Advertisement

ಬಿಜೆಪಿ ನಾಯಕಿ ನೂಪೂರ ಶರ್ಮಾ ಹಾಗೂ ನವೀನ್ ಕುಮಾರ್ ಜಿಂದಾಲ್ ಪ್ರಕರಣದಿಂದ ಬಿಜೆಪಿಯು ಪಾಠ ಕಲಿಯುವಂತಾಗಲಿ: ಭಾರತದ ಘನತೆಗೆ ಕುಂದುಂಟಾಗದಂತೆ ಜಾಗ್ರತೆ ವಹಿಸಲಿ!

Advertisement
ಬರಹ: ಡಾ. ಸುಬ್ರಹ್ಮಣ್ಯ ಭಟ್., ಬೈಂದೂರು.

ವಿರೋಧ ಪಕ್ಷವನ್ನು ವಾಚಾಮ ಗೋಚರವಾಗಿ ನಿಂದಿಸುವ, ತಮ್ಮ‌ಪಕ್ಷದ ನಾಯಕರ ಬೆನ್ನ ಹಿಂದೆ ಸುತ್ತುವವರಿಗೆ ಪಕ್ಷದ ಜವಬ್ದಾರಿಯುತ ಸ್ಥಾನ ನೀಡಿದರೆ ಏನಾಗುತ್ತದೆ ಎನ್ನುವುದಕ್ಕೆ ಬಿಜೆಪಿ ನಾಯಕಿ ನೂಪೂರ ಶರ್ಮಾ ಹಾಗೂ ನವೀನ್ ಕುಮಾರ್ ಜಿಂದಾಲ್ ತಾಜಾ ನಿದರ್ಶನವಾಗಿದ್ದಾರೆ. ಬಿಜೆಪಿಯಲ್ಲಿ ಯಾವಾಗಲೂ ಏನೇನೋ ಮಾತನಾಡುವ, ಎಡವಟ್ಟು ಹೇಳಿಕೆ ನೀಡುವ ವ್ಯಕ್ತಿಗಳಿಗೆ ಇನ್ನಿಲ್ಲದಷ್ಟು ಗೌರವ, ಸ್ಥಾನ, ಮಾನ…!

ಈ ನೀತಿ ನಿಯಮ ತಿಳಿದೇ ಹಲವಾರು ಜನ ಓದಿದವರು, ಓದದೇ ಇರುವವರು ಬಾಯಿಗೆ ಬಂದಂತೆ ಮಾತನಾಡಿ ಅದರ ಮೂಲಕ ನೇರವಾಗಿ ಬಿಜೆಪಿಯ ಉನ್ನತ ಹುದ್ದೆಗೇರಿದ್ದಾರೆ. ದಿನ ಬೆಳಗಾದರೆ ಬೆಂಕಿ ಉಗುಳುವ ಮಾತುಗಳೇ ಅವರಿಂದ ಹೊರಬರೋದು, ಅದೇ ಅವರ ಬಂಡವಾಳ…!

