ರಾಜ್ಯದ ಬೊಮ್ಮಾಯಿ ಸರ್ಕಾರದ ಕಾಮಗಾರಿಯಲ್ಲಿನ 40 ಪರ್ಸೆಂಟ್ ಕಮಿಷನ್ ವಿರುದ್ದ ರಾಜ್ಯದ ಗುತ್ತಿಗೆದಾರರ ಸಂಘ ಮಾಡಿರುವ ಆರೋಪದ ಕುರಿತು ರಾಜ್ಯ ಕಾಂಗ್ರೆಸ್ ಹಮ್ಮಿಕೊಂಡಿರುವ #payCM ಅಭಿಯಾನ ವಿರುದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು "ಕಾಂಗ್ರೆಸ್ ನವರದ್ದು ಡರ್ಟಿ ಪಾಲಿಟಿಕ್ಸ್" ಎಂದು ನೀಡಿರುವ ಹೇಳಿಕೆಯ ಕುರಿತು ವಿವರಗಳ ಸಮೇತ "ಡರ್ಟಿ ಪಾಲಿಟಿಕ್ಸ್ ಯಾರದ್ದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರೇ" ಎಂದು ಕರ್ನಾಟಕ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮೂಲಕ ಪ್ರಶ್ನೆಗಳ ಸುರಿಮಳೆಗೈದಿದೆ.
"ಪ್ರಜಾಪ್ರಭುತ್ವ ಹಾಗೂ ಅಂಬೇಡ್ಕರ್‌ರವರ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಆಪರೇಷನ್ ಕಮಲ ಮಾಡಿ ಅಸಂವಿಧಾನಿಕವಾಗಿ ಸರ್ಕಾರ ರಚಿಸಿದ್ದು ಡರ್ಟಿ ಪಾಲಿಟಿಕ್ಸ್ ಅಲ್ಲವೇ?" ಎಂದು ಪ್ರಶ್ನಿಸಿದೆ.
"ಇತರ ಪಕ್ಷಗಳ ಶಾಸಕರನ್ನು ಮುಂಬೈ ಹೋಟೆಲ್‌ನಲ್ಲಿಟ್ಟು ಹನಿಟ್ರಾಪ್, ಸಿಡಿ ಮಾಡಿ ಬ್ಲಾಕ್ಮೇಲ್ ಮಾಡಿದ್ದು, ಆಪರೇಷನ್ ಕಮಲಕ್ಕೆ 1000 ಕೋಟಿ ರೂ. ಖರ್ಚು ಮಾಡಿದ್ದು, ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಹೊರಿಸುವ ಷಡ್ಯಂತ್ರ ರೂಪಿಸಿದ್ದು, ತಾವೇ ಸ್ವತಃ ಬಿಜೆಪಿ ಹೈಕಮಾಂಡಿಗೆ ಕಪ್ಪ ಕೊಟ್ಟಿದ್ದನ್ನ ಒಪ್ಪಿಕೊಂಡಿದ್ದು, ಸುಳ್ಳು ಆರೋಪ ಹಿಡಿದು ಜಗ್ಗಾಡಿ, ತಮ್ಮ ಹುಳುಕು ಹೊರಬಂದಾಗ ಸದನದಲ್ಲಿ ಗಪ್ ಚುಪ್ ಆಗಿದ್ದು ಡರ್ಟಿ ಪಾಲಿಟಿಕ್ಸ್ ಅಲ್ಲವೇ?" ಎಂದು ಛೇಡಿಸಿದೆ.
"ನಿಮ್ಮ ರಾಜಕೀಯ ಉಳಿವಿಗೋಸ್ಕರ ಹಿಜಾಬ್ ಹೆಸರಿನಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕನ್ನು ಕಿತ್ತುಕೊಂಡಿದ್ದು, ಸಿಎಂ ಹುದ್ದೆಯ ಜವಾಬ್ದಾರಿ ಮರೆತು ಕ್ರಿಯೆಗೆ ಪ್ರತಿಕ್ರಿಯೆ ಸಹಜ ಎಂಬ ಹೇಳಿಕೆಯನ್ನು ನೀಡುವ ಮೂಲಕ ಸಮಾಜಘಾತುಕರಿಗೆ ಬೆಂಬಲ ನೀಡಿದ್ದು, ರಾಜ್ಯದಲ್ಲಿ ಕೋಮು ಕಲಹಗಳನ್ನು ಹಬ್ಬಿಸಿ, ಇದಕ್ಕೂ ತಮಗು ಸಂಬಂಧವೇ ಇಲ್ಲ ಎಂಬಂತೆ ಕಣ್ಮುಚ್ಚಿ ಕುಳಿತಿದ್ದು, ತಮ್ಮ ಸರ್ಕಾರದ ಭ್ರಷ್ಟಾಚಾರ, ವೈಫಲ್ಯಗಳನ್ನು ಜನಮಾನಸದಿಂದ ಮರೆಮಾಚಲು ವಾರಕ್ಕೊಂದು ಕೋಮು ವಿವಾದ ಸೃಷ್ಟಿಸಿ ಸಮಾಜವನ್ನು ಒಡೆದಿದ್ದು. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಕ್ಕೆ ವಿರುದ್ಧವಾದ ಶಕ್ತಿಗಳಿಗೆ ಮೌನವಾಗಿಯೇ ಬೆಂಬಲಿಸಿದ್ದು ಡರ್ಟಿ ಪಾಲಿಟಿಕ್ಸ್ ಅಲ್ಲವೇ?" ಎಂದು ಕೇಳಿದೆ.
