"ತನಗಾದ ಅನ್ಯಾಯದ ಕುರಿತು ಹೇಳಿಕೊಳ್ಳಲು ಸಚಿವರ ಬಳಿಗೆ ಹೋಗಿದ್ದ ಮಹಿಳೆಯೋರ್ವರಿಗೆ ಕಪಾಳಮೋಕ್ಷ ಮಾಡಲು ಸಚಿವ ವಿ.ಸೋಮಣ್ಣ ಅವರಿಗೆ ಯಾವ ಅಧಿಕಾರವಿದೆ?" ಎಂಬುದಾಗಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಅವರು ಪ್ರಶ್ನಿಸಿದ್ದಾರೆ.
"ಮತದಾರರು ಮತ ನೀಡಿ ಆರಿಸಿ ಕಳುಹಿಸಿದ್ದರಿಂದ ಸೋಮಣ್ಣ ಅವರು ಇಂದು ಶಾಸಕರಾಗಿ, ಸಚಿವರಾಗಿದ್ದಾರೆ. ಮತದಾರರು ಭರಿಸುವ ತೆರಿಗೆ ಹಣದಿಂದ ಅವರು ಇಷ್ಟೆಲ್ಲಾ ವೈಭವದ ಬದುಕನ್ನು ಕಾಣುವಂತಾಗಿದೆ. ದುರಂತವೆಂದರೆ ಕೆಲವು ಜನಪ್ರತಿನಿಧಿಗಳು, ಸಚಿವರು ಆಯ್ಕೆಯಾದ ನಂತರ ಜನಸಾಮಾನ್ಯರನ್ನು ತಮ್ಮ ಗುಲಾಮರಂತೆ ಕಾಣುವುದು, ತಮ್ಮ ಅಂತಸ್ತಿನೆದುರು ಅವರು ಏನೂ ಅಲ್ಲ ಎನ್ನುವ ಅಧಿಕಾರದ ಹಾಗೂ ಸಂಪತ್ತಿನ ಮದದಿಂದ ಅಂಧರಾಗಿರುವುದೇ ಇಂತಹ ಘಟನೆಗಳು ನಡೆಯಲು ಕಾರಣ. ಜನಸಾಮಾನ್ಯರು ತಮ್ಮ ಅಹವಾಲು, ಸಮಸ್ಯೆಗಳನ್ನು ತೆಗೆದುಕೊಂಡು ಜನಪ್ರತಿನಿಧಿಗಳ, ಸಚಿವರ ಬಳಿ ಹೋಗುವುದು ಸರ್ವೇಸಾಮಾನ್ಯ. ಅಂತಹವರ ಸಮಸ್ಯೆಗಳನ್ನು ಆಲಿಸುವುದೂ ಜನಪ್ರತಿನಿಧಿಗಳ ಕರ್ತವ್ಯ ಕೂಡಾ ಆಗಿದೆ. ಹೀಗಿರುವಾಗ ತಮ್ಮ ಬಳಿ ಸಮಸ್ಯೆಯನ್ನು ಹೇಳಲು ಬಂದಿದ್ದ ಮಹಿಳೆಯೋರ್ವರಿಗೆ ಸಚಿವ ಸೋಮಣ್ಣ ಅವರು ಕಪಾಳಮೋಕ್ಷ ಮಾಡಿದ್ದು ಅಹಂಕಾರದ ಪರಮಾವಧಿ" ಎಂದವರು ಹೇಳಿದ್ದಾರೆ.
"ಸಂಸ್ಕೃತಿಯ ಕುರಿತು ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿಯ , ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೋಲ್ ಮಾಡುವ ಬಿಜೆಪಿಯ ಭಕ್ತರೇ ಎಲ್ಲಿದ್ದೀರಿ ನೀವೀಗ? ಕಪಾಳ ಮೋಕ್ಷಕ್ಕೆ ಒಳಗಾದ ಮಹಿಳೆಯೂ ಒಬ್ಬ ಹೆಣ್ಣು ಮಗಳು. ಸುರತ್ಕಲ್ ಟೋಲ್ ಗೇಟ್ ವಿರುದ್ಧ ಹೋರಾಟಕ್ಕಿಳಿದಿರುವ ಪ್ರತಿಭಾ ಕುಳಾಯಿ ಕೂಡಾ ಒಬ್ಬ ಹಿಂದೂ ಹೆಣ್ಣು ಮಗಳು. ಸುಸಂಸ್ಕೃತರಾದ ನೀವು ಅವರ ಪರವಾಗಿ ನಿಲ್ಲಬೇಕು. ಆದರೆ ನೀವು ಅವರ ವಿರುದ್ಧ ಅತ್ಯಂತ ಕೀಳು ಮಟ್ಟದ ಶಬ್ಧಗಳಿಂದ ಟ್ರೋಲ್ ಮಾಡುವ ಮೂಲಕ ಆಕೆಯನ್ನು ಎಷ್ಟು ಸಾಧ್ಯವೋ ಅಷ್ಟು ಮಾನಸಿಕವಾಗಿ ಹಿಂಸಿಸುತ್ತಿದ್ದೀರಿ. ಈ ಘಟನೆ ನಿಮ್ಮ ಪಕ್ಷದವರ ಸಂಸ್ಕೃತಿ ಏನೆಂಬುದನ್ನು ತಿಳಿಸಿಕೊಟ್ಟಿದೆ" ಎಂದವರು ತಿಳಿಸಿದ್ದಾರೆ.
"ಸಚಿವ ಸೋಮಣ್ಣ ಅವರು ಕಪಾಳಮೋಕ್ಷ ಮಾಡಿದ ಘಟನೆ ವೈರಲ್ ಆಗುತ್ತಿದ್ದಂತೆಯೇ, ನನಗೆ ಕಪಾಳಕ್ಕೆ ಹೊಡೆದಿಲ್ಲ ಎಂದು ಆ ಮಹಿಳೆಯಿಂದ ಹೇಳಿಸಿದ್ದಾರೆ. ಆದರೆ
ವೈರಲ್ ಆದ ಈ ವೀಡಿಯೋ ಎಲ್ಲಾ ಸತ್ಯವನ್ನೂ ಬಿಚ್ಚಿಟ್ಟಿದೆ. ಆದ್ದರಿಂದ ತಕ್ಷಣ ಸೋಮಣ್ಣ ರಾಜೀನಾಮೆ ನೀಡಬೇಕು. ಮಾನ್ಯ ಮುಖ್ಯಮಂತ್ರಿಗಳು ಸಚಿವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದು ಗೀತಾ ವಾಗ್ಳೆ ಅವರು ಹೇಳಿದ್ದಾರೆ.