Advertisement

''ಆರೆಸ್ಸೆಸ್ -ನಿಷೇಧವೆಂಬ ಮೂರು ಪ್ರಸಂಗಗಳು'' ಮತ್ತದಕ್ಕೆ ಕಾರಣವಾದ ಸರಣಿ ಘಟನೆಗಳು

Advertisement

ಆರೆಸ್ಸೆಸ್ ನಿಷೇಧವೆಂಬ ಮೂರು ಪ್ರಸಂಗಗಳು

- ಮೂರು ಪ್ರಹಸನಗಳು

ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)

ಮನಶಾಸ್ತ್ರದ ಪ್ರಕಾರ ಯಾರಿಗೆ ಯಾವುದರ ಕೊರತೆಯಿರುತ್ತದೋ ಅಥವಾ ಯಾವುದರ ಬಗ್ಗೆ ಕೀಳರಿಮೆ ಇರುತ್ತದೋ ಅದರ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಹೇಡಿಗಳು ಶೌರ್ಯದ ಬಗ್ಗೆ ಹೆಚ್ಚು ಕೊಚ್ಚಿಕೊಳ್ಳುವಂತೆ.

ಸ್ವಾತಂತ್ರ್ಯ ಹೋರಾಟದ ಬಗ್ಗೆ ಮತ್ತು ಸ್ವಾತಂತ್ರ್ಯದ 75 ನೇ ವರ್ಷದ ಆಚರಣೆಯ ಬಗ್ಗೆ ಆರೆಸ್ಸೆಸ್- ಬಿಜೆಪಿ ದೇಶಾದ್ಯಂತ ಮಾಡುತ್ತಿರುವ ಹುಸಿ ಅಬ್ಬರಗಳು ಹಾಗೂ ಪ್ರತಿ ವರ್ಷ ಜೂನ್ ತಿಂಗಳಲ್ಲಿ ತುರ್ತುಪರಿಸ್ಥಿತಿಯ ಹೇರಿಕೆಯ ಬಗ್ಗೆ ಮತ್ತು ಪ್ರಜಾತಂತ್ರದ ಪ್ರಧಾನಿಯಾದಿಯಾಗಿ ಇಡಿ ಸಂಘಪರಿವಾರ ಮಾಡುವ ಗದ್ದಲಗಳು ಅಂಥಾ ಧೋರಣೆಗಳಿಗೆ ಒಂದು ಉದಾಹರಣೆ.

ಏಕೆಂದರೆ ಸ್ವಾತಂತ್ರ್ಯ ಹೋರಾಟದಲ್ಲಿ ಸಂಘಪರಿವಾರ ಪಾತ್ರ ಶೂನ್ಯ ಮಾತ್ರವಲ್ಲ. ದೇಶದ್ರೋಹಿತನದಿಂದಲೂ ಕೂಡಿತ್ತು. ಬ್ರಿಟಿಷರ ಪರವಾಗಿತ್ತು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಹೇರಿಕೆಯಾದ ಸರ್ವಾಧಿಕಾರದ ಭಾಗವಾಗಿ ಬಂಧನಕ್ಕೊಳಗಾದರೂ ಆರೆಸ್ಸೆಸ್ ನ ನಾಯಕರ ಪಾತ್ರ ಅತ್ಯಂತ ಹೇಡಿತನದಿಂದ ಮತ್ತು ರಾಜಿಕೋರತನದಿಂದ ಕೂಡಿತ್ತು ಎಂಬುದನ್ನು ಇತಿಹಾಸದ ದಾಖಲೆಗಳು ಸ್ಪಷ್ಟಪಡಿಸುತ್ತವೆ.

ಸಂಘಪರಿವಾರವು ತನ್ನ ಶೌರ್ಯ ಮತ್ತು ಸಾಹಸಗಳ ಹುಸಿಗಾಥೆಯನ್ನು ತನ್ನ ಈ ಪೀಳಿಗೆಯಕಾರ್ಯಕರ್ತರಿಗೆ ಹಾಗೂ ದೇಶಕ್ಕೆ ಪರಿಚಯಿಸುವಾಗ ಆರೆಸ್ಸೆಸ್ ಮೂರು ಬಾರಿ ನಿಷೇಧಕ್ಕೊಳಗಾಗಿದ್ದು ಮತ್ತು ಅದರ ನಡುವೆಯೂ ಅವರ ನಾಯಕರು ವೀರೋಚಿತವಾಗಿ ಹೋರಾಡಿದ ಕಥೆಯನ್ನು ಹೇಳುತ್ತಾರೆ.

ನಿಷೇಧವೋ? ಜೀವದಾನವೋ?

