Advertisement

ಅನ್ಯಾಯವಾಗಿ ಮೃತಪಟ್ಟ ಪಕ್ಷದ ಕಾರ್ಯಕರ್ತ ಸಂತೋಷ್ ಪಾಟೀಲ್ ಗೆ ನ್ಯಾಯ ಕೊಡಿಸಲು ಅದೇಕೆ ಬಿಜೆಪಿ ಕಾರ್ಯಕರ್ತರು ಹೋರಾಡುತ್ತಿಲ್ಲ?

Advertisement

ಸ್ವತಃ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾಗಿರುವ ಈಶ್ವರಪ್ಪನವರ ಭರವಸೆಯನ್ನು ನಂಬಿ ವರ್ಕ್ ಆರ್ಡರ್ (ಕಾರ್ಯಾದೇಶ ಪತ್ರ) ಇಲ್ಲದೆ (ರಾಜಕಾರಣಿಗಳು, ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರ ಬಾಷೆಯಲ್ಲಿ ಅದಕ್ಕೆ 'ಅಡ್ವಾನ್ಸ್ ವರ್ಕ್' ಎನ್ನುತ್ತಾರೆ) 4ಕೋಟಿ ರೂ. ಕೈ ಸಾಲ ಮಾಡಿ ಕಾಮಗಾರಿ ಪೂರೈಸಿ ಬಿಲ್ಲು ಪಾವತಿ ಮಾಡಲು 40% ಕಮಿಷನ್ 'ಅಡ್ವಾನ್ಸ್' ಆಗಿ ನೀಡಲು ಸತಾಯಿಸಿದಾಗ, ಪುನಃ ಅಷ್ಟೊಂದು ಹಣ ಹೊಂದಿಸಲಾಗದೆ, ಒಂದು ವೇಳೆ ಹೊಂದಿಸಿ ಪಾವತಿಸಿದರೆ ಅಸಲು ಕೂಡಾ ಉಳಿಯದು, ತಾನು ಮುಳುಗಿ ಹೋಗುತ್ತೇನೆ ಎಂಬ ಭಯಕ್ಕೆ ಬಿದ್ದು, ಸಾಧ್ಯವಾದಷ್ಟು ಕಮಿಷನ್ ಪಾವತಿಸಿ (ವರದಿಯೊಂದರ ಪ್ರಕಾರ 14.5ಲಕ್ಷ ರೂ.) ಆ ನಂತರ ಹಲವು ಬಾರಿ ಭೇಟಿ ಮಾಡಿ ವಿಧವಿಧವಾಗಿ ಬೇಡಿಕೊಂಡರೂ ಬಿಲ್ಲು ಪಾವತಿಸದಿದ್ದಾಗ, ಪ್ರಧಾನಿ ಮೋದಿ ಮತ್ತಿತರ ಪಕ್ಷದ ನಾಯಕರುಗಳಿಗೆ ದೂರು ನೀಡಿ, ಆ ಕುರಿತು ಪತ್ರಿಕಾ ಹೇಳಿಕೆ ನೀಡಿದ ಮಹಾನ್ ಅಪರಾಧಕ್ಕಾಗಿ ಸ್ವತಃ ಈಶ್ವರಪ್ಪರಿಂದ ಮಾನನಷ್ಟ ಮೊಕದ್ದಮೆ ದಾಖಲಿಸಿಕೊಂಡು, ಮತ್ತೊಂದೆಡೆ ಸಾಲ ಕೊಟ್ಟ ಸ್ನೇಹಿತರಿಗೆ ಕ್ಲಪ್ತ ಸಮಯಕ್ಕೆ ಮರುಪಾವತಿಸಲು ಆಗಲಿಲ್ಲವಲ್ಲ ಎಂಬ ಒತ್ತಡಕ್ಕೊಳಗಾಗಿ ಅದರಿಂದ ತೀವೃವಾದ ಖಿನ್ನತೆಗೊಳಗಾಗಿ, ಆ ನಂತರ ದಿಕ್ಕು ಕಾಣದೆ ಸಚಿವ ಈಶ್ವರಪ್ಪ ಮೇಲೆ 40% ಕಮಿಷನ್ ಆರೋಪ ಹೊರಿಸಿ (ವಾಟ್ಸ್ಯಪ್ ಸಂದೇಶದ ಮೂಲಕ) ಸಂತೋಷ್ ಪಾಟೀಲ್ ಎಂಬ ಬಿಜೆಪಿ ಕಾರ್ಯಕರ್ತ ಕಮ್ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿಯನ್ನು ನೀವೆಲ್ಲ ಈಗಾಗಲೇ ಕೇಳಿರುತ್ತೀರಿ.

