ಅವರು ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ದಿವಂಗತ ಜವಹರಲಾಲ್ ನೆಹರೂ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
"ದೇಶದೊಳಗೆ ಹಿಂದೂ, ಮುಸ್ಲಿಂ, ಕ್ರೈಸ್ತ ಎಂದೆಲ್ಲಾ ಗೊಂದಲಗಳನ್ನು, ಗಲಭೆಗಳನ್ನು ಸೃಷ್ಟಿಸಿ ಇಲ್ಲಿನ ಶಾಂತಿಯನ್ನು, ಸೌಹಾರ್ಧತೆ ಯನ್ನು ಕೆಡಿಸುತ್ತಿದ್ದಾರೆ. ಇವರೆಲ್ಲ ಒಗ್ಗಟ್ಟಾದರೆ ತಮಗೆ ಅಪಾಯವಿದೆ ಎಂಬ ಕುರಿತು ಮತ್ತು ನಿಜವಾದ ಚರಿತ್ರೆಯನ್ನು ಈ ನೆಲದ ಮೂಲನಿವಾಸಿಗಳಾದ ದುಡಿಯುವ ವರ್ಗ, ಶ್ರಮಿಕರು, ಶೋಷಿತರು, ದಲಿತರು, ಹಿಂದುಳಿದ ವರ್ಗಗಳವರು ಅರಿತರೆ ಏನಾಗಬಹುದು ಎಂಬುದು ಇವರಿಗೆ ಗೊತ್ತಿದೆ. ಆ ಭಯದಿಂದಲೇ ಇಲ್ಲಿನ ಜಾತಿ ಧರ್ಮಗಳ ನಡುವೆ ಬಿರುಕು ಸೃಷ್ಟಿಸುತ್ತಿದ್ದಾರೆ. ಯಾವ ದೇವಸ್ಥಾನದ ಕೆಳಗೆ ಏನಿದೆ, ಯಾವ ಮಸೀದಿಯ ಕೆಳಗೇನಿದೆ, ಯಾವ ಚರ್ಚ್ ನ ಕೆಳಗೆ ಏನಿದೆ ಎಂದು ಹುಡುಕುತ್ತಾ ಹೋಗುವ ಕಾಲ ಇದಲ್ಲ. ನಾವು ಐದು ಸಾವಿರ ವರ್ಷಗಳ ಹಿಂದಕ್ಕೆ ಚಲಿಸಬಾರದು, ನಾವು ಐದು ಸಾವಿರ ವರ್ಷಗಳ ಮುಂದಕ್ಕೆ ಹೋಗಿ ಯೋಚಿಸಬೇಕು. ಇತಿಹಾಸವನ್ನು ಕೆದಕಿದರೆ ಅದಕ್ಕೆ ಕೊನೆಯುಂಟೇ? ಆ ಕಾರಣಕ್ಕಾಗಿ ನಾವು ಆರೆಸ್ಸೆಸ್ ಸಂಸ್ಥಾಪಕರ ಮತ್ತದರ ಸಂಚಾಲಕರುಗಳ ಮೂಲವನ್ನು ಕೆದಕಲು ಹೋಗಿಲ್ಲ. ಈ ಸತ್ಯವನ್ನು ದೇಶದ ಪ್ರಜೆಗಳು ಅದರಲ್ಲೂ ಮುಖ್ಯವಾಗಿ ಯುವಜನಾಂಗ ಅರಿತುಕೊಳ್ಳಬೇಕು. ನಮ್ಮ ನಿಮ್ಮ ಮಕ್ಕಳು ಐದು ಸಾವಿರ ವರ್ಷಗಳ ಹಿಂದಿನ ಶಿಲಾಯುಗಕ್ಕೆ ತೆರಳಿ ಗುಲಾಮಗಿರಿಗೆ ಮತ್ತೆ ಜಾರಬೇಕೋ ಅಥವಾ ವಿಶ್ವ ಸಮುದಾಯದ ಜೊತೆ ಮುಂದಿನ ಶತಮಾನವನ್ನು ಸ್ವಾಗತಿಸಲು ಸಿದ್ದರಾಗಬೇಕೋ ಎಂದು ಈ ನಾಡಿನ ಜನರೇ ತೀರ್ಮಾನಿಸಬೇಕಾಗಿದೆ" ಎಂದವರು ಹೇಳಿದರು.
"ಈ ದೇಶವನ್ನು 600ವರ್ಷಗಳ ಕಾಲ ಮೊಘಲರು ಆಳಲು ಯಾರು ಕಾರಣ? ಬ್ರಿಟೀಷರು ಈ ದೇಶದೊಳಗೆ ಪ್ರವೇಶಿಸಲು ಯಾರು ಕಾರಣ? ಇಲ್ಲಿನ ಒಗ್ಗಟ್ಟು ಒಡೆದು ಪರದೇಶಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಐಷಾರಾಮಿ ಬದುಕು ಬದುಕಿದವರು ಯಾರು? ಈ ನೆಲದ ಮೂಲನಿವಾಸಿಗಳು ಒಗ್ಗಟ್ಟಾಗಿದ್ದಿದ್ದರೆ ಪರಕೀಯರು ಈ ದೇಶದೊಳಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತಿತ್ತೇ? ಒಗ್ಗಟ್ಟಾಗಿರದಂತೆ ಅಂದಿನಿಂದ ಇಂದಿನ ವರೆಗೂ ಸುಳ್ಳುಸುಳ್ಳು ವದಂತಿ ಹರಡಿ ಒಡಕು ಮೂಡಿಸುತ್ತಿರುವವರು ಇದೇ ಆರೆಸ್ಸೆಸ್ ನವರು ಮತ್ತವರ ಪೂರ್ವಜರು ಅಲ್ಲವೇ?" ಎಂದವರು ಕಿಡಿ ಕಾರಿದ್ದಾರೆ.
ಈ ನಡುವೆ ಮದ್ಯೆ ಪ್ರವೇಶಿಸಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ರಾಜ್ಯ ಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರು "ಈ ಕುರಿತು ನಾನು ಸಂಸತ್ತಿನಲ್ಲೆ ಹೇಳಿದ್ದೇನೆ. ನೀವು ಮದ್ಯೆ ಏಷ್ಯಾ ಮೂಲದವರು. ನೀವು ಹಿಟ್ಲರನ ಧರ್ಮದ ಮೂಲದವರು. ಭಾರತ ಬಿಟ್ಟು ತೊಲಗಬೇಕಾದವರು ನೀವು ಎಂದಿದ್ದೇನೆ" ಎಂದರು.
ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಸಿದ್ದರಾಮಯ್ಯ ನವರು "ಒಳ್ಳೆಯ ಕೆಲಸ ಮಾಡಿದ್ದೀರಿ" ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ರಾಜ್ಯಸಭೆ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ರಾಜ್ಯಸಭೆ ಸದಸ್ಯ ಚಂದ್ರಶೇಖರ್, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಶಾಸಕರಾದ ವಿ.ಮುನಿಯಪ್ಪ, ಯು.ಬಿ. ವೆಂಕಟೇಶ್, ಪ್ರೊ.ರಾಧಾಕೃಷ್ಣ ಮುಂತಾದ ನಾಯಕರುಗಳು ಉಪಸ್ಥಿತರಿದ್ದರು.