Advertisement

ಪಿಎಸ್‌ಐ ನೇಮಕಾತಿಯಲ್ಲಿ ಬಾರೀ ಭ್ರಷ್ಟಾಚಾರ: ನೈತಿಕ ಹೊಣೆ ಹೊತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಲಿ: ಬಿ.ಕೆ ಹರಿಪ್ರಸಾದ್

Advertisement
ಪೋಲಿಸ್ ಸಬ್‌ಇನ್ಸ್‌ಪೆಕ್ಟರ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸರ್ಕಾರವೇ ಒಪ್ಪಿಕೊಂಡಾಯಿತು. ಅದಕ್ಷ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಒತ್ತಾಯಿಸಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ತಮಗೆ ಎರಡೆರಡು ನಾಲಿಗೆ ಇದೆ ಎಂಬುದನ್ನ ಮತ್ತೆ ಸಾಬೀತು ಪಡಿಸಿದ್ದಾರೆ. "ವಿಧಾನ ಪರಿಷತ್ ಅಧಿವೇಶನದಲ್ಲಿ ಪಿಎಸೈ ನೇಮಕಾತಿಯಲ್ಲಿ ಯಾವುದೇ ಹಗರಣ ನಡೆದಿಲ್ಲ" ಎಂದು ಎದೆತಟ್ಟಿ ಹೇಳಿದ್ದ ಗೃಹ ಸಚಿವರು ಇಂದು ನಡು ಬಗ್ಗಿಸಿ "ಪಿಎಸೈ ನೇಮಕಾತಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ, ಆದ್ದರಿಂದ ನೇಮಕಾತಿ ರದ್ದು ಮಾಡಿ ಮರು ಪರೀಕ್ಷೆ ನಡೆಸುತ್ತೇವೆ"ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಈ ಮೂಲಕ ಹಾವಿಗೂ ಎರಡು ನಾಲಿಗೆ ಇದೆ, ಹಾವಿನ ಪುರದವರಿಗೂ ಕೂಡ ಎರಡೆರಡು ನಾಲಿಗೆ ಇದೆ ಎಂದು ಸಾಬೀತು ಪಡಿಸಿದಂತಾಯಿತು ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಅಧಿವೇಶನದಲ್ಲಿ ಪಿಎಸೈ ನೇಮಕಾತಿಯಲ್ಲಿ ಕೋಟಿ ಕೋಟಿ ಅವ್ಯವಹಾರಗಳು ನಡೆದಿವೆ ಎಂದು ನಾನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದೆ. ರಾಜ್ಯದ ಪ್ರಮುಖ ಪತ್ರಿಕೆಗಳು ಕೂಡಾ ಸರ್ಕಾರದ ಮುಖಕ್ಕೆ ರಾಚುವಂತೆ ಇಲಾಖೆಯ ಮುಖವಾಡಗಳನ್ನೇ ಧಾರಾವಾಹಿಗಳಂತೆ ಬಿಚ್ಚಿಟ್ಟಿದ್ದವು. ಆಗ ಸತ್ಯ ಹರಿಶ್ಚಂದ್ರರಂತೆ ಮಾತಾಡಿದ್ದ ಗೃಹ ಸಚಿವರು ಅಕ್ರಮವೇ ನಡೆದಿಲ್ಲ ಎಂದು ಅಧಿವೇಶನದಲ್ಲಿ ಸುಳ್ಳು ಹೇಳಿಕೆ ಕೊಟ್ಟಿದ್ದರು. ಈಗ ಸರ್ಕಾರವೇ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಒಪ್ಪಿಕೊಂಡ ಮೇಲೆ ಯಾವ ನೈತಿಕತೆಯ ಮೇಲೆ ಗೃಹ ಸಚಿವರು ಮುಂದುವರೆಯುತ್ತಿದ್ದಾರೆ ಎಂದವರು ಪ್ರಶ್ನಿಸಿದ್ದಾರೆ.
ಅಕ್ರಮ ನಡೆಸಿರುವ ಕಿಂಗ್ ಪಿನ್ ಗಳಿಗೆ ತಾಂಬೂಲು ಕೊಟ್ಟು ಕರೆಯುವ ಹಾಗೆ, ದಯವಿಟ್ಟು ವಿಚಾರಣೆಗೆ ಬನ್ನಿ ಎಂದು ಕರೆಯುವಂತಹ ಅದಕ್ಷ ಗೃಹ ಸಚಿವರನ್ನ ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ ಎಂದು ಹೇಳಿದರು.

