ಸಚಿವ ಈಶ್ವರಪ್ಪ ಅವರು ನಿನ್ನೆವರೆಗೂ 'ಪ್ರಾಣಹೋದರೂ ರಾಜೀನಾಮೆ ನೀಡಲ್ಲ' ಎನ್ನುತ್ತಿದ್ದವರು ಇಂದು ಕಾಂಗ್ರೆಸ್ ಪಕ್ಷದ ಹೋರಾಟಕ್ಕೆ ಮಣಿದು ರಾಜೀನಾಮೆ ಘೋಷಣೆ ಮಾಡಿದ್ದಾರೆ. ಇದು ನಮ್ಮ ಹೋರಾಟಕ್ಕೆ ದೊರೆತ ಆರಂಭಿಕ ಜಯವಷ್ಟೆ, ನ್ಯಾಯಕ್ಕಾಗಿ ನಾವು ಇನ್ನೂ ಬಹುದೂರದ ಹಾದಿ ಸಾಗಬೇಕಿದೆ. ಸಚಿವ ಈಶ್ವರಪ್ಪ ರಾಜೀನಾಮೆ ನಮ್ಮ ಪ್ರಮುಖ ಬೇಡಿಕೆಯೇ ಅಲ್ಲ. ಮುಖ್ಯವಾಗಿ ಆಗಬೇಕಿರುವುದು ಈಶ್ವರಪ್ಪ ಅವರ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ -13 ರಡಿ ಪ್ರಕರಣ ದಾಖಲು ಮಾಡಿ, ತಕ್ಷಣ ಬಂಧಿಸುವುದು ಹಾಗೂ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಿನ್ನೆ ಈಶ್ವರಪ್ಪ ಅವರು ಸಂತೋಷ್ ಪಾಟೀಲ್ ಯಾರೆಂದೇ ನನಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದರು. ಸಂತೋಷ್ ಪಾಟೀಲ್ ಯಾರು ಅಂತಲೇ ಗೊತ್ತಿಲ್ಲದೆ ಸ್ವತಃ ಈಶ್ವರಪ್ಪ ಅವರೇ ಆತನ ಮೇಲೆ ಮಾನನಷ್ಟ ಮೊಕದ್ದಮೆ ಹೇಗೆ ದಾಖಲಿಸಿದ್ದರು? ಇಲ್ಲಿಂದಲೇ ಈಶ್ವರಪ್ಪ ಅವರ ಸುಳ್ಳುಗಳ ಅನಾವರಣ ಶುರುವಾದದ್ದು. ಬೆಳಗಾವಿ ಜಿಲ್ಲೆಯ ಹಿಂಡಲಗಾ ಗ್ರಾಮ ಪಂಚಾಯತಿ ಅಧ್ಯಕ್ಷ ಹೇಳಿಕೆ ನೀಡಿ "ನಾನು ಮತ್ತು ಸಂತೋಷ್ ಪಾಟೀಲ್ ಅವರು ಎರಡು ಬಾರಿ ಈಶ್ವರಪ್ಪ ಅವರನ್ನು ಭೇಟಿ ಮಾಡಿದ್ದೆವು, ಸ್ವತಃ ಸಚಿವರೇ ಸಂತೋಷ್ ಪಾಟೀಲ್ ಗೆ ಕೆಲಸ ಮಾಡಲು ಹೇಳಿದ್ದರು, ಸಚಿವರ ಅನುಮತಿ ಮೇರೆಯೇ ಅವರು ಎಲ್ಲ ಕೆಲಸ ಪೂರ್ಣಗೊಳಿಸಿದ್ದಾರೆ" ಎಂದಿದ್ದಾರೆ.
ಈಶ್ವರಪ್ಪ ಕಮಿಷನ್ ಗಾಗಿ ಕಿರುಕುಳ ನೀಡಿದ್ದಾರೆ ಎನ್ನಲು ಸಂತೋಷ್ ಪಾಟೀಲ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಬರೆದ ಪತ್ರ ಸಾಕ್ಷಿ. ಜೊತೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಭೇಟಿಮಾಡಿ ಮನವಿ ಮಾಡಿದ್ದಾರೆ.