ಆದರೆ ಸರ್ಕಾರಗಳು ಯಾವುದಾದರೂ ಸಂಘ ಸಂಸ್ಥೆಯನ್ನು ಏಕೆ ನಿಷೇಧಿಸುತ್ತವೆ?
ಇತಿಹಾಸವು ತಿಳಿಸುವಂತೆ ಆಳುವ ವರ್ಗಗಳ ಅಸ್ಥಿತ್ವಕ್ಕೆ, ಅವರ ಹಿತಾಸಕ್ತಿಗೆ ಧಕ್ಕೆ ತರುವಷ್ಟು ಜನಚಳವಳಿಗಳು ತೀವ್ರಗತಿಯನ್ನು ಪಡೆದುಕೊಂಡಾಗ ಅಂಥಾ ಚಳವಳಿಗಳನ್ನು, ಸಂಘಟನೆಗಳನ್ನೂ, ಪಕ್ಷಗಳನ್ನೂ ಹಾಗೂ (2019ರಲ್ಲಿ ಯುಎಪಿಎ ಗೆ ಮೋದಿ ಸರ್ಕಾರ ತಿದ್ದುಪಡಿ ತಂದ ನಂತರ) ವ್ಯಕ್ತಿಗಳನ್ನೂ ಆಳುವ ಸರ್ಕಾರ ನಿಷೇಧಿಸುತ್ತದೆ. ಅದೇ ರೀತಿ ಸರ್ಕಾರ ಹಾಗೂ ಸರ್ಕಾರದ ಮೇಲೆ ನಿಯಂತ್ರಣ ಹೊಂದಿರುವ ಶಕ್ತಿಗಳು ಬಯಸದ ವಿದ್ಯಮಾನಗಳಿಂದಾಗಿ ಹಾಲಿ ಇರುವ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಒದಗುತ್ತಿದೆ ಎಂದು ಸರ್ಕಾರ ಭಾವಿಸಿದಾಗಲೂ ಸಂಘ- ಸಂಸ್ಥೆಗಳನ್ನು, ಅವರ ಸಿದ್ಧಾಂತಗಳ ಪ್ರಚಾರಗಳನ್ನು ನಿಷೇಧಿಸುತ್ತವೆ. ಆ ಸಂಸ್ಥೆಗಳ ಕಾರ್ಯಕರ್ತರನ್ನು ಹಲವು ವರ್ಷಗಳ ಕಾಲ ವಿಚಾರಣೆಯನ್ನು ಮಾಡದೆ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತವೆ ಆಥವಾ ನಕಲಿ ಎನ್‌ಕೌಂಟರ್‌ಗಳಲ್ಲಿ ಕೊಂದುಹಾಕುತ್ತವೆ. ಭೀಮಾ- ಕೊರೆಗಾಂವ್ ಪ್ರಕರಣ ಕಣ್ಣಮುಂದಿರುವ ಹಲವಾರು ನಿದರ್ಶನಗಳಲ್ಲಿ ಒಂದು.

ಆದರೆ ಅಸ್ಥಿತ್ವದಲ್ಲಿರವ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿ ವ್ಯವಸ್ಥೆಯನ್ನು , ಆಳುವ ವರ್ಗಗಳನ್ನು ರಕ್ಷಿಸಲೆಂದೇ ಅವತರಿಸಿರುವ ಆರೆಸ್ಸೆಸ್ ಕೂಡಾ ಸ್ವಾತಂತ್ರ್ಯಾ ನಂತರದಲ್ಲಿ ಕೂಡಾ ಮೂರು ಬಾರಿ ನಿಷೇಧಕ್ಕೊಳಗಾಗಿದೆ.

ಹಾಗಿದ್ದಲ್ಲಿ ಈ ನಿಷೇಧವನ್ನು ಹೇಗೆ ಅರ್ಥಮಾಡಿಕೊಳ್ಳುವುದು?

ಮೂರೂ ಬಾರಿ ಅದನ್ನು ನಿಷೇಧಿಸಿದ್ದು ಅದರ ರಾಜಕೀಯ ವೈರಿ ಎಂದು ಹೇಳಲ್ಪಡುವ ಕಾಂಗ್ರೆಸ್ಸೇ.
ಆದರೆ ಈ ಮೂರೂ ಸಂದರ್ಭಗಳನ್ನು ಗಮನಿಸಿದರೆ ಇತರ ಸರ್ಕಾರ ವಿರೋಧಿ ಸಂಘಟನೆಗಳಂತೆ "ಆರೆಸ್ಸೆಸ್ ಕೂಡಾ ನಿಷೇಧವಾಯಿತು" ಎಂದಾಗಲೀ, "ಕಾಂಗ್ರೆಸ್ ಆರೆಸ್ಸೆಸ್ಸನ್ನು ನಿಷೇಧಿಸಿತು" ಎಂದಾಗಲಿ ಹೇಳಲು ಸಾಧ್ಯವೇ ಇಲ್ಲ! ಅವೆಲ್ಲವೂ ಅಯಾ ಸಂದರ್ಭಗಳಲ್ಲಿ ಉಕ್ಕೇರಿದ ಜನವಿರೋಧದ ಒತ್ತಡಗಳಿಗೆ ಮಣಿದು ತೆಗೆದುಕೊಂಡ ತಾತ್ಕಾಲಿಕ ಅರೆಮನಸ್ಸಿನ ಕ್ರಮಗಳು ಮಾತ್ರ ಎಂಬುದು ಸ್ಪಷ್ಟವಾಗುತ್ತದೆ. ಹಾಗೆಯೇ ಕಾಂಗ್ರೆಸ್ ಆಗಲೀ, ಅದರ ಜೊತೆ ಅಧಿಕಾರ ಹಂಚಿಕೊಂಡಿದ್ದ ಇತರ ಯಾವುದೇ ಪಕ್ಷಗಳಾಗಲೀ ಆರೆಸ್ಸೆಸ್ ಮತ್ತದರ ಸಿದ್ಧಾಂತಗಳನ್ನು ಭಾರತೀಯ ಪ್ರಜಾತಂತ್ರಕ್ಕಿರುವ ಸವಾಲೆಂದು ಪರಿಗಣಿಸಿಯೇ ಇರಲಿಲ್ಲವೆಂಬುದೂ ಕೂಡಾ ಸ್ಪಷ್ಟವಾಗುತ್ತದೆ.

