Advertisement

ಪರಿಷ್ಕೃತ ಪಠ್ಯದಲ್ಲಿ ಬಸವಣ್ಣ, ಅಂಬೇಡ್ಕರ್, ಸಾವಿತ್ರಿಬಾಯಿ ಪುಲೆ, ನಾರಾಯಣ ಗುರು, ಕುವೆಂಪು ಸೇರಿದಂತೆ ಹಲವಾರು ಮಹನೀಯರ ವ್ಯಕ್ತಿತ್ವವನ್ನು ಕಡೆಗಣಿಸಲಾಗಿದೆ: ಸಿದ್ದರಾಮಯ್ಯ ಕಿಡಿ

Advertisement
"ಹಿಂದೂ ಭಾವನೆಗೆ ಧಕ್ಕೆಯಾಗಿದ್ದಕ್ಕೆ ಪಠ್ಯಪರಿಷ್ಕರಣೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಈ ಹಿಂದೂಗಳು ಯಾರು? ಎನ್ನುವುದನ್ನು ಸನ್ಮಾನ್ಯ ಸಚಿವರು ಬಹಿರಂಗ ಪಡಿಸಿ, ಯಾವುದರಿಂದ ಯಾರ ಭಾವನೆಗೆ ಧಕ್ಕೆಯಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು" ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಅವರು ಇಂದು #WhoAreHindus ಹ್ಯಾಶ್‌ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡುವ ಮೂಲಕ ರಾಜ್ಯದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ಮಾಡಿದ ಪೂರ್ವಾಗ್ರಹ ಪೀಡಿತ ಇತಿಹಾಸ ತಿರುಚುವಿಕೆ ಮತ್ತು ಎಡವಟ್ಟುಗಳ ಬಗೆಗೆ ಕಿಡಿ ಕಾರಿದ್ದಾರೆ.

''ಪರಿಷ್ಕೃತ ಪಠ್ಯದಲ್ಲಿ ಬಸವಣ್ಣ, ಅಂಬೇಡ್ಕರ್, ಸಾವಿತ್ರಿಬಾಯಿ ಪುಲೆ, ನಾರಾಯಣ ಗುರು, ಕುವೆಂಪು ಸೇರಿದಂತೆ ಹಲವಾರು ಮಹನೀಯರ ವ್ಯಕ್ತಿತ್ವವನ್ನು ಕಡೆಗಣಿಸಲಾಗಿದೆ, ಇವರನ್ನು ಪರಿಷ್ಕೃತ ಸಮಿತಿಯ ಕಿಡಿಗೇಡಿ ಅಧ್ಯಕ್ಷ ತುಚ್ಛೀಕರಿಸಿದ್ದಾನೆ ಎಂದು ಪ್ರತಿಭಟಿಸುತ್ತಿರುವವರು ಅನ್ಯಧರ್ಮೀಯರಲ್ಲ, ಹಿಂದೂಗಳೇ ಅಲ್ವಾ ಸಚಿವರೇ?" ಎಂದವರು ಪ್ರಶ್ನಿಸಿದ್ದಾರೆ.

"ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿ ದಲಿತ ಮತ್ತು ಹಿಂದುಳಿದ ಜಾತಿಗಳ ವಿದ್ವಾಂಸರಿಗೆ ಪ್ರಾತಿನಿಧ್ಯವೇ ನೀಡಿಲ್ಲವಲ್ಲಾ? ಶಿಕ್ಷಣ ಸಚಿವರು ಕಾಳಜಿ ತೋರುತ್ತಿರುವ ಹಿಂದೂಗಳ ವ್ಯಾಖ್ಯಾನದಲ್ಲಿ ಈ ಸಮುದಾಯಗಳು ಸೇರಿಕೊಳ್ಳುವುದಿಲ್ಲವೇ? ಈ ಕಾರಣಕ್ಕಾಗಿ ಅವರಿಗೆ ಪ್ರಾತಿನಿಧ್ಯ ನೀಡಿಲ್ಲವೇ ಸಚಿವರೇ?" ಎಂದು ಕೇಳಿದ್ದಾರೆ.

"ಬಸವಣ್ಣ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತ್ಯಜಿಸಿದವರು ಎನ್ನುವ ಕಾರಣಕ್ಕೆ ಅವರನ್ನು ನಿರ್ಲಕ್ಷಿಸಲಾಯಿತೇ? ಅವಮಾನ ಮಾಡಲಾಯಿತೇ? ನಾರಾಯಣ ಗುರು, ಪೆರಿಯಾರ್, ಕುವೆಂಪು ಅವರು ಹಿಂದೂ ಧರ್ಮದ ದೋಷಗಳನ್ನು ಎತ್ತಿತೋರಿಸಿದ್ದಕ್ಕಾಗಿ ನಿರ್ಲಕ್ಷ್ಯ ಮಾಡಲಾಯಿತೇ? ಹಾಗೆಂದು ಹೇಳಿಬಿಡಿ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

"ಈ ದೇಶದ ಬಡವರಲ್ಲಿ ಬಹುಸಂಖ್ಯೆಯಲ್ಲಿರುವುದು ಹಿಂದೂ ಧರ್ಮದಲ್ಲಿರುವ ದಲಿತರು ಮತ್ತು ಹಿಂದುಳಿದ ಜಾತಿಗಳು. ಸರ್ಕಾರಿ ಶಾಲೆಗಳಲ್ಲಿ ಈ ಮಕ್ಕಳ ಸಂಖ್ಯೆಯೇ ಹೆಚ್ಚು. ಬುದ್ಧ, ಬಸವ, ಅಂಬೇಡ್ಕರ್, ಸಾವಿತ್ರಿಬಾಯಿ ಪುಲೆ, ನಾರಾಯಣ ಗುರು, ಕುವೆಂಪು ಅವರಿಗೆ ಆಗಿರುವ ಅವಮಾನದಿಂದ ಈ ಮಕ್ಕಳ ಭಾವನೆಗೂ ಧಕ್ಕೆಯಾಗಿದೆಯಲ್ವಾ?" ಎಂದು ಕೇಳಿದ್ದಾರೆ.

"ವಿಕೃತ ಮನಸ್ಸಿನ ಕಿಡಿಗೇಡಿ ಅಧ್ಯಕ್ಷ ತಯಾರಿಸಿರುವ ಪರಿಷ್ಕೃತ ಪಠ್ಯದಿಂದ ಬಹುಸಂಖ್ಯಾತ ಹಿಂದೂಗಳ ಮನಸ್ಸಿಗೆ ಮಾತ್ರವಲ್ಲ, ರಾಜ್ಯದ ಆರೂವರೆ ಕೋಟಿ ಕನ್ನಡಿಗರ ಮನಸ್ಸಿಗೆ ಘಾಸಿಯಾಗಿದೆ. ಕನ್ನಡಿಗರ ಸಹನೆಯನ್ನು ಪರೀಕ್ಷಿಸಲು ಹೋಗಬೇಡಿ, ಮೊದಲು ಈ ಪರಿಷ್ಕೃತ ಪಠ್ಯವನ್ನು ಕಸದ ಬುಟ್ಟಿಗೆ ಎಸೆಯಿರಿ." ಎಂದವರು ಆಗ್ರಹಿಸಿದ್ದಾರೆ.
Advertisement
Advertisement
Recent Posts
Advertisement