ಅವರು ಆದಿತ್ಯವಾರ ಕುಂದಾಪುರದ ಕಲಾಮಂದಿರದಲ್ಲಿ ನಡೆದ "ಕನ್ನಡ ಮೀಡಿಯಾ ಡಾಟ್ ಕಾಂ" ಸುದ್ದಿ ಜಾಲತಾಣ ಇದರ ವರ್ಷಾಚರಣೆಯ ಅಂಗವಾಗಿ ಕನ್ನಡದ ಪತ್ರಕರ್ತ, ಓದುಗರ ಒಡೆತನದ ಪತ್ರಿಕೆ ಮುಂಗಾರು ವಿನ ಸಂಪಾದಕ, ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟಿ ಇವರ ಸಂಪಾದಕೀಯ ಬರಹಗಳ ಸಂಕಲನ "ಬೇರೆಯೇ ಮಾತು" ಪುಸ್ತಕ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೇರೆಯೇ ಮಾತು ಪುಸ್ತಕವನ್ನು ಸಭೆಗೆ ಪರಿಚಯಿಸಿದ ಪುಸ್ತಕದ ಸಂಪಾದಕ, ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟುರವರು "ಈ ಪುಸ್ತಕದಲ್ಲಿರುವ ಮುಂಗಾರು ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟಿಯವರ ಎಲ್ಲಾ ಸಂಪಾದಕೀಯ ಲೇಖನಗಳು ಜನಪರ ಕಾಳಜಿಯನ್ನು ಹೊಂದಿದೆ ಹಾಗೂ ಇಂದಿನ ಕಾಲಘಟ್ಟಕ್ಕೆ ಈ ಲೇಖನಗಳು ಹೆಚ್ಚು ಪ್ರಸ್ತುತ ಎನ್ನಿಸುತ್ತವೆ. ಇಂದಿನ ಯುವ ಪತ್ರಕರ್ತರಿಗೆ ವಡ್ಡರ್ಸೆಯವರು ಆದರ್ಶವಾಗಬೇಕು. ವಡ್ಡರ್ಸೆಯವರು ಅತಿಸಣ್ಣ ಅವಧಿಯಲ್ಲಿ ತನ್ನ ಮುಂಗಾರು ಪತ್ರಿಕೆಯ ಮೂಲಕ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಅಂತಹ ಇತಿಹಾಸದ ಭಾಗವಾಗಿ ಮುಂಗಾರುವಿನಲ್ಲಿ ಕೆಲಸ ಕಲಿತ ಹಲವು ಪತ್ರಕರ್ತರು ಇಂದು ದೇಶದ ವಿವಿಧ ಭಾಗಗಳಲ್ಲಿ ಸಾಮಾಜಿಕ ನ್ಯಾಯದ ಪರವಾಗಿ ಕಾರ್ಯ ನಡೆಸುತ್ತಿದ್ದಾರೆ. ನನಗೆ ಎಂದೆಂದಿಗೂ ವಡ್ಡರ್ಸೆಯವರು ಆದರ್ಶವಾಗಿಯೇ ಇರುತ್ತಾರೆ" ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ, ಜನಪರ ಚಿಂತಕ ಸುಧೀರ್ ಕುಮಾರ್ ಮುರೊಳ್ಳಿಯವರು " ವಡ್ಡರ್ಸೆಯವರ ಸಂಪಾದಕೀಯ ಬರಹಗಳನ್ನೊಳಗೊಂಡ ದಿನೇಶ್ ಅಮಿನ್ ಮಟ್ಟುರವರ ಸಂಪಾದಕತ್ವದ ಈ ಪುಸ್ತಕ ಯುವಕರು, ಮಹಿಳೆಯರು, ವೈದ್ಯರು, ನ್ಯಾಯವಾದಿಗಳು ಹೀಗೆ ಸಮಾಜದ ಎಲ್ಲಾ ಸ್ಥರದ ಜನರಿಗೂ ಕೈಪಿಡಿಯಾಗಬೇಕು. ಅದರಿಂದ ಪ್ರತಿಯೊಬ್ಬರ ಚಿಂತನೆಗಳೂ ಜನಪರಗೊಳ್ಳುತ್ತವೆ. ದೇಶದ ಸೌಹಾರ್ಧತೆ, ಆರ್ಥಿಕಸ್ಥಿತಿ, ಸಾಮಾಜಿಕ ಸ್ಥಿತಿ ಸಂಪೂರ್ಣವಾಗಿ ಕೆಟ್ಟಿರುವ ಇಂದಿನ ಕಾಲಘಟ್ಟಕ್ಕೆ ವಡ್ಡರ್ಸೆಯವರಂತಹ ಪತ್ರಕರ್ತರು ಮತ್ತು ಅಂತಹವರ ಬರಹಗಳು ಅತ್ಯವಶ್ಯ. ಸಂವಿಧಾನ ವಿರೋಧಿಗಳ ವಶವಾಗಿರುವ ವ್ಯವಸ್ಥೆಯನ್ನು ತಿದ್ದಲು ಪ್ರಜ್ಞಾವಂತರು, ಸಮಾನಮನಸ್ಕರು ಒಗ್ಗೂಡಬೇಕಾಗಿದೆ" ಎಂದು ಹೇಳಿದರು.
ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮುಂಗಾರು ಬಳಗದ ಪತ್ರಕರ್ತರಾದ ರಾಜಾರಾಂ ತಲ್ಲೂರು, ಯು.ಎಸ್ ಶೆಣೈ ಹಾಗೂ ಹಿರಿಯ ರಾಜಕಾರಣಿ ಮಾಣಿಗೋಪಾಲ್ ರವರು ಮುಂಗಾರು ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟಿಯವರು ಮತ್ತು ತಮ್ಮ ನಡುವಿನ ಸಂಬಂಧಗಳ ಕುರಿತು, ಮುಂಗಾರು ಪತ್ರಿಕೆ ತಳೆದಿದ್ದ ಜನಪರ ನಿಲುವಿನ ಕುರಿತು ಸಭೆಗೆ ವಿವರಿಸಿದರು.
"ವ್ಯವಸ್ಥೆಯ ಜೊತೆ ಹೊಂದಾಣಿಕೆ ಮಾಡಿಕೊಳ್ಳದ ಕಾರಣಕ್ಕಾಗಿ ವಡ್ಡರ್ಸೆಯವರ ನೇತೃತ್ವದ ಮುಂಗಾರು ಪತ್ರಿಕೆ ಹೆಚ್ಚಿನ ಅವಧಿಗೆ ನಡೆಯಲಿಲ್ಲ. ಹಾಗೆಯೇ ವ್ಯವಸ್ಥೆಯ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಪ್ರತಾಪ್‌ಚಂದ್ರ ಶೆಟ್ಟರು ಕೂಡ ಸಭಾಪತಿ ಸ್ಥಾನದಿಂದ ಅವಧಿಗೆ ಮುಂಚಿತವಾಗಿ ಕೆಳಕ್ಕಿಳಿಯಬೇಕಾಗಿ ಬರುತ್ತಿರಲಿಲ್ಲ. ರೈತ ವಿರೋಧಿ ಮೂರು ಕೃಷಿ ಮಸೂದೆಗಳು ಚರ್ಚೆಯಿಲ್ಲದೆ ಜಾರಿಗೊಳಿಸಲು ಅವಕಾಶ ನೀಡದ ಕಾರಣಕ್ಕಾಗಿ, ರೈತಪರ ನಿಲುವು ತಳೆದ ಕಾರಣಕ್ಕಾಗಿ ಪ್ರತಾಪ್‌ರವರು ಸಭಾಪತಿ ಸ್ಥಾನದಿಂದ ಕೆಳಕ್ಕಿಳಿಯಬೇಕಾಗಿ ಬಂತು ಎನ್ನುವುದು ಐತಿಹಾಸಿಕ ಸತ್ಯ. ಈ ಅಪಾಯದ ಅರಿವಿದ್ದೂ ಕೂಡ ಓರ್ವ ರೈತನಾಗಿ, ರೈತ ಸಂಘದ ನಾಯಕನಾಗಿ ಅವರು ರೈತರ ಹಿತಾಸಕ್ತಿಗೆ ದಕ್ಕೆಯಾಗುವ ಮಸೂದೆಯ ಜಾರಿಯನ್ನು ವಿರೋಧಿಸಿ ಮಾಡಿದ ತ್ಯಾಗ ಇತಿಹಾಸದಲ್ಲಿ ದಾಖಲಾಗಲಿದೆ" ಎಂದು ಕನ್ನಡ ಮೀಡಿಯಾ ಡಾಟ್ ಕಾಂ ಪ್ರಧಾನ ಸಂಪಾದಕ ಚಂದ್ರಶೇಖರ ಶೆಟ್ಟಿಯವರು ಪ್ರಸ್ತಾವಿಕವಾಗಿ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಹಿರಿಯ ರಾಜಕಾರಣಿ, ಕಾಂಗ್ರೆಸ್ ಪಕ್ಷದ 2013ರ ವಿಧಾನ ಸಭಾ ಅಭ್ಯರ್ಥಿ ಮಲ್ಯಾಡಿ ಶಿವರಾಮ ಶೆಟ್ಟಿ, ಕುಂದಾಪುರದ ಖ್ಯಾತ ವೈದ್ಯ ಡಾ. ರಂಜನ್ ಶೆಟ್ಟಿ, ಹಿರಿಯ ನ್ಯಾಯವಾದಿ ಎ.ಬಿ ಶೆಟ್ಟಿ, ಯುವ ಮುಖಂಡರಾದ ಅಕ್ಷಯ್ ಶೆಟ್ಟಿ ಉಳ್ಳೂರು, ಹಿರಿಯ ಸಹಕಾರಿ ಪ್ರಕಾಶ್‌ಚಂದ್ರ ಶೆಟ್ಟಿ, ನಾವುಂದ ನರಸಿಂಹ ದೇವಾಡಿಗ, ಮೂರ್ತೆದಾರರ ಸಹಕಾರ ಸಂಘದ ಮೋಹನ್ ಪೂಜಾರಿ, ಪ್ರಮೋದ್ ನಾವುಂದ, ಉದ್ಯಮಿಗಳಾದ ಸುರೇಂದ್ರ ಶೆಟ್ಟಿ, ಮೊಳಹಳ್ಳಿ ದಿನೇಶ್ ಹೆಗ್ಡೆ, ದೇವಾನಂದ ಶೆಟ್ಟಿ, ಕೇಶವ ಭಟ್, ಕೇಶವ ಸಸಿಹಿತ್ಲು, ಕಿಶನ್ ಹೆಗ್ಡೆ ಕೊಳ್ಕೆಬೈಲು ಶ್ಯಾಮಲಾ ಭಂಡಾರಿ, ಸನ್ಮತ್ ಹೆಗ್ಡೆ, ಜಾನ್ಸನ್ ಅಲ್ಮೇಡಾ, ದೀಪಕ್ ನಾವುಂದ, ರಮೇಶ್ ಶೆಟ್ಟಿ ವಕ್ವಾಡಿ, ಬಿಪಿನ್ ಚಂದ್ರಪಾಲ್ ನಕ್ರೆ, ಸದಾಶಿವ ದೇವಾಡಿಗ ಕಾರ್ಕಳ, ಸತೀಶ್ ಕಾರ್ಕಳ, ಪದ್ಮಪ್ರಸಾದ್ ಜೈನ್, ರೋಷನ್ ಶೆಟ್ಟಿ, ಶೋಭಾ ಸಚ್ಚಿದಾನಂದ ಮುಂತಾದವರಿಗೆ ಪುಷ್ಪ ಮತ್ತು ಪುಸ್ತಕ ನೀಡಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ಪ್ರತಾಪ್‌ಚಂದ್ರ ಶೆಟ್ಟಿ, ದಿನೇಶ್ ಅಮಿನ್ ಮಟ್ಟು, ಸುಧೀರ್ ಕುಮಾರ್ ಮುರೊಳ್ಳಿ, ಚಂದ್ರಶೇಖರ ಶೆಟ್ಟಿ, ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ, ವಡ್ಡರ್ಸೆ ನವೀನ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಉಪನ್ಯಾಸಕ ರಂಜಿತ್ ಕುಮಾರ್ ಶೆಟ್ಟಿಯವರು ಸ್ವಾಗತಿಸಿ, ಶ್ರೀರಾಜ್ ವಕ್ವಾಡಿ ಕಾರ್ಯಕ್ರಮ ನಿರೂಪಿಸಿ, ವಿನೋದ್ ಕ್ರಾಸ್ಟೋ ವಂದಿಸಿದರು.