"ಆರೆಸ್ಸೆಸ್ ಮತ್ತು ಸಾವರ್ಕರ್ ಗಳ ಹುಸಿ ದಲಿತ ಪ್ರೇಮ ಮತ್ತು ದೇಶಪ್ರೇಮ"
ಬರಹ: ಶಿವಸುಂದರ್ (ಲೇಖಕರು ಹಿರಿಯ ಅಂಕಣಕಾರರು, ಪ್ರಗತಿಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)
"ರಾಷ್ಟ್ರವಾದಿಗಳ" ಹಲವು ಹುಸಿ ಪ್ರಶ್ನೆಗಳು
ಭಾರತವು ಆಚರಿಸುತ್ತಿರುವ ಸ್ವಾತಂತ್ರ್ಯದ 75ನೇ ವರ್ಷದ ಸಂದರ್ಭವು ಇತಿಹಾಸದ ತಪ್ಪುಗಳನ್ನು ತಿದ್ದಿಕೊಂಡು ಭವಿಷ್ಯದ ಬಗ್ಗೆ ಭರವಸೆಯಿಂದ ಧೃಢವಾದ ಹೆಜ್ಜೆಯಿಡುವ ಸ್ಪೂರ್ತಿಯನ್ನು ತಂದುಕೊಡಬೇಕಿತ್ತು. ಹಾಗೂ ಈ ದೇಶದ ಎಲ್ಲಾ ಜನರಿಗೆ ಜಾತಿ- ಧರ್ಮ- ಲಿಂಗ- ಭಾಷೆಗಳ ಬೇಧವಿಲ್ಲದೆ ಸಮಾನವಾದ ಪಾಲನ್ನು ಖಾತರಿ ಮಾಡುತ್ತಾ ಎಲ್ಲರೂ ಜೊತೆಗೂಡಿ ದೇಶಕಟ್ಟುವ ವಿಶ್ವಾಸವನ್ನು ಹುಟ್ಟಿಸಬೇಕಿತ್ತು.
ಆದರೆ ಮೋದಿ ಸರ್ಕಾರ ಮತ್ತು ಅವರ ಗುರುಮಠವಾದ ಆರೆಸ್ಸೆಸ್ ಈ ಸಂದರ್ಭಕ್ಕೆ ಅಮೃತಮಹೋತ್ಸವ ಎಂಬ ಹಿಂದೂ- ಬ್ರಾಹ್ಮಣೀಯ ಹೆಸರನ್ನು ಕೊಟ್ಟಿದೆ. ಮತ್ತು ಇಡೀ ಸಂದರ್ಭವನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಪರವಾಗಿ ಸೇವೆ ಸಲ್ಲಿಸಿದ ಹಿಂದೂರಾಷ್ಟ್ರ ಪರಿಕಲ್ಪನೆಯ ಪಿತಾಮಹ ಸಾವರ್ಕರ್ ಅನ್ನು ಭಾರತದ ಪಿತಾಮಹನನ್ನಾಗಿ ಸ್ಥಾಪಿಸುವ ಯೋಜನೆಗೆ ಬಳಸಿಕೊಳ್ಳುತ್ತಿದೆ. ಹಾಗೂ ಸ್ವಾತಂತ್ರ್ಯ ಹೋರಾಟದುದ್ದಕ್ಕೂ ಬ್ರಿಟಿಷರ ಜೊತೆ ಕೈಗೂಡಿಸಿದ್ದಲ್ಲದೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ, ಈಗಲೂ ನಿರಂತರವಾಗಿ ಭಾರತದ ಬುನಾದಿಯನ್ನು ಕೋಮುವಾದದಿಂದ ಭಗ್ನ ಗೊಳಿಸುತ್ತಾ ಬಂದಿರುವ ಆರೆಸ್ಸೆಸ್ ಅನ್ನು ಸ್ವಾತಂತ್ರ್ಯ ಹೋರಾಟದ ಸಮರವೀರರು ಎಂದು ಸ್ಥಾಪಿಸಲು ಬಳಸಿಕೊಳ್ಳುತ್ತಿದೆ. ಮತ್ತು ಈ ಸಂದರ್ಭದಲ್ಲೂ ಸಹ ತನ್ನ ಬ್ರಾಹ್ಮಣಶಾಹಿ ಹಿಂದೂರಾಷ್ಟ್ರ ಕಲ್ಪನೆಯನ್ನು ಹೇರುತ್ತಾ ದೇಶದಲ್ಲಿ ಮತ್ತು ಸಮಾಜದಲ್ಲಿ ಮತ್ತಷ್ಟು ಬಿರುಕನ್ನು ಹುಟ್ಟಿಸಲು ಯತ್ನಿಸುತ್ತಿದೆ.
ಸ್ವಾತಂತ್ರ್ಯ ಹೋರಾಟದ ಕೋಮುವಾದಿ ವ್ಯಾಖ್ಯಾನ ಮಾಡಲು ಈ ಗುಂಪು ಹಲವಾರು ಸುಳ್ಳುಪೊಳ್ಳುಗಳನ್ನು ಬೆರೆಸಿ ಇತಿಹಾಸವೆಂದು ಬಿತ್ತರಿಸುತ್ತಿದೆ. ಅದಕ್ಕೆ ವಿರುದ್ಧವಾಗಿ ನೈಜ ಇತಿಹಾಸವನ್ನು ಜನರ ಮುಂದಿಡುವ ಪ್ರಯತ್ನಗಳೂ ನಡೆದಿವೆ.
ಆದರೆ ಇದರ ಬಗ್ಗೆ ಕಾಂಗ್ರೆಸ್ಸನ್ನೂ ಒಳಗೊಂಡಂತೆ ಇತರ ರಾಜಕೀಯ ಪಕ್ಷಗಳು ಸಂಘಪರಿವಾರದ ಬ್ರಾಹ್ಮಣಶಾಹಿ ಹಿಂದೂರಾಷ್ಟ್ರವಾದಿ ರಾಜಕೀಯ ಸಿದ್ಧಾಂತದ ವಿರುದ್ಧ ಎಷ್ಟು ರಾಜಕೀಯ- ಸೈದ್ಧಾಂತಿಕ ಹೋರಾಟ ಮಾಡಬೇಕೋ ಅಷ್ಟನ್ನು ಮೊದಲಿಂದಲೂ ಮಾಡಿಲ್ಲ. ಹೀಗಾಗಿ ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಕಾಂಗ್ರೆಸ್ಸಿನ ಒಳಗಡೆಯೇ ಬಲವಾದ ಬಲಪಂಥೀಯ ಬಣವಿತ್ತು. ಬಹಳಷ್ಟು ಕಾಲ ಲಾಲಾ ಲಜಪತ್ ರಾಯ್ , ಮದನಮೋಹನ ಮಾಳವೀಯರಂಥ ಹಲವಾರು ನಾಯಕರು ಏಕಕಾಲದಲ್ಲಿ ಕಾಂಗ್ರೆಸ್ಸಿನ ಹಾಗೂ ಹಿಂದೂಮಹಾಸಭಾದ ಅಧಿಕೃತ ಮುಖಂಡರಾಗಿರುತ್ತಿದ್ದರು. ಸರ್ದಾರ್ ಪಟೇಲರಾದರೆ ಸ್ವಾತಂತ್ರ್ಯಾ ನಂತರದಲ್ಲಿ ಆರೆಸ್ಸೆಸ್ಸಿನ ಸದಸ್ಯರೂ ಕಾಂಗ್ರೆಸ್ಸಿನ ಅಧಿಕೃತ ಸದಸ್ಯರಾಗುವ ಅವಕಾಶವನ್ನು ಕಲ್ಪಿಸಲು ವಿಫಲ ಪ್ರಯತ್ನ ನಡೆಸಿದ್ದರು.
ಸ್ವಾತಂತ್ರ್ಯಾ ನಂತರದಲ್ಲೂ ಕಾಂಗ್ರೆಸ್ಸನ್ನೂ ಒಳಗೊಂಡಂತೆ ಇತರ ವಿರೋಧ ಪಕ್ಷಗಳು ಇಂಥಾ ದೇಶಭಂಜಕ ಬ್ರಾಹ್ಮಣಶಾಹಿ ಹಿಂದೂ ರಾಷ್ಟ್ರ ಸಿದ್ಧಾಂತವನ್ನು ಎಷ್ಟು ಬಲವಾಗಿ ವಿರೋಧಿಸಬೇಕಿತ್ತೋ ಅಷ್ಟು ಬಲವಾಗಿ ವಿರೋಧಿಸಲೇ ಇಲ್ಲ. ಅದಕ್ಕೆ ಆ ಪಕ್ಷಗಳ ಪ್ರಧಾನವಾದ ಸವರ್ಣೀಯ ಹಿಂದೂ ಸಾಮಾಜಿಕ ಹಿನ್ನೆಲೆ, ಶೋಷಕ ವರ್ಗ ಹಿನ್ನೆಲೆಯೇ ಪ್ರಮುಖ ಕಾರಣ . ಅಷ್ಟೇ ಮುಖ್ಯವಾಗಿ ಈ ಹಿನ್ನೆಲೆಯಿಂದ ಮೂಡಿಬಂದ ಅವರ ರಾಜಕೀಯ-ಸಿದ್ಧಾಂತಗಳು ಹೆಚ್ಚೆಂದರೆ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಗಳಿಗೆ ಮಾನವೀಯ ಮುಖವಾಡ ತೊಡಿಸುವುದನ್ನೇ ಸಾಮಾಜಿಕ ಬದಲಾವಣೆ ಎಂದುಕೊಂಡಿದ್ದವೇ ವಿನಾ ಅವುಗಳ ನಿರ್ಮೂಲನೆಯನ್ನಲ್ಲ.
ಹೀಗಾಗಿ, ತುರ್ತುಪರಿಸ್ಥಿತಿ ವಿರೋಧಿ ಹೋರಾಟದಲ್ಲಿ ಮಧು ಲಿಮಯೆ ಹಾಗೂ ಕಮ್ಯುನಿಸ್ಟ್ ನಾಯಕರನ್ನು ಬಿಟ್ಟರೆ ಜೆಪಿ ಆದಿಯಾಗಿ ಇತರ ಎಲ್ಲಾ ವಿರೋಧಿ ನಾಯಕರು ಆರೆಸ್ಸೆಸ್ಸಿನ ದೇಶಮುರುಕ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಂಡು ಈ ವಿಷವೃಕ್ಷಕ್ಕೆ ನೀರೆರದರು. ಆ ನಂತರದಲ್ಲೂ ಅಧಿಕಾರ ಲಾಲಸೆ ಹಾಗೂ ವರ್ಗ ಹಿತಾಸಕ್ತಿಗಳ ಲಾಲಸೆಯಿಂದ ವಿರೋಧ ಪಕ್ಷಗಳು ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಂಡು ಅದರ ವಿಭಜಕ ಸಿದ್ಧಾಂತ ದೇಶಾದ್ಯಂತ ಬೇರುಪಡೆದುಕೊಳ್ಳಲು ಕಾರಣರಾದರು.
ಹೀಗಾಗಿ ಇಂದೂ ಸಹ ಅವರ ಬ್ರಾಹ್ಮಣಶಾಹಿ ಹಿಂದೂರಾಷ್ಟ್ರವಾದಿ ರಾಜಕೀಯ ಸಿದ್ಧಾಂತದ ಬಗ್ಗೆ ಈ ವಲಯಗಳಿಂದ ಬಲಿಷ್ಟವಾದ ರಾಜಕೀಯ- ಸೈದ್ಧಾಂತಿಕ ವಿರೋಧವನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ಸಿದ್ಧಾರಾಮಯ್ಯನವರು ಆಗಾಗ ಈ ವಿಷಯಗಳ ಬಗ್ಗೆ ಸೈದ್ಧಾಂತಿಕ ಪ್ರತಿರೋಧವನ್ನು ಒಂಟಿಯಾಗಿ ಎತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಸಿದ್ಧರಾಮಯ್ಯನವರ ಗ್ರಹಿಕೆಯನ್ನು ಸಂಪೂರ್ಣವಾಗಿ ಬೆಂಬಲಿಸುವ ಮತ್ತು ಅದನ್ನು ಮುಂದುವರೆಸಿಕೊಂಡು ಹೋಗುವ ಯಾವ ಸೂಚನೆಯನ್ನು ಕೊಟ್ಟಿಲ್ಲ. ಅಷ್ಟು ಮಾತ್ರವಲ್ಲ. ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗಲೂ ಆರೆಸ್ಸೆಸ್ಸಿನ ಸೈದ್ಧಾಂತಿಕ- ರಾಜಕೀಯ ವ್ಯೂಹತಂತ್ರಗಳ ವಿರುದ್ಧ ನಿರ್ಣಯಾತ್ಮಾಕ ಹಾಗೂ ಪರಿಣಾಮಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ಅವಕಾಶಗಳಿದ್ದರೂ ಅದನ್ನು ಬಳಸಿಕೊಳ್ಳಲಿಲ್ಲ.
ತಮ್ಮ ಪಕ್ಷ, ಕಾರ್ಯಕರ್ತರು ಹಾಗೂ ತಮ್ಮನ್ನು ಬೆಂಬಲಿಸುವ ಸಾಮಾಜಿಕ ಜನವರ್ಗಗಳನ್ನು ಈ ಅಪಾಯದ ಬಗ್ಗೆ ಜಾಗೃತಗೊಳಿಸದೆ ವ್ಯಕ್ತಿಯೊಬ್ಬರು ಎಷ್ಟೇ ಸೈದ್ಧಾಂತಿಕ ಸ್ಪಷ್ಟತೆಯನ್ನು ಹೊಂದಿದ್ದರೂ ದೂರಗಾಮಿ ಬದಲಾವಣೆ ಸಾಧ್ಯವಿಲ್ಲ ಎಂಬುದು ನೆಹರೂ ಆದಿಯಾಗಿ ಕಾಂಗ್ರೆಸ್ಸಿನ ಎಲ್ಲಾ ಜನಪರ ನಾಯಕರು ಪದೇಪದೇ ಸಾಬೀತುಪಡಿಸುತ್ತಿದ್ದಾರೆ.
ಕಾಂಗ್ರೆಸ್ಸಿನ ಹಾಗೂ ಇತರ ವಿರೋಧಿ ಪಕ್ಷಗಳ ವರ್ಗ-ಜಾತಿ ಹಿನ್ನೆಲೆ, ಇತಿಹಾಸ ಮತ್ತು ವರ್ತಮಾನವನ್ನು ಗಮನಿಸಿದಾಗ ಅದರ ಕುರಿತು ಅಷ್ಟು ನಿರೀಕ್ಷೆ ಇಟುಕೊಳ್ಳುವುದು ರಾಜಕೀಯ ಮೂರ್ಖತನವೆಂಬುದು ಸ್ಪಷ್ಟ.
ಆದರೂ ಸಿದ್ಧಾರಾಮಯ್ಯನವರು ಆಗಾಗ ತೋರುವ ಸೈದ್ಧಾಂತಿಕ ಪ್ರತಿರೋಧಗಳು ಮತ್ತು ಅದರ ಒಂಟಿತನವನ್ನು ಅರ್ಥಮಾಡಿಕೊಂಡಿರುವ ಆರೆಸ್ಸೆಸ್ಸಿಗರು ಸಿದ್ಧಾರಾಮಯ್ಯನವರನ್ನು ಮಾತ್ರ ತಮ್ಮ ರಾಜಕೀಯ-ಸೈದ್ಧಾಂತಿಕ ದಾಳಿಗೆ ಗುರಿಯಾಗಿರಿಸಿಕೊಂಡಿದ್ದಾರೆ. ಬಹಿರಂಗವಾದ ಮುಖಾಮುಖಿ ಎಂದೂ ಸಿದ್ಧವಿರದ ಈ ಸಂಘಟನೆಗಳು ಸಿದ್ಧಾರಾಮಯ್ಯನವರ ಮೇಲೆ ಹೇಳಿಕೆಗಳ ಹಾಗೂ ಸುಳ್ಳುಗಳ "ದಾಳಿ ಮಾಡಿ ಓಡಿಹೋಗುವ" ತಂತ್ರವನ್ನು ಅನುಸರಿಸುತ್ತಿವೆ.
ಆ ಮೂಲಕ ತಮ್ಮ ವಿಷಪೂರಿತ ಸಿದ್ಧಾಂತಗಳಿಗೆ ಮಾನ್ಯತೆಯನ್ನು ಗಳಿಸಿಕೊಳ್ಳುವುದು ಈ ದಾಳಿಯ ನಿಜವಾದ ಉದ್ದೇಶ.
