"ಹಿಮಾಚಲ ಪ್ರದೇಶ ವಿಧಾನಸಭೆ ಹಾಗೂ ದೆಹಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಆದ ದಯನೀಯ ಸೋಲು ಬಿಜೆಪಿಯ ಜನ ವಿರೋಧಿ ಆಡಳಿತಕ್ಕೆ ಸಾಕ್ಷಿಯಾಗಿದೆ. ಇದೇ ದುರಂತ ಸ್ಥಿತಿಯನ್ನು ಕರ್ನಾಟಕದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಎದುರಿಸಲಿದೆ" ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
"ದೇಶದ ಪ್ರಧಾನಮಂತ್ರಿ ಮತ್ತು ಗೃಹ ಸಚಿವರ ಸ್ವಂತ ನೆಲೆಯಾದ ತಮ್ಮದೆ ಸ್ವಕ್ಷೇತ್ರ ಗುಜರಾತಿನಲ್ಲಿ ಬಿಜೆಪಿಯ ಗೆಲುವು ನಿರೀಕ್ಷಿತ ಮತ್ತು ಸಹಜ ಕೂಡ! ಅದು ಅಲ್ಲಿನ ಜನರ ಸ್ವಾಭಿಮಾನ ಮತ್ತು ಆತ್ಮ ಗೌರವದ ಪ್ರಶ್ನೆಯಾಗಿತ್ತೆ ಹೊರತು ಅದನ್ನು ಬಿಜೆಪಿಯ ಸಾಧನೆಯ ಗೆಲುವು ಎಂದು ಪರಿಗಣಿಸಲಾಗದು. ಅದು ಬಿಜೆಪಿಯ ಸಾಧನೆಯ ಗೆಲುವೇ ಆಗಿದ್ದಲ್ಲಿ ತನ್ನದೇ ಸರಕಾರದ ಆಡಳಿತದ ಹೊರತಾಗಿಯೂ ಹಿಮಾಚಲಪ್ರದೇಶ ಮತ್ತು ದೆಹಲಿ ಪಾಲಿಕೆಯಲ್ಲಿ ಅಡಳಿತ ವಿರೋಧಿ ಅಲೆಗೆ ಬಿಜೆಪಿ ನುಚ್ಚುನೂರಾಯಿತೇಕೆ. ಬಿಜೆಪಿ ತನ್ನ ಗತ ಇತಿಹಾಸದತ್ತ ಹಂತಹಂತವಾಗಿ ಸರಿಯುತ್ತಿದೆ. ಇತ್ತೀಚೆಗೆ 5 ರಾಜ್ಯಗಳಲ್ಲಿ ನಡೆದ 6 ವಿಧಾನಸಭಾ ಉಪ ಚುನಾವಣೆಗಳಲ್ಲಿ ಬಿಜೆಪಿ ಕೇವಲ 2 ಕಡೆಗಳಲ್ಲಿ ಮಾತ್ರ ಗೆಲುವು ಸಾಧಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ" ಎಂದಿದೆ.
"ಕರ್ನಾಟಕದಲ್ಲೂ ಗುಜರಾತ್ ಮಾದರಿಯಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಬೀಗುತ್ತಿರುವ ಸಚಿವ ಸುನೀಲ್ ಕುಮಾರ್ ಆದಿಯಾಗಿ ಬಿಜೆಪಿಯ ನಾಯಕರು ಅತ್ಮಾವಲೋಕನ ಮಾಡಿಕೊಳ್ಳ ಬೇಕಿದೆ. ಭ್ರಷ್ಟಾಚಾರದಲ್ಲಿ ಮನೆಮಾತಾಗಿರುವ, ತನ್ನ ಜನವಿರೋಧೀ ನೀತಿಯಡಿಯಲ್ಲಿ ಪಕ್ಷದ ಸ್ವಾರ್ಥಸಾಧನೆಗಾಗಿ ಕಾಂಗ್ರೆಸ್ ಆಡಳಿತಾವದಿಯ ಜನಪರ ಯೋಜನೆಗಳನ್ನು ನಾಶಮಾಡಿದ, ಹಿಂದುತ್ವದ ಹೆಸರಲ್ಲಿ ನಾಡಿನ ಸೌಹಾರ್ಧತೆಗೆ ವಿಷಹಾಕಿದ, ಅಧಿಕಾರ ಲಾಲಸೆಗೆ ಬಿದ್ದು ಸಾಂವಿಧಾನಿಕ ನೀತಿ ನಿಯಮಾವಳಿಗೆ ತಿಲಾಂಜಲಿ ಕೊಟ್ಟು ಎಂದೂ ಸ್ವತಂತ್ರವಾಗಿ ಅಧಿಕಾರಕ್ಕೆ ಬಾರದೆ ಪಕ್ಷಾಂತರಿಗಳಿಂದಲೇ ಸರಕಾರ ನಡೆಸುತ್ತಾ ಬಂದ ಬಿಜೆಪಿಯನ್ನು ಈ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವಷ್ಟು ಮೂರ್ಖರು ಕರ್ನಾಟಕದವರಲ್ಲ" ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.