ಹೌದು ಈಶ್ವರಪ್ಪನಿಂದ ಹಿಡಿದು ನಳೀನ್ ಕುಮಾರ ಕಟೀಲ್, ಸಿ.ಟಿ.ರವಿ, ತೇಜಸ್ವಿ ಸೂರ್ಯ, ಬಸವನಗೌಡ ಪಾಟೀಲ್ ಯತ್ನಾಳ್, ಶೋಭಾ ಕರಂದ್ಲಾಜೆ, ಅನಂತಕುಮಾರ ಹೆಗಡೆ, ಪ್ರತಾಪ ಸಿಂಹ ಮೊದಲಾದ ಹಿರಿಯ ಕಿರಿಯ ನಾಯಕರೆಲ್ಲ ಬಾಯಿಗೆ ಬಂದಂತೆ ಮುಸ್ಲಿಂರ ವಿರುದ್ಧ ಬೆಂಕಿಯುಗುಳುವ ಹೇಳಿಕೆ ನೀಡುತ್ತಲೇ ಇರುತ್ತಾರೆ. ಹೈಕಮಾಂಡ್ ಆಗಲಿ, ಸ್ಥಳೀಯ ಹಿರಿಯ ನಾಯಕರಾಗಲೀ ಇವರ ಆಟಾಟೋಪಗಳಿಗೆ ಬ್ರೇಕ್ ಹಾಕಲಿಲ್ಲ. ಇದು ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ದೇಶದಾದ್ಯಂತ ಬಿಜೆಪಿಯಲ್ಲಿ ಇಂತಹ ನಾಯಕರ ಸಾಮಾನ್ಯವಾದ ನಡವಳಿಕೆ. ಈ ರೀತಿ ಬಿಸಿಬಿಸಿಯಾಗಿ ಹೇಳಿಕೆ ಕೊಡುವ, ಅದರ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯುವ ವ್ಯಕ್ತಿಗಳಿಗೆ ಬಿಜೆಪಿಯಲ್ಲಿ ದೊಡ್ಡ ದೊಡ್ಡ ಹುದ್ದೆಗಳು ಒಲಿದು ಬರುತ್ತವೆ. ಆದರೆ ಈ ರೀತಿಯ ಎಡಬಿಡಂಗಿಗಳ ಹೇಳಿಕೆಯೇ ಇಂದು ಬಿಜೆಪಿ ಪಕ್ಷಕ್ಕೆ ಕಂಟಕವಾಗಿ ಪರಿಣಮಿಸಿದೆ.

ಏಕೆಂದರೆ ಆಡಳಿತ ಪಕ್ಷದ ಜವಾಬ್ದಾರಿಯ ಸ್ಥಾನದಲ್ಲಿರುವವರ ಹೇಳಿಕೆಯನ್ನು ಆಯಾಯ ಸರಕಾರದ ಹೇಳಿಕೆಯೆಂದೇ ಜಾಗತಿಕ ಮಟ್ಟದಲ್ಲಿ ಪರಿಗಣಿಸಲ್ಪಡುತ್ತದೆ. ಆದ್ದರಿಂದ ದೇಶದೊಳಗೆ ಎಲ್ಲೋ ಒಂದು ಮೂಲೆಯಲ್ಲಿ ಸಾರ್ವಜನಿಕವಾಗಿ‌ ಆಡಿದ ಮಾತು ರಾತ್ರಿ ಬೆಳಗಾಗುವುದರೊಳಗೆ ವಿಶ್ವದಾದ್ಯಂತ ಸಂಚಲನ ಮೂಡಿಸುವಷ್ಟು ವ್ಯಾಪಿಸುತ್ತದೆ. ಅದರ ದುಷ್ಪರಿಣಾಮ ಆಯಾಯ ದೇಶದ ಮೇಲೆ, ಅಲ್ಲಿನ ಪ್ರಜೆಗಳ ಮೇಲಾಗುತ್ತದೆ.

ಹಾಗಾದರೆ ಈ ನೂಪೂರ ಶರ್ಮಾ ಆಗಿರಬಹುದು, ನವೀನಕುಮಾರ್ ಜಿಂದಾಲ್ ಆಗಿರಬಹುದು ಇವರು ಇಡೀ ಭಾರತದ ಎಲ್ಲ ಜನರ ಧ್ವನಿಯೇ…? ಅಥವಾ ಎಲ್ಲರನ್ನೂ ಕೇಳಿ ಇಂತಹ ಹೇಳಿಕೆ ನೀಡಿದ್ದರೆ….? ಇಲ್ಲ… ಆದರೆ ಅವರು ಹಚ್ಚಿದ ವಿವಾದದ ಕಿಡಿ ಸಮಸ್ಯೆಯ ಕಾಡ್ಗಿಚ್ಚನ್ನೇ ಸೃಷ್ಟಿಸಿದೆ. ಈಗ ಅದರ ಶಮನಕ್ಕೆ ಕೇಂದ್ರ ಸರಕಾರ, ಆರ್ ಎಸ್ ಎಸ್ ಹಾಗೂ ಬಿಜೆಪಿ ಹೆಣಗಾಡುತ್ತಿವೆ ಎನ್ನುವುದು ವಾಸ್ತವ ಸಂಗತಿ!