ಆದರೆ ಇತ್ತಿಚೆಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಎಸ್. ನರೇಂದ್ರಕುಮಾರ್ ಎಂಬ ರಾಷ್ಟ್ರವಾದಿ(!) ಚಿಂತಕರು ಈ ಬಗ್ಗೆ ಸಿದ್ಧರಾಮಯ್ಯನವರನ್ನು ಉದ್ದೇಶಿಸಿ ಆರೆಸ್ಸೆಸ್-ಸವರ್ಕರ್ ಬಗ್ಗೆ 15 ಪ್ರಶ್ನೆಗಳನ್ನು ಕೇಳಿ ಮೊಟ್ಟಮೊದಲ ಬಾರಿಗೆ ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅದರ ಜೊತೆಗೆ ನೀಲಿ ಇಂದ ಅಪ್ಪಟ ಕೇಸರಿಯಾಗಿ ಬದಲಿಯಾಗಿರುವ ಕೊಳ್ಳೆಗಾಲದ ಶಾಸಕ ಎನ್. ಮಹೇಶ್ ಅವರೂ ಕೂಡ ಬದಲಾದ ಉತ್ಸಾಹದಿಂದ ಸಾವರ್ಕರ್ ಅವರ ಬಗ್ಗೆ "ಸಮಾಜ ಸುಧಾರಣೆಯ ದಿವ್ಯ ಚೇತನ" ವೆಂದು ಬಣ್ಣಿಸುವ ಸುದೀರ್ಘ ಆರೆಸ್ಸೆಸ್ ಪೆನ್ನಿನ ಲೇಖನವನ್ನು ಬರೆದಿದ್ದಾರೆ.
ಈ ಲೇಖನಗಳ ಗುರಿ ಮೇಲ್ನೋಟಕ್ಕೆ ಸಿದ್ಧರಾಮಯ್ಯನವರಾಗಿದ್ದರೂ ಸಾರಾಂಶದಲ್ಲಿ ಈ ದೇಶದಲ್ಲಿ ಬ್ರಾಹ್ಮಣಶಾಹಿ ಹಿಂದೂರಾಷ್ಟ್ರವಾದಿಗಳ ಹುನ್ನಾರವನ್ನು ವಿರೋಧಿಸುವ ಎಲ್ಲರಿಗೂ ಆ ಲೇಖನಗಳು ಸವಾಲು ಹಾಕಿವೆ.
ಆದ್ದರಿಂದ ಅವುಗಳಿಗೆ ಉತ್ತರ ಕೊಡುವ ಜವಾಬ್ದಾರಿ ಕೇವಲ ಸಿದ್ಧರಾಮಯ್ಯನವರದ್ದೇನೂ ಅಲ್ಲ. ಅವರು ಕೊಡುವ ಉತ್ತರಗಳಿಗೆ ಕಾಂಗ್ರೆಸ್ಸಿನ ಮಿತಿಗಳಿರುವುದೂ ಕೂಡ ಅಷ್ಟೇ ನಿಜ. ಹೀಗಾಗಿ ಸಿದ್ಧರಾಮಯ್ಯನವರು ಮತ್ತು ಕಾಂಗ್ರೆಸ್ ಆ ಪ್ರಶ್ನೆಗಳಿಗೆ ಉತ್ತರ ಕೊಡುತ್ತದೋ ಇಲ್ಲವೋ, ಸಮಾಜದ ಸ್ವಾಸ್ಥ್ಯವನ್ನು ಹಾಗೊ ನೆಮ್ಮದಿಯ ನಾಳೆಗಳನ್ನು ಬಯಸುವವರ ಮೇಲೆ ಮಾತ್ರ ನೈಜ ಇತಿಹಾಸವನ್ನು ಹಾಗೂ ಈ ಹಳೆ ಹಾಗೂ ಹೊಸ ಹಿಂದೂತ್ವವಾದಿಗಳ ಹುನ್ನಾರಗಳನ್ನು ಜನರೆದುರು ಬಯಲುಗೊಳಿಸುವ ಜವಾಬ್ದಾರಿ ಇದೆ.
ಆದ್ದರಿಂದ ಈ ಅಂಕಣದಲ್ಲಿ ವಿಜಯಕರ್ನಾಟಕದಲ್ಲಿ ಈ ಹಿಂದೂ-ಬ್ರಾಹ್ಮಣಶಾಹಿ ರಾಷ್ಟ್ರವಾದಿಗಳು ಎತ್ತಿರುವ ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತರಿಸಲಾಗುವುದು.
ಈ ಪ್ರಶ್ನೆಗಳಿಗೆ ಉತ್ತರವನ್ನು ನೀಡಲು ಆರೆಸ್ಸೆಸ್ ನಾಯಕರು ಮತ್ತು ಸಾವರ್ಕರ್ ಅವರು ಬರೆದಿರುವ ಕೃತಿಗಳನ್ನೇ ಆಧರಿಸಲಾಗಿದೆ. ದಯವಿಟ್ಟು ಹಿಂದೂರಾಷ್ಟ್ರವಾದಿಗಳು ತಮ್ಮದೇ ನಾಯಕರ ಈ ಕೃತಿಗಳನ್ನು ಪರಾಂಬರಿಸಬೇಕೆಂದೂ ಸಹ ವಿನಂತಿ:
ಪ್ರಧಾನವಾಗಿ ಸಾವರ್ಕರ್ ಅವರು ಬರೆದಿರುವ :
1. Essentials of Hindutva 2. . Six Glorious Epochs Of Indian History 3. ಸಾವರ್ಕರ್ ಸಮಗ್ರ ವಾಗ್ಮಯದ ಆಯ್ದ ಭಾಗಗಳು
ಆರೆಸ್ಸೆಸ್‌ನ ಎರಡನೇ ಸರಸಂಘಚಾಲಕ ಗೋಳ್ವಾಲ್ಕರ್ ಬರೆದಿರುವ
1. We Or Our Nationhood Defined .2. Bunch Of Thoughts 3. Organiser ಪತ್ರಿಕೆಯ ನಿರ್ದಿಷ್ಟ ಸಂಚಿಕೆಗಳು
ಆರೆಸ್ಸೆಸ್ ಸಂಸ್ಥಾಪಕ ಹೆಡ್ಗೆವಾರರ ಬದುಕು ಹಾಗೂ ರಾಜಕೀಯದ ಬಗ್ಗೆ ಆರೆಸ್ಸೆಸ್ ನ ಪ್ರಮುಖ ನಾಯಕರಾದ ಹೂ.ವೆ. ಶೇಷಾದ್ರಿಯವರು ಬರೆದ Dr. Hedgewar- The Epoch Maker, ಸಿಪಿ ಬಿಷ್ಕರ್ ಮತ್ತು ಎನ್‌ಎಚ್ ಪಾಲ್ಕರ್ ಅವರು ಬರೆದ ಹೆಡ್ಗೇವಾರರ ಜೀವನ ಚರಿತ್ರೆಗಳು.
ಇದಲ್ಲದೆ ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳ ನಿರ್ದಿಷ್ಟ ಸಂಪುಟಗಳು, ಇತಿಹಾಸಕಾರ ಪ್ರೊ. ಶಂಸುಲ್ ಇಸ್ಲಾಂ ಅವರ ಬರಹಗಳು. ಆರೆಸ್ಸೆಸ್ ನ ಅಭಿಮಾನಿ ವಾಲ್ಟರ್ ಆಂಡರ್ಸನ್ ಅವರ Brotherhood In Saffron, ಧನಂಜಯ್ ಕೀರ್ ಅವರ "ಸಾವರ್ಕರ್" ಅವರ ಜೀವನ ಚರಿತ್ರೆ, ಕ್ರಿಸ್ಟೊಫೊ ಜಾಫ಼ರ್ಲೆ ಅವರ Hindu Nationalism ಇನ್ನಿತ್ಯಾದಿ ಗ್ರಂಥಗಳು. ಇವೆಲ್ಲವೂ ಸಾರ್ವಜನಿಕವಾಗಿ ಲಭ್ಯವಿದ್ದು ದಯವಿಟ್ಟು ಭಕ್ತರು ಮತ್ತು ಆಸಕ್ತರು ಇವುಗಳನ್ನು ತಾವೇ ನೇರವಾಗಿ ಓದಿ ವಿಶ್ಲೇಷಿಸಿ ಸ್ವಂತ ತೀರ್ಮಾನಕ್ಕೆ ಬರುವುದು ಇನ್ನು ಒಳ್ಳೆಯದು.
• ಪ್ರಶ್ನೆ 1 : ಸಾವರ್ಕರ್ ದೇಶದ್ರೋಹಿಯಾಗಿದ್ದರೆ, ಕ್ಷಮಾಪಣೆ ಕೇಳಿದ್ದರೆ ಬ್ರಿಟಿಷರು ಅವರಿಗೆ 50ವರ್ಷ ಕರಿನೀರಿನ ಶಿಕ್ಷೆ ನೀಡಿದ್ದೇಕೆ?
ಸಾವರ್ಕರ್ ಪ್ರತಿಪಾದಕರು ಮತ್ತು ಅವರ ವಿರೋಧಿಗಳು ಇಬ್ಬರೂ ಕೂಡ ಸಾವರ್ಕರ್ ಅವರ ರಾಜಕೀಯ ಬದುಕನ್ನು ಎರಡು ಭಾಗಗಳನ್ನಾಗಿ ಅರ್ಥ ಮಾಡಿಕೊಂಡರೆ ವಿಷಯಕ್ಕೆ ಸ್ಪಷ್ಟತೆ ಬರುತ್ತದೆ.
ಸಾವರ್ಕರ್ ಅವರು 1911ರಲ್ಲಿ ಲಂಡನ್ನಿನಲ್ಲಿ ಬಂಧನಕ್ಕೊಳಗಗುವ ತನಕ ಕ್ರಾಂತಿಕಾರಿ ಅಭಿನವ್ ಭಾರತ್ ಸಂಘಟನೆಯ ಬ್ರಿಟಿಷ್ ವಿರೋಧಿ ಕ್ರಾಂತಿಕಾರಿ ಚಟುವಟಿಕೆಗಳಿಗೆ ತೆರೆಮರೆಯಲ್ಲಿ ರಾಜಕೀಯ ಮಾರ್ಗದರ್ಶನ ಮಾಡುತ್ತಿದ್ದರು. 1906ರಲ್ಲಿ ಅವರು ಲಂಡನ್ನಿಗೆ ಹೋದಾಗ ಅಲ್ಲಿಯ ಇಂಡಿಯಾ ಹೌಸ್ ನಲ್ಲಿ ಸಭೆ ಸೇರುತ್ತಿದ್ದ ಭಾರತದ ಕ್ರಾಂತಿಕಾರಿ ತರುಣರಿಗೆ ಬ್ರಿಟಿಷ್ ವಿರೋಧಿ ಬಂಡಾಯದ ದೀಕ್ಷೆ ಕೊಡುತ್ತಿದ್ದರು. ಮತ್ತು ಅಲ್ಲಿಂದಲೇ ತಮ್ಮ ಮಹಾರಾಷ್ಟ್ರದ ಸ್ನೇಹಿತರಿಗೆ ಪಿಸ್ತೂಲು ಇತ್ಯಾದಿ ಸರಬರಾಜು ಮಾಡುತ್ತಿದ್ದರು.
ಆದರೆ ಈ ಪ್ರಕ್ರಿಯೆಯಲ್ಲಿ ಸೆರೆಯಾಗುತ್ತಿದ್ದ ಯಾರೂ ಸಾವರ್ಕರ್ ಹೆಸರು ಹೇಳುತ್ತಿರಲಿಲ್ಲ. ಉದಾಹರಣೆಗೆ ಲಂಡನ್ನಿನ್ನಲಿ ಬ್ರ್ರಿಟಿಷ್ ಅಧಿಕಾರಿ ಕರ್ಜನ್ ವೈಲಿಯನ್ನು ಕೊಲ್ಲಲು ಮದನ್‌ಲಾಲ್ ಧಿಂಗಾನನ್ನು ಅಥವಾ 1948ರಲ್ಲಿ ಗಾಂಧಿಯನ್ನು ಕೊಲ್ಲಲು ನಾಥೂರಾಮ್ ಗೋಡ್ಸೆ ಯನ್ನು ಪ್ರೇರೇಪಿಸಿದ್ದು ಸಾವರ್ಕರ್ ಅವರೇ ಆದರೂ ಕೊಲೆಯಲ್ಲಿ ಅವರ ಪಾತ್ರದ ಬಗ್ಗೆ ಅವರಿಬ್ಬರೂ ಸಾಕ್ಷಿ ಹೇಳಲಿಲ್ಲ. ಆದರೆ 1909ರಲ್ಲಿ ಅಭಿನವ್ ಭಾರತ್ ನ ಒಂದು ಗುಂಪು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಬ್ರಿಟಿಷ್ ಮ್ಯಾಜಿಸ್ಟ್ರೇಟ್ ಎ.ಟಿ.ಎಂ. ಜಾಕ್ಸನ್ ಅವರನ್ನು ಕೊಂದುಹಾಕಿತು. ಅದಕ್ಕೆ ಬಳಸಲಾದ ಪಿಸ್ತೂಲು ಸಾವರ್ಕರ್ ಲಂಡನ್ನಿನಿಂದ ಕಳಿಸಿದ್ದು ಎಂದು ಸಾಕ್ಷಿ ಸಿಕ್ಕಿತು. ಇದೊಂದು ಪ್ರಕರಣದಲ್ಲಿ ಮಾತ್ರ ಮೊದಲ ಬಾರಿಗೆ ಹಾಗೂ ಕೊನೆಯ ಬಾರಿಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದ ಸಾವರ್ಕರ್ ಶಿಕ್ಷೆಗೆ ಗುರಿಯಾದರು.
ಅವರ ವಿಚಾರಣೆಯಲ್ಲಿ ಸಾವರ್ಕರ್ ಅವರು ಬ್ರಿಟಿಷ ಸಾಮ್ರಾಜ್ಯವನ್ನು ಹಿಂಸಾತ್ಮಕವಾಗಿ ಬುಡಮೇಲು ಮಾಡಬೇಕೆಂಬ ಆಶಯವನ್ನು ಹೊಂದಿದ್ದ ಅಭಿನವ್ ಭಾರತ್ ಗುಂಪಿನ ನಾಯಕ ಎಂದು ಸಾಬೀತಾಯಿತು. ಸಾಮಾನ್ಯವಾಗಿ ಬ್ರಿಟಿಷರು ಇಂಥ ಕ್ರಾಂತಿಕಾರಿ ನಾಯಕರನ್ನು ಸೆರೆ ಹಿಡಿಯುವ ಮುನ್ನವೇ ಕೊಂದು ಹಾಕುತ್ತಿದ್ದರು ಅಥವಾ ಗಲ್ಲುಶಿಕ್ಷೆ ವಿಧಿಸುತ್ತಿದ್ದರು. ಆದರೆ ಸಾವರ್ಕರ್ ಅವರಿಗೆ 50 ವರ್ಷಗಳ ಶಿಕ್ಷೆ ವಿಧಿಸಿ ಆ ಕಾಲಕ್ಕೆ ಹಿಂಸಾತ್ಮಕ ದಾರಿ ಹಿಡಿದಿದ್ದ ಎಲ್ಲಾ ಕ್ರಾಂತಿಕಾರಿಗಳಿಗೆ ಕೊಡುತ್ತಿದ್ದ ಕರಿನೀರಿನ ಶಿಕ್ಷೆಯನ್ನು ಕೊಟ್ಟರು. ಅವರಿಗೆ ಮುಂಚೆಯೂ ಅಲ್ಲಿ ಸಾವಿರಾರು ಕ್ರಾಂತಿಕಾರಿ ಹೋರಾಟಗಾರರು ಹತ್ತಾರು ವರ್ಷ ಶಿಕ್ಷೆ ಗುರಿಯಾಗಿ ಒಂದೂ ಕ್ಷಮಾಪಣಾ ಪತ್ರ ಬರೆಯದೆ ಶಿಕ್ಷೆ ಮುಗಿಸಿ ಹೊರಬಿದ್ದಿದ್ದಾರೆ.
ಆದರೆ ಸಾವರ್ಕರ್ ಅವರಿಗೆ 50 ವರ್ಷ ಜೀವಾವಧಿ ಶಿಕ್ಷೆಯಾಗಿದ್ದರೂ ಅವರು ಅಲ್ಲಿ ಶಿಕ್ಷೆ ಅನುಭವಿಸಿದ್ದು ಕೇವಲ 10 ವರ್ಷಗಳು ಮಾತ್ರ.
1921 ರಲ್ಲೇ ಅವರನ್ನು ಅಂಡಮಾನಿನಿಂದ ಪುಣೆಯ ಯರವಾಡ ಜೈಲಿಗೆ ವರ್ಗಾಯಿಸಲಾಯಿತು. ಅದಾದ ಎರಡೇ ವರ್ಷದಲ್ಲಿ ಅವರಿಗೆ ಜೈಲಿನಿಂದ ಬಿಡುಗಡೆ ಮಾಡಿ ರತ್ನಗಿರಿಯ ಅವರ ಮನೆಯಲ್ಲಿ ಇರಲು ಅವಕಾಶ ಮಾಡಿಕೊಡಲಾಯಿತು. 1937ರಲ್ಲಿ ಅವರ ಮೇಲೆ ವಿಧಿಸಲಾಗಿದ್ದ ಎಲ್ಲ ನಿರ್ಬಂಧಗಳನ್ನು ಬ್ರಿಟಿಷರು ತೆಗೆದುಹಾಕಿದರು.