ಹೀಗಾಗಿ ಆರೆಸ್ಸೆಸ್ ನಿಷೇಧವೆಂಬುದು ಭಾರತದ ರಾಜಕಾರಣದ ಮೂರು ಪ್ರಹಸನಗಳೆಂಬಂತೆಯೇ ಕಾಣುತ್ತವೆ.
ಮೂರೂ ನಿಷೇಧಗಳ ಇತಿಹಾಸವನ್ನು ಸ್ವಲ್ಪ ವಿವರವಾಗಿ ನೋಡೋಣ..

ಆರೆಸ್ಸೆಸ್ ನಿಷೇಧ -1

(1948-49)

ಬ್ರಾಹ್ಮಣಶಾಹಿ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾದ ಸಕ್ರಿಯ ಕಾರ್ಯಕರ್ತನಾಗಿದ್ದ ನಾಥೂರಾಮ್ ಗೂಡ್ಸೆ ಎಂಬ ಸ್ವತಂತ್ರ ಭಾರತದ ಮೊಟ್ಟಮೊದಲ ಭಯೋತ್ಪಾದಕ 1948ರ ಜನವರಿ 30ರಂದು ಸಂಜೆ 5.30ರ ಸುಮಾರಿಗೆ ದೆಹಲಿಯಲ್ಲಿ ಗಾಂಧಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ. ಕೊಂದ ಕೈಗಳು ಆತನದ್ದಾಗಿದ್ದರೂ ಅದರ ಹಿಂದಿದ್ದ ಮಿದುಳು ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾವೇ ಆಗಿತ್ತು. ತಾಂತ್ರಿಕವಾಗಿ ಗೋಡ್ಸೆ ಆರೆಸ್ಸೆಸ್ ನ ಸದಸ್ಯ ಅಲ್ಲ ಎಂದು ಅರೆಸ್ಸೆಸ್ಸ್ ಆಗ ವಾದಿಸಿದರೂ ಈಗ ಸಂಘಪರಿವಾರದ ಎಲ್ಲಾ ಅಂಗಸಂಸ್ಥೆಗಳೂ ಈಗ ಅವನನ್ನು ತನ್ನ ಮಾರ್ಗದರ್ಶಿ ಎಂದೇ ಬಹಿರಂಗವಾಗಿ ಒಪ್ಪಿಕೊಳ್ಳುತ್ತಿವೆ. ಗಾಂಧಿಯನ್ನು ಕೊಂದ ನಂತರವಂತೂ ಆರೆಸ್ಸೆಸ್ ನ ಎಲ್ಲ ಶಾಖೆಗಳಲ್ಲೂ ಸಿಹಿ ಹಂಚಿ ಸಮಾರಂಭಗಳನ್ನು ಏರ್ಪಡಿಸಲಾಗಿತ್ತು. ಹೀಗಾಗಿ 1949ರ ಫೆಬ್ರವರಿಯಲ್ಲಿ ಹಿಂದೂ ಮಹಾಸಭಾದ ಮುಖ್ಯಸ್ಥ ಸಾವರ್ಕರ್ ರನ್ನು ಬಂಧಿಸಲಾಯಿತಲ್ಲದೇ ಆರೆಸ್ಸೆಸ್ಸನ್ನು ನಿಷೇಧಿಸಿ ಅದರ ಸರಸಂಘಚಾಲಕ ಗೋಳ್ವಾಲ್ಕರ್ ಅವರನ್ನೂ ಒಳಗೊಂಡಂತೆ ಹಲವಾರು ಆರೆಸ್ಸೆಸ್ ಕಾರ್ಯಕರ್ತರನ್ನು ಬಂಧಿಸಲಾಯಿತು. ಇದೇ ಗುಂಪು 1948 ಕ್ಕೂ ಮುನ್ನ ಆರು ಬಾರಿ ಗಾಂಧಿಯವರ ಮೇಲೆ ಹತ್ಯಾ ಪ್ರಯತ್ನಗಳನ್ನು ನಡೆಸಿತ್ತು. ಸ್ವತಂತ್ರ ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾಗಳ ಪ್ರಯತ್ನಕ್ಕೆ ಗಾಂಧಿ ಅಡ್ಡಿಯಾಗಿದ್ದದ್ದು ಅದಕ್ಕೆ ಪ್ರಮುಖ ಕಾರಣ.