ಸನಾತನ ಹಿಂದೂ ಧರ್ಮದ ಕುರಿತು ನಮಗೆ ಅಭಿಮಾನ ಇರುವುದು ಸಹಜ ಹಾಗೂ ಇರಲೇಬೇಕಾದದ್ದು. ಆದರೆ ಪರಧರ್ಮಗಳನ್ನು ನಿಂದಿಸುವುದು, ಅಲ್ಲಿನ ಧರ್ಮ ಪ್ರವರ್ತಕರನ್ನು ಅವಹೇಳನ ಮಾಡುವುದು ಒಪ್ಪುವಂತಹದ್ದಲ್ಲ. ಇತ್ತೀಚೆಗೆ ಟಿವಿ ಚಾನೆಲ್ ಒಂದರಲ್ಲಿ ನಡೆದ ಚರ್ಚಾಕೂಟದಲ್ಲಿ ಬಿಜೆಪಿ ವಕ್ತಾರೆ ನೂಪೂರ್ ಶರ್ಮಾ ಪ್ರವಾದಿ ಮಹಮದ್ ರ ಕುರಿತು ಹಾಗೂ ಇಸ್ಲಾಂ ಧರ್ಮದ ಬಗೆಗೆ ವಿವಾದಾತ್ಮಕ, ನಿಂದನಾತ್ಮಕವಾದ ರೀತಿಯಲ್ಲಿ ಮಾತನಾಡಿದ್ದು ಎಲ್ಲೆಡೆ ಬಿತ್ತರವಾಗಿ ಇಸ್ಲಾಂ ರಾಷ್ಟ್ರಗಳ ದೃಷ್ಟಿಯಲ್ಲಿ ಭಾರತದ ಕುರಿತು ತಪ್ಪು ಭಾವನೆ ಬರುವಂತೆ ಮಾಡಿದೆ. ಇದರಿಂದ ಎಚ್ಚೆತ್ತ ಬಿಜೆಪಿ ನೂಪೂರಳಿಗೆ ಗೇಟ್ ಪಾಸ್ ನೀಡಿದೆ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ನಷ್ಟವನ್ನು ಇದರಿಂದ ಸರಿಹೊಂದಿಸಲು ಸಾಧ್ಯವೇ….?

ಕೇವಲ ಕೋಮುದ್ವೇಷ, ಪರಧರ್ಮ ನಿಂದನೆ, ಸುಳ್ಳು ಭಾಷಣ, ಕಪೋಲಕಲ್ಪಿತ ಕತೆಗಳೇ ಮೊದಲಾದುವುಗಳ ಮೂಲಕ ಚುನಾವಣೆಯನ್ನು ಗೆದ್ದು, ಹರಕು ಬಾಯಿಯ ವ್ಯಕ್ತಿಗಳನ್ನು ಮುನ್ನೆಲೆಯಲ್ಲಿಟ್ಟು ಅಧಿಕಾರ ಅನುಭವಿಸುವ ಬಿಜೆಪಿಯ ಲೆಕ್ಕಾಚಾರ ಜಾಗತಿಕ ಮಟ್ಟದಲ್ಲಿ ದೇಶದ ಮಾನವನ್ನು ಹರಾಜು ಹಾಕುವಂತೆ ಮಾಡಿದೆ. ನಿಜ, ಇಲ್ಲವಾದರೆ ಕತಾರ್ ಅಂತಹ ಸಣ್ಣ ದೇಶ ಭಾರತವನ್ನು ಪ್ರಶ್ನಿಸುವ ಮಟ್ಟಕ್ಕೆ ಸೆಟೆದು ನಿಲ್ಲುತ್ತದೆಯೆಂದರೆ ಏನೆನ್ನಬೇಕು ಹೇಳಿ….?