1923ರಲ್ಲಿ ರತ್ನಗಿರಿಯಲ್ಲಿ ಮನೆಗೆ ಮರಳಿದ ನಂತರ ಬ್ರಿಟಿಷ್ ಸರ್ಕಾರ ಮತ್ತೆ ಅವರನ್ನು ನಂತರ ಯಾವತ್ತೂ ಬಂಧಿಸಲೇ ಇಲ್ಲ.
ಕಾರಣವಿಷ್ಟೆ: 1911ರಲ್ಲಿ ಬ್ರಿಟಿಷರು ಸಾವರ್ಕರ್ ಅವರನ್ನು ಬಂಧಿಸಿದಾಗ ಬ್ರಿಟಿಷ್ ವಿರೋಧಿ ಕ್ರಾಂತಿಕಾರಿ ನಾಯಕ ಎಂದುಕೊಂಡಿದ್ದರು. ಆದ್ದರಿಂದಲೇ ಅಂಡಮಾನ್ ಶಿಕ್ಷೆಯನ್ನೂ ಕೊಟ್ಟರು. ಆದರೆ ಯಾವಾಗ ಸಾವರ್ಕರ್ ಅವರು ಶಿಕ್ಷೆ ಪ್ರಾರಂಭಗೊಂಡ ಎರಡು ತಿಂಗಳಲ್ಲೇ ಶರಣಾಗತಿ ಪತ್ರಗಳನ್ನು ಬರೆಯಲು ಪ್ರಾರಂಭಿಸಿದರೋ, ಅಂಡಮಾನ್ ಜೈಲಿನಲ್ಲಿ ಬ್ರಿಟಿಷ್ ಅಧಿಕಾರಿಗಳ ಜೊತೆಗೆ ಕೈಗೂಡಿಸಿ ಸನ್ನಡತೆಯನ್ನೊ ತೋರಿ ಮತ್ತೆಂದೂ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಧ್ವನಿ ಎತ್ತುವುದಿಲ್ಲ ಎಂಬುದನ್ನು ಸಾಬೀತುಪಡಿಸಿದರೋ, ಆಗ ಅವರನ್ನು ಬ್ರಿಟಿಷರು ಬಿಡುಗಡೆ ಮಾಡಿ ಗೃಹಬಂಧನದ ಸೌಕರ್ಯ ಒದಗಿಸಿಕೊಟ್ಟರು.
1923-37ರ ಅವಧಿಯಲ್ಲಿ ದೇಶದಲ್ಲಿ ನಡೆದ ಅಸಹಕಾರ ಚಳವಳಿ, ದಂಡಿ ಸತ್ಯಾಗ್ರಹ, ಸಂಪೂರ್ಣ ಸ್ವಾತಂತ್ರ್ಯ ಘೋಷಣೆ ಎಲ್ಲವನ್ನೂ ಸಾವರ್ಕರ್ ಅವರು ರತ್ನಗಿರಿಯಿಂದಲೇ ವಿರೋಧಿಸಿದ್ದು ಮಾತ್ರವಲ್ಲದೇ ಬ್ರಿಟಿಷರ ಪರವಾಗಿ ಹಿಂದೂ ಯುವಕರನ್ನು ಸಂಘಟಿಸುತ್ತಾರೆ. ಅಷ್ಟು ಮಾತ್ರವಲ್ಲ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅನುಕೂಲವಾಗುವಂತೆ ಹಿಂದೂ-ಮುಸ್ಲಿಂ ಕೋಮು ವಿಭಜನೆಯನ್ನೂ ಹುಟ್ಟುಹಾಕುತ್ತಾರೆ.
ಹೀಗೆ ತಮ್ಮ ಬ್ರಿಟಿಷರ ಪರವಾದ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ವಿರೋಧವಾದ ನಿಲುವುಗಳನ್ನು ತಮ್ಮ ನಡೆನುಡಿಗಳಿಂದ ಸಾಬೀತು ಪಡಿಸಿದಕ್ಕಾಗಿಯೇ ಇತರ ಕ್ರಾಂತಿಕಾರಿಗಳನ್ನು ಕೊಂದುಹಾಕಿದ, ಕಾಂಗ್ರೆಸ್ಸಿನಂಥ ಮಂದ ಸ್ವಾತಂತ್ರ್ಯವಾದಿಗಳನ್ನು ಜೈಲು ಶಿಕ್ಷೆಗೆ ದೂಡುತ್ತಿದ್ದ ಬ್ರಿಟಿಷ್ ಸರ್ಕಾರ ಸಾವರ್ಕರ್ ಅವರನ್ನು ಮಾತ್ರ ಬಿಡುಗಡೆ ಮಾಡಿತು.
ಈಗ ಹೇಳಿ ಇಂಥಾ ಸಾವರ್ಕರ್ ಸ್ವಾತಂತ್ರ್ಯ ವೀರನೇ?
•ಪ್ರಶ್ನೆ 2. ತಮ್ಮ ಸಾಮ್ರಾಜ್ಯಕ್ಕೆ ಅಪಾಯ ಎಂದೆನಿಸಿದವರಿಗೆ ಮಾತ್ರ ಬ್ರಿಟಿಷರು ಅಂಡಮಾನ್ ಶಿಕ್ಷೆ ವಿಧಿಸುತ್ತಿದ್ದರು? ಹಾಗಿದ್ದಲ್ಲಿ ಕಾಂಗ್ರೆಸ್ಸಿಗರನ್ನು ಏಕೆ ಅಂಡಮಾನ್ ಶಿಕ್ಷೆಗೆ ಕಳಿಸಲಿಲ್ಲ?
ಈ ಪ್ರಶ್ನೆಯಲ್ಲಿ ಅರ್ಧ ಸತ್ಯ ಇದೆ. ಬ್ರಿಟಿಷರು ತಮ್ಮ ಸಾಮ್ರಾಜ್ಯಕೆ ಅಪಾಯ ಎಂದೆನಿಸಿದವರನ್ನು ಒಂದೋ ಕೊಂದು ಹಾಕುತ್ತಿದ್ದರು, ಅಥವಾ ಗಲ್ಲು ಶಿಕ್ಷೆ ವಿಧಿಸುತ್ತಿದ್ದರು, ಅಥವಾ ಅಂಡಮಾನ್ ಶಿಕ್ಷೆ ವಿಧಿಸುತ್ತಿದ್ದರು.
ಈ ಮೊದಲ ಗುಂಪಿನಲ್ಲಿ ಬ್ರಿಟಿಷ್ ಅಧಿಕಾರಗಳನ್ನು ಕೊಂದುಹಾಕುತ್ತಿದ್ದ ಕ್ರಾಂತಿಕಾರಿಗಳು, ಬ್ರಿಟಿಷ್ ಬಂಡವಾಳಶಾಹಿ ಪ್ರಭುತ್ವದ ವಿರುದ್ಧ ಮತ್ತು ಬ್ರಿಟಿಷರ ರಕ್ಷಣೆಯೊಂದಿಗೆ ರೈತಾಪಿಗಳ ರಕ್ತ ಹೀರುತ್ತಿದ್ದ ಭೂ ಮಾಲಿಕರ ವಿರುದ್ಧ ಸೆಣೆಸುತ್ತಿದ್ದ ಆದಿವಾಸಿ ಹಾಗೂ ರೈತ ಬಂಡಾಯಗಾರರು, ಕಮ್ಯುನಿಸ್ಟರು ಹಾಗೂ ಹಲವಾರು ಕಡೆಗಳಲ್ಲಿ ತಳಮಟ್ಟದ ಕಾಂಗ್ರೆಸ್ ಕಾರ್ಯಕರ್ತರು ಕೂಡಾ ಸೇರಿಕೊಳ್ಳುತ್ತಾರೆ.
ಎರಡನೇ ಸ್ವಾತಂತ್ರ್ಯ ಹೋರಾಟಗಾರರ ಗುಂಪು ಸಶಸ್ತ್ರ ಹೋರಾಟವನ್ನು ಅನುಸರಿಸುತ್ತಿರಲಿಲ್ಲ. ಅವರು ಬ್ರಿಟಿಷರನ್ನು ಸಾಂವಿಧಾನಿಕ ಮಾರ್ಗದಿಂದಲೇ ಹಂತಹಂತವಾಗಿ ಭಾರತ ಬಿಟ್ಟು ತೊಲಗಿಸಬೇಕೆಂದು ರಾಜಿ ಮತ್ತು ಸಂಘರ್ಷ ಮಾರ್ಗವನ್ನು ಅನುಸರಿಸುತ್ತಿದ್ದರು. ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಅಹಿಂಸಾತ್ಮಕ ಹಾಗೂ ಶಾಂತಿಯುತ ಹೋರಾಟಗಳನ್ನು ಮಾಡುತ್ತಿದ್ದರು. ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವಾದ ಬಂಡವಾಳಶಾಹಿ ಹಾಗೂ ಭೂ ಮಾಲಿಕರ ಬೆಂಬಲವೂ ಅವರಿಗಿರುತ್ತಿತ್ತು. ಕಾಂಗ್ರೆಸ್ ಮತ್ತು ಕಾಂಗ್ರೆಸ್ ಮಾದರಿ ಹೋರಾಟಗಾರರು ಈ ಎರಡನೇ ಗುಂಪಿಗೆ ಸೇರುವವರು. ಕಾಂಗ್ರೆಸ್ ನಾಯಕತ್ವಕ್ಕೆ ಪಾಠ ಕಲಿಸಬೇಕೆಂದಾಗ ಬ್ರಿಟಿಷರು ಅವರನ್ನೂ ಸಹ ಹಲವಾರು ವರ್ಷಗಳ ಕಾಲ ಜೈಲಿಗೆ ದೂಡಿದೆ. ಗಾಂಧಿ, ನೆಹರೂ, ಪಟೇಲ್ ಇನ್ನಿತ್ಯಾದಿ ನಾಯಕರು ಈ ಎರಡನೇ ಸರಣಿಗೆ ಸೇರುವರು.
ಆದರೆ ಮೂರನೇ ಗುಂಪು ಬ್ರಿಟಿಷರೊಡನೆ ಸಹಕರಿಸಿದವರು. ಯಾರು ತಮ್ಮ ಸಾಮ್ರಾಜ್ಯದ ಬುನಾದಿಗೆ ಸಹಕರಿಸುತ್ತಿದ್ದರೋ, ಯಾರು ಭಾರತೀಯರಲ್ಲಿ ಐಕ್ಯತೆ ಮೂಡದಂತೆ ಕೋಮು ವಿಭಜನೆಯನ್ನು ಬಿತ್ತುತ್ತಾ ಬ್ರಿಟಿಷರೊಂದಿಗೆ ಕೈಗೂಡಿಸುತ್ತಿದ್ದರೋ. ಯಾರು ಬ್ರಿಟಿಷ್ ಸಾಮ್ರಾಜ್ಯದ ಸಾಮಾಜಿಕ ಬೇರುಗಳಾದ ಭೂ ಮಾಲಿಕರು, ರಾಜರು ಮತ್ತು ಬಂಡವಾಳಷಾಹಿಗಳ ವಿರುದ್ಧ ಹೋರಾಡದಂತೆ ಜನರನ್ನು ಕೋಮು ಉನ್ಮಾದಕ್ಕೆ ದೂಡಿ ಬ್ರಿಟಿಷ್ ಆಡಳಿತ ಮುಂದುವರೆಯಲು ಸಹಾಯ ಮಾಡುತ್ತಿದ್ದರೋ ಅಂಥವರನ್ನು ಬ್ರಿಟಿಷರು ಬಂಧಿಸುವುದಿರಲಿ ಅವರಿಗೆ ಸಕಲ ಸಹಕಾರ, ಜೈಲಿನಿಂದ ಗೃಹಬಂಧನ, ಬ್ರಿಟಿಷ್ ಸಂಬಳ ಎಲ್ಲಾ ಕೊಟ್ಟು ಗೌರವಿಸುತ್ತಿದ್ದರು.
ಸಾವರ್ಕರ್, ಆರೆಸ್ಸೆಸ್, ಮುಸ್ಲಿಂ ಲೀಗ್, ಹಿಂದೂಮಹಾಸಭ ಇವೆಲ್ಲವೂ ಈ ಕೊನೆಯ ಗುಂಪಿಗೆ ಸೇರುತ್ತಾರೆ.
•ಪ್ರಶ್ನೆ 3: ಸಾವರ್ಕರ್ ಬ್ರಿಟಿಷರ ಹದ್ದುಗಣ್ಣಿನಲ್ಲಿದ್ದುಕೊಂಡೇ ಅಸ್ಪೃಶ್ಯತಾ ನಿವಾರಣಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ನೀವು ಅದರ ಬಗ್ಗೆ ಹೇಳುವುದೇ ಇಲ್ಲ? ಅವರು ಹಿಂದೂ ಧರ್ಮದ ಕ್ರಿಟಿಕಲ್ ಇನ್ ಸೈಡರ್!
ಡಾ. ಅಂಬೇಡ್ಕರ್ ಅವರು ಅಸ್ಪೃಷ್ಯತೆಯ ಮೂಲ ಜಾತಿ ವ್ಯವಸ್ಥೆಯಲ್ಲಿದೆ. ಜಾತಿಯ ಮೂಲ ಮನುಸ್ಮೃತಿಯನ್ನು ಆಧರಿಸಿದ ಹಿಂದೂ ಧರ್ಮದಲ್ಲಿದೆ ಎಂದು ತಿಳಿಹೇಳಿ 1927ರಲ್ಲೇ ಮನುಸ್ಮೃತಿಯನ್ನು ಸುಟ್ಟುಹಾಕಿದ್ದರು. ಆದರೆ ಸಾವರ್ಕರ್ ಮತ್ತು ಆರೆಸ್ಸೆಸ್ ಅವರುಗಳದ್ದು ಅದಕ್ಕೆ ತದ್ವಿರುದ್ಧವಾದ ತಿಳವಳಿಕೆ.
ಅವರ ಪ್ರಕಾರ ಜಾತಿ ವ್ಯವಸ್ಥೆಯಿಂದಾಗಿಯೇ ಭಾರತದ ಹಿಂದೂ ಸಮಾಜ ಗಟ್ಟಿಯಾಗಿದೆ. ಆದ್ದರಿಂದ ಮನುಸ್ಮೃತಿಯೇ ಈ ದೇಶದ ಸಂವಿಧಾನವಾಗಬೇಕೆಂಬುದು ಅವರ ಹಿಂದೂರಾಷ್ಟ್ರದ ಸಾರ. ಸಾವರ್ಕರ ಅವರು ತಮ್ಮ Six Glorious Epochs Of Indian History ಪುಸ್ತಕದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಜಾತಿ-ವರ್ಣ ವ್ಯವಸ್ಥೆಯನ್ನು ಅಲುಗಾಡಿಸಿದ ಬೌದ್ಧ ಮತ್ತು ಬೌದ್ಧ ಧರ್ಮ ದೇಶದ್ರೋಹಿ ಧರ್ಮ ಎಂದು ಕರೆಯುತ್ತಿದ್ದಾರೆ. ಮತ್ತು ಪುಶ್ಯಮಿತ್ರ ಶೃಂಗ ಬೌದ್ಧರ ನರಮೇಧ ಮಾಡಿದ್ದು ಅಪಾರ ದೇಶಪ್ರೇಮಿ ಕರ್ತವ್ಯ ವಾಗಿತ್ತು ಎನ್ನುತ್ತಾರೆ.
ಹಾಗೆಯೇ ಆರೆಸ್ಸೆಸ್ ಸರಸಂಘ ಚಾಲಕ ಗೋಳ್ವಾಲ್ಕರ್ ಅವರು ಜಾತಿ ಪದ್ಧತಿ ಸಡಿಲವಾಗಿದ್ದರಿಂದಲೇ ಈಶಾನ್ಯ ಭಾರತ ಮತ್ತು ವಾಯುವ್ಯ ಭಾರತದಲ್ಲಿ ಪರಧರ್ಮಕ್ಕೆ ತಾವು (ಸ್ಥಳ) ಸಿಕ್ಕಿತು ಎಂದು ದೂರುತ್ತಾರೆ. ಹಾಗೂ ಅವೈದಿಕವಾದ ಮತ್ತು ಜಾತಿ ನಿರಾಕರಣೆ ಮಾಡುವ ಜೈನ, ಬೌದ್ಧ ಸಿಕ್, ಲಿಂಗಾಯತ ಗಳನ್ನು ಒಂದು ಧರ್ಮವೆಂದೇ ಮಾನ್ಯತೆ ಮಾಡಬಾರದೆಂದು ಹೇಳುತ್ತಾರೆ.