"ಕುರ್ಚಿ ಉಳಿಸಿಕೊಳ್ಳುವ ಏಕೈಕ ಕಾರಣಕ್ಕೆ ಸಂಘಪರಿವಾರದ ಅಣತಿಯಂತೆ ಶಾಲಾ ಮಕ್ಕಳ ಪಠ್ಯದಲ್ಲೂ ರಾಜಕೀಯ ಅಜೆಂಡಾ ತೂರಿಸಿದ್ದು, ಖ್ಯಾತ ಸಾಹಿತಿ ಕುವೆಂಪು, ಶ್ರೇಷ್ಠ ದಾರ್ಶನಿಕ ನಾರಾಯಣ ಗುರು ರಂತಹ ನಾಡಿನ ಮಹನೀಯರಿಗೆ ಅವಮಾನ ಎಸಗಿದ್ದು, ಈ ಮೂಲಕ ಪಠ್ಯಪುಸ್ತಕಗಳಲ್ಲಿ ನಿಮ್ಮ ರಾಜಕೀಯ ಹಿತಾಸಕ್ತಿಯನ್ನು ತೂರಿಸಿದ್ದು, ಪಕ್ಷಕ್ಕೆ ಹಗಲಿರುಳು ದುಡಿದ ಲಿಂಗಾಯತ ಸಮುದಾಯದ ನಾಯಕ ಬಿ.ಎಸ್ ಯಡಿಯೂರಪ್ಪ ಅವರನ್ನು ಕಾರಣವನ್ನೇ ನೀಡದೆ, ಸರ್ಕಾರದ 2ನೇ ವರ್ಷದ ಸಂಭ್ರಮದಲ್ಲೇ ಕಣ್ಣೀರು ಹಾಕಿಸಿ ಪದಚ್ಯುತಿಗೊಳಿಸುವ ಮೂಲಕ ಬಿಜೆಪಿಯ ಉನ್ನತ ನಾಯಕನನ್ನು ಮೂಲೆಗುಂಪು ಮಾಡಿದ್ದು ಈ ಎಲ್ಲವುಗಳು ಡರ್ಟಿ ಪಾಲಿಟಿಕ್ಸ್ ಅಲ್ಲವೇ?" ಎಂದಿದೆ.
"ಕನಿಷ್ಠ ಪಕ್ಷ ಈ ಮೇಲಿನ ಘಟನೆಗಳ ನೆನಪಿದೆಯೇ ಮುಖ್ಯಮಂತ್ರಿಗಳೇ? ಆತ್ಮಾವಲೋಕ ಮಾಡಿಕೊಳ್ಳಿ. ಡರ್ಟಿ ಪಾಲಿಟಿಕ್ಸ್ ಮಾಡುತ್ತಿರುವುದು ನೀವು, ನಿಮ್ಮ ಸಂಪುಟ ಸಚಿವರು, ಶಾಸಕರು ಒಟ್ಟಾರೇ ನಿಮ್ಮ ಸರ್ಕಾರ. ರಾಜ್ಯದ ಜನರು ಕಣ್ಣು ಮುಚ್ಚಿಕೊಂಡು ಕುಳಿತಿಲ್ಲ, ನಿಮ್ಮ ಕೀಳು ರಾಜಕೀಯವನ್ನು, ರಾಜಕೀಯ ಕುತಂತ್ರವನ್ನ ಅವರೂ ನೋಡುತ್ತಿದ್ದಾರೆ. ಎಲ್ಲದಕ್ಕೂ ನೀವು ಉತ್ತರ ಕೊಡುವ ಕಾಲ ಹತ್ತಿರವಾಗುತ್ತಿದೆ'' ಎಂದು ಮುನ್ನೆಚ್ಚರಿಕೆ ನೀಡಿದೆ.