ಸ್ವಾತಂತ್ರ್ಯ ಹೋರಾಟಕ್ಕಾಗಿ ತನ್ನ ಜೀವನದ ಬಹುಪಾಲು ಸಮಯವನ್ನು ಬ್ರಿಟೀಷರ ವಿರುದ್ಧ ಸತ್ಯಾಗ್ರಹ, ಜೈಲುವಾಸದಲ್ಲಿ ಕಳೆದು ಹಣ್ಣುಹಣ್ಣು ಮುದುಕರಾಗಿದ್ದ, ದೇಹದಲ್ಲಿ ತ್ರಾಣವಿಲ್ಲದೆ ಕೋಲು ಹಿಡಿದು ನಡೆಯುತ್ತಿದ್ದ ರಾಷ್ಟ್ರ ಪಿತ ಮಹಾತ್ಮ ಗಾಂಧಿಯವರನ್ನು ಭೀಕರವಾಗಿ ಕೊಲೆಗೈದು ಈ ದೇಶದ ಕಾನೂನಿನಡಿಯಲ್ಲಿ ಗಲ್ಲು ಶಿಕ್ಷೆಗೊಳಗಾದ ರಾಷ್ಟ್ರ ದ್ರೋಹಿಯ ಹೆಸರನ್ನು ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತು ವ್ಯಾಪ್ತಿಯ ಬೋಳ ಪಡುಗಿರಿ ಅಂಬರಾಡಿ ಸಂಪರ್ಕ ರಸ್ತೆಗೆ ಇಟ್ಟು, ನಾಮಫಲಕ ಅಳವಡಿಸುವ ಮೂಲಕ ಬಿಜೆಪಿ ಪಕ್ಷ ರಾಷ್ಟ್ರ ದ್ರೋಹದ ಕೃತ್ಯವೆಸಗಿದೆ. ಆ ಮೂಲಕ ಅದು ತನ್ನ ಮೂಲಭೂತವಾದಿ ಚಿಂತನೆಯ ರಾಷ್ಟ್ರದ್ರೋಹದ ಗುಪ್ತಕಾರ್ಯಸೂಚಿಗೆ ಸಾಕ್ಷಿ ಒದಗಿಸಿದೆ.
ಈಗಾಗಲೇ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ನ ಎಚ್ಚರಿಕೆಗೆ ಮಣಿದು ಕಾರ್ಕಳ ಪೊಲೀಸರ ಮೂಲಕ ತೆರವುಗೊಳಿಸಲಾದ ಬೋಡ್೯ ಗ್ರಾಮ ಪಂಚಾಯತಿಗೆ ಸೇರಿದ ಅಧಿಕೃತ ಬೋರ್ಡು ಆಗಿದೆ ಎನ್ನಲಾಗಿದೆ. ಈ ಬಗ್ಗೆ ಪಂಚಾಯತಿಯ ಗಮನಕ್ಕೆ ತಾರದೆ ಯಾರೋ ಖಾಸಗಿಯವರು ಈ ಬೋರ್ಡನ್ನು ಹಾಕಿದ್ದಾರೆ ಎನ್ನುವ ಸಚಿವ ಸುನೀಲ್ ಕುಮಾರ್ ಹೇಳಿಕೆ ತನ್ನ ತಲೆದಂಡ ತಪ್ಪಿಸಲು ನೀಡಿದ ಹಾರಿಕೆಯ ಉತ್ತರವಾಗಿದೆ. ಬಿಜೆಪಿ ಬೆಂಬಲಿತರ ಆಡಳಿತ ಇರುವ ಈ ಪಂಚಾಯತಿನಲ್ಲಿ ಎಲ್ಲ ನಿರ್ಣಯಗಳು ಪಕ್ಷದ ಮಾರ್ಗಸೂಚಿಯಂತೆಯೇ ನಡೆಯುತ್ತವೆ ಎನ್ನುವುದು ಜನಜನಿತವಾಗಿದೆ. ಈ ಕುರಿತು ತನಿಖೆಗೆ ಕಾಂಗ್ರೆಸ್ ಒತ್ತಾಯಿಸುತ್ತದೆ.
ರಾಷ್ಟ್ರಪಿತನ ಹಂತಕನ ಹೆಸರನ್ನು ಸರಕಾರದ ಅನುದಾನದಿಂದ ನಿರ್ಮಿಸಿದ ರಸ್ತೆಗೆ ಇಟ್ಟ ಬೋಳ ಗ್ರಾಮ ಪಂಚಾಯತ್ ವಿರುದ್ದ, ಉಡುಪಿ ಜಿಲ್ಲಾಡಳಿತ ಮತ್ತು ಆರಕ್ಷಕ ಇಲಾಖೆ ಸ್ವಯಂಪ್ರೇರಿತ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಪಂಚಾಯತ್ ರಾಜ್ ವ್ಯವಸ್ಥೆಗೆ ದ್ರೋಹ ಬಗೆದ ಈ ಗ್ರಾಮ ಪಂಚಾಯತನ್ನು ಸರಕಾರ ಕೂಡಲೇ ಬರ್ಕಾಸ್ತು ಗೊಳಿಸ ಬೇಕು. ಇಲ್ಲವಾದಲ್ಲಿ ಇದರ ವಿರುದ್ಧ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಉಗ್ರ ಹೋರಾಟ ನಡೆಸಲಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.