ಹಾಗೆಯೇ, ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ ನಾಯಕರುಗಳು ''ಯಾವುದೇ ಒರ್ವ ಸಚಿವನ ವಿರುದ್ಧದ ಆರೋಪದ ತನಿಖೆ ನ್ಯಾಯಯುತವಾಗಿ ನಡೆಯಬೇಕಿದ್ದರೆ ಆತ ಅಧಿಕಾರದಲ್ಲಿ ಸ್ಥಾನದಲ್ಲಿದ್ದರೆ ಅದು ಸಾಧ್ಯವಾಗದು. ನಿಷ್ಪಕ್ಷಪಾತವಾಗಿ ತನಿಖೆ ಆಗಲು ಈಶ್ವರಪ್ಪ ರಾಜೀನಾಮೆ ನೀಡಬೇಕು ಮತ್ತು ಭ್ರಷ್ಟಾಚಾರ ಆರೋಪದಲ್ಲಿ ಅವರ ಬಂಧನ ಆಗಬೇಕು. ಅವರ ರಾಜೀನಾಮೆ ಮತ್ತು ಬಂಧನ ಆಗುವ ತನಕ ನಮ್ಮ ಹೋರಾಟ ನಡೆಯಲಿದೆ" ಎಂದು ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಿದ ತರುವಾಯ ಘಟನೆ ನಡೆದಂದಿನಿಂದ ನಿನ್ನೆಯ ತನಕವೂ ''ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲಾರೆ'' ಎಂದೆನ್ನುತ್ತಿದ್ದ ಸಚಿವ ಈಶ್ವರಪ್ಪನವರು ಇದೀಗ
ರಾಜೀನಾಮೆಯ ಘೋಷಣೆ ಮಾಡಿದ್ದಾರೆ.

ಕಳ್ಳತನದಲ್ಲಿ ಪಾಲು ಹೊಂದಿದವರು ಸಹಜವಾಗಿಯೇ ಕಳ್ಳನ ಪರವಾಗಿ ನಿಲ್ಲುತ್ತಾರೆ. ಆ ಪ್ರಕಾರವಾಗಿ 40% ಕಮಿಷನ್‌ನಲ್ಲಿ ಪಾಲು ಹೊಂದಿರುವ ಅಪರೇಷನ್ ಕಮಲ ಸರ್ಕಾರದ ದೂರ್ತ ನಾಯಕರುಗಳು ಆರೋಪಿ ಈಶ್ವರಪ್ಪನವರ ಪರ ನಿಂತಿದ್ದರು. ಇವರುಗಳ ಈ ನಡೆಯನ್ನು ತಪ್ಪೋ, ಸರಿಯೋ ಎಂದೆಲ್ಲಾ ಪ್ರಶ್ನಿಸುವಂತಿಲ್ಲ. ಏಕೆಂದರೆ ಅವರುಗಳು ಸ್ವಯಂ ಘೋಷಿತ ದೇಶಭಕ್ತರು ಮತ್ತು ಸ್ವಯಂಘೋಷಿತ ಹಿಂದೂ ಧರ್ಮರಕ್ಷಕರು‌. ದೇಶವನ್ನು ಕೊಳ್ಳೆ ಹೊಡೆಯಲು ಅವರುಗಳು ಧರ್ಮ ಮತ್ತು ದೇಶವನ್ನು ಗುತ್ತಿಗೆ ಪಡೆದಿದ್ದಾರೆ. ಹಾಗಾಗಿ ಪ್ರಜಾಪ್ರಭುತ್ವದ ರಕ್ಷಣೆಯ ದೃಷ್ಟಿಯಿಂದ ಅಥವಾ ಭವಿಷ್ಯದ ಭಾರತದ ಹಿತದೃಷ್ಟಿಯಿಂದ ಆ ವಂಚಕರ ವಿರುದ್ಧವಾಗಿ ಮಾತನಾಡುವ ನಮ್ಮಂತಹವರು ಹಿಂದೂ ವಿರೋಧಿಗಳು ಮತ್ತು ದೇಶದ್ರೋಹಿಗಳಾಗುತ್ತಾರೆ. ಇದು ಈ ದೇಶದ ಇಂದಿನ ನೈಜ ಸ್ಥಿತಿಯಾಗಿದೆ!

