ಒಂದೇ ಜಾತಿ ಮತ ದೇವರು ಎಂಬ ಸಿದ್ಧಾಂತದೊಂದಿಗೆ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ದಾರ್ಶನಿಕ ಪುರುಷ ಶ್ರೀ ನಾರಾಯಣ ಗುರು ಮತ್ತು ಜನಾಂಗೀಯ ಅಸಮಾನತೆಯ ವಿರುದ್ಧ ಧ್ವನಿಯೆತ್ತಿ ಸಮಾನತೆಯ ಸಿದ್ಧಾಂತ ಸಾರಿದ ಪೆರಿಯಾರ್ ಪಾಠವನ್ನು ಬದಿಗಿಟ್ಟು ಆರ್ ಎಸ್ ಎಸ್ ಸಂಸ್ಥಾಪಕ ಹೆಡ್ಗೆವಾರ್ ಭಾಷಣದ ವಿಷಯವನ್ನು ಪಾಠವನ್ನಾಗಿ ಸೇರಿಸುವ ಔಚಿತ್ಯವಾದರೂ ಏನು ಎಂದು ಪ್ರಶ್ನಿಸಿರುವ ಕಾಂಗ್ರೆಸ್, ರಾಜ್ಯದ ಬಿಜೆಪಿ ಸರಕಾರದ ಈ ನಡೆಯ ಹಿಂದೆ ಸಾಮಾಜಿಕ ನ್ಯಾಯಕ್ಕೆ ಧ್ವನಿಯಾದವರ ಧ್ವನಿಯಡಗಿಸುವ ಮೂಲಭೂತವಾದಿ ಚಿಂತನೆಯ ಪಿತೂರಿಯಡಗಿದೆ ಎಂದು ಆರೋಪಿಸಿದೆ. ದೇಶದ ಸರ್ವಾಂಗೀಣ ಅಭಿವೃದ್ದಿಗೆ ಪೂರಕವಾದ ಶಿಕ್ಷಣ ತಾರತಮ್ಯ ರಹಿತವಾಗಿರ ಬೇಕೇ ಹೊರತು ಯಾವುದೇ ಒಂದು ಪಕ್ಷ ಅಥವಾ ವ್ಯಕ್ತಿಯ ಸೈದ್ದಾಂತೀಕತೆಯ ಹಿತಾಸಕ್ತಿಯನ್ನು ಅವಲಂಬಿತವಾಗ ಬಾರದು. ಆ ನೆಲೆಯಲ್ಲಿ ಸರಕಾರ ಕೂಡಲೇ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿಯನ್ನು ವಜಾ ಗೊಳಿಸಬೇಕು. ಶ್ರೀ ನಾರಾಯಣಗುರು ಹಾಗೂ ಪೆರಿಯಾರ್ ವಿಚಾರಧಾರೆಗಳ ಪಾಠವನ್ನು ಪಠ್ಯ ಪುಸ್ತಕದಲ್ಲಿ ಮರುಸೇರಿಸಿ ಸರಕಾರ ತನ್ನ ಸಾಮಾಜಿಕ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು ಎಂದು ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸರಕಾರದ ನೇತೃತ್ವದಲ್ಲಿ ಶಿಕ್ಷಣ ಇಲಾಖೆ ಮುದ್ರಿಸುವ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ ಶಿರೋನಾಮೆಯೊಂದಿಗೆ ನಾರಾಯಣ ಗುರುಗಳ ಜೀವನ ಚರಿತ್ರೆಯ ಪಠ್ಯವನ್ನು ವಿದ್ಯಾರ್ಥಿಗಳಿಗೆ ಈ ತನಕ ಬೋಧಿಸಲಾಗುತ್ತಿತ್ತು. ಈ ಪಠ್ಯದ ಮೂಲಕ ನಾರಾಯಣ ಗುರುಗಳ "ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು" ತತ್ವಗಳ ಬಗ್ಗೆ ಕೂಡ ಬೋಧಿಸಲಾಗುತ್ತಿತ್ತು. ಇದು ಎಳೆಯ ವಿಧ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಹೊಮ್ಮಿಸುತ್ತಿತ್ತು. ಹಾಗೆಯೇ, ಇಪ್ಪತ್ತನೇ ಶತಮಾನದ ಆರಂಭದಲ್ಲಿ ಈ ದೇಶದ ಮೇಲ್ಜಾತಿ ಜನರಿಂದ ನಡೆವ ಬಿಟ್ಟಿಚಾಕರಿ, ಶೋಷಣೆ, ದಬ್ಬಾಳಿಕೆ, ದೌರ್ಜನ್ಯಗಳ ವಿರುದ್ಧ ಸಾಮಾಜಿಕ ಚಳುವಳಿಯನ್ನೇ ಹುಟ್ಟುಹಾಕಿದ ಪೆರಿಯಾರ್ ರವರ ಕುರಿತು ಮತ್ತೊಂದು ಪಠ್ಯವನ್ನು ಬೋಧಿಸಲಾಗುತ್ತಿತ್ತು. ಆದರೆ ಮನುವಾದಿ ನೇತೃತ್ವದ ರಾಜ್ಯ ಸರ್ಕಾರ, ಶೋಷಿತರ ಪರ ಧ್ವನಿಯಾಗಿದ್ದ ಈ ಎರಡು ಮಹಾನ್ ದಾರ್ಶನಿಕರ ಜೀವನ ಚರಿತ್ರೆಯನ್ನು ಎಸ್ಸೆಸ್ಸೆಲ್ಸಿ ಪಠ್ಯದಿಂದ ತೆಗೆದು ಹಾಕಿದೆ ಎಂಬ ಆರೋಪಗಳು ಕೇಳಿ ಬಂದಿದೆ. ರಾಜ್ಯದಾದ್ಯಂತ ನಾರಾಯಣ ಗುರುಗಳ ಅನುಯಾಯಿಗಳಿಂದ ಈ ಕುರಿತು ಆಕ್ರೋಶ ವ್ಯಕ್ತವಾಗಿದೆ.