Advertisement

ಬಿಜೆಪಿಗರು ಸಾರ್ವಜನಿಕ ಗಣೇಶೋತ್ಸವದಲ್ಲಿ ಸಾವರ್ಕರ್ ಫೋಟೋ ಇಟ್ಟರೆ ನಾವು ಕಾಂಗ್ರೆಸಿಗರು ಅಂಬೇಡ್ಕರ್, ಬಸವಣ್ಣನ ಭಾವಚಿತ್ರ ಇಟ್ಟು ಪೂಜಿಸುತ್ತೇವೆ!

Advertisement

"ಬಿಜೆಪಿಗರು ಸಾರ್ವಜನಿಕ ಗಣೇಶೋತ್ಸವದಲ್ಲಿ ಗಣೇಶನ ವಿಗ್ರಹದ ಜೊತೆ ಸಾವರ್ಕರ್ ಫೋಟೋ ಇಟ್ಟು ಪೂಜಿಸುವುದಾಗಿ ಘೋಷಿಸಿದ್ದಾರೆ. ಆದರೆ ಕಳೆದ ಅರವತ್ತು ವರ್ಷಗಳ ಆಡಳಿತದಲ್ಲಿ ನಾವು ದೇವರ ವಿಗ್ರಹದ ಜೊತೆ ಮನುಷ್ಯರ ಫೋಟೋ ಇಟ್ಟು ಪೂಜಿಸುವ ಹೀನ ಸಂಸ್ಕೃತಿ ಹುಟ್ಟು ಹಾಕಿರಲಿಲ್ಲ. ಆದರೀಗ ಅದನ್ನು ಬಿಜೆಪಿ ಆರಂಭಿಸಿದಂತಿದೆ. ಅವರು ಹಾಗೆ ಮಾಡಿದರೆ ನಾವು ಕಾಂಗ್ರೆಸಿಗರು ಈ ದೇಶಕ್ಕೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಸಿದ್ಧಾಂತದ ಸಂವಿಧಾನ ಕೊಡುವ ಮೂಲಕ ಬಹುಸಂಖ್ಯಾತ ಶೋಷಿತರ, ದಮನಿತರ ಪರ ದ್ವನಿಯಾದ ಮಹಾನ್ ಮಾನವತಾವಾದಿ ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೋ ಮತ್ತು ಮನುವಾದಿ ವೈದಿಕಶಾಹಿ ವರ್ಗದ ಅಸಮಾನತೆಯ ವಿರುದ್ದ ಹೋರಾಡಿ ಹೊಸ ಧರ್ಮಕ್ಕೆ ನಾಂದಿ ಹಾಡಿ, ಆ ಕಾಲಕ್ಕೆ ಈ ನೆಲದ ಶೋಷಿತರನ್ನು ಉದ್ದಾರಗೈದಿದ್ದ ಬಸವಣ್ಣನವರ ಫೋಟೋ ಇಟ್ಟು ಪೂಜಿಸುತ್ತೇವೆ.ಹಾಗೆಯೇ, ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ರಾಯಣ್ಣನ ಭಾವಚಿತ್ರ ಇಟ್ಟು ಪೂಜಿಸಲಿದ್ದಾರೆ." ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

"ಸಾರ್ವಜನಿಕ ಗಣೇಶೋತ್ಸವದಲ್ಲಿ ಊರ ಜನರೆಲ್ಲರೂ ಒಟ್ಟಾಗಿ ಖರ್ಚು ಮಾಡಿ ಗಣೇಶ ವಿಗ್ರಹ ಸ್ಥಾಪಿಸಿ ಪೂಜಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ವಿಜ್ರಂಭಣೆಯಿಂದ ಗಣೇಶೋತ್ಸವ ಕಾರ್ಯಕ್ರಮ ನಡೆಸುವುದು ಸ್ವಾತಂತ್ರ್ಯ ಪೂರ್ವದಿಂದಲೂ ನಡೆದು ಬಂದಿದ್ದ ಸಂಪ್ರದಾಯ, ಆದರೆ ಬಿಜೆಪಿಗರು ಇದೀಗ ಅದರಲ್ಲೂ ರಾಜಕೀಯ ಮಾಡಲು ಹೊರಟಿದ್ದಾರೆ" ಎಂದವರು ಖೇದ ವ್ಯಕ್ತಪಡಿಸಿದರು.

"ಬಿಜೆಪಿಗರ ಸಣ್ಣತನದ ರಾಜಕೀಯದ ವಿಚಾರದಲ್ಲಿ ಹೆಚ್ಚು ಮಾತನಾಡುವ ಅಗತ್ಯತೆ ಇದ್ದಂತೆ ನನಗೆ ಕಾಣುವುದಿಲ್ಲ. ಚುನಾವಣೆಗೆ ಇನ್ನು ಏಳು ತಿಂಗಳಷ್ಟೇ ಬಾಕಿ ಇದೆ. ಬೆಳಗಾವಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ" ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement
Advertisement
Recent Posts
Advertisement