ಸಾವರ್ಕರ್ ಆಗಲೀ ಆರೆಸ್ಸೆಸ್ ಆಗಲೀ ಅದೇ ಕಾಲಘಟ್ಟದಲ್ಲಿ ಅಂಬೇಡ್ಕರ್ ಅವರು ನಡೆಸಿದ ಮಹಾಡ್ ಸತ್ಯಾಗ್ರಹ ಅಥವಾ ಕಾಳಾರಾಮ್ ದೇವಸ್ಥಾನ ಪ್ರವೇಶ ಹೋರಾಟದಲ್ಲಿ ಭಾಗವಹಿಸುವುದಿರಲಿ ಅದರ ವಿರುದ್ಧ ಕೆಂಡಕಾರಿದ್ದರು. ಅದರಲ್ಲೂ ಆ ವಲಯದಲ್ಲಿದ್ದ ಭೂಮಾಲಿಕ ಖೋತ್ ವ್ಯವಸ್ಥೆ ವಿರುದ್ಧ ಅಂಬೇಡ್ಕರ್ ಶೂದ್ರ ರೈತಾಪಿ ಮತ್ತು ದಲಿತ ಕೂಲಿಗಳನ್ನು ಸಂಘಟಿಸುತ್ತಿದ್ದರೆ ಆಗ ರತ್ನಗಿರಿಯಲ್ಲಿದ್ದ ಸಾವರ್ಕರ್ ಈ ಹೋರಾಟದಲ್ಲಿ ಹಿಂದೂಗಳು ಭಾಗವಹಿಸಬಾರದೆಂದು ಹೇಳಿಕೆ ನೀಡುತ್ತಾರೆ.
1956ರಲ್ಲಿ ಅಂಬೇಡ್ಕರ್ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಅಪ್ಪಿಕೊಂಡಾಗ ಸಾವರ್ಕರ್ ಅಂಬೇಡ್ಕರ್ ಅವರನ್ನು ಅತ್ಯಂತ ಹೀನಾಯವಾಗಿ ಖಂಡಿಸುತ್ತಾರೆ. ಆಗ ಅಂಬೇಡ್ಕರ್ ಅವರ ಪ್ರಬುದ್ಧ ಭಾರತ ಪತ್ರಿಕೆಯಲ್ಲಿ ವೀರ ಸಾವರ್ಕರ್ ಅವರ ಹೇಡಿ ಹಾಗೂ ಸೋಗಲಾಡಿ ದಲಿತಪರತೆಯ ಬಗ್ಗೆ ಸರಣಿ ಲೇಖನಗಳನ್ನು ಪ್ರಕಟಿಸುತ್ತಾರೆ.
ಆದರೂ 1930ರ ನಂತರ ಹಿಂದೂ ಮಹಾಸಭ ಹಾಗೂ ಸಾವರ್ಕರ್ ಅಸ್ಪೃಷ್ಯರ ಪರವಾಗಿ ಮಾತನಾಡಲು ಪ್ರಾರಂಭಿಸಿದರು. 1931 ರಲ್ಲಿ ಆ ಪ್ರದೇಶದ ಸಾಮಂತರೊಬ್ಬರಿಗೆ ಸಾವರ್ಕರ್ ಅವರು ಅಸ್ಪೃಷ್ಯರಿಗಾಗಿ "ಪತಿತಪಾವನ" ದೇವಸ್ಥಾನವೊಂದನ್ನು ಸ್ಥಾಪಿಸಲು ಸಹಾಯ ಮಾಡಿದರು. ಇದು ನಿಜ. ಆದರೆ ಅರ್ಧ ಸತ್ಯ.
ಏಕೆಂದರೆ ಈ ಪತಿತ ಪಾವನ ದೇವಸ್ಥಾನ ದಲಿತರು ಮತ್ತು ಸವರ್ಣೀಯರು ಎಲ್ಲರೂ ಒಟ್ಟಿಗೆ ದೇವದರ್ಶನ ಮಾಡುವಂಥ ದೇವಸ್ಥಾನವಾಗಿರಲಿಲ್ಲ. ಬದಲಿಗೆ ಅದು ಕೇವಲ ದಲಿತರಿಗೆ ಮಾತ್ರ ಸೀಮಿತವಾಗಿದ್ದ ದೇವಸ್ಥಾನವಾಗಿತ್ತು. ಏಕೆಂದರೆ ಹಿಂದೂ ಮಹಾಸಭಾ ಆ ವೇಳೆಗಾಗಲೇ ತಾವು ಎಂದಿಗೂ ದೇವಸ್ಥಾನ ಪ್ರವೇಶ ದಂಥ ಕಾರ್ಯಕ್ರಮಗಳ ಮೂಲಕ ಮೇಲ್ಜಾತಿ ಭಾವನೆಗಳಿಗೆ ಧಕ್ಕೆಯಾಗುವ ಕೆಲಸದಲ್ಲಿ ತೊಡಗುವುದಿಲ್ಲ ಎಂದು ಪ್ರಚಾರ ಮಾಡುತ್ತಿದ್ದರು. ಅದು ಅವರ 1937 ರ ಚುನಾವಣಾ ಪ್ರಣಾಳಿಕೆಯ ಭರವಸೆಯೂ ಆಗಿತ್ತು. ಈಗಾಗಲೆ ಹೇಳಿದಂತೆ ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಡೆದ ಕಾಳಾರಾಂ ದೇವಸ್ಥಾನ ಪ್ರವೇಶ ಹೋರಾಟವನ್ನು ಸಾವರ್ಕರ್ ಬೆಂಬಲಿಸಿರಲಿಲ್ಲ.
ಹೀಗೆ ಪತಿತಪಾವನ ದೇವಸ್ಥಾನ ಒಂದು ಅಸ್ಪೃಷ್ಯ ದೇವಸ್ಥಾನ ಆಗಿತ್ತೇ ವಿನಾ ಅಸ್ಪೃಶ್ಯತಾ ನಿವಾರಣಾ ದೇವಸ್ಥಾನವಾಗಿರಲಿಲ್ಲ.
ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಸಾವರ್ಕರ್ ಅವರಿಗೆ ಮರುಪತ್ರವನ್ನೂ ಬರೆಯುತ್ತಾರೆ.
"ಇಂಥಾ ಪ್ರಯತ್ನಗಳು ಸ್ವಾಗತಾರ್ಹವಾದರೂ ಎಲ್ಲಿಯತನಕ ಮನುಸ್ಮೃತಿ ಹಾಗೂ ವರ್ಣಾಶ್ರಮದ ವಿರುದ್ಧ ಮಹಾ ಸಭಾ ನಿಲುವನ್ನು ತೆಗೆದುಕೊಳ್ಳುವುದಿಲ್ಲವೋ ಅಲ್ಲಿಯತನಕ ಇಂಥಾ ಕಾರ್ಯಕ್ರಮಗಳು ಯಾವ ಪ್ರಯೋಜವನ್ನು ಉಂಟುಮಾಡುವುದಿಲ್ಲ"
ಎಂದು ಎಚ್ಚರಿಸುತ್ತಾರೆ.
ನವ ಹಿಂದೂತ್ವವಾದಿಗಳು ಆ ಪತ್ರದ ಮೊದಲ ಭಾಗವನ್ನು ಮಾತ್ರ ಪ್ರಚಾರ ಮಾಡುತ್ತಾ ಸಾವರ್ಕರ್ ಅವರನ್ನು ಅಂಬೇಡ್ಕರ್ ಮೆಚ್ಚಿಕೊಂಡಿದ್ದರು ಎಂದು ಪ್ರಚಾರ ಮಾಡುತ್ತಿದ್ದಾರೆ.
ಅಷ್ಟು ಮಾತ್ರವಲ್ಲ. ಸಿಪಿ ಭಿಷ್ಕರ್ ಅವರು ಹೆಡ್ಗೇವಾರರ ಜೀವನ ಚರಿತ್ರೆಯಲ್ಲಿ ದಾಖಲಿಸಿರುವಂತೆ: ಮೇಲ್ಜಾತಿಯವರ ಮನೆಗೆ ಹೋದಾಗ ಕೆಳಜಾತಿಯವರ ಜೊತೆ ಊಟ ಮಾಡಿ ಆ ಮನೆಯವರ ಮನಸ್ಸಿಗೆ ನೋವುಂಟುಮಾಡಬಾರದು ಎಂಬುದು ಹೆಡ್ಗೆವಾರ್ ಅವರ ನಿಲುವಾಗಿತ್ತು.
ಹಿಂದೂ ಮಹಸಭಾದ ಪ್ರಮುಖ ನಾಯಕರಲಿ ಒಬ್ಬರೂ ಮತ್ತು ಆರೆಸ್ಸೆಸ್ ನ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಡಾ. ಬಿ.ಎಸ್. ಮೂಂಜೆ ಯವರಂತೂ ತಮ್ಮ ಡೈರಿಯಲ್ಲಿ:
"ಇವತ್ತಿನ ಸಂದರ್ಭದಲ್ಲಿ ನಾವು ನಮ್ಮ ಎಲ್ಲಾ ಶಕ್ತಿಯನ್ನು, ಹಣ ಮತ್ತು ಇನ್ನಿತರ ಸಂಪನ್ಮೂಲಗಳನ್ನು ಒಗ್ಗೂಡಿಸಿ ಮಾಡಬೇಕಾದ ತುರ್ತು ಕೆಲಸವೆಂದರೆ ಸವರ್ಣೀಯ ಹಿಂದೂಗಳ ಸೈನಿಕ ತರಬೇತಿ. ಆ ತರಬೇತಿಯನ್ನು ಪಡೆದವರು ನಂತರದಲ್ಲಿ ಹಿಂದೂ ಧರ್ಮವನ್ನು ತೊರೆಯುವವರನ್ನು ಮತ್ತು ಆ ರೀತಿ ಹಿಂದೂಶ್ರದ್ಧೆಯನ್ನು ತೊರೆಯುವಂತೆ ಮಾಡುವವರನ್ನು ಶಿಕ್ಷಿಸಲು ಸಮರ್ಥರಾಗುತ್ತಾರೆ" ಎಂದು ಬರೆದುಕೊಂಡಿದ್ದಾರೆ.
ಹಾಗೆ ನೋಡಿದರೆ 1932 ರ ಪೂನ ಒಪ್ಪಂದದಲ್ಲಿ ಗಾಂಧಿ ನೀಡಿದ ದಲಿತೋದ್ಧಾರದ ಒಪ್ಪಂದಕ್ಕೆ ಹಿಂದೂ ಸಮಾಜದ ಪರವಾಗಿ ಸಹಿ ಹಾಕಿದವರಲ್ಲಿ ಮೂಂಜೆಯವರೂ ಒಬ್ಬರು.ಆದರೂ ಅವರು ಅಸ್ಪೃಷ್ಯರು ಮತ್ತು ಅಂಬೇಡ್ಕರ್ ಬಗ್ಗೆ ತಮಗಿದ್ದ ದ್ವೇಷವನ್ನು 1935ರಲ್ಲಿ ಅತ್ಯಂತ ಸ್ಪಷ್ಟವಾಗಿ ಹೀಗೆ ಕಕ್ಕಿಕೊಂಡಿದ್ದರು:
"....ಅಂಬೇಡ್ಕರ್ ಅವರ ಮೇಲೆ ಮತ್ತು ಅಸ್ಪೃಷ್ಯರ ಮೇಲೆ ಹಣವನ್ನು ಖರ್ಚು ಮಾಡುವುದೆಂದರೆ ಹಾವಿಗೆ ಹಾಲೆರದಂತೆ. ನಾವು ಅಸ್ಪೃಷ್ಯರಿಗೆ ಯಾವುದೇ ಸಹಾಯವನ್ನು ಮಾಡದೆ ಅವರ ಕಷ್ಟಗಳನ್ನು ಅವರೇ ಅನುಭವಿಸಲು ಬಿಟ್ಟುಬಿಡಬೇಕು"
(Moonje Diary, Nehru Memorial Museum and Library, ಕೀತ್ ಮೇದೋಕ್ರಾಫ್ಟ್ ಅವರ the Moonje-Ambedkar Pact ಎಂಬಲ್ಲಿ ಉಲ್ಲೇಖ )
ಆದರೂ 1930ರ ನಂತರ ಹಿಂದೂ ಮಹಾಸಭಾ ದಲಿತರ ಬಗ್ಗೆ ತೋರಿಕೆಯ ಮಾತನಾಡಲು ಕಾರಣವಿತ್ತು.
ಭಾರತದ ಸ್ವಾತಂತ್ರ್ಯ ಹೋರಾಟವು ಪ್ರಧಾನವಾಗಿ ಹಿಂದೂ ಸವರ್ಣೀಯ ಮೇಲ್ಜಾತಿಗಳ ನೇತೃತ್ವದಲ್ಲೇ ಇತ್ತು. ಹೀಗಾಗಿ ಅಂಬೇಡ್ಕರ್ ಬರುವ ತನಕ ಭಾರತದ ಸ್ವಾತಂತ್ರ್ಯ ಹೋರಾಟದ ನೇತಾರರು ದಲಿತರನ್ನು ತಮ್ಮಷ್ಟೇ ಸಮಾನರಾದ ನಾಗರೀಕರೆಂದೂ ಪರಿಗಣಿಸಿರಲಿಲ್ಲ. ಸವರ್ಣೀಯ ಹಿಂದೂಗಳು, ಹಿಂದೂ ಸಂಘಟನೆಗಳು ದಲಿತರನ್ನು ಹಿಂದೂ ಸಮಾಜದ ಭಾಗವೆಂದೂ ಪರಿಗಣಿಸಿರಲಿಲ್ಲ. ಅವರಿಗೆ ಜಾತಿ ವಿನಾಶವು ಸ್ವಾತಂತ್ರ್ಯದ ಪ್ರಶ್ನೆಯಾಗಿಯೂ ತೋರಿರಲಿಲ್ಲ.
ಆದರೆ ಸೈಮನ್ ಕಮಿಷನ್, ದುಂಡು ಮೇಜಿನ ಪರಿಷತ್ತಿನ ಚರ್ಚೆಗಳ ನಂತರ 1935ರ ಭಾರತೀಯ ಸರ್ಕಾರ ಕಾಯಿದೆ ರೂಪುಗೊಂಡು ಪ್ರತಿಯೊಂದು ಕೋಮಿಗೂ ಅದರ ಜನಸಂಖ್ಯೆ ಆಧಾರಿತ ಪ್ರಾತಿನಿಧ್ಯ ಎಂದಾಯಿತು. ಅದಾದ ನಂತರವೇ ದಲಿತರು ಹಿಂದು ಧರ್ಮ ತೊರೆದರೆ ಹಿಂದೂ ಕೋಮಿನ ಜನಸಂಖ್ಯೆ ಪ್ರಮಾಣ ಕಡಿಮೆಯಾಗಿ, ಆ ಮೂಲಕ ಹಿಂದೂ ಪ್ರಾತಿನಿಧ್ಯ ಕಡಿಮೆಯಾಗುತ್ತದೆ ಎಂಬ ಭಯ ಕಾಂಗ್ರೆಸ್ ಮತ್ತು ಹಿಂದೂ ಮಹಾ ಸಭಾ ಎರಡನ್ನು ಸಮಾನವಾಗಿ ಆವರಿಸಿಕೊಂಡಿತ್ತು.
ಅದರಲ್ಲೂ ಪ್ರಾರಂಭದಲ್ಲಿ ಅಂಬೇಡ್ಕರ್ ಇಸ್ಲಾಂ ಧರ್ಮವನ್ನು ಸೇರುವ ಸಾಧ್ಯತೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದದ್ದು ಸಹ ಹಿಂದು ಮಹಾ ಸಭಾದ ಆತಂಕವನ್ನು ಹೆಚ್ಚಿಸಿತು. ಹೀಗಾಗಿ ಒಲ್ಲದ ಮನಸ್ಸಿನಿಂದ ಸಾವರ್ಕರ್ ಮತ್ತು ಮೂಂಜೆಯಂಥ ಹಿಂದೂ ಮಹಾ ಸಭಾದ ನಾಯಕರು ಯಾವ ಕಾರಣಕ್ಕೂ ಅಂಬೇಡ್ಕರ್ ಅವರು ಇಸ್ಲಾಮನ್ನು ಸೇರಬಾರದೆಂದು ಮನಒಲಿಸಲು ಮುಂದಾಗುತ್ತಾರೇ. ರಾಜಿ ಮಾತುಕತೆಗೆ ಮುಂದಾಗುತ್ತಾರೆ . ಆದರೆ ಅವೆಲ್ಲವೂ ದಲಿತರನ್ನು ಹೇಗಾದರೂ ಮಾಡಿ ಹಿಂದೂ ಚೌಕಟ್ಟಿನ ಒಳಗೆ ಉಳಿಸಿಕೊಳ್ಳುವ ರಾಜಕೀಯ ಲೆಕ್ಕಾಚಾರದಿಂದಲೇ ವಿನಾ ದಲಿತರ ಮೇಲಿನ ಕಾಳಜಿಯಿಂದಲ್ಲ.