ಆದರೆ ಭಾರತವು ಒಂದು ಹಿಂದೂ ಬಹುಸಂಖ್ಯಾತ ರಾಷ್ಟ್ರವಾಗಬೇಕೆಂಬ ಆಸೆ ಇದ್ದದ್ದು ಕೇವಲ ಆರೆಸ್ಸೆಸ್ಸಿಗೆ ಮಾತ್ರವಲ್ಲ. ಕಾಂಗ್ರೆಸ್ಸಿನಲ್ಲಿದ್ದ ಮದನ ಮೋಹನ ಮಾಳವೀಯರಂತ ನಾಯಕರಿಗೂ ಅದೇ ಆಸೆಯಿತ್ತು. ಆಗಿನ ಉಪಪ್ರಧಾನಿ ಮತ್ತು ಗೃಹಮಂತ್ರಿ ವಲ್ಲಭಭಾಯಿ ಪಟೇಲ್‌ರಂತವರಿಗೆ ಸ್ವತಂತ್ರ ಭಾರತದಲ್ಲಿ ಮುಸ್ಲಿಮರಿಗೆ ಅವರ ಜಾಗವನ್ನು ತೋರಿಸಲು ಸಹಾಯ ಮಾಡುವ ಆರೆಸ್ಸೆಸ್‌ನ ಸಿದ್ಧಾಂತ ಮತ್ತು ಸಂಘಟನೆಯ ಬಗ್ಗೆ ಆಳವಾದ ಮಮತೆಯೇ ಇತ್ತು. ವಾಸ್ತವವಾಗಿ ವಿಭಜನೆಯ ನಂತರದಲ್ಲಿ ಭಾರತ ಸರ್ಕಾರವು ಹಿಂದೂ ರಕ್ಷಣೆಯ ಹೆಸರಲ್ಲಿ ಅಧಿಕೃತವಾಗಿ ಮತ್ತು ಅನಧಿಕೃತವಾಗಿ ಆರೆಸ್ಸೆಸ್ಸಿಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿತ್ತು. ಅಲ್ಲದೆ ಭಾರತದೊಡನೆ ವಿಲೀನಕ್ಕೆ ಒಪ್ಪಲು ಕಾಶ್ಮೀರದ ರಾಜನ ಮನ ಒಲಿಸುವಂತೆ ಗೋಳ್ವಾಲ್ಕರ್ ಅವರಿಗೆ ಪಟೇಲರು ಅಧಿಕೃತವಾಗಿಯೇ ಕೇಳಿಕೊಂಡಿದ್ದರು. ಹೀಗಾಗಿ ಆರೆಸ್ಸೆಸ್ಸಿನ ಹಿಂದೂತ್ವವಾದಿ ತೀವ್ರಗಾಮಿ ಚಟುವಟಿಕೆಗಳಿಗೆ ಸರ್ಕಾರದಲ್ಲಿ ಮತ್ತು ಕಾಂಗ್ರೆಸ್ಸಿನ ಒಂದು ವರ್ಗದಲ್ಲಿ ವಿಶೇಷ ಮಾನ್ಯತೆಯೇ ಇತ್ತು. ಈಗ ಆರೆಸ್ಸೆಸ್ಸಿಗರು ವಲ್ಲಭಭಾಯಿ ಪಟೇಲರನ್ನು ನೆಹರೂಗೆ ಪ್ರತಿನಾಯಕರಾಗಿ ಹಾಗೂ ತಮ್ಮ ಹಿಂದೂತ್ವ ರಾಜಕಾರಣದ ಐಕಾನ್ ಆಗಿ ಮಾಡಿಕೊಳ್ಳುತ್ತಿರುವುದು ಸುಮ್ಮನೇ ಏನಲ್ಲ.
ಆದರೆ ಗಾಂಧಿ ಹತ್ಯೆಯ ನಂತರದಲ್ಲಿ ಕಾಂಗ್ರೆಸ್ ಸರ್ಕಾರ ಆರೆಸ್ಸೆಸನ್ನು ನಿಷೇಧಿಸದೆ ಗತ್ಯಂತರವಿರಲಿಲ್ಲ.
ಆದರೆ ಆಗ ಭಾರತದ ಗೃಹಮಂತ್ರಿಯಾಗಿದ್ದದ್ದು ಆರೆಸ್ಸೆಸ್ ಬಗ್ಗೆ ವಿಶೇಷ ಮಮತೆಯಿದ್ದ ಪಟೇಲರೇ.
ಆದರೂ ಆರೆಸ್ಸನ್ನು ನಿಷೇಧ ಮಾಡಿದ್ದು ಪಟೇಲರೇ ಆದ್ದರಿಂದ ಅವರು ಆರೆಸ್ಸೆಸ್ ವಿರೋಧಿಯಾಗಿದ್ದರು ಎಂಬ ವಾದವನ್ನು ಪ್ರಗತಿಪರರು ಮುಂದಿಡುತ್ತಿದ್ದಾರೆ.

ಇದು ಸುಳ್ಳಲ್ಲ. ಆದರೆ ಪೂರ್ತಿ ನಿಜವೂ ಅಲ್ಲ.

