ್ಥಾನ ಕೆಡವಲು ಕೇಂದ್ರ ಸರ್ಕಾರ ನೋಟೀಸು ನೀಡಿದೆ ಎಂದು ಸ್ಥಳೀಯರನ್ನು ಮುಂದಿಟ್ಟುಕೊಂಡು ದೇವಸ್ಥಾನ ಉಳಿಸಲು ಮುಂದಾಗಿತ್ತು.
ಕಳೆದ ಡಿಸೆಂಬರ್ ನಲ್ಲಿ ಉತ್ತರ ಪ್ರದೇಶದ ಚುನಾವಣೆ ಪ್ರಚಾರವನ್ನು ಆಪ್ ಪಕ್ಷ ಪ್ರಾರಂಭಿಸಿದ್ದೇ ಕೇಂಜ್ರಿವಾಲರು ಅಯೋಧ್ಯೆಯಲ್ಲಿ ಬಾಬ್ರಿಮಸೀದಿಯ ಅವಶೇಷಗಳ ಮೇಲೆ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಭೇಟಿ ಕೊಟ್ಟ ನಂತರ. ರಾಮಲಲ್ಲಾನ ದರ್ಶನವನ್ನು ಮಾಡಿದ ನಂತರ ಕೇಜ್ರಿವಾಲರು ಇನ್ನುಮುಂದೆ ದೆಹಲಿಯ ವೃದ್ಧರು ಸರ್ಕಾರದರ ಖರ್ಚಿನಲ್ಲಿ ಅಯೋಧ್ಯೆ ಪ್ರವಾಸ ಮಾಡುವ ತೀರ್ಥಯಾತ್ರೆಯ ಕಾರ್ಯಕ್ರಮ ಪ್ರಾರಂಭಿಸುವುದಾಗಿ ಹೇಳಿದರು.
ದೆಹಲಿಯಲ್ಲಿ ಕೇಜ್ರಿವಾಲರ ಸರ್ಕಾರ ಪ್ರತಿ ಮಂಗಳವಾರ ಎಲ್ಲಾ ದೇವಸ್ಥಾನಗಳಲ್ಲಿ ಸುಂದರ ಕಂಡ ಪಠಣ ಕಾರ್ಯಕ್ರಮವನ್ನು ಆಯೋಜಿಸಿರುವುದಲ್ಲದೇ ಹನುಮಾನ್ ಚಾಲೀಸ್ ಪಠಣವನ್ನು ಆಯೋಜಿಸಿದೆ.
ಹಾಗೆಯೇ ದೀಪಾವಳಿಯ ದಿನದಂದು 6 ಕೋಟಿ ರೂಪಾಯಿಗಳ ಸರ್ಕಾರೀ ವೆಚ್ಚದಲ್ಲಿ ಆಪ್ ಸರ್ಕಾರವೇ ಲಕ್ಶ್ಮಿ ಪೂಜೆಯನ್ನು ಮಾಡಿಸುತ್ತದೆ.
ಜೊತೆಗೆ ಆಪ್ ಸರ್ಕಾರವೇ ಸರ್ಕಾರೀ ವೆಚ್ಚದಲ್ಲಿ ಅಯೋಧ್ಯೆಯ ರಾಮಮಂದಿರ ದ ರೀತಿಯಲ್ಲೇ ಸೆಟ್ ಹಾಕಿಸಿ ರಾಮ್ ಲೀಲಾ ವನ್ನು ನಡೆಸುತ್ತದೆ.
ಆದರೆ ಇದೆ ರೀತಿ ಈದ್, ಬಕ್ರೀದ್, ರಂಜಾನ್, ಕ್ರಿಸ್ಮಸ್ ನಂಥ ಹಿಂದುಯೇತರ ಹಬ್ಬಗಳಲ್ಲಿ ಸರ್ಕಾರೀ ಆಚರಣೆಗಳೇನೂ ಇರುವುದಿಲ್ಲ.
ಅರ್ಥಾತ್ ಭಾರತದ ಅಧಿಕೃತ ಧರ್ಮವೆಂದರೆ ಹಿಂದೂ ಧರ್ಮ ಎಂದು ಪ್ರತಿಪಾದಿಸುವ ಸಂಘಪರಿವಾರದ ಅಜೆಂಡಾವನ್ನು ಆಪ್ ನ ಕೇಜ್ರಿವಾಲರ ಸರ್ಕಾರ ಬಿಜೆಪಿಯ ಯೋಗಿ ಆದಿತ್ಯನಾಥರಷ್ಟೆ ಪರಿಣಾಮಕಾರಿಯಾಗಿ ಜಾರಿ ಮಾಡುತ್ತಿದ್ದಾರೆ!
ಇದಲ್ಲದೆ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ ಆಡಳಿತಾತ್ಮಕ ಭ್ರಷ್ಟಾಚಾರದ ಮೇಲೆ ಹಿಡಿತವಿಟ್ಟುಕೊಂಡಿದ್ದರೂ ಕಾರ್ಪೊರೇಟ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದನ್ನೇ ಕೈಬಿಟಿದ್ದಾರೆ.
ಹೀಗಾಗಿಯೇ ಹಿಂದೂ ಸಮಾಜಕ್ಕೂ, ಸಂಘೀ ಮನಸ್ಸತ್ವಕ್ಕೂ, ಕಾರ್ಪೊರೇಟ್ ವರ್ಗಕ್ಕೂ ’ಆಪ್ಯಾ’ಯಮಾನವಾಗಿದ್ದಾರೆ!
ಇದು ಹೇಗೆ ಪರ್ಯಾಯವಾದೀತು?
ಈ ದೇಶ ಮತ್ತೊಮ್ಮೆ ಮೋಸ ಹೋಗದಿರಲಿ..
ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ಕೃಪೆ: ವಾರ್ತಾಭಾರತಿ.