ಇಂದು ಕೂಡ ಬಿಜೆಪಿ ಮತ್ತು ಆರೆಸ್ಸೆಸ್ ದಲಿತರ ಬಗ್ಗೆ ಇದೇ ಧೋರಣೆಯನ್ನೇ ಅನುಸರಿಸುತ್ತಿದೆ. ಅವರ ಹಿಂದೂ ರಾಷ್ಟ್ರದಲ್ಲಿ ದಲಿತರ ಸ್ಥಾನ ವರ್ಣಾಶ್ರಮದಲ್ಲಿ ಎಲ್ಲಿದೆಯೋ ಅಲ್ಲೇ ಇರುತ್ತದೆಂಬುದನ್ನು ಅವರು ಪದೇಪದೇ ಸಾಬೀತುಪಡಿಸುತ್ತಲೇ ಇದ್ದಾರೆ.
ಹೀಗಾಗಿ ಸಾವರ್ಕರ್ ಹಿಂದೂ ಧರ್ಮದೊಳಗಿನ ಕ್ರಿಟಿಕಲ್ ಇನ್ ಸೈಡರ್ರೂ ಅಲ್ಲ.. ಮಣಾಂಗಟ್ಟಿಯೂ ಅಲ್ಲ. ಪಕ್ಕಾ ಬ್ರಾಹ್ಮಣಶಾಹಿ ಮರುಸ್ಥಾಪಕ ಅಷ್ಟೆ.
• ಪ್ರಶ್ನೆ 4: ಸಾವರ್ಕರ್ ಮನೆತನದ ಮೂವರು ಸಹೋದರರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಮತ್ತು ಬೀದಿಗೆ ಬಿದ್ದರು. ಕಾಂಗ್ರೆಸ್ಸಿನಲ್ಲಿ ಹೀಗೆ ಹೋರಾಡಿದವರುಂಟೆ?
ಸಾವರ್ಕರ್ ಮತ್ತು ಅವರ ಸಹೋದರರು 1911ಕ್ಕೆ ಮುನ್ನ ಅಭಿನವ್ ಭಾರತ್ ಸದಸ್ಯರಾಗಿ ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ಮತ್ತು ಅಂಡಮಾನ್ ಜೈಲಿಗೆ ತಳ್ಳಲ್ಪಟ್ಟಿದ್ದು ನಿಜ. ಆದರೆ ಅಷ್ಟು ಮಾತ್ರ ನಿಜ.
ಅಂಡಮಾನ್ ಜೈಲಿನಲ್ಲಿದ್ದಾಗಲೇ ಬ್ರಿಟಿಷರ ಆಳ್ವಿಕೆಯನ್ನು ತ್ರಿಕರಣಪೂರ್ವಕವಾಗಿ ಬೆಂಬಲಿಸುತ್ತೇವೆಂದು ಬರೆದುಕೊಟ್ಟ ಮೇಲೆ ಸಾವರ್ಕರ್ ಸಹೋದರರು ತಮ್ಮ ಇಡೀ ರಾಜಕೀಯ ಬದುಕನ್ನು ಸಂಪೂರ್ಣವಾಗಿ ಬ್ರಿಟಿಷರ ಪರವಾಗಿ , ಮುಸ್ಲಿಮರ ವಿರುದ್ಧವಾಗಿ, ಸ್ವಾತಂತ್ರ್ಯ ಹೋರಾಟಕ್ಕೆ ವಿರುದ್ಧವಾಗಿ ಮೀಸಲಾಗಿಟ್ಟರು. 1939ರಲ್ಲಿ ಎರಡನೇ ಮಹಾಯುದ್ಧ ಪ್ರಾರಂಭವಾದಾಗ ಸಾವರ್ಕರ್ ಸಹೋದರರೂ ಹಿಂದೂಗಳನ್ನು ಬ್ರಿಟಿಷ್ ಸೇನೆಯಲ್ಲಿ ಭರ್ತಿ ಮಾಡುತ್ತಾ, ಬ್ರಿಟಿಷ್ ಸಾಮ್ರಜ್ಯವನ್ನು ಗಟ್ಟಿಗೊಳಿಸಿದರು. 1942ರಲ್ಲಿ ಇಡೀ ದೇಶ ಬ್ರಿಟಿಷರ ವಿರುದ್ಧ ಬೀದಿಯಲ್ಲಿದ್ದಾಗ ಸಾವರ್ಕರ್ ಮತ್ತವರ ಹಿಂದೂ ಮಹಾಸಭಾ ಬ್ರಿಟಿಷರೊಂದಿಗೆ ಸೇರಿಕೊಂಡು ಸರ್ಕಾರ ರಚಿಸಿತ್ತು. ಸ್ವಾತಂತ್ರ್ಯ ಹೋರಾಟ ಮಾಡುತ್ತಿದ್ದ ಜನರ ಮೇಲೆ ಹಿಂದೂ ಮಹಾಸಭಾ ಸರ್ಕಾರ ಗುಂಡಿನ ಮಳೆ ಸುರಿಸಿ ದಮನ ಮಾಡಿತ್ತು. ಅದಕ್ಕಾಗಿ ಬ್ರಿಟಿಷ್ ಸರ್ಕಾರದಿಂದ ಮಾನ್ಯತೆ ಹಾಗೂ ಸವಲತ್ತುಗಳನ್ನು ಕೂಡಾ ಅವರು ಪಡೆದುಕೊಂಡರು.
ಹೀಗಾಗಿ ಸಾವರ್ಕರ್ ಸಹೋದರರು ಬೀದಿಗೆ ಬಿದ್ದರೆಂಬುದಾಗಲೀ, 1923ರ ನಂತರವೂ ಬ್ರಿಟಿಷರು ಅವರ ಮೇಲೆ ನಿಗಾ ಇಟಿದ್ದರೆಂಬುದಾಗಲೀ ನಿಜವಲ್ಲ. ಹೆಚ್ಚಿನ ಮಾಹಿತಿಗಳಿಗೆ ಸಂಘಪರಿವಾರದವರೂ ಕೂಡ ನಿಜವೆಂದು ಒಪ್ಪುವ ಧನಂಜಯ್ ಕೀರ್ ಅವರು ಬರೆದಿರುವ ಸಾವರ್ಕರ್ ಜೀವನ ಚರಿತ್ರೆಯನ್ನು ಓದಬಹುದು. ಹಾಗೂ ಆ ಕಾಲದ ಸಾವರ್ಕರ್ ಅವರ ಭಾಷಣಗಳನ್ನು ಓದಬಹುದು.
ಇನ್ನು ಕಾಂಗ್ರೆಸ್ ಅದೇ ರೀತಿಯ ಹೋರಾಟ ಮಾಡಿತ್ತೇ ಎಂಬ ಪ್ರಶ್ನೆ.
ಆಗ ಸ್ವಾತಂತ್ರ್ಯ ಹೋರಾಟದ ಪ್ರಮುಖ ಧಾರೆಯಲ್ಲಿದ್ದ ಕಾಂಗ್ರೆಸ್ ಒಂದು ಚಳವಳಿಯಾಗಿತ್ತು. ಈ ದೇಶದ ಕೆಲವು ದೇಶಪ್ರೇಮಿ ಭೂಮಾಲೀಕರು, ರಾಜರನ್ನೂ ಒಳಗೊಂಡಂತೆ ಸುಶಿಕ್ಷಿತ ಮೇಲ್ ಮಧ್ಯಮ ವರ್ಗದವರು, ವಿದ್ಯಾರ್ಥಿಗಳು, ವಕೀಲರು, ರೈತಾಪಿಗಳು, ರೈತ ಕೂಲಿಗಳು ಸಹ ಕಾಂಗ್ರೆಸ್ ನೇತೃತ್ವದ ಸ್ವಾತಂತ್ರ್ಯ ಸಮರದಲ್ಲಿದ್ದರು. ಕೆಲವು ಕಾಂಗ್ರೆಸ್ ನಾಯಕರು ಸಾವರ್ಕರ್ ಸಹೋದರರಿಗಿಂತ ಹೆಚ್ಚು ಬಂಧನ ಮತ್ತು ಜೈಲು ವಾಸಗಳನ್ನು ಅನುಭವಿಸಿದರು. ಅದರಲ್ಲಿ ಗಾಂಧಿ, ನೆಹರು, ಸರ್ದಾರ್ ಪಟೇಲ್ ಅಂಥವರುಗಳು ಇದ್ದಾರೆ. ಮಿಕ್ಕಂತೆ ಕಾಂಗ್ರೆಸ್ ನ ಹಲವಾರು ಅನಾಮಧೇಯ ಕಾರ್ಯಕರ್ತರು ಮತ್ತು ಕೆಳಹಂತದ ಹಾಗೂ ಬಡ-ಮಧ್ಯಮ ವರ್ಗದ ನಾಯಕರು, ಸಾವರ್ಕರ್ ಸಹೋದರರುಗಳಿಗಿಂತ, ನೆಹರೂ-ಗಾಂಧಿಗಳಿಗಿಂತ ಹೆಚ್ಚಿನ ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ.
ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೇ ಸ್ವಾತಂತ್ರ್ಯದ ಲಾಭ ಪಡೆದ ರಾಜರುಗಳ ಮತ್ತು ಭೂ ಮಾಲಿಕವರ್ಗದ ಆಸಕ್ತಿಗಳ ಪರವಾಗಿ ಧ್ವನಿ ಎತ್ತಿದ್ದು ಮಾತ್ರ ಇದೇ ಅರೆಸ್ಸೆಸ್, ಅವರ ಭಾರತೀಯ ಜನ ಸಂಘ ಮತ್ತು ಸಾವರ್ಕರ್ .
• ಪ್ರಶ್ನೆ-5: ದ್ವಿರಾಷ್ಟ್ರ ಸಿದ್ಧಾಂತವನ್ನು ಮೊದಲು ಮಂಡಿಸಿದ್ದು ಅಲಿಘರ್ ವಿಶ್ವವಿದ್ಯಾಲಯದ ಸರ್ ಸಯ್ಯದ್ ಅಹ್ಮದ್ ಖಾನ್. ಸಾವರ್ಕರ್ ಮತ್ತು ಹಿಂದೂ ಮಹಾಸಭಾ ಕೊನೆಯವರೆಗೂ ಅಖಂಡ ಭಾರತಕ್ಕೆ ಹೋರಾಡುತ್ತಿದ್ದದ್ದು ತಮಗೆ ಗೊತ್ತಿಲ್ಲವೇ?
ಸಂಘಪರಿವಾರದವರು ಮಾನ್ಯ ಮಾಡುವ ಪ್ರಖ್ಯಾತ ಇತಿಹಾಸಕಾರ ಆರ್‌ಸಿ ಮಜುಂದಾರ್ ಅವರು ದ್ವಿರಾಷ್ಟ್ರ ಸಿದ್ಧಾಂತದ ಹುಟ್ಟಿನ ಬಗ್ಗೆ ಹೀಗೆ ಹೇಳುತ್ತಾರೆ:
" ದ್ವಿರಾಷ್ಟ್ರ ಸಿದ್ಧಾಂತದ ಸೃಷ್ಟಿಕರ್ತರು ಬಂಗಾಳ ಪ್ರಾಂತ್ಯದ ನಭಾ ಗೋಪಾಲ್ ಅವರು. ಮುಸ್ಲಿಂ ಲೀಗ್ ಈ ಬಗ್ಗೆ ಪಸ್ತಾಪ ಮಾಡುವ 50 ವರ್ಷಗಳಿಗೆ ಮುಂಚೆ ಅವರು ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಂ ಎಂಬ ಎರಡು ರಾಷ್ಟ್ರಗಳಿವೆ ಎಂದು ಪ್ರತಿಪಾದಿಸಿದ್ದರು"
(Majumdar, R. C., Three Phases of India’s Struggle for Freedom )
ಅಂಬೇಡ್ಕರ್ ಅವರು ತಮ್ಮ "ಪಾಕಿಸ್ತಾನ ಅಥವಾ ಭಾರತದ ವಿಭಜನೆಯ ಪ್ರಶ್ನೆ" ಎಂಬ ವಿದ್ವತ್ಪೂರ್ಣ ಬರಹದಲ್ಲಿ ಉಲ್ಲೇಖಿಸುವಂತೆ ಆರ್ಯ ಸಮಾಜದ ಭಾಯಿ ಪರಮಾನಂದ್ ಅವರು 1909ರ ಸುಮಾರಿನಲ್ಲೇ ಹೀಗೆ ಹೇಳುತ್ತಾರೆ:
"ಸಿಂಧ್ ಪ್ರಾಂತ್ಯದ ಆಚೆಗಿರುವ ಪ್ರಾಂತ್ಯಗಳನ್ನು ಅಫ಼್ಘಾನಿಸ್ತಾನ ಮತ್ತು ವಾಯುವ್ಯ ಪ್ರಾಂತ್ಯಗಳ ಜೊತೆ ಸೇರಿಸಿ ಮುಸಲ್ಮಾನ ಸಾಮ್ರಾಜ್ಯವನ್ನು ಸ್ಥಾಪಿಸಬೇಕು. ಅಲ್ಲಿರುವ ಹಿಂದೂಗಳು ಇಲ್ಲಿಗೂ, ಇಲ್ಲಿರುವ ಮುಸ್ಲಿಮರು ಅಲ್ಲಿಗೂ ಹೋಗಬೇಕು ಎಂದು ಹೇಳುವ ಮೂಲಕ ಮುಸ್ಲಿಂ ಲೀಗ್, ಜಿನ್ನಾ, ಸಯ್ಯದ್ ಅಹ್ಮದ್ ಖಾನ್ ಅವರಿಗಿಂತಲೂ ಮುಂಚೆಯೇ ದ್ವಿರಾಷ್ಟ್ರ ಸಿದ್ಧಾಂತ ಪ್ರತಿಪಾದಿಸಿದ್ದರು."
ಅಷ್ಟು ಮಾತ್ರವಲ್ಲ. 1924ರಲ್ಲಿ ಆರ್ಯ ಸಮಾಜದ ಹಾಗೂ ಹಿಂದೂ ಮಹಾಸಭಾ ಹಿನ್ನೆಲೆಯ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದ ಲಾಲಾ ಲಜಪತ್ ರಾಯ್ ಅವರು ಟ್ರಿಬ್ಯೋನ್ ಪತ್ರಿಕೆಗೆ 1924ರಲ್ಲಿ ಬರೆದ ಲೇಖನದಲ್ಲಿ :
" ನನ್ನ ಸಲಹೆ ಏನೆಂದರೆ ಮುಸ್ಲಿಮರು ಹೆಚ್ಚಿರುವ ಪಶ್ಚಿಮ ಪಂಜಾಬನ್ನು ಮುಸ್ಲಿಂ ಆಡಳಿತದ ಪ್ರಾಂತ್ಯವನ್ನಾಗಿಯೂ, ಸಿಕ್ಕರು ಹಾಗೂ ಹಿಂದೂಗಳು ಹೆಚ್ಚಿರುವ ಪೂರ್ವ ಪಂಜಾಬನ್ನು ಹಿಂದೂ ಆಡಳಿತದ ಪ್ರಾಂತ್ಯವನ್ನಾಗಿಯೂ ವಿಭಜಿಸಬೇಕು"
ಎಂದು ಬಲವಾಗಿ ಪ್ರತಿಪಾದಿಸಿದ್ದರು.
ಹೀಗೆ ದ್ವಿರಾಷ್ಟ್ರ ಸಿದ್ದಾಂತದ ಜನಕರು ಹಿಂದೂರಾಷ್ಟ್ರವಾದಿಗಳೇ ಆಗಿದ್ದಾರೆ. ಹಾಗಿದ್ದಲ್ಲಿ ಸಾವರ್ಕರ್ ಅವರು ದ್ವಿರಾಷ್ಟ್ರ ಸಿದ್ಧಾಂತದ ವಿರುದ್ಧವಿದ್ದರೇ?
ಇದರ ಬಗ್ಗೆ 1937ರಲ್ಲಿ ಅವರು ಹೀಗೆ ಬರೆಯುತ್ತಾರೆ:
" ಭಾರತದ ಒಳಗೆ ಎರಡು ಪರಸ್ಪರ ವಿರುದ್ಧ ರಾಷ್ಟ್ರಗಳಿವೆ. ಕೆಲವು ಬಾಲಿಶ ರಾಜಕಾರಣಿಗಳು ಭಾರತ ಈಗಾಗಲೇ ಒಂದು ರಾಷ್ಟ್ರವಾಗಿದೆ ಎಂದು ಹೇಳುತ್ತಾರೆ. ಆದರೆ ಭಾರತದ ಒಂದು ರಾಷ್ಟ್ರ ಅಲ್ಲವೇ ಅಲ್ಲ. ಬದಲಿಗೆ ಭಾರತದೊಳಗೆ ಹಿಂದೂ ರಾಷ್ಟ್ರ ಮತ್ತು ಮುಸ್ಲೀಮ್ ರಾಷ್ಟ್ರವೆಂಬ ಎರಡು ರಾಷ್ಟ್ರಗಳಿವೆ."