ಗಾಂಧಿ ಹತ್ಯೆಯು ಪಟೇಲರನ್ನು ಒಳಗೊಂಡಂತೆ ಎಲ್ಲಾ ಕಾಂಗ್ರೆಸ್ಸಿಗರನ್ನು ದಿಗ್ಭ್ರಾಂತಗೊಳಿಸಿದ್ದು ನಿಜವಾಗಿರಬಹುದು. ಆದರೆ ಅದರ ನೆಪದಲ್ಲಿ ಆರೆಸ್ಸೆಸ್‌ನ ಚಟುವಟಿಕೆಗಳ ಮೇಲೆ ಪರಿಣಾಮಕಾರಿ ನಿಷೇಧವನ್ನು ಹೇರುವುದು ಪಟೇಲರಿಗೂ, ಆಗಿನ ಮುಂಬೈ ಪ್ರಾಂತ್ಯದ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದ ಮೊರಾರ್ಜಿ ದೇಸಾಯಿಯಂತವರಿಗೂ ಬಿಲ್‌ಕುಲ್ ಇಷ್ಟವಿರಲಿಲ್ಲ. ಹೀಗಾಗಿ ಆರೆಸ್ಸೆಸ್ ತನಗೊಂದು ಸಂವಿಧಾನವನ್ನು ಬರೆದುಕೊಂಡು ತನ್ನದು ರಾಜಕೀಯ ಸಂಘಟನೆಯಲ್ಲವೆಂದು ಸಾರಿದರೆ ಸಾಕು ನಿಷೇಧವನ್ನು ತೆಗೆಯಬಹುದೆಂದು ಸ್ವಯಂ ಪಟೇಲರೇ ಬಂಧನದಲ್ಲಿದ್ದ ಗೋಲ್ವಾಲ್ಕರ್ ರವರೊಂದಿಗೆ ಪ್ರಾರಂಭಿಸುತ್ತಾರೆ. ಈ ಮಾತುಕತೆಯ ಪ್ರಕ್ರಿಯೆಯಲ್ಲಿ ಗೋಳ್ವಾಲ್ಕರ್ ಅವರು 1948ರ ಸೆಪ್ಟೆಂಬರ್ 24ರಂದು ಪಟೇಲರಿಗೆ ಪತ್ರವೊಂದನ್ನು ಬರೆದು:

" ತಾವು ತಮ್ಮ ಸರ್ಕಾರದ ಶಕ್ತಿಯೊಂದಿಗೆ ಹಾಗೂ ನಾವು ನಮ್ಮ ಸಂಘಟಿತ ಸಾಂಸ್ಕೃತಿಕ ಶಕ್ತಿಯೊಂದಿಗೆ ಜೊತೆಗೂಡಿ ಕೆಲಸ ಮಾಡಿದರೆ ನಮ್ಮ ಮುಂದಿರುವ ಕಮ್ಯುನಿಸ್ಟ್ ಪೀಡೆಯನ್ನು ನಿರ್ನಾಮ ಮಾಡಬಹುದು" ಎಂದು ಆಶ್ವಾಸನೆ ನೀಡುತ್ತಾರೆ.

ಇದು ಕಾಂಗ್ರೆಸ್ಸಿನಲ್ಲಿದ ಒಂದು ಪ್ರಭಾವಶಾಲಿ ಗುಂಪಿಗೂ ಹಾಗೂ ಆರೆಸ್ಸೆಸ್ಸಿಗೂ ಇದ್ದ ಸೈದ್ಧಾಂತಿಕ ಸಾಮೀಪ್ಯ.

ಅದರಂತೆ ಆರೆಸ್ಸೆಸ್ ಭಾರತದ ಗೃಹ ಇಲಾಖೆಯು ಸೂಚಿಸಿದ ಯಾವ ಮಹತ್ತರ ಮಾರ್ಪಾಡುಗಳನ್ನು ಮಾಡಿಕೊಳ್ಳದೆ ಸಂವಿಧಾನವನ್ನು ರಚಿಸಿಕೊಳ್ಳುತ್ತದೆ. ಅದನ್ನೇ ನೆಪವಾಗಿಟ್ಟುಕೊಂಡು ಸರ್ಕಾರ ಅದರ ಮೇಲಿನ ನಿಷೇಧವನ್ನು ತೆಗೆಯುತ್ತದೆ. ನಂತರ 1949ರ ಅಕ್ಟೋಬರ್‌ನಲ್ಲಿ ನೆಹರೂ ವಿದೇಶ ಪ್ರವಾಸಕ್ಕೆ ತೆರಳಿದ್ದಾಗ ನಡೆದ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಕಾಂಗ್ರೆಸ್ಸಿನ ಸದಸ್ಯರಾಗಬಹುದೆಂಬ ತೀರ್ಮಾನವನ್ನು ತರಾತುರಿಯಲ್ಲಿ ಪಟೇಲರು ಮಾಡಿಸುತ್ತಾರೆ. ಆದರೆ ನೆಹರೂ ಹಿಂತಿರುಗಿದ ನಂತರದ 1949ರ ನವಂಬರ್‌ನಲ್ಲಿ ನಡೆದ ಸಭೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತರು ತಮ್ಮ ಆರೆಸ್ಸೆಸ್ ಸದಸ್ಯತ್ವವನ್ನು ತೊರೆದು ಕಾಂಗ್ರೆಸ್ ಸದಸ್ಯರಾಗಬಹುದೆಂಬ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ.