ಈ ದರೋಡೆಕೋರ, ರಕ್ಕಸ ಮನಸ್ಥಿತಿಯ ನಾಯಕರುಗಳ ಅಥವಾ ನಮ್ಮಂತಹ ಭಿನ್ನಮತೀಯರ ಕಥೆ ಒತ್ತಟ್ಟಿಗಿರಲಿ. ಆ ಪಕ್ಷದ ಕಾರ್ಯಕರ್ತರುಗಳಾದರೂ ಈ ಮೃತ ಕಾರ್ಯಕರ್ತನ ಪರ ನಿಲ್ಲಬೇಕಿತ್ತಲ್ಲವೇ?
ಬೇರೆ ಬೇರೆ ಕಾರಣಗಳಿಗಾಗಿ ನಿನ್ನೆ ಹರ್ಷ, ಇಂದು ಸಂತೋಷ್ ಪಾಟೀಲ್ ಹಾಗೆಯೇ ನಾಳೆ ನಾವೇ ಇದ್ದರೂ ಇರಬಹುದು ಎಂಬ ಆತಂಕದಿಂದ ಅಥವಾ ಮೃತ ಸಂತೋಷ್ ಪಾಟಿಲನ ವೃದ್ಧ ತಾಯಿ, ಸಣ್ಣ ಪ್ರಾಯದ ಹೆಂಡತಿ, ಎಳೆಮಗುವಿನ ಮುಖ ನೋಡಿ, ಅವರಿಗೆ ನ್ಯಾಯ ಕೊಡಿಸಬೇಕೆಂಬ ಕನಿಷ್ಠ ಕಾಳಜಿಯಿಂದಾದರೂ ಈಶ್ವರಪ್ಪನ ವಿರುದ್ಧವಾಗಿ ಹೋರಾಡಬೇಕಿತ್ತಲ್ಲವೇ?

ಹೌದು, ನಿಜಕ್ಕೂ ಆ ಕಾರ್ಯಕರ್ತರುಗಳು
ಆತ್ಮಹತ್ಯೆ ಮಾಡಿಕೊಂಡ ತಮ್ಮದೇ ಪಕ್ಷದ ಮೃತ ಕಾರ್ಯಕರ್ತ ಸಂತೋಷ್ ಪಾಟೀಲ್ ಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೋರಾಟ ಮಾಡಬೇಕಿತ್ತು. ಸತ್ತವನು ಮತ್ತೆ ಬದುಕಿ ಬರಲಾರ ಹಾಗಾಗಿ ಕನಿಷ್ಟಪಕ್ಷ ಆತನ 4ಕೋಟಿ ರೂಪಾಯಿ ಬಿಲ್ಲು ಪಾವತಿಸುವಂತೆ ಪಕ್ಷದ ನಾಯಕರುಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಬೇಕಾಗಿತ್ತು. ಆ ಮೂಲಕ ಆತನ ವೃದ್ದ ತಾಯಿ, ಮೂರು ವರ್ಷದ ಹಿಂದಷ್ಟೇ ಮದುವೆಯಾದ ಹೆಂಡತಿ, ಎಳೆ ಮಗು ಹಾಗೂ ಆತನಿಗೆ ಸಾಲ ಕೊಟ್ಟ ಸ್ನೇಹಿತರ ಹಿತರಕ್ಷಣೆಗೆ ಮುಂದಾಗಬೇಕಿತ್ತು.

ಆದರೆ ವಿಪರ್ಯಾಸ ನೋಡಿ, ತಮ್ಮದೇ ಪಕ್ಷದ ಆ ಮೃತ ಕಾರ್ಯಕರ್ತನ ಪರ ನಿಲ್ಲದ ಆ ಬಿಜೆಪಿ ಕಾರ್ಯಕರ್ತರುಗಳು ಕಣ್ಣಲ್ಲಿ ರಕ್ತವಿಲ್ಲದ ಕೊಲೆಗಡುಕ ಭ್ರಷ್ಟಾಚಾರಿ ನಾಯಕನ ಪರವೇ ನಿಂತಿದ್ದಾರೆ. ತನ್ನ ಹಣದ ದಾಹಕ್ಕೆ ಪಕ್ಷದ ಕಾರ್ಯಕರ್ತನನ್ನೆ ಸಾವಿನಂಚಿಗೆ ದೂಡಿದವನ ಪರವೇ ಹೋರಾಟದಲ್ಲಿ ತೊಡಗಿದ್ದಾರೆ. ಈಶ್ವರಪ್ಪನವರ ರಾಜೀನಾಮೆ ಪಡೆಯಬಾರದು ಎಂದು ಅಲ್ಲಲ್ಲಿ ಪ್ರತಿಭಟನೆಯನ್ನು ಕೂಡ ಆರಂಬಿಸಿದ್ದಾರೆ.

ಹಾಗಾದರೆ ಏನಾಗುತ್ತಿದೆ ಈ ದೇಶದಲ್ಲಿ? ಈ ಜನರು ಅದೇಕೆ ತಮ್ಮ ವಿವೇಚನಾಶಕ್ತಿ ಕಳೆದುಕೊಳ್ಳುತ್ತಿದ್ದಾರೆ? ಅದೇಕೆ ಇವರುಗಳು ಸರಿ ಯಾವುದು ತಪ್ಪು ಯಾವುದು ಎಂದು ಯೋಚಿಸುತ್ತಿಲ್ಲ? ಇಂತಹ ಶತಮೂರ್ಖರು ನಿರ್ಮಿಸುವ ಭವಿಷ್ಯದ ಭಾರತ ಹೇಗಿದ್ದೀತು? ಇವರುಗಳೇಕೆ ನಾವು ಪ್ರಜಾಪ್ರಭುತ್ವದ ಭಾಗವಾಗಿದ್ದೇವೆ ಎಂಬ ಸತ್ಯವನ್ನು ಮರೆತು ನಮ್ಮಿಂದಲೇ ಆಯ್ಕೆಯಾದ ನಾಯಕರುಗಳ ಗುಲಾಮರಂತೆ ವರ್ತಿಸುತ್ತಿದ್ದಾರೆ? ತಪ್ಪನ್ನು ತಪ್ಪೆಂದು ಘಂಟಾಘೋಷವಾಗಿ ಹೇಳಲಾಗದ ಇವರುಗಳ ಇಂತಹ ಸೊಗಲಾಡಿ ಮನಸ್ಥಿತಿ ಬದಲಾಗುವ ಹೊರತು ಈ ದೇಶ ಉದ್ದಾರವಾಗಲು ಸಾಧ್ಯವಿಲ್ಲ.

Advertisement
Advertisement
Recent Posts
Advertisement