(ಸಾವರ್ಕರ್ ಸಮಗ್ರ ವಾಗ್ಮಯ, 6 ನೇ ಸಂಪುಟ, ಪುಟ 296)
ಇದಾದ ನಂತರ ಜಿನ್ನಾ 1940ರಲ್ಲಿ ದ್ವಿರಾಷ್ಟ್ರ ಸಿದ್ಧಾಂತವನ್ನು ಮುಂದಿಟ್ಟಾಗ ಸಾವರ್ಕರ್ ಅವರು :
"ಜಿನ್ನಾ ಅವರ ಹೇಳಿಕೆಯ ಜೊತೆ ನನಗೆ ಯಾವುದೇ ತಗಾದೆಯಿಲ್ಲ. ನಾವು ಹಿಂದೂಗಳು ಬೇರೆಯದೇ ಆದ ರಾಷ್ಟ್ರ. ಹಿಂದೂ ಮತ್ತು ಮುಸ್ಲಿಂ ಬೇರೆಬೇರೆ ರಾಷ್ಟ್ರಗಳೇ ಆಗಿದ್ದಾರೆ"
ಎನ್ನುತ್ತಾರೆ.
ಈ ಬಗ್ಗೆ ಅಂಬೇಡ್ಕರ್ ಅವರು ತಮ್ಮ "ಪಾಕಿಸ್ತಾನ್.. " ಬರಹದಲ್ಲಿ ಹೀಗೆ ಹೇಳುತ್ತಾರೆ:
"ವಿಚಿತ್ರವೆಂದರೆ ಭಾರತ ಒಂದು ರಾಷ್ಟ್ರವೋ ಎರಡು ರಾಷ್ಟ್ರವೋ ಎಂಬ ಸಿದ್ಧಾಂತದ ಬಗ್ಗೆ ಸಾವರ್ಕರ್ ಮತ್ತು ಜಿನ್ನಾ ಪರಸ್ಪರ ವಿರುದ್ಧವಾದುದನ್ನು ಹೇಳುತ್ತಿಲ್ಲ. ಬದಲಿಗೆ ಅ ವಿಷಯದಲ್ಲಿ ಅವರಿಬ್ಬರಿಗೂ ಸಂಪುರ್ಣ ಸಹಮತಿ ಇದೆ. ಅವರಿಬ್ಬರೂ ಆ ವಿಷಯದಲ್ಲಿ ಸಮ್ಮತಿ ಇರುವುದು ಮಾತ್ರವಲ್ಲ. ಭಾರತದೊಳಗೆ ಹಿಂದೂ ರಾಷ್ಟ್ರ ಮತ್ತು ಮುಸ್ಲಿಂ ರಾಷ್ಟ್ರ ಎಂಬ ಎರಡು ರಾಷ್ಟ್ರಗಳಿವೆ ಎಂದು ಅವರಿಬ್ಬರೂ ಬಲವಾಗಿ ಪ್ರತಿಪಾದಿಸುತ್ತಾರೆ"
ಎಂದು ಬರೆಯುತ್ತಾರೆ.
ಈ ದ್ವಿರಾಷ್ಟ್ರ ಸಿದ್ಧಾಂತಕ್ಕೆ ಸಾವರ್ಕರ್ ಪರಿಹಾರ ಏನೆಂದರೆ ಭಾರತ ಹಿಂದೂ ರಾಷ್ಟ್ರವಾಗುವುದು.
ಮುಸ್ಲಿಮರು ತಮ್ಮ ಪ್ರತ್ಯೇಕ ಅಸ್ಥಿತ್ವವನ್ನೇ ಬಿಟ್ಟುಕೊಟ್ಟು ಹಿಂದೂ ರಾಷ್ಟ್ರದಲ್ಲಿ ಲೀನವಾಗುವುದು.
ಆದರೆ ಈ ಹಿಂದೂ ರಾಷ್ಟ್ರ ಮನುಸ್ಮೃತಿಯ ಆಧಾರದಲ್ಲಿ ಬ್ರಾಹ್ಮಣಶಾಹಿ ಪ್ರಜಾತಂತ್ರ ವಿರೋಧಿ ರಾಷ್ಟ್ರ. ಆದ್ದರಿಂದಲೇ ಅಂಬೇಡ್ಕರ್ ಅವರು ಅದೇ ಬರಹದಲ್ಲಿ ;
" ಭಾರತವು ಹಿಂದೂ ರಾಷ್ಟ್ರವಾಗುವುದೆಂದರೆ ಅದಕ್ಕಿಂತ ಮತ್ತೊಂದು ವಿಪತ್ತು ಮತ್ತೊಂದಿಲ್ಲ". ಎಂದು ಅಚ್ಚರಿಸಿದ್ದರು.
• ಪ್ರಶ್ನೆ 6: ಅಂಬೆಡ್ಕರ್ ಅವರು "ಪಾಕಿಸ್ತಾನ .." ಬರಹದಲ್ಲಿ ಭಾರತದ ಮುಸ್ಲಿಮರೆಲ್ಲರೂ ಪಾಕಿಸ್ತಾನಕ್ಕೆ ಹೋಗಬೇಕೆಂದು ಹೇಳಿದ್ದರು . ಹಾಗಿದ್ದರೆ ಅವರು ಕೋಮುವಾದಿಯೇ?
ಇದು ಅಂಬೇಡ್ಕರ್ ಅವರನ್ನು ಕೇಸರೀಕರಿಸುವ ಭಾಗವಾಗಿ ಸಂಘಪರಿವಾರಿಗಳು ಸಂದರ್ಭವಿಲ್ಲದೆ ಹೆಕ್ಕಿ ತೆಗೆದು ಮಾಡುತ್ತಿರುವ ಅಪಪ್ರಚಾರ.
ದ್ವಿರಾಷ್ಟ್ರ ಸಿದ್ಧಾಂತದ ಬಗ್ಗೆ ಅಂಬೇಡ್ಕರ್ ಅಭಿಪ್ರಾಯ ಏನಿತ್ತು ಎಂಬ ಬಗ್ಗೆ ಭಾರತೀಯರು ಎಲ್ಲರೂ ಕಡ್ಡಾಯವಾಗಿ ಅವರ "ಪಾಕಿಸ್ತಾನ.. " ಬರಹವನ್ನು ಕೂಲಂಕಷವಾಗಿ ಓದುವುದು ಒಳ್ಳೆಯದು.
ಅದರಲ್ಲಿ ಅವರು ಧರ್ಮಾಧಾರಿತ ರಾಷ್ಟ್ರ ಪರಿಕಲ್ಪನೆಯನ್ನು ಸಾರಾ ಸಗಟು ವಿರೋಧಿಸುತ್ತಾರೆ. ಹೀಗಾಗಿ ಹಿಂದೂ ರಾಷ್ಟ್ರ ಹಾಗೂ ಪಾಕಿಸ್ತಾನ ಎರಡನ್ನೂ ಕೂಡ ವಿರೋಧಿಸುತ್ತಾರೆ. ಅದರ ಭಾಗವಾಗಿಯೇ ಇಸ್ಲಾಮ್ ಧರ್ಮದ ಆಚರಣೆಯಲ್ಲಿರುವ ಜಿಗುಟುಗಳನ್ನು ಮತ್ತು ಅಪ್ರಜಾತಾಂತ್ರಿಕವಾದ ಅಂಶಗಳನ್ನು ಕೂಡಾ ವಿರೋಧಿಸುತ್ತಾರೆ. ಹಾಗೆಯೇ ಹಿಂದೂ ಧರ್ಮದ ಹೆಸರಿನಲ್ಲಿರುವ ಆರೆಸ್ಸೆಸ್- ಸಾವರ್ಕರ್ ಪ್ರತಿಪಾದಿಸುವ ಬ್ರಾಹ್ಮಣಶಾಹಿ ಹಿಂದು ರಾಷ್ಟ್ರವನ್ನು ದೇಶಕ್ಕೆ ಒದಗುವ ಮಹಾ ವಿಪತ್ತು ಎಂದು ಎಚ್ಚರಿಸುತ್ತಾರೆ. ಆದರೆ ದೇಶವಿಭಜನೆ ವಾಸ್ತವವೇ ಅಗಿಬಿಟ್ಟರೆ ಹೆಚ್ಚಿನ ಕೋಮು ನರಮೇಧಗಳಾಗದ ರೀತಿ ಅದನ್ನು ಬಗೆಹರಿಸಿಕೊಳ್ಳಬೇಕು ಎನ್ನುವುದು ಅವರ ಕಾಳಜಿಯಾಗಿತ್ತು.
ದೇಶವಿಭಜನೆಯ ಬಗ್ಗೆ ಅಂಬೇಡ್ಕರ್ ತಮ್ಮ " ಪಾಕಿಸ್ತಾನ .. " ಬರಹದಲ್ಲಿ ಬಯಸುವ ಪರಿಹಾರ ಇದು :
“ If Hindu Raj does become a fact, it will, no doubt, be the greatest calamity for this country. No matter what the Hindus say, Hinduism is a menace to liberty, equality and fraternity. On that account it is incompatible with democracy. Hindu Raj must be prevented at any cost.
But is Pakistan the true remedy against it ?...
Not partition, but the abolition of the Hindu Maha sabha and the Muslim League and the formation of a mixed party of Hindus and Muslims is the only effective way of burying the ghost of Hindu Raj.”
(ಹಿಂದೂ ರಾಜ್ ಅಸ್ಥಿತ್ವಕ್ಕೆ ಬರುವುದೆಂದರೆ ದೇಶಕ್ಕೆ ಮಹಾ ವಿಪತ್ತು ಒದಗಿದಂತೆ. ಹಿಂದೂಗಳು ಏನೇ ಹೇಳಿದರೂ ಹಿಂದೂ ಧರ್ಮವೆಂಬುದು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಕ್ಕೆ ಒಂದು ದೊಡ್ಡ ಆಪತ್ತು. ಹೀಗಾಗಿ ಹಿಂದೂ ಧರ್ಮ ಹಾಗೂ ಪ್ರಜಾತಂತ್ರ ಒಂದಕ್ಕೊಂದು ಹೊಂದಿಕೆಯಾಗುವುದಿಲ್ಲ. ಆದ್ದರಿಂದ ಹಿಂದೂ ರಾಷ್ಟ್ರ ಸ್ಥಾಪನೆಯನ್ನು ಹೇಗಾದರೂ ಮಾಡಿ ತಡೆಹಿಡಿಯಲೇ ಬೇಕು.
ಆದರೆ ಅದಕ್ಕೆ ಪಾಕಿಸ್ತಾನ ಪರಿಹಾರವಲ್ಲ. ದೇಶವಿಭಜನೆ ಪರಿಹಾರವಲ್ಲ. ಬದಲಿಗೆ ಹಿಂದು ಮಹಾ ಸಭಾ ಹಾಗೂ ಮುಸ್ಲಿಮ್ ಲೀಗ್ ಗಳಂಥ ಕೋಮುವಾದಿ ಪಕ್ಷಗಳನ್ನು ರದ್ದುಗೊಳಿಸಿ ಹಿಂದುಗಳು ಹಾಗೂ ಮುಸ್ಲಿಮರಿಬ್ಬರೂ ಇರುವ ಮಿಶ್ರ ಪಕ್ಷಗಳನ್ನು ಸ್ಥಾಪಿಸುವುದೊಂದೇ ಹಿಂದೂ ರಾಷ್ಟ್ರವೆಂಬ ಭೂತವನ್ನು ಉಚ್ಚಟಿಸಲು ಇರುವ ಏಕೈಕ ಮಾರ್ಗ )
(DR. BABASAHEB AMBEDKAR : WRITINGS AND SPEECHES. VOL 8, p. 358)
•ಪ್ರಶ್ನೆ 7: ಇಂದಿರಾಗಾಂಧಿಯವರು ಸಾವರ್ಕರ್ ಅವರನ್ನು ದೇಶಭಕ್ತರೆಂದು ಹೊಗಳಿ ಅಂಚೇ ಚೀಟಿ ಬಿಡುಗಡೆ ಮಾಡಿದ್ದರು. ಹಾಗಿದ್ದಲ್ಲಿ ಇಂದಿರಾಗಾಂಧಿಯವರಿಗೆ ಸಾವರ್ಕರ್ ಬಗ್ಗೆ ಗೊತ್ತಿರಲಿಲ್ಲವೇ?
ಸಾವರ್ಕರ್ ಅವರು 1966ರಲ್ಲಿ ನಿಧನರಾದ ನಂತರ ಇಂದಿರಾಗಾಂಧಿಯವರು 1970ರಲ್ಲಿ ಸಾವರ್ಕರ್ ಹೆಸರಲ್ಲಿ ಅಂಚೆ ಚೀಟಿ ತಂದಿದ್ದು ನಿಜ. ಅಷ್ಟು ಮಾತ್ರವಲ್ಲ. ಸಾವರ್ಕರ್ ಅವರ ಬಗ್ಗೆ ಒಂದು ಸಾಕ್ಷ್ಯ ಚಿತ್ರವನ್ನು ಕೂಡ ಬಿಡುಗಡೆ ಮಾಡಿದ್ದರು. ಇದಕ್ಕೆ ಕಾಂಗ್ರೆಸ್ ಉತ್ತರ ಹೇಳಲೇ ಬೇಕು.
ಏಕೆಂದರೆ, 1967ರಲ್ಲಿ ಗಾಂಧಿ ಹತ್ಯೆಯ ಹಿಂದಿನ ಸಂಚಿನ ಕುರಿತು ಜೀವನ್ ಕಪೂರ್ ಅಯೋಗ ತನ್ನ ವರದಿಯನ್ನು ನೀಡಿತ್ತು. ಆ ವರದಿಯು ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಅವರ ಸ್ಪಷ್ಟ ಪಾತ್ರವನ್ನು ಹಾಗೂ ಹತ್ಯೆಗೆ ಮುಂಚೆ ಗೋಡ್ಸೆ ಮತ್ತು ಸಾವರ್ಕರ್ ಭೇಟಿ ಮಾಡಿ ಸಂಚು ಮಾಡಿದ್ದನ್ನು ಸಾಬೀತು ಮಾಡಿತ್ತು. ಇಷ್ಟು ಸ್ಪಷ್ಟ ನಿದರ್ಶನಗಳು ದೊರೆತ ಮೇಲೂ ಇಂದಿರಾಗಾಂಧಿ ಸರ್ಕಾರ ಸಾವರ್ಕರ್ ಅವರನ್ನು ಹೇಗೆ ಭಾರತಾಂಬೆಯ ಹೆಮ್ಮೆಯ ಮಗನೆಂದು ಬಣ್ಣಿಸಿತೆಂದು ಕಾಂಗ್ರೆಸ್ ಸ್ಪಷ್ಟೀಕರಣ ನೀಡುವ ಅಗತ್ಯವಿದೆ.
ಆಗ ತಾನೆ ಕಾಂಗ್ರೆಸ್ ಒಳ ವಿಭಜನೆ ಇಂದ ಹೊರಬಂದು ಹೊಸದಾಗಿ ತನ್ನದೇ ಆದ ಪಕ್ಷ ಕಟ್ಟಿಕೊಳ್ಳುತ್ತಿದ್ದ ಇಂದಿರಾಗಾಂಧಿಯವರು ತನ್ನ ರಾಜಕೀಯ ವಿರೋಧಿಗಳನ್ನು ಹಲವು ರೀತಿಗಳಿಂದ ನಿಭಾಯಿಸುತ್ತಿದ್ದರು. ಅದರ ಭಾಗವಾಗಿಯೂ ಈ ಅಪಾಯಕಾರಿ ಧೋರಣೆ ತಳೆದಿರಬಹುದು. ಏಕೆಂದರೆ 1971ರ ಬಾಂಗ್ಲಾ ಯುದ್ಧದ ನಂತರ 1974ರ ತನಕ ಆರೆಸ್ಸೆಸ್ ಮತ್ತು ಭಾರತೀಯ ಜನಸಂಘ ಇಂದಿರಾಗಾಂಧಿಯವರಿಗೆ ಅಷ್ಟು ತಲೆ ನೋವು ಕೊಡುವುದಿಲ್ಲ. ಇಂಥಾ ಅವಕಾಶವಾದಿ ರಾಜಕೀಯ ಪ್ರಯೋಜನಗಳಿಗಾಗಿ ಕಾಂಗ್ರೆಸ್ ಹಿಂದೂ ರಾಷ್ಟ್ರ ಸಿದ್ಧಾಂತದ ಜೊತೆ ರಾಜಿ ಮಾಡಿಕೊಂಡಿರುವ ಹಲವಾರು ಉದಾಹರಣೆಗಳಿವೆ.
