Advertisement

ಶಾಲೆಗಳನ್ನು ಆರೆಸ್ಸೆಸ್ ಶಾಖೆಗಳನ್ನಾಗಿ ಮಾಡ ಹೊರಟಿರುವ ಶಿಕ್ಷಣ ಸಚಿವರೆ, ಶಿಕ್ಷಣ ಎಂದರೆ ಶಾಖೆಯಲ್ಲಿ ಹೇಳುವ ಔರಂಗಜೇಬನ ಕಾಗಕ್ಕ ಗುಬ್ಬಕ್ಕನ ಕತೆಯಲ್ಲ!

Advertisement


ಕಳೆದ ಎರಡು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕದ ಕಾರಣಕ್ಕಾಗಿ ಶಾಲೆಗಳೇ ನಡೆಯಲಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ಹಿನ್ನಡೆ ಯಾಯಿತು. ಇನ್ನೇನು ಕೋವಿಡ್ ಕಾಟ ತಪ್ಪಿತೆಂದು ಮಕ್ಕಳು ಶಾಲೆಗೆ ಹೋಗಲಾರಂಭಿಸಿದರು. ಮಕ್ಕಳು ಶಾಲೆಗೆ ಹೋಗಲಾರಂಭಿಸಿದಂತೆ ಸರಕಾರಕ್ಕೆ ಒಮ್ಮಿಂದೊಮ್ಮೆಲೆ ಪಠ್ಯಪುಸ್ತಕಗಳ ಪರಿಷ್ಕರಣೆಯ ಹುಚ್ಚು ಹಿಡಿಯಿತು. ಮೊದಲು ಟಿಪ್ಪು ಸುಲ್ತಾನ್ ಪಠ್ಯಕ್ಕೆ ಕತ್ತರಿ ಆಡಿಸಿದರು. ಅದನ್ನು ಪ್ರತಿಭಟಸುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಅನಂತರ ಒಂದೊಂದಾಗಿ ಕತ್ತರಿ ಪ್ರಯೋಗ ಮಾಡುತ್ತ ಬಸವಣ್ಣನವರಿಗೆ ಮತ್ತು ಬಾಬಾಸಾಹೇಬರಿಗೆ ಬಂದು ನಿಂತಿದ್ದಾರೆ. ಟ್ಯೂಷನ್ ಹೇಳುವ ಅವಿವೇಕಿ ಟ್ರೋಲರ್‌ನಿಗೆ ಪಠ್ಯಪುಸ್ತಕ ಪರಿಷ್ಕರಣೆ ಮಾಡುವ ಜವಾಬ್ದಾರಿ ನೀಡಿದ ಶಿಕ್ಷಣ ಸಚಿವ ಇದಕ್ಕೆ ಅಧಿಕೃತ ಆದೇಶವನ್ನೂ ಹೊರಡಿಸಲಿಲ್ಲ. ಬದಲಾಗಿ ಮೌಖಿಕ ಸೂಚನೆ ನೀಡಿ ಎಲ್ಲ ಬಟಾ ಬಯಲಾದ ಅನಂತರ ಘಟನೋತ್ತರ ಅನುಮತಿ ನೀಡಿ ಆದೇಶ ಹೊರಡಿಸುವುದೆಂದರೆ ಅಕ್ರಮವನ್ನು ಸಕ್ರಮಗೊಳಿಸುವ ಹತಾಶ ಯತ್ನವಲ್ಲದೆ ಬೇರೇನೂ ಅಲ್ಲ. ಇಂಥ ಅವಾಂತರಗಳಿಗೆ ಕಾರಣನಾದ ಶಿಕ್ಷಣ ಮಂತ್ರಿ ಹಿಂದೂಗಳನ್ನು ಒಡೆಯುವ ಯತ್ನ ಎಂದು ತನ್ನ ಸ್ಥಾನ ಮಾನದ ಘನತೆ ಮರೆತು ಬಹಿರಂಗವಾಗಿ ಮಾತಾಡಿದ್ದಾರೆ.

