"ದುರ್ಬಲ ಆರ್ಥಿಕತೆಯ ಮೂಲಕ ಸೈನಿಕರಿಗೆ ಸಂಬಳವನ್ನೂ ನೀಡಲು ಪರದಾಡುತ್ತಿರುವ ಕೇಂದ್ರ ಸರ್ಕಾರವು, ಸೈನಿಕರನ್ನೂ ಸಹ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಹೊರಟಿದ್ದು ಸೇನಾ ನೇಮಕಾತಿ ಎಂಬ ಗಂಭೀರ ಸಂಗತಿಯನ್ನೂ ಸಹ ದುರ್ಬಲಗೊಳಿಸಲು ಹೊರಟಿದೆ" ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಾ. ಎಚ್.ಸಿ ಮಹಾದೇವಪ್ಪ ಖೇದ ವ್ಯಕ್ತಪಡಿಸಿದ್ದಾರೆ.
"ಸೈನಿಕರ ಬದುಕಲ್ಲಿ ಅಭದ್ರತೆ ಸೃಷ್ಟಿಸುತ್ತಿರುವ ಕೇಂದ್ರ ಸರ್ಕಾರವು ಈ ಸಂಗತಿಯನ್ನು ಮುಚ್ಚಿ ಹಾಕಲು ಅಗ್ನಿಪಥ, ಉದ್ಯೋಗ ಕ್ರಾಂತಿ ಎಂಬ ಪದಗಳನ್ನು ಬಳಸುವ ಮೂಲಕ ಹುಸಿ ಪ್ರಚಾರ ಪಡೆಯುತ್ತಿದ್ದು ಸೈನಿಕರ ತ್ಯಾಗವನ್ನು ಅವಮಾನಿಸುತ್ತಿದೆ" ಎಂದವರು ಹೇಳಿದರು.
"ಸೈನಿಕರನ್ನು ಸರಿಯಾದ ಕ್ರಮದಲ್ಲಿ ನೇಮಕಾತಿ ಮಾಡಿಕೊಳ್ಳುವುದಕ್ಕೂ ಸಾಧ್ಯವಾಗದಂತಹ ಇವರ ದುರ್ಬಲ ಆರ್ಥಿಕ ನೀತಿಯಿಂದಾಗಿ ದೇಶದ ಯುವ ಜನರು ಅಪಾಯಕ್ಕೆ ಸಿಲುಕಿದ್ದಾರೆ" ಎಂದು ಮಹಾದೇವಪ್ಪ ಆರೋಪಿಸಿದ್ದಾರೆ.
"ಚುನಾವಣಾ ವರ್ಷಗಳಲ್ಲಿ ಉದ್ಯೋಗ ಕ್ರಾಂತಿ ಎಂದು ಪ್ರಚಾರ ಪಡೆಯುತ್ತಿರುವ ಕೇಂದ್ರ ಸರ್ಕಾರದ ಪ್ರಚಾರದ ಹುಚ್ಚಿಗೆ ದೇಶದ ಬೊಕ್ಕಸವೂ ಖಾಲಿಯಾಗುತ್ತಿದೆ ಮತ್ತು ಜನರ ತೆರಿಗೆ ಪಾವತಿ ಪ್ರಮಾಣವೂ ಹೆಚ್ಚುತ್ತಿದೆ" ಎಂದವರು ಕಿಡಿ ಕಾರಿದ್ದಾರೆ.