ಆದರೆ ಇಂದಿರಾಗಾಂಧಿಯವರು ಹೇಳಿದ್ದೆಲ್ಲವನ್ನು ಆರೆಸ್ಸೆಸ್ ಒಪ್ಪಿಕೊಳ್ಳುವುದಾದರೆ 1975ರಲ್ಲಿ ಆರೆಸ್ಸೆಸ್ ಪರಮ ದೇಶದ್ರೋಹಿ ಸಂಘಟನೆಯೆಂದು ಇಂದಿರಾಗಾಂಧಿ ಹೇಳಿದ್ದನ್ನು ಕೂಡ ಒಪ್ಪಿಕೊಳ್ಳುವುದೇ ?
•ಪ್ರಶ್ನೆ 8: ಆರೆಸ್ಸೆಸ್ ಸಂಸ್ಥಾಪಕ ಹೆಡ್ಗೇವಾರ್ 1920ರಲ್ಲಿ ಮತ್ತು 1930ರಲ್ಲಿ ಹೋರಾಟದಲ್ಲಿ ಭಾಗವಹಿಸಿ ಸೆರೆವಾಸ ಅನುಭವಿಸಿರಲಿಲ್ಲವೇ? ನಾಗಪುರದಲ್ಲಿ ಕಾಂಗ್ರೆಸ್ ಸಮಾವೇಶ ಸಂಘಟಿಸಿರಲಿಲ್ಲವೇ? ಇವೆಲ್ಲವೂ ಸ್ವಾತಂತ್ರ್ಯ ಹೋರಾಟವಲ್ಲವೇ?
ಭಾರತ ನ್ಯಾಷನಲ್ ಕಾಂಗ್ರೆಸ್ ಸ್ಥಾಪನೆಯಾದದ್ದು 1885ರಲ್ಲಿ. ಭಾರತದ ಸ್ವಾತಂತ್ರ್ಯ ಹೋರಾಟದ ಇತರ ಧಾರೆಗಳಾದ ಆಜಾದ್ - ಭಗತ್ ಸಿಂಗರ ಹಿಂದೂಸ್ಥಾನ್ ಸೊಷಿಯಲಿಸ್ಟ್ ರಿಪಬ್ಲಿಕ್, ಭಾರತ ಕಮ್ಯುನಿಸ್ಟ್ ಪಕ್ಷ ಇತ್ಯಾದಿಗಳು ಸ್ಥಾಪನೆಯಾದದ್ದು ಆ ನಂತರದಲ್ಲಿ. ಆರೆಸ್ಸೆಸ್ ಸ್ಥಾಪನೆಯಾದದ್ದು 1925ರಲ್ಲಿ. ಹೀಗಾಗಿ ಬಹುಪಾಲು ಎಲ್ಲಾ ಧಾರೆಗಳ ಸ್ವಾತಂತ್ರ್ಯ ಹೋರಾಟಗಾರರೂ ತಮ್ಮ ಸಂಘಟನೆಗಳು ಹುಟ್ಟಿಕೊಳ್ಳುವ ಮುನ್ನ ಪ್ರಾರಂಭದ ದಿನಗಳಲ್ಲಿ ಕಾಂಗ್ರೆಸ್‌ನ ಭಾಗವಾಗಿದ್ದದ್ದು ಸಹಜ.
ಹಾಗೆಯೇ ಹೆಡಗೇವಾರರು 1925ರಲ್ಲಿ ಆರೆಸ್ಸೆಸ್ ಸ್ಥಾಪಿಸುವ ಮುನ್ನ ಬಾಲಗಂಗಾಧರ ತಿಲಕರ ಮಾರ್ಗದರ್ಶನದಲ್ಲಿ ನಾಗಪುರದ ಕಾಂಗ್ರೆಸ್ ಅಧಿವೇಶನವನ್ನು ಸಂಘಟಿಸಿದರು. 1920ರಲ್ಲಿ ಅಸಹಕಾರ ಚಳವಳಿಯ ಭಾಗವಾಗಿ ಒಂದೂವರೆ ವರ್ಷ ಸೆರೆವಾಸವನ್ನು ಅನುಭವಿಸಿದ್ದು ನಿಜ.
ಆದರೆ ಅಸಹಕಾರ ಚಳವಳಿಯಲ್ಲಿ ಗಾಂಧಿಯವರು ಹಿಂದೂ-ಮುಸ್ಲಿಂ ಐಕ್ಯತೆಯನ್ನು ಚಳವಳಿಯ ಮುಖ್ಯ ಭೂಮಿಕೆಯಾಗಿಸಿದ್ದು ಹೆಡಗೇವಾರರಿಗೆ ಅಪಾರ ಅಸಮಾಧಾನ ಉಂಟುಮಾಡಿತು. ಹಾಗೂ ಸೆರೆವಾಸದಿಂದ ಹೊರಬಂದ ಕೂಡಲೇ ಸ್ವಾತಂತ್ರ್ಯ ಹೋರಾಟಕ್ಕೆ ಪರ್ಯಾಯವಾದ ಹಿಂದೂ ರಾಷ್ಟ್ರ ಚಳವಳಿ ಕಟ್ಟಲು ರತ್ನಗಿರಿಯಲ್ಲಿದ್ದ ಸಾವರ್ಕರ್ ಅವರನ್ನು ಭೇಟಿ ಮಾಡಿ ದೀಕ್ಷೆ ಪಡೆದರು. ಅದರ ಮುಂದುವರೆಕೆಯಾಗಿಯೇ 1925ರಲ್ಲಿ ಆರೆಸ್ಸೆಸ್ ಕಟ್ಟಿದರು.
ಅವರು ಕಟ್ಟಿದ ಆರೆಸ್ಸೆಸ್ ನ ಘೋಷಿತ ಉದ್ದೇಶ ಬ್ರಿಟಿಷರನ್ನು ಭಾರತ ಬಿಟ್ಟು ಓಡಿಸುವ ಸ್ವಾತಂತ್ಯ ಹೋರಟವಾಗಿರಲೇ ಇಲ್ಲ. ಹೆಡಗೇವಾರರ ಜೀವನ ಚರಿತ್ರೆಯನ್ನು ಬರೆದಿರುವ ಆರೆಸ್ಸೆಸ್ ನಾಯಕ ಹೂ.ವೆ. ಶೇಷಾದ್ರಿಯವರು ತಮ್ಮ Dr. Hedgewar- The Epoch Maker ಪುಸ್ತಕದಲಿ ದಾಖಲಿಸಿರುವಂತೆ :
" After establishing Sangh, Doctor Saheb in his speeches used to talk only of Hindu organization. Direct comment on Government used to be almost nil.”
(ಸಂಘವನ್ನು ಸ್ಥಾಪಿಸಿದ ನಂತರ ಅವರು ಕೇವಲ ಹಿಂದೂ ಸಂಘಟನೆಯ ಬಗ್ಗೆ ಮಾತ್ರ ಮಾತಾಡುತ್ತಿದ್ದರು. ಬ್ರಿಟಿಷ್ ಸರ್ಕಾರದ ಬಗ್ಗೆ ಒಂದಿನಿತೂ ಪ್ರಸ್ತಾಪಿಸುತ್ತಿರಲಿಲ್ಲ.)
ಅಷ್ಟು ಮಾತ್ರವಲ್ಲ, ಸ್ವಾತಂತ್ರ್ಯ ಹೋರಾಟವನ್ನು ಬ್ರಿಟಿಷ್ ವಿರೋಧಿ ಹೋರಾಟವಾಗಿಸಿರುವ ಬಗ್ಗೇ ಖೇದ ವ್ಯಕ್ತಪಡಿಸಿದ್ದರು.
1929ರಲ್ಲಿ ಕಾಂಗ್ರೆಸ್ ನ ಲಾಹೋರ ಅಧಿವೇಶನ ಸಂಪೂರ್ಣ ಸ್ವಾತಂತ್ರ್ಯದ ಠರಾವನ್ನು ಅನುಮೋದಿಸಿತು. ಅದರ ಭಾಗವಾಗಿ 1930ರ ಜನವರಿ 26 ರಂದು ದೇಶದೆಲ್ಲೆಡೆ ಕಾಂಗ್ರೆಸ್ ಕರೆಯ ಭಾಗವಾಗಿ ತ್ರಿವರ್ಣ ಧ್ವಜ ಹಾರಿಸಲು ಕರೆ ನೀಡಲಾಗಿತ್ತು. ದಂಡಿ ಸತ್ಯಾಗ್ರಹ ನಡೆದಿತ್ತು.
ಆಗ, ಹೆಡಗೇವಾರರು, ಸಿಪಿ ಭಿಶ್ಕರ್ ಹಾಗೂ ಹೂ.ವೆ. ಶೇಷಾದ್ರಿಯವರು ದಾಖಲಿಸಿರುವಂತೆ:
" ಯಾವ ಕಾರಣಕ್ಕೂ ಆರೆಸ್ಸೆಸ್ ಈ ಹೋರಾಟದಲ್ಲಿ ಭಾಗವಹಿಸಬಾರದೆಂದೂ, ಜನವರಿ 26ರಂದು ತ್ರಿವರ್ಣ ಧ್ವಜದ ಬದಲು ಭಗವಾಧ್ವಜವನ್ನು ಹಾರಿಸಬೇಕೆಂದೂ, ಅತಿ ಆಸಕ್ತಿ ಇದ್ದವರು ವೈಯಕ್ತಿಕವಾಗಿ ಬೇಕಿದ್ದರೆ ಚಳವಳಿಯಲ್ಲಿ ಭಾಗವಹಿಸಬಹುದೆಂದು" ಸುತ್ತೋಲೆ ಹೊರಡಿಸಿದರು.
ಕಾರ್ಯಕರ್ತರ ಅಪಾರ ಒತ್ತಡ ಹಾಗೂ ದೇಶದ ಭಾವನೆಯನ್ನು ಗಮನಿಸಿ ಹೆಡಗೇವಾರರು ತಮ್ಮ ಸರಸಂಘಚಾಲಕ ಹುದ್ದೆಗೆ ತಾತ್ಕಾಲಿಕವಾಗಿ ರಾಜೀನಾಮೆ ನೀಡಿ, ಅದರ ಜವಾಬ್ದಾರಿಯನ್ನು ಪರಂಜಾಪೆ ಎನ್ನುವವರಿಗೆ ವಹಿಸಿ ತಾವು ವೈಯಕ್ತಿಕ ನೆಲೆಯಲ್ಲಿ ದಂಡಿ ಸತ್ಯಾಗ್ರಹದಲ್ಲದೆ ಜಂಗಲ್ ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದರು. ಅವರ ಜೀವನ ಚರಿತ್ರೆಕಾರರ ಪ್ರಕಾರ ಅವರು ಜೈಲಿಗೆ ಹೋಗಿದ್ದು ದೇಶಾದ್ಯಂತ ಜೈಲಿಗೆ ಬರುತ್ತಿದ್ದ ಯುವಕರ ಸಂಪರ್ಕ ಪಡೆದುಕೊಂಡು ಹಿಂದೂ ರಾಷ್ಟ್ರ ದ ಉದ್ದೇಶಕ್ಕೆ ಸಂಘಟಿಸುವುದಾಗಿತ್ತು.
ಆದ್ದರಿಂದ ಆರೆಸ್ಸೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಬಾರದು ಎನ್ನುವುದು ಆರೆಸ್ಸೆಸ್ ನ ಸಂಸ್ಥಾಪಕರ ಆದೇಶವೇ ಆಗಿತ್ತು.
1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ನಡೆದಾಗಲಂತೂ ಆರೆಸ್ಸೆಸ್ ನ ಹಿರಿಯ ಸೋದರ ಸಂಘಟನೆಯಾದ ಹಿಂದೂ ಮಹಾ ಸಭಾ ಮತ್ತು ಆರೆಸ್ಸೆಸ್ ನ ಪಿತಾಮಹ ಸಾವರ್ಕರ್ ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದು ಬ್ರಿಟಿಷ್ ಸರ್ಕಾರ ಸೇರಿಕೊಂಡಿದ್ದರು. ಅದೂ ಮುಸ್ಲಿಂ ಲೀಗ್ ಜೊತೆಗೆ!
ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಪ್ರಾಣವನ್ನೇ ಬಲಿ ನೀಡಿದ ಆಜಾದ್, ಭಗತ್ ಸಿಂಗರಂಥ ಕ್ರಾಂತಿಕಾರಿಗಳ ಬಗ್ಗೆಯೂ ಆರೆಸ್ಸೆಸ್ ಗೆ ಕೀಳು ಅಭಿಪ್ರಾಯವಿತ್ತು. ಆರೆಸ್ಸೆಸ್ ನ ಎರಡನೇ ಸರ್‌ಸಂಘ ಚಾಲಕ ಗೋಳ್ವಾಲ್ಕರ್ ಅವರು ಆರ್ಗನೈಸರ್ ಪತ್ರಿಕೆಗೆ ಬರೆದ ಲೇಖನದಲ್ಲಿ:
" ಭಗತ್ ಸಿಂಗ್ ಇನ್ನಿತ್ಯಾದಿ ಕ್ರಾಂತಿಕಾರಿಗಳದ್ದು ತಪ್ಪು ಆದರ್ಶ. ಅವರಲ್ಲಿ ಲೋಪವಿದ್ದದ್ದರಿಂದಲೇ ಅವರು ಯಶಸ್ವಿಯಾಗಲಿಲ್ಲ. ಅವರು ಭಾರತದ ಯುವಕರಿಗೆ ಮಾರ್ಗದರ್ಶಿಯಲ್ಲ"ಎಂದು ಹೇಳಿದ್ದರು.
ಹೀಗಾಗಿ ಆರೆಸ್ಸೆಸ್ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಭಾಗವಹಿಸಿರಲಿಲ್ಲ ಎನ್ನುವುದು ಯಾರೋ ಆರೆಸ್ಸೆಸ್ ವಿರೋಧಿಗಳು ಹೇಳುತ್ತಿರುವ ಸುಳ್ಳುಗಳಲ್ಲ.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಬಾರದೆಂಬುದು ಆರೆಸ್ಸೆಸ್ ನ ನಾಯಕರ ಆದೇಶವೇ ಆಗಿತ್ತು.
• ಪ್ರಶ್ನೆ 9- ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಸೋದರಿ ನಿವೇದಿತಾ ಇನ್ನಿತರರು ಕಾಂಗ್ರೆಸ್ ಸೇರದಿದ್ದರೂ ಸ್ವಾತಂತ್ರ್ಯ ಹೋರಾಟ ಮಾಡಿದರು. ಕಾಂಗ್ರೆಸ್ ಸೇರದ ಮಾತ್ರಕ್ಕೆ ಅವರು ಸ್ವಾತಂತ್ರ್ಯ ಹೋರಾಟಗಾರರಲ್ಲವೇ? ಅದೇ ರೀತಿ ಆರೆಸ್ಸೆಸ್ ಕೂಡಾ ಕಾಂಗ್ರೆಸ್ ಸೇರದೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರಲ್ಲವೇ?
ಮೇಲಿನ ಉದಾಹರಣೆಗಳಲ್ಲಿ ಆರೆಸ್ಸೆಸ್ ಅನ್ನು ಹೊರತುಪಡಿಸಿ ಮಿಕ್ಕವರೆಲ್ಲರೂ ಕಾಂಗ್ರೆಸ್ ಸೇರದಿದ್ದರೂ ಪರ್ಯಾಯವಾಗಿ ಬಲವಾದ ಸ್ವಾತಂತ್ರ್ಯ ಹೋರಾಟವನ್ನು ಕಟ್ಟಿದವರೇ. ಅವರೆಲ್ಲರಿಗೂ ಕಾಂಗ್ರೆಸ್ ಬಗ್ಗೆ ಕಟುವಾದ ವಿಮರ್ಶೆ ಇತ್ತು. ಆದರೂ ಬ್ರಿಟಿಷ್ ವಿರೋಧಿ ಹೋರಾಟದ ಅಗತ್ಯ ಬಿದ್ದಾಗ ಕಾಂಗ್ರೆಸ್ ಜೊತೆಗೂಡಿ ಹೋರಾಟಗಳನ್ನೂ ಮಾಡಿದ್ದರು.
ಆದರೆ ಆರೆಸ್ಸೆಸ್ ತನ್ನನ್ನು ಕಾಂಗ್ರೆಸ್ಸೇತರ ಸ್ವಾತಂತ್ರ್ಯ ಹೋರಾಟಗಾರ ಗುಂಪಿನೊಂದಿಗೆ ಸೇರಿಸಿಕೊಳ್ಳುವುದು ಆರೆಸ್ಸೆಸ್ ನ ಸಂಸ್ಥಾಪಕರ ಆದರ್ಶಗಳಿಗೆ ಮಾಡುವ ದ್ರೋಹವಾಗುತ್ತದೆ.