ಶಾಲಾ ಪಠ್ಯಪುಸ್ತಕಗಳಿಗೆ ಸಂಬಂಧಿಸಿದಂತೆ ಪ್ರತಿ ದಿನವೂ ಒಂದೊಂದು ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಭಗತ್ ಸಿಂಗ್, ನಾರಾಯಣ ಗುರುಗಳ ಪಾಠ ಕೈ ಬಿಟ್ಟಿರುವ ವಿವಾದಗಳಿಗೆ ಸರಕಾರ ಸ್ಪಷ್ಟೀಕರಣ ಕೊಡುವಷ್ಟರಲ್ಲಿ ಬಸವಣ್ಣನವರಿಗೆ ಅಪಚಾರ ಮಾಡಲಾಗಿದೆ ಎಂದು ಲಿಂಗಾಯತರು ಮಾತ್ರವಲ್ಲ ಅನೇಕರು ಸಿಡಿದೆದ್ದಿದ್ದಾರೆ. ಶಾಲೆಗಳನ್ನು ಸಂಘದ ಶಾಖೆಗಳನ್ನಾಗಿ ಮಾಡಲು ಹೊರಟ ಶಿಕ್ಷಣ ಮಂತ್ರಿ ಇಂಥ ಪ್ರಶ್ನೆಗಳಲ್ಲಿ ತಾಳ್ಮೆಯಿಂದ ಸಮಜಾಯಿಷಿ ನೀಡುವ ಬದಲಾಗಿ ಹಿಂದೂಗಳನ್ನು ಒಡೆಯಲೆಂದು ಪ್ರತಿಪಕ್ಷಗಳು ಪುಸ್ತಕ ಪರಿಷ್ಕರಣ ವಿಚಾರ ಕೈಗೆತ್ತಿಕೊಂಡಿದ್ದಾರೆ ಎಂದು ಹೇಳಿ ಇನ್ನೊಂದು ವಿವಾದ ಸೃಷ್ಟಿಸಿದ್ದಾರೆ. ಈ ಶಿಕ್ಷಣ ಸಚಿವ ನಾಗೇಶ್ ಮಂತ್ರಿಯಾಗಿ ಮಾತನಾಡುತ್ತಿಲ್ಲ. ಸಂಘದ ಮೂರನೇ ದರ್ಜೆಯ ಕಾರ್ಯಕರ್ತನಂತೆ ಮಾತಾಡುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕೈ ಬಾಯಿಗಳನ್ನು ಕಟ್ಟಿ ಹಾಕಲಾಗಿದೆ.

ಇಷ್ಟು ಅವಸರವಸರವಾಗಿ ಪಠ್ಯಪುಸ್ತಕಗಳ ಪರಿಷ್ಕರಣೆಯ ಅಗತ್ಯ ವಿರಲಿಲ್ಲ. ಬರಗೂರು ರಾಮಚಂದ್ರಪ್ಪನವರ ನೇತೃತ್ವದ ತಜ್ಞರ ಸಮಿತಿ ರೂಪಿಸಿದ ಪಠ್ಯಪುಸ್ತಕಗಳು ಮುದ್ರಣಗೊಂಡು ಸಿದ್ಧವಾಗಿದ್ದವು. ಅವುಗಳನ್ನು ಗೋದಾಮುಗಳಿಗೆ ಸಾಗಿಸಿ ಅವಾಂತರಗಳಿಗೆ ಅವಕಾಶ ಮಾಡಿಕೊಡುವ ಈ ಪರಿಷ್ಕೃತ ಪಠ್ಯಪುಸ್ತಕಗಳ ಅಗತ್ಯವಿರಲಿಲ್ಲ. ತನ್ನ ಮೂಗಿನ ನೇರಕ್ಕೆ ಪರಿಷ್ಕರಣೆ ಮಾಡ ಬೇಕೆಂದಿದ್ದರೆ ನಿಧಾನವಾಗಿ ಬಲಪಂಥೀಯ ತಜ್ಞರಿಂದಲೇ ಮಾಡಿಸಬಹುದಿತ್ತು. ಇದಕ್ಕಾಗಿ ಯಾವುದೇ ಪರಿಣತಿಯಿಲ್ಲದ, ಪ್ರಗತಿಪರರನ್ನು ಫೇಸ್‌ಬುಕ್‌ಗಳಲ್ಲಿ ಬೈಯುವ, ಅವಿವೇಕಿಯಿಂದ ಮಾಡಿಸುವ ಅಗತ್ಯವಿರಲಿಲ್ಲ.