ಹೆಚ್ಚಿನ ವಿವರಗಳಿಗೆ ಅಸಕ್ತರು ಪಟೇಲ್ ಮತ್ತು ಗೋಳ್ವಲ್ಕರ್ ನಡುವೆ ಆರೆಸ್ಸೆಸ್ ಮಧ್ಯವರ್ತಿ ಏಕನಾಥ್ ರಾನಡೆಯ ಮೂಲಕ ನಡೆದ ಪತ್ರ ವಿನಿಮಯಗಳನ್ನು ಗಮನಿಸಬಹುದು. ಅಥವಾ ಆರೆಸ್ಸೆಸ್ ಇತಿಹಾಸದ ಅಧಿಕೃತ ದಾಖಲೆಯೆಂದು ಆರೆಸ್ಸೆಸ್ ಹಾಗೂ ವಿದ್ವಾಂಸರೂ ಒಪ್ಪಿಕೊಳ್ಳುವ ವಾಲ್ಟರ್ ಆಂಡರ್ಸೆನ್ ಮತ್ತು ಶ್ರೀಧರ್ ದಾಮ್ಲೆ ಅವರು ಬರೆದಿರುವ " Brotherhood In Saffron" ಪುಸ್ತಕವನ್ನೂ ಗಮನಿಸಬಹುದು. ಅಥವಾ ಈ ವಿಷಯದ ಬಗ್ಗೆ ಸಂಕ್ಷಿಪ್ತ ಮಾಹಿತಿ ಕೊಡುವ ಈ ಲೇಖನವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು :
https://caravanmagazine.in/extract/gandhi-assassination-rss-vallabhbhai-golwalkar

ಆರೆಸ್ಸೆಸ್ ನಿಷೇಧ -2

(1975-77)

ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತುಸ್ಥಿತಿಯನ್ನು ಹೇರಿದಾಗ ತಮ್ಮನ್ನು ವಿರೋಧಿಸುತ್ತಿದ್ದ ಎಲ್ಲಾ ವಿರೋಧಪಕ್ಷಗಳ ಮೇಲೆ ನಿಷೇಧ ಹೇರಿ ಸರ್ವಾಧಿಕಾರವನ್ನು ಜಾರಿ ಮಾಡಿದ್ದರು. ಆ ಸಮಯದಲ್ಲಿ ಇತರ ವಿರೋಧ ಪಕ್ಷಗಳು ಜೈಲುಪಾಲಾಗಿ ತಮ್ಮ ರಾಜಕೀಯ ಹಕ್ಕುಗಳನ್ನು ಕಳೆದುಕೊಂಡಿದ್ದು ನಿಜವಾದರೂ ತುರ್ತುಸ್ಥಿತಿಯ ಕ್ರೂರ ದಮನಕ್ಕೆ ಬಲಿಯಾದದ್ದು ರೈತಾಪಿ, ಕಾರ್ಮಿಕರು ಮತ್ತು ಎಡಪಂಥೀಯ ವಿದ್ಯಾರ್ಥಿಗಳು ಹಾಗೂ ನಾಯಕರು. ಇಂಥಾ ಸಾವಿರಾರು ಕಾರ್ಯಕರ್ತರು ದೇಶಾದ್ಯಂತ ಪೊಲೀಸರ ಗುಂಡಿಗೆ ಬಲಿಯಾದರು.

ಇಂದಿರಾಗಾಂಧಿಯನ್ನು ವಿರೋಧಿಸಿದ ಕಾರಣಕ್ಕೆ ಆರೆಸ್ಸೆಸ್ ಕೂಡಾ ಆಗ ಎರಡನೇ ಬಾರಿಗೆ ನಿಷೇಧಕ್ಕೊಳಗಾಯಿತು. 1975ರ ಜುಲೈನಲ್ಲಿ ನಿಷೇಧಕ್ಕೆ ಗುರಿಯಾದ ಆರೆಸ್ಸೆಸ್ಸಿನ ಆಗಿನ ಸರಸಂಘಚಾಲಕ ಬಾಳಾಸಾಹೇಬ್ ದೇವರಸ್ ಅವರು 1975ರ ಆಗಸ್ಟ್ ನಿಂದಲೇ ಇಂದಿರಾಗಾಂಧಿಯವರಿಗೆ ಪತ್ರವನ್ನು ಬರೆಯಲು ಪ್ರಾರಂಭಿಸಿ ಗಾಂಧಿಯವರ ಸರ್ವಾಧಿಕಾರಿ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಆರೆಸ್ಸೆಸ್ ಬಗ್ಗೆ ಸರ್ಕಾರಕ್ಕೆ ತಪ್ಪು ಅಭಿಪ್ರಾಯ ಇದೆಯೆಂದೂ, ತಾವು ಇಂದಿರಾಗಾಂಧಿಯವರ ಜೊತೆಗೆ ಹೆಜ್ಜೆ ಹಾಕಲು ಸಿದ್ಧವೆಂದು ಹೇಳುತ್ತಾ ಆರೆಸ್ಸೆಸ್ ಮೇಲಿನ ನಿಷೇಧವನ್ನು ಎತ್ತಿಹಾಕಲು ಗೋಗೆರೆಯಲು ಪ್ರಾರಂಭಿಸಿದರು.