ಏಕೆಂದರೆ ಈ ಹಿಂದಿನ ಪ್ರಶ್ನೆಯಲ್ಲಿ ವಿವರಿಸಿದಂತೆ ಆರೆಸ್ಸೆಸ್ಸು ಬ್ರಿಟಿಷ್ ವಿರೋಧಿ ಹೋರಾಟದಲ್ಲಿ ತೊಡಗಿಕೊಳ್ಳಬಾರದೆಂಬುದೇ ಆರೆಸ್ಸೆಸ್ ನ ನಿಲುವಾಗಿತ್ತು. ಅದನ್ನು ಅವರು ಕಟಿಬದ್ಧವಾಗಿ ಪಾಲಿಸಿ ದೇಶದ್ರೋಹಿಗಳಾಗಿಯೇ ಉಳಿದರು.ಈಗ ತಮ್ಮನ್ನು ಪ್ರತ್ಯೇಕವಾದ ಕಾಂಗ್ರೆಸ್ಸೇತರ ಸ್ವಾತಂತ್ರ್ಯ ಹೋರಾಟ ಧಾರೆ ಎಂದು ಬಿಂಬಿಸಿಕೊಳ್ಳುವುದನ್ನು ಸಾಕ್ಷಾತ್ ಹೆಡ್ಗೇವರ್, ಗೋಳ್ವಾಲ್ಕರ್ ಹಾಗೂ ಸಾವರ್ಕರ್ ಕೂಡ ಒಪ್ಪುವುದಿಲ್ಲ.
• ಪ್ರಶ್ನೆ 10: - ಗಾಂಧಿ, ಅಂಬೇಡ್ಕರ್ ಆರೆಸ್ಸೆಸ್ ಶಿಬಿರಕ್ಕೆ ಭೀಟಿ ನೀಡಿದ್ದರು. ಸುಭಾಶ್ ಚಂದ್ರ ಬೋಸ್ ದೇಶಬಿಟ್ಟು ಹೋಗುವ ಮುನ್ನ ಹೆಡಗೇವಾರ್ ಅವರನ್ನು ಭೇಟಿ ಮಾಡಿದ್ದರು. ಅವರೆಲ್ಲರೂ ಆರೆಸ್ಸೆಸ್ ಬಗ್ಗೆ ಅಜ್ನಾನಿಗಳಾಗಿದ್ದರೆ?
ಆರೆಸ್ಸೆಸ್ ಶಿಬಿರಕ್ಕೆ ಅಂಬೇಡ್ಕರ್ ಭೇಟಿಯ ಬಗ್ಗೆ ಆರೆಸ್ಸೆಸ್ ಹಾಗೂ ಅವರ ಪೋಷಿತ ಲೇಖಕರನ್ನು ಬಿಟ್ಟರೆ ಬೇರೆ ಯಾರೂ ಸ್ವತಂತ್ರವಾಗಿ ದಾಖಲಿಸಿಲ್ಲ.
ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳ 22 ಸಂಪುಟಗಳಲ್ಲಿ 15ನೇ ಸಂಪುಟದಲ್ಲಿ ಮಾತ್ರ ಒಂದೇ ಒಂದು ಬಾರಿ ಆರೆಸ್ಸೆಸ್ ಬಗ್ಗೆ ಅಂಬೇಡ್ಕರ್ ಉಲ್ಲೇಖಿಸಿದ್ದಾರೆ. ಅದೂ ಕೂಡ ಶೆಡ್ಯೂಲ್ಡ್ ಕಾಸ್ಟ್ ಫ಼ೆಡರೇಷನ್ ನ ಚುನಾವಣಾ ಪ್ರಣಾಳಿಕೆಯಲ್ಲಿ ಇತರ ಪಕ್ಷಗಳೊಂದಿಗೆ ಹೊಂದಾಣಿಕೆಯ ಪ್ರಶ್ನೆಯ ಬಗ್ಗೆ ಬರೆಯುತ್ತಾ :
"ಶೆಡ್ಯೋಲ್ಡ್ ಕಾಸ್ಟ್ ಫ಼ೆಡರೇಶನ್ ಪಕ್ಷ ಯಾವ ಕಾರಣಕ್ಕೂ ಹಿಂದೂ ಮಹಾ ಸಭಾ ಹಾಗೂ ಆರೆಸ್ಸೆಸ್ ನಂಥ ಕೋಮುವಾದಿ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ" ಎಂದು ದಾಖಲಿಸುತ್ತಾರೆ.
ಇನ್ನು ಸುಭಾಷ ಚಂದ್ರ ಬೋಸರು ಅಧುನಿಕ ಸೆಕ್ಯುಲಾರ್ ಪ್ರಜಾತಂತ್ರವಾದಿಯಾಗಿದ್ದರು. 1938ರಲ್ಲಿ ಅವರು ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದಾಗ ಯಾವ ಕಾರಣಕ್ಕೂ ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗಿನಂಥ ಕೋಮುವಾದಿಗಳು ಕಾಂಗ್ರೆಸ್ಸಿನೊಳಗೆ ಇರಬಾರದೆಂದು ಠರಾವು ಪ್ರಸ್ತಾಪಿಸಿದ್ದರು. ಭಾರತವು ಸ್ವತಂತ್ರವಾದ ಮೇಲೆ ಬ್ರಿಟಿಷ್ ಏಜೆಂಟರಾಗಿರುವ ಆರೆಸ್ಸೆಸ್, ಹಿಂದೂ ಮಹಾ ಸಭಾ ಹಾಗೂ ಮುಸ್ಲಿಂ ಲೀಗ್ ಗಳಿಗೆ ಸ್ಥಾನವಿರುವುದಿಲ್ಲ ಎಂದು ಎಚ್ಚರಿಸಿದ್ದರು.
ಇದೆಲ್ಲ ಒಂದು ಕಡೆಯಾದರೆ, ಎರಡನೇ ಮಹಾಯುದ್ಧ ನಡೆಯುತ್ತಿದ್ದಾಗ ಬ್ರಿಟಿಷರಿಗೂ, ಜಪಾನ್-ಜರ್ಮನಿಗೂ ಇರುವ ವೈರುಧ್ಯವನ್ನು ಬಳಸಿಕೊಂಡು ಬ್ರಿಟಿಷರನ್ನು ಸೇನಾತ್ಮಕವಾಗಿ ಸೋಲಿಸಲು ಬೋಸರು ಪ್ರಯತ್ನಿಸುತ್ತಿದ್ದರೆ ಸಾವರ್ಕರ್ ಮತ್ತು ಆರೆಸ್ಸೆಸ್ ಬ್ರಿಟಿಷ್ ಸೇನೆಯನ್ನು ಗಟ್ಟಿಗೊಳಿಸಲು ಅಧಿಕೃತವಾಗಿ ಸಹಕರಿಸುತ್ತಿದ್ದರು.
ಅಂಥಾ ದ್ರೋಹಿಗಳು ಈಗ ಬೋಸರು ತಮ್ಮವರೇ ಎಂದು ಹೇಳುತ್ತಿದ್ದಾರೆ.
ಇನ್ನು ಗಾಂಧಿಯನ್ನು ಕೊಂದಾಗ ದೇಶದ ತುಂಬಾ ಅರೆಸ್ಸೆಸ್ಸಿಗರು ಸಿಹಿ ಹಂಚಿ ಸಂಭ್ರಮಿಸಿದರೆಂದು ಸ್ವಯಂ ಸರ್ದಾರ್ ಪಟೆಲರೇ ಶ್ಯಾಂ ಪ್ರಸಾದ್ ಮುಖರ್ಜಿಗೆ ಬರೆದ ಪತ್ರದಲ್ಲಿ ದಾಖಲಿಸುತ್ತಾರೆ. ಗಾಂಧಿಗೆ ಆರೆಸ್ಸೆಸ್ ನ ಕೋಮುವಾದಿ ಹಿಂಸಾತ್ಮಕ ರಹಸ್ಯ ಕಾರ್ಯಾಚಾರಣೆ ತೀವ್ರ ಅಸಮಾಧಾನ ತಂದಿತ್ತು ಎಂಬುದೇ ಅದಕ್ಕೆ ಕಾರಣ. ಸರ್ದಾರ್ ಪಟೇಲರೇ ಹೇಳುವಂತೆ ಗಾಂಧಿ ಕೊಲೆಗೆ ಬೇಕಿದ್ದ ಸಾಮಾಜಿಕ ಭೂಮಿಕೆಯನ್ನು ಆರೆಸ್ಸೆಸ್ ಸಿದ್ಧಪಡಿಸಿತ್ತು.
ಏಕೆಂದರೆ ಗಾಂಧಿಯವರಿಗೆ ಆರೆಸ್ಸೆಸ್ ರಾಜಕೀಯ ಮತ್ತು ಸಂಘಟನೆ ಒಪ್ಪಿಗೆ ಇರಲಿಲ್ಲ.
• ಪ್ರಶ್ನೆ 11- ಆರೆಸ್ಸೆಸ್ಸಿಗರು ಎಲ್ಲೇ ಪ್ರಕೃತಿ ವಿಕೋಪಗಳಾದರೂ ಜಾತಿ-ಧರ್ಮ ಬೇಧವಿಲ್ಲದೆ, ಪ್ರಚಾರ ಮಾಡಿಕೊಳ್ಳದೆ ನಿಸ್ವಾರ್ಥ ಸೇವೆ ಸಲ್ಲಿಸುವುದಿಲ್ಲವೇ?
ದೇಶದಲ್ಲಿ ಹಲವಾರು ಕಡೆ ಪ್ರಕೃತಿ ವಿಕೋಪಗಳಾದಾಗ ಆರೆಸ್ಸೆಸ್ ಸೇವಕರು ಅಲ್ಲಿಗೆ ಹೋಗಿರುವ ಬಗ್ಗೆ ಕೆಲವು ಹಳೆಯ ಉದಾಹರಣೆಗಳು ಇವೆ. ಆದರೆ ಅವನ್ನೇ ಇಟ್ಟುಕೊಂಡು ಈಗಲೂ ಪ್ರಚಾರ ಮಾಡಿಕೊಳ್ಳುತ್ತಾರೆ ಎಂಬ ಆಪಾದನೆಗಳೂ ಇವೆ.
ಇನ್ನು ವಿಕೋಪಗಳು ಸಂಭವಿಸಿದಾಗ ಜಾತಿ-ಧರ್ಮ ಬೇಧ ಮಾಡದೆ ಪರಿಹಾರ ನೀಡುತ್ತಾರೆ ಎಂಬುದಕ್ಕೆ ಯಾವ ಪುರಾವೆಯೂ ಇಲ್ಲ. 2000ನೇ ಇಸವಿಯಲ್ಲಿ ಗುಜರಾತ್ ನ ಭುಜ್ ನಲ್ಲಿ ನಡೆದ ಭೂಕಂಪದ ಸಂದರ್ಭದಲ್ಲಿ ಅಲ್ಲಿನ ಬಿಜೆಪಿ ಸರ್ಕಾರ ಹಾಗೂ ಆರೆಸ್ಸೆಸ್ ಪರಿಹಾರದಲ್ಲಿ ಪ್ರದರ್ಶಿಸಿದ ಕೋಮುವಾದ, 2004ರಲ್ಲಿ ಸುನಾಮಿ ಅಪ್ಪಳಿಸಿದಾಗ ಪರಿಹಾರದಲ್ಲಿ ನಡೆದ ಜಾತಿ ತಾರತಮ್ಯಗಳ ಪರವಾಗಿ ನೀಡಿದ ಮೌನ ಬೆಂಬಲ, 2002ರ ಗುಜರಾತಿನ ನರಮೇಧದಲ್ಲಿ ಸಂತ್ರಸ್ತರಿಗೆ ಪರಿಹಾರ ಒದಗಿಸುವುದೆಂದರೆ ದೆಶದ್ರೋಹಿಗಳನ್ನು ಸಾಕಿದಂತೆ ಎಂದು ಹೇಳುತ್ತಾ ಪರಿಹಾರಗಳನ್ನು ತಡೆಗಟ್ಟಿದ್ದು ಎಲ್ಲವೂ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದಿವೆ.
ಹೆಚ್ಚೆಂದರೆ ಪ್ರಕೃತಿ ವಿಕೋಪ ನಡೆದ ರಾಜ್ಯಗಳಲ್ಲಿ ಬಿಜೆಪಿ ವಿರೋಧಿಸುವ ಸರ್ಕಾರ ಇದ್ದರೆ ಅಲ್ಲಿ ಹೋಗಿ ಕೋಮುವಾದಿ ಪರಿಹಾರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಬಾಧೆಯಲ್ಲೂ ಜಾತಿ-ಧರ್ಮ ರಾಜಕಾರಣ ಮಾಡುತ್ತದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ.
ಆದ್ದರಿಂದ ಆರೆಸ್ಸೆಸ್ ನ ಪರಿಹಾರ ಕಾರ್ಯಕ್ರಮಗಳು ಸಹ ಪ್ರಚಾರ ಪ್ರಿಯತೆ ಮತ್ತು ದೇಶವನ್ನು ಧರ್ಮಾಧಾರಿತವಾಗಿ ಒಡೆಯುವ ಅಜೆಂಡಾದ ಭಾಗವಾಗಿಯೇ ಇದೆ.
• ಪ್ರಶ್ನೆ 12- ಗಾಂಧಿಯವರು ಕಾಂಗ್ರೆಸ್ಸನ್ನು ವಿಸರ್ಜಿಸಲು ಹೇಳಿದ್ದರು, ಪಾನ ನಿಷೇಧ, ಗೋಹತ್ಯಾ ನಿಷೇಧದ ಬಗ್ಗೆ ಹೇಳಿದ್ದರು. ಅದನ್ನು ಮಾಡದ ನೀವು ಗಾಂಧಿ ವಿರೋಧಿಗಳಲ್ಲವೇ?
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಂವಿಧಾನದಲ್ಲಿ ಹೇಳಿರುವ ಇನ್ನೂ ಹಲವು ಜನಪರ ನೀತಿಗಳನ್ನು ಕಾಂಗ್ರೆಸ್ ಜಾರಿಗೆ ತರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಮೃದು ಹಿಂದುತ್ವವನ್ನು ಅನುಸರಿಸುತ್ತಾ ಹಿಂದೂರಾಷ್ಟ್ರ ಸಿದ್ಧಾಂತದ ಹೆಸರಿನಲ್ಲಿ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿ ಬೆಳೆಯಲು ಕಾರಣರಾದರು. 1991ರ ನಂತರವಂತೂ ಕಾಂಗ್ರೆಸ್ ನ ನೇತೃತ್ವದಲ್ಲೇ ಸಂವಿಧಾನ ವಿರೋಧಿ ಮಾರುಕಟ್ಟೆ ಪರ ನೀತಿಗಳು ಜಾರಿಯಾದವು. ರಾಮಜನ್ಮಭೂಮಿ ಚಳವಳಿ ಹುಟ್ಟಿಕೊಳ್ಳಲೂ ಪರೋಕ್ಷವಾಗಿ ಕಾಂಗ್ರೆಸ್ಸೆ ಕಾರಣ. ಕಾಂಗ್ರೆಸ್ ಈ ದೇಶಕ್ಕೆ ಉತ್ತರಿಸಬೇಕಾದ ಹಲವು ಪ್ರಶ್ನೆಗಳಿವೆ.
ಆದರೆ ಆರೆಸ್ಸೆಸ್ ಗೆ ಆ ಪ್ರಶ್ನೆಗಳನ್ನು ಕೇಳುವ ನೈತಿಕತೆ ಇದೆಯೇ?
ಗಾಂಧಿಯವರು ಕಾಂಗ್ರೆಸ್ ವಿಸರ್ಜಿಸಲು ಹೇಳಿದಂತೆ ಆರೆಸ್ಸೆಸ್ ತನ್ನ ಕೋಮು ವಿಭಜಕ ಸಿದ್ಧಾಂತ ಹಾಗೂ ಸಂಘಟನೆಯನ್ನು ಬರ್ಖಾಸ್ತು ಮಾಡಲು ಹೇಳಿರಲಿಲ್ಲವೇ? ಮೋದಿ ಸರ್ಕಾರವೇಕೆ ಪಾನ ನಿಷೇಧ ಮಾಡಿಲ್ಲ? ಗೋವನ್ನು ತಿನ್ನುವುದು ಆರೋಗ್ಯಕಾರಕ ಎಂದು ಆರೆಸ್ಸೆಸ್ ಪಿತಾಮಹ ಸವರ್ಕರ್ ಹೇಳಿದ್ದರೂ ಗೋಹತ್ಯಾ ನಿಷೇಧ ಮಾಡುತ್ತಿರುವುದು ಗುರುದ್ರೋಹವಲ್ಲವೇ?
-ಶಿವಸುಂದರ್