"ಭಾರತ್ ಜೋಡೋ ಯಾತ್ರೆಗೆ ಹರಿದುಬರುತ್ತಿರುವ ಜನಸಾಗರವನ್ನು ಕಂಡು ಸಹಿಸಲಾಗದ ಸಿಟಿ ರವಿ ಆದಿಯಾಗಿ ಬಿಜೆಪಿಯ ಬಹಳಷ್ಟು ಮಂದಿ ರಾಹುಲ್ ಗಾಂಧಿಯವರು ಹೋದಲ್ಲೆಲ್ಲಾ ಕಾಂಗ್ರೆಸ್ ಪಕ್ಷ ಸೋತಿದೆ ಎಂಬ ಮಹಾ ಸುಳ್ಳನ್ನು ಹಬ್ಬಿಸುತ್ತಿದ್ದಾರೆ. 2018 ರಿಂದ ಈಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್ ಗಡ, ಜಾರ್ಖಂಡ್ ನಲ್ಲಿ ಅಧಿಕಾರ ಹಿಡಿಯಲು ಯಶಸ್ವಿಯಾಯಿತು. ಗುಜರಾತ್ ನಲ್ಲೂ ಕೂಡಾ ಕಾಂಗ್ರೆಸ್ ಪಕ್ಷದ Vote Share 2% ಜಾಸ್ತಿಯಾಗಿದ್ದರೂ ಕೂಡಾ ಬಿಜೆಪಿ ಅಲ್ಲಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಬಹುಮತ ಸಾಧಿಸುತ್ತಿತ್ತು. ಕರ್ನಾಟಕ ದಲ್ಲಿಯೂ 2018 ರಲ್ಲಿ ಕಾಂಗ್ರೆಸ್ 80 ಸೀಟು ಗಳಿಸಿದಾಗಲೂ ಕೂಡಾ ಬಿಜೆಪಿಯು 36% ಮತ ಗಳಿಸಿದರೆ ಕಾಂಗ್ರೆಸ್ 38% ನಷ್ಟು ಮತ ಗಳಿಸಿ ಸಮ್ಮಿಶ್ರ ಸರ್ಕಾರ ರಚಿಸಿತ್ತು. ಈ ಮೇಲಿನ ಎಲ್ಲ ಅಂಶಗಳು ಗೊತ್ತಿದ್ದಾಗಲೂ ಕೂಡಾ ಕೇವಲ ಆಪರೇಷನ್ ಕಮಲ ನಡೆಸಿ, ಮಧ್ಯ ಪ್ರದೇಶ ಮತ್ತು ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಯಶಸ್ವಿಯಾದ ಬಿಜೆಪಿಗರು ಕ್ರಮೇಣ ರಾಜಸ್ಥಾನ, ಜಾರ್ಖಂಡ್ ನಲ್ಲೂ ತಮ್ಮ ಹೊಲಸು ರಾಜಕೀಯ ಮುಂದುವರೆಸಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಿ ರಾಹುಲ್ ಗಾಂಧಿಯವರನ್ನು ದೂಷಿಸುವುದನ್ನು ನೋಡಿದರೆ ಇವರನ್ನು ಕಂಡು ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ" ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಾ. ಎಚ್.ಸಿ ಮಹಾದೇವಪ್ಪ ವ್ಯಂಗ್ಯವಾಡಿದ್ದಾರೆ.
"ಒಂದು ವೇಳೆ ದೇಶದ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಮ್ಮ 56 ಇಂಚಿನ ಪ್ರಧಾನಿಗಳಾದ ನರೇಂದ್ರ ಮೋದಿಯವರು ಮತ್ತು ರಾಹುಲ್ ಗಾಂಧಿ ಅವರು ದೇಶದ ಜನರ ಮುಂದೆ ಬಹಿರಂಗ ಚರ್ಚೆಗೆ ಬಂದರೆ ಆಗ ಮೋದಿಯವರ ಮಾತು ಕೇಳುವ ಜನರಿಗೆ ನಾವೆಂತಾ ಜ್ಞಾನ ಮತ್ತು ಸಾಮಾನ್ಯಜ್ಞಾನ ಎರಡೂ ಇಲ್ಲದ ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ಪಡೆದಿದ್ದೇವೆ ಎಂಬ ಸಂಗತಿ ಚೆನ್ನಾಗಿ ಅರಿವಾಗುತ್ತದೆ. 8 ವರ್ಷವಾದರೂ ಒಂದೇ ಒಂದು ಪತ್ರಿಕಾ ಗೋಷ್ಠಿ ನಡೆಸಲು ಧೈರ್ಯವಿಲ್ಲದ ಪ್ರಧಾನಿಗಳು ರಾಹುಲ್ ಗಾಂಧಿ ಅವರೊಂದಿಗೆ ಬಹಿರಂಗ ಚರ್ಚೆ ನಡೆಸುತ್ತಾರೆ ಎನ್ನುವುದು ಭ್ರಮೆ ಅಷ್ಟೇ.
ಹೋಗಲಿ ಮೋದಿಯವರ ಅಂಧ ಭಕ್ತರು ಮತ್ತು ರಾಹುಲ್ ಗಾಂಧಿ ದ್ವೇಷಿಗಳಾದರೂ ಇಂತಹ ಬಹಿರಂಗ ಚರ್ಚೆ ಏರ್ಪಡಿಸಿದರೆ ಅವರಿಗೆ ನಾನೇ ಮುಂದೆ ನಿಂತು ಅಭಿನಂದನೆಯನ್ನು ಸಲ್ಲಿಸುತ್ತೇನೆ" ಎಂದವರು ಸವಾಲು ಎಸೆದಿದ್ದಾರೆ.