ಇದನ್ನು ಬಿಜೆಪಿಯವರಿಂದ ಅಲ್ಲಗಳೆಯಲು ಸಾಧ್ಯವೇ ಎಂದವರು ಸವಾಲೆಸೆದಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಬರೆದ ಪತ್ರದಲ್ಲಿ ಕಾಮಗಾರಿ ಕೆಲಸ ಮಾಡಲು ಸಾಕಷ್ಟು ಸಾಲ ಮಾಡಿಕೊಂಡಿದ್ದೇನೆ, ಈಗ ಬಿಲ್ ಹಣ ಪಾವತಿಸದೇ ಹೋದರೆ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ ಎಂದು ಸಂತೋಷ್ ಪಾಟೀಲ್ ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ ಈ ಬಗ್ಗೆ ಕ್ರಮಕೈಗೊಳ್ಳದ ಪ್ರಧಾನಿಗಳು ಈಶ್ವರಪ್ಪನಂತೆ ಈ ಸಾವಿಗೆ ಸಮಾನ ಹೊಣೆಗಾರರು. ಈಶ್ವರಪ್ಪ ಅವರೇ ಸಂತೋಷ್ ಪಾಟೀಲ್ ಸಾವಿಗೆ ಕಾರಣ ಎಂದು ಆತನ ಹೆಂಡತಿ ಮತ್ತು ತಾಯಿ ಹೇಳಿದ್ದಾರೆ. ಸಂತೋಷ್ ಪಾಟೀಲ್ ಸಾಯುವ ಮುನ್ನ ತನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ ಎಂದು ವಾಟ್ಸಾಪ್ ಮೂಲಕ ಡೆತ್ ನೋಟ್ ಕಳಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಲಭ್ಯವಿರುವ ಎಲ್ಲಾ ಸಾಂದರ್ಭಿಕ ಸಾಕ್ಷ್ಯಗಳು ಈಶ್ವರಪ್ಪ ಅಪರಾಧಿ ಎಂದು ತೋರಿಸುತ್ತಿವೆ. ಇಂಥದ್ದೊಂದು ಅಮಾನವೀಯ ಅಪರಾಧ ಎಸಗಿರುವ ಆರೋಪಿ ನಂಬರ್ 1 ಈಶ್ವರಪ್ಪ ಅವರನ್ನು ಬಂಧಿಸದೆ ಸರ್ಕಾರ ಈ ನೆಲದ ಕಾನೂನಿಗೆ ಅಗೌರವ ತೋರುತ್ತಿದೆ. ರಾಜ್ಯ ಸರ್ಕಾರ ಮೃತ ಗುತ್ತಿಗೆದಾರನ ಕುಟುಂಬಸ್ಥರಿಗೆ ರೂ. 1 ಕೋಟಿ ಪರಿಹಾರ ನೀಡಬೇಕು, ಮೃತನ ಪತ್ನಿ ವಿದ್ಯಾವಂತೆಯಾಗಿದ್ದು ಆಕೆಗೆ ಸರ್ಕಾರಿ ಉದ್ಯೋಗವನ್ನು ನೀಡಬೇಕು. ಆತ ಪೂರ್ಣಗೊಳಿಸಿದ್ದ ರೂ. 4 ಕೋಟಿ ಮೊತ್ತದ ಎಲ್ಲಾ ಕಾಮಗಾರಿಗಳ ಬಿಲ್ ಅನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದವರು ಆಗ್ರಹಿಸಿದ್ದಾರೆ.
ಭ್ರಷ್ಟಾಚಾರವನ್ನು ಬೆಂಬಲಿಸುವ ಕೆಲಸ ಸ್ವತಃ ಮುಖ್ಯಮಂತ್ರಿಗಳೇ ಮಾಡುತ್ತಿದ್ದಾರೆ. ಈ ಇಡೀ ಸರ್ಕಾರದ ಮೇಲೆಯೇ ರಾಜ್ಯ ಗುತ್ತಿಗೆದಾರರ ಸಂಘದವರು 40% ಕಮಿಷನ್ ಆರೋಪ ಮಾಡಿದ್ದಾರೆ. ಇದನ್ನು ಕೂಡ ನ್ಯಾಯಾಂಗ ತನಿಖೆಗೆ ನೀಡಬೇಕು. ಆಗ ಬಿಜೆಪಿ ಸರ್ಕಾರದ ಎಲ್ಲ ಭ್ರಷ್ಟ ಹೆಗ್ಗಣಗಳು ಬಿಲದಿಂದ ಹೊರಬರಲಿವೆ.
ನಮ್ಮ ಈ ಎಲ್ಲಾ ಆಗ್ರಹಗಳು ಇನ್ನೂ ಈಡೇರಿಲ್ಲ, ಹಾಗಾಗಿ ನಾವು ನಿರ್ಧರಿಸಿದಂತೆ 24 ಗಂಟೆಗಳ ಕಾಲ ವಿಧಾನಸೌಧದ ಮುಂಭಾಗ ಧರಣಿಯನ್ನು ಮುಂದುವರೆಸುತ್ತೇವೆ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಮಾಡಿ ಜನಜಾಗೃತಿ ಮೂಡಿಸುತ್ತೇವೆ. ಕೊಲೆಗಡುಕ, ಭ್ರಷ್ಟ ಸರ್ಕಾರ ತೊಲಗುವ ವರೆಗೆ ನಮ್ಮ ಹೋರಾಟ ಜಾರಿಯಿರಲಿದೆ ಎಂದವರು ಘೋಷಿಸಿದ್ದಾರೆ.