ಭಾರತ ದೇಶದ ಉತ್ಪನ್ನಗಳನ್ನು ಬಹಿಷ್ಕರಿಸಿ, ಭಾರತದ ಹಿಂದೂ ನೌಕರರನ್ನು ಕೈಬಿಡುವ ಮಟ್ಟಕ್ಕೆ ಪರಿಸ್ಥಿತಿ ಬಿಗಡಾಯಿಸಿದೆ….! ಪ್ರಧಾನಿ ಮೋದಿಯವರ ಭಾವಚಿತ್ರವನ್ನು ಕಸದ ತೊಟ್ಟಿಗೆ ಅಂಟಿಸಿ ಅದಕ್ಕೆ ಅವಮಾನ ಆಗುವ ರೀತಿಯಲ್ಲಿ ಆ ದೇಶದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಿಯಂತ್ರಣವಿಲ್ಲದ ವ್ಯಕ್ತಿಗಳ ಕಾರಣದಿಂದ ದೇಶದ ಮಾನ, ದೇಶದ ನಾಯಕರ ಮಾನ ಹರಜಾಗುವಂತಾಗಿದೆ…! ಇದಕ್ಕೆ ಕಾರಣ ಏನು…? ಪಕ್ಷ ಕಟ್ಟುವಾಗ ಎಂತಹವರು ತಮ್ಮ ಪಕ್ಷ ಸೇರಬೇಕು…? ಎಂತಹವರಿಗೆ ಉನ್ನತ ಹುದ್ದೆ ನೀಡಬೇಕು…? ಯಾರಿಂದ ಪಕ್ಷ ಬೆಳೆದೀತು ಜೊತೆಗೆ ಪಕ್ಷದ ಸಿದ್ದಾಂತ ಉಳಿದೀತು…? ಎಂಬಿತ್ಯಾದಿ ವಿಚಾರ ಗೌಣವಾದಾಗ ಹೀಗೆ ಆಗುವುದು. ಯಾರು, ಏನು, ಎಲ್ಲಿ, ಎಷ್ಟು ಮಾತನಾಡಬೇಕೆನ್ನುವ ಕುರಿತು ಹೈಕಮಾಂಡ್ ನಿರ್ದೇಶನ ನೀಡದೇ ಹೋದರೆ ಹಾದಿಬೀದಿಯಲ್ಲಿ, ಮೈಕ್ ಕಂಡಲೆಲ್ಲಾ ಹೇಳಿಕೆ ನೀಡುತ್ತಲೇ ಹೋಗುತ್ತಾರೆ. ಅದರಿಂದ ಎಲ್ಲೆಡೆ ಅನಗತ್ಯ ವಿವಾದ, ಗೊಂದಲ ಏರ್ಪಟ್ಟು ಪಕ್ಷ, ರಾಷ್ಟ್ರಕ್ಕೆ ಹಾನಿಯಾಗುವುದು ಖಚಿತ. ಅದೇ ಈಗ ಆಗಿರುವುದು…!