ಈ ರೀತಿ ಮೂರು ಪತ್ರಗಳನ್ನು ಬರೆದರೂ ಗಾಂಧಿಯವರಿಂದ ಯಾವ ಉತ್ತರವೂ ಬರದೇ ಹೋದಾಗ ಕಡು ಕಮ್ಯುನಿಸ್ಟ್ ವಿರೋಧಿಯೂ ಹಾಗೂ ಆರೆಸ್ಸೆಸ್‌ನ ಹಿತೈಷಿಯೂ ಮತ್ತು ಇಂದಿರಾಗಾಂಧಿಯವರ ಅಭಿಮಾನಿಯೂ ಆಗಿದ್ದ ವಿನೋಭಾ ಭಾವೆಯವರ ಮಧ್ಯಪ್ರವೇಶವನ್ನು ಆರೆಸ್ಸೆಸ್ ಕೋರಿತು.

ಈ ಎಲ್ಲದರ ಪರಿಣಾಮವಾಗಿ ಆರೆಸ್ಸೆಸ್‌ನ ಮೇಲೆ ಅಧಿಕೃತವಾಗಿ ಬ್ಯಾನ್ ತೆಗೆಯದಿದ್ದರೂ ಆರೆಸ್ಸೆಸ್ ನ ಬಹುಪಾಲು ಕಾರ್ಯಕರ್ತರು ಮಾತ್ರ ಬಿಡುಗಡೆಯಾದರು. ಆರೆಸ್ಸೆಸ್‌ನ ಸರಸಂಘಚಾಲಕ ದೇವರಸ್ ಮತ್ತು ಇಂದಿರಾ ಗಾಂಧಿಯವರ ಈ ರಾಜಕೀಯ ಮೈತ್ರಿ 1980ರಲ್ಲಿ ಅವರು ಮತ್ತೆ ಪ್ರಧಾನಿಯಾದ ನಂತರವೂ ಮುಂದುವರೆಯಿತು. ಈ ಅವಧಿಯಲ್ಲಿ ಇಂದಿರಾಗಾಂಧಿ ಸರ್ಕಾರ ಪಂಜಾಬಿನಲ್ಲಿ ಸಿಖ್ ಉಗ್ರಗಾಮಿತ್ವವನ್ನು ಹತ್ತಿಕ್ಕುವ ಹೆಸರಲ್ಲಿ ತೆಗೆದುಕೊಂಡ ಎಲ್ಲಾ ಬರ್ಬರ ದಮನಕಾರಿ ಕ್ರಮಗಳನ್ನು ಆರೆಸ್ಸೆಸ್ ಬೆಂಬಲಿಸಿತಲ್ಲದೆ ಇಂದಿರಾಗಾಂಧಿಯವರ ಹತ್ಯೆಯಾದ ನಂತರದಲ್ಲಿ ನಡೆದ ಸಿಖ್ ಹತ್ಯಾಕಾಂಡದಲ್ಲಿ ನೇರವಾಗಿ ಭಾಗವಹಿಸಿ ಋಣ ತೀರಿಸಿಕೊಂಡಿತು.

ಹೆಚ್ಚಿನ ವಿವರಗಳಿಗಾಗಿ ಆಸಕ್ತರು ದೇವರಸ್ ಅವರೇ ಬರೆದಿರುವ

"ಹಿಂದೂ ಸಂಘಟನ್ ಔರ್ ಸತ್ತಾವಾದೀ ರಾಜನೀತಿ'' ಪುಸ್ತಕವನ್ನು ಗಮನಿಸಬಹುದು.

ಅಥವಾ ವಿದ್ವಾಂಸರಾದ ಕ್ರಿಸ್ಟೋಫೊ ಜಾಫರ್ಲೆ ಮತ್ತು ಪ್ರತಿನಾವ್ ಅನಿಲ್ ಅವರ ಇತೀಚಿನ ಪುಸ್ತಕ
India's First Dictatorship: The Emergency, 1975-1977- ಪುಸ್ತಕವನ್ನು ಓದಬಹುದು.

