"ನಾಗಪುರದ ಆದೇಶ ಮೀರಿ ತಮ್ಮ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲದ, ತನ್ನ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ ತಮ್ಮಲ್ಲಿನ ಆಂತರಿಕ ಪ್ರಜಾಪ್ರಭುತ್ವ ತೋರಿಸಲು ಸಾಧ್ಯವಾಗದ, ನಾಗಪುರದ ರಬ್ಬರ್ ಸ್ಟ್ಯಾಂಪ್‌ಗಳಾದ ಬಿಜೆಪಿಗರು ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಕುರಿತು ಮಾತಾಡುವುದು ಹಾಸ್ಯಾಸ್ಪದ" ಎಂದು ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಹೇಳಿದೆ.
ಎಐಸಿಸಿ ಅಧ್ಯಕ್ಷ ಹುದ್ದೆಯ ಓರ್ವ ಅಭ್ಯರ್ಥಿ ಕಾಂಗ್ರೆಸ್ ಪಕ್ಷದ ಹಿರಿಯ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಯವರು, ಗಾಂಧಿ ಕುಟುಂಬದ ರಬ್ಬರ್ ಸ್ಟ್ಯಾಂಪ್ ಎಂದು ಬಿಂಬಿಸಲು ಬಿಜೆಪಿ ಸತತವಾಗಿ ಪ್ರಯತ್ನಿಸುತ್ತಿರುವುದರ ವಿರುದ್ದ ಕಾಂಗ್ರೆಸ್ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ.ಅಕ್ಟೋಬರ್ 17ರಂದು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ನಡೆದಿದ್ದು ಕೇರಳದ ಸಂಸದ ಶಶಿ ತರೂರ್ ಮತ್ತೋರ್ವ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
"ಪ್ರಧಾನಿ ಮೋದಿಯವರು ಆರೆಸ್ಸೆಸ್ ನ ರಬ್ಬರ್ ಸ್ಟಾಂಪ್, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂತೋಷ್ ಬಿ.ಎಲ್ ರಬ್ಬರ್ ಸ್ಟಾಂಪ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ರಬ್ಬರ್ ಸ್ಟಾಂಪ್, Pay CM ಕುಖ್ಯಾತಿಯ ಬಸವರಾಜ ಬೊಮ್ಮಾಯಿ ಅವರು ಕೇಶವಕೃಪಾದ ರಬ್ಬರ್ ಸ್ಟಾಂಪ್ ಹಾಗೂ ಇಡೀ ಬಿಜೆಪಿ ಪಕ್ಷವೇ ನಾಗಪುರದ ರಬ್ಬರ್ ಸ್ಟಾಂಪ್. ಇದನ್ನು ಸುಳ್ಳು ಎನ್ನುವಿರಾ ಬಿಜೆಪಿಗರೇ" ಎಂದು ಪ್ರಶ್ನಿಸಿದೆ.
"ಮಲ್ಲಿಕಾರ್ಜುನ ಖರ್ಗೆಯವರನ್ನು ಜರಿಯುವ ಮೂಲಕ ಬಿಜೆಪಿ ತನ್ನ ದಲಿತ ರಾಜಕಾರಣದ ವಿರುದ್ದದ ಅಸಹನೆಯನ್ನು ಕಾರಿಕೊಳ್ಳುತ್ತಿದೆ. ದಲಿತರು, ಹಿಂದುಳಿದ ನಾಯಕರನ್ನು ಅವಮಾನಿಸಿದರೆ ಅವರ ರಾಜಕೀಯ ಸ್ಥೈರ್ಯವನ್ನು ಕುಗ್ಗಿಸಬಹುದು ಎಂಬುದು ಬಿಜೆಪಿಯ ವಿಕೃತ ಧೋರಣೆ. ದಲಿತರ ರಾಜಕೀಯ ಶಕ್ತಿ ಗಟ್ಟಿಗೊಂಡರೆ ಮನುವಾದಕ್ಕೆ ಅಪಾಯ ಎಂಬುದು ಬಿಜೆಪಿಯ ಲೆಕ್ಕಾಚಾರ" ಎಂದು ಕಾಂಗ್ರೆಸ್ ವ್ಯಾಖ್ಯಾನಿಸಿದೆ.