ಎಲ್ಲ ದೋಚಿದ ಮೇಲೆ ಕೋಟೆ ಬಾಗಿಲು‌ ಹಾಕಿದಂತೆ ಈಗ ಬಿಜೆಪಿಯ ನಾಯಕರು ಪರಧರ್ಮ ನಿಂದಕರು ನಾವಲ್ಲ, ಎಲ್ಲ ಧರ್ಮಕ್ಕೂ ನಾವು ತುಂಬ ಗೌರವ ನೀಡುತ್ತೇವೆ ಎಂದೆಲ್ಲ ತಿಪ್ಪೆ ಸಾರಿಸುತ್ತಿದ್ದಾರೆ. ಆರ್ ಎಸ್ ಎಸ್ ನ ಪ್ರಮುಖರಾದ ಮೋಹನ ಭಾಗವತರು ಮುಸ್ಲಿಂರು ನಮ್ಮವರೇ ಎಂದು ಹೇಳಿಕೆ ನೀಡಿ ಡ್ಯಾಮೆಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ. ಆದರೆ ಯಾವುದೋ ಕಾಲದ ಮಸೀದಿಯೊಳಗೆ ಶಿವಲಿಂಗವಿದೆ ಎಂದು ಅಷ್ಟಮಂಗಲ ಪ್ರಶ್ನೆಯಿಟ್ಟು ಮುಂದಿನ ಚುನಾವಣೆಗೆ ಮತಬ್ಯಾಂಕ್ ಗಟ್ಟಿಗೊಳಿಸುತ್ತಿರುವ ನಾಯಕರು ಸುಮ್ಮನಾಗಿಲ್ಲ….! ವಿದೇಶದಲ್ಲಿ ಮುಸ್ಲಿಂ ಉದ್ಯಮಿಗಳ ಜೊತೆ ಒಪ್ಪಂದ ಮಾಡಿ ನಮ್ಮಲ್ಲಿಗೆ ಬನ್ನಿ ಎಂದು ಸಿ.ಎಂ. ಸಾಹೇಬರು ರೆಡ್ ಕಾರ್ಪೇಟ್ ಹಾಸಿ ಕರೆಯುತ್ತಾರೆ. ಆದರೆ ಇಲ್ಲಿ ಜಾತ್ರೆಯಲ್ಲಿ ಕಲ್ಲಂಗಡಿ ಹಣ್ಣು ಮಾರುತ್ತಿರುವ ಬಡ ಮುಸ್ಲಿಂ ವ್ಯಾಪಾರಿಗೆ ಬಹಿಷ್ಕಾರ ಹಾಕುತ್ತಾರೆ…! ಅದೆಷ್ಟೋ ಅನಧಿಕೃತ ಸಂಘಟನೆಗಳು ಸರಕಾರಕ್ಕೆ ಗಡುವು ನೀಡುವ, ಎಚ್ಚರಿಕೆ ರವಾನಿಸುವ ಮಟ್ಟಕ್ಕೆ ಬೆಳೆದಿರುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ…. ಹಿರಿಯ ನಾಯಕರ ಮಾತಿಗೆ ಕಿಮ್ಮತ್ತು ಕೊಡದ ಒಂದಿಷ್ಟು ಕೂಪಮಂಡೂಕಗಳು ಪ್ರತಿದಿನ ಇಸ್ಲಾಂ ಹಾಗೆ, ಕ್ರಿಶ್ಚಿಯನ್ ಹೀಗೆ ಅಂತೆಲ್ಲ ಅನ್ಯಧರ್ಮದ ಕುರಿತಾದ ತಮ್ಮ ದೂಷಣೆಯ ವಾಗ್ಝರಿಯನ್ನು ಹರಿಯಬಿಡುತ್ತಲೇ ಇದ್ದಾರೆ. ರಾಜಕೀಯೇತರವಾಗಿ ತಮ್ಮ ಮಾತನ್ನು ಕೇಳುವ, ಪೇಮೆಂಟ್ ತೆಗೆದುಕೊಂಡು ಮಾತನಾಡುವ ಬಾಡಿಗೆ ಭಾಷಣಕಾರರಿಂದ ಧರ್ಮದ ವಿಷವನ್ನು ಕಕ್ಕಿಸುತ್ತಿದ್ದಾರೆ.