ಅಥವಾ ಅದರ ಸಂಕ್ಷಿಪ್ತ ಓದಿಗಾಗಿ ಕೆಳಗಿನ ವೆಬ್ ವಿಳಾಸದಲ್ಲಿರುವ ಈ ಲೇಖನವನ್ನೂ ಗಮನಿಸಬಹುದು:

https://www.rediff.com/news/special/christophe-jaffrelot-pratinav-anil-emergency-was-a-windfall-for-the-rss/20210625.htm

ಆರೆಸ್ಸೆಸ್ ನಿಷೇಧ -3

(1992-93)

1992ರ ಡಿಸೆಂಬರ್ 6ರಂದು ಆರೆಸ್ಸೆಸ್ ನ ಅಂಗಸಂಸ್ಥೆಗಳು ಹಾಡುಹಗಲೇ ಕಾನೂನು ಸಂವಿಧಾನಗಳೆನ್ನೆಲ್ಲಾ ಗೇಲಿ ಮಾಡುತ್ತಾ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ ನಂತರದಲ್ಲಿ ಮೂರನೇ ಬಾರಿಗೆ ಆರೆಸ್ಸೆಸ್ ನಿಷೇಧಕ್ಕೊಳಗಾಯಿತು. ದೇಶಾದ್ಯಂತ ಕೋಮು ಸಾಮರಸ್ಯ ಕದಡಿದ, ಹಾಗೂ ಸಂವಿಧಾನ ಬದ್ಧ ಆಡಳಿತವನ್ನು ಯೋಜಿತವಾಗಿ ಧ್ವಂಸ ಮಾಡುವ ಆರೋಪಗಳು ಅವರ ಮೇಲಿತ್ತು. ಅದನ್ನು ಜಾರಿ ಮಾಡಲು ಸಂಚು, ಸಂಘಟನೆ ಮತ್ತು ಶಸ್ತ್ರಾಸ್ತ್ರ ಬಳಕೆ ಮಾಡಿದ್ದು ಮತ್ತೊಂದು ಆರೋಪ. ಇದನ್ನು ಸಾಬೀತು ಮಾಡಲು ಯಾವ ವಿಶೇಷ ಪುರಾವೆಗಳು ಬೇಕಿರಲಿಲ್ಲ. ಅವರು ಮಾಡಿದ ಭಾಷಣಗಳು ಮತ್ತು ಅವರು ಖುದ್ದಾಗಿ ಭಾಗವಹಿಸಿದ್ದನ್ನು ಸಾಬೀತು ಮಾಡುವ ಚಿತ್ರಗಳು ಹಾಗೂ ಪೊಲೀಸ್ ವರದಿಗಳೇ ಸಾಕಿತ್ತು.
ಆರೆಸ್ಸೆಸ್ ಮೇಲಿನ ನಿಷೇಧವನ್ನು ವಿಚಾರಣೆ ಮಾಡಲು ನ್ಯಾಯಮೂರ್ತಿ ಪಿ.ಕೆ. ಬಾಹ್ರಿ ಅವರ ನೇತೃತ್ವದಲ್ಲಿ ಒಂದು ಟ್ರಿಬುನಲ್ ಅನ್ನು ಸ್ಥಾಪಿಸಲಾಯಿತು. ಅದು ಸತತವಾಗಿ ವಿಚಾರಣೆ ನಡೆಸಿ ನಿಷೇಧ ವಿಧಿಸಿದ ಕೇವಲ ಆರೇ ತಿಂಗಳಲ್ಲಿ ಆರೆಸ್ಸೆಸ್ಸನ್ನು ದೋಷ ಮುಕ್ತಗೊಳಿಸಿತು. ಕಾರಣ: ಆರೆಸ್ಸೆಸ್ಸನ್ನು ದೋಷಿಯೆಂದು ಪರಿಗಣಿಸುವ ಯಾವ ಪುರಾವೆಯನ್ನು ಸರ್ಕಾರ ಒದಗಿಸದೇ ಇದ್ದದ್ದು!!

ಹಾಗೆಯೇ ನ್ಯಾಯಮೂರ್ತಿ ಕೆ. ರಾಮಮೂರ್ತಿ ಅವರ ಟ್ರಿಬ್ಯುನಲ್ ಸಹ 1995ರಲ್ಲಿ ವಿಶ್ವ ಹಿಂದೂ ಪರಿಷದ್ ಮೇಲೆ ಹಾಕಿದ್ದ ನಿರ್ಬಂಧವನ್ನು ಹಿಂತೆಗೆದುಕೊಂಡಿತು. ಕಾರಣ: ಕಾಂಗ್ರೆಸ್ ಸರ್ಕಾರ ನಿಷೇಧವನ್ನು ಮುಂದುವರೆಸಲು ಬೇಕಾದ ಪೂರಕ ಮಾಹಿತಿಯನ್ನು ಒದಗಿಸದಿದ್ದದ್ದು.

ಆಸಕ್ತರು ಹೆಚ್ಚಿನ ಮಾಹಿತಿಗೆ ಈ ಲೇಖನವನ್ನು ಗಮನಿಸಬಹುದು :

https://frontline.thehindu.com/politics/article30160463.ece

ಇದು ಆರೆಸ್ಸೆಸ್ ನಿಷೇಧವೆಂಬ ರಾಜಕೀಯ ದಿವಾಳಿಕೋರತನದ ಹಾಗೂ ದುರಂತ ಪ್ರಹಸನಗಳ ಇತಿಹಾಸ..

ಕೃಪೆ: ವಾರ್ತಾಭಾರತಿ

Advertisement
Advertisement
Recent Posts
Advertisement