"ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗುತ್ತಿದ್ದಂತೆ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಗೆ ಭಯ ಶುರುವಾಗಿದೆ" ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, "ಕಾಂಗ್ರೆಸ್ ಅತ್ಯಂತ ಶಿಸ್ತಿನ ಪಕ್ಷ. ಪಕ್ಷದ ಶಿಸ್ತಿಗೆ ಪೂರಕವಾಗಿ ನಾವಿಲ್ಲಿ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ನಮ್ಮೊಳಗೆ ಪರಸ್ಪರ ಒಗ್ಗಟ್ಟು ಇದೆ. ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿ, ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಮತ್ತು ನಾನು ವಿಪಕ್ಷ ನಾಯಕನಾಗಿ ನಮ್ಮ ನಮ್ಮ ಜವಾಬ್ದಾರಿ ಗಳನ್ನು ನಿಭಾಯಿಸುತ್ತಿದ್ದೇವೆ. ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿಜೆಪಿಯೊಳಗಿನ ಬಿನ್ನಮತವನ್ನು ಮೊದಲು ಸರಿಪಡಿಸಿಕೊಳ್ಳಲಿ. ನಮ್ಮ ಪಕ್ಷದ ಕುರಿತು ಮಾತನಾಡಲು ಕಟೀಲ್ ಯಾರು? ಕಟೀಲ್ ಒಬ್ಬ ಜೋಕರ್ ಅವನಿಗೆ ಉತ್ತರ ಕೊಡುವುದಿಲ್ಲ. ಸಂಘದ ಶಾಖೆಗಳಲ್ಲಿ ಹುಟ್ಟಿಕೊಳ್ಳುವ ಅವರ ಆದಾರರಹಿತವಾದ, ಬಾಲಿಷ ಹೇಳಿಕೆಗಳಿಗೆಲ್ಲ ಉತ್ತರ ಕೊಡುತ್ತಾ, ನನ್ನ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಲು ನಾನು ತಯಾರಿಲ್ಲ" ಎಂದು ಅವರು ಹೇಳಿದರು.
"2023ರಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ, ಚಾಮರಾಜನಗರ, ವರುಣಾ, ಬಾದಾಮಿ ಸೇರಿದಂತೆ ಆರೇಳು ಕ್ಷೇತ್ರದಿಂದ ಸ್ಪರ್ಧಿಸುವಂತೆ ನನಗೆ ಆಯಾಯ ಭಾಗದ ಪಕ್ಷದ ನಾಯಕರುಗಳಿಂದ, ಪದಾದಿಕಾರಿಗಳಿಂದ ಹಾಗೂ ಕಾರ್ಯಕರ್ತರಿಂದ ತೀವ್ರತರವಾದ ಒತ್ತಡವಿದೆ. ಆದರೆ, ನಾನು ಈ ತನಕವೂ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಕುರಿತು ನಿರ್ಧರಿಸಿಲ್ಲ. ಇನ್ನೊಂದು ತಿಂಗಳಲ್ಲೇ ಅಂತಿಮ ನಿರ್ಧಾರಕ್ಕೆ ಬರಲಿದ್ದೇನೆ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
‘'ಪ್ರಧಾನಿ ಮೋದಿಯವರು ಕ್ಷೇತ್ರವನ್ನು ಬದಲಾಯಿಸಿ ವಾರಣಾಸಿಯಿಂದ ಸ್ಪರ್ಧೆ ಮಾಡಿದರೆ ಅದನ್ನು ಮಹಾನ್ ಸಾಧನೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತದೆ. ಆದರೆ ಅದೇ ರಿತಿಯಾಗಿ ನಾನು ನಮ್ಮ ಪಕ್ಷದ ನಾಯಕರುಗಳ, ಕಾರ್ಯಕರ್ತರ ಒತ್ತಾಯಕ್ಕೆ ಕಟ್ಟುಬಿದ್ದು ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಕ್ಕೆ ಅದು ನನ್ನ ವೈಫಲ್ಯ ಎಂಬಂತೆ ಬಿಜೆಪಿಗರು ಹಾಗೂ ಮತ್ತೆ ಕೆಲವರು ಬಿಂಬಿಸುತ್ತಿದ್ದಾರಾಲ್ಲ, ಇದರ ಅರ್ಥವೇನು? ಆದರೆ ಮತದಾರರು ಬಿಜೆಪಿಗರ ಈ ತೆರನಾದ ಯಾವುದೇ ಅಪಪ್ರಚಾರಕ್ಕೂ ಬಲಿಯಾಗಲಾರರು" ಎಂದವರು ಹೇಳಿದ್ದಾರೆ.
ಇದೇ ಸಂಧರ್ಭದಲ್ಲಿ, ಬಿಜೆಪಿ, ಆರೆಸ್ಸೆಸ್ ವಿರುದ್ಧ ಕೆಂಡಕಾರಿರುವ ಸಿದ್ಧರಾಮಯ್ಯನವರು, "ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ, ಜನರ ನಡುವೆ ದ್ವೇಷದ ವಾತಾವರಣ ನೂರುಪಟ್ಟು ಹೆಚ್ಚಾಗಿದೆ. ಆರೆಸ್ಸೆಸ್ ನವರು ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ. ಬಿಜೆಪಿಯರಿಗೆ ಅಪಪ್ರಚಾರ ಮತ್ತು ಸುಳ್ಳು ವದಂತಿಗಳನ್ನು ಹರಡಿ ದ್ವೇಷದ ವಾತಾವರಣ ಸೃಷ್ಟಿಸುವುದು ಬಿಟ್ಟರೆ ಬೇರೇನೂ ತಿಳಿದಿಲ್ಲ" ಎಂದವರು ವಿಷಾದ ವ್ಯಕ್ತಪಡಿಸಿದ್ದಾರೆ.