ಗೃಹ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಬರುವ ಪಿಎಸ್‌ಐಗಳ ನೇಮಕಾತಿಯಲ್ಲಿಯೇ ಕೋಟಿ ಕೋಟಿ ಅವ್ಯವಹಾರಗಳು ನಿಮ್ಮ ಗಮನಕ್ಕೆ ಬಾರದೆ ನಡೆದಿದೆಯೇ? ಸ್ವ ಇಲಾಖೆಯಲ್ಲಿ ನಡೆಯುವ ಅಕ್ರಮಗಳನ್ನ ತಡೆಯಲು ನಿಮ್ಮಿಂದ ಸಾಧ್ಯವಾಗಿಲ್ಲ ಎಂದಾದರೆ ಅಸಮರ್ಥರಾಗಿ ಮುಂದುವರೆಯಲು ನಿಮ್ಮನ್ನ ನೈತಿಕತೆ ಪ್ರಶ್ನೆ ಮಾಡುತ್ತಿಲ್ಲವೇ?ಅಭ್ಯರ್ಥಿಗಳ ಪರೀಕ್ಷೆ ಬರೆದಿದ್ದಾರೆ. ಇಷ್ಟಕ್ಕೂ ಸರ್ಕಾರ ಮರು ಪರೀಕ್ಷೆ ನಡೆಸುವುದಾದರೇ ಪ್ರಮಾಣಿಕವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಯಾವ ತಪ್ಪಿಗೆ ಶಿಕ್ಷೆ ಅನುಭವಿಸಬೇಕು? ಈಗಾಗಲೇ ಮುಂದೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಅಕ್ರಮ ನಡೆಯುವುದಿಲ್ಲ ಎಂಬ ಯಾವ ಮುಖ ಇಟ್ಟು ಭರವಸೆ ಕೊಡುತ್ತೀರಿ? 545 ಪಿಎಸ್‌ಐ ಹುದ್ದೆಗಳಿಗೆ ರಾಜ್ಯದಲ್ಲಿ ಒಟ್ಟು 54,289 ಅಭ್ಯರ್ಥಿಗಳ ಪರೀಕ್ಷೆ ಬರೆದಿದ್ದಾರೆ. ಲಕ್ಷಾಂತರ ಅಭ್ಯರ್ಥಿಗಳು ಶುಲ್ಕ ಕಟ್ಟಿದ್ದಾರೆ. ಮತ್ತೆ ಅವರಿಂದ ಶುಲ್ಕ ಪಡೆದರೆ ಒಂದೇ ಪರೀಕ್ಷೆಗೆ ಎರಡೆರಡು ಬಾರಿ ಶುಲ್ಕ ಕಟ್ಟಬೇಕೆ? ನಿಮ್ಮ ತಪ್ಪಿಗೆ ಅಭ್ಯರ್ಥಿಗಳಿಗೆ ಬರೆ ಎಳೆಯುವಂತಾಗಲಿದೆ ಎಂದವರು ಪ್ರಶ್ನಿಸಿದ್ದಾರೆ.

ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಧ್ಯಪ್ರವೇಶಿಸಿ ಈ ಹಿಂದಿನ ಪರೀಕ್ಷೆಗೆ ಅರ್ಜಿ ಶುಲ್ಕ ಕಟ್ಟಿದವರಿಗೆ ಉಚಿತ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ "ದಕ್ಷ, ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದ ಇಡೀ ಇಲಾಖೆಯ ಜಂಘಾಬಲವನ್ನೇ ಕುಸಿಯುವಂತೆ ಮಾಡಿದ್ದೀರಿ. ನಿಮಗೆ ನೈತಿಕ ರಾಜಕೀಯ ಮೌಲ್ಯವೇ ಗೊತ್ತಿಲ್ಲದಿದ್ದರೆ ಪರವಾಗಿಲ್ಲ, ಗೃಹ ಸಚಿವಸ್ಥಾನಕ್ಕೆ ತನ್ನದೇ ಆದ ಘನತೆ, ಗೌರವಗಳಿವೆ! ಹೆಚ್ಚು ಮಾತನಾಡದೆ ಈಶ್ವರಪ್ಪ ಮಾದರಿಯಲ್ಲಿ ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜ್ಯಪಾಲರಿಗೆ ರಾಜೀನಾಮೆ ನೀಡಿ ಖುರ್ಚಿ ಖಾಲಿ ಮಾಡಿ" ಎಂದವರು ಕರೆ ನೀಡಿದರು.
Advertisement
Advertisement
Recent Posts
Advertisement