ಸರಕಾರದ ಅಧಿಕೃತ ಆದೇಶವಿಲ್ಲದೆ ಅತ್ಯಂತ ಸೂಕ್ಷ್ಮ ವಿಷಯಗಳ ಕುರಿತು ಪರಿಶೀಲನೆ ಮಾಡಿ ವರದಿ ನೀಡಲು ರೋಹಿತ್ ಚಕ್ರತೀರ್ಥ ಸಮಿತಿಗೆ ಅವಕಾಶ ನೀಡಿದವರಾರು? ಈ ರಾಜ್ಯದಲ್ಲಿ ಸರಕಾರ ಎಂಬುದಿಲ್ಲವೇ? ಇದೇನು ಶಿಕ್ಷಣ ಮಂತ್ರಿಯ ಮನೆಯ ದಿನಸಿ ಖರೀದಿ ವ್ಯವಹಾರವೇ? ಇಂಥ ಅಕ್ರಮ ಎಸಗಿದ ಮಂತ್ರಿ ಅಧಿಕಾರದಲ್ಲಿ ಮುಂದುವರಿಯಬೇಕೇ?
ಈ ಸರಕಾರದಲ್ಲಿದ್ದವರಿಗೆ ಪರಿಶೀಲನಾ ಸಮಿತಿ ಹಾಗೂ ತಜ್ಞರ ಪರಿಷ್ಕರಣಾ ಸಮಿತಿಯ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ. ಸುರೇಶ್ ಕುಮಾರ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದಾಗ ಪರಿಶೀಲನಾ ಸಮಿತಿಯೊಂದನ್ನು ರಚನೆ ಮಾಡಿ ೧ ರಿಂದ ೧೦ ನೇ ತರಗತಿಯ ಭಾಷಾ ವಿಷಯಗಳು ಹಾಗೂ, ೬ ರಿಂದ ೧೦ ನೇ ತರಗತಿಯವರೆಗಿನ ಸಮಾಜ ವಿಜ್ಞಾನ ಪಠ್ಯಗಳಲ್ಲಿ ಇರಬಹುದಾದ ಸೂಕ್ಷ್ಮ ವಿಷಯಗಳನ್ನು ಪರಿಶೀಲನೆ ಮಾಡಿ ಒಂದು ತಿಂಗಳಲ್ಲಿ ವರದಿ ನೀಡುವಂತೆ ಸೂಚನೆ ನೀಡಲಾಗಿತ್ತು. ಪರಿಶೀಲನಾ ಸಮಿತಿಯ ವರದಿಯನ್ನು ಒಂದು ವೇಳೆ ಸರಕಾರ ಒಪ್ಪಿಕೊಂಡರೆ ಅದನ್ನು ಅನುಷ್ಠಾನಕ್ಕೆ ತರಲು ವಿಷಯ ತಜ್ಞರ ಸಮಿತಿಯನ್ನು ಪ್ರತ್ಯೇಕವಾಗಿ ರಚಿಸಬೇಕಾಗಿತ್ತು. ಇಲ್ಲವೇ ಪರಿಶೀಲನಾ ಸಮಿತಿಗೆ ಪಠ್ಯಪುಸ್ತಕ ಪರಿಷ್ಕರಣೆಯ ಹೊಣೆ ನೀಡಿ ಹೊಸ ಆದೇಶವನ್ನು ಹೊರಡಿಸಬೇಕಾಗಿತ್ತು. ಇದಾವುದನ್ನೂ ಮಾಡದೆ ಅಧಿಕೃತ ಆದೇಶವಿಲ್ಲದೆ ಪಠ್ಯಪುಸ್ತಕಗಳ ಪರಿಷ್ಕರಣೆ ನಡೆದಿದೆ. ೨೦೨೨-೨೩ ವರ್ಷಕ್ಕೆ ಪರಿಷ್ಕರಣೆಗೊಂಡ ಪಠ್ಯಪುಸ್ತಕಗಳನ್ನು ಮುದ್ರಿಸಿ ವಿತರಣೆ ಮಾಡುವ ಕುರಿತು ಮಾರ್ಚ್ ೯ರಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಇದು ಅಕ್ರಮವಲ್ಲದೆ ಮತ್ತೇನು? ಶೇ.೪೦ ರಷ್ಟು ಕಮಿಶನ್‌ಗಾಗಿ ಕಾಮಗಾರಿ ನಡೆಸಲು ಅವಕಾಶ ನೀಡಿ ಬಳಿಕ ಘಟನೋತ್ತರ ಅನುಮತಿ ಕೊಡಿಸುವುದಕ್ಕೂ ಇದಕ್ಕೂ ಏನು ವ್ಯತ್ಯಾಸವಿದೆ.