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ರಾಜೀನಾಮೆ ನೀಡಿರುವ ಮಾಜಿ ಸಚಿವ ಈಶ್ವರಪ್ಪನವರು ಸಮಾಜದ ಶಾಂತಿ ಕದಡುವ ಹೇಳಿಕೆ ನೀಡುವುದರ ಕುರಿತಾದ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯನವರು "ಇಂತಹ ವರ್ತನೆ ಸಂವಿಧಾನದ ಆಶಯಕ್ಕೆ ವಿರುದ್ಧವಾದುದು" ಎಂದಿದ್ದಾರೆ.
"ಈಶ್ವರಪ್ಪನವರು, ಶಿವಮೊಗ್ಗ ಜಿಲ್ಲೆಯಲ್ಲಿ ಜನಗಳ ನಡುವೆ ವದಂತಿಗಳನ್ನು ಹರಡಿ ಗಲಾಟೆ ಮಾಡಿಸುತ್ತಿದ್ದಾರೆ" ಎಂದು ಆರೋಪಿಸಿದ ಅವರು "ಕೇಂದ್ರ ಹಾಗೂ ರಾಜ್ಯದಲ್ಲಿ ಅವರದ್ದೆ ಸರ್ಕಾರ ಇದ್ದರೂ, ಕೊಲೆಯ ಕುರಿತು ತನಿಖೆ ನಡೆಸಿ ತಪ್ಪಿತಸ್ಥರಿಗೆ ಉಗ್ರಶಿಕ್ಷೆ ಕೊಡಿಸುವ ಬದಲು, ತನ್ನದೇ ತವರು ಜಿಲ್ಲೆ ಶಿವಮೊಗ್ಗದಲ್ಲಿ 144 ಸೆಕ್ಷನ್ ಇದ್ದಾಗ್ಯೂ ಹರ್ಷ ಎಂಬ ಯುವಕನ ಕೊಲೆಯಾದಾಗ ಆತನ ಹೆಣವನ್ನು ಇಟ್ಟುಕೊಂಡು ಮೆರವಣಿಗೆ ಮಾಡಿಸಿದರು. ಅದರಿಂದಾಗಿಯೇ ಜಿಲ್ಲೆಯಾದ್ಯಂತ ಅಶಾಂತಿ ನಿರ್ಮಾಣವಾಗಲು ಕಾರಣವಾಯಿತು" ಎಂದು ಆರೋಪಿಸಿದರು.
"ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪರ ಕಾರ್ಯಕ್ರಮಗಳನ್ನು ನೀಡಿ ಅಧಿಕಾರಕ್ಕೆ ಬರುವ ಸಕಲ ಅವಕಾಶಗಳು ಇದ್ದಾಗ್ಯೂ ಬಿಜೆಪಿಗರು ಯಾವುದೇ ಅಭಿವೃದ್ಧಿಗಳನ್ನು ಮಾಡದೇ ಕೇವಲ ದ್ವೇಷದ ವಾತಾವರಣ ನಿರ್ಮಿಸುತ್ತಿದ್ದಾರೆ. ಕಾಮಗಾರಿಗಳಲ್ಲಿ 40%ಕಮಿಷನ್ ಪಡೆಯುವ ಮೂಲಕ ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಇವರುಗಳಿಂದ ರಾಜ್ಯ ಉದ್ಧಾರವಾಗಲಾರದು, ಇವರುಗಳಿಂದ ದೇಶ ನಾಶವಾಗುತ್ತದೆ ಎಂಬುದು ಇದೀಗ ಸರ್ವರಿಗೂ ಅರ್ಥವಾಗಿದೆ. ದೇಶದಾದ್ಯಂತ ಅದರಲ್ಲೂ ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಬೆಳೆದಿದ್ದು ಕಾರ್ಮಿಕರು, ರೈತರು, ಮಹಿಳೆಯರು, ವಿಧ್ಯಾರ್ಥಿಗಳು ತೀವೃತರವಾದ ತೊಂದರೆಗಳಿಗೆ ಒಳಗಾಗಿದ್ದಾರೆ. ಬಿಜೆಪಿ ಆಡಳಿತವು ಜನವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದೆ. ಹಿಂದೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಾಮರಸ್ಯದಿಂದ ಬದುಕಿದ್ದ ಹಿಂದೂ, ಮುಸಲ್ಮಾನ, ಕ್ರೈಸ್ತ ಧರ್ಮಗಳ ನಡುವೆ ವಿಷಬೀಜ ಬಿತ್ತಿ ಅವರುಗಳು ಪರಸ್ಪರ ಹೊಡೆದಾಡುವ ವಾತಾವರಣ ನಿರ್ಮಿಸಿದ ಕುಖ್ಯಾತಿ ಬಿಜೆಪಿಗೆ ಸಲ್ಲುತ್ತದೆ. ಈ ಮೇಲಿನ ಎಲ್ಲಾ ಕಾರಣಗಳಿಂದ ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಮತ್ತೆ ಪುನಃ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಎಲ್ಲಾ ಸೂಚನೆಗಳಿವೆ ಮತ್ತು ಆ ಕುರಿತು ಕಾಂಗ್ರೆಸಿಗರಾದ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ನವರು ಹೇಳಿದರು.