ಅವರವರ ಧರ್ಮ ಅವರಿಗೆ ಶ್ರೇಷ್ಠ, ಅದರ ಕುರಿತು ಮತ್ತೊಂದು ಧರ್ಮದವರು ಲಘುವಾಗಿ ಮಾತನಾಡುವಿದು ಅತಿರೇಕದ ಪರಮಾವಧಿ. ನಮ್ಮ ಧರ್ಮದ ಕುರಿತು ಬೇರೆಯವರು ಕೇವಲವಾಗಿ ಮಾತನಾಡಿದರೆ ಅದನ್ನು ವಿರೋಧಿಸೋಣ. ಅದರ ಬದಲಿಗೆ ನಾವೇ ಅನ್ಯಧರ್ಮದ ಕುರಿತು ಬಾಯಿಗೆ ಬಂದಂತೆ ಮಾತನಾಡಿದರೆ ನಾವೇ ವಿವಾದವನ್ನು ಮೈಮೇಲೆ ಎಳೆದುಕೊಂಡಂತಾಗುತ್ತದೆ. ಧರ್ಮ ಧರ್ಮಗಳ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಆದರೆ ಸ್ವಧರ್ಮ ಏನೆಂದು ಅರಿತವರು ಅವರವರ ಧರ್ಮದ ಕುರಿತು ಮಾತನಾಡುತ್ತಿದ್ದರೆ ಹೊರತು ಪರಧರ್ಮ ನಿಂದನೆ ಮಾಡುತ್ತಿರಲಿಲ್ಲ. ಒಂದು ವೇಳೆ ಹಾಗೆ ಮಾಡಿದವರನ್ನು ಇತಿಹಾಸದಲ್ಲಿ ಧರ್ಮಾಂಧನೆಂತಲೇ ಗುರುತಿಲಾಗಿದೆ. ಆದರೆ ಇಂದು ನಮ್ಮ ಧರ್ಮದ ಆಳ, ಅಗಲ, ಶ್ರೇಷ್ಠತೆ, ವಿಚಾರಧಾರೆಗಳನ್ನೇ ಅರಿಯದೇ ಅನ್ಯಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತನಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅಂತಹ ದ್ವೇಷ ಕಾರುವವರಿಗೆ ರಾಜಕೀಯದಲ್ಲಿ ಅತೀಹೆಚ್ಚು ಮನ್ನಣೆ ಅನ್ನುವುದು ಇನ್ನೊಂದು ಅಚ್ಚರಿಯ ಸಂಗತಿ… ಇದೆಲ್ಲದರ ಪರಿಣಾಮ ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಹಿಂದುಗಳಿಗೆ ಮುಂದಿನ ದಿನಗಳಲ್ಲಿ ಬಹುದೊಡ್ಡ ಹೊಡೆತ ನೀಡಲಿದೆ. ಜೊತೆಗೆ ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎನ್ನುವ ತಪ್ಪು ಸಂದೇಶ ರವಾನೆಯಾಗುತ್ತದೆ.

ಅಧಿಕಾರಕ್ಕೆ ಏರುವುದೊಂದೇ ತಮ್ಮ ಗುರಿಯೆಂದು ಭಾವಿಸಿ, ಏನೇನೋ ಮಾತನಾಡುವ ಅಧಿಕಪ್ರಸಂಗಿಗಳಿಗೆ ಪ್ರೇರಣೆ ನೀಡಿ ಸಮಾಜದಲ್ಲಿ ಪ್ರಕ್ಷುಬ್ದತೆ ಉಂಟಾಗುವಂತೆ ಮಾಡಿದ್ದರ ಪರಿಣಾಮ ಇಂದು ಈ ಹಂತಕ್ಕೆ ತಲುಪಿದೆ. ಇನ್ನಾದರೂ ಈ ಬಾಯಿಬುಡುಕರಿಗೆ ಮೂಗುದಾರ ಹಾಕಿ, ಪಕ್ಷದ, ದೇಶದ ಮಾನ ಕಾಪಾಡಲಿ. ಇಲ್ಲವಾದರೆ ಯಾರೋ ಮಾಡಿದ ತಪ್ಪಿಗೆ ಯಾರದ್ದೋ ಉದ್ಯೋಗ, ಮಾನ ನಷ್ಟವಾದೀತು….!

•ಡಾ. ಸುಬ್ರಹ್ಮಣ್ಯ ಭಟ್

Advertisement
Advertisement
Recent Posts
Advertisement