ಇಷ್ಟೆಲ್ಲಾ ಅವಾಂತರ ಉಂಟಾದ ಅನಂತರ ಸಾರ್ವಜನಿಕರಿಂದ ಆಕ್ಷೇಪಗಳನ್ನು ಆಹ್ವಾನಿಸಿ ಅದರ ಆಧಾರದಲ್ಲಿ ಪರಿಷ್ಕರಣೆ ಮಾಡಿದ ಪಠ್ಯಪುಸ್ತಕಗಳನ್ನು ಮತ್ತೆ ಪರಿಷ್ಕರಣೆ ಮಾಡಿಸುವುದಾಗಿ ಸರಕಾರ ಹೇಳಿದೆ. ಇದಕ್ಕಿಂತ ಅವಿವೇಕ ಇನ್ನೊಂದಿಲ್ಲ. ಇದಕ್ಕೆ ತಗಲುವ ಕೋಟ್ಯಂತರ ರೂ.ಯನ್ನು ಯಾರು ಕಟ್ಟುತ್ತಾರೆ? ಜನತೆಯ ಬೊಕ್ಕಸದ ಹಣವನ್ನು ಈ ರೀತಿ ಬೇಕಾಬಿಟ್ಟಿಯಾಗಿ ಖರ್ಚು ಮಾಡಬಹುದೇ?
ಪಠ್ಯಪುಸ್ತಕ ಪರಿಷ್ಕರಣಾ ಕಾರ್ಯ ಪಾರದರ್ಶಕವಾಗಿ ನಡೆದಿಲ್ಲ. ಪರಿಶೀಲನಾ ಸಮಿತಿ ರಚನೆಗೆ ಸಂಬಂಧಿಸಿದ ಮಾಹಿತಿಯನ್ನು ವೆಬ್ ಸೈಟ್ ನಿಂದ ಅಳಿಸಿ ಹಾಕಲಾಗಿದೆ. ಈ ಹಗರಣ ಬಯಲಿಗೆ ಬಂದ ಅನಂತರ ಪರಿಷ್ಕರಣೆಗೊಂಡ ಪಠ್ಯಪುಸ್ತಕಗಳಲ್ಲಿನ ಎಲ್ಲಾ ಬರಹಗಳು ಹಾಗೂ ಮಾಹಿತಿಗೆ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಹೊಣೆಗಾರರು ಎಂದ ಘಟನೋತ್ತರ ಅನುಮತಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸರಕಾರ ಈ ರೀತಿ ಹೊಣೆ ಹಾರಿಸಿಕೊಳ್ಳುವುದು, ಜಾರಿಕೊಳ್ಳುವುದು ಪರಿಷ್ಕರಣಾ ಕಾರ್ಯದಲ್ಲಿ ಎಲ್ಲವೂ ಸರಿಯಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಸರಕಾರ ಈ ಅವಾಂತರಗಳಿಗೆ ತಾನು ಹೊಣೆಯಲ್ಲ ಎಂದು ಉಡಾಫೆಯಿಂದ ಹೇಳುವುದಾದರೆ ಪಠ್ಯಪುಸ್ತಕಗಳನ್ನು ಮರು ಮುದ್ರಿಸಬೇಕಾದ ಸಂದರ್ಭ ಬಂದರೆ ಅದಕ್ಕೆ ತಗಲುವ ಖರ್ಚು ವೆಚ್ಚಗಳನ್ನು ಭರಿಸುವವರಾರು? ಚಕ್ರತೀರ್ಥನ ಸಮಿತಿ ಭರಿಸುವುದೇ? ಇಲ್ಲ ಶಿಕ್ಷಣ ಸಚಿವ ನಾಗೇಶ್ ಭರಿಸುವರೇ?

ಹೋಗಲಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಪಡೆಯುವುದು ಎಷ್ಟರ ಮಟ್ಟಿಗೆ ಕಾರ್ಯ ಸಾಧ್ಯವಾಗುತ್ತದೆ? ಆಕ್ಷೇಪಣೆಗಳು ಬಂದು ಎಲ್ಲ ಸರಿ ಹೋಗುವವರೆಗೆ ಮಕ್ಕಳ ಶಿಕ್ಷಣದ ಗತಿ ಏನು? ಮಕ್ಕಳ ಪಠ್ಯ ಪುಸ್ತಕ ಪಕ್ಷದ ಪ್ರಣಾಳಿಕೆ ಅಲ್ಲ. ಆರೆಸ್ಸೆಸ್ ಶಾಖೆಯಲ್ಲಿ ಹೇಳುವ ಔರಂಗಜೇಬನ ಕಾಗಕ್ಕ ಗುಬ್ಬಕ್ಕನ ಕತೆಯಲ್ಲ. ಮಕ್ಕಳ ಪಠ್ಯಪುಸ್ತಕ ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಮನಃಶಾಸ್ತ್ರೀಯವಾಗಿ ಇರಬೇಕಾಗುತ್ತದೆ. ಚಕ್ರತಿರ್ಥನ ಸಮಿತಿ ಈ ಅಂಶಗಳನ್ನು ಕಡೆಗಣಿಸಿದ್ದಕ್ಕೆ ಈ ಅವಾಂತರ ಉಂಟಾಗಿದೆ. ಇನ್ನು ಸಾರ್ವಜನಿಕರ ಅಭಿಪ್ರಾಯ ಪಡೆಯಲು ಹೊರಟರೆ ಇನ್ನೊಂದು ವಿವಾದ ಉಂಟಾಗುತ್ತದೆ. ನಮ್ಮಲ್ಲಿ ಸಾವಿರದೈನೂರು ಜಾತಿಗಳಿವೆ. ನೂರಾರು ಸಂಘಟನೆಗಳಿವೆ. ವಿಭಿನ್ನ ಸಿದ್ಧಾಂತಗಳನ್ನು ಪ್ರತಿಪಾದಿಸುವ ಗುಂಪುಗಳಿವೆ. ಇವರನ್ನೆಲ್ಲ ಸಮಾಧಾನ ಮಾಡುವ, ಪಠ್ಯಪುಸ್ತಕ ರಚಿಸಲು ಸಾಧ್ಯವಾಗುವುದೇ? ಇದು ಎಲ್ಲರಿಗೂ ಒಪ್ಪಿತವಾಗಬಹುದೇ? ಇದಕ್ಕೆ ಕೊನೆಯಲ್ಲಿ?

ಶಾಲೆಗಳನ್ನು ಸಂಘದ ಶಾಖೆಗಳನ್ನಾಗಿ ಮಾಡಲು ಹೊರಟಾಗ ಇಂಥ ವಿವಾದಗಳುಂಟಾಗುತ್ತವೆ. ಸರಕಾರ ಸಂವಿಧಾನದ ಪ್ರಕಾರ ತಾನು ಮಾಡುವ ಕೆಲಸವನ್ನು ಬಿಟ್ಟು ನಾಗಪುರದ ಆದೇಶಗಳನ್ನು ಪಾಲಿಸುತ್ತಾ ಹೊರಟರೆ ಅದು ಸರಕಾರ ಎನಿಸಿಕೊಳ್ಳುವುದಿಲ್ಲ. ವರ್ತಮಾನದ ಜಗತ್ತಿನ ಸವಾಲುಗಳನ್ನು ಎದುರಿಸಲು ಮಕ್ಕಳನ್ನು ತಯಾರು ಮಾಡಬೇಕೇ ಹೊರತು ಚರಿತ್ರೆಯ ಗೋರಿಯನ್ನು ಅಗೆದು ಅದರಲ್ಲಿ ಮಕ್ಕಳ ಭವಿಷ್ಯವನ್ನು ಹುಗಿಯುವ ದುಸ್ಸಾಹಸಕ್ಕೆ ಅಧಿಕಾರದಲ್ಲಿ ಇರುವವರು ಕೈ ಹಾಕಬಾರದು.

ಇಷ್ಟೆಲ್ಲ ಅವಾಂತರಗಳು ನಡೆದರೂ ವೈದಿಕೇತರ ಮಠಾಧೀಶರಿಂದ ಬರಬೇಕಾದಷ್ಟು ಪ್ರತಿರೋಧ ಬಂದಿಲ್ಲ ಎಂಬುದು ವಿಷಾದದ ಸಂಗತಿ. ಸಾಣೆಹಳ್ಳಿ ಶ್ರೀಗಳ ನೇತೃತ್ವದಲ್ಲಿ ಸ್ವಾಮಿಗಳ ಒಂದು ಗುಂಪು ವಿರೋಧಿಸಿ ದ್ದೇನೋ ನಿಜ. ಆದರೆ ಮಠಾಧೀಶರ ಇನ್ನೊಂದು ಗುಂಪು ಮುತಾಲಿಕರನ್ನು ಕಟ್ಟಿಕೊಂಡು ಬಸವಕಲ್ಯಾಣದಲ್ಲಿರುವ ಪೀಠ 'ಪಾಶಾ ದರ್ಗಾ ಹಿಂದೆ ಅನುಭವ ಮಂಟಪವಾಗಿತ್ತು' ಎಂದು ವಿವಾದದ ಅಲೆ ಎಬ್ಬಿಸಲು ಹೊರಟಿದೆ. ಇದು ಸುಳ್ಳು, ಇದಕ್ಕೆ ಸಾಕ್ಷಗಳಿಲ್ಲ ಎಂದು ಬಾಲ್ಕಿಯ ಬಸವಲಿಂಗ ಪಟ್ಟದ ದೇವರು ಮತ್ತು ಲಿಂಗಾಯತ ಮಹಾಸಭಾ ಅಧ್ಯಕ್ಷ ಶಿವಾನಂದ ಜಾಮದಾರ್ ಹೇಳಿದರೂ ಕಿಡಿ ಹಚ್ಚುವ ಕೆಲಸ ಮುಂದುವರಿದಿದೆ.

ಒಂದಲ್ಲ, ಎರಡಲ್ಲ, ನೂರಾರು ಕುಯುಕ್ತಿಯ ಲೋಪಗಳು ಪರಿಷ್ಕೃತ ಪಠ್ಯಪುಸ್ತಕಗಳಲ್ಲಿವೆ. ಬುದ್ಧ, ಮಹಾವೀರ, ನಾರಾಯಣ ಗುರು, ಭಗತ್ ಸಿಂಗ್ ಹೀಗೆ ನೂರಾರು ಚೇತನ ಸ್ವರೂಪಿಗಳಿಗೆ ಅಪಚಾರ ಮಾಡಲಾಗಿದೆ. ಜನಿವಾರವನ್ನು ಕಿತ್ತೆಸೆದು ಕೂಡಲ ಸಂಗಮಕ್ಕೆ ಹೊರಟ ಬಸವಣ್ಣನವರ ಚರಿತ್ರೆಯನ್ನು ತಿರುಚಲಾಗಿದೆ. ದೇಹವೇ ದೇಗುಲ ಎಂದು ಗುಡಿ ಗುಂಡಾರಗಳನ್ನು ಧಿಕ್ಕರಿಸಿದ ಬಸವಣ್ಣನವರ ಸುತ್ತ ಮೌಢ್ಯದ ಹುತ್ತ ಕಟ್ಟಲಾಗಿದೆ. ಬೌದ್ಧ ಮತ್ತು ಜೈನ ಧರ್ಮಗಳು ವೈದಿಕಶಾಹಿಯ ವಿರುದ್ಧ ಬಂಡೆದ್ದ ಧರ್ಮಗಳೆಂಬುದನ್ನು ಮರೆ ಮಾಚಲಾಗಿದೆ.

ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪಕ್ಕೆ ಬೆಂಕಿ ಹಚ್ಚಿ, ವಚನದ ಕಟ್ಟುಗಳನ್ನು ಸುಟ್ಟು ಹಾಕಿದವರು, ಶರಣರ ಸಾಮೂಹಿಕ ಹತ್ಯೆ ಮಾಡಿದವರು ಈಗ ಅನುಭವ ಮಂಟಪದ ಹೆಸರಿನಲ್ಲಿ ಸೌಹಾರ್ದ ಬದುಕಿಗೆ ಕೊಳ್ಳಿ ಇಡಲು ಹೊರಟಿದ್ದಾರೆ. ಬಸವಕಲ್ಯಾಣದಲ್ಲಿ ಮುತಾಲಿಕರ ಪ್ರವೇಶವಾಗಿದೆ. ಅವರೊಂದಿಗೆ ಕೆಲ ಮಠಾಧೀಶರೂ ಸೇರಿದ್ದಾರೆ. ಇಂಥ ಸಂದರ್ಭದಲ್ಲಿ ಮಕ್ಕಳ ಮೆದುಳಿಗೆ ವಿಷಪ್ರಾಶನ ಮಾಡುವ ಮಸಲತ್ತೂ ನಡೆದಿದೆ. ಈ ಅಪಾಯದಿಂದ ಕರ್ನಾಟಕವನ್ನು ಪಾರು ಮಾಡಬೇಕಾಗಿದೆ.

ಆಕರ : ವಾರ್ತಾಭಾರತಿ ೧೩.೬.೨೦೨೨
Advertisement
Advertisement
